ವರ್ತಮಾನದ ಮಣಿಪುರದಲ್ಲಿ ಅಶಾಂತಿ ಸೃಷ್ಠಿಯಾಗಿದೆ. ಸಮುದಾಯಗಳ ಮಧ್ಯೆ ಅಪನಂಬಿಕೆ ಹೆಚ್ಚಿದ್ದು, ಸೌಹಾರ್ದತೆ ಇಲ್ಲದಾಗಿದೆ. ಈ ಸಂದರ್ಭ ಇತಿಹಾಸದ ಪುಟಗಳನ್ನು ತಿರುವಿ ಈ ನೆಲವನ್ನು ಆಳಿದ್ದ ಮಹಾರಾಜನೋರ್ವನನ್ನು ನೆನಪಿಸಿ, ಸಾಮಾಜಿಕ ಸೌಹಾರ್ದತೆಯ ಹಾದಿಯಲ್ಲಿ ಮುನ್ನಡೆಯುವ ಅಗತ್ಯವಿದೆ. 18 ನೇ ಶತಮಾನದಲ್ಲಿ ಮಣಿಪುರದ ಅಖಂಡತೆ, ಸೌಹಾರ್ದ, ಧಾರ್ಮಿಕ ಸಹಿಷ್ಣುತೆಗೆ ಕಾರಣನಾಗಿದ್ದ ರಾಜಶ್ರೀ ಭಾಗ್ಯಚಂದ್ರ ಜೈಸಿಂಗನ ಬದುಕಿನ ಕಥಾನಕ ಇಲ್ಲಿದೆ.
ಪಂಹೇಬಾ ಹೇಳಿ ಕೇಳಿ ಅಂತಿಂಥ ರಾಜನಲ್ಲ. ಮೇಧಾವಿ, ಪರಾಕ್ರಮಿ ಮಾತ್ರವಲ್ಲ ಧರ್ಮಶ್ರದ್ಧೆಯುಳ್ಳ, ಕಲೆ ಸಂಸ್ಕೃತಿಯಲ್ಲಿ ವಿಶ್ವಾಸ ಹೊಂದಿದ್ದ ಮಹಾರಾಜನಾಗಿದ್ದ. ಹಿಂದಿನ ಲೀಪಾಕ್ ಎಂಬ ಪ್ರದೇಶಕ್ಕೆ ಇಂದಿನ ಮಣಿಪುರ ಹೆಸರು ಬರಲು ಕಾರಣೀಕರ್ತನಾದವನೇ ಮಹಾರಾಜ ಪಂಹೇಬಾ.
18 ನೇ ಶತಮಾನವು ಮಣಿಪುರದ ಚರಿತ್ರೆಯಲ್ಲಿ ಹೊಸ ಬೆಳಕನ್ನು ತಂದಿತ್ತು. ಕ್ರಿ.ಶ 1709 ರಲ್ಲಿ ಸಿಂಹಾಸನ ಏರಿದ ಪಂಹೇಬಾನನ್ನು ಬಡವರ ಬಂಧು(ಗರೀಬ್ ನವಾಜ್) ಎಂದೂ ಕರೆಯಲಾಗುತ್ತದೆ. ಮೈತಿ ಸಮೂಹದಲ್ಲಿಯೇ ಹೆಸರಾಂತ ರಾಜ ಎಂದು ಬಿರುದು ಪಡೆದಿದ್ದ ಈತ ಜನಿಸಿದ್ದು 1690 ರಲ್ಲಿ. 1751 ರ ತನಕ ಅಂದರೆ ಒಟ್ಟು 4 ದಶಕಗಳ ಕಾಲ ಈತ ಮಣಿಪುರದಲ್ಲಿ ತನ್ನ ಆಳ್ವಿಕೆಯನ್ನು ನಡೆಸುತ್ತಾನೆ. ಈತ ಒಂದರ್ಥದಲ್ಲಿ ಮಣಿಪುರದ ಚಕ್ರವರ್ತಿ ಎಂದೇ ಕರೆಸಿಕೊಂಡಿದ್ದ. ಇದಕ್ಕೆ ಕಾರಣಗಳು ಇವೆ. ಈತನ ಬಾಲ್ಯವು ಹಲವು ಸಾಹಸ ಮತ್ತು ವಿಸ್ಮಯಗಳಿಂದ ಕೂಡಿತ್ತು ಮಾತ್ರವಲ್ಲ ಈತ ಗುಡ್ಡಗಾಡಿನ ಪ್ರತಿಯೊಂದು ವಠಾರಗಳು, ಜನವಾಸ ಕೇಂದ್ರಗಳು ಸಹಿತ ಅಲ್ಲಿನ ಭೌಗೋಳಿಕತೆಯ ಬಗ್ಗೆ ಎಳೆ ವಯಸ್ಸಿನಲ್ಲಿಯೇ ಅರಿತಿದ್ದ ಈತ. ಮಣಿಪುರದ ಅಂದಿನ ದೊರೆ ಚರೈರೋಂಗ್ಬಾ ಮತ್ತು ಆತನ ರಾಣಿಯರಲ್ಲಿ ಓರ್ವಾಕೆಯಾದ ನಂಗ್ಶೆಲ್ ಚೈಬೀ ಅವರಿಗೆ ಜನಿಸಿದ ಪುತ್ರನೇ ಪಂಹೇಬಾ. ಅಂದಿನ ಕಾಲದಲ್ಲಿದ್ದ ಮತ್ತೊಂದು ಹೇಯ ಮತ್ತು ಅಮಾನುಷ ಸಂಗತಿಯೆಂದರೆ ಮಹಾರಾಣಿಯ ಹೊರತಾಗಿ ಯಾವ ರಾಣಿಯರಿಗೂ ಗಂಡು ಸಂತಾನ ಇರಬಾರದಾಗಿತ್ತು. ಹಾಗೇ ಇದ್ದಲ್ಲಿ ಅಂತಹ ಗಂಡು ಮಕ್ಕಳಿಗೆ ಸಾವಿನ ದವಡೆ ತೋರಿಸಲಾಗುತ್ತಿತ್ತು. ಆದರೆ ಪನ್ಹೇಬಾ ಅದೇಗೋ ತನ್ನ ಸಾವಿನ ದವಡೆಯಿಂದ ತಪ್ಪಿಸಿಕೊಂಡಿದ್ದ, ಆತನ ತಾಯಿ ರಾಣಿ ನಂಗ್ಶೆಲ್ ಈತನನ್ನು ಆಕೆಯ ತಂದೆಯ ಸಹಾಯದಿಂದ ನಾಗಾ ಪಾಳೆಗಾರರ ಸುಪರ್ದಿಯಲ್ಲಿ ಬೆಳೆಯುವಂತೆ ಮಾಡಿದಳು. ಇತ್ತ ರಾಜ ಚರೈರೋಂಗ್ಬಾಗೆ ಮಹಾರಾಣಿಯಲ್ಲಿ ಗಂಡು ಸಂತಾನ ಇಲ್ಲದ ಕಾರಣ ಮುಂದೇನು ಎಂಬ ಪ್ರಶ್ನೆ ಕಾಡುತ್ತದೆ. ಒಂದು ದಿನ ಸುತ್ತಮುತ್ತಲಿನ ಹಳ್ಳಿಗಳಿಗೆ ಭೇಟಿ ನೀಡುವ ಸಂದರ್ಭ ಓರ್ವ ಸುಂದರನಾದ ಬಾಲಕ ತನ್ನ ಮಿತ್ರರೊಂದಿಗೆ ಆಟವಾಡುತ್ತಿರುವುದು ರಾಜನ ಕಣ್ಣಿಗೆ ಬೀಳುತ್ತದೆ, ಆತನನ್ನು ದತ್ತು ತೆಗೆದುಕೊಳ್ಳುವ ನಿರ್ಧಾರವನ್ನು ಆತ ಮಾಡುತ್ತಾನೆ. ಋಣಾನುಬಂಧವೋ, ಆ ಕಾಲನ ಮಹಿಮೆಯೋ ಗೊತ್ತಿಲ್ಲ ಆ ಮಗುವೆ ಪಂನ್ಹೇಬಾ ಆಗಿರುತ್ತಾನೆ. ಹೀಗೆ ರಾಜಕುಮಾರ ಅರಮನೆಗೆ ಮಗದೊಮ್ಮೆ ಪ್ರವೇಶಿಸುತ್ತಾನೆ ಮಾತ್ರವಲ್ಲ ತಂದೆಯ ಮರಣದ ನಂತರ ಮಣಿಪುರದ ಅರಸನಾಗುತ್ತಾನೆ.
ಮಾನವನಿಗೆ ಸಂಘರ್ಷಗಳೇನೂ ಹೊಸತಲ್ಲ, ಪ್ರತಿ ಕಾಲಘಟ್ಟಗಳಲ್ಲೂ ಸಂಘರ್ಷಗಳು ಭೂಮಿ, ಆರ್ಥಿಕತೆ, ಪಾರಮ್ಯಕ್ಕಾಗಿ ನಡೆಯುತ್ತಿರುತ್ತವೆ. ಇನ್ನು ರಾಜ್ಯವಾಳುವ ಅರಸನಿಗೆ ಇಂತಹ ಸಂಘರ್ಷಗಳೇ ಕ್ಷಾತ್ರದ ಕಿಚ್ಚನ್ನು ಹೆಚ್ಚಿಸಿ, ತಮ್ಮ ಪ್ರಜೆಗಳ ಕ್ಷೇಮದ ಜೊತೆಯಲ್ಲಿ ಅವರನ್ನು ರಕ್ಷಿಸುವ ಗುರುತರ ಜವಾಬ್ದಾರಿಯನ್ನು ನೆನಪಿಸುವಂತೆ ಮಾಡುತ್ತವೆ. ಹೀಗೆ ಮಣಿಪುರದ ಸಿಂಹಾಸನವನ್ನು ಅಲಂಕರಿಸಿದ ಪಂಹೇಬಾನಿಗೂ ಮಯನ್ಮಾರ್ ರಾಜರ ಆಕ್ರಮಣಗಳು ಹೊಸತೇನಾಗಿರಲಿಲ್ಲ. ಬರ್ಮಾದ ಸೈನಿಕರು ಮಣಿಪುರದ ಮೇಲೆ ಶತಮಾನಗಳಿಂದಲೂ ಆಕ್ರಮಣ ಮತ್ತು ಅತಿಕ್ರಮಣವನ್ನು ನಡೆಸುತ್ತಲೇ ಬಂದಿದ್ದರು. 1562 ರಲ್ಲಿ ಬರ್ಮಾವನ್ನು ಆಳುತ್ತಿದ್ದ ಟ್ವಾಂಗು ರಾಜವಂಶಜ ಬಯಿನುವಾಂಗ್ ಮಣಿಪುರದ ಮೇಲೆ ದಾಳಿ ಎಸೆದ ಪರಿಣಾಮ ಅಂದು ಸಂಪೂರ್ಣ ಮಣಿಪುರವೇ ನೆಲಕ್ಕಚ್ಚಿತ್ತು, ಭೀಕರ ಯುದ್ಧದಲ್ಲಿ ಹಲವು ಅಮಾಯಕರು ಮಡಿದರು. ಇನ್ನು ಮಣಿಪುರದ ಸದ್ದಡಗಿತು ಎನ್ನುವಷ್ಟರಲ್ಲೇ ಮಣಿಪುರವು ತನ್ನ ಕಳೆದ ಹೋದ ಶಕ್ತಿಯನ್ನು, ವರ್ಚಸ್ಸನ್ನು ಕ್ರೋಢೀಕರಿಸಿ ನಿಧಾನವಾಗಿ ಎದ್ದು ನಿಂತಿತು ಮಾತ್ರವಲ್ಲ ಸ್ವತಂತ್ರವಾಯಿತು. 1725 ರಲ್ಲಿ ಪನ್ಹೇಬಾ ತನ್ನ ಧೀಶಕ್ತಿಯಿಂದ ಮತ್ತು ಸೇನಾಬಲದ ಪರಿಣಾಮ ಎರಡು ಶತಮಾನದ ಹಿಂದಿನ ಬರ್ಮಾದ ದಾಳಿಗೆ ಸೇಡನ್ನು ತೀರಿಸಿದ್ದ, ಮಾತ್ರವಲ್ಲ ಬರ್ಮಾ ಸೇನೆಯನ್ನು ಬಗ್ಗು ಬಡಿದ. ಸೋತ ಬರ್ಮಾದ ರಾಜ ಶಾಂತಿ ಒಪ್ಪಂದದ ದಾರಿ ಹಿಡಿದ. ಸೋತ ನಂತರವೂ ಬರ್ಮಾದ ರಾಜನು ಪನ್ಹೇಬನಲ್ಲಿ ಆತನ ಮಗಳಾದ ಸತ್ಯಮಾಲಳನ್ನು ತನಗೆ ಮದುವೆ ಮಾಡಿ ಕೊಡುವಂತೆ ಕೇಳಿಕೊಂಡ. ಇದನ್ನು ಒಪ್ಪಿಕೊಂಡ ಆತ ಮದುವೆಯ ದಿನದಂದು ವೇಷ ಮರೆಸಿಕೊಂಡ ಮಣಿಪುರದ ಸೈನಿಕರು ಬರ್ಮಾದ ಸೈನಿಕರ ಮೇಳೆ ದಾಳಿ ನಡೆಸಿ ಅವರನ್ನು ನರಮೇಧಗೈದರು. ಹೀಗೆ ಆತ ಎರಡನೇ ಬಾರಿಗೆ ಬರ್ಮಾದ ಸೈನಿಕರು ಮತ್ತು ರಾಜನಿಗೆ ಮಣ್ಣುಮುಕ್ಕಿಸಿದ್ದ.
ಪಂಹೇಬಾ ಎಷ್ಟು ಪರಾಕ್ರಮಿಯೋ ಆಷ್ಟೇ ದಯಾಳುವು ಆಗಿದ್ದ. ಮಣಿಪುರದಲ್ಲಿ ಹಿಂದೂ ಧರ್ಮವು ಗಟ್ಟಿಯಾಗಿ ಬೇರೂರುವಂತೆ ಮಾಡಿದ ಕೀರ್ತಿ ಈತನಿಗೆ ಸಲ್ಲುತ್ತದೆ. ರಾಮನಂದಿ ವಿಭಾಗದ ವೈಷ್ಣವ ತತ್ವ ಪಥವನ್ನು ಮಣಿಪುರಕ್ಕೆ ಪರಿಚಯಿಸಿದ ರಾಜನೇ ಪಂಹೇಬಾ. 1717 ರಲ್ಲಿ ವೈಷ್ಣವ ತತ್ವವನ್ನು ತನ್ನ ರಾಜ್ಯ ಧರ್ಮವನ್ನಾಗಿಸಿದ. 1724 ರಲ್ಲಿ ತನ್ನ ರಾಜ್ಯಕ್ಕೆ ʼಮಣಿಪುರʼ ಎಂಬ ಸಂಸ್ಕೃತ ಹೆಸರನ್ನಿಟ್ಟ.
ಪಂಹೇಬಾಗೆ ಒಟ್ಟು ಏಳು ಮಂದಿ ಗಂಡು ಮಕ್ಕಳು ಇರುತ್ತಾರೆ. ಮಹಾರಾಣಿಯಲ್ಲಿ ಹುಟ್ಟಿದಾತನ ಹೆಸರು ಶ್ಯಾಮ ಶಾ. ಉಳಿದಂತೆ ಅಜಿತ ಶಾ, ಉಗತ್ ಶಾ, ನುನ್ ಶಾ, ಟೊಂಗ್ ಶಾ, ಭರತ್ ಶಾ, ಶತ್ರುಘ್ನ ಶಾ ಎರಡನೇ ರಾಣಿಯಲ್ಲಿ ಜನಿಸಿದ ಪುತ್ರರು. ಮಹಾರಾಣಿಯಲ್ಲದ ಇತರೆ ರಾಣಿಯರಲ್ಲಿ ಜನಿಸಿದ ಗಂಡು ಕುಡಿಗಳನ್ನು ಕೊಲ್ಲುವ ಅಮಾನುಷ ಪದ್ಧತಿಯನ್ನು ನಿಲ್ಲಿಸಿದ ಕಾರಣ ಇವರೆಲ್ಲರೂ ಬದುಕುಳಿದಿದ್ದರು. ರಾಯ ಪಂಹೇಬಾ ಮತ್ತು ಆತನ ಹಿರಿಯ ಮಗ ಮುಂದಿನ ರಾಜ ಶ್ಯಾಮ ಶಾ ಬೇಟೆಗೆಂದು ಹೋಗಿದ್ದಾಗ ಅವರನ್ನು ಅಮಾನುಷವಾಗಿ ಹತ್ಯೆಗೈಯ್ಯಲಾಗುತ್ತದೆ. 1751 ರಲ್ಲಿ ಪಂಹೇಬಾ ಸ್ವಂತ ಮಗನಾದ ಅಜಿತ್ ಶಾ ಈ ದುಷ್ಕೃತ್ಯವನ್ನು ಎಸಗುತ್ತಾನೆ. ಮುಂದಿನ ಐದು ವರ್ಷಗಳ ಕಾಲ ಆಳ್ವಿಕೆ ನಡೆಸಿದ್ದ ಅಜಿತ ಶಾನನ್ನು ನಂತರ ಪ್ರಜೆಗಳೇ ರಾಜ್ಯದಿಂದ ಓಡಿಸುತ್ತಾರೆ. ನಂತರ ಎರಡು ವರ್ಷಗಳ ಕಾಲ ಭರತ್ ಶಾ ಆಳ್ವಿಕೆ ನಡೆಸುತ್ತಾನೆ. ಈ ಹಿಂದೆ ತೀರಿ ಹೋದ ಶ್ಯಾಮ ಶಾ ನಿಗೆ ಇಬ್ಬರು ಪುತ್ರರು ಇರುತ್ತಾರೆ ಓರ್ವನ ಹೆಸರು ಗೋರ್ ಶಾ ಮತ್ತೋರ್ವ ಜೈ ಸಿಂಗ ಇವರು ಮುಂದಿನ ಉತ್ತರಾಧಿಕಾರಿಗಳಾಗಿರುತ್ತಾರೆ. ತಮ್ಮ ಚಿಕ್ಕ ವಯಸ್ಸಿನಲ್ಲಿ ಅದರಲ್ಲೂ ತಮ್ಮ ತಂದೆಯವರ ಹತ್ಯೆಯ ಬಳಿಕ ತಮ್ಮ ತಾಯಿಯೊಂದಿಗೆ ಅರಮನೆ ಬಿಟ್ಟ ಇವರು ಕಿರಿ ಶಿಖರಗಳಲ್ಲಿ, ಗುಡ್ಡಗಾಡುಗಳಲ್ಲಿ ವಾಸಿಸಿ ಕೆಲ ವರ್ಷಗಳನ್ನು ಕಳೆಯುತ್ತಾರೆ. ಭರತ್ ಶಾ ಮತ್ತು ಅಜಿತ್ ಶಾ ಅವರಿಂದ ಉಪಟಳ ಮತ್ತು ಆಕ್ರಮಣಗಳಿಂದ ತಪ್ಪಿಸಿಕೊಳ್ಳುವಲ್ಲಿ ಯಶಸ್ವಿಯಾಗುತ್ತಾರೆ. ಈ ಸಂದರ್ಭ ಗುಡ್ಡ, ಕಾಡು, ಗಿರಿಶಿಖರಗಳಲ್ಲಿ ಕಷ್ಟ ಕೋಟಲೆಗಳನ್ನು ಅನುಭವಿಸಿದ ಜೈ ಸಿಂಗನ ಸಾಹಸಗಾಥೆಗಳೂ ವಿಸ್ಮಯಕಾರಿಯಾಗಿವೆ. ಈತ ಗುಡ್ಡದ ಜನರೊಂದಿಗೆ ಉತ್ತಮ ಸ್ನೇಹವನ್ನು ಸಂಪಾದಿಸುತ್ತಾನೆ. ಅವರನ್ನೆಲ್ಲರನ್ನೂ ತನ್ನ ಮಿತ್ರರೆಂದು ಸಂಬೋಧಿಸುತ್ತಾನೆ. ಈತನನ್ನು ಅವರು ಚಿಂಗ್ ಎಂದು ಕರೆಯುತ್ತಾರೆ, ಬ್ರಿಟಿಷರು ಮತ್ತು ಅಸ್ಸಾಮಿಗರು ಈತನಿಗೆ ಜೈ ಸಿಂಗ ಎಂಬ ಹೆಸರಿಂದಲೇ ಸಂಭೋಧಿಸುತ್ತಾರೆ. ಮಣಿಪುರದ ಉತ್ತರಾಧಿಕಾರದ ಪ್ರಶ್ನೆ ಬಂದಾಗ ತನ್ನ ಸಹೋದರನಾದ ಗೋರ್ ಸಿಂಗನು ಒಂದು ಉತ್ತಮ ರಾಜೀಸೂತ್ರವನ್ನು ಮುಂದಿಡುತ್ತಾನೆ. ಆಳ್ವಿಕೆಯು ಒಂದು ವರ್ಷ ತನಗೆ ಮತ್ತೊಂದು ವರ್ಷ ನಿನಗಿರಲಿ ಎಂದು ಹೇಳಿ, ಕೇವಲ ಎರಡು ವರ್ಷಗಳಲ್ಲಿ ಅವರ ಮಧ್ಯೆ ಕಲಹ ಏರ್ಪಡುತ್ತದೆ. ಈ ಸಂದರ್ಭ ಅಧಿಕಾರದ ಸೂತ್ರ ಸರಿಬರುವುದಿಲ್ಲ, ಇಬ್ಬರ ಮಧ್ಯೆ ಕಲಹ ಮತ್ತು ಅಪನಂಬಿಕೆಗಳೇ ಹೆಚ್ಚಾಗುತ್ತವೆ. ನಂತರ ಜೈ ಸಿಂಗನನ್ನು ಗಡಿಪಾರು ಮಾಡಲಾಗುತ್ತದೆ. ನಂತರ ಜೈ ಸಿಂಗ ತನ್ನ ಸೋದರ ಮಾವ ಮೊಯಿರಾಂಗ ನಲ್ಲಿದ್ದ ಜಮೀನ್ದಾರ ಖೇಲಿ-ನುಂಗ್ವಾ ಟೆಲಿಬಾ ನ ಆಶ್ರಯ ಪಡೆಯುತ್ತಾನೆ. ಅಲ್ಲಿಗೂ ತಲುಪಿದ ಸಹೋದರ ಗೋರ್ ಸಿಂಗ್ ತನ್ನ ಮಾವನ ಸಹಾಯದಿಂದ ಜೈ ಸಿಂಗನ ಹತ್ಯೆ ಮಾಡಲು ನಿರ್ಧರಿಸುತ್ತಾನೆ. ಆದರೆ ಈ ನಿರ್ಧಾರದ ಬಗ್ಗೆ ತಿಳಿದ ಜೈ ಸಿಂಗ್ ಅಲ್ಲಿಂದ ಕೊಹಿಮಾ ಗೆ ಪ್ರಯಾಣ ಬೆಳೆಸಿ ಅಲ್ಲಿಂದ ಇಂದಿನ ಅಸ್ಸಾಂನಲ್ಲಿ ಆಳ್ವಿಕೆ ನಡೆಸುತ್ತಿದ್ದ ಅಹೋಂ ರಾಜ ಸ್ವರ್ಗದೇವೋ ರಾಜೇಶ್ವರಿ ಸಿಂಗನ ಆಸ್ಥಾನಕ್ಕೆ ತಲುಪುತ್ತಾನೆ. ನಿರಾಶ್ರಿತನಾಗಿ ಅಲ್ಲಿಗೆ ತಲುಪಿದ ಈ ಜೈಸಿಂಗನು ನಿಜವಾದ ರಾಜನೇ ಅಥವಾ ಉಪದ್ರವಿಯೇ ಎಂದು ತಿಳಿಯಲು ಒಂದು ಸವಾಲನ್ನು ಹಾಕುತ್ತಾನೆ. ಆ ಪರೀಕ್ಷೆ ಮತ್ತು ಸವಾಲು ಏನೆಂದರೆ ಸಾರ್ವಜನಿಕರ ಸಮ್ಮುಖದಲ್ಲಿ ಜೈ ಸಿಂಗನು ಕಾಡಾನೆಯ ಜೊತೆ ಸೆಣೆಸಬೇಕು ಮತ್ತು ಅದನ್ನು ಹಿಡಿದು ಮಣಿಸಬೇಕು. ಇದರಲ್ಲಿ ಗೆದ್ದರಷ್ಟೇ ಅಸ್ಸಾಂ ಸಾಮ್ರಾಜ್ಯದಲ್ಲಿ ಜೈ ಸಿಂಗನಿಗೆ ಆಶ್ರಯ ಎಂಬುದು ರಾಜಾಜ್ಞೆಯಾಗಿರುತ್ತದೆ. ಜೈ ಸಿಂಗನು ತನ್ನ ತಾತನಂತೆ ಶ್ರೀಕೃಷ್ಣನ ಪರಮ ಭಕ್ತನಾಗಿರುತ್ತಾನೆ, ಅಸ್ಸಾಂ ರಾಜನ ಸವಾಲನ್ನು ಹೇಗೆ ಸ್ವೀಕರಿಸುವುದು ಎಂದು ತಿಳಿಯದೆ ರಾತ್ರಿಯಿಡಿ ಜಾಗರಣೆ ನಡೆಸಿ ಶ್ರೀಕೃಷ್ಣನನ್ನು ಸ್ಮರಿಸಿ ಪೂಜಿಸುತ್ತಾನೆ.
ಜಾನಪದ ಕಥೆಯ ಪ್ರಕಾರ ಶ್ರೀಕೃಷ್ಣನು ಗೋಪಾಲಕನ ವೇಷದಲ್ಲಿ ಬಂದು, ಕನಸಲ್ಲಿ ಜೈಸಿಂಗನಿಗೆ ಹರಸುತ್ತಾನೆ. ಮರುದಿನ ಬೆಳಗ್ಗೆ ಆನೆಯನ್ನು ಪಳಗಿಸುವ ಮಣಿಸುವ ದಿನ ಬರುತ್ತದೆ, ಜೈ ಸಿಂಗನು ಸ್ನಾನಾದಿಗಳನ್ನು ಮುಗಿಸಿ ಶುಭ್ರ ಬಟ್ಟೆಯನ್ನು ಧರಿಸಿ ಅಖಾಡಕ್ಕೆ ಇಳಿಯುತ್ತಾನೆ, ಶ್ರೀಕೃಷ್ಣನನ್ನು ಜಪಿಸಿ ಆನೆಯ ಸಮೀಪಕ್ಕೆ ಬಂದು ನಿಲ್ಲುತ್ತಾನೆ. ಆಚ್ಚರಿಯ ವಿಚಾರವೇನೆಂದರೆ ಬಹಳ ಉಗ್ರ ಸ್ವಾಭಾವದ ಆನೆ ಅಂದು ಶಾಂತವಾಗಿರುತ್ತದೆ ಮಾತ್ರವಲ್ಲ ಈತನ ಮುಂದೆ ಮುಂಡಿಯೂರಿ ತನ್ನ ದಂತಗಳನ್ನು ನೆಲದೊಳಕ್ಕೆ ಉಳಿಸುತ್ತದೆ. ನಂತರ ಎದ್ದು ನಿಲ್ಲುವ ಆನೆ ಗಟ್ಟಿ ದನಿಯಲ್ಲಿ ಅರಚಿ ಜೈ ಸಿಂಗನಿಗೆ ತನ್ನ ಸಮರ್ಥನೆಯನ್ನು ಸೂಚಿಸುತ್ತದೆ. ನಂತರ ಅಹೋಂ ರಾಜನು ಜೈ ಸಿಂಗನಲ್ಲಿ ಕ್ಷಮೆಯನ್ನು ಯಾಚಿಸಿ ಅದೇ ನಾಡಿನಲ್ಲಿ ಆಶ್ರಯವನ್ನು ನೀಡುತ್ತಾನೆ. ಒಂದು ದಿನ ಶ್ರೀಕೃಷ್ಣ ಕನಸಲ್ಲಿ ಬಂದು ನೀನಿನ್ನು ನಿನ್ನ ತಾಯ್ನಾಡಿಗೆ ತೆರಳಬಹುದು ಮತ್ತು ವಿಜಯವು ನಿನ್ನದಾಗಲಿದೆ ಎಂದು ಹೇಳುತ್ತಾನೆ. ಮರುದಿನ ಅಂದರೆ 1763 ರಲ್ಲಿ ಗೋರ್ ಶಾ ತೀರಿಕೊಳ್ಳುತ್ತಾನೆ. ನಂತರ ಜೈ ಸಿಂಗನು ಮಣಿಪುರದ ಸಿಂಹಾಸನವನ್ನು ಏರುತ್ತಾನೆ. ತನಗೆ ಮೋಸವೆಸಗಿದ ಸೋದರ ಮಾವ ತೆಲಿಬಾನನ್ನು ಸಾವಿನ ದವಡೆಗೆ ನೂಕಲಾಗುತ್ತದೆ ಮಾತ್ರವಲ್ಲ ತನ್ನ ರಾಜ್ಯಕ್ಕೆ ಆತನು ಆಳುತ್ತಿದ್ದ ಮೊಯಿರಾಂಗ್ ಪ್ರಾಂತ್ಯವನ್ನು ಸೇರಿಸುತ್ತಾನೆ. ಮಣಿಪುರದ ಅಖಂಡತೆಗೆ ಹರಿದು ಹಂಚಿಹೋದ ಸಣ್ಣ ಸಣ್ಣ ಸಾಮ್ರಾಜ್ಯಗಳನ್ನು ಒಟ್ಟುಗೂಡಿಸುವ ಕಾರ್ಯವು ಜೈ ಸಿಂಗನಿಂದಾಗುತ್ತದೆ. ಗುಡ್ಡದ ಬುಡಕಟ್ಟು ಸಮೂಹದ ವಿಶ್ವಾಸವನ್ನು ಗಳಿಸಿದ ಜೈ ಸಿಂಗ ಆ ಪ್ರದೇಶಗಳನ್ನೂ ಕೂಡಾ ತನ್ನ ಸಾಮ್ರಾಜ್ಯದ ಭಾಗವಾಗಿಸುತ್ತಾನೆ. ತನ್ನ ಆಳ್ವಿಕೆಯಲ್ಲಿ ನಿಷ್ಪಕ್ಷಪಾತ ಮತ್ತು ಉತ್ತಮ ರೀತಿಯ ಆಡಳಿತವನ್ನು ನೀಡುವ ಸಲುವಾಗಿ ಮಂತ್ರಿವರ್ಗದಲ್ಲಿ ಎಲ್ಲ ಸಮುದಾಯಗಳ ಪ್ರತಿನಿಧಿಗಳನ್ನು ನೇಮಿಸುತ್ತಾನೆ. ಬರ್ಮಾದ ಸೈನಿಕರು ಆಗಿದ್ದಾಂಗೆ ಮಣಿಪುರ ತ್ರಿಪುರಾದ ಮೇಲೆ ದಾಳಿ ಎಸಗುತ್ತಿದ್ದಾಗ ಸಮರ್ಥವಾಗಿ ಹಿಮ್ಮೆಟ್ಟಸಿದ ಕೀರ್ತಿ ಈತನಿಗೆ ಸಲ್ಲುತ್ತದೆ. ಅಸ್ಸಾಂನ ಅಹೋಂ ರಾಜನೊಂದಿಗೆ ಮೈತ್ರಿ ಮಾಡಿ ವೈವಾಹಿಕ ಸಂಬಂಧವನ್ನು ಬೆಳೆಸುವ ಈತ ತನ್ನ ಮಗಳನ್ನು ಅಹೋಂ ರಾಜನಿಗೆ ನೀಡುತ್ತಾನೆ. ನಂತರ ತನ್ನ ಮೊಮ್ಮಗಳನ್ನು ಕೂಡಾ ಅಸ್ಸಾಂ ರಾಜಕುಮಾರನೊಂದಿಗೆ ಮದುವೆ ಮಾಡಿಸುತ್ತಾನೆ.
ಮಣಿಪುರದಲ್ಲಿ ರಾಮನಂದಿ ವೈಷ್ಣವ ಮತ ಪ್ರಭಾವಕ್ಕೆ ತಂದಾತ ಭಾಗ್ಯಚಂದ್ರ ಜೈಸಿಂಗತನ್ನ ಗಡಿಪಾರು ಆಗಿದ್ದ ಸಮಯದಲ್ಲಿ ಜೈಸಿಂಗನು ಸಿಲ್ಹೆಟ್ ಪ್ರಾಂತ್ಯದ 15 ನೇ ಶತಮಾನದ ಸಂತ ಚೈತನ್ಯ ಮಹಾಪ್ರಭು(1486-1534) ಜನಿಸಿದ ಸ್ಥಳಕ್ಕೆ ತಲುಪುತ್ತಾನೆ. ಅದಾಗಲೇ ಬಂಗಾಳದಲ್ಲಿ ವೈಷ್ಣವ ತತ್ವದ ಪ್ರಭಾವ ಬಹಳಷ್ಟಿರುತ್ತದೆ. ಚೈತನ್ಯ ಮಹಾಪ್ರಭುಗಳ ಭಕ್ತಿ, ಶ್ರದ್ಧೆ, ಆಳವಾದ ತಪಸ್ಸು ಗೌಡಿಯಾ ವೈಷ್ಣವ ತತ್ವದ ಶಾಖೆಗಳು ಈಶಾನ್ಯದ ಹಲವು ರಾಜ್ಯಗಳಲ್ಲಿ ಪಸರಲು ಕಾರಣವಾಗುತ್ತವೆ. ಚೈತನ್ಯರ ವಂಶಜರಾದ ರಾಮನಾರಾಯಣ ಶಿರೋಮಣಿಯವರ ಪ್ರಭಾವಕ್ಕೆ ಒಳಗಾಗುವ ಜೈಸಿಂಗ ಸ್ವತಃ ಶ್ರೀಕೃಷ್ಣನ ಭಕ್ತನಾಗಿದ್ದು, ಶಿರೋಮಣಿಯವರನ್ನು ತನ್ನ ರಾಜ್ಯಕ್ಕೆ ಬರಮಾಡಿಕೊಂಡು ತನ್ನ ಪ್ರಜೆಗಳಿಗೆ ತತ್ವಗಳನ್ನು ಬೋಧಿಸುವಂತೆ ಕೇಳಿಕೊಳ್ಳುತ್ತಾನೆ. ನಂತರ ಹಲವು ಮಂದಿ ವೈಷ್ಣವ ಪಂಥದ ಪ್ರಚಾರ್ಯರು ಗುರುಗಳು ಮಣಿಪುರಕ್ಕೆ ತಲುಪಿ ದೇಗುಲಗಳು ಮಂದಿರಗಳ ನಿರ್ಮಾಣವು ನಡೆಯುತ್ತದೆ. ದೇಗುಲಗಳ ನಡೆಸಲು ಅನುಕೂಲವಾಗುವಂತೆ ದೇಗುಲಗಳಿಗೆ ಭತ್ತದ ಗದ್ದೆಗಳನ್ನು ಭೂಮಿಯನ್ನು ನೀಡಲಾಗುತ್ತದೆ. ಆ ಸಂದರ್ಭ ಮಣಿಪುರದ ರಾಸಲೀಲಾ ನಾಟ್ಯವು ಹೆಚ್ಚು ಪ್ರಚಲಿತಕ್ಕೆ ಬರುತ್ತದೆ. ಇಂದು ದೇಶದಲ್ಲಿರುವ ಒಟ್ಟು 8 ಶಾಸ್ತ್ರೀಯ ನಾಟ್ಯ ಪ್ರಕಾರಗಳಲ್ಲಿ ಈ ನಾಟ್ಯವು ಶಾಸ್ತ್ರೀಯ ಸ್ಥಾನಮಾನವನ್ನು ಹೊಂದಿದೆ. ತನ್ನ ಅರಮನೆಯಲ್ಲಿಯೇ ಶ್ರೀ ಗೋವಿಂದ ದೇಗುಲವನ್ನು ನಿರ್ಮಾಣ ಮಾಡಿದ ಈತ ತನ್ನ ಹೆಸರನ್ನು ಭಾಗ್ಯಚಂದ್ರ ಎಂದು ಬದಲಿಸುತ್ತಾನೆ. ಈತ ಆರಂಭಿಸಿದ್ದ ನಟ ಸಂಕೀರ್ತನ ( ನುಪ ಪಲ) ನೃತ್ಯ ಮತ್ತು ಪೂಜನಾ ವಿಧಾನವು ಇಂದಿಗೂ ಮಣಿಪುರದ ಅವಿಭಾಜ್ಯ ಅಂಗವಾಗಿದೆ. 2013 ರಲ್ಲಿ ಯುನೆಸ್ಕೋ ಈ ಕಲಾ ಪ್ರಕಾರವನ್ನು ಸಾಂಸ್ಕೃತಿಕ ಪರಂಪರೆಯ ಕೊಂಡಿ ಎಂದು ಕರೆದಿದ್ದು, ಜಗತ್ತಿನ ಸಾಂಸ್ಕೃತಿಕ ವೈವಿಧ್ಯತೆಯ ಭಾಗ ಎಂದು ಗುರುತಿಸಿದೆ. ಒಟ್ಟಿನಲ್ಲಿ ಈ ಭಾಗ್ಯಚಂದ್ರ ಜೈಸಿಂಗನ ಕಾಲಘಟ್ಟದಲ್ಲಿ ನಾಗರಿಕತೆಯ ಪುನರುತ್ಥಾನದ ಕಾರ್ಯವು ಮಣಿಪುರದಲ್ಲಾಗಿತ್ತು. ವೈಷ್ಣವ ಸಮ್ಮೇಳನ ಒಂದರಲ್ಲಿ ರಾಜ ಭಾಗ್ಯಚಂದ್ರ ಜೈಸಿಂಗನಿಗೆ ರಾಜಶ್ರೀ ಎಂಬ ಬಿರುದನ್ನು ಗುರುವರ್ಯರ ಸಮ್ಮುಖದಲ್ಲಿ ನೀಡಲಾಗುತ್ತದೆ. ಇಂದಿಗೂ ಮುರ್ಷಿದಾಬಾದ್ ಜಿಲ್ಲೆಯ ಗೋವಿಂದಬಾರಿ ಜಿಯಾಗಂಜ್ ಎಂಬಲ್ಲಿ ರಾಜನಿಗೆ ನೀಡಲ್ಪಟ್ಟ ಬಿರುದಿನ ಫಲಕವನ್ನು ನೋಡಬಹುದಾಗಿದೆ. 1798 ರಲ್ಲಿ ತನ್ನ ಅಧಿಕಾರಿಗಳೇ ಓರ್ವ ಬ್ರಾಹ್ಮಣನ ಹತ್ಯೆ ನಡೆಸಿದ್ದಾರೆ ಎಂಬ ಮಾಹಿತಿಯು ರಾಜ ಭಾಗ್ಯಚಂದ್ರನಿಗೆ ಸಿಗುತ್ತದೆ. ಇದರಿಂದ ಬಹಳ ನೊಂದ ರಾಜ ಪಾಪದಿಂದ ಮುಕ್ತನಾಗಲು ಬಯಸಿ ತನ್ನ ರಾಜ್ಯವನ್ನು ತೊರೆದು ನಬದ್ವೀಪಕ್ಕೆ ತೆರಳಿ ಆಧ್ಯಾತ್ಮ ಹಾದಿಯನ್ನು ತುಳಿಯಲು ನಿರ್ಧರಿಸುತ್ತಾನೆ. ಈ ಮಧ್ಯೆ ತ್ರಿಪುರಾ, ದಕ್ಕಾ ದಕ್ಷಿಣದಲ್ಲಿರುವ ಹಲವು ತೀರ್ಥ ಕ್ಷೇತ್ರಗಳನ್ನು ಸಂದರ್ಶಿಸುತ್ತಾನೆ. ಈತನ ಮಗಳಾದ ಬಿಂಬಾವತಿಯೂ ಈತನ ಜೊತೆಯಲ್ಲಿ ಬರುತ್ತಾಳೆ. ಕೆಲ ಕಾಲ ನಬದ್ವೀಪದಲ್ಲಿ ಇದ್ದ ರಾಜ ನಂತರ ವೃಂದಾವನಕ್ಕೆ ಹೋಗುವ ಇಚ್ಛೆಯನ್ನು ಮುಂದಿಡುತ್ತಾನೆ. ಭಾಗಬಂಗೋ ತಲುಪಿದಾಗ ತನ್ನ ಅಂತ್ಯವನ್ನು ಶ್ರೀಕೃಷ್ಣ ಸ್ಮರಣೆಯಲ್ಲಿಯೇ ಕಾಣುತ್ತಾನೆ. ಪುತ್ರಿ ಬಿಂಬಾವತಿಯು ತನ್ನ ಕೊನೆ ದಿನಗಳನ್ನು ವೃಂದಾವನದಲ್ಲಿಯೇ ಕಳೆಯುತ್ತಾಳೆ. ರಾಜಕೀಯವಾಗಿ, ಸಾಂಸ್ಕೃತಿಕವಾಗಿ, ಸಾಮಾಜಿಕವಾಗಿ, ಧಾರ್ಮಿಕವಾಗಿ ಮಣಿಪುರದಲ್ಲಿ ಬದಲಾವಣೆಯನ್ನು ತಂದ ರಾಜಶ್ರೀ ಇಂದಿಗೂ ಧರ್ಮ ಸಮನ್ವತೆಯ, ಸಾಮಾಜಿಕ ಬಾಂಧವ್ಯದ, ಸಮತ್ವ ಮತ್ತು ಶಾಂತಿಯ ಪಾಠವನ್ನು ಹೇಳುತ್ತಾನೆ. ಖಡ್ಗದಿಂದ ತನ್ನ ಜೀವನವನ್ನು ಆರಂಭಿಸಿದ್ದ ರಾಜಶ್ರೀ ಭಾಗ್ಯಚಂದ್ರ ಕೊನೆಯಲ್ಲಿ ತನ್ನ ಕೈಯ್ಯಲ್ಲಿ ಕಮಲವನ್ನು ಹಿಡಿದಿದ್ದ ಎಂದು ಇತಿಹಾಸ ತಜ್ಞ ಬಿಸ್ವನಾಥ ಶರ್ಮಾ ಹೇಳುತ್ತಾರೆ.
ಸಂಗ್ರಹ ಆಕರ: ವಿಕ್ರಂ ಸಂಪತ್ ಅವರ ‘Brave hearts of BHARAT’
ಬರಹ: ವಿವೇಕಾದಿತ್ಯ
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.