
ಬೆಂಗಳೂರು: ಈಗಿನ ವೇಳಾಪಟ್ಟಿ ಪ್ರಕಾರ ಡಿಸೆಂಬರ್ 8ಕ್ಕೆ ಬೆಳಗಾವಿ ಅಧಿವೇಶನ ಆರಂಭ ಆಗಲಿದೆ. ಅಷ್ಟರೊಳಗೆ ಸುಪ್ರೀಂ ಕೋರ್ಟ್, ಹೈಕೋರ್ಟಿನಲ್ಲಿ ಕೇಸುಗಳು ದಾಖಲಾಗಿ ಒಳಮೀಸಲಾತಿ ಕುರಿತ ಆದೇಶ ರದ್ದಾಗಬೇಕೆಂಬುದೇ ಸಿದ್ದರಾಮಯ್ಯರ ಸರಕಾರದ ದುರುದ್ದೇಶ ಎಂದು ಮಾಜಿ ಉಪ ಮುಖ್ಯಮಂತ್ರಿ ಹಾಗೂ ಸಂಸದ ಗೋವಿಂದ ಕಾರಜೋಳ ಅವರು ಆರೋಪಿಸಿದ್ದಾರೆ.
ಬಿಜೆಪಿ ರಾಜ್ಯ ಕಾರ್ಯಾಲಯ ಜಗನ್ನಾಥ ಭವನದಲ್ಲಿ ಇಂದು ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಕಳೆದ 30 ವರ್ಷಗಳಿಂದ ರಾಜ್ಯದಲ್ಲಿ ಪರಿಶಿಷ್ಟ ಜನಾಂಗ, ಜಾತಿಯಲ್ಲಿ ಒಳ ಮೀಸಲಾತಿ ಜಾರಿ ಆಗಬೇಕು. 101 ಜಾತಿಗಳಿಗೆ ಸಾಮಾಜಿಕ ನ್ಯಾಯದಲ್ಲಿ ಎಲ್ಲರಿಗೂ ಮೀಸಲಾತಿ ಸೌಲಭ್ಯ ಸಿಗಬೇಕೆಂದು ನಿರಂತರ ಹೋರಾಟ ಮಾಡಿದ್ದರ ಪ್ರಯುಕ್ತ ನರೇಂದ್ರ ಮೋದಿ ಜೀ ಅವರ ಸರಕಾರವು ಮುತುವರ್ಜಿ ವಹಿಸಿ ನ್ಯಾಯ ದೊರಕಿಸಿ ಕೊಟ್ಟು ಇಂದಿಗೆ ಒಂದು ವರ್ಷ 3 ತಿಂಗಳಾಗಿದೆ. ಆದರೂ ಕರ್ನಾಟಕದ ಸಿದ್ದರಾಮಯ್ಯರ ನೇತೃತ್ವದ ಕಾಂಗ್ರೆಸ್ ಸರಕಾರವು ವಿಳಂಬ ನೀತಿ ಜೊತೆಗೆ ಗೊಂದಲ ಸೃಷ್ಟಿಸುತ್ತಿದೆ ಎಂದು ಆಕ್ಷೇಪಿಸಿದರು. ದೋಷಭರಿತ ಆದೇಶಗಳನ್ನು ಮಾಡುತ್ತಿದೆ. ಈ ಮೂಲಕ ಪರಿಶಿಷ್ಟ ಜನಾಂಗದವರಿಗೆ ಅನ್ಯಾಯ ಮಾಡುತ್ತಿದೆ ಎಂದು ಆರೋಪಿಸಿದರು. ಸಿದ್ದರಾಮಯ್ಯರ ಸರಕಾರದ ಆದೇಶವನ್ನು ಪ್ರಶ್ನಿಸಿ ಈಚೆಗೆ ಹೈಕೋರ್ಟಿನಲ್ಲಿ ಕೇಸ್ ಬಂದಾಗ ರಾಜ್ಯ ಸರಕಾರದ ಕಡೆಯಿಂದ ಯಾರೂ ಹಾಜರಾಗಿಲ್ಲ; ಹೀಗಾಗಿ ಆದೇಶ ಭಾಗಶಃ ತಡೆಯಾಗಿದೆ ಎಂದು ವಿವರಿಸಿದರು.
ಒಂದು ಜಾತಿಯ ಹಿತಕ್ಕಾಗಿ ಸಿದ್ದರಾಮಯ್ಯನವರು ಈ ದೊಂಬರಾಟ ಮಾಡುತ್ತಿದ್ದಾರೆ. 101 ಜಾತಿಯ ಹಿತ ಕಾಯಲು ಅವರು ಬಯಸುತ್ತಿಲ್ಲ ಎಂದು ಗೋವಿಂದ ಕಾರಜೋಳ ಅವರು ಆರೋಪ ವ್ಯಕ್ತಪಡಿಸಿದರು. ಆರ್ಥಿಕ ಸಂಕಷ್ಟ ಇರುವುದರಿಂದ ನೇಮಕಾತಿ ಮುಂದೆ ಹೋದಷ್ಟೂ ಅವರಿಗೆ ಒಳ್ಳೆಯದೆಂಬ ಭಾವನೆ ಇದೆ. ಖಜಾನೆ ಖಾಲಿ ಆಗಿದೆ. ನೇಮಕಾತಿ ಮಾಡಲೂ ಅವರು ತಯಾರಿಲ್ಲ ಎಂದು ದೂರಿದರು.
ಮತ್ತೆ ಈ ಜನಾಂಗಕ್ಕೆ ಮೋಸ ಮಾಡಲು ಸಿದ್ದರಾಮಯ್ಯರ ಸರಕಾರ ಇವತ್ತು ಸಂಪುಟ ಸಭೆ ನಡೆಸುತ್ತಿದೆ. ಕರಡು ಮಸೂದೆ ಮಂಡಿಸಲು ಸಿದ್ಧತೆ ಮಾಡಿಕೊಂಡಿದ್ದಾರೆ. 5ರೊಳಗೆ ಹೈಕೋರ್ಟಿಗೆ ರಾಜ್ಯ ಸರಕಾರ ತನ್ನ ವಾದವನ್ನು ಮಂಡಿಸಲು ಬೇಕಾದ ವಿವರಣೆ ನೀಡಬೇಕಾಗಿದೆ ಎಂದು ತಿಳಿಸಿದರು.
ದಲಿತರು, ಅಸ್ಪೃಶ್ಯರು ಉದ್ಧಾರ ಆಗಬಾರದು ಎಂಬುದೇ ರಾಜ್ಯದ ಕಾಂಗ್ರೆಸ್ ಮನಸ್ಥಿತಿ ಎಂದು ಗೋವಿಂದ ಕಾರಜೋಳ ಅವರು ಆರೋಪಿಸಿದರು.
79 ವರ್ಷ ಮತಬ್ಯಾಂಕ್ ಆಗಿದ್ದರು; ಮುಂದೆಯೂ 100 ವರ್ಷ ಮತಬ್ಯಾಂಕ್ ಆಗಿರಬೇಕು ಹಾಗೂ ಅವರು ಉದ್ಧಾರ ಆಗಬಾರದು ಎಂಬುದೇ ಕಾಂಗ್ರೆಸ್ಸಿನ ನೀಚಬುದ್ಧಿ ಎಂದು ಟೀಕಿಸಿದರು.
ಸಮಾಜಕಲ್ಯಾಣ ಇಲಾಖೆ ಸಮರ್ಪಕವಾಗಿ ವಾದ ಮಂಡನೆಗೆ ಯಾವುದೇ ತಯಾರಿ ಮಾಡುತ್ತಿಲ್ಲ. ಅವರೇ ನೇಮಿಸಿದ ನ್ಯಾ. ನಾಗಮೋಹನ್ದಾಸ್, ನ್ಯಾ.ಸದಾಶಿವ ಅವರ ವರದಿಯನ್ನೂ ಒಪ್ಪಿಲ್ಲ; ನಮ್ಮ ಸರಕಾರದ ಮಾಧುಸ್ವಾಮಿಯವರ ಸಂಪುಟ ಉಪ ಸಮಿತಿ ವರದಿಯನ್ನೂ ಒಪ್ಪಿಲ್ಲ ಎಂದು ದೂರಿದರು.
ಕೇಂದ್ರದ ಮಾಜಿ ಸಚಿವ ಎ.ನಾರಾಯಣಸ್ವಾಮಿ ಅವರು ಮಾತನಾಡಿ, ಒಳ ಮೀಸಲಾತಿ ವಿಚಾರದಲ್ಲಿ ಗೊಂದಲಗಳಿವೆ. ಸಂವಿಧಾನಬದ್ಧವಾಗಿ ಯೋಚಿಸದೇ ಈ ರಾಜ್ಯ ಸರಕಾರವು ರಾಜಕೀಯ ತೀರ್ಮಾನ ತೆಗೆದುಕೊಂಡಿದೆ. ಒಂದು ವಾರದಿಂದ ಅಲೆಮಾರಿಗಳ ಮೀಸಲಾತಿ ಕುರಿತ ಚರ್ಚೆ ಮಾಡಲಾಗುತ್ತಿದೆ. ಅಲೆಮಾರಿ ಸಮುದಾಯವು ಪ್ರತ್ಯೇಕ ಮೀಸಲಾತಿ ಕೇಳುತ್ತಿದ್ದಾರೆ. ಅವರು ಪ್ಯಾಕೇಜ್ ಕೇಳುತ್ತಿಲ್ಲ ಎಂದು ಸ್ಪಷ್ಟಪಡಿಸಿದರು. ಸಿಎಂ, ಈ ಸರಕಾರವು ಮತ್ತೆ ಮತ್ತೆ ಗೊಂದಲ ಸೃಷ್ಟಿಸಲು ಹೊರಟಿದ್ದಾರೆ ಎಂದು ದೂರಿದರು.
ಒಂದು ಸಮುದಾಯ ಹೈಕೋರ್ಟ್ ಮೆಟ್ಟಿಲೇರಿದೆ. ಅರ್ಜಿ ವಿಚಾರಣೆಗೆ ಬಂದಾಗ ಸರಕಾರದ ಪರ ಒಬ್ಬರೂ ಧ್ವನಿ ಎತ್ತಿಲ್ಲ. ನಮ್ಮ ವಿರುದ್ಧ ಷಡ್ಯಂತ್ರ ನಡೆಯುತ್ತಿದೆ. ನಮ್ಮ ಸಮುದಾಯಗಳು ಕೆಳಹಂತದ ಅಧಿಕಾರ ಅನುಭವಿಸುವಂತೆ ಮಾಡುವ ಇಚ್ಛಾಶಕ್ತಿ ನಿಮಗಿಲ್ಲವೇ ಎಂದು ಕೇಳಿದರು. ನೀವು ಯಾರ ವಿರುದ್ಧ ಇದ್ದೀರಿ ಎಂದು ಕೇಳಿದರು. ಸಾಮಾಜಿಕ ನ್ಯಾಯದ ಪರಿಕಲ್ಪನೆಗೆ ಬದ್ಧತೆ ತೋರಿಸಿ ಎಂದು ಆಗ್ರಹಿಸಿದರು. ಇಲ್ಲವಾದರೆ ಮುಂದಿನ ದಿನಗಳಲ್ಲಿ ಮಾದಿಗರು ಉಗ್ರ ಹೋರಾಟಕ್ಕೆ ಮುಂದಾಗುತ್ತಾರೆ ಎಂದು ಎಚ್ಚರಿಕೆ ನೀಡಿದರು.
ರಾಜ್ಯ ವಕ್ತಾರ ಹೆಚ್. ವೆಂಕಟೇಶ್ ದೊಡ್ಡೇರಿ, ಎಸ್.ಸಿ. ಮೋರ್ಚಾ ರಾಜ್ಯ ಉಪಾಧ್ಯಕ್ಷ ಹೂಡಿ ಮಂಜುನಾಥ, ನಿವೃತ್ತ ಐ.ಎ.ಎಸ್. ಅಧಿಕಾರಿಗಳಾದ ಅನಿಲ್ ಕುಮಾರ್, ಲಕ್ಷ್ಮೀನಾರಾಯಣ್ ಅವರು ಉಪಸ್ಥಿತರಿದ್ದರು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.



