ಬೆಳ್ತಂಗಡಿ : ದ.ಕ. ಜಿಲ್ಲೆಯ ಜೀವನದಿ, ಪವಿತ್ರ ನೇತ್ರಾವತಿಯನ್ನು ಬರಿದು ಮಾಡಲು, ಪರಿಸರ ನಾಶ ಮಾಡಲು ಹೊರಟಿರುವ ವ್ಯಕ್ತಿಗಳಿಗೆ ನಾವು ನಂಬಿದ ದೈವ ದೇವರುಗಳು ತಕ್ಕ ಶಾಸ್ತಿ ನೀಡಲಿ ಎಂಬ ಪ್ರಾರ್ಥನೆಯನ್ನು ಅ. 2 ರಂದು ಬೆಳಿಗ್ಗೆ 7 ಗಂಟೆಗೆ ಧಮಸ್ಥಳ ನೇತ್ರಾವತಿ ನದಿಯಲ್ಲಿ ಸಲ್ಲಿಸಿ ವಾಹನ ಜಾಥಾ ಮಾಡಲಿದ್ದೇವೆ ಎಂದು ಅಖಿಲ ಭಾರತ ಕಾರ್ಮಿಕ ಸಂಘದ ವಕ್ತಾರ ಸುದತ್ತ ಜೈನ ಶಿರ್ತಾಡಿ ತಿಳಿಸಿದರು.
ಅವರು ಮಂಗಳವಾರ ಬಳ್ತಂಗಡಿ ವಾರ್ತಾಭವನದಲ್ಲಿ ಪತ್ರಿಕಾಗೋಷ್ಠಿ ನಡೆಸಿ ಯೋಜನೆ ವಿರೋಧಿಸಿ ನಡೆಸುವ ಕಾರ್ಯಕ್ರಮಗಳ ಬಗ್ಗೆ ವಿವರ ನೀಡಿದರು.ಜಿಲ್ಲೆಯ ಪ್ರತೀ ಗ್ರಾಮಸ್ಥರು ರಾಜಕೀಯ, ಜಾತಿ, ಧರ್ಮದ ಜಾಡನ್ನು ಬಿಟ್ಟು ತಮ್ಮದೇ ರೀತಿಯಲ್ಲಿ ಹೋರಾಟವನ್ನು ಕೈಗೆತ್ತಿಕೊಳ್ಳಲು ಪ್ರೇರೇಪಿಸುವ ಸಲುವಾಗಿ ವಾಹನ ಜಾಥಾವನ್ನು ಹಮ್ಮಿಕೊಳ್ಳಲಾಗಿದೆ.
ಅಂದು ನೇತ್ರಾವತಿಯಲ್ಲಿ ವಿಶೇಷ ಪೂಜೆ ಸಲ್ಲಿಸಿ ಹೂಜಿಯಲ್ಲಿ ನೀರನ್ನು ಸಂಗ್ರಹಿಸಿ ಜಾಥಾದ ಮೂಲಕ ಉಜಿರೆ, ಬೆಳ್ತಂಗಡಿ, ಗುರುವಾಯನಕೆರೆ, ಕರಾಯ, ನೇಜಿಕಾರು ಮಾರ್ಗವಾಗಿ ಉಪ್ಪಿನಂಗಡಿ ಸಹಸ್ರಲಿಂಗೇಶ್ವರ ದೇವಸ್ಥಾನದಲ್ಲಿ ಪ್ರಾರ್ಥನೆ ಸಲ್ಲಿಸಿ ಪೆರ್ನೆ, ಮಾಣಿ, ಕಲ್ಲಡ್ಕ, ಮೆಲ್ಕಾರ್, ಬಿ.ಸಿ.ರೋಡು, ಬಂಟ್ವಾಳ, ಸಿದ್ದಕಟ್ಟೆ, ಮೂಡಬಿದ್ರೆ ನಾಡಕಚೇರಿ ಎದುರು ತಲುಪಿ ಬಹಿರಂಗ ಸಭೆ ನಡೆಸಲಾಗುವುದು. ಬಳಿಕ ಮೂಡಬಿದ್ರೆ ಹನೂಮಾನ್ ದೇವಸ್ಥಾನದಲ್ಲಿ ಸೀಯಾಳ ಅಭಿಷೇಕ ನಡೆಯಲಿದೆ ಎಂದರು.
ಜಿಲ್ಲೆಯ ನೀರನ್ನು ಬರಿದು ಮಾಡುವ ಹುನ್ನಾರ ನಡೆಸಿದ ಡಿ.ವಿ.ಸದಾನಂದ ಗೌಡ ಮತ್ತು ವೀರಪ್ಪ ಮೊಯಿಲಿಯವರನ್ನು ಸಂಘ ವಿರೋಧಿಸುತ್ತದೆ. ಅದೇ ರೀತಿ ತಮಗೆ ಬೇಕಾದ ಹಾಗೆ ನಿರ್ಧಾರ ಮಾಡುವ ರಾಜ್ಯ ಸರಕಾರದ ಕ್ರಮ ಖಂಡನೀಯ. ಈ ಭಾಗದ ಜನತೆಗೆ ಎತ್ತಿನ ಹೊಳೆ ಯೋಜನೆಯ ಬಗ್ಗೆ ಮನವರಿಕೆ ಮಾಡುವಲ್ಲಿ ಕರ್ನಾಟಕ ಸರಕಾರ ವಿಫಲವಾಗಿದೆ ಎಂದು ಮೂದಲಿಸಿರುವ ಡಿ.ವಿ.ಯವರು ಇಲ್ಲಿ ಬಂದು ಎತ್ತಿನ ಹೊಳೆ ಯೋಜನೆಯ ಬಗ್ಗೆ ಮನವರಿಕೆ ಮಾಡಬಹುದಿಲ್ಲವೇ ಎಂದು ಪ್ರಶ್ನಿಸಿದ ಅವರು ಒಬ್ಬರ ಮೇಲೊಬ್ಬರು ಬೆರಳು ತೋರಿಸಿ ರಾಜಕೀಯ ಮಾಡಿ ಎತ್ತಿನಹೊಳೆ ಎಂಬ ಸಂತಾನ ಪ್ರಾಪ್ತಿಯಾಗಿದೆ. ಅದಕ್ಕೆ ಅಪ್ಪ ಯಾರೆಂಬುದನ್ನು ಒಪ್ಪಿಕೊಳ್ಳಲು ಯಾರೂ ತಯಾರಿಲ್ಲ. ಈ ನಿಟ್ಟಿನಲ್ಲಿ ರಾಜ್ಯ ಮತ್ತು ಕೇಂದ್ರ ಸರಕಾರ ತಮಗೆ ಬೇಕಾದ ಹಾಗೆ ನಿರ್ಧಾರ ಕೈಗೊಳ್ಳುವುದಾದರೆ ಸಂಘವು ಕೂಡ ಮುಂದಿನ ದಿನದಲ್ಲಿ ತುಳುನಾಡು ರಾಜ್ಯದ ನಿರ್ಮಾಣಕ್ಕೆ ಆಗ್ರಹ ಮಾಡುತ್ತದೆ ಎಂದು ಎಚ್ಚರಿಸಿದರು.
ಎತ್ತಿನ ಹೊಳೆ ಯೋಜನೆಗೆ ಸಾವಿರಾರು ಕೋಟಿ ಹಣ ವ್ಯಯ ಮಾಡುವ ಬದಲು, ಗ್ರಾ.ಪಂ.ಮತ್ತು ಸಮಾಜದ ಅಭಿವೃದ್ಧಿಗೆ ಬಳಸಬಹುದಾಗಿತ್ತು. ಜನಪ್ರತಿನಿಧಿಗಳು ಯೋಜನೆಯನ್ನು ವಿರೋಧಿಸಲು ವಿಫಲರಾಗಿದ್ದಾರೆ. ಸೆ. ೭ರ ಬೆಳ್ತಂಗಡಿ ತಾಲೂಕು ಬಂದ್ಗೆ ಸಂಘದ ಸಂಪೂರ್ಣ ಬೆಂಬಲವಿದೆ ಎಂದ ಅವರು, ಯೋಜನೆಯ ಬಗ್ಗೆ ಬೆಳ್ತಂಗಡಿ ಕಾರ್ಮಿಕ ನಾಯಕರು ನೀಡಿದ ಹೇಳಿಕೆ ಖಂಡನೀಯ. ಇಲ್ಲಿ ಸೆಕ್ಯುರಿಟಿ ಮೊದಲಾದ ಕೆಲಸಗಳಿಗೆ ವೇತನ ಭದ್ರತೆ, ಉದ್ಯೋಗ ಭದ್ರತೆ ಇಲ್ಲ. ಈ ಬಗ್ಗೆ ಕಾರ್ಮಿಕ ಇಲಾಖೆ ನುಣುಚಿಕೊಂಡಿದೆ ಎಂದ ಅವರು ಸಂಘದ ಘಟಕವನ್ನು ಬೆಳ್ತಂಗಡಿಯಲ್ಲಿ ಆರಂಭಿಸಿದ್ದೇವೆ ಎಂದರು.
ಸಂಘದ ಅಧ್ಯಕ್ಷ ಹರೀಶ್ ಕುಮಾರ್ ಶೆಟ್ಟಿ ಮಾತನಾಡಿ, ಈ ಬಾರಿ ಮಳೆ ಕಡಿಮೆಯಾಗಿದ್ದು ಬರಗಾಲದ ಭೀತಿಯನ್ನು ಜಿಲ್ಲೆ ಎದುರಿಸುತ್ತಿದೆ. ಸರಕಾರ ಕೈಗಾರಿಕೆಗಳಿಗೆ ನೀರು ಕೊಡುವ ಮೊದಲು ಜನರಿಗೆ ಕುಡಿಯುವ ನೀರಿಗೆ ಆದ್ಯತೆ ನೀಡಬೇಕು. ಸರಕಾರ ಎತ್ತಿನ ಹೊಳೆ ಯೋಜನೆಯನ್ನು ನಿಲ್ಲಿಸದಿದ್ದಲ್ಲಿ ಮುಂದಿನ ದಿನಗಳಲ್ಲಿ ಎಂ.ಆರ್.ಪಿ.ಎಲ್.ನ ನೀರಿನ ಘಟಕೆಕ್ಕೆ ಮುತ್ತಿಗೆ ಹಾಕಬೇಕಾದೀತು. ಈ ಯೋಜನೆಗೆ ಪರಿಸರ ಇಲಾಖೆ ಅನುಮತಿ ನೀಡಿಲ್ಲ. ಸಾಮಾನ್ಯರಿಗೆ ಮಾತ್ರ ಕಾನೂನು ಅನ್ವಯಿಸುತ್ತದೆ. ಸರಕಾರಕ್ಕೆ ಮಾತ್ರ ಅನ್ವಯಿಸುವುದಿಲ್ಲ ಎಂದರು.
ಗೋಷ್ಠಿಯಲ್ಲಿ ಬೆಳ್ತಂಗಡಿ ಘಟಕದ ಅಧ್ಯಕ್ಷ ದಿನೇಶ್ ರೈ ನೇಜಿಕಾರು, ಉಪಾಧ್ಯಕ್ಷ ದಿನೇಶ್ ಎಸ್.ಉಪ್ಪಿನಂಗಡಿ, ಪ್ರ.ಕಾರ್ಯದರ್ಶಿ ಗಣೇಶ್ ಕರಾಯ, ಶಿರ್ತಾಡಿ ವಲಯ ಅಧ್ಯಕ್ಷ ಮಹೇಂದ್ರ ಮಾಯಿಲೋಡಿ, ಪಡುಕೋಣಾಜೆ ಅಧ್ಯಕ್ಷ ಚಂದ್ರಶೇಖರ ಉಪಸ್ಥಿತರಿದ್ದರು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.