ಇಂದು ಅಕ್ಟೋಬರ್ 2, ದೇಶದಾದ್ಯಂತ ರಾಷ್ಟ್ರಪಿತ ಮಹಾತ್ಮ ಗಾಂಧೀಜಿಯವರ ಜನ್ಮದಿನವನ್ನು ಆಚರಿಸಲಾಗುತ್ತಿದೆ. ಅಂತಾರಾಷ್ಟ್ರೀಯ ಅಹಿಂಸಾ ದಿನವಾದ ಇಂದು ಅಹಿಂಸೆ, ಶಾಂತಿಯ ಸಂದೇಶಗಳನ್ನು ಜಗತ್ತಿಗೆ ಸಾರಲಾಗುತ್ತಿದೆ. ಇಡೀ ಜಗತ್ತೇ ಅಹಿಂಸಾವಾದಿಯ ಸಿದ್ಧಾಂತಗಳಿಗೆ ತಲೆದೂಗುತ್ತಿರುವ ಈ ಸಂದರ್ಭದಲ್ಲಿ ಭಾರತೀಯರಾದ ನಾವು ಗಾಂಧೀ ಪಥದಲ್ಲಿ ಸಾಗಿ ಭಾರತವನ್ನು ಶ್ರೇಷ್ಠ ಮಟ್ಟಕ್ಕೆ ಕೊಂಡೊಯ್ಯಬೇಕು. ಅದುವೇ ನಾವು ರಾಷ್ಟ್ರಿಪಿತನಿಗೆ ನೀಡುವ ಅತಿದೊಡ್ಡ ಪುರಸ್ಕಾರ.
ಇದೇ ದಿನದಂದು ಕಳೆದ ವರ್ಷ ಪ್ರಧಾನಿ ನರೇಂದ್ರ ಮೋದಿಯವರು ’ಸ್ವಚ್ಛ ಭಾರತ ಅಭಿಯಾನ’ಕ್ಕೆ ಚಾಲನೆ ನೀಡಿದ್ದರು. ಇಡೀ ದೇಶವನ್ನು ಸ್ವಚ್ಛಗೊಳಿಸಿ ಮಹಾತ್ಮನ 150ನೇ ಹುಟ್ಟು ಹಬ್ಬಕ್ಕೆ ಉಡುಗೊರೆ ಕೊಡಬೇಕು ಎಂಬ ಮಹತ್ವಾಕಾಂಕ್ಷೆಯಿಂದ ಈ ಅಭಿಯಾನಕ್ಕೆ ಚಾಲನೆ ನೀಡಲಾಯಿತು. ಸ್ವತಃ ಪ್ರಧಾನ ಮಂತ್ರಿಯವರೇ ಪೊರಕೆ ಹಿಡಿದು ಕಸ ಗುಡಿಸುವ ಮೂಲಕ ದೇಶಕ್ಕೆ ಸ್ವಚ್ಛತೆಯ ಪ್ರೇರಣೆ ನೀಡಿದರು. ಬಳಿಕ ಸೆಲೆಬ್ರಿಟಿಗಳಿಂದ ಹಿಡಿದು ಸಫಾಯಿ ಕರ್ಮಚಾರಿಗಳವರೆಗೂ ಎಲ್ಲರೂ ಈ ಅಭಿಯಾನದಲ್ಲಿ ಪಾಲ್ಗೊಂಡರು. ರಾಜಕಾರಣಿಗಳೂ ಪೊರಕೆ ಹಿಡಿದು ಬೀದಿ ಗುಡಿಸಿದರು. ವಿದ್ಯಾರ್ಥಿಗಳೂ ಸ್ವಚ್ಛತಾ ಕಾರ್ಯಕ್ರಮದಲ್ಲಿ ತಮ್ಮನ್ನು ತೊಡಗಿಸಿಕೊಂಡರು.
ಸ್ವಚ್ಛ ಭಾರತ ಅಭಿಯಾನ ಆರಂಭವಾದ ಬಳಿಕ ಹೆಚ್ಚಿನ ಭಾರತೀಯರಲ್ಲಿ ಸ್ವಚ್ಛತೆಯ ಬಗೆಗೆ ಅರಿವು ಮೂಡಿದ್ದು ನಿಜ. ಪುಟ್ಟ ಮಕ್ಕಳು ಚಾಕೋಲೆಟ್ ರ್ಯಾಪರನ್ನು ನೆಲಕ್ಕೆ ಬಿಸಾಕುವ ಬದಲು ಕಸದಬುಟ್ಟಿಗೆ ಹಾಕುವಷ್ಟು ಮಟ್ಟಿಗೆ ಈ ಅಭಿಯಾನ ಪ್ರಭಾವ ಬೀರಿದೆ. ಆದರೆ ಈ ಅರಿವು ಭಾರತವನ್ನು ಸಂಪೂರ್ಣ ಸ್ವಚ್ಛ ಮಾಡುವಷ್ಟರ ಮಟ್ಟಿಗೆ ಪ್ರಭಾವ ಬೀರಿಲ್ಲ ಎಂಬುದು ದುರಾದೃಷ್ಟ. ಈಗಲೂ ಭಾರತದ ಬೀದಿ ಬೀದಿಯಲ್ಲಿ ಕಸದ ರಾಶಿಗಳು ಎದ್ದು ಕಾಣುತ್ತದೆ. ದಾರಿಯಲ್ಲಿ ಮೂತ್ರ ವಿಸರ್ಜಿಸುವವರು, ಉಗುಳುವವರು ಈಗಲೂ ಇದ್ದಾರೆ. ಇವರ ಮನೋಭಾವವನ್ನು ಬದಲಾಯಿಸಲು ಬಹುಶಃ ಯಾವ ಅಭಿಯಾನದಿಂದಲೂ ಸಾಧ್ಯವಿಲ್ಲದ ಮಾತು ಎನ್ನಬಹುದಷ್ಟೇ.
ಜನರ ಮನಸ್ಥಿತಿಗಿಂತಲೂ ನಮ್ಮ ನಗರ ಪಾಲಿಕೆಗಳು, ಸ್ಥಳಿಯ ಆಡಳಿತಗಳ ಮನಸ್ಥಿತಿ ಬದಲಾಗಿಲ್ಲ ಎಂಬುದು ಹೆಚ್ಚು ಬೇಸರ ತರಿಸುವ ಸಂಗತಿ. ನಗರದ ಮೂಲೆ ಮೂಲೆಯಿಂದ ಕಸವನ್ನು ಸಮಯಕ್ಕೆ ಸರಿಯಾಗಿ ವಿಲೇವಾರಿ ಮಾಡಬೇಕಾದ ಈ ಆಡಳಿತಗಳು ತಮ್ಮ ಕರ್ತವ್ಯವನ್ನು ಸರಿಯಾಗಿ ನಿಭಾಯಿಸದ ಕಾರಣವೇ ಭಾರತದ ಬಹುತೇಕ ನಗರಗಳು ಕಸದ ರಾಶಿಯಿಂದ ತುಂಬಿ ತುಳುಕುತ್ತಿವೆ. ದೇಶದ ನಂ.1 ಸ್ವಚ್ಛ ರಾಜಧಾನಿ ಎನಿಸಿಕೊಂಡಿರುವ ಬೆಂಗಳೂರಿನಲ್ಲೂ ಮೂಗು ಮಚ್ಚಿಕೊಂಡು ಓಡಾಡುವ ಪರಿಸ್ಥಿತಿ ಇದೆ, ಇನ್ನು ರಾಷ್ಟ್ರ ರಾಜಧಾನಿ ದೆಹಲಿಯ ಪಾಡು ಹೇಳಿ ಸುಖವಿಲ್ಲ. ಇಂತಹ ಮಹಾನಗರಗಳು ಕಸದ ತೊಟ್ಟಿಯಾಗಲು ಮುಖ್ಯ ಕಾರಣ ಅಲ್ಲಿನ ಆಡಳಿತ, ಸರ್ಕಾರ. ಸಮಯಕ್ಕೆ ಸರಿಯಾಗಿ ಕಸ ವಿಲೇವಾರಿಯಾಗುತ್ತಿದ್ದರೆ ಇಂತಹ ಪರಿಸ್ಥಿತಿಗಳು ಅಲ್ಲಿ ಉದ್ಭವವಾಗುತ್ತಿರಲಿಲ್ಲ. ನಮ್ಮನಾಳುವವರು, ಅಧಿಕಾರಿಗಳು ಎಚ್ಚೆತ್ತುಕೊಳ್ಳದಿದ್ದರೆ ಯಾವ ಅಭಿಯಾನವೂ ಯಶಸ್ವಿಯಾಗದು.
ದೇಶದ ನಂ.1 ಸ್ವಚ್ಛ ನಗರ ಎನಿಸಿಕೊಂಡಿರುವ ಮೈಸೂರು ಈ ನಿಟ್ಟಿನಲ್ಲಿ ದೇಶಕ್ಕೆ ಮಾದರಿಯಾಗಿದೆ. ಪ್ರವಾಸಿಗರ ನೆಚ್ಚಿನ ತಾಣವಾಗಿರುವ ಮೈಸೂರು ಸ್ವಚ್ಛತೆಗೆ ಹೆಚ್ಚಿನ ಆದ್ಯತೆ ನೀಡುತ್ತಿದೆ. ಅಲ್ಲಿನ ಜನರಿಗೂ ಸ್ವಚ್ಛತೆಯ ಬಗ್ಗೆ ಹೆಚ್ಚಿನ ಅರಿವಿದೆ ಮತ್ತು ಅಲ್ಲಿನ ಜಿಲ್ಲಾಡಳಿತವೂ ಕಸದ ವಿಲೇವಾರಿಯನ್ನು ಸರಿಯಾಗಿ ನಿಭಾಯಿಸುತ್ತಿದೆ. ಹೀಗಾಗಿ ಅಲ್ಲಿ ಕಸದ ರಾಶಿಗಳು ಕಾಣ ಸಿಗುವುದು ಕಡಿಮೆ. ಇದೇ ಮಾದರಿಯನ್ನು ಎಲ್ಲಾ ನಗರಗಳು, ಗ್ರಾಮಗಳು ಪಾಲಿಸಿದರೆ ಇಡೀ ದೇಶ ಸ್ವಚ್ಛವಾಗುವುದರಲ್ಲಿ ಅನುಮಾನವಿಲ್ಲ.
ಇನ್ನು ಶೌಚಾಲಯದ ವಿಷಯಕ್ಕೆ ಬಂದರೆ ದೇಶದ ಅರ್ಧದಷ್ಟು ಗ್ರಾಮಗಳು ಬಯಲು ಶೌಚಾಲಯವನ್ನೇ ನೆಚ್ಚಿಕೊಂಡಿದೆ. ಸರ್ಕಾರ ಈ ನಿಟ್ಟಿನಲ್ಲಿ ದಿಟ್ಟ ಹೆಜ್ಜೆಯಿಟ್ಟಿದೆ. 2019ಕ್ಕೆ ಇಡೀ ದೇಶವನ್ನು ಬಯಲು ಶೌಚಾಲಯ ಮುಕ್ತವನ್ನಾಗಿಸುವ ಗುರಿಯಿಟ್ಟುಕೊಂಡಿರುವ ಅದು 12 ಕೋಟಿ ಶೌಚಾಲಯಗಳ ನಿರ್ಮಿಸಲು ಯೋಜನೆ ರೂಪಿಸಿದೆ. ಹೆಣ್ಣುಮಕ್ಕಳು ಶಾಲೆ ಬಿಡಲು ಶೌಚಾಲಯಗಳೂ ಮುಖ್ಯ ಕಾರಣವಾಗಿರುತ್ತದೆ ಎಂಬುದನ್ನು ಅರಿತಿರುವ ಸರ್ಕಾರ ಶಾಲೆಗಳಲ್ಲಿಯೂ ಟಾಯ್ಲೆಟ್ ನಿರ್ಮಾಣ ಕಾರ್ಯಕ್ಕೆ ಮುಂದಾಗಿದೆ. ಇದಕ್ಕೆ ಮಹೇಂದ್ರ ಗ್ರೂಪ್, ರೋಟರಿ ಇಂಟರ್ನ್ಯಾಷನಲ್ ಸೇರಿದಂತೆ ವಿವಿಧ ಸಂಸ್ಥೆಗಳು ನೆರವಿನ ಹಸ್ತ ಚಾಚಿದೆ. ಎಪ್ರಿಲ್ 2014 ರಿಂದ ಆಗಸ್ಟ್ 2015 ರವರೆಗೆ ಸ್ವಚ್ಛ ಭಾರತ ಯೋಜನೆಯಡಿ 85 ಲಕ್ಷ ಶೌಚಾಲಯಗಳನ್ನು ನಿರ್ಮಿಸಲಾಗಿದೆ. ಈ ಕಾರ್ಯ ಇನ್ನಷ್ಟು ಶೀಘ್ರಗತಿಯಲ್ಲಿ ಸಾಗಿದರೆ ಮಾತ್ರ ನಿಗದಿತ ಗುರಿಯನ್ನು ತಲುಪಲು ಸಾಧ್ಯ.
ಸ್ವಚ್ಛತೆ ಎಂಬುದು ಮಹಾತ್ಮ ಗಾಂಧೀಜಿಯವರ ಹೃದಯಕ್ಕೆ ಬಲು ಹತ್ತಿರವಾಗಿತ್ತು, ಅವರು ಸದಾ ಸ್ವಚ್ಛತೆಯನ್ನು ಪ್ರತಿಪಾದಿಸುತ್ತಿದ್ದರು. ಹೀಗಾಗಿ 2019ರಂದು ಅವರ 150ನೇ ಜನ್ಮದಿನಾಚರಣೆಯ ವೇಳೆ ಸ್ವಚ್ಛ ಭಾರತವನ್ನು ಅವರಿಗೆ ಉಡುಗೊರೆಯಾಗಿ ಅರ್ಪಿಸೋಣ ಎಂದು ಮೋದಿಯವರು ತಮ್ಮ ಭಾಷಣದಲ್ಲಿ ಸದಾ ಹೇಳುತ್ತಿರುತ್ತಾರೆ. ದೇಶವನ್ನು ಸ್ವಚ್ಛ ಮಾಡುವುದು ಕೇವಲ ಪ್ರಧಾನಿಯೊಬ್ಬನ ಕನಸಾಗಬಾರದು ಇಡೀ ದೇಶದ ನಾಗರಿಕರ ಕನಸು ಇದಾಗಿರಬೇಕು. ಇಡೀ ದೇಶವೇ ನನ್ನ ಮನೆಯೆಂದು ನೆನೆದು ಸ್ವಚ್ಛತೆಯನ್ನು ಕಾಪಾಡಬೇಕು, ಕಸ ಕಡ್ಡಿಗಳನ್ನು ಎಲ್ಲೆಂದರಲ್ಲಿ ಹಾಕದೆ ಕಸದಬುಟ್ಟಿಗೇ ಹಾಕುವ ಪರಿಜ್ಞಾನ ಎಲ್ಲರಿಗೂ ಮೂಡಬೇಕು. ನಗರಪಾಲಿಕೆಗಳೂ ಕಸವನ್ನು ಶೀಘ್ರವಾಗಿ ವಿಲೇವಾರಿ ಮಾಡಬೇಕು. ಸ್ಚಚ್ಛತೆ ಪಾಲಿಸದವರಿಂದ ದಂಡ ವಸೂಲು ಮಾಡಬೇಕು. ಅಷ್ಟೇ ಅಲ್ಲ ನಾಗರಿಕರಿಗೆ ಸಹಾಯಕವಾಗಲು ಮಾರ್ಗದ ಬದಿಗಳಲ್ಲಿ ಕಸದ ಬುಟ್ಟಿಗಳನ್ನು ಇಡಬೇಕು. ಆಗ ಜನ ಬೀದಿಗೆ ಕಸ ಹಾಕುವುದನ್ನು ಬಿಟ್ಟು ಕಸದ ಬುಟ್ಟಿಗೆ ಕಸ ಹಾಕುವುದನ್ನು ರೂಢಿ ಮಾಡಿಕೊಳ್ಳಬಹುದು.
2019ರ ಗಾಂಧಿ ಜಯಂತಿಗೆ ಇನ್ನು ಕೇವಲ ನಾಲ್ಕು ವರ್ಷ ಮಾತ್ರ ಇದೆ. ಒಂದು ವರ್ಷದಲ್ಲಿ ಭಾರತವನ್ನು ಸ್ವಚ್ಛಗೊಳಿಸುವಲ್ಲಿ ವಿಫಲರಾಗಿದ್ದೇವೆ. ಆದರೂ ನಮ್ಮ ಕೈಯಲ್ಲಿ ನಾಲ್ಕು ವರ್ಷವಿದೆ. ಈಗಲಾದರೂ ಎಚ್ಚೆತ್ತುಕೊಂಡು ಸ್ವಚ್ಛ ಭಾರತದ ಕನಸನ್ನು ಸಾಕಾರಗೊಳಿಸೋಣ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.