ಮಧ್ಯಪ್ರದೇಶದ ಭಾವರಾ ಎಂಬ ಹಳ್ಳಿಯಲ್ಲಿ 1906ರಲ್ಲಿ ಹುಟ್ಟಿದ ಚಂದ್ರಶೇಖರ ತಿವಾರಿ ಮುಂದೆ ಸಂಸ್ಕೃತ ಓದಲು ಕಾಶಿಯಲ್ಲಿದ್ದಾಗ ಜೀವನದಲ್ಲಿ ತಿರುವು ಸಿಕ್ಕಿತು. ಕಾಶಿಯಲ್ಲಿ ಶಾಂತಿಯುತ ಮೆರವಣಿಗೆಯನ್ನು ಚದುರಿಸಲು ಪೊಲೀಸರು ನಿರ್ದಯವಾಗಿ ಲಾಠಿಚಾರ್ಜ್ ಮಾಡುತ್ತಿದ್ದಾಗ ದೂರದಲ್ಲಿ ನಿಂತಿದ್ದ 15 ವರ್ಷದ ಬಾಲಕ ಚಂದ್ರಶೇಖರ ಪೊಲೀಸನಿಗೆ ಕಲ್ಲಿನಿಂದ ಹೊಡೆದ, ಬಂಧನವಾಯಿತು. ಕೋರ್ಟಿನಲ್ಲಿ ಜಡ್ಜ್ ಖರೇಘಾಟ್ ಹೆಸರೇನೆಂದು ಕೇಳಿದಾಗ ‘ಅಜಾದ್’ ಎಂದ, 12 ಛಡಿ ಏಟು ಶಿಕ್ಷೆಯಾಯಿತು, ಬಿಡುಗಡೆಯಾಯಿತು. ಅಂದಿನಿಂದ ಆಜಾದನ ಮುಂದಿನ 10 ವರ್ಷಗಳ ಬದುಕಿನ ಪ್ರತಿ ಕ್ಷಣವೂ ಸ್ವಾತಂತ್ರ್ಯ ಹೋರಾಟಕ್ಕಾಗಿ ಮಿಗಿಲಾಯಿತು ಜೊತೆಗೆ ಯಾವುದೇ ಕಾರಣಕ್ಕೂ ಬ್ರಿಟಿಷರ ಕೈಗೆ ಸಿಗಬಾರದು ಎಂಬ ಸಂಕಲ್ಪವನ್ನೂ ಮಾಡಿದ.
ಅಜಾದನಿಗೆ ರಾಮಪ್ರಸಾದ ಬಿಸ್ಮಿಲ್ಲರ ಸಹವಾಸ ದೊರೆಯಿತು. 16-17 ವರ್ಷದ ಆಜಾದನ ಪಾದರಸದಂತಹ ಚೂಟಿತನ ಕಂಡು ರಾಮಪ್ರಸಾದ್ ‘ಕ್ವಿಕ್ ಸಿಲ್ವರ್’ ಎಂದು ಕರೆಯುತ್ತಿದ್ದ. ಕ್ರಾಂತಿಕಾರ್ಯಕ್ಕೆ ಬ್ರಿಟಿಷರ ತಿಜೋರಿಯನ್ನೇ ಲೂಟಿ ಮಾಡುವ ಸಾಹಸವೇ ಕಾಕೋರಿ ದರೋಡೆ, ಅದರಲ್ಲಿ ಭಾಗವಹಿಸಿದ ಅತ್ಯಂತ ಕಿರಿವಯಸ್ಸಿನವ ಅಜಾದ್. ಕಾಕೋರಿ ಪ್ರಕರಣ ಬ್ರಿಟಿಷರಿಗೆ ಅತ್ಯಂತ ಪ್ರತಿಷ್ಠೆಯ ವಿಷಯವಾಯಿತು. ತಿಜೋರಿಯಲ್ಲಿ ಇದ್ದದ್ದು 5 ಸಾವಿರ ರೂಪಾಯಿ ಮಾತ್ರ , ಆದರೆ ತನಿಖೆಗಾಗಿ 10 ಲಕ್ಷ ರೂಪಾಯಿ ಖರ್ಚು ಮಾಡಿ 250 ಸಾಕ್ಷಿಗಳನ್ನು ಕಲೆ ಹಾಕಿ, ಎಲ್ಲರನ್ನೂ ಬಂಧಿಸಿ ಶಿಕ್ಷಿಸಲಾಯಿತು. ಭಾಗವಹಿಸಿದವರಲ್ಲಿ ಸಿಕ್ಕಿಹಾಕಿಕೊಳ್ಳದ ಏಕಮಾತ್ರ ಸಿಂಹ – ‘ಅಜಾದ್’.
1928ರಲ್ಲಿ ದೇಶದ ವಿವಿಧೆಡೆ ಕ್ರಾಂತಿಕಾರ್ಯ ಮಾಡುತ್ತಿದ್ದವರೆಲ್ಲಾ ಸೇರಿ ‘ ಹಿಂದೂಸ್ತಾನ್ ಸೋಷಿಯಲಿಸ್ಟ್ ರಿಪಬ್ಲಿಕನ್ ಆರ್ಮಿ’ ಎಂಬ ಹೆಸರಿನಿಂದ ಕೆಲಸ ಮಾಡಲು ನಿಶ್ಚಯಿಸಿ ಅದರ ಸರ್ವೋಚ್ಚ ನಾಯಕನಾಗಿ ಚಂದ್ರಶೇಖರ್ ಅಜಾದನನ್ನು ಆಯ್ಕೆ ಮಾಡಿದರು. ಲಾಹೋರಿನಿಂದ ಕಲ್ಕತ್ತೆಯವರೆಗೆ ಬಹುತೇಕ ಉತ್ತರ ಭಾರತ ಆಜಾದನ ಕಾರ್ಯಕ್ಷೇತ್ರವಾಗಿತ್ತು. ಅವನ ಸಂಪರ್ಕ-ಸಹವಾಸದಿಂದ ಅದೆಷ್ಟು ಜನ ಕ್ರಾಂತಿಕಾರಿಗಳಾಗಿ ತಯಾರಾದರು, ಅದೆಷ್ಟು ಹಿತೈಷಿ ಕುಟುಂಬಗಳು ತಮ್ಮ ಮನೆಯನ್ನು ಆಜಾದನ ಕಾರ್ಯಕ್ಕೆ ಆಶ್ರಯ ನೀಡಿತು ಲೆಕ್ಕವಿಲ್ಲ.ಸದಾಶಿವ ರಾವ್ ಮಲ್ಕಾಪುರ್, ವೈಶಂಪಾಯನ, ಮಾಸ್ಟರ್ ರುದ್ರನಾರಾಯಣ್ , ಭಗವಾನ್ ದಾಸ್ ಮಾಹೋರ್ ಇತ್ಯಾದಿಗಳ ಪುರುಷರ ಜೊತೆಗೆ ದುರ್ಗಾ ಬಾಭಿ, ಸುಶೀಲಾ ದೀದಿಯಂತಹ ಕ್ರಾಂತಿಕಾರಿಣಿಯರೂ ಆಜಾದನ ಮಾರ್ಗದರ್ಶನ ಪಡೆದು ಸ್ವಾತಂತ್ರ್ಯ ಯಜ್ಞದಲ್ಲಿ ಭಾಗವಹಸಿದರು.
1929ರಲ್ಲಿ ಲಾಹೋರಿನಲ್ಲಾದ ಲಾಲಾ ಲಜಪತ್ ರಾಯರ ಹತ್ಯೆ ಖಂಡಿಸಿ ಪ್ರತಿಕಾರವಾಗಿ ಸ್ಯಾಂಡರ್ಸ್ ಹತ್ಯೆ ಮಾಡಲು ಅಜಾದ್ ನೇತೃತ್ವದಲ್ಲಿ ಅಚ್ಚುಕಟ್ಟಾದ ಯೋಜನೆಯಾಯಿತು. ಭಗತ್ ಸಿಂಗ್ , ರಾಜಗುರು ಸ್ಯಾಂಡರ್ಸ್ ಕೊಂದ ನಂತರ ಅವರನ್ನು ಸುರಕ್ಷಿತವಾಗಿ ತಪ್ಪಿಸಿಕೊಳ್ಳುವಂತೆ ರಕ್ಷಿಸುವ ಕಷ್ಟವಾದ ಜವಾಬ್ಧಾರಿ ಸ್ವತಃ: ನಾಯಕನಾದ ಅಜಾದನದು. ಪೋಲೀಸರ ಕಣ್ಣು ತಪ್ಪಿಸಿ ಲಾಹೋರಿನಿಂದ ಪರಾರಿಯಾಗುವ ಯಶಸ್ವಿ ಯೋಜನೆಯು ಅಜಾದನದ್ದೆ ಆಗಿತ್ತು. ಮುಂದೆ ಶಾಸನ ಸಭೆಯಲ್ಲಿ ಬಾಂಬ್ ಹಾಕುವ ಯಶಸ್ವಿ ಯೋಜನೆಯು ಅಜಾದನದು ಆದರೆ ಕಾರ್ಯಾಚರಣೆಯ ನಂತರ ತಪ್ಪಿಸಿಕೊಳ್ಳುವ ಭಾಗಕ್ಕೆ ಮಾತ್ರ ಭಗತ್ ಸಿಂಗನನ್ನು ಒಪ್ಪಿಸುವಲ್ಲಿ ಅಜಾದ ಸೋಲಬೇಕಾಯಿತು. ಆಜಾದನ ಪ್ರಕಾರ ಪೊಲೀಸರಿಗೆ ಸಿಕ್ಕಿ ಜೈಲಲ್ಲಿ ಕೊಳೆಯುವುದರಲ್ಲಿ ಅರ್ಥವಿಲ್ಲ , ಕಡೆಯ ತನಕ ಹೋರಾಡಬೇಕು ಆದರೆ ಭಗತ್ ಸಿಂಗ್ ವಾದವೇ ಬೇರೆಯಿತ್ತು. ಅಜಾದನು ಜೀವನದುದ್ದಕ್ಕೂ ಭೂಗತನಾಗಿಯೇ ಇದ್ದು ಹರಿಶಂಕರ್, ಪಂಡಿತಜಿ , ಬಲರಾಜ್,ಭಯ್ಯಾಜಿ ಇತ್ಯಾದಿ ಹೆಸರುಗಳಿಂದ, ಕೆಲವೊಮ್ಮೆ ಹಮಾಲಿಯಾಗಿ, ಸಾಧುವಾಗಿ , ಶ್ರೀಮಂತ ಲಾಲಾಜಿಯಾಗಿ, ಕುದುರೆ ಓಡಿಸುವ ಸೈನಿಕನಾಗಿ ಬೇರೆ ಬೇರೆ ವೇಷಗಳನ್ನು ತೊಟ್ಟು ಜನರ ಮಧ್ಯೆಯೇ ಇದ್ದು ಸಾಹಸಮಯ ನಿರ್ಭೀತ ಬದುಕು ನಡೆಸಿದ.
1929ರಲ್ಲಿ ಲಾಹೋರಿನ ಕಾಂಗ್ರೆಸ್ ಅಧಿವೇಶನ ದಲ್ಲಿ ‘ಪೂರ್ಣ ಸ್ವರಾಜ್’ ನಿರ್ಣಯವನ್ನು ತೆಗೆದುಕೊಳ್ಳಬೇಕೆಂದು ಎಲ್ಲ ಕ್ರಾಂತಿಕಾರರ ಖಚಿತ ಅಭಿಪ್ರಾಯವಾಗಿತ್ತು. ಅದಕ್ಕೆ ಅಜಾದ್ ಒಂದು ಕರಪತ್ರವನ್ನು ಸಿದ್ಧಪಡಿಸಿ ಕಿಶೋರ ಕ್ರಾಂತಿಕಾರಿಗಳ ಮೂಲಕ ಹಂಚಿಸಿದ, .ಅದರಲ್ಲಿ ‘ಭಾರತಕ್ಕೆ ಸಂಪೂರ್ಣ ಸ್ವಾತಂತ್ರ್ಯಕ್ಕಿಂತ ಕಡಿಮೆಯಾದ ಮತ್ತೇನು ಬೇಕಿಲ್ಲ’ ಎನ್ನುವ ವಿಚಾರ ಎಲ್ಲಾ ಪ್ರತಿನಿಧಿಗಳಿಗೂ ತಲುಪಿ ಸಂಚಲನವೇ ಮೂಡಿತು. ಗಾಂಧೀಜಿಯವರು ಆ ಅಧಿವೇಶನದಲ್ಲಿ ಬಾಂಬ್ ಸ್ಪೋಟದ ಘಟನೆ ಉಲ್ಲೇಖಿಸಿ ಕ್ರಾಂತಿಕಾರಿಗಳನ್ನು ಹೇಡಿಗಳೆಂದು ಕರೆದು ಖಂಡನೀಯ ನಿರ್ಣಯ ಮಂಡಿಸಿದರು.ಅಷ್ಟಕ್ಕೇ ನಿಲ್ಲದೆ ಗಾಂಧೀಜಿಯವರು ತಮ್ಮ ‘ಯಂಗ್ ಇಂಡಿಯಾ ‘ಪತ್ರಿಕೆಯಲ್ಲಿ ‘ಬಾಂಬಿನ ಪಂಥ’ ಎಂಬ ಉಗ್ರ ಲೇಖನ ಮೂಲಕ ಕ್ರಾಂತಿಕಾರಿಗಳನ್ನು ಜರಿದರು. ಇದಕ್ಕೆ ಯೋಗ್ಯ ಉತ್ತರ ನೀಡುವ ಜವಾಬ್ದಾರಿ ಸಹಜವಾಗಿ ಅಜಾನದಾಗಿತ್ತು. ಅದಕ್ಕೆ ಅಜಾದನು ಭಗವತಿಚರಣನ ಮೂಲಕ Philosophy of Bomb(ಬಾಂಬಿನ ದರ್ಶನ) ಬರೆಸಿದ,ಇದಕ್ಕೆ ದೇಶವ್ಯಾಪಿ ಪ್ರಶಂಸೆ ಸಿಕ್ಕಿತ್ತು.
1931 ಫೆಬ್ರವರಿ 27 ರಂದು ಅಲ್ಲಾಹಬಾದಿನ ಆಲ್ಫ್ರೆಡ್ ಪಾರ್ಕಿನಲ್ಲಿ ಅಜಾದ್ ತನ್ನ ಸಹಕಾರಿ ಜೊತೆಗೆ ಮುಂದಿನ ಹೋರಾಟದ ಬಗ್ಗೆ ಚರ್ಚೆ ಮಾಡುತ್ತಿದ್ದಾಗ ದೇಶದ್ರೋಹಿ ವೀರಭದ್ರ ತಿವಾರಿ ನೀಡಿದ ಮಾಹಿತಿಯಂತೆ ಬಂದೂಕುಧಾರಿ ಪೊಲೀಸರು ಅಜಾದನನ್ನು ಸುತ್ತುವರೆದುಬಿಟ್ಟರು.ತನ್ನ ಪಿಸ್ತೂಲಿನಿಂದ 37 ನಿಮಿಷಗಳ ಕಾಲ ವೀರಾವೇಶದಿಂದ ಹೋರಾಡಿ ಕಡೆಯ ಗುಂಡನ್ನು ತನ್ನ ತಲೆಗೆ ಹೊಡೆದುಕೊಂಡು ಆತ್ಮಾರ್ಪಣೆ ಮಾಡಿದ.
ಕಠೋರ ಬ್ರಹ್ಮಚರ್ಯ, ಅಸ್ಖಲಿತ ರಾಷ್ಟ್ರನಿಷ್ಠೆಯೊಂದಿಗೆ ಭಾರತವನ್ನು ಸ್ವತಂತ್ರಗೊಳಿಸುವ ಏಕಮಾತ್ರ ಧ್ಯೇಯ ಹೊತ್ತು ಮೃತ್ಯವಿನ ದವಡೆಯಲ್ಲೇ ಓಡಾಡುತ್ತ ಆನಂದಿಂದ ಸಾರ್ಥಕ ಬದುಕನ್ನು ನಡೆಸಿದ.
✍️ ಪ್ರಮೋದ.ನ.ಗೋ
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.