ಬೆಂಗಳೂರು: ಕಾಂಗ್ರೆಸ್ಸಿಗೆ ನಾಯಕ ಯಾರು? ಎಂದು ಬಿಜೆಪಿ ನಿಕಟಪೂರ್ವ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಮತ್ತು ರಾಜ್ಯದ ಮಾಜಿ ಸಚಿವ ಸಿ.ಟಿ.ರವಿ ಅವರು ಪ್ರಶ್ನಿಸಿದರು.
ಬೆಳಗಾವಿಯಲ್ಲಿ ಇಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ನಿಮ್ಮ ಇಂಡಿ ಒಕ್ಕೂಟದ ನಾಯಕ ಯಾರು ಎಂದು ಕೇಳಿದರು. ನಿಮಗೆ ನೀತಿಯೂ ಇಲ್ಲ; ನೇತೃತ್ವವೂ ಇಲ್ಲ ಎಂದು ಟೀಕಿಸಿದರು. ನಿಮ್ಮ ನೀತಿ ಏನೆಂಬುದನ್ನು ನಿಮ್ಮ ಮಾತುಗಳೇ ಸಾಬೀತುಪಡಿಸುತ್ತವೆ ಎಂದು ಆಕ್ಷೇಪಿಸಿದರು.
ರಾಹುಲ್ ಗಾಂಧಿಯವರು ಮೊಹಬ್ಬತ್ ಕೆ ದೂಕಾನ್ನ ಮಾತನಾಡುತ್ತಿದ್ದರು. ಅವರ ಈ ದೂಕಾನ್ನಲ್ಲಿ ನಫರತ್ನ ಬಿಕರಿ ಆಗುತ್ತಿದೆ. ‘ಬಿಜೆಪಿಯವರ ಮನೆ ಹಾಳಾಗಲಿ’ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯನವರು ಹೇಳಿದ್ದಾರೆ. ದೇಶದ ಅತಿ ಹೆಚ್ಚು ರಾಜ್ಯಗಳಲ್ಲಿ ಅಧಿಕಾರದಲ್ಲಿರುವ, ಅತಿ ಹೆಚ್ಚು ಜನರು ಮತ ಹಾಕಿದ, ಅತಿ ಹೆಚ್ಚು ಸಂಸದರು, ಶಾಸಕರು ನಾಶವಾಗಲಿ ಎಂದರೆ ಭಾರತವೇ ನಾಶವಾಗಲಿ ಅವರು ಬಯಸಿದಂತೆ ಕಾಣುತ್ತದೆ ಎಂದು ವಿಶ್ಲೇಷಿಸಿದರು.
ನಿನ್ನೆ ಕಾಂಗ್ರೆಸ್ ಪಕ್ಷದ ಕಾಗವಾಡ ಕ್ಷೇತ್ರದ ಶಾಸಕರು ‘ಮೋದಿ ಸತ್ತರೆ ಬೇರ್ಯಾರೂ ಪ್ರಧಾನಿ ಆಗಲ್ವೇನೋ’ ಎಂದಿದ್ದಾರೆ. ಅಲ್ಲದೆ, ‘ಕಾಂಗ್ರೆಸ್ ಪಕ್ಷಕ್ಕೆ ಕಡಿಮೆ ಲೀಡ್ ಕೊಟ್ಟರೆ, ಕರೆಂಟ್ ಕಟ್ ಮಾಡುತ್ತೇವೆ’ ಎಂದು ಹೇಳಿ ಮತದಾರರಿಗೆ ಬೆದರಿಕೆ ಹಾಕಿದ್ದಾರೆ. ಇದು ಇವರ ಮೊಹಬ್ಬತ್ ಕೀ ದೂಕಾನ್ನ ಪ್ರೀತಿಯ ಮಾತುಗಳು ಎಂದು ಟೀಕಿಸಿದರು. ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು ಬೆಂಗಳೂರಿನ ಅಪಾರ್ಟ್ಮೆಂಟಿನ ಸಭೆಗಳಲ್ಲಿ ಮಾತನಾಡಿ, ಕಾಂಗ್ರೆಸ್ಸಿಗೆ ಮತ ಕೊಡದೆ ಇದ್ದರೆ ನೀರು, ಸ್ವಚ್ಛತೆಗೆ ಸಮಸ್ಯೆ ಆಗಬಹುದೆಂದು ಬೆದರಿಕೆ ಹಾಕಿದ್ದರು ಎಂದು ವಿವರಿಸಿದರು.
ಸಚಿವ ಶಿವರಾಜ ತಂಗಡಗಿಯವರು ಮೋದಿ ಹೆಸರು ಹೇಳುವ ಯುವಕರಿಗೆ ಕಪಾಳಮೋಕ್ಷ ಮಾಡಲು ಹೇಳಿದ್ದಾರೆ. ಮಲ್ಲಿಕಾರ್ಜುನ ಖರ್ಗೆಯವರು ಪ್ರಧಾನಮಂತ್ರಿಯವರನ್ನು ವಿಷ ಸರ್ಪಕ್ಕೆ ಹೋಲಿಸಿದ್ದರು ಎಂದು ಆಕ್ಷೇಪ ವ್ಯಕ್ತಪಡಿಸಿದರು. ಗೃಹ ಸಚಿವರು ಹೇಳಿದ ಮಾತನ್ನು ಇಲ್ಲಿ ಉಪಯೋಗಿಸಲು ಸಾಧ್ಯವಿಲ್ಲ ಎಂದು ನುಡಿದರು.
ಕರ್ನಾಟಕದಲ್ಲಿ ಮೊದಲನೆ ಹಂತದ ಚುನಾವಣೆ ನಡೆದು ಎರಡನೇ ಹಂತದ ಚುನಾವಣೆಯು ಇನ್ನು ಕೆಲವೇ ದಿನಗಳಲ್ಲಿ ನಡೆಯಲಿದೆ. ಬಿಜೆಪಿ 3 ವಿಷಯಗಳನ್ನು ಜನರ ಮುಂದಿಟ್ಟು ಮತ ಯಾಚಿಸುತ್ತಿದೆ ಎಂದು ವಿವರಿಸಿದರು. ನಮ್ಮ ಪಕ್ಷದ ನೀತಿ, ಪಕ್ಷದ ನೇತೃತ್ವ ಮತ್ತು ಎಂಬ ನಮ್ಮ ಬದ್ಧತೆಯನ್ನು ತಿಳಿಸುತ್ತಿದ್ದೇವೆ. ದೇಶ ಮೊದಲು, ಸಬ್ ಕಾ ಸಾಥ್, ಸಬ್ ಕಾ ವಿಕಾಸ್ ಎಂಬುದು ನಮ್ಮ ನೀತಿ. ಬಡವರಿಗೆ ಬಲ ಕೊಡುವುದು ನಮ್ಮ ನೀತಿ. ಸಂವಿಧಾನದ ಆಶಯವನ್ನು ಆಡಳಿತದಲ್ಲಿ ಅನುಷ್ಠಾನಗೊಳಿಸಿ ಕಟ್ಟಕಡೆಯ ಮನುಷ್ಯನಿಗೆ ತಲುಪಿಸುವುದು ನಮ್ಮ ನೀತಿ ಎಂದು ವಿವರಿಸಿದರು.
ಭಾರತ ಮತ್ತು ಭಾರತೀಯರನ್ನು ಸುರಕ್ಷಿತವಾಗಿಡುವುದು, ನಂಬರ್ 1 ಆರ್ಥಿಕ ಶಕ್ತಿಯಾಗಿ ಭಾರತವನ್ನು ರೂಪಿಸುವುದು ನಮ್ಮ ನೀತಿ. ಇದಕ್ಕೆ ಅನುಗುಣವಾಗಿಯೇ ನಾವು ನಮ್ಮ ಸಾಧನೆ ತೋರಿಸಿದ್ದೇವೆ. 10 ವರ್ಷಗಳಲ್ಲಿ ತೆರಿಗೆ ಕ್ಷೇತ್ರದಲ್ಲಿ ದೊಡ್ಡ ಸುಧಾರಣೆಯನ್ನು ತಂದಿದ್ದು, ಅದರ ಪರಿಣಾಮವಾಗಿ ಜಿಡಿಪಿ ಬೆಳವಣಿಗೆ ಮೂಲಕ ಭಾರತವು ವಿಶ್ವದ 5ನೇ ಶಕ್ತಿಯಾಗಿ ಬದಲಾಗಿದೆ ಎಂದು ವಿಶ್ಲೇಷಿಸಿದರು.
ದುರ್ಬಲ ಆರ್ಥಿಕ ಶಕ್ತಿಯಾಗಿದ್ದ ಭಾರತವು ಈ ಹಂತಕ್ಕೆ ಏರಿದೆ. ದೇಶಕ್ಕೆ ಹಾನಿ ಮಾಡುವ ಸಂಗತಿಗಳನ್ನು ಅಗತ್ಯ ತಿದ್ದುಪಡಿ ಮೂಲಕ ಬದಲಿಸಿದ್ದೇವೆ. ದೇಶದ ಭದ್ರತೆ, ಸಮಗ್ರತೆಗೆ ಹಾನಿ ಮಾಡುವ 370ನೇ ವಿಧಿ ರದ್ದು ಪಡಿಸಿ ಏಕ್ ಭಾರತ್ ಶ್ರೇಷ್ಠ ಭಾರತ್ ಘೋಷವಾಕ್ಯದೊಂದಿಗೆ ಭಾರತವನ್ನು ಆಡಳಿತಾತ್ಮಕವಾಗಿ ಮತ್ತು ಭಾವನಾತ್ಮಕವಾಗಿ ಸಂವಿಧಾನದ ಅಡಿಯಲ್ಲಿ ಒಂದುಗೂಡಿಸುವ ಕೆಲಸ ಮಾಡಿದ್ದೇವೆ ಎಂದರು.
ಬ್ಯಾಂಕಿಂಗ್ ಕ್ಷೇತ್ರದಲ್ಲಿ ಕೂಡ ದೊಡ್ಡ ಸುಧಾರಣೆ ಮಾಡಲಾಗಿದೆ. ಗತಿಶಕ್ತಿ ಯೋಜನೆಯಡಿ 3 ಲಕ್ಷ ಕೋಟಿ ರೂಪಾಯಿಯನ್ನು ಮೂಲಸೌಕರ್ಯ ಅಭಿವೃದ್ಧಿಗೆ ವಿನಿಯೋಗಿಸಿ ಭವಿಷ್ಯದ ಭಾರತ ಜಾಗತಿಕ ಸವಾಲನ್ನು ಎದುರಿಸಲು ಸಜ್ಜಾಗಿ ಮಾಡಿದ್ದೇವೆ. ಜಗತ್ತು ಮೆಚ್ಚಿರುವ ನೇತೃತ್ವ ನಮ್ಮ ನೇತೃತ್ವ. ಜಾಗತಿಕ ನಾಯಕರು ನಮ್ಮ ನಾಯಕತ್ವವನ್ನು ಶ್ಲಾಘಿಸಿದ್ದಾರೆ. ಆಸ್ಟ್ರೇಲಿಯದ ಅಧ್ಯಕ್ಷರು ಮೋದಿ ಈಸ್ ದಿ ಬಾಸ್ ಎಂದು ಸಾರ್ವಜನಿಕ ಸಭೆಯಲ್ಲೇ ಹೇಳಿದ್ದಾರೆ ಎಂದು ವಿವರಿಸಿದರು. ಅಮೆರಿಕದ ಅಧ್ಯಕ್ಷ, ಉಕ್ರೇನ್ ಅಧ್ಯಕ್ಷರೂ ಸೇರಿ ಅನೇಕ ನಾಯಕರು ಮೋದಿಯವರನ್ನು ಜನಪ್ರಿಯ ನಾಯಕ ಎಂದು ಪ್ರಶಂಸಿಸಿದ್ದಾರೆ ಎಂದರು. ಬಿಜೆಪಿಯನ್ನು ಜನರು ಬೆಂಬಲಿಸುವ ವಿಶ್ವಾಸ ವ್ಯಕ್ತಪಡಿಸಿದರು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.