ಬೆಂಗಳೂರು: ಇವತ್ತು ಎಐಸಿಸಿ ಪ್ರಧಾನ ಕಾರ್ಯದರ್ಶಿ ಸುರ್ಜೇವಾಲ ಅವರು ಮತ್ತೆ ಬೆಂಗಳೂರಿಗೆ ಬಂದಿದ್ದಾರೆ. ಮೊದಲನೇ ಕಂತು ಬಂತು; 2ನೇ ಕಂತು ಬಂತು. 3ನೇ ಕಂತು ಬೇಕು. 3ನೇ ಕಂತಿನಲ್ಲಿ ಚೌಕಾಸಿ ಆಗಬಾರದೆಂದು 3ನೇ ಕಂತಿಗೋಸ್ಕರ ಮತ್ತೆ ಬೆಂಗಳೂರಿಗೆ ಬಂದಂತಿದೆ ಎಂದು ಮಾಜಿ ಸಚಿವ ಮತ್ತು ಬಿಜೆಪಿ ನಿಕಟಪೂರ್ವ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ಅವರು ಆರೋಪಿಸಿದರು.
ಮಲ್ಲೇಶ್ವರದ ಬಿಜೆಪಿ ರಾಜ್ಯ ಕಾರ್ಯಾಲಯ “ಜಗನ್ನಾಥ ಭವನ”ದಲ್ಲಿ ಇಂದು ಮಾಧ್ಯಮ ಪ್ರತಿನಿಧಿಗಳ ಜೊತೆ ಮಾತನಾಡಿದ ಅವರು, ಕಾಂಗ್ರೆಸ್ ಯಾವಾಗಲೂ ಚುನಾವಣೆ ನಡೆಸುವುದೇ ಕಡೇ 3 ದಿನಗಳಲ್ಲಿ ಎಂದು ಟೀಕಿಸಿದರು. ತೆಲಂಗಾಣ ಚುನಾವಣಾ ಉಸ್ತುವಾರಿಯನ್ನು ಕರ್ನಾಟಕದ ಉಪ ಮುಖ್ಯಮಂತ್ರಿಗೇ ನೀಡಿದ್ದಾರೆ. ಹಾಗಾಗಿ 3ನೇ ಕಂತಿಗಾಗಿ ಬಂದಂತಿದೆ ಎಂದು ತಿಳಿಸಿದರು.
ಕರ್ನಾಟಕ ಇನ್ನೆಷ್ಟು ಕಂತು ಕೊಡಬೇಕೋ? ಎಂದು ಕೇಳಿದ ಅವರು, ಕರ್ನಾಟಕವನ್ನು ಕಾಂಗ್ರೆಸ್ ಎಟಿಎಂ ಮಾಡುವ ಬಗ್ಗೆ ನಾವು ಮುಂಚೆಯೇ ತಿಳಿಸಿದ್ದೆವು. ಕಾಂಗ್ರೆಸ್ ಗೆಲ್ಲಿಸಬೇಡಿ ಎಂದು ಜನರಿಗೆ ಮನವಿ ಮಾಡಿದ್ದೆವು. ಆದರೆ, ಅದನ್ನು ಮನವರಿಕೆ ಮಾಡಿಕೊಡಲಾಗಲಿಲ್ಲ. ಗ್ಯಾರಂಟಿ ಆಸೆಗೋ, ಇನ್ಯಾವುದೋ ಕಾರಣಕ್ಕೋ ಕಾಂಗ್ರೆಸ್ಸನ್ನು ಗೆಲ್ಲಿಸಿದ್ದಾರೆ ಎಂದು ವಿಶ್ಲೇಷಿಸಿದರು.
ಈಗ ಕರ್ನಾಟಕವನ್ನು ಎಟಿಎಂ ಮಾಡಿಕೊಂಡಿದ್ದಾರೆ. ಐಟಿ ದಾಳಿ ವೇಳೆ ಇಲ್ಲಿ ಸಿಕ್ಕಿದ್ದ 102 ಕೋಟಿಯೂ ಕಾಂಗ್ರೆಸ್ಸಿಗಾಗಿ ಸಂಗ್ರಹಿಸಿದ ಹಣ. ಚುನಾವಣೆ ಆಯೋಗ, ಐಟಿ, ಇ.ಡಿ,ಗಳು ಸುರ್ಜೇವಾಲಾ ಮೇಲೆ ಹದ್ದಿನ ಕಣ್ಣಿಡಬೇಕು ಎಂದು ಸಿ.ಟಿ.ರವಿ ಅವರು ಆಗ್ರಹಿಸಿದರು. ಇವತ್ತೇ ಹಣ ಹೋಗುವ ಸಾಧ್ಯತೆ ಇದೆ ಎಂದು ನುಡಿದರು.
ನಾನು ಕೆಂಪಣ್ಣ ಅವರ ಹೇಳಿಕೆಯನ್ನು ಗಮನಿಸಿಲ್ಲ. ಗುತ್ತಿಗೆದಾರ ಅಂಬಿಕಾಪತಿ ಅವರ ಸಾವು ದುರದೃಷ್ಟಕರ. ಅವರ ಕುಟುಂಬಕ್ಕೆ ಸಾಂತ್ವನ ಹೇಳಲು ಬಯಸುತ್ತೇನೆ. ಅವರಿಗೆ ಶ್ರದ್ಧಾಂಜಲಿ ಸಲ್ಲಿಸುತ್ತೇನೆ ಎಂದು ಈ ಸಂಬಂಧ ಮಾಧ್ಯಮ ಪ್ರತಿನಿಧಿಗಳ ಪ್ರಶ್ನೆಗೆ ಉತ್ತರ ಕೊಟ್ಟರು. ಹೆಸರು ಮುಚ್ಚಿಡುವ ಒತ್ತಡ ಬಂತೋ? ಯಾವ ಒತ್ತಡದಲ್ಲಿ ಅವರಿಗೆ ಹೃದಯಾಘಾತ ಆಗಿದೆ ಎಂದು ಗೊತ್ತಿಲ್ಲ ಎಂದು ತಿಳಿಸಿದರು. ಇವರಿಗೆ ಸತ್ಯ ಹೇಳುವಂತಿಲ್ಲ; ಅವರ ಸಾವು ದುರದೃಷ್ಟಕರ ಎಂದು ತಿಳಿಸಿದರು.
ಸುದೀರ್ಘ ಅವಧಿಯ ಕಾಲ ಆಡಳಿತ ನಡೆಸಿದ ಪಕ್ಷ ತನ್ನ ಸಾಧನೆ, ದೂರದೃಷ್ಟಿಯ ಯೋಜನೆಗಳನ್ನು ಜನರ ಮುಂದಿಡುತ್ತದೆ. ಕಾಂಗ್ರೆಸ್ ಬಳಿ ಮಾಡಿದ ಸಾಧನೆ, ದೂರದೃಷ್ಟಿಯ ಯೋಜನೆಗಳಿಲ್ಲ. ಉದ್ಯೋಗ ಸೃಷ್ಟಿಯ ಯೋಜನೆಗಳಿಲ್ಲ. ತಾತ್ಕಾಲಿಕ ಆಸೆ ತೋರಿಸುವ ರಾಜಕಾರಣ ಅವರದು ಎಂದು ಟೀಕಿಸಿದರು. ಕರ್ನಾಟಕದಲ್ಲಿ ಅವರು ಮಾಡಿದ್ದು ಕೂಡ ತಾತ್ಕಾಲಿಕ ಆಸೆ ತೋರಿಸುವ ರಾಜಕಾರಣ. ಅದರ ಬಳಿಕವೂ ಅವರು ಹೇಳಿದಂತೆ ನಡೆದುಕೊಂಡಿಲ್ಲ ಎಂದು ಆಕ್ಷೇಪಿಸಿದರು.
ಕರ್ನಾಟಕದಲ್ಲಿ ಕಾಂಗ್ರೆಸ್ ಜಾರಿ ಮಾಡಿದ ಹೊಸ ಯೋಜನೆಗಳೇನು? ಬಾಕಿ ಹಣ ಎಷ್ಟು ಪಾವತಿ ಮಾಡಿದ್ದೀರಿ? ಎಷ್ಟು ಉದ್ಯೋಗಗಳ ಸೃಷ್ಟಿ ಆಗಿದೆ?- ಇವರ ಆರು ತಿಂಗಳ ಸಾಧನೆಯನ್ನು ತಿಳಿಸಲಿ. ಇಷ್ಟು ಉದ್ಯೋಗ ಸೃಷ್ಟಿ ಮಾಡಿದ್ದೇವೆ, ಇಂಥಿಂಥ ಹೊಸ ಯೋಜನೆ ಕೈಗೆತ್ತಿಕೊಳ್ಳುತ್ತಿದ್ದೇವೆ. ಊರಿಗೊಂದು ಬಾರ್ ಮೂಲಕ ಆದಾಯ ಹೆಚ್ಚಿಸುವ ನಿಮ್ಮ ಕಲ್ಯಾಣದ ಕಲ್ಪನೆ “ಊರಿಗೊಂದು ಬಾರ್?” ಎಂಬುದೇ ಎಂದು ಕೇಳಿದರು.
ಎಲ್ಲ ನಿರುದ್ಯೋಗಿಗಳಿಗೆ 3 ಸಾವಿರ ಎಂದರು. ಬಳಿಕ ಈ ವರ್ಷ ಪದವಿ ಮುಗಿಸಿದ ನಿರುದ್ಯೋಗಿಗಳಿಗೆ ಭತ್ಯೆ ಎಂದರು. ಅವರಿಗೂ ಬಂದಿಲ್ಲ. ಎಲ್ಲ ಮಹಿಳೆಯರಿಗೂ 2 ಸಾವಿರ ಎಂದಿದ್ದರು. ‘ಶೋಭಾ ಕರಂದ್ಲಾಜೆ ನಿಮಗೂ ಫ್ರೀ’ ಎಂದಿದ್ದರು. ಅದೂ ಸರಿಯಾಗಿ ಜಾರಿ ಆಗಿಲ್ಲ. 200 ಯೂನಿಟ್ ಎಲ್ಲರಿಗೂ ಫ್ರೀ ಎಂದಿದ್ದರು. ಅಲ್ಲೂ ಕೂಡ ಹೇಳಿದ್ದೊಂದು ಮಾಡಿದ್ದೊಂದು ಎಂದು ಆರೋಪಿಸಿದರು.
ಈ ಮಾದರಿ ಎಷ್ಟು ಕಾಲ ನಡೆದೀತು? ಕಣ್ಣ ಮುಂದೆ ವೆನಿಜುವೆಲಾ ಉದಾಹರಣೆ ಇದೆಯಲ್ಲವೇ? ಸ್ವಾತಂತ್ರ್ಯ ನಂತರದ 75 ವರ್ಷಗಳಲ್ಲಿ ಹೆಚ್ಚು ವರ್ಷಗಳ ಕಾಲ ಅಧಿಕಾರ ಅಥವಾ ಅಧಿಕಾರದ ಪ್ರಭಾವಲಯದಲ್ಲಿದ್ದ ಕಾಂಗ್ರೆಸ್ ಪಕ್ಷದ ಸಾಧನೆ ಏನು? ಎಂದು ಕೇಳಿದರು. ನಾವು ಐಐಎಂ, ಐಐಟಿಗಳನ್ನು ದ್ವಿಗುಣಗೊಳಿಸಿದ್ದೇವೆ. ವಿಮಾನನಿಲ್ದಾಣಗಳ ಸಂಖ್ಯೆ ಡಬಲ್ ಮಾಡಿದ್ದೇವೆ. ನೀವೇನು ಹೇಳುತ್ತೀರಿ ಎಂದು ಪ್ರಶ್ನೆ ಮಾಡಿದರು.
ವಿದ್ಯುತ್ ದರ ಬಹುತೇಕ ಡಬಲ್ ಆಗಿದೆ. ಮದ್ಯದ ಬೆಲೆ 50 ರೂಪಾಯಿಯಿಂದ 100-150ಕ್ಕೆ ಏರಿದೆ. ಜನರನ್ನು ಸ್ವಾವಲಂಬಿ ಮಾಡಿದ್ದೀರಾ? ಉದ್ಯೋಗ ಸೃಷ್ಟಿಗೆ ಇಂಥ ಯೋಜನೆ ಮಾಡಿದ್ದೀರಾ ಎಂದು ಕೇಳಿದರು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.