ಉಡುಪಿ : ಕಾಸ್ಮೋಪಾಲಿಟನ್ ಸಿಟಿಗಳು, ಅಂತಾರಾಷ್ಟ್ರೀಯ ನಗರಗಳ ವೈಶಿಷ್ಟವೆಂದರೆ ಎಲ್ಲ ಬಗೆಯ ಸೇವೆಗಳೂ, ಎಲ್ಲಾ ಸಂಸ್ಕೃತಿಗಳೂ ಕಾಣಸಿಗುವುದು. ಮಣಿಪಾಲ 50ಕ್ಕೂ ಹೆಚ್ಚು ರಾಷ್ಟ್ರಗಳ ಪ್ರಜೆಗಳು ಇರುವ ಪುಟ್ಟ ಆದರೂ ದೊಡ್ಡ ನಗರ. ಇಲ್ಲೊಂದು ದರ್ಭಾ ಶೇಷನನ್ನು ತಯಾರಿಸುವ ಮನೆ ಇದೆ. ದರ್ಭೆಯ ಶೇಷ ಬೇಕಾಗುವುದು ವರ್ಷಕ್ಕೊಂದು ಬಾರಿ ಅನಂತನಚತುರ್ದಶಿ ವ್ರತ ನಡೆಯುವಾಗ ಮಾತ್ರ. ಈ ಬಾರಿ ಸೆ. 27 ರಂದು ಆಚರಿಸಲಾಗುತ್ತಿದೆ.
ಈ ವ್ರತದಲ್ಲಿ ದರ್ಭೆಯಲ್ಲಿ ಮಾಡಿದ ಏಳು ಹೆಡೆಯ ಶೇಷನ ಮೇಲೆ ಸಾಲಿಗ್ರಾಮವನ್ನು ಇರಿಸಿ ಪೂಜಿಸಲಾಗುತ್ತದೆ. ಇದು ಅನಂತ ಪದ್ಮನಾಭನ ಪ್ರತೀಕ. ಅನಂತನೆಂದರೆ ಶೇಷ, ಪದ್ಮನಾಭನೆಂದರೆ ನಾಭಿಯಲ್ಲಿ ಕಮಲ (ಪದ್ಮ) ಸೃಷ್ಟಿಸಿದ ಶ್ರೀಮನ್ನಾರಾಯಣ. ದರ್ಭೆಯಲ್ಲಿ ಮಾಡಿದ ಆಕೃತಿಯಲ್ಲಿ ಶೇಷನನ್ನೂ, ಸಾಲಿಗ್ರಾಮದಲ್ಲಿ ನಾರಾಯಣನನ್ನೂ ಪೂಜಿಸುವ ಸಂಪ್ರದಾಯವಿದು. ದರ್ಭೆ ಒಂದು ಬಗೆಯ ಹುಲ್ಲು. ಹಳ್ಳಿಗಳಲ್ಲಿ ತೋಡುಗಳಲ್ಲಿ ಕಂಡುಬರುತ್ತದೆ.
ಇದನ್ನು ತಂದು ಶೇಷನನ್ನು (ನಾಗಪಣ) ತಯಾರಿಸಬೇಕು. ಇದನ್ನು ಕಲಾತ್ಮಕವಾಗಿಯೂ ಮಾಡಬಹುದು, ಸಾಮಾನ್ಯ ಮಟ್ಟದಲ್ಲಿಯೂ ಮಾಡಬಹುದು. ಬಹುತೇಕ ಎಲ್ಲಾ ಅನಂತಪದ್ಮನಾಭ ದೇವಸ್ಥಾನ, ಅನಂತೇಶ್ವರ ದೇವಸ್ಥಾನ, ವೆಂಕಟರಮಣ ದೇವಸ್ಥಾನ, ಸಾಂಪ್ರದಾಯಿಕವಾಗಿ ನಡೆದು ಬಂದ ಮನೆಗಳಲ್ಲಿ ಅನಂತನವ್ರತವನ್ನು ಆಚರಿಸುತ್ತಾರೆ. ಮಠಗಳಲ್ಲಿ ಚಾತುರ್ಮಾಸ್ಯವ್ರತ ಕೊನೆಯಾಗುವುದು ಇದೇ ವ್ರತದ ಸಂದರ್ಭ.
ಮಣಿಪಾಲ ಎಂಐಟಿ ವಸತಿಗೃಹದ ನಿವಾಸಿ ಭಾಗ್ಯಶ್ರೀ ಆನಂದ ಮಠದ ಅವರು ದರ್ಭೆಯಿಂದ ಶೇಷನನ್ನು ತಯಾರಿಸುವಲ್ಲಿ ಪರಿಣತರು. ಪ್ರತಿವರ್ಷ ಬೇಡಿಕೆ ಬಂದ ಅನುಸಾರ ದರ್ಭಾಶೇಷನನ್ನು ತಯಾರಿಸಿಕೊಡುತ್ತಾರೆ. ಈ ವರ್ಷ 40 ಆಕೃತಿಗಳನ್ನು ರಚಿಸಿದ್ದಾರೆ. ಮೂಲತಃ ಧಾರವಾಡದವರಾದ ಭಾಗ್ಯಶ್ರೀ ತನ್ನ ತಂದೆ ಜಯತೀರ್ಥಾಚಾರ್ಯ ಕೊರ್ಲಹಳ್ಳಿ, ತಾತ ಭೀಮಸೇನಾಚಾರ್ಯ ಕೊರ್ಲಹಳ್ಳಿಯವರು ಮನೆಯ ಪೂಜೆಗಾಗಿ ಆನಂದ ಮಠದರ ಅಜ್ಜ ಬೆಳಗಾವಿ ಕಿತ್ತೂರಿನ ವೆಂಕಣ್ಣಾಚಾರ್ಯರಿಂದ ಮಾಡಿಸಿ ಕೊಂಡೊಯ್ಯುತ್ತಿದ್ದ ದರ್ಭಾಶೇಷನನ್ನು ನೋಡಿ ಪ್ರಭಾವಿತರಾಗಿ ಈ ಕಲೆಯನ್ನು ಕರಗತ ಮಾಡಿಕೊಂಡರು.
ಸುಮಾರು 15 ವರ್ಷಗಳಿಂದ ಬೇಕೆಂದವರಿಗೆ ಮಾಡಿಕೊಡುತ್ತಿದ್ದಾರೆ. ಇದೆಲ್ಲವೂ ಉಚಿತ. ಭಾಗ್ಯಶ್ರೀಯವರು ತಮ್ಮ ಕಸೂತಿಕಲೆಯನ್ನು ತಂಗಿ, ಚಿಕ್ಕಮ್ಮ ಹಾಗೂ ಬೇರೆಯವರಿಗೂ ಕಲಿಸಿಕೊಟ್ಟಿದ್ದಾರೆ. ಒಂದು ಬಾರಿ ಪಲಿಮಾರು ಮಠದಲ್ಲಿ ಕಾರ್ಯಾಗಾರ ನಡೆಸಿದ್ದರು. ಇವರಿಂದ ಕಲಿತ ಸೊಸೆ ಭೈಷ್ಮಿಯವರು ಎಂಐಟಿಯಲ್ಲಿ ಚಾಪೆ ಹೆಣೆಯುವುದು, ದರ್ಭಾಶೇಷ ತಯಾರಿ ಕುರಿತು ಕಾರ್ಯಾಗಾರ ನಡೆಸಿದ್ದರು. ದರ್ಭೆಯ ಚಾಪೆ ಜಪಾನುಷ್ಠಾನ ಮಾಡುವವರಿಗೆ ಶ್ರೇಷ್ಠ ಎಂಬ ಭಾವನೆ ಇದೆ. ಆರೋಗ್ಯಕ್ಕೂ ಉತ್ತಮ.
ಮುಂದಿನ ವರ್ಷ ಯಾರಿಗಾದರೂ ಬೇಕೆನಿಸಿದರೆ ಭಾಗ್ಯಶ್ರೀಯವರನ್ನು ಸಂಪರ್ಕಿಸಬಹುದು ಅಥವಾ ಆಸಕ್ತರಿದ್ದರೆ ಕಲಿಯಲೂಬಹುದು. ಹಾಗೇನಾದರೂ ಉತ್ಸಾಹ ಚಿಮ್ಮಿದರೆ ಮಾತನಾಡಿಸಿ – 9482821670.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.