ಬೆಂಗಳೂರು : ಕಾಂಗ್ರೆಸ್ ಸರ್ಕಾರ ಐದು ಗ್ಯಾರಂಟಿಗಳ ಜೊತೆಗೆ ಜನರಿಗೆ ನಾಮ ಹಾಕುವ ಗ್ಯಾರಂಟಿಯನ್ನೂ ನೀಡಿದೆ. ಖಜಾನೆ ಖಾಲಿ ಮಾಡಿಕೊಂಡ ಸರ್ಕಾರ ಬೀಗ ಹಾಕಿಕೊಳ್ಳುವ ಸ್ಥಿತಿ ಬಂದಿದೆ ಎಂದು ವಿಧಾನಸಭೆಯ ಪ್ರತಿಪಕ್ಷ ನಾಯಕ ಆರ್.ಅಶೋಕ ಆಕ್ರೋಶ ವ್ಯಕ್ತಪಡಿಸಿದರು.
ಬಿಜೆಪಿ ವತಿಯಿಂದ ವಿಧಾನಸೌಧದ ಗಾಂಧಿ ಪ್ರತಿಮೆ ಬಳಿ ನಡೆದ ಪ್ರತಿಭಟನೆಯಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ಕಾಂಗ್ರೆಸ್ ನಾಯಕರು ದೆಹಲಿಗೆ ಮಜಾ ಮಾಡಲು ಹೋಗಿದ್ದು, ವಿಧಾನಸೌಧ ಖಾಲಿಯಾಗಿ ಅಧಿಕಾರಿಗಳಿಗೆ ಕೆಲಸವಿಲ್ಲದಂತಾಗಿದೆ. ಬೆಂಗಳೂರಿನಲ್ಲಿ 30% ಕಾವೇರಿ ನೀರು ಪೂರೈಕೆಯನ್ನು ಸ್ಥಗಿತಗೊಳಿಸಿದ್ದಾರೆ. ಬಿಜೆಪಿ ಅವಧಿಯಲ್ಲಿ 8 ಟಿಎಂಸಿ ನೀರು ಹೆಚ್ಚುವರಿಯಾಗಿತ್ತು. ಆದರೆ ಈಗ ತಮಿಳುನಾಡಿನ ಬ್ರದರ್ಗಳಿಗೆ ನೀರು ನೀಡಲಾಗಿದೆ. ಬರಗಾಲದ ಜೊತೆಗೆ ಕುಡಿಯುವ ನೀರಿನ ಸಮಸ್ಯೆಯೂ ಇದೆ. ಐದು ಗ್ಯಾರಂಟಿಯ ಜೊತೆಗೆ ನಾಮ ಹಾಕುವ ಗ್ಯಾರಂಟಿಯನ್ನೂ ನೀಡಲಾಗಿದೆ ಎಂದು ಆಕ್ರೋಶ ಹೊರಹಾಕಿದರು.
ಒಂದೊಂದು ಗ್ಯಾರಂಟಿಗೂ ಹೆಚ್ಚು ಸಮಯ ತೆಗೆದುಕೊಂಡು ಜನರಿಗೆ ಪಂಗನಾಮ ಹಾಕಲಾಗಿದೆ. ಈ ನಾಮದ ಗ್ಯಾರಂಟಿಯನ್ನು ಎಲ್ಲರಿಗೂ ತಲುಪಿಸಲು 80 ಶಾಸಕರಿಗೆ ಸಂಪುಟ ದರ್ಜೆಯ ಸ್ಥಾನಮಾನ ನೀಡಲಾಗಿದೆ. ಬರಕ್ಕೆ 100 ಕೋಟಿ ನೀಡುತ್ತೇನೆಂದು ಹೇಳಿ, ಶಾಸಕರಿಗಾಗಿ 300-400 ಕೋಟಿ ರೂ. ಖರ್ಚು ಮಾಡಲಾಗುತ್ತಿದೆ. ಮುಸ್ಲಿಮರ ಕಲ್ಯಾಣಕ್ಕೆ 1 ಸಾವಿರ ಕೋಟಿ ರೂ. ನೀಡಿ, ರೈತರಿಗೆ ಆತ್ಮಹತ್ಯೆ ಭಾಗ್ಯ ನೀಡಲಾಗಿದೆ. ಕಾಂಗ್ರೆಸ್ ಅಧಿಕಾರಕ್ಕೆ ಬಂದಾಗಲೆಲ್ಲ ಬರಗಾಲ ಬಂದಿದೆ ಎಂದರು.
ಪ್ರಧಾನಿ ನರೇಂದ್ರ ಮೋದಿ ಕಿಸಾನ್ ಸಮ್ಮಾನ್ ಮೂಲಕ 6 ಸಾವಿರ ರೂ. ನೀಡಿದರೆ ಬಿ.ಎಸ್.ಯಡಿಯೂರಪ್ಪ 4 ಸಾವಿರ ರೂ. ನೀಡಿದರು. ಮನೆ ಹಾಳು ಕಾಂಗ್ರೆಸ್ಸಿಗರು ಅದನ್ನೂ ಕಿತ್ತುಕೊಂಡರು. ಬಸವರಾಜ ಬೊಮ್ಮಾಯಿ ತಂದ ರೈತ ವಿದ್ಯಾನಿಧಿಗೆ ಬೆಂಕಿ ಹೆಚ್ಚಿದರು. ಇದು ಯಾವ ರೀತಿಯ ರೈತ ಕಾಳಜಿ? ಎಂದು ಪ್ರಶ್ನಿಸಿದರು.
ನಾಳೆ ಬಾ ಫಲಕ!
ಕೈಗಾರಿಕೆಗೆ ವಿದ್ಯುತ್ ನೀಡದೆ ಸಣ್ಣ ಉದ್ಯಮಗಳು ಸ್ಥಗಿತಗೊಳ್ಳುತ್ತಿವೆ. ರೈತರಿಗೆ ಏಳು ಗಂಟೆ ವಿದ್ಯುತ್ ಎಂದು ಹೇಳಿ ಎರಡು ಗಂಟೆಯೂ ನೀಡುತ್ತಿಲ್ಲ. ಸರ್ಕಾರದಲ್ಲೇ ವೋಲ್ಟೇಜ್ ಇಲ್ಲವಾಗಿದೆ. ಒಂಬತ್ತು ತಿಂಗಳಿಂದ ಶಾಸಕರು ಅಭಿವೃದ್ಧಿಯ ಅನುದಾನಕ್ಕಾಗಿ ಚಾತಕ ಪಕ್ಷಿಯಂತೆ ಕಾಯುತ್ತಿದ್ದಾರೆ. ಸಿಎಂ ಸಿದ್ದರಾಮಯ್ಯನವರು ʼನಾಳೆ ಬಾʼ ಎಂದು ಫಲಕ ಹಾಕಿಕೊಂಡಿದ್ದಾರೆ ಎಂದು ದೂರಿದರು.
ಸಿಎಂ ಸಿದ್ದರಾಮಯ್ಯನವರು ಎಂದೂ ಏಕವಚನ ಬಳಸಲ್ಲ. ಆದರೆ ರಾಷ್ಟ್ರಪತಿಗಳಿಗೆ ಏಕವಚನ ಬಳಸುತ್ತಾರೆ. ಯಾವಾಗಲೂ ವ್ಯಾಕರಣ, ಗಣಿತ ಪಾಠ ಮಾಡುವ ಅವರು ಎಲ್ಲರಿಗೂ ಅಗೌರವ ತೋರುತ್ತಾರೆ. ಇದೇ ಕಾಂಗ್ರೆಸ್ನ ಸಂಸ್ಕೃತಿ ಎಂದು ಹೇಳಿದರು.
ಶ್ರೀರಾಮನೇ ಭಾರತೀಯರ ಶಕ್ತಿ ಎಂದು ಅರಿತ ಬಾಬರ್ ಮಂದಿರವನ್ನು ಒಡೆದ. ಈಗಿನ ಕಾಂಗ್ರೆಸ್ ಅದಕ್ಕೆ ಪೂರಕವಾಗಿ ರಾಮನ ಜನ್ಮ ಪ್ರಮಾಣಪತ್ರ ಕೇಳುತ್ತದೆ. ಜೊತೆಗೆ ಹನುಮನ ನಾಡಿನಲ್ಲಿ ಹನುಮ ಧ್ವಜ ಹಾರಿಸಲು ಕೂಡ ಅವಕಾಶ ನೀಡುವುದಿಲ್ಲ. ದೇಶ ವಿಭಜನೆಯ ಮಾತನಾಡುವ ಇವರು ಟಿಪ್ಪು ಸಂಸ್ಕೃತಿ ಹೇರಲು ದೆಹಲಿಗೆ ಹೋಗಿದ್ದಾರೆ ಎಂದು ದೂರಿದರು.
ಹಿಂದಿನ ಬಿಜೆಪಿ ಅವಧಿಯಲ್ಲಿ ಎನ್ ಡಿಆರ್ ಎಫ್ ದರಕ್ಕಿಂತ ಅಧಿಕ ದರವನ್ನು ಪರಿಹಾರವಾಗಿ ರೈತರಿಗೆ ನೀಡಲಾಗಿತ್ತು. ಸಾಲ ಮಾಡಿ ರೈತರ ಜೊತೆ ನಿಲ್ಲೋಣ ಎಂದು ಬಿಜೆಪಿ ಯೋಚಿಸಿದರೆ, ಸಾಲ ಮಾಡಿ ಕಾರ್ಯಕರ್ತರಿಗೆ ಬಿರಿಯಾನಿ ತಿನ್ನಿಸೋಣ ಎಂದು ಕಾಂಗ್ರೆಸ್ ಆಲೋಚಿಸುತ್ತಿದೆ. ಹಿಂದಿನ ಅವಧಿಯಲ್ಲಿ ಸಿದ್ದರಾಮಯ್ಯನವರು 2013 ರಲ್ಲಿ ಪರಿಹಾರ ನೀಡಲು 9 ತಿಂಗಳು ತೆಗೆದುಕೊಂಡರು. 2014 ರಲ್ಲಿ 8 ತಿಂಗಳು ತೆಗೆದುಕೊಂಡರು. ಬಿಜೆಪಿ ಅವಧಿಯಲ್ಲಿ 2021 ರಲ್ಲಿ ಪ್ರವಾಹ ಪರಿಹಾರ ಕೇವಲ 2 ತಿಂಗಳಲ್ಲಿ ಪಾವತಿಯಾಗಿದೆ ಎಂದರು.
ಗೂಂಡಾ ಸರ್ಕಾರ
ಪ್ರತಿಭಟನೆ ವೇಳೆ ಬಂಧನಕ್ಕೊಳಗಾಗಿ ಹೈಗ್ರೌಂಡ್ಸ್ ಪೊಲೀಸ್ ಠಾಣೆ ಬಳಿ ಬಿಡುಗಡೆಯಾದ ಬಳಿಕ ಮಾತನಾಡಿದ ಆರ್.ಅಶೋಕ, ರಾಜ್ಯದಲ್ಲಿ ಗೂಂಡಾ ಸರ್ಕಾರವಿದೆ. ಎಲ್ಲರೂ ವೈಯಕ್ತಿಕ ಹಿತಾಸಕ್ತಿಗಾಗಿ ದೇಶ ವಿಭಜನೆ ಮಾಡಲು ಹೊರಟಿದ್ದಾರೆ. ಸಂಸದ ಡಿ.ಕೆ.ಸುರೇಶ್ ಹೇಳಿಕೆ ಸ್ವಾತಂತ್ರ್ಯ ಹೋರಾಟಗಾರರಿಗೆ ಅಪಮಾನ ಮಾಡಿದ್ದಾರೆ ಎಂದರು.
ಸದಾಶಿವನಗರದ ಜನರು ಹೆಚ್ಚು ತೆರಿಗೆ ಕಟ್ಟುತ್ತಾರೆ ಅಂತ ಎಲ್ಲ ಹಣವನ್ನು ಅಲ್ಲಿಗೆ ಕೊಡಬೇಕೆಂದರೆ ವಿದ್ಯಾರ್ಥಿಗಳು, ಕೊಳೆಗೇರಿಗಳ ಕಥೆ ಏನಾಗುತ್ತದೆ ಎಂದು ಚಿಂತಿಸಬೇಕು. ಮುಖ್ಯಮಂತ್ರಿಗೆ ಧಮ್ ಇದ್ದರೆ ಇತ್ತೀಚೆಗೆ ಪ್ರಧಾನಿ ಬಂದಾಗ ಅವರ ಮುಂದೆ ತೋರಿಸಬೇಕಿತ್ತು. ಆಗ ನಮಸ್ಕಾರ ಹೇಳಿಕೊಂಡು ಈಗ ಟೀಕಿಸುತ್ತಾರೆ ಎಂದರು.
ವಿದ್ಯುತ್, ನೀರು ಈಗ ಖಾಲಿಯಾಗಿದ್ದು, ಕಾಂಗ್ರೆಸ್ ಸರ್ಕಾರಕ್ಕೆ ಬೀಗ ಹಾಕಬೇಕು. ಬಿಜೆಪಿ ಅವಧಿಯಲ್ಲಿ ಎಲ್ಲವೂ ಹೆಚ್ಚುವರಿಯಾಗಿ ನೀಡಲಾಗುತ್ತಿತ್ತು. ಈಗ ಯಾರು ಕಳ್ಳರು ಎಂದು ಸಿದ್ದರಾಮಯ್ಯ ಹಾಗೂ ಡಿ.ಕೆ.ಶಿವಕುಮಾರ್ ಹೇಳಲಿ. ಎನ್ಡಿಎ ಅವಧಿಯಲ್ಲಿ ಹಾಗೂ ಯುಪಿಎ ಅವಧಿಯಲ್ಲಿ ಎಷ್ಟು ಅನುದಾನ ಬಂದಿದೆ ಎಂದು ತಿಳಿಸಲಿ ಎಂದು ಸವಾಲೆಸೆದರು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.