
ಬೆಂಗಳೂರು: ಅಕ್ಷರ ಸಂತ ಪದ್ಮಶ್ರೀ ಪುರಸ್ಕೃತ ಹರೇಕಳ ಹಾಜಬ್ಬ ಅವರಿಗೆ ರಾಷ್ಟ್ರವ್ಯಾಪಿಯಾಗಿ ಗೌರವಗಳು ಸಿಗುತ್ತಿವೆ. ಕಿತ್ತಳೆ ಮಾರಿ ಶಾಲೆ ನಿರ್ಮಿಸಿದ ಅವರ ಕಾರ್ಯಕ್ಕೆ ಎಷ್ಟೇ ಗೌರವಗಳು ನೀಡಿದರೂ ಕಡಿಮೆಯೇ. ಏರ್ ಇಂಡಿಯಾದಲ್ಲಿ ಪ್ರಯಾಣಿಸಿದ ಸಂದರ್ಭದಲ್ಲಿ ಅವರಿಗೆ ದೊರೆತ ಗೌರವ ನಿಜಕ್ಕೂ ಸ್ಮರಣೀಯವಾಗಿದೆ.
ಹಿದಾಯ ಫೌಂಡೇಶನ್ ಜುಬೈಲ್ ಘಟಕದ ವತಿಯಿಂದ ನಡೆಯಲಿರುವ ಕಾರ್ಯಕ್ರಮದಲ್ಲಿ ಭಾಗವಹಿಸಲು ಮಂಗಳೂರಿನಿಂದ ದಮ್ಮಾಮ್ಗೆ ಏರ್ ಇಂಡಿಯ ಎಕ್ಸ್ಪ್ರೆಸ್ ವಿಮಾನದಲ್ಲಿ ಹೊರಟಿದ್ದ ಹಾಜಬ್ಬರನ್ನು ವಿಮಾನದ ಸಿಬ್ಬಂದಿ ವಿಮಾನದೊಳಗೆ ಅಭಿನಂದಿಸಿ ಗೌರವಿಸಿದೆ.
ಹಾಜಬ್ಬ ಏರ್ ಇಂಡಿಯ ಎಕ್ಸ್ ಪ್ರೆಸ್ ವಿಮಾನದಲ್ಲಿ ಪ್ರಯಾಣಿಸುತ್ತಿರುವುದನ್ನು ಗುರುತಿಸಿದ ಅದರಲ್ಲಿನ ಸಿಬ್ಬಂದಿ ವಿಮಾನದ ಕ್ಯಾಪ್ಟನ್ ಅವರ ಗಮನಕ್ಕೆ ತಂದರು. ಬಳಿಕ ಅವರನ್ನು “ಶಿಕ್ಷಣ ರಂಗದಲ್ಲಿ ಅಪೂರ್ವ ಸೇವೆ ಸಲ್ಲಿಸಿ ಪದ್ಮಶ್ರೀ ಪ್ರಶಸ್ತಿ ಪುರಸ್ಕೃತ ಹರೇಕಳ ಹಾಜಬ್ಬ ನಮ್ಮ ವಿಮಾನದಲ್ಲಿ ಪ್ರಯಾಣಿಸುತ್ತಿರುವುದು ನಮಗೆಲ್ಲ ತುಂಬಾ ಸಂತೋಷ ತಂದಿದೆ. ಅವರಿಗೆ ಹೃದಯ ತುಂಬಿದ ಅಭಿನಂದನೆಗಳು” ಎಂದು ಅಭಿನಂದಿಸಲಾಗಿದೆ.
ಪದ್ಮಶ್ರೀ, ರಾಜ್ಯೋತ್ಸವ ಪ್ರಶಸ್ತಿ ಸೇರಿ ಅನೇಕ ಪ್ರಶಸ್ತಿಗಳನ್ನು ಪಡೆದಿರುವ ಹಾಜಬ್ಬ ಇಂದು ಭಾರೀ ಜನಪ್ರಿಯತೆಯನ್ನು ಪಡೆದುಕೊಂಡಿದ್ದಾರೆ. ಆದರೂ ಅವರು ಇಂದಿಗೂ ಕಿತ್ತಳೆ ಹಣ್ಣು ಮಾರುತ್ತಾರೆ. ಹಳೆಯದೊಂದು ಪಂಚೆ ಸುತ್ತಿಕೊಂಡು, ಕಿತ್ತಳೆ ಹಣ್ಣುಗಳನ್ನು ಮಾರುತ್ತಾ ಮಂಗಳೂರಿನ ರಸ್ತೆಗಳಲ್ಲಿ ಓಡಾಡುತ್ತಾರೆ. ಅವರ ಸರಳತೆಗೆ ಅವರೇ ಸಾಟಿ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.


