ಬೆಂಗಳೂರು: ಸಿದ್ದರಾಮಯ್ಯರ ಬಜೆಟ್ ಮೂಗಿಗೆ ತುಪ್ಪ ಸವರುವ ರೀತಿಯಲ್ಲಿದೆ ಎಂದು ಬಿಜೆಪಿ ರಾಜ್ಯ ಎಸ್ಸಿ ಮೋರ್ಚಾ ಅಧ್ಯಕ್ಷ ಹಾಗೂ ವಿಧಾನಪರಿಷತ್ ಸದಸ್ಯ ಛಲವಾದಿ ನಾರಾಯಣಸ್ವಾಮಿ ಅವರು ತಿಳಿಸಿದರು.
ಮಲ್ಲೇಶ್ವರದ ಬಿಜೆಪಿ ರಾಜ್ಯ ಕಾರ್ಯಾಲಯ “ಜಗನ್ನಾಥ ಭವನ”ದಲ್ಲಿ ಇಂದು ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ದಲಿತೋದ್ಧಾರಕ ಎನ್ನುವ ಕಾಂಗ್ರೆಸ್ಸಿಗರು ಬಿಜೆಪಿ ಜಾರಿಗೊಳಿಸಿದ 14 ಕಾರ್ಯಕ್ರಮಗಳನ್ನು ಸಿದ್ದರಾಮಯ್ಯ ಕೈಬಿಟ್ಟಿದ್ದಾರೆ. ನೂತನ ಶಿಕ್ಷಣ ನೀತಿ ರದ್ದು ಮಾಡಿದ್ದಾರೆ. ಪಠ್ಯ ಪರಿಷ್ಕರಿಸಿದ್ದಾರೆ. ರೈತರು ಮತ್ತಿತರರಿಗೆ ಜಾರಿ ಮಾಡಿದ್ದ ವಿದ್ಯಾನಿಧಿ ನಿಲ್ಲಿಸಿದ್ದಾರೆ. ಪ್ರತಿಯೊಂದು ಜಿಲ್ಲೆಗೆ ಗೋಶಾಲೆ ಕಟ್ಟುವ ಯೋಜನೆಯನ್ನು ಕೈಬಿಟ್ಟಿದ್ದಾರೆ. ರೈತಪರ ಎಪಿಎಂಸಿ ಕಾಯ್ದೆ ಬದಲಿಸಿದ್ದಾರೆ ಎಂದು ಟೀಕಿಸಿದರು.
ರೈತರಲ್ಲದವರು ಕೃಷಿ ಭೂಮಿ ಖರೀದಿಗೆ ಅವಕಾಶ ಕೊಟ್ಟಿದ್ದು, ಅದನ್ನು ಕೈಬಿಟ್ಟಿದ್ದಾರೆ. ‘ನಮ್ಮ ಕ್ಲಿನಿಕ್’ ಕೈಬಿಟ್ಟಿದ್ದಾರೆ. ಶಾಲೆಗಳಿಗೆ ಒಂದೇ ರೀತಿಯ ಬಣ್ಣವನ್ನು ಕೈಬಿಟ್ಟಿದ್ದಾರೆ. ಯುವಶಕ್ತಿ, ಸ್ತ್ರೀಸಾಮಥ್ರ್ಯ ಯೋಜನೆಗಳನ್ನು ಕೈಬಿಟ್ಟಿದ್ದಾರೆ ಎಂದು ಟೀಕಿಸಿದರು.
ರೈತ ಸಮ್ಮಾನ್ ಯೋಜನೆಯ ರಾಜ್ಯದ ಕೊಡುಗೆ 4 ಸಾವಿರವನ್ನು ಕೈಬಿಟ್ಟಿದ್ದಾರೆ. ಕೃಷಿಕ ಮಹಿಳೆಯರಿಗೆ ಮಾಸಿಕ 500 ರೂ. ಕೊಡುವ ಶ್ರಮಶಕ್ತಿಯನ್ನು ಕೈಬಿಟ್ಟಿದ್ದಾರೆ. ಅಗ್ನಿವೀರರಾಗಲು ಎಸ್ಸಿ, ಎಸ್ಟಿ ಯುವಕರಿಗೆ ತರಬೇತಿಯನ್ನು ರದ್ದು ಮಾಡಿದ್ದಾರೆ. ಅಂತರ್ಜಲ ಹೆಚ್ಚಿಸುವ ಜಲನಿಧಿ ಯೋಜನೆ, ಹಾಲು ಉತ್ಪಾದಕರ ಬ್ಯಾಂಕ್ ರದ್ದು, ವಿನಯ ಸಾಮರಸ್ಯ ಸ್ಕೀಂ ಕೈಬಿಟ್ಟಿದ್ದಾರೆ ಎಂದು ಆಕ್ಷೇಪಿಸಿದರು.
ಸಿದ್ದರಾಮಯ್ಯರ ಬಜೆಟ್ ಮೂಗಿಗೆ ತುಪ್ಪ ಸವರುವ ರೀತಿಯಲ್ಲಿದೆ ಎಂದ ಛಲವಾದಿ ನಾರಾಯಣಸ್ವಾಮಿ ಅವರು, ಅವರು 1995-2000, 2013ರಿಂದ 18ರವರೆಗೆ ಬಜೆಟ್ ಮಂಡಿಸಿದ್ದರು. ಅವನ್ನು ಅವಲೋಕನ ಮಾಡಿದಾಗ ಅವರು ಮಂಡಿಸಿದ ಬಜೆಟ್ಗಳ ಸ್ಥಿತಿಗತಿ ಅರ್ಥವಾಗುತ್ತದೆ. 2000ವರೆಗಿನ 5 ವರ್ಷಗಳಲ್ಲಿ ರಾಜ್ಯದ ಆರ್ಥಿಕ ಸ್ಥಿತಿ ಮಿಗತೆಯಿಂದ ಆರ್ಥಿಕ ದುಸ್ಥಿತಿ ಕಡೆ ನಡೆಯಿತು ಎಂದು ವಿವರಿಸಿದರು.
ನಂತರ ಎಸ್.ಎಂ.ಕೃಷ್ಣರ ನೇತೃತ್ವದ ಸರಕಾರ ಅಧಿಕಾರಕ್ಕೆ ಬಂದಾಗ ಅವರು ಹಣಕಾಸಿನ ಪರಿಸ್ಥಿತಿ ಕುರಿತು ಶ್ವೇತಪತ್ರ ಹೊರಡಿಸಿದ್ದರು. ಆಗ ರಾಜ್ಯದ ಆರ್ಥಿಕ ಸ್ಥಿತಿ ಶಿಥಿಲವಾದುದನ್ನು ತಿಳಿಸಿದ್ದರು. 2018ರಲ್ಲಿ ಅಧಿಕಾರದಿಂದ ಕೆಳಕ್ಕೆ ಇಳಿಯುವಾಗ ಸಾಲಕ್ಕೆ ರಾಜ್ಯವನ್ನು ಸಿಲುಕಿಸಿದ್ದನ್ನು ಅಂಕಿಅಂಶಗಳೇ ಹೇಳುತ್ತವೆ. ಅವರು 2.42 ಲಕ್ಷ ಕೋಟಿ ಸಾಲ ಮಾಡಿದ್ದರು ಎಂದು ಟೀಕಿಸಿದರು.
25 ಸಾವಿರ ಪೌರಕಾರ್ಮಿಕರನ್ನು ನಾವು ಖಾಯಂ ಮಾಡಿದ್ದೇವೆ. ಇನ್ನೂ 30 ಸಾವಿರ ಪೌರಕಾರ್ಮಿಕರಿದ್ದು ಅವರ ಬಗ್ಗೆ ಸಿದ್ದರಾಮಯ್ಯರು ಚಕಾರ ಎತ್ತಿಲ್ಲ ಎಂದು ಆಕ್ಷೇಪಿಸಿದರು. 8 ಲಕ್ಷ ವಿದ್ಯಾರ್ಥಿನಿಯರಿಗೆ ನಾವು ಉಚಿತ ಬಸ್ಪಾಸ್ ಕೊಟ್ಟಿದ್ದೆವು. ಇವತ್ತು ಮಹಿಳೆಯರೆಲ್ಲರಿಗೆ ಉಚಿತ ಪ್ರಯಾಣ ಘೋಷಿಸಿದ್ದು, ಯಾರೂ ಬಸ್ ಹತ್ತಲಾಗುತ್ತಿಲ್ಲ ಎಂದು ನುಡಿದರು.
ಲಂಬಾಣಿ ತಾಂಡಾಗಳನ್ನು ಕಂದಾಯ ಗ್ರಾಮವಾಗಿ ನೀವು ಮಾಡಲಿಲ್ಲ. ಹಕ್ಕುಪತ್ರ ನೀಡಿರಲಿಲ್ಲ. ಲಕ್ಷಗಟ್ಟಲೆ ಕುಟುಂಬಗಳಿಗೆ ನಾವು ಹಕ್ಕುಪತ್ರ ನೀಡಿದ್ದೇವೆ. ಆದರೆ, ಸಿದ್ದರಾಮಯ್ಯರು ಸುಳ್ಳುಗಳ ಮೂಲಕ ಅಧಿಕಾರಕ್ಕೆ ಬಂದಿದ್ದಾರೆ ಎಂದು ಆರೋಪಿಸಿದರು.
ಬೆಲೆಗಳು ಈಗ ಗಗನದಿಂದಾಚೆಗೆ ಹೋಗಿವೆ. ಸಿಎಂ ಅವರನ್ನು ಪ್ರಶ್ನೆ ಮಾಡಿದರೆ, ಇದು ಕೇಂದ್ರದ ವ್ಯಾಪ್ತಿಗೆ ಬರುತ್ತದೆ ಎನ್ನುತ್ತಾರೆ ಎಂದು ಆಕ್ಷೇಪಿಸಿದರು. ಹಿಂದೆ ಸಿದ್ದರಾಮಯ್ಯರ ಅಧಿಕಾರದ ಅವಧಿಯಲ್ಲಿ ಎಸ್ಸಿ, ಎಸ್ಟಿಯವರಿಗೆ ಮೀಸಲಿಟ್ಟ ಹಣವನ್ನು ಮೆಟ್ರೊ, ಕೆರೆಗಳಿಗೆ ಹೂಳೆತ್ತಲು, ಪಿಡಬ್ಲ್ಯೂಡಿಗೆ ನೀಡಲಾಗಿತ್ತು. 26 ಸಾವಿರ ಕೋಟಿ ಹಣದಲ್ಲಿ 20 ಸಾವಿರ ಕೋಟಿಯನ್ನು ಬೇರೆ ಬೇರೆ ಸ್ಕೀಂನಡಿ ನೀಡಿದ್ದರು ಎಂದು ದೂರಿದರು.
ಸಿದ್ದರಾಮಯ್ಯನವರು ಸುಳ್ಳು ಹೇಳುವುದರಲ್ಲಿ ನಿಪುಣ ಎಂದು ಟೀಕಿಸಿದ ಅವರು, ನಾವು ಗ್ಯಾರಂಟಿ ಸ್ಕೀಮಿನ ವಿರೋಧಿಗಳಲ್ಲ; ಗ್ಯಾರಂಟಿ ಎಂದರೆ ಅದು ಗ್ಯಾರಂಟಿಯಲ್ಲ. ಯೋಜನೆಗಳ ಅನುಷ್ಠಾನ ಆಗಿದೆಯೇ ಇಲ್ಲವೇ ಎಂದು ವಿರೋಧ ಪಕ್ಷವಾದ ನಾವು ಗಮನ ಹರಿಸಲಿದ್ದೇವೆ ಎಂದು ಎಚ್ಚರಿಸಿದರು. ನಂದಿನಿ ವಿಚಾರ, ಪೇಸಿಎಂ, 40 ಶೇಕಡಾ ಸೇರಿ ಹಲವಾರು ವಿಚಾರದಲ್ಲಿ ನಮ್ಮ ಮೇಲೆ ಗೂಬೆ ಕೂರಿಸುವ ಕೆಲಸ ಮಾಡಿದ್ದರು ಎಂದು ಆಕ್ಷೇಪಿಸಿದರು.
ಕಾಂಗ್ರೆಸ್ ಜನರನ್ನು ಗುಲಾಮರಂತೆ ಕಂಡಿದೆ. ಅವರ ಸಬಲೀಕರಣ ಮಾಡದೆ ಕಾಳು ಹಾಕುವ ಕೆಲಸ ಮಾಡುತ್ತಿದೆ ಎಂದು ನುಡಿದ ಅವರು, ಕಾಂಗ್ರೆಸ್ ಪಕ್ಷದ ಹಿಟ್ಲರ್ ಪರಂಪರೆಯನ್ನು ಟೀಕಿಸಿದರು. 34 ರೂ.ಗೆ ಕೆಜಿ ಅಕ್ಕಿ ಲಭಿಸುವುದೇ? ಹಾಲಿನ ದರ ಏರಿಕೆ ಮೂಲಕ ಆ ಹಣ ಹಾಲಿಗೆ ಹೋಗದೇ ಎಂದು ಅವರು ಪ್ರಶ್ನೆಯನ್ನು ಮುಂದಿಟ್ಟರು. ಇದು ವಂಚನೆ; ಇದು ಸರಿಯಾದ ಕ್ರಮವಲ್ಲ ಎಂದು ತಿಳಿಸಿದರು.
ರಾಷ್ಟ್ರಪತಿಗಳಾಗಿ ನೇಮಕವಾದ ಮುರ್ಮು ಅವರ ವಿರುದ್ಧ ಸಿದ್ದರಾಮಯ್ಯರು ಅವಹೇಳನಕಾರಿ ಮಾತನಾಡಿದ್ದರು ಎಂದು ತಿಳಿಸಿದರು. ಜೆಡಿಎಸ್ನಿಂದ ವಲಸೆ ಬಂದವರಾದ ಸಿದ್ದರಾಮಯ್ಯರವರು ಹಿಂದೆ ಧಮ್ಕಿ ಹಾಕಿ ಸ್ಥಾನ ಪಡೆದಿದ್ದರು ಎಂದು ನೆನಪಿಸಿದರು. ಆಗಿನಿಂದ ಆರಂಭವಾದ ಬ್ಲ್ಯಾಕ್ಮೇಲ್ ಈಗಲೂ ಮುಂದುವರಿದಿದೆ. ಹುಳ ಹುತ್ತ ಕಟ್ಟಿತು, ಸರ್ಪ ವಾಸ ಮಾಡಿತು ಎಂಬ ಸ್ಥಿತಿ ಕಾಂಗ್ರೆಸ್ ಮುಖಂಡರದು ಎಂದು ವಿವರಿಸಿದರು. ದಲಿತರನ್ನು ಕೇವಲ ಮತಬ್ಯಾಂಕ್ ಮಾಡಿಕೊಂಡು ಅನ್ಯಾಯ ಮಾಡಿದ್ದೀರಲ್ಲವೇ ಎಂದು ಪ್ರಶ್ನಿಸಿದರು. ನಾನೂ ದಲಿತ ಎನ್ನುವ ಸಿದ್ದರಾಮಯ್ಯರು ಅಧಿಕಾರಕ್ಕಾಗಿ ಜಾತಿಯನ್ನೂ ಮರೆತುಬಿಡುತ್ತಾರೆ ಎಂದು ಟೀಕಿಸಿದರು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.