ಬೆಂಗಳೂರು: ಮುಂದಿನ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಹೊಸ ಮತದಾರರ ಜೊತೆಗೇ ಹೊಸ ನಾಯಕತ್ವ ಸೃಷ್ಟಿ ಮಾಡುವ ನಿಟ್ಟಿನಲ್ಲಿ ರಾಜ್ಯ ಬಿಜೆಪಿ, ಯುವಮೋರ್ಚಾ ವತಿಯಿಂದ “ನಮೋ ಯುವ ಭಾರತ ಫೆಲೋಶಿಫ್” ಕಾರ್ಯಕ್ರಮಕ್ಕೆ ಚಾಲನೆ ಕೊಡುತ್ತಿದೆ ಎಂದು ಬಿಜೆಪಿ ಯುವ ಮೋರ್ಚಾ ರಾಜ್ಯ ಅಧ್ಯಕ್ಷ ಮತ್ತು ಶಾಸಕ ಧೀರಜ್ ಮುನಿರಾಜು ಅವರು ತಿಳಿಸಿದರು.
ನಗರದ ಬಿಜೆಪಿ ರಾಜ್ಯ ಕಾರ್ಯಾಲಯ ಜಗನ್ನಾಥ ಭವನದಲ್ಲಿ ಇಂದು “ನಮೋ ಯುವ ಭಾರತ ಫೆಲೋಶಿಫ್” ಉದ್ಘಾಟನಾ ಕಾರ್ಯಕ್ರಮದಲ್ಲಿ ಯುವಕರು ರಾಜಕೀಯಕ್ಕೆ ಬರಬೇಕೆಂಬ ಅಪೇಕ್ಷೆ ಪ್ರಧಾನಿ ನರೇಂದ್ರ ಮೋದಿಜೀ ಅವರದು. ಕಾಲೇಜುಗಳಲ್ಲಿ ಇವತ್ತು ಎಲ್ಲೂ ಯಾವುದೇ ಚುನಾವಣೆ ನಡೆಯುತ್ತಿಲ್ಲ. ಯುವಕರು ರಾಜಕೀಯ ಸಂಪರ್ಕದಿಂದ ದೂರು ಇದ್ದಾರೆ ಎಂದು ವಿವರಿಸಿದರು. “ನಮೋ ಯುವ ಭಾರತ ಫೆಲೋಶಿಫ್” ಮುಂದಿನ ಒಂದು, ಒಂದೂವರೆ ತಿಂಗಳ ಕಾಲ ನಡೆಯಲಿದೆ ಎಂದರು.
ಪಕ್ಷದ ರಾಜ್ಯಾಧ್ಯಕ್ಷ ವಿಜಯೇಂದ್ರ ಅವರ ನಾಯಕತ್ವದಲ್ಲಿ ಹಾಗೂ ರಾಜ್ಯ ಸಂಘಟನಾ ಪ್ರಧಾನ ಕಾರ್ಯದರ್ಶಿ ರಾಜೇಶ್ ಜಿ.ವಿ. ಅವರ ಮಾರ್ಗದರ್ಶನದಲ್ಲಿ ಈ ಕಾರ್ಯಕ್ರಮ ನಡೆಸಲಾಗುವುದು. ಯುವಜನತೆ ಇಂದು ಸಾಮಾಜಿಕ ಜಾಲತಾಣದಲ್ಲಿ ಹೆಚ್ಚಾಗಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ. ನರೇಂದ್ರ ಮೋದಿಜೀ ಅವರ ವಿವಿಧ ಯೋಜನೆಗಳು, ಕೇಂದ್ರ ಸರಕಾರದ ವಿವಿಧ ಯೋಜನೆಗಳು, ಅಭಿವೃದ್ಧಿ ಕಾರ್ಯಗಳಿಗೆ ಸಂಬಂಧಿಸಿ ಯುವಜನತೆಗೆ ಕಿರುಚಿತ್ರಗಳ ಸ್ಪರ್ಧೆಯನ್ನು ಏರ್ಪಡಿಸಲಾಗುತ್ತಿದೆ ಎಂದು ವಿವರ ನೀಡಿದರು. ಟಾಪ್ 10 ರೀಲ್ಗಳಿಗೆ ನರೇಂದ್ರ ಮೋದಿಜೀ ಅವರ ಭೇಟಿಯ ಅವಕಾಶ ಲಭಿಸಲಿದೆ ಎಂದು ತಿಳಿಸಿದರು.
ಎಲ್ಲ ರೀಲ್ಗಳನ್ನು ‘ಬಿಜೆವೈಎಂ ಕರ್ನಾಟಕ’ ಪೇಜಿನಲ್ಲಿ ಪೋಸ್ಟ್ ಮಾಡುತ್ತೇವೆ. ಉತ್ತಮವಾದ ಟಾಪ್ 3 ರೀಲ್ಗಳನ್ನು ವಿಜಯೇಂದ್ರರ ಪೇಜ್ ಹಾಗೂ ಇತರ ಗಣ್ಯರ ಪೇಜ್ಗಳಲ್ಲಿ ಹಂಚಿಕೊಳ್ಳುವುದಾಗಿ ವಿವರಿಸಿದರು.
ಯುವ ಮೋರ್ಚಾ ರಾಜ್ಯ ಪ್ರಧಾನ ಕಾರ್ಯದರ್ಶಿ ಮತ್ತು ಶಾಸಕ ಹರೀಶ್ ಪೂಂಜ ಅವರು ಮಾತನಾಡಿ, ಯುವಕರಲ್ಲಿ ಧನಾತ್ಮಕ ಚಿಂತನೆಗಳನ್ನು ಬೆಳೆಸುವ ಪಕ್ಷ ಬಿಜೆಪಿ ಎಂದು ವಿವರಿಸಿದರು. ಕಾಂಗ್ರೆಸ್ ಸರಕಾರವು ಕಳೆದ 65 ವರ್ಷಗಳಲ್ಲಿ ಮಾಡಿದ ಅವಾಂತರಗಳನ್ನು ಜನತೆಗೆ ಮುಟ್ಟಿಸುವ ಕೆಲಸವನ್ನು ಬಿಜೆಪಿಯ ವಿವಿಧ ಮೋರ್ಚಾಗಳು ಮಾಡಲಿವೆ ಎಂದರು.
ಯುವ ಮೋರ್ಚಾ ರಾಜ್ಯ ಪ್ರಧಾನ ಕಾರ್ಯದರ್ಶಿ ಸಂದೀಪ್ ರವಿ ಅವರು ಮಾತನಾಡಿ, ಯುವಜನತೆ ತಮ್ಮನ್ನು ಈಗ ರೀಲ್ಸ್ (ಕಿರುಚಿತ್ರ) ಮೂಲಕ ತಮ್ಮನ್ನು ತೊಡಗಿಸಿಕೊಂಡಿದೆ. ಮೋದಿಯವರ ಸಾಧನೆ, ಅವರ ವಿಶೇಷ ಜನಪರ ಯೋಜನೆಗಳ ಕುರಿತು ರೀಲ್ ಮಾಡಿ ‘ಮೈ ಫಸ್ಟ್ ವೋಟ್ ಫಾರ್ ನಮೋ’ ಮೂಲಕ ಇನ್ಸ್ಟಾಗ್ರಾಂ, ಫೇಸ್ಬುಕ್, ಟ್ವಿಟರ್ ಹ್ಯಾಂಡಲ್ನಡಿ ಟ್ಯಾಗ್ ಮಾಡಲು ವಿನಂತಿಸಿದರು. ಗರಿಷ್ಠ ಲೈಕ್ ಪಡೆಯುವ 10 ರೀಲ್ಗಳನ್ನು ಆಯ್ಕೆ ಮಾಡಿ ಮೋದಿಜೀ ಅವರು ಕರ್ನಾಟಕಕ್ಕೆ ಬಂದಾಗ ಅವರನ್ನು ಮುಖತಃ ಭೇಟಿ ಮಾಡಲು ಅವಕಾಶ ಮಾಡಿಕೊಡಲಿದ್ದೇವೆ ಎಂದು ತಿಳಿಸಿದರು.
90 ಸೆಕೆಂಡ್ಗಳ ರೀಲ್ ಇರಲಿದೆ. ಮೋದಿಯವರು ಮಹಿಳೆ, ಯುವಜನತೆ, ಅನ್ನದಾತ, ಬಡವ ಎಂಬ 4 ವಿಭಾಗ ಮಾಡಿದ್ದು, ಯುವಕ ವಿಭಾಗದಡಿ ಈ ಸ್ಪರ್ಧೆ ನಡೆಯಲಿದೆ. ಅತಿ ಹೆಚ್ಚು ಯುವಜನತೆ ಇದರಲ್ಲಿ ಭಾಗವಹಿಸುವಂತೆ ಮನವಿ ಮಾಡಿದರು. ಪೋಸ್ಟರನ್ನು ಕೂಡ ಬಿಡುಗಡೆ ಮಾಡಲಾಯಿತು.
ಬಿಜೆಪಿ ರಾಜ್ಯ ಕಾರ್ಯದರ್ಶಿಗಳು ಮತ್ತು ವಿಧಾನಪರಿಷತ್ ಸದಸ್ಯ ಡಿ.ಎಸ್. ಅರುಣ್, ರಾಜ್ಯ ಕಾರ್ಯದರ್ಶಿ ಶ್ರೀಮತಿ ಅಂಬಿಕಾ ಹುಲಿನಾಯ್ಕರ್, ರಾಜ್ಯ ವಕ್ತಾರರಾದ ಸುರಭಿ ಹೊದಿಗೆರೆ ಅವರು ಭಾಗವಹಿಸಿದ್ದರು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.