ಅಯೋಧ್ಯೆಯ ರಾಮಮಂದಿರ ದೇಶದ ಸಂಸ್ಕೃತಿ, ನಂಬಿಕೆ, ಪರಂಪರೆಯ ಐತಿಹಾಸಿಕ ಸಂಕೇತ. ಶತಮಾನದ ಧಾರ್ಮಿಕ ದಾಸ್ಯದಿಂದ ಮೇಲೆದ್ದು ವಿಶ್ವಕ್ಕೆ ತನ್ನನ್ನು, ತನ್ನ ಇರುವಿಕೆಯನ್ನು ಮಗದೊಮ್ಮೆ ಪರಿಚಯಿಸುತ್ತಿರುವ ಸಂಸ್ಕೃತಿ, ಧಾರ್ಮಿಕತೆಯ ಪ್ರತೀಕವಾದ್ದರಿಂದ ರಾಮಮಂದಿರವು ರಾಷ್ಟ್ರಮಂದಿರ ಎಂದೂ ಕರೆಸಿಕೊಳ್ಳುತ್ತದೆ. ಭಗವಾನ್ ಶ್ರೀರಾಮನು ಪುರುಷೋತ್ತಮನಾಗಿ, ಕ್ಷಾತ್ರತೇಜನಾಗಿ, ರಾಘವನಾಗಿ, ಕೋದಂಡಪಾಣಿಯಾಗಿ ಕರ್ತವ್ಯ ನಿಷ್ಠೆ ಮತ್ತು ಧರ್ಮನಿಷ್ಠೆ ಏನು ಎಂಬುದನ್ನು ಲೋಕಕ್ಕೆ ಪರಿಚಯಿಸಿದ ವ್ಯಕ್ತಿತ್ವ ಮತ್ತು ದೈವಿಕತೆಯ ಗಣಿ. ಲೌಕಿಕ ಜೀವನದಲ್ಲಿ ಎಷ್ಟೇ ಕಷ್ಟಗಳು ಬಂದರೂ ಅದನ್ನು ಮೆಟ್ಟಿ ನಿಂತು ಎದುರಿಸಿ ಗೆಲುವನ್ನು ತನ್ನದಾಗಿಸುವುದು ಮುಖ್ಯ ಎಂಬುದಕ್ಕೆ ಸೂಕ್ತ ಪಾಠ ಶ್ರೀರಾಮನ ಜೀವನಾದರ್ಶದಲ್ಲಿದೆ. ಶ್ರೀರಾಮ, ಶ್ರೀಕೃಷ್ಣರದು ವಿಷ್ಣುವಿನ ಅವತಾರವಾದರೂ ಇಬ್ಬರ ಜೀವಾನದರ್ಶಗಳು ಕೊಂಚ ಭಿನ್ನವಾಗಿವೆ. ಶ್ರೀಕೃಷ್ಣನು ಬಾಲ್ಯದ ಲೀಲೆಗಳಿಗೆ ಹೆಸರುವಾಸಿಯಾಗಿ, ತಾರುಣ್ಯ ನಂತರದ ಪ್ರಬುದ್ಧತೆಯ ಪ್ರತೀಕವೆನಿಸಿದರೆ. ಶ್ರೀರಾಮಚಂದ್ರನ ಬದುಕು ಹೆಚ್ಚಾಗಿ ತಾರುಣ್ಯದ ನಂತರದಲ್ಲಿ ಓರ್ವ ಗೃಹಸ್ಥ, ಓರ್ವ ಕ್ಷಾತ್ರ ಹೇಗಿರಬೇಕು ಎಂಬ ಆದರ್ಶವನ್ನು ಪ್ರತಿಬಿಂಬಿಸುತ್ತದೆ. ಶ್ರೀಕೃಷ್ಣನು ಅಂತಿಮವಾಗಿ ಕ್ಷಾತ್ರನಿಗೆ ಧರ್ಮಬೋಧೆಯನ್ನೇ ಮಾಡಿದರೆ, ಶ್ರೀರಾಮನು ಸ್ವಯಂ ಕ್ಷಾತ್ರನಾಗಿ ಧರ್ಮದ ರಕ್ಷಣೆ ಮಾಡಿದ್ದ ಎಂಬುದು ಉಲ್ಲೇಖನೀಯ ಅಂಶ. ಮರ್ಯಾದಾ ಪುರುಷೋತ್ತಮ, ಸೀತಾಪತೆ, ಸೀತಾರಾಮ ಹೀಗೆ ಮೊದಲಾದ ಹೆಸರುಗಳಿಂದ ಕರೆಯಲ್ಪಡುವ ಶ್ರೀರಾಮ ಸಾಮಾಜಿಕ ಸಮನ್ವಯತೆ, ಕೌಟುಂಬಿಕ ಮತ್ತು ಲೌಕಿಕ ಚೌಕಟ್ಟುಗಳ ಜೊತೆಯಲ್ಲಿ ಓರ್ವ ಕ್ಷಾತ್ರ ರಾಜಕುಮಾರನ ಜೀವನ ದರ್ಶನವು ಕರ್ತವ್ಯ, ಕಷ್ಟಗಳನ್ನು ಮೆಟ್ಟಿನಿಂತು ಜಯಿಸುವ ಮನೋಬಲವನ್ನು ಎತ್ತಿ ತೋರಿಸುತ್ತದೆ.
ವರ್ತಮಾನದ ಜಗತ್ತು ತನ್ನದೆ ಆದ ವೇಗದಲ್ಲಿ ಚಲಿಸುತ್ತಿರುವಾಗ, ಆಧುನಿಕತೆಯ ಹೊಸ್ತಿಲಲ್ಲಿರುವ ಯುವ ಶಕ್ತಿ ಧಾರ್ಮಿಕತೆ, ಸಂಸ್ಕೃತಿಯಿಂದ ವಿಮುಖರಾಗುತ್ತಿದ್ದಾರೆ? ಎನ್ನುವಂತಹ ಕಾಲಘಟ್ಟದಲ್ಲಿ ಎಲ್ಲರಿಗೂ ಪುನಃ ಧಾರ್ಮಿಕ ಶೋಧೆಯ, ಆತ್ಮಬೋಧೆಯ ಸಮಯವು ರಾಮಮಂದಿರದ ಪುನರುತ್ಥಾನ ಮತ್ತು ಪುನರ್ನಿಮಾಣದ ಮೂಲಕ ಒದಗಿ ಬಂದಿದೆ. ಅಯೋಧ್ಯೆಯಲ್ಲಿ ನಿರ್ಮಾಣವಾಗುತ್ತಿರುವ ರಾಮಮಂದಿರ 2024 ಜನವರಿಯಲ್ಲಿ ಶ್ರೀರಾಮನ ಮೂರ್ತಿ ಪ್ರತಿಷ್ಠೆಯೊಂದಿಗೆ ಲೋಕಾರ್ಪಣೆಯಾಗಲಿದೆ. ಈ ಮೂಲಕ ಲೌಕಿಕಾಧಿಪತಿ ಶ್ರೀರಾಮನು ವಿಶ್ವ ಕಲ್ಯಾಣಕ್ಕಾಗಿ ಭಕ್ತರ ಮುಂದೆ, ತನ್ನ ಪ್ರಜೆಗಳ ಮುಂದೆ, ತಾನು ಜನಿಸಿದ ನಾಡಿನಲ್ಲಿ ಪುನಃ ಅವತರಿಸುತ್ತಿದ್ದಾನೆ ಎಂಬಂತೆ ಭಾಸವಾಗುತ್ತದೆ. ಅಯೋಧ್ಯೆಯ 600 ವರ್ಷಗಳ ಇತಿಹಾಸದ ಬಗ್ಗೆ ಸಾಕಷ್ಟು ಮಂದಿಗೆ ಅರಿವಿದೆ. ಅದಕ್ಕೂ ಹಿಂದೆ ಈ ಪ್ರಾಂತ್ಯ ಹೇಗಿದ್ದಿರಬಹುದು ಎಂಬುದಕ್ಕೆ ಇತಿಹಾಸದ ಪುಟಗಳು ತಕ್ಕ ಮಟ್ಟಿನ ಉತ್ತರ ನೀಡುತ್ತವೆ. ಪುರಾಣೇತಿಹಾಸವು ಈ ಪ್ರಾಂತ್ಯದ ಬಗ್ಗೆ ಹಲವು ಕುತೂಹಲಭರಿತ ಕಥೆಗಳನ್ನು ಹೆಣೆದಿದೆ. ಅಯೋಧ್ಯೆ ಎಂದರೆ ಸೋಲಿಲ್ಲದ ನಗರಿ ಎಂಬ ಅರ್ಥವೂ ಇದೆ. ಅಂದು ಹರಿಯುತ್ತಿದ್ದ ಸರಯೂ ನದಿ ಇಂದಿಗೂ ಇದೇ ಪ್ರದೇಶದಲ್ಲಿ ಹರಿಯುತ್ತಿದೆ. ಸಹಸ್ರ ವರ್ಷಗಳಿಂದ ಜನಸಾಮಾನ್ಯರು ನಂಬಿರುವ ಅನೇಕಾನೇಕ ಪುಣ್ಯ ಕ್ಷೇತ್ರಗಳು ಅಯೋಧ್ಯೆಯ ಮಡಿಲಲ್ಲಿವೆ. ಇಂತಹ ಗತ ಇತಿಹಾಸವು ದೇಶದ, ಒಂದು ನಿರ್ದಿಷ್ಟ ಪ್ರದೇಶದ ಹಿರಿಮೆ, ಗರಿಮೆಯನ್ನು ಎತ್ತಿ ಹಿಡಿಯುತ್ತದೆ. ರಾಮಾಯಣಕ್ಕೆ ಸಂಬಂಧಿಸಿದ ಐತಿಹಾಸಿಕ ಮತ್ತು ಪೌರಾಣಿಕ ನಂಬಿಕೆಗಳು ಇಂದಿಗೂ ಜನಮಾನಸದಲ್ಲಿ ಜೀವಂತವಾಗಿವೆ. ಅಯೋಧ್ಯೆ, ನಾಸಿಕ, ಬದರಿ, ಕಿಷ್ಕಿಂದಾ, ರಾಮೇಶ್ವರ, ಸೀತಾವಾಟಿಕಾ, ಅಶೋಕವಾಟಿಕಾ ಹೀಗೆ ಹತ್ತು ಹಲವು ಪ್ರದೇಶಗಳಲ್ಲಿ ರಾಮನ ನಂಬಿಕೆಗಳು ಆತನು ಕೈಗೊಂಡ ರಾಮಯಾನದ ಕಥಾನಕಗಳಿಗೆ ಜೀವಂತ ಸಾಕ್ಷಿ ಎನ್ನುವಂತೆ ಜನರ ನಂಬಿಕೆಗಳೊಂದಿಗೆ ಹಾಸುಹೊಕ್ಕಾಗಿವೆ.
ಪ್ರಾಚೀನ ಸಾಕೇತ ಎಂದರೆ ಈಗಿನ ಆಯೋಧ್ಯೆಯು ಶ್ರಮಣ, ರಮಣ, ಮತ್ತು ಜಿಣ ಧಾರೆಗಳನ್ನು ಪೋಷಿಸಿ ಬೆಳೆಸಿದ ನೆಲ. ಹಿಂದೂ ವೈಷ್ಣವ, ಜೈನ ಮತ್ತು ಬೌದ್ಧಕ್ಕೆ ಆಶ್ರಯ ನೀಡಿದ ತಾಣವೂ ಇದೇ ಅಯೋಧ್ಯೆ. ಮರ್ಯಾದ ಪುರುಷೋತ್ತಮನ ರಾಜಧಾನಿಯೂ ಇದೇ ಅಯೋಧ್ಯೆ. ತಥಾಗತ ಎನಿಸಿಕೊಂಡ ಬುದ್ಧನ ವಂಶಾವಳಿಯೂ ರಾಮನ ವಂಶವೂ ಒಂದೇ ಅದು ಇಶ್ವಾಕು. ಇಲ್ಲಿ ನಿರ್ಮಾಣವಾಗುತ್ತಿರುವುದು ಕೇವಲ ರಾಮಮಂದಿರವಲ್ಲ ಇದೊಂದು ರಾಷ್ಟ್ರಮಂದಿರ – ಧಾರ್ಮಿಕ ಸಮ್ಮಿಳತೆಯ, ಸಹೋದರತ್ವದ ಸಂಕೇತವಾಗಿರಲಿದೆ. ಶ್ರೀರಾಮಚಂದ್ರ ಜನಿಸಿದ ಇದೇ ಅಯೋಧ್ಯೆಯಲ್ಲಿ ಆದಿನಾಥ ಸೇರಿದಂತೆ ಐದು ಮಂದಿ ಜೈನ ತೀರ್ಥಂಕರರು ಜನಿಸಿದ್ದರು ಎಂಬ ವಿಚಾರಗಳು ಅಯೋಧ್ಯೆಯ ಮಹತ್ವವನ್ನು ಮತ್ತಷ್ಟೂ ಹೆಚ್ಚಿಸುತ್ತದೆ. ಮೊತ್ತಮೊದಲ ತೀರ್ಥಂಕರ ಋಷಭದೇವ, ಎರಡನೇ ತೀರ್ಥಂಕರ ಅಜಿತನಾಥ, ನಾಲ್ಕನೇಯ ಅಭಿನಂದನನಾಥ, ಐದನೇ ಸುಮತಿನಾಥ, 14 ನೇ ತೀರ್ಥಂಕರ ಅನಂತನಾಥರು ಇದೇ ಅಯೋಧ್ಯೆಯಲ್ಲಿ ಜನಿಸಿ ಜಿನ ಧರ್ಮ ತತ್ವಗಳನ್ನು ಪ್ರಚುರಪಡಿಸಿದ್ದರು ಎನ್ನುತ್ತದೆ ಚರಿತ್ರೆ. ಇದೇ ರೀತಿಯಲ್ಲಿ 22 ಮತ್ತು 24 ನೇ ತೀರ್ಥಂಕರರು ಕೂಡಾ ಇಶ್ವಾಕು ವಂಶಜರು ಎನ್ನುತ್ತದೆ ಇತಿಹಾಸ.
ಹತ್ತನೇ ಶತಮಾನದಿಂದ ಭಾರತದ ಮೇಲೆ ಇಸ್ಲಾಮಿಕ್ ಆಕ್ರಮಣ ಆರಂಭವಾಗುತ್ತದೆ. ಇಸ್ಲಾಮಿಕ್ ಆಕ್ರಮಣಕಾರರು ಪಶ್ಚಿಮದ ಮತ್ತು ಪೂರ್ವದ ಆಕ್ರಮಣಗಳಿಗೆ ಬಹುಕಾಲ ಸೆಟೆದು ನಿಂತಿದ್ದ ಪರ್ಶಿಯವನ್ನು ಆಕ್ರಮಿಸಿ ಅಲ್ಲಿಂದ ಪುರಾತನ ಝೋರಾಷ್ಟ್ರಿಯನ್ ಮತವನ್ನು ಅಳಿಸಿ ಹಾಕಿ ಇಸ್ಲಾಮಿಕ್ ಪ್ರಭುತ್ವವನ್ನು ಸ್ಥಾಪಿಸುತ್ತಾರೆ. ನಂತರ ಗಾಂಧಾರ, ಲಾಹೋರದ ಮೂಲಕ ಸೌರಾಷ್ಟ್ರಕ್ಕೂ ಕಾಲಿಟ್ಟ ಇಸ್ಲಾಮಿಕ್ ಸೇನೆ ಆಗಿನ ಕಾಲದ ಭವ್ಯ ಸನಾತನ ದೇಗುಲ ಸಂಸ್ಕೃತಿ ಆಚರಣೆಗಳ ಮೇಲೆ ಕೊಡಲಿ ಏಟು ನೀಡುತ್ತದೆ. ಭಾರತೀಯ ರಾಜ ಮಹಾರಾಜರು ಸಾಕಷ್ಟು ಪ್ರತಿರೋಧ ನೀಡಿ ಆಕ್ರಮಣಕಾರರನ್ನು ಹಿಮ್ಮೆಟ್ಟಿಸಿದರೂ ಘೋರಿ, ಘಜನಿಯರ ದಂಡು ಭಾರತದ ಭವ್ಯ ಪರಂಪರೆಯನ್ನು ಹಾಳುಗೆಡವುತ್ತದೆ. 12 ಶತಮಾನದಲ್ಲಿ ಭಾರತವನ್ನು ಆಕ್ರಮಿಸಿದ ಭಕ್ತಿಯಾರ್ ಖಿಲ್ಜಿಯು ದೇಶದ ಅಂತಸತ್ವವನ್ನು ಹಾಳುಗೆಡವಿದ ಬಗ್ಗೆ ಕೇಳಿರುತ್ತೇವೆ. ಆತ ದೇಶದ ಸಂಸ್ಕೃತಿಗೆ ದೊಡ್ಡ ಹೊಡೆತವನ್ನು ನೀಡುತ್ತಾನೆ. ಶತಮಾನದಿಂದ ದೇಶದ ಉತ್ಕೃಷ್ಟ ಸಂಸ್ಕೃತಿಯ ಕೇಂದ್ರಗಳಾದ ಜ್ಞಾನವಿಹಾರಗಳನ್ನು ಕೆಡಹುತ್ತಾನೆ, ಈತ ನಲಂದಾ ಮಹಾವಿದ್ಯಾಲಯವು ನಾಮಾವಶೇಷ ಮಾಡುತ್ತಾನೆ. ಇಂತಹ ಇಸ್ಲಾಮಿಕ್ ಆಕ್ರಮಣಕಾರರು ನಂತರದಲ್ಲಿ ದೇಶದ ಭೌತಿಕ ಶ್ರೀಮಂತಿಕೆ ವೈಭವಗಳಿಗೆ ಹೆಸರಾಗಿದ್ದ, ಆಧ್ಯಾತ್ಮಿಕ ಕೇಂದ್ರಗಳು ದೇಗುಲಗಳ ಮೇಲೆಯೂ ದಾಳಿ ಎಸಗಿ ಲೂಟಿ ಮಾಡುತ್ತಾರೆ. ಕೆಡವಿದ ದೇಗುಲಗಳು, ಬಸದಿಗಳು, ವಿಹಾರಗಳ ಮೇಲೆ ಮಸೀದಿಗಳನ್ನು ನಿರ್ಮಿಸುತ್ತಾರೆ. ಇಂತಹವರ ಸಾಲಿನಲ್ಲಿ ಸೇರಿದ ಬಾಬರ್ 1528 ರಲ್ಲಿ ತನ್ನ ದಂಡನಾಯಕ ಮೀರ್ ಬಾಕಿಯಲ್ಲಿ ಪವಿತ್ರವಾದ ಅಯೋಧ್ಯಾ ರಾಮಮಂದಿರವನ್ನು ಕೆಡವಲು ಆಜ್ಞೆ ನೀಡುತ್ತಾನೆ ಎಂಬುದನ್ನು ಚರಿತ್ರೆಯ ಪುಟಗಳಿಂದ ತಿಳಿಯಬಹುದಾಗಿದೆ. ಇದಾದ ಸುಮಾರು 500 ವರ್ಷಗಳ ತರುವಾಯ ರಾಮನ ನಾಮವು ಜನಸಾಮಾನ್ಯರ ಮನಸ್ಸಿನಲ್ಲಿ ಅವರ ಹೃದಯ ಮಂದಿರಗಳಲ್ಲಿ ಅಚ್ಚಳಿಯದೆ ವಿರಾಜಮಾನವಾಗಿ ಉಳಿಯುತ್ತದೆ. 17 ನೇ ಶತಮಾನದ ಸುಮಾರಿಗೆ ಸಂತ ತುಳಸೀದಾಸರ ರಾಮಭಕ್ತಿ ಮತ್ತು ಸಾಹಿತ್ಯದ ಮೂಲಕ ಉತ್ತರ ಭಾರತದಲ್ಲಿ ರಾಮ ಮತ್ತು ಹನುಮಂತರ ಭಕ್ತಿ ಮತ್ತಷ್ಟೂ ಸೃಜಿಸಲ್ಪಡುತ್ತದೆ. ಒಮ್ಮೆ ಸರಯೂ ನದಿ ತಟದಲ್ಲಿರುವ ಅಯೋಧ್ಯೆಗೆ ಭೇಟಿ ನೀಡಿದ್ದ ತುಳಸೀದಾಸರು ರಾಮನ ಹೆಸರನ್ನು ಮತ್ತಷ್ಟೂ ಅಜರಾಮರವಾಗುವಂತೆ ಮಾಡುತ್ತೇನೆ ಎಂಬ ಸಂಕಲ್ಪ ತೊಡುತ್ತಾರೆ ಇದರ ಫಲಶ್ರುತಿಯೇ ರಾಮಚರಿತಮಾನಸ. 1980 ರ ದಶಕದಲ್ಲಿ ಅಯೋಧ್ಯೆಯ ಉತ್ಖನನದಲ್ಲಿ ತೊಡಗಿದ್ದ ಇತಿಹಾಸಕಾರ ಕೆ.ಕೆ ಮೊಹಮ್ಮದ್ ಬಾಬರ್ ಮಸೀದಿ ಇದ್ದ ಆ ಸ್ಥಳದಲ್ಲಿ ಉತ್ಖನನ ಮಾಡಿ ಅಲ್ಲಿ ಭವ್ಯ ಮಂದಿರವಿದ್ದ ಕುರುಹನ್ನು ನೀಡುತ್ತಾರೆ. ದೇಗುಲ ಸ್ತಂಭಗಳು, ಪ್ರಣಾಳಿ, ಮೃಣ್ಮಯ ಮೂರ್ತಿಗಳು ಭವ್ಯ ದೇಗುಲ ಇತ್ತೆಂಬುದಕ್ಕೆ ಪ್ರಧಾನ ಸಾಕ್ಷ್ಯವಾಗಿ ನಿಲ್ಲುತ್ತವೆ. 1853 ರಲ್ಲಿ ನಿರ್ಮೋಹಿ ಅಖಾಡದ ಸಂತರು ಮೊದಲ ಬಾರಿಗೆ ಬಾಬರ್ ನಿರ್ಮಿಸಿದ ಮಸೀದಿ ಇದ್ದ ಸ್ಥಳವೇ ರಾಮಜನ್ಮಭೂಮಿ, ಅದೇ ಸ್ಥಳದಲ್ಲಿ ರಾಮದೇಗುಲ ಇತ್ತೆಂಬ ಅಂಶವನ್ನು ಮೊದಲ ಬಾರಿಗೆ ನ್ಯಾಯ ದೇಗುಲದಲ್ಲಿ ಪ್ರಸ್ತಾಪಿಸುತ್ತಾರೆ. ಮೊದಲ ಕಾನೂನು ಪ್ರಕ್ರಿಯೆಯು ಇದೇ ಅಖಾಡದ ಮೂಲಕ ಆರಂಭಗೊಳ್ಳುತ್ತದೆ. ಮಹಾಂತ ರಘುವೀರ ದಾಸರು 1885 ರಲ್ಲಿ ರಾಮಮಂದಿರಕ್ಕೆ ಸಂಬಂಧಪಟ್ಟ ಕಾನೂನು ಪ್ರಕ್ರಿಯೆಗೆ ಚಾಲನೆ ನೀಡುತ್ತಾರೆ. ಈ ಅಖಾಡದ ಮೂಲಕ ರಾಮಭಕ್ತರ ನಂಬಿಕೆಯ ರಕ್ಷಣೆಯು ಅವರ ಆದ್ಯ ಕರ್ತವ್ಯವಾಗಿರುತ್ತದೆ. ಅಖಾಡದ ಮೂಲಕ ರಾಮನ ಪೀಠದ ಮೇಲೆ ಛಾವಣಿ ನಿರ್ಮಿಸುವ ಬೇಡಿಕೆಯನ್ನು ನ್ಯಾಯಾಲಯದ ಮುಂದಿಡಲಾಗುತ್ತದೆ. ಶ್ರೀರಾಮಜನ್ಮಭೂಮಿ ಆಂದೋಲನದಲ್ಲಿ ನಿರ್ಮೋಹಿ ಅಖಾಡದ ಸಂತರ ಹೊರತಾಗಿ ನಾಗಾಸಾಧುಗಳ ಭೂಮಿಕೆಯು ಪ್ರಮುಖವಾಗಿರುತ್ತದೆ.
ರಾಮಾಯ ರಾಮಭದ್ರಾಯ ರಾಮಚಂದ್ರಾಯ ವೇದಸೆ ರಘುನಾಥಾಯ ನಾಥಾಯ ಸೀತಾಯ ಪತಯೇ ನಮಃII
ಭವ್ಯತೆಯ ಇತಿಹಾಸ ಹೊತ್ತಿರುವ ಭಾರತದಲ್ಲಿ ಅವತಾರಿ ಪುರುಷರು ಹಲವು ಕಾಲಘಟ್ಟದಲ್ಲಿ ಅವತರಿಸಿ ಜನರನ್ನು ಸತ್ಯ ಧರ್ಮ ಮತ್ತು ನ್ಯಾಯದ ಮಾರ್ಗದಲ್ಲಿ ಮುನ್ನಡೆಯುವಂತೆ ಪ್ರೇರೇಪಿಸಿದ್ದಾರೆ. ಇಂತಹ ಮಹಾಪುರುಷರು ಸಾಮಾಜಿಕ ಐಕ್ಯತೆಯ ಜೊತೆಯಲ್ಲಿ ಧಾರ್ಮಿಕ ನಂಬಿಕೆಗಳನ್ನು ಗಟ್ಟಿಯಾಗಿ ಬೇರೂರುವಂತೆ ಮಾಡಿದ್ದಾರೆ. ಅಯೋದ್ಯೆಯಲ್ಲಿ ನಿರ್ಮಾಣ ಹೊಂದುತ್ತಿರುವ ರಾಮಮಂದಿರವು ಸುಮಾರು 8.2 ಎಕರೆ ಪ್ರದೇಶದಲ್ಲಿ ವ್ಯಾಪಿಸಿದೆ. ಮಂದಿರ ನಿರ್ಮಾಣಕ್ಕೆ 700 ಕೋಟಿ ರೂ. ವಿನಿಯೋಗಿಸಲ್ಪಟ್ಟಿದೆ. ಇದು ಕೇವಲ ಧಾರ್ಮಿಕ ಕೇಂದ್ರವಲ್ಲದೆ ದೇಶದ ಸಾಂಸ್ಕೃತಿಕ ಕೇಂದ್ರವಾಗಿಯೂ ಕಾರ್ಯ ನಿರ್ವಹಿಸಲಿದೆ. ಸುತ್ತು ಪೌಳಿಯು 795 ಮೀ. ಉದ್ದವಿರಲಿದೆ. ಉತ್ತರ ಮತ್ತು ಪೂರ್ವದಲ್ಲಿ ಮಹಾದ್ವಾರವನ್ನು ಹೊಂದಿರುವ ಮಂದಿರವು ಒಟ್ಟು ಐದು ಮಂಟಪಗಳನ್ನು ಹೊಂದಿರಲಿದೆ. ಒಟ್ಟು 170 ಸ್ಥಂಭಗಳ ಮೂಲಕ ರಾಮಂಮದಿರ ನಿರ್ಮಾಣವಾಗಿದೆ. ಮಹಾರಾಷ್ಟ್ರದಿಂದ ತರಿಸಲಾದ ಸಾಗುವಾನಿ ಮರಗಳಿಂದ ದಾರಂದ ಸಹಿತ ದ್ವಾರಗಳ ಅಲಂಕಾರಿಕ ಕೆತ್ತನೆಗಳನ್ನು ರಚಿಸಲಾಗಿದೆ. ಗರ್ಭಗೃಹದಲ್ಲಿ ರಾಮಲಲ್ಲಾನ ವಿಗ್ರಹವು ಪ್ರತಿಷ್ಠೆಗೊಳ್ಳಲಿದೆ. ಮುಂಬರುವ ವರ್ಷಗಳಲ್ಲಿ ಅಯೋದ್ಯೆಯು ಪ್ರತಿಯೋರ್ವ ಭಾರತೀಯನ ಶ್ರದ್ಧಾಕೇಂದ್ರ ಮಾತ್ರವಲ್ಲದೆ ತೀರ್ಥಕ್ಷೇತ್ರವಾಗಲಿದೆ. ಇಷ್ಟು ಮಾತ್ರವಲ್ಲದೆ ಸ್ಥಳೀಯರ ಸಾಮಾಜಿಕ ಆರ್ಥಿಕ ಸ್ಥಿತಿಯು ಸುಧಾರಿಸಲಿದೆ. ಸಾವಿರ ವರ್ಷಗಳ ತನಕ ಸದೃಢವಾಗಿ ನಿಲ್ಲಬಹುದಾದ ಈ ದೇಗುಲ ನಿರ್ಮಾಣಕ್ಕೆ ಭಕ್ತರು ನೀಡಿದ ಹಣವನ್ನು ಮಾತ್ರ ಬಳಸಲಾಗಿದ್ದು ಯಾವುದೇ ಸರಕಾರಿ ಅನುದಾನವಿಲ್ಲ ಎಂಬುದು ಗಮನಿಸತಕ್ಕ ವಿಚಾರ. ಅಯೋಧ್ಯೆಯ ಈ ದೇಗುಲವು ಆಧುನಿಕ ಕಾಲಘಟ್ಟದಲ್ಲಿ ದೇಗುಲ ನಿರ್ಮಾಣ ಸಹಿತ ಶಿಲಾ ಕೆತ್ತನೆ, ಮರದ ಕಲಾಕೃತಿ, ಕೆತ್ತನೆ ಕಲೆಗೆ ಹೊಸ ಮಾದರಿಯೆನಿಸಲಿದೆ. ಎಲ್ಲಕ್ಕಿಂತ ಮಿಗಿಲಾಗಿ ರಾಮಮಂದಿರವು ಆಧುನಿಕ ಕಾಲಘಟ್ಟದಲ್ಲಿ ಜಗತ್ತಿನ ಪ್ರಮುಖ ಆಧ್ಯಾತ್ಮಿಕ ಮತ್ತು ಸಾಂಸ್ಕೃತಿಕ ನಗರಿಯಾಗಿ ಬೆಳೆಯಲಿದೆ ಎಂಬುದರಲ್ಲಿ ಸಂಶಯವಿಲ್ಲ.
ಇಷ್ಟದೇವತೆಯಾಗಿ ರಾಮನನ್ನು ಭಜಿಸುವ, ನೆನಹುವ ಮನಗಳು ಮತ್ತು ಮನೆಗಳು ಭರತ ಖಂಡದ ಉದ್ದಗಲಗಳಲ್ಲೂ, ವಿಶ್ವದ ಹಲವೆಡೆಯ ರಾಷ್ಟ್ರಗಳಲ್ಲೂ ಇವೆ. ಬಾಲಿ, ಸುಮಾತ್ರ, ಇಂಡೋನೇಷ್ಯಾದಂತಹ ರಾಷ್ಟ್ರಗಳಲ್ಲೂ ರಾಮನಾಮವನ್ನು ಭಜಿಸುವ ಜನರಿದ್ದಾರೆ. ರಾಮನ ಕಥೆಗಳು ಬಾಲಿಯ ಸಂಸ್ಕೃತಿಯಲ್ಲಿ ಹಾಸಹೊಕ್ಕಾಗಿವೆ. ಬಹುದೇವೋಪಾಸನೆಯ ನಾಡಿನಲ್ಲಿ ರಾಮನ ಗುಣಗಳನ್ನು ಮಾದರಿಯಾಗಿರಿಸಿ ಆ ನಿಟ್ಟಿನಲ್ಲಿ ಜೀವನವನ್ನು ಮುನ್ನಡೆಸುವ, ವೈಯಕ್ತಿಕ ನೆಲೆಯಲ್ಲಿ ಆನಂದವನ್ನು ಕಾಣುವ ಮಂದಿಯೂ ಇದ್ದಾರೆ. ಲೌಕಿಕ ಜೀವನದ ಆರಾಮ ವಿರಾಮ ಸಂಘರಾಮಗಳಲ್ಲೂ ರಾಮನ ಆವಾಸವಿದೆ. ಶುಭ ಹಾರೈಕೆಯ ಪರಿ ರಾಮನಾಮದಲ್ಲಿದೆ. ವಿಷ್ಣುವಿನ ಅವತಾರವಾಗಿರುವ ರಾಮನೂ ಸರ್ವಾಂತರ್ಯಾಮಿಯೇ ಆಗಿದ್ದಾನೆ. ರಾಮನ ಜೀವನ ಪಯಣವನ್ನು ಸಾದೃಶವಾಗಿ ವಿವರಿಸುವ ರಾಮಾಯಣದ ಹೊರತಾಗಿ ಜಾತಕ ಕಥೆಗಳಲ್ಲೂ ರಾಮನ ಉಲ್ಲೇಖ ಬರುತ್ತದೆ. ಜೀವನ ಮೌಲ್ಯಗಳನ್ನು ಎತ್ತಿ ಹಿಡಿದ ಈತ ಒಂದರ್ಥದಲ್ಲಿ ಬೋಧಿಸತ್ವನೂ ಹೌದು. ಕೋದಂದಪಾಣಿ ಎಂಬ ಹೆಸರಿನಿಂದ ಕರೆಯಲ್ಪಡುವ ಶ್ರೀರಾಮನು ದೇಶದ ಕ್ಷಾತ್ರ ಪರಂಪರೆಗೆ ಮಾದರಿಯಾದನೆಂದೇ ಹೇಳಬಹುದು. ಕ್ಷಾತ್ರ ಸಮೂಹವು ಒಂದು ಕಾಲಘಟ್ಟದಲ್ಲಿ ತಮ್ಮ ಕರ್ತವ್ಯವನ್ನು ಮರೆತು ವೈರಾಗಿಗಳಾಗಿ ಕಾಡು ಗುಹೆಗಳನ್ನು ಸೇರುತ್ತಿದ್ದ ವೇಳೆ ಈ ರಾಮಾಯಣವು ಅವರಲ್ಲಿ ಕ್ಷಾತ್ರ ಧರ್ಮವೇನು, ಅದರ ಪ್ರಾಮುಖ್ಯತೆ ಏನು ಎಂಬುದರ ಬಗ್ಗೆ ತಿಳಿಸುತ್ತದೆ. ಬಾಲಕಂಡದಿಂದ ಹಿಡಿದು ಉತ್ತರ ಕಾಂಡದ ತನಕದ ರಾಮಯಾನದಲ್ಲಿ ರಾಮನ ಜೀವನ ಪಯಣದ ಕಥೆಯ ಜೊತೆ ಜೊತೆಯಲ್ಲಿ ನೀತಿ ಸಾರವಿದೆ, ಧರ್ಮದ ಪಾಠವಿದೆ. ರಾಮಾಯಣ ಎಂಬ ಸ್ಮೃತಿಯಲ್ಲಿ ಬರುವ ರಾಮನ ಉದಾತ್ತ ಗುಣಗಳೂ ಸಹಿತ ಸೀತೆಯ ತ್ಯಾಗ, ಆಂಜನೇಯನ ಭಕ್ತಿ, ಲಕ್ಷಣನ ಭ್ರಾತೃತ್ವದ ಹೆಜ್ಜೆಗಳು ಸ್ಮರಣೀಯ.
ಆತ್ಮ ರಾಮ ಆನಂದ ರಮಣ, ಅಚ್ಯುತ ಕೇಶವ ಹರಿನಾರಾಯಣ ಎಂಬಂತಹ ಭಕ್ತಿ ಪರವಶತೆಯ ಗೀತೆಗಳು ರಾಮನ ಸ್ಮರಣೆ ಮತ್ತು ಆ ನಿಟ್ಟಿನ ಶ್ರದ್ಧೆ ಸಹಿತ ಅನನ್ಯತೆ ಮತ್ತು ಭಕ್ತಿಯನ್ನು ಸ್ಪುರಿಸುತ್ತವೆ. ರಾಮನಾಮಿಯಂತಹ ಪರಂಪರೆಯು ದೇಶದ ಜನಪದ ಸಂಸ್ಕೃತಿಯಲ್ಲಿ ರಾಮನ ಚಿಂತನೆಯನ್ನು ಜೀವಂತವಾಗಿರಿಸಿದೆ. ಪಿತೃವಾಕ್ಯ ಪರಿಪಾಲನೆಯು ಶ್ರೀರಾಮನ ಜೀವನ ಸಂದೇಶಗಳಲ್ಲೊಂದು. ಸ್ಕಂದಪುರಾಣ, ಆದಿಪುರಾಣ, ಅಯೋಧ್ಯಾ ಮಹಾತ್ಮೆ, ರಾಮಚರಿತ ಮಾನಸ ಮೊದಲಾದ ಕೃತಿಗಳು ರಾಮನ ಜೀವನ ದರ್ಶನದ ಬಗ್ಗೆ ಬೆಳಕು ಚೆಲ್ಲುತ್ತವೆ. ಇವೆಲ್ಲಕ್ಕಿಂತ ಹೆಚ್ಚಾಗಿ ಯುಗಯುಗದ ಕ್ಷಾತ್ರರಿಗೂ ರಾಮನು ಶೌರ್ಯ ಮತ್ತು ಪರಾಕ್ರಮದ ಸಂಕೇತವಾಗಿದ್ದಾನೆ. ಭಾರತೀಯ ಸೈನ್ಯದಲ್ಲಿ ರಾಮನ ಸ್ಮರಣೆಯು ಅಮರವಾಗಿದೆ. ದೇಶದ ರಜಪೂತನ ರೆಜಿಮೆಂಟ್ನ ಯುದ್ಧಘೋಷವೂ –ರಾಜಾರಾಮಚಂದ್ರ ಕಿ ಜೈ ಎಂಬುದಾಗಿದೆ. ಕನ್ನಡ ಸಾಹಿತ್ಯದಲ್ಲೂ ಶ್ರೀರಾಮನ ಜೀವನ ದರ್ಶನದ ಬಗ್ಗೆ ಬೆಳಕು ಚೆಲ್ಲಲಾಗಿದೆ. ರಾಷ್ಟ್ರಕವಿ ಕುವೆಂಪುರವರ ಶ್ರೀರಾಮಾಯಣ ದರ್ಶನಂ ಕೃತಿಗೆ ಜ್ಞಾನಪೀಠ ಪ್ರಶಸ್ತಿ ಒಲಿದಿರುವುದನ್ನು ಇಲ್ಲಿ ಸ್ಮರಿಸಿಕೊಳ್ಳಬಹುದು. ಕನ್ನಡ ಸಾಹಿತ್ಯ ಪರಂಪರೆಯಲ್ಲಿ ಜಿನ ರಾಮಾಯಣವು ಬಹಳ ಪ್ರಾಚೀನ ಸಾಹಿತಿಕ ಕೃತಿಯಾಗಿದೆ. ಭಕ್ತಿ ಪರಂಪರೆಯು ದಕ್ಷಿಣ ಭಾರತದಲ್ಲಿ ಹೆಚ್ಚು ಪ್ರಸಾರ ಪ್ರಚಾರದಲ್ಲಿ ಕಾರಣೀಭೂತವಾದ ಶ್ರೀ ವೈಷ್ಣವ ಪರಂಪರೆ ರಾಮನ ಭಕ್ತಿಯು ದಕ್ಷಿಣದ ಪ್ರಾಂತ್ಯದಲ್ಲಿ ಹೆಚ್ಚು ಸೃಜಿಸುವಂತೆ ಮಾಡಿತ್ತು ಎಂಬುದು ಉಲ್ಲೇಖನೀಯವಾದ ಅಂಶ.
✍️ವಿವೇಕಾದಿತ್ಯ
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.