ಬೆಳ್ತಂಗಡಿ : ಎತ್ತಿನಹೊಳೆ ಯೋಜನೆ ಕರಾವಳಿ ಪಾಲಿಗೆ ಮಾರಕವಾಗಿದ್ದು ಈ ಯೋಜನೆಯನ್ನು ಜಾರಿಗೆತರುವುದರಿಂದ ಕೋಲಾರ ಭಾಗಕ್ಕೆ ನೀರೂ ಸಿಗುವುದಿಲ್ಲ. ಕರಾವಳಿ ಮಲೆನಾಡಿಗೆ ಹಾನಿಯನ್ನೂ ಉಂಟುಮಾಡಲಿದೆ. ಆದುದರಿಂದ ಯೋಜನೆಯನ್ನು ಕೈಬಿಡುವಂತೆ ಒತ್ತಾಯಿಸಿ ಬೆಳ್ತಂಗಡಿ ತಾಲೂಕಿನಲ್ಲಿ ಅ.7 ರಂದು ಸ್ವಯಂಪ್ರೇರಿತವಾಗಿ ಬಂದ್ ಆಚರಿಸಲು ಹಾಗೂ ಬೃಹತ್ ಪ್ರತಿಭಟನೆ ನಡೆಸಲು ಬೆಳ್ತಂಗಡಿ ಅಂಬೇಡ್ಕರ್ ಭವನದಲ್ಲಿ ಶುಕ್ರವಾರ ನಡೆದ ಸಮಾನ ಮನಸ್ಕರ ಸಭೆಯಲ್ಲಿ ನಿರ್ಧಾರಿಸಲಾಯಿತು.
ತಾಲೂಕಿನ ವಿವಿಧ ಸಂಘ ಸಂಸ್ಥೆಗಳ ಸಹಕಾರದೊಂದಿಗೆ ನಡೆದ ಸಭೆಯಲ್ಲಿ ಯೋಜನೆಯಿಂದ ಆಗುವ ಅನಾಹುತಗಳ ಬಗ್ಗೆ ಹಾಗೂ ಅದು ಪರಿಸರದ ಮೇಲೆ, ಇಲ್ಲಿನ ನದಿಗಳ ಮೇಲೆ ಆಗಲಿರುವ ಪರಿಣಾಮಗಳ ಬಗ್ಗೆ ಹೋರಾಟಗಾರ ದಿನೇಶ್ ಹೊಳ್ಳ, ಹಾಗೂ ಡಾ. ನಿರಂಜನ್ ರೈ ಅವರು ಮಾಹಿತಿ ನೀಡಿದರು. ಬಳಿಕ ಹೋರಾಟದ ರೂಪರೇಷೆ ಬಗ್ಗೆ ಚರ್ಚೆ ನಡೆಯಿತು. ಸಭೆಯಲ್ಲಿ ಎತ್ತಿನಹೊಳೆ ಯೋಜನೆಯ ವಿರುಧ ನಿರ್ಣಯ ತೆಗೆದುಕೊಳ್ಳುವಂತೆ ತಾಲೂಕಿನ ಎಲ್ಲ್ಲಾ ಗ್ರಾಮ ಪಂಚಾಯತುಗಳನ್ನೂ ಕೇಳಿಕೊಳ್ಳಲು ನಿರ್ಧರಿಸಲಾಯಿತು. ತಾಲೂಕಿನ ಶಾಲಾ ಕಾಲೇಜುಗಳಲ್ಲಿ ಜನಜಾಗೃತಿ ಅಭಿಯಾನ ನಡೆಸಲು ಹಾಗೂ ಪ್ರತಿ ಮನೆಗೂ ಯೋಜನೆಯಿಂದಾಗುವ ಪರಿಣಾಮಗಳ ಬಗ್ಗೆ ಮಾಹಿತಿ ತಲುಪಿಸಲು ಕರಪತ್ರಗಳನ್ನು ವಿತರಿಸಿ ಜನಜಾಗೃತಿ ಮೂಡಿಸಲು ನಿರ್ಧರಿಸಲಾಯಿತು.
ಯೋಜನೆಯನ್ನು ವಿರೋಧಿಸಿ ಬೆಳ್ತಂಗಡಿಯಲ್ಲಿ ಅ.7 ರಂದು ಬೃಹತ್ ಪ್ರತಿಭಟನೆ ಹಾಗೂ ಸ್ವಯಂಪ್ರೇರಿತರಾಗಿ ಅಂಗಡಿ, ವ್ಯವಹಾರಗಳನ್ನು ಮುಚ್ಚಿ ಬಂದ್ ಆಚರಿಸಲು ಒಮ್ಮತದಿಂದ ನಿರ್ಧರಿಸಲಾಯಿತು. ಸಭೆಯಲ್ಲಿ ಪುಷ್ಪರಾಜ ಶೆಟ್ಟಿ, ಮಹೇಶ್ ಶೆಟ್ಟಿ ತಿಮರೋಡಿ, ಜಿ.ಪಂ ಸದಸ್ಯ ಶೈಲೇಶ್ ಕುಮಾರ್, ಬಿ.ಜೆ.ಪಿ. ಮುಖಂಡ ಪ್ರತಪಸಿಂಹ ನಾಯಕ್, ಪತ್ರಕರ್ತ ದೇವಿಪ್ರಸಾದ್, ದಿನೇಶ್ ಪೈ ಕಟೀಲು, ಧನಂಜಯರಾವ್, ಹರೀಶ್ ಪೂಂಜ, ವಿಠಲಶೆಟ್ಟಿ, ಜಗದೀಶ್.ಡಿ, ಡಾ.ದಯಕರ್,ಶಶಿಕಿರಣ್, ಶೈಲೇಶ್ಆರ್ಜೆ, ಅಕ್ಬರ್ ಬೆಳ್ತಂಗಡಿ, ಚಿದಾನಂದ ಇಡ್ಯ, ಮತ್ತಿತರರು ತಮ್ಮ ಅಭಿಪ್ರಾಯಗಳನ್ನು ಮಂಡಿಸಿದರು.
ಸಭೆಯಲ್ಲಿ ತಾಲೂಕು ವಕೀಲರ ಸಂಘ, ಪ್ರಜಾಪ್ರಭುತ್ವ ವೇದಿಕೆ, ತಾಲೂಕು ಪತ್ರಕರ್ತರ ಸಂಘ, ಛಾಯಾಗ್ರಾಹಕರ ಸಂಘ, ಆಟೋ ಚಾಲಕ ಮಾಲಕರ ಸಂಘ, ಹಿರಿಯ ನಾಗರೀಕರ ವೇದಿಕೆ, ತಾಲೂಕು ಹಿತರಕ್ಷಣಾ ವೇದಿಕೆ, ಮಾಜಿ ಸೈನಿಕರ ಸಂಘ, ಬಜರಂಗ ದಳ, ರಾಷ್ಟ್ರೀಯ ಹಿಂದೂ ಜಾಗರಣ ವೇದಿಕೆ, ಔಷಧ ವ್ಯಾಪಾರಸ್ಥರ ಸಂಘ, ಜಯ ಕರ್ಣಾಟಕ, ತುಳುನಾಡ ಒಕ್ಕೂಟ, ತಾಲೂಕು ಯುವಜನ ಒಕ್ಕೂಟ, ತುಳು ಚಾವಡಿ ಉಜಿರೆ, ಎಸ್.ಡಿ.ಪಿಐ, ಜೆಸಿ, ರೋಟರಿ, ಲಯನ್ಸ್ ಕ್ಲಬ್ಗಳು, ಜನಪ್ರತಿನಿಧಿಗಳು ವಿವಿಧ ರಾಜಕೀಯ ಪಕ್ಷಗಳ ಮುಖಂಡರುಗಳು ಭಾಗವಹಿಸಿ ಹೋರಾಟಕ್ಕೆ ಬೆಂಬಲ ಸೂಚಿಸಿದರು.
ಬೆಳ್ತಂಗಡಿ ತಾಲೂಕು ನೇತ್ರಾವತಿ ನದಿ ತಿರುವ ವಿರೋಧಿ ಹೋರಾಟ ಸಮಿತಿಯನ್ನು ರಚಿಸಲಾಯಿತು. ಪ್ರಧಾನ ಸಂಚಾಲಕರಾಗಿ ಪುಷ್ಪರಾಜ ಶೆಟ್ಟಿ ಬೆಳ್ತಂಗಡಿ, ಕಾರ್ಯದರ್ಶಿಗಳಾಗಿ ನ್ಯಾಯವಾದಿ ಶಶಿಕಿರಣ್ ಜೈನ್,ಹಾಗೂ ಪತ್ರಕರ್ತ ಶಿಬಿ ಧರ್ಮಸ್ಥಳ, ಕೋಶಾಧಿಕಾರಿಯಾಗಿ ಹರೀಶ್ ಪೂಂಜ ಹೋರಾಟದ ಪ್ರಧಾನ ಸಮನ್ವಯಕಾರರಾಗಿ ಪತ್ರಕರ್ತ ಲಕ್ಷ್ಮೀ ಮಚ್ಚಿನ ಹಾಗೂ ನ್ಯಾಯವಾದಿ ಧನಂಜಯ ರಾವ್ ಅವರನ್ನೂ ಆಯ್ಕೆ ಮಾಡಲಾಯಿತು. ವಿವಿಧ ಸಂಘಟನೆಗಳ ಮುಖಂಡರುಗಳನ್ನು ಸಹ ಸಂಚಾಲಕರಾಗಿ ಹಾಗೂ ಹಿರಿಯರನ್ನು ಗೌರವ ಸಲಹಾಕಾರರಾಗಿ ಸೇರಿಸಿಕೊಂಡು ವಿಸ್ತೃತ ಸಮಿತಿಯನ್ನು ರಚಿಸಲು ನಿರ್ಧರಿಸಲಾಯಿತು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.