ದೇಶದಲ್ಲಿ ಲೋಕಸಭೆ ಮತ್ತು ಎಲ್ಲಾ ವಿಧಾನಸಭಾ ಚುನಾವಣೆಗಳು ಏಕಕಾಲದಲ್ಲಿ ನಡೆಯಬೇಕು ಎಂಬುದು ಆಡಳಿತ, ಚುನಾವಣಾ ಆಯೋಗ ಸೇರಿದಂತೆ ಹಲವು ಮಂದಿ ರಾಜಕೀಯ ವಿಶ್ಲೇಷಕರು ಸಹಿತ ಬಹುತೇಕ ಪ್ರಬುದ್ಧ ಮತದಾರರ ಆಶಯಗಳಲ್ಲಿ ಒಂದು. ಈ ನಿಮಿತ್ತ ರಚಿಸಲಾಗಿದ್ದ ಮಾಜಿ ರಾಷ್ಟ್ರಪತಿ ರಾಮನಾಥ ಕೋವಿಂದ ಅಧ್ಯಕ್ಷತೆಯ ಉನ್ನತ ಮಟ್ಟದ ಸಮಿತಿಯು ಮಾ.14,2024 ರಂದು ರಾಷ್ಟ್ರಪತಿ ದ್ರೌಪದಿ ಮುರ್ಮು ಅವರಿಗೆ ತನ್ನ ವರದಿಯನ್ನು ಸಮರ್ಪಿಸಿದೆ. ವರದಿಯು ಸುಮಾರು 8 ಸಾವಿರ ಪುಟಗಳಷ್ಟಿದೆ! 2024 ರ ಲೋಕಸಭಾ ಚುನಾವಣೆಯ ಪೂರ್ವಭಾವಿಯಾಗಿ ಇದೊಂದು ಉತ್ತಮ ಬೆಳವಣಿಗೆ. ಆದರೆ ಏಕ ಚುನಾವಣಾ ಪ್ರಕ್ರಿಯೆ ಕಾರ್ಯರೂಪಕ್ಕೆ ಬರಲು ಇನ್ನೂ ಹಲವು ವರ್ಷಗಳೇ ಬೇಕಾಗಬಹುದು. ಅದೇ ರೀತಿಯಲ್ಲಿ ಮುಂದಿನ ಅಂದರೆ 2029 ರಲ್ಲಿ ನಡೆಯಲಿರುವ 19 ನೇ ಲೋಕಸಭಾ ಚುನಾವಣೆಯ ಪೂರ್ವದಲ್ಲಿ ದೇಶದ ಎಲ್ಲಾ ಲೋಕಸಭಾ ಕ್ಷೇತ್ರಗಳು ಜನಸಂಖ್ಯೆಯ ಅಧಾರದಲ್ಲಿ ಡಿಲಿಮಿಟೇಶನ್ ಪ್ರಕ್ರಿಯೆಯ ಮೂಲಕ ಮರುವಿಂಗಡಣೆಯಾಗುವ ಸಾಧ್ಯತೆ ಹೆಚ್ಚಾಗಿದೆ. ಲೋಕಸಭಾ ಕ್ಷೇತ್ರಗಳು ಹೆಚ್ಚಳವಾಗಬೇಕಾದ, ಮೀಸಲು ಮಹಿಳಾ ಪ್ರಾತಿನಿಧ್ಯದ ಮೂಲಕ ಚುನಾವಣೆ ನಡೆಯಬೇಕಾದ ಅಗತ್ಯತೆಯು ಇದೆ. ಇದಕ್ಕೆ ಅನುಕೂಲವಾಗುವಂತೆ ದೇಶದ ಎಲ್ಲಾ ವಿಧಾನಸಭೆಗಳಲ್ಲಿ ಮಹಿಳಾ ಪ್ರಾತಿನಿಧ್ಯವನ್ನು ಶೇ.30 ಕ್ಕೆ ಹೆಚ್ಚಿಸುವಂತಾಗುವ ಕಾನೂನನ್ನು ಈಗಾಗಲೇ ಸಂಸತ್ತಿನಲ್ಲಿ ಮಂಡಿಸಲಾಗಿದೆ. ನಾರಿಶಕ್ತಿಯನ್ನು ಉತ್ತೇಜಿಸುವ ಕಾರ್ಯದೊಂದಿಗೆ ದೇಶದ ರಾಜಕಾರಣದಲ್ಲಿ ಮಹಿಳೆಯರ ಪಾಲುದಾರಿಕೆಯನ್ನು ಹೆಚ್ಚಿಸುವ ನಿಯಮವೂ ಪ್ರಶಂಸಾರ್ಹವೆಂದೇ ಹೇಳಬಹುದು. ಮೋದಿ 2.0 ಸರಕಾರವು ಈ ನಿಟ್ಟಿನಲ್ಲಿ ಕಾರ್ಯಪ್ರವೃತ್ತವಾಗಿತ್ತು ಎಂದೂ ಹೇಳಬಹುದು. ನೂತನವಾಗಿ ನಿರ್ಮಾಣಗೊಂಡ ಸಂಸತ್ ಭವನವು ಈ ನಿಟ್ಟಿನ ಬಹುದೊಡ್ಡ ಘಟ್ಟವಾಗಿದೆ.
ವಿಶ್ವದ ಇತರೆ ದೇಶಗಳಿಗೆ ಹೋಲಿಸಿದರೆ ಭಾರತವನ್ನು ಜಗತ್ತಿನ ಅತಿ ದೊಡ್ಡ ಪ್ರಜಾಪ್ರಭುತ್ವ ರಾಷ್ಟ್ರ, ಪ್ರಜಾಫ್ರಭುತ್ವದ ಮಡಿಲು, ಪ್ರಜಾಪ್ರಭುತ್ವದ ತಾಯಿ ಎನ್ನುವಂತಹ ರೆಟೊರಿಕ್ಕುಗಳನ್ನು ಆಗಾಗ್ಗೆ ಬಳಸುವುದನ್ನು ಕಾಣುತ್ತೇವೆ. ವಿಶ್ವದ ಅತಿ ದೊಡ್ಡ ವೇದಿಕೆಗಳಲ್ಲಿ ಈ ಪ್ರಶಂಸೆ ಆಗಾಗ್ಗೆ ಪ್ರತಿಧ್ವನಿಸುತ್ತಿರುತ್ತದೆ. ಇದಕ್ಕೆ ಪೂರಕವಾಗಿ ದೇಶದ ಲೋಕಸಭಾ ಕ್ಷೇತ್ರಗಳ ಮರುವಿಂಗಡನೆಯು ವರ್ತಮಾನದ ಅವಶ್ಯಕತೆಯಾಗಿದೆ. ದೇಶದ ಅತಿ ಪ್ರಮುಖ ಸಾಂಸ್ಥಿಕತೆಗಳಲ್ಲಿ ಒಂದಾಗಿರುವ ECI ಭಾರತೀಯ ಚುನಾವಣಾ ಆಯೋಗವು ಸರಕಾರದ ಅನುಮತಿ ಮತ್ತು ಸುಪ್ರೀಂ ಮಾರ್ಗದರ್ಶನದಲ್ಲಿ ಮುಂದೆ ಡಿಲಿಮಿಟೇಶನ್ ಪ್ರಕ್ರಿಯೆಯನ್ನು ಆರಂಭಿಸಲಿದೆ ಎಂಬುದು ಖಚಿತ. 2024 ರ ಲೋಕಸಭಾ ಚುನಾವಣೆಯಲ್ಲಿ ಆಡಳಿತದ ಚುಕ್ಕಾಣಿ ಹಿಡಿಯಲಿರುವ ಸರಕಾರವು ಡಿಲಿಮಿಟೇಶನ್ ಪ್ರಕ್ರಿಯೆಗೆ ಬೇಕಾದ ಸಮಿತಿಯನ್ನು ರಚಿಸಲಿದೆ. ದೇಶದ ಸರ್ವೋಚ್ಚ ನ್ಯಾಯಾಲಯದ ಮುಖ್ಯಸ್ಥರು ಇದಕ್ಕೆ ಮುಂದಾಳುತ್ವ ವಹಿಸಿ ಚುನಾವಣಾ ಆಯೋಗದ ಮೂಲಕ ಡಿಲಿಮಿಟೇಶನ್ ಪ್ರಕ್ರಿಯೆಗೆ ಚಾಲನೆ ನೀಡಲಿದ್ದಾರೆ. ಒಂದು ರಾಷ್ಟ್ರ, ಒಂದು ಚುನಾವಣೆʼಯು ಕೂಡಾ ಭಾರತ ದೇಶಕ್ಕೆ ಅತಿ ಅಗತ್ಯವಾದ ಪ್ರಕ್ರಿಯೆಯೂ ಹೌದು. ಏಕಕಾಲದಲ್ಲಿ ದೇಶದ ವಿವಿಧ ರಾಜ್ಯಗಳು, ಸ್ಥಳೀಯಾಡಳಿತ ಸಂಸ್ಥೆಗಳು ಸಹಿತ ಲೋಕಸಭೆಗೆ ಚುನಾವಣೆ ನಡೆದರೆ ಹಲವು ಕೋಟಿ ರೂ.ಗಳನ್ನು ಉಳಿಸಬಹುದು, ಇದರ ಜೊತೆಯಲ್ಲಿ ಸಮಯವನ್ನು ಸದುಪಯೋಗಪಡಿಸಬಹುದು, ದೇಶದ ಚುನಾವಣೆಯು ಏಕ ಹಂತದಲ್ಲಿ ನಡೆಯುವ ಕಾರಣ ಮಹಾಪರ್ವವಾಗಿ ಮಾರ್ಪಡಲಿದೆ ಮಾತ್ರವಲ್ಲ ಈ ಪ್ರಕ್ರಿಯೆಯ ಮೂಲಕ ಅತಿ ಹೆಚ್ಚು ಮಂದಿ ಮತದಾನ ಪ್ರಕ್ರಿಯೆಯಲ್ಲಿ ತೊಡಗುವ ಸಾಧ್ಯತೆಯೂ ಇದೆ.
ದೇಶದ ಹಿತದೃಷ್ಠಿಯಿಂದ ಸಕ್ರಿಯ ಪ್ರಜಾಪ್ರಭುತ್ವದಲ್ಲಿ ಪ್ರಜಾ ಪ್ರಭುವಿಗೆ ಹೆಚ್ಚಿನ ಪ್ರಾತಿನಿಧ್ಯ ನೀಡುವ ಕಾರಣದಿಂದ ಒಟ್ಟು ಲೋಕಸಭಾ ಸ್ಥಾನಗಳನ್ನು ಹೆಚ್ಚಿಸುವ ಅಗತ್ಯತೆ, ಅನಿವಾರ್ಯತೆ ಬಹಳಷ್ಟಿದೆ. ಪ್ರತಿ ಹತ್ತು ವರ್ಷಗಳಿಗೊಮ್ಮೆ ನಡೆಯುವ ಜನ ಗಣತಿಯು 2021 ರಲ್ಲಿ ಕೊರೊನಾ ಸಾಂಕ್ರಾಮಿಕದ ಕಾರಣ ನಡೆಯಲಿಲ್ಲ. ಈ ಜನಗಣತಿ ಪ್ರಕ್ರಿಯೆಯು 2026 ರಲ್ಲಿ ನಡೆದು, ಅದರ ಅಧಾರದಲ್ಲಿ ಡಿಲಿಮಿಟೇಶನ್ ಪ್ರಕ್ರಿಯೆ ನಡೆಯುವ ಸಾಧ್ಯತೆಯಿದೆ. ಲೋಕಸಭಾ ಕ್ಷೇತ್ರಗಳ ಮರುವಿಂಗಡನೆ ಸಹಿತ ಆಯಾ ರಾಜ್ಯಗಳ ವಿಧಾನಸಭಾ ಕ್ಷೇತ್ರಗಳ ಮರುವಿಂಗಡನೆಯ ಕಾರ್ಯ ಮುನ್ನಡೆಯಲಿದೆ. ಜನಸಂಖ್ಯೆಯ ಆಧಾರದಲ್ಲಿ ನಡೆಯುತ್ತಿದ್ದ ಡಿಲಿಮಿಟೇಶನ್ ಪ್ರಕ್ರಿಯೆಯು 1970 ರ ದಶಕದಲ್ಲಿ ತಟಸ್ಥವಾಗಿತ್ತು. ಜನಸಂಖ್ಯೆಗೆ ಅನುಗುಣವಾಗಿ ಲೋಕಸಭಾ ಕ್ಷೇತ್ರಗಳ ಮರುವಿಂಗಡನೆಯಾಗಿ ಲೋಕಸಭಾ ಕ್ಷೇತ್ರಗಳ ಸಂಖ್ಯೆಯು ಈಗ 543 ರಿಂದ 840 ಅಸುಪಾಸಿನಲ್ಲಿರಬೇಕಿತ್ತು!. ಆಡಳಿತದ ಹಿತದೃಷ್ಠಿಯಿಂದ ಇಂತಹ ಸೂಕ್ತ ಬದಲಾವಣೆ ತರಲು ಗಣತಂತ್ರ ವ್ಯವಸ್ಥೆಯಲ್ಲಿ ಕೇಂದ್ರ ಮತ್ತು ರಾಜ್ಯ ಸರಕಾರಗಳ ನಡುವೆ ಒಮ್ಮತವು ಅತ್ಯಗತ್ಯವಾಗಿದೆ.
70-80 ರ ದಶಕದ ಜನಸಂಖ್ಯಾ ನಿಯಂತ್ರಣ ಯೋಜನೆ/ನೀತಿಯ ಕಾರಣದಿಂದ ಕಳೆದ 50 ವರ್ಷಗಳಲ್ಲಿ ಡಿಲಿಮಿಟೇಶನ್ ಪ್ರಕ್ರಿಯೆಯು ದೇಶದಲ್ಲಿ ತಟಸ್ಥವಾಗಿತ್ತು. ಪ್ರಸ್ತುತ ವರ್ತಮಾನದಲ್ಲಿ ಉತ್ತರಪ್ರದೇಶ ಮತ್ತು ಬಿಹಾರ ರಾಜ್ಯಗಳಲ್ಲಿ ಜನಸಂಖ್ಯೆ ಗಣನೀಯವಾಗಿ ಹೆಚ್ಚಿದೆ. ದಕ್ಷಿಣದ ರಾಜ್ಯಗಳಲ್ಲಿ ಜನಸಂಖ್ಯೆಯ ಶೇಕಡವಾರು ಹೆಚ್ಚಳವು ಉತ್ತರ ಭಾರತದಂತೆ ಹೆಚ್ಚಾಗಿಲ್ಲ ಎಂಬುದೂ ಗಮನಿಸತಕ್ಕ ವಿಚಾರ. ಈ ಕಾರಣದಿಂದ ಕ್ಷೇತ್ರವಾರು ವಿಂಗಡನೆಯು ಪ್ರತಿನಿಧಿತ್ವದ ವಿಚಾರದಲ್ಲೂ ಸಣ್ಣ ಮಟ್ಟಿನ ಗೊಂದಲಕ್ಕೂ ಕಾರಣವಾಗಬಹುದು. ಈ ಗೊಂದಲಕ್ಕೂ ಒಂದು ಪರಿಹಾರ ಸೂತ್ರವಿದೆ. ಈ ಸೂತ್ರವು ಹೀಗಿದೆ.. ಲೋಕಸಭಾ ಕ್ಷೇತ್ರಗಳ ಸಂಖ್ಯೆಯನ್ನು ಪ್ರಸ್ತುತವಿದ್ದಷ್ಟೇ ಇರಿಸಿ. ಪ್ರತಿ ರಾಜ್ಯದ ವಿಧಾನಸಭಾ ಕ್ಷೇತ್ರಗಳ ಸಂಖ್ಯೆಯನ್ನು ಹೆಚ್ಚಿಸುವ ಪ್ರಕ್ರಿಯೆ. ಇದು ಕೂಡಾ ಪ್ರಾದೇಶಿಕ ಜನಸಂಖ್ಯೆಗೆ ಅನುಸಾರವಾಗಿ ಬಹಳ ಅನಿವಾರ್ಯವಾಗಿರುವ, ಅಗತ್ಯವಾಗಿ ನಡೆಯಬೇಕಾದ ಪ್ರಕ್ರಿಯೆಯಾಗಿದೆ.
ಚುನಾವಣಾ ಆಯೋಗವು ಇತ್ತೀಚಿನ ವರ್ಷಗಳಲ್ಲಿ ನಡೆಸಿದ ಡಿಲಿಮಿಟೇಶನ್ ಪ್ರಕ್ರಿಯೆಯ ಉತ್ತಮ ಉದಾಹರಣೆಯಾಗಿ ಜಮ್ಮು ಕಾಶ್ಮೀರವಿದೆ. ಜಮ್ಮು ಕಾಶ್ಮೀರ ರಾಜ್ಯವನ್ನು ಎರಡು ಕೇಂದ್ರಾಡಳಿತ ಪ್ರದೇಶಗಳಾಗಿ ವಿಂಗಡಿಸಿದ ಬಳಿಕ ಅಲ್ಲಿ ಡಿಲಿಮಿಟೇಶನ್ ಪ್ರಕ್ರಿಯೆ ಯಶಸ್ವಿಯಾಗಿದೆ, ಮಾತ್ರವಲ್ಲ ಮುಂದೆ ರಾಜ್ಯವಾಗಿ ಘೋಷಿಸಲ್ಪಡುವ ಇಲ್ಲಿ ಒಟ್ಟು ವಿಧಾನಸಭಾ ಕ್ಷೇತ್ರಗಳ ಸಂಖ್ಯೆಯು ಹೆಚ್ಚಿದೆ. ಇದರ ಜೊತೆಯಲ್ಲಿ ಕೆಲ ನಿರ್ದಿಷ್ಟ ಪಂಗಡಗಳಿಗೆ ಮೀಸಲಾತಿಯನ್ನು ಘೋಷಿಸಲಾಗಿದೆ. ಪಿಒಕೆಯ ಸದಸ್ಯರಿಗೂ ವಿಧಾನಸಭೆಯಲ್ಲಿ ಪ್ರಾತಿನಿಧ್ಯ ನೀಡಲಾಗುತ್ತಿರುವುದು ದೇಶದ ಪ್ರಜಾಪ್ರಭುತ್ವದ ಗರಿಮೆ ಗೌರವವನ್ನು ಸೂಚಿಸುತ್ತದೆ. ಜಮ್ಮು ಕಾಶ್ಮೀರದಲ್ಲಿ ನಡೆದ ಡಿಲಿಮಿಟೇಶನ್ ಪ್ರಕ್ರಿಯೆಯು ದೇಶದ ಲೋಕಸಭಾ ಮತ್ತು ವಿವಿಧ ರಾಜ್ಯಗಳ ವಿಧಾನಸಭಾ ಕ್ಷೇತ್ರಗಳ ಮರುವಿಂಗಡನೆಗೂ ಒಂದು ಮಾದರಿಯೆನಿಸಿದೆ.
ವಿಶ್ವದ ಪ್ರಭಾವಿ ರಾಷ್ಟ್ರಗಳ ಡಿಲಿಮಿಟೇಶನ್ ಪ್ರಕ್ರಿಯೆಯನ್ನು ಗಮನಿಸಿದರೆ ಭಾರತಕ್ಕೆ ಜೌಚಿತ್ಯಪೂರ್ಣವಾದುದು ಯಾವುದು ಎಂಬುದಕ್ಕೆ ಸ್ಪಷ್ಟತೆ ಸಿಗುತ್ತದೆ.ಬಹಳ ಹಿಂದೆಯೇ ದೇಶದ ಸಂವಿಧಾನ ರಚನೆಗೂ ಒಂದು ಮಾದರಿಯಿರುವಾಗ ಈ ಪ್ರಕ್ರಿಯೆಗೂ ಆಧುನಿಕ ಮಾದರಿಯನ್ನು ಸ್ವೀಕರಿಸಬಹುದಾಗಿದೆ.
ದೇಶದಲ್ಲಿ ಕ್ಷೇತ್ರ ಮರುವಿಂಗಡನೆಯ ಪ್ರಕ್ರಿಯೆಯು ಈ ಹಿಂದೆ ಮೂರು ಬಾರಿ ನಡೆದಿತ್ತು. 1951 ರಲ್ಲಿ ಕ್ಷೇತ್ರ ಮರುವಿಂಡನೆಯಾಗಿ ಲೋಕಸಭಾ ಸ್ಥಾನಗಳ ಸಂಖ್ಯೆ 489 ರಿಂದ 494 ಆಗಿತ್ತು. ಆ ಸಂದರ್ಭ ದೇಶದ ಜನಸಂಖ್ಯೆ 36.1 ಕೋಟಿ. 1961 ರ ಜನಗಣತಿ ಆಧಾರದ ಮೇಲೆ ನಡೆದ ಕ್ಷೇತ್ರ ವಿಂಡನೆಯಲ್ಲಿ ಒಟ್ಟು ಲೋಕಸಭಾ ಕ್ಷೇತ್ರಗಳ ಸಂಖ್ಯೆ ಏರಿಕೆಯಾಗಿ 522 ಕ್ಕೆ ತಲುಪಿತು. ಆ ಅವಧಿಯಲ್ಲಿ ದೇಶದಲ್ಲಿ 43.9 ಕೋಟಿ ಜನಸಂಖ್ಯೆಯಿತ್ತು. 1971 ರ ಜನಗಣತಿ ಪ್ರಕಾರ ದೇಶದ ಜನಸಂಖ್ಯೆ 54.8 ಕೋಟಿಗೆ ಏರಿಕೆಯಾಗಿ ಕ್ಷೇತ್ರಗಳ ಮರುವಿಂಗಡನೆ ನಡೆದು ಒಟ್ಟಾರೆ ಲೋಕಸಭಾ ಕ್ಷೇತ್ರಗಳು ಇಂದಿರುವ 543 ಕ್ಕೆ ತಲುಪಿತು. ಆ ಸಂದರ್ಭದ ಜನಸಂಖ್ಯಾ ನಿಯಂತ್ರಣದ ನಿಯಮ ಮತ್ತು ರೂಪುರೇಶೆಯ ಕಾರಣದಿಂದ, ಕ್ಷೇತ್ರಗಳ ಮರುವಿಂಗಡನೆಯಾಗಿ ಕ್ಷೇತ್ರಗಳ ಸಂಖ್ಯೆಯಲ್ಲಿ ಹೆಚ್ಚಳ ಕಂಡಿಲ್ಲ. 2031 ರ ಜನಗಣತಿಯ ನಂತರದಲ್ಲಿ ಕ್ಷೇತ್ರಗಳ ಸಂಖ್ಯೆಯಲ್ಲಿ ಹೆಚ್ಚಳವಾಗುವ ಸಾಧ್ಯತೆಗಳೇ ಹೆಚ್ಚು. 2026 ರಲ್ಲಿ ಜನಗಣತಿಯಾಗಿ ಕ್ಷೇತ್ರ ಮರುವಿಂಡನೆಗೆ ಹೆಚ್ಚು ಕಾಲಾವಕಾಶ ಬೇಕಿರುವ ಕಾರಣ ಮತ್ತು 2000 ನೇ ಇಸವಿಯಲ್ಲಿ ತಿದ್ದುಪಡಿಯಾದ 84 ನೇ ಅಧಿನಿಮಯದ ಪ್ರಕಾರ 2026 ರ ತನಕ ಡಿಲಿಮಿಟೇಶನ್ ಪ್ರಕ್ರಿಯೆ ನಡೆಯದ ಕಾರಣ, ಅದೇ ರೀತಿಯಲ್ಲಿ 2021 ರಲ್ಲಿ ಜನಗಣತಿಯಾಗದ ಕಾರಣ ಈ ಪ್ರಕ್ರಿಯೆಯು ಮುಂದಿನ ದಶಕಕ್ಕೂ ಹೋಗಬಹುದು. ಕ್ಷೇತ್ರಗಳ ಮರುವಿಂಗಡನೆ ಮಾತ್ರವಲ್ಲದೆ ಇಲ್ಲಿ ಕ್ಷೇತ್ರ ಸಂಖ್ಯೆಯಲ್ಲಿನ ಹೆಚ್ಚಳದ ಅವಶ್ಯಕತೆಯೂ ಇದೆ.
ನವದೆಹಲಿಯಲ್ಲಿ ನಿರ್ಮಾಣಗೊಂಡ ನೂತನ ಸಂಸತ್ ಭವನವು ದೇಶದ ಭಾವಿ ಸಂಸದರನ್ನು ಬರಮಾಡಿಕೊಳ್ಳಲು ಸಜ್ಜಾಗಿದೆ. ಸುಮಾರು 1000 ಕ್ಕೂ ಹೆಚ್ಚು ಮಂದಿ ಸಂಸದರು ಕುಳಿತುಕೊಳ್ಳಲು ಅನುಕೂಲವಾಗುವಂತೆ ಇದನ್ನು ನಿರ್ಮಿಸಲಾಗಿದೆ. ದೇಶದ ಭವಿಷ್ಯತ್ತಿನ ದೃಷ್ಠಿಯಲ್ಲಿಟ್ಟುಕೊಂಡು ನೂತನ ಸಂಸತ್ತನ್ನು ನಿರ್ಮಿಸಲಾಗಿದೆ ಎಂಬುದು ವಾಸ್ತವಾಂಶ. ಡಿಲಿಮಿಟೇಶನ್ ಪ್ರಕ್ರಿಯೆಯು ಯಶಸ್ವಿಯಾಗಿ ಲೋಕಸಭಾ ಸದಸ್ಯರ ಸಂಖ್ಯೆ ಜಾಸ್ತಿಯಾದರೂ ಅಧಿವೇಶನಗಳನ್ನು ಲೋಪಗಳಿಲ್ಲದೆ ನಡೆಸಲು ಆಧುನಿಕ ಸೌಕರ್ಯಗಳುಳ್ಳ ಸಂಸತ್ ಭವನವೂ ಸ್ವಾತಂತ್ರ್ಯ ಭಾರತದಲ್ಲಿ ನಿರ್ಮಿತವಾಗಿದೆ ಎಂಬುದು ಹೆಮ್ಮೆ ಪಡತಕ್ಕ ವಿಚಾರ.
ಇದೇ ರೀತಿ ಲೋಕಸಭೆ ಮತ್ತು ವಿಧಾನಸಭಾ ಚುನಾವಣೆಗಳು ಏಕಕಾಲದಲ್ಲಿ ನಡೆಯಬೇಕಾದ ಅನಿವಾರ್ಯತೆಯೂ ಭವಿಷ್ಯತ್ತಿನ ಅವಶ್ಯಕತೆಗಳಲ್ಲಿ ಒಂದು. ಏಕಕಾಲದಲ್ಲಿ ವಿಧಾನಸಭೆ, ಲೋಕಸಭೆ ಮತ್ತು ಸ್ಥಳೀಯಾಡಳಿತ ಚುನಾವಣೆ ಸಾಧ್ಯವಾಗಿಸುವಂತಾಗಲು ಕೆಲ ವಿಧಾನಸಭೆಗಳನ್ನು ಅವಧಿಪೂರ್ವವಾಗಿ ವಿಸರ್ಜಿಸಬೇಕಾಗಬಹುದು ಮತ್ತೂ ಕೆಲವೆಡೆ ಅವಧಿ ಮೀರಿ ಆಡಳಿತ ನಡೆಸುವ ಅವಕಾಶವನ್ನು ನೀಡಬೇಕಾಗಿ ಬರಬಹುದು ಅಥವಾ ರಾಷ್ಟ್ರಪತಿ ಆಳ್ವಿಕೆಯನ್ನು ಹೇರಬೇಕಾಗಬಹುದು. ಹೀಗೆ ಇಂತಹ ಮಹಾ ಪ್ರಜಾಪ್ರಭುತ್ವದ ಪರ್ವವನ್ನು ಸಮಯಬಂಧಿತವಾಗಿ ನಡೆಸುವಂತಾಗಲು 2024 ರ ಚುನಾವಣೆಯು ಅತಿ ಮುಖ್ಯವಾಗಿದೆ. ಬಹುಮತದ ಸರಕಾರ ಆಡಳಿತ ಚುಕ್ಕಾಣಿ ಹಿಡಿದು ‘ಏಕ ರಾಷ್ಟ್ರ, ಏಕ ಚುನಾವಣೆ’ ಯನ್ನು ನಡೆಸುವಂತಾಗಲಿ ಮಾತ್ರವಲ್ಲ ಲೋಕಸಭೆ ಮತ್ತು ಎಲ್ಲಾ ರಾಜ್ಯಗಳ ವಿಧಾನಸಭಾ ಕ್ಷೇತ್ರಗಳ ಸಂಖ್ಯೆ ಹೆಚ್ಚಿ ಜನಸಂಖ್ಯೆಗೆ ಅನುಸಾರವಾಗಿ ಪ್ರಜಾ ಹಿತ ಕಾಪಾಡಲು ನೆರವಾಗಲಿ ಎಂಬುದೇ ಸದಾಶಯ.
ಅಮೇರಿಕಾದಲ್ಲಿ ಡಿಲಿಮಿಟೇಶನ್ ಪ್ರಕ್ರಿಯೆಯು ಹಲವು ಬಾರಿ ನಡೆದಿದೆ, ಆದರೆ ಅಲ್ಲಿನ ಜನಸಂಖ್ಯೆ ಕಳೆದ ನೂರು ವರ್ಷಗಳಲ್ಲಿ ಹೆಚ್ಚಾದರೂ ಅಲ್ಲಿನ ಸಂಸದರ ಸಂಖ್ಯೆ ಹೆಚ್ಚಾಗಿಲ್ಲ, ಬದಲಾಗಿ ಚುನಾವಣಾ ಕ್ಷೇತ್ರಗಳ ಗಡಿಗಳು ಜನಸಂಖ್ಯೆಗೆ ಆಧಾರವಾಗಿ ಬದಲಾಗಿವೆ. ಯುರೋಪಿಯನ್ ಯೂನಿಯನ್ ಡಿಲಿಮಿಟೇಶನ್ ಪ್ರಕ್ರಿಯೆಯೂ ಕಳೆದ ಎರಡು ಮೂರು ದಶಕಗಳಲ್ಲಿ ಜನಸಂಖ್ಯೆಗೆ ಅನುಗುಣವಾಗಿ ಬದಲಾಗಿದೆ. ಒಬ್ಬ ಲೋಕಸಭಾ ಸಂಸದನಿಗೆ ಅಧೀನದಲ್ಲಿ ಸರಾಸರಿ ಎಷ್ಟು ಮತದಾರರು ಇರಬೇಕು ಎಂಬ ನಿರ್ಣಯವು ಆಡಳಿತ ವ್ಯವಸ್ಥೆಯೇ ಮಾಡಬೇಕು. ಆಧುನಿಕ ಸಂಪರ್ಕ ಮತ್ತು ಸಂವಹನ ಕ್ರಾಂತಿಯ ಕಾರಣದಿಂದ ಓರ್ವ ಸಂಸತ್ ಸದಸ್ಯನ ಕ್ಷೇತ್ರದಲ್ಲಿ 12-14 ಲಕ್ಷ ಅರ್ಹ ಮತದಾರರಿದ್ದರೆ ದೊಡ್ಡ ವಿಚಾರವೇನಲ್ಲ!
-ವಿವೇಕಾದಿತ್ಯ
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.