ಬೆಂಗಳೂರು: ಸೋಲನ್ನು ಸವಾಲಾಗಿ ಸ್ವೀಕರಿಸಿ ಮತ್ತೆ ಆಡಳಿತ ಮಾಡುವ ಪ್ರತಿಜ್ಞೆ ಸ್ವೀಕರಿಸುವ ಮನಸ್ಸು ನಮ್ಮದಾಗಲಿ ಎಂದು ಮಾಜಿ ಉಪ ಮುಖ್ಯಮಂತ್ರಿ ಗೋವಿಂದ ಕಾರಜೋಳ ಅವರು ಕರೆನೀಡಿದರು.
‘ಸಿಟಿಜನ್ ಫಾರ್ ಸೋಶಿಯಲ್ ಜಸ್ಟೀಸ್ – ಬೆಂಗಳೂರು’ ಇವರ ನೇತೃತ್ವದಲ್ಲಿ ಸ್ಕೌಟ್ಸ್ ಮತ್ತು ಗೈಡ್ಸ್ ಸಭಾಂಗಣದಲ್ಲಿ ಇಂದು ನಡೆದ “ಎಸ್ಸಿ, ಎಸ್ಟಿ ಮೀಸಲು ಹಣ ಮುಳುಗಿಸುತ್ತಿರುವ ರಾಜ್ಯ ಸರ್ಕಾರ” ಎಂಬ ವಿಚಾರ ಸಂಕಿರಣದ ಅಧ್ಯಕ್ಷತೆ ವಹಿಸಿದ್ದ ಅವರು, ಎಸ್ಸಿ, ಎಸ್ಟಿ ಮೀಸಲು ಮೊತ್ತದಿಂದ 11,144 ಕೋಟಿ ದುರುಪಯೋಗ ವಿರುದ್ಧ ಎಲ್ಲ ಜಿಲ್ಲೆಗಳಲ್ಲಿ ಹೋರಾಟ ಪ್ರಾರಂಭಿಸಿ ಎಂದು ಮನವಿ ಮಾಡಿದರು. 11,144 ಕೋಟಿ ಮೊತ್ತವನ್ನು ವಾಪಸ್ ಕೊಡುವ ವರೆಗೆ ನಮ್ಮ ಹೋರಾಟ ಮುಂದುವರಿಯಲಿದೆ ಎಂದು ಎಚ್ಚರಿಸಿದರು.
ಡೋಂಗಿ ಮಾತು, ಸುಳ್ಳು ಭರವಸೆ ಮೂಲಕ ಮೋಸ ಮಾಡಲು ಸಿದ್ದರಾಮಯ್ಯರವರು ಮುಂದಾಗಿದ್ದಾರೆ. ಎಸ್ಸಿ ಎಸ್ಟಿ ಜನಾಂಗದ ಶಿಕ್ಷಣ, ಆರೋಗ್ಯ, ಕಲ್ಯಾಣಕ್ಕಾಗಿ ಈ ಹಣವನ್ನು ಬಳಸಬೇಕಿದೆ. ಸರಕಾರದ ಮನಸ್ಸಿಗೆ ಬಂದಂತೆ ಬಳಸಲು ಅಲ್ಲ ಎಂದು ಅವರು ಆಕ್ಷೇಪಿಸಿದರು.
ಈ ಜನಾಂಗದಲ್ಲಿ ಹುಟ್ಟಿದ ಮಲ್ಲಿಕಾರ್ಜುನ ಖರ್ಗೆಯವರು ಇದನ್ನು ಸಹಿಸಿಕೊಂಡದ್ದು ಹೇಗೆ ಎಂದು ಅವರು ಪ್ರಶ್ನಿಸಿದರು. ಮತಬ್ಯಾಂಕ್ ರಾಜಕಾರಣಕ್ಕೆ ಅವರೂ ಜೋತುಬಿದ್ದರೇ ಎಂದು ಕೇಳಿದರು. ಬಿಜೆಪಿ ಸರಕಾರದ ಸಾಧನೆಗಳನ್ನು ಅವರು ವಿವರಿಸಿದರು. ಎಸ್ಸಿ ಎಸ್ಟಿ ಜನಾಂಗವು ಗೌರವಯುತವಾಗಿ ಬಾಳಲು ನಾವು ಶ್ರಮಿಸಿದ್ದೇವೆ. ಇವರಂತೆ ಸುಳ್ಳು ಹೇಳಿಲ್ಲ ಎಂದು ಟೀಕಿಸಿದರು.
ನೀರಾವರಿ, ಪಿಡಬ್ಲ್ಯುಡಿ ಇಲಾಖೆ ಸಚಿವನಾದಾಗ ಮೀಸಲು ಹಣವನ್ನು ಹಾಸ್ಟೆಲ್ಗಳ ನಿರ್ಮಾಣಕ್ಕೆ ಬಳಸಿದ್ದೇವೆ. ವಸತಿಯುತ ಶಾಲೆ ನಿರ್ಮಾಣಕ್ಕೆ ನೀರಾವರಿ ಇಲಾಖೆಯಿಂದ 500 ಕೋಟಿ ನೀಡಿದ್ದೇನೆ. ನೀರಾವರಿ ಇಲಾಖೆಯಲ್ಲಿ ಗಂಗಾ ಕಲ್ಯಾಣ ಯೋಜನೆ ಪ್ರಾರಂಭವಾದುದೇ ನಮ್ಮ ಸರಕಾರ ಇದ್ದಾಗ ಎಂದು ವಿವರಿಸಿದರು.
ಎಸ್ಸಿ ಎಸ್ಟಿ ಯುವಕರನೇಕರು ಇಂಜಿನಿಯರ್, ಪದವೀಧರ ಆಗಿದ್ದಾರೆ. ಅವರು ಕೈಗಾರಿಕೆ ಪ್ರಾರಂಭಿಸಲು ಶೇ 50 ಸಬ್ಸಿಡಿಯಲ್ಲಿ ಕೆಐಎಡಿಬಿಯಿಂದ ನಿವೇಶನ ಕೊಡಲಾಗುತ್ತಿತ್ತು. ಅದನ್ನು ಶೇ 75ಕ್ಕೆ ಏರಿಸಲಾಗಿದೆ. ಇದರಿಂದ ಸಾವಿರಾರು ಜನರು ನಿವೇಶನ ಪಡೆಯುವಂತಾಗಿದೆ. ಇದು ನಮ್ಮ ಸಾಧನೆ ಸಿದ್ದರಾಮಯ್ಯನವರೇ ಎಂದು ಗಮನ ಸೆಳೆದರು.
60 ವರ್ಷ ದೇಶವನ್ನು ಆಳಿದ ಕಾಂಗ್ರೆಸ್ ಪಕ್ಷ ಎಸ್ಸಿ, ಎಸ್ಟಿ ಸಮಾಜಕ್ಕೆ ನಿರಂತರ ಮೋಸ ಮಾಡುತ್ತಲೇ ಬಂತು. ಬಡತನ ನಿರ್ಮೂಲನೆ ಮಾಡುವುದಾಗಿ ಹೇಳುತ್ತಲೇ ಬಂದ ಇಂದಿರಾ ಗಾಂಧಿಯವರು ಬಸವರಿಗೆ ಮೋಸ ಮಾಡುತ್ತ ಬಂದರು ಎಂದರಲ್ಲದೆ, ಈ ಚುನಾವಣೆಯಲ್ಲಿ ನಾವು ಸೋತರೆ ಆಕಾಶ ಕೆಳಗೆ ಬಿದ್ದಿಲ್ಲ. ಪ್ರಳಯ ಆಗಿಲ್ಲ. ನಮಗೆ ಮುಂದೆ ಅವಕಾಶ ಲಭಿಸಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಮಾಜಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ಅವರು ಮಾತನಾಡಿ, ಮೀಸಲಿಟ್ಟ ಹಣದ ದುರ್ಬಳಕೆ ಆಗಿದೆ. ಸಂಬಂಧಿತರ ಕಿವಿಹಿಂಡಿ ಅದನ್ನು ಬಡವರಿಗೆ ಕೊಡಿಸುವುದು ಹೇಗೆ ಎಂಬ ಚರ್ಚೆ ನಮ್ಮದು ಎಂದರು. ಬೆಕ್ಕಿಗೆ ಗಂಟೆ ಕಟ್ಟುವ ಕೆಲಸವನ್ನು ನಾವು ಮುಂದಾಗಬೇಕಿದೆ ಎಂದು ತಿಳಿಸಿದರು.
ಆ ನೆಲೆಯಲ್ಲಿ ಕಾಂಗ್ರೆಸ್ ಸರಕಾರದ ವಿರುದ್ಧ ಹೋರಾಟ ಮುಂದುವರೆಸಬೇಕಿದೆ. ಜನರ ಪರವಾಗಿ ಇರುವವರಾದ ನಾವು ದರ ವಿರುದ್ಧ ಹೋರಾಟಕ್ಕೆ ಧುಮುಕಲೇ ಬೇಕಿದೆ ಎಂದು ಅಭಿಪ್ರಾಯಪಟ್ಟರು. ಸುಳ್ಳು ಭರವಸೆ, ಗ್ಯಾರಂಟಿಗಳಿಂದ ಈ ಸರಕಾರ ರಚಿಸಲಾಗಿದೆ ಎಂದು ಅವರು ಟೀಕಿಸಿದರು.
ಮಾಜಿ ಸಚಿವ ಬಿ. ಶ್ರೀರಾಮುಲು ಅವರು ಮಾತನಾಡಿ, ಪರಿಶಿಷ್ಟ ಜಾತಿ- ವರ್ಗಕ್ಕೆ ಮೀಸಲಿಟ್ಟ ಹಣದಲ್ಲಿ ಸುಮಾರು 11 ಸಾವಿರ ಕೋಟಿಯನ್ನು ಬೇರೆ ಬೇರೆ ಇಲಾಖೆಗಳಿಗೆ ವರ್ಗಾಯಿಸಲಾಗಿದೆ. ಡಾ.ಬಾಬಾ ಸಾಹೇಬ ಅಂಬೇಡ್ಕರರ ವಿಚಾರಗಳನ್ನು ಮನಸ್ಸಿನಲ್ಲಿ ಇಟ್ಟುಕೊಂಡು ನಾವು ಹೋರಾಟ ಮಾಡುವುದು ಅನಿವಾರ್ಯವಾಗಿದೆ ಎಂದು ನುಡಿದರು. ಒಳ್ಳೆಯ ಕೆಲಸಗಳನ್ನು ಮರೆತುಬಿಡುತ್ತೇವೆ. ಬಿಜೆಪಿ ಸರಕಾರ ಮಾಡಿದ ಒಳ್ಳೆಯ ವಿಚಾರ ಮರೆತುಹೋಗಿದೆ ಎಂದು ಬೇಸರ ವ್ಯಕ್ತಪಡಿಸಿದರು.
ಮೀಸಲಾತಿ ವಿಚಾರದಲ್ಲಿ ಸಾಮಾಜಿಕ ನ್ಯಾಯವನ್ನು ಬಿಜೆಪಿ ಸರಕಾರ ನೀಡಿತ್ತು ಎಂದು ನೆನಪಿಸಿದರು. ಜಾತಿ ಪ್ರಮಾಣಪತ್ರದ ವಿಚಾರದಲ್ಲೂ ಇವತ್ತು ಸಾಕಷ್ಟು ಗೊಂದಲಗಳು ನಡೆದಿವೆ. ನ್ಯಾಯಕ್ಕಾಗಿ ಹೋರಾಟ ಮಾಡಿ ಹಕ್ಕುಗಳನ್ನು ಪಡೆಯೋಣ ಎಂದು ತಿಳಿಸಿದರು.
ಮಾಜಿ ಶಾಸಕ ಎನ್. ಮಹೇಶ್ ಅವರು ಮಾತನಾಡಿ, ಶೇ 80ರಷ್ಟು ಎಸ್ಸಿ, ಎಸ್ಟಿಗಳು ಬಿಪಿಎಲ್ ರೇಖೆ ಕೆಳಗಿದ್ದಾರೆ. ತಿಂಗಳ ಆದಾಯ ಗಳಿಸುವ ಆಸ್ತಿ ನಮ್ಮಲ್ಲಿ ಇಲ್ಲದಿರುವುದೇ ಇದಕ್ಕೆ ಕಾರಣ ಎಂದು ತಿಳಿಸಿದರು. ಸ್ಪೆಷಲ್ ಕಾಂಪೋನೆಂಟ್ ಪ್ಲಾನನ್ನು ಗ್ಯಾರಂಟಿಗಳಿಗೆ ಬಳಸುವುದು ಮೋಸ, ದ್ರೋಹ ಮತ್ತು ಅನ್ಯಾಯ ಎಂದು ಅವರು ಆಕ್ಷೇಪಿಸಿದರು.
ಉದ್ಯೋಗ ಕೊಡುವುದು, ಉತ್ತಮ ಶಿಕ್ಷಣ, ಭೂಮಿ ಕೊಡುವ ಕಾರ್ಯವನ್ನು ಕಾಂಗ್ರೆಸ್ ಮಾಡುತ್ತಿಲ್ಲ. ಇದನ್ನು ಜನರ ಬಳಿಗೆ ಒಯ್ಯುವುದು ಅನಿವಾರ್ಯ ಎಂದು ಅವರು ಹೇಳಿದರು. ಕಾಂಗ್ರೆಸ್ ಪಕ್ಷದ ಗೋಸುಂಬೆತನವನ್ನು ಜನರಿಗೆ ತಿಳಿಸಬೇಕಾಗಿದೆ ಎಂದು ನುಡಿದರು. ಕಾಂಗ್ರೆಸ್ ಮತಬ್ಯಾಂಕಿಗೆ ಇದನ್ನು ತಿಳಿಹೇಳಬೇಕಿದೆ ಎಂದು ತಿಳಿಸಿದರು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.