ಉಡುಪಿ ಪಕ್ಕದ ಒಂದು ಪುಟ್ಟ ಊರು ಪರ್ಕಳ. ಉಡುಪಿ ಕಾರ್ಕಳ ಮುಖ್ಯ ರಸ್ತೆಯಲ್ಲಿರುವ ಈ ಊರು ನಗರದ ಲೆಕ್ಕದಲ್ಲಿ ಚಿಕ್ಕ ಊರು, ಹಳ್ಳಿಯ ಲೆಕ್ಕದಲ್ಲಿ ದೊಡ್ಡ ಊರು. ಹಳ್ಳಿಯೆಡೆಗೆ ನಗರ ಬೆಳೆಬೆಳೆದು ಇದೀಗ ನಗರಕ್ಕೆ ಹೊಂದಿಕೊಂಡ ಊರಾಗಿಬಿಟ್ಟಿದೆ ಪರ್ಕಳ.
ಊರ ಗುರುತು
ಈ ಊರಲ್ಲಿ ಅದೆಷ್ಟು ಮಂದಿ ಅಶೋಕರಿದ್ದಾರೋ! ಆದರೆ ನೀವು ಬಸ್ನಿಲ್ದಾಣದಿಂದಿಳಿದು ಅಶೋಕರ ಮನೆ ಯಾವುದು ಎಂದು ಕೇಳಿದರೆ ಸಾಕು, ಯಾವ ಅಶೋಕ ಎಂದು ಕೇಳದೆಯೇ ಸೀದಾ ಒಬ್ಬರ ಮನೆಗೆ ತಂದುಬಿಡುತ್ತಾರೆ. ಅಶೋಕ ಪರ್ಕಳ ಎಂದೇ ಹೆಸರುವಾಸಿಯಾಗಿದ್ದ ಅವರು ಪರ್ಕಳದ ಮನೆಮನೆಗೆ ಸುಪರಿಚಿತರಾಗಿದ್ದರು. ಅವರಿಗೂ ತಮ್ಮೂರಿನ ಎಲ್ಲ ಮನೆಗಳೂ ಮನೆಮಂದಿಗಳೆಲ್ಲರೂ ಗೊತ್ತಿದ್ದವರೇ. ಕೇವಲ ಪರ್ಕಳವಷ್ಟೆ ಅಲ್ಲ, ಅಕ್ಕಪಕ್ಕದ ಊರುಗಳಿಗೂ ಅವರು ಪರಿಚಿತರೇ. ಒಟ್ಟಾರೆ ಇಡಿಯ ಉಡುಪಿ ಜಿಲ್ಲೆ ಅವರ ಬಹು-ಓಡಾಟದ ಕ್ಷೇತ್ರವಾಗಿತ್ತು.
ಕೊಂಕಣಿ ಮಾತನಾಡುವ ಅವರು ಪ್ರಭು ಎಂಬ ತಮ್ಮ ಕುಲನಾಮವನ್ನು ಇಟ್ಟುಕೊಳ್ಳದೆ ತಮ್ಮೂರ ಹೆಸರಿನಿಂದಲೇ ಗುರುತಿಸಿಕೊಂಡಿದ್ದರು. ಪರ್ಕಳ ಎಂದರೆ ಅಶೋಕ, ಅಶೋಕ ಎಂದರೆ ಪರ್ಕಳ ಎಂಬಷ್ಟರ ಮಟ್ಟಿಗೆ ಅವರ ಹೆಸರು ಊರೊಳಗೆ ಲೀನವಾಗಿಹೋಗಿತ್ತು.
ಸಂಘದಿಂದ ವ್ಯಕ್ತಿತ್ವ
ಕೆಲವು ಸ್ನೇಹಿತರು ರಾಷ್ಟ್ರೀಯ ಸ್ವಯಂಸೇವಕ ಸಂಘದ ಒಂದು ಬೈಠಕ್ ನಿಮಿತ್ತ ಬೀದರಿಗೆ ಹೋಗಿದ್ದಾಗ ಅಲ್ಲಿದ್ದ ಒಂದು ಹೊಟೇಲಿಗೆ ಭೇಟಿನೀಡಿದರು. ಹೊಟೇಲ್ ಮಾಲಿಕರು ಪರ್ಕಳದವರು ಎಂದು ಗೊತ್ತಾದಾಗ ‘ನಿಮಗೆ ಅಶೋಕರು ಗೊತ್ತೇ’ ಎಂದು ಕೇಳಿದರು.
ಪ್ರಶ್ನೆ ಕೇಳಿದವರ ಹಿನ್ನೆಲೆ ಗೊತ್ತಿಲ್ಲದಿದ್ದ ಮಾಲಿಕರು ತಕ್ಷಣವೇ ಮರುಪ್ರಶ್ನಿಸಿದ್ದು: ‘ಯಾರು, ಆರೆಸ್ಸೆಸ್ ಅಶೋಕರೇ?’
ಹೌದೆಂದ ಬಳಿಕ ಅವರ ನಡುವೆ ಅಶೋಕಕೇಂದ್ರಿತವಾಗಿಯೇ ಮಾತುಕತೆ ಬೆಳೆಯಿತು. ಜತೆಗೆ ಆತ್ಮೀಯತೆ ಕೂಡಾ.
ಅಶೋಕರೆಂದರೆ ಆರೆಸ್ಸೆಸ್, ಆರೆಸ್ಸೆಸ್ ಎಂದರೆ ಅಶೋಕರು ಎನ್ನುವಷ್ಟು ಅವರ ಹೆಸರು ಸಂಘದಲ್ಲಿ ಲೀನವಾಗಿಹೋಗಿತ್ತು. ಅವರು ಕೂಡಾ. ಆರೆಸ್ಸೆಸ್ಸನ್ನು ಬಿಟ್ಟು ಅವರ ವ್ಯಕ್ತಿತ್ವವನ್ನು ಕಲ್ಪಿಸಿಕೊಳ್ಳಲೂ ಸಾಧ್ಯವಿಲ್ಲ ಎಂಬಂತೆ ಬದುಕಿದರವರು.
‘ಕಟ್ಟರ್ ಸಂಘ’
ಸಂಘೇತರ ವಲಯದಲ್ಲಿ ಕೂಡಾ ಅವರಿಗೆ ವಿಶಾಲವ್ಯಾಪ್ತಿಯ ಗಾಢಸಂಪರ್ಕವಿತ್ತು. ಅವರ ಸಂಘಬದುಕಿನ ಗಟ್ಟಿತನವನ್ನು ಸಂಘದವರ ಮಾತಿನಿಂದಂತೂ ಚೆನ್ನಾಗಿ ತಿಳಿದುಕೊಳ್ಳಬಹುದಾಗಿತ್ತು. ಆದರೆ ಸಂಘೇತರ ವಲಯದವರ ಮಾತಿನಿಂದ ಅದಕ್ಕಿಂತ ಹೆಚ್ಚು ಚೆನ್ನಾಗಿ ತಿಳಿದುಕೊಳ್ಳಬಹುದಾಗಿತ್ತು.
ಕರಾವಳಿ ಭಾಗದಲ್ಲಿ ಭಯಂಕರ ಎಂಬ ಪದಕ್ಕೆ ಭೀಕರ ಎಂಬ ಅರ್ಥಕ್ಕಿಂತ ಭಿನ್ನವಾಗಿ ಗಾಢ ತೀವ್ರ ತೀಕ್ಷ್ಣ ಇತ್ಯಾದಿ ಧ್ವನಿಗಳಿವೆ. ಸಂಘೇತರ ವಲಯದಲ್ಲಿ ಅವರನ್ನು ಗುರುತಿಸುತ್ತಿದ್ದುದು: ‘ಅಶೋಕರು ಭಯಂಕರ ಆರೆಸ್ಸೆಸ್’ ಎಂದು. ಹೀಗೆ ಗುರುತಿಸುತ್ತಿದ್ದವರಲ್ಲಿ ಸಂಘವಿರೋಧಿಗಳೂ ಇದ್ದರೆಂದು ಬೇರೆ ಹೇಳಬೇಕಿಲ್ಲ.
ಕೇವಲ ಸಂಘವಿರೋಧಿಗಳಷ್ಟೆ ಅಲ್ಲ, ಅವರಿಗೆ ತುಂಬಾ ದೊಡ್ಡ ಪ್ರಮಾಣದಲ್ಲಿ ಮುಸಲ್ಮಾನ ಮತ್ತು ಕ್ರೈಸ್ತ ಬಂಧುಗಳ ಆತ್ಮೀಯ ಸ್ನೇಹವಿತ್ತು. ‘ಕಟ್ಟರ್ ಸಂಘ’ ಎಂದು ಅವರನ್ನು ಗುರುತಿಸುತ್ತಿದ್ದ ಸಂಘವಿರೋಧಿಗಳ ಜತೆಗೆ, ಮುಸ್ಲಿಂ -ಕ್ರೈಸ್ತರ ಜತೆಗೆ ಅವರ ಸ್ನೇಹದ ಪರಿ ಅಂಥದ್ದು! ಅಂಥವರ ಜತೆಗೆ ಸ್ನೇಹವನ್ನು ಸಹಜವಾಗಿ ಮತ್ತು ಚೆನ್ನಾಗಿ ಜಾರಿಯಲ್ಲಿಟ್ಟುಕೊಂಡೇ ಅವರು ಕಟ್ಟರ್ ಸಂಘವಾಗಿ ಬದುಕಿದರು.
ಸಂಘದವರೆಂದರೆ ಮುಸ್ಲಿಂದ್ವೇಷಿಗಳು, ಕ್ರೈಸ್ತವಿರೋಧಿಗಳು ಎಂದೆಲ್ಲ ಸಂಶಯಿಸುವವರಿಗೆ ಕಟ್ಟರ್ ಸಂಘದವರೆನಿಸಿಕೊಂಡಿದ್ದ ಅಶೋಕರು ಸಮರ್ಥ ಉತ್ತರವಾಗಿದ್ದರು.
ಅವರೂ ನಮ್ಮವರೇ
ತಮ್ಮ ಮುಸ್ಲಿಂ-ಕ್ರೈಸ್ತ ಸ್ನೇಹಿತರೆಲ್ಲರ ಜತೆಗೆ ಅಶೋಕರು ಮಾತನಾಡುತ್ತಿದ್ದುದು ಸಂಘದ ಮತ್ತು ದೇಶದ ವಿಚಾರವನ್ನೇ. ಅದರಲ್ಲಿಯೂ ಅವರು ಕ್ರೈಸ್ತಸ್ನೇಹಿತರ ಜತೆಗೆ ಮತಾಂತರದ ಬಗ್ಗೆ ಮಾತನಾಡಿದರೆ, ಮುಸ್ಲಿಂಸ್ನೇಹಿತರ ಜತೆಗೆ ಭಯೋತ್ಪಾದನೆ ಬಗ್ಗೆ ಚರ್ಚೆ ಮಾಡುತ್ತಿದ್ದರು. ತಾವು ಮಂಡಿಸಿದ ಬಿಂದುಗಳ ಕುರಿತು ವಿರೋಧ ವ್ಯಕ್ತವಾದಾಗಲೂ ಅವರು ತಮ್ಮ ವಿಚಾರಗಳನ್ನು ಬಿಟ್ಟುಕೊಡದೆ ಬಲವಾಗಿ ಸಮರ್ಥಿಸುತ್ತಿದ್ದರು ಮತ್ತು ಅಷ್ಟೇ ಅಚ್ಚರಿಯ ಬಗೆಯಲ್ಲಿ ಎಲ್ಲರ ಜೊತೆಗೆ ಸಂಬಂಧವನ್ನು ಚೆನ್ನಾಗಿಯೇ ಇಟ್ಟುಕೊಳ್ಳುತ್ತಿದ್ದರು.
ಅವರ ಮುಸ್ಲಿಂ ಸ್ನೇಹಿತರ ಪೈಕಿ ಶರೀಫ್ ಎಂಬವರೊಬ್ಬರಿದ್ದರು. ಒಂದು ಅಪಘಾತದಲ್ಲಿ ಶರೀಫರು ಅಪಮೃತ್ಯು ಹೊಂದಿದಾಗ ಆ ಸುದ್ದಿಯನ್ನು ಶೀಘ್ರವೇ ತಿಳಿದವರಲ್ಲಿ ಅಶೋಕರೂ ಒಬ್ಬರು. ಅದನ್ನು ಕೂಡಲೇ ಮುಸ್ಲಿಂ ಸ್ನೇಹಿತರಿಗೆ ತಲಪಿಸುವ ಮೂಲಕ ಶರೀಫರನ್ನು ಬಲ್ಲ ಎಲ್ಲರಿಗೂ ಮಾಹಿತಿ ಗೊತ್ತಾಗುವಂತೆ ಮಾಡುವಲ್ಲಿ ಅವರ ಪಾತ್ರ ಮಹತ್ತ್ವದ್ದಿತ್ತು.
ಅವರ ಸಂಪರ್ಕದ ಕ್ರೈಸ್ತರ ಪೈಕಿ ಅನೇಕರು ಮತಾಂತರವಾಗಿ ಕೆಲವಾರು ವರ್ಷಗಳಷ್ಟೆ ಆಗಿದ್ದುದು. ಅವರಲ್ಲಿ ಹಿಂದುಳಿದ ಎನ್ನಲಾದ ಸಮುದಾಯದ ಮಂದಿ ಅಧಿಕವಿದ್ದರು. ಆಯೆಲ್ಲ ಬಂಧುಗಳ ನಿರ್ದಿಷ್ಟ ಹಿಂದೂಸಾಮುದಾಯಿಕ ಹಿನ್ನೆಲೆಯನ್ನು ಅರಿತಿದ್ದ ಅಶೋಕರು ಅವರ ಜತೆಗೆ ಅದೇ ನೆಲೆಯಲ್ಲೇ ಮಾತನಾಡುತ್ತಾ ರಾಷ್ಟ್ರೀಯ ಜಾಗೃತಿಯನ್ನು ಮೂಡಿಸಲು ಪ್ರಯತ್ನಿಸಿದ್ದರು. ಕೇವಲ ಒಂದು ವರ್ಷದ ಈ ಪ್ರಯತ್ನದ ಫಲವಾಗಿ ಎಂಟು ಕುಟುಂಬಗಳು ಮರಳಿ ಮಾತೃಧರ್ಮಕ್ಕೆ ಬರುವಂತಾಯಿತು. ಈ ಕುಟುಂಬಗಳ ಜತೆಗೆ ನಿರಂತರ ಸಂಪರ್ಕ ಇಟ್ಟುಕೊಂಡಿದ್ದ ಅವರು, ತಮ್ಮ ಮನೆಯ ರೇಷನ್ ಅಕ್ಕಿಯನ್ನು ಈ ಬಡಕುಟುಂಬಗಳಿಗೆ ನೀಡುತ್ತಿದ್ದರು. ಕ್ರೈಸ್ತ-ಮುಸ್ಲಿಂ ಮನೆಗಳಿಗೆ ಅಷ್ಟೊಂದು ಧೈರ್ಯ ಆತ್ಮೀಯತೆಗಳಿಂದ ಅವರು ಹೋಗುತ್ತಿದ್ದುದು ಅವರೆಲ್ಲ ನಮ್ಮವರೇ ಎಂಬ ಭಾವದಲ್ಲಿ.
ಕಷ್ಟದಲ್ಲೂ ಪೂರ್ಣಸೇವೆ
ತಂದೆ ಮಲ್ಲಪ್ಪ ಪ್ರಭು, ತಾಯಿ ಗುಲಾಬಿ, ನಾಲ್ವರು ಗಂಡು ಮತ್ತು ಇಬ್ಬರು ಹೆಣ್ಣುಮಕ್ಕಳಿದ್ದ ಒಂದು ಪುಟ್ಟ ಕುಟುಂಬ ಅದು. ಅತೀವ ಬಡತನವೂ ಇಲ್ಲದ, ಅಷ್ಟೇನೂ ಅನುಕೂಲವೂ ಇಲ್ಲದ ಆರ್ಥಿಕ ಹಿನ್ನೆಲೆ. ಅಡುಗೆಯು ಕುಟುಂಬದ ಕುಲಕಸುಬೆಂಬಂತೆ ಇತ್ತು. ಅಂಥ ಕುಟುಂಬಕ್ಕೆ ಸೇರಿದ ಅಶೋಕರದೂ ಅಡುಗೆ ಕಸುಬೇ.
ತಂದೆ ಮಲ್ಲಪ್ಪ ಪ್ರಭುಗಳು ಹೊಟೇಲೊಂದರಲ್ಲಿ ಅಡುಗೆ ಭಟ್ಟರಾಗಿದ್ದರು. ಅವರ ನಿವೃತ್ತಿ ನಂತರ ಮನೆಯಲ್ಲಿ ಹಣದ ಅಡಚಣೆ ಉಂಟಾಗಿತ್ತು. ಆಗ ಅದನ್ನು ನಿಭಾಯಿಸಲು ಎದೆಗೊಟ್ಟವರು ಅಶೋಕರೇ. ಬೌದ್ಧಿಕ ಸವಾಲಿನ ಅಣ್ಣ ಮತ್ತು ಸಂಪಾದನೆ ಇಲ್ಲದ ತಮ್ಮನ ಜತೆಗೆ ಇಬ್ಬರು ತಂಗಿಯರ ಶಿಕ್ಷಣದ ಹೊಣೆಗಾರಿಕೆ ಅವರ ಹೆಗಲ ಮೇಲಿತ್ತು.
ತಮ್ಮ ತಾರುಣ್ಯದಲ್ಲಿ ಮದುವೆಯ ಒಂದು ಉತ್ತಮ ಪ್ರಸ್ತಾವ ಬಂದರೂ ತಂಗಿಯರ ಮದುವೆಯಾಗದೆ ತಾನಾಗಲಾರೆ ಎಂದು ಅದನ್ನು ನಿರಾಕರಿಸಿದರು. ತಮ್ಮ ಮುಂದೆ ಒಂದು ಹೊಟೇಲಿನಲ್ಲಿ ಅಡುಗೆ ಕೆಲಸಕ್ಕೆ ಸೇರಿಕೊಳ್ಳುವುದಾಯಿತು. ತಂಗಿಯರಿಬ್ಬರ ವಿದ್ಯಾಭ್ಯಾಸದ ನಂತರ ಮದುವೆಮಾಡಿ ಕೊಡುವುದೂ ಆಯಿತು. ತಮ್ಮನದೂ ವಿವಾಹ ನೆರವೇರಿತು. ಕೆಲವು ಕಾಲ ಸಂದ ನಂತರ ಮನೆಯಲ್ಲಿ ರೋಗಿಷ್ಠ ತಂದೆ, ತಾಯಿ, ತಂಗಿ ಇವರ ಜತೆಗೆ ಇವರೆಲ್ಲರ ಹೊಣೆಹೊರುವ ಅಶೋಕರು ಇರುವುದಾಯಿತು. ಅಡುಗೆ ಕಸುಬಿನಿಂದಲೇ ಕೌಟುಂಬಿಕ ಜವಾಬ್ದಾರಿಯನ್ನು ಸಮರ್ಥವಾಗಿ ನಿಭಾಯಿಸಿದ ಅವರು, ಒಂದು ಹಂತದಲ್ಲಿ ಸಂಘದ ಪ್ರಚಾರಕರಾಗಿ ಅಂದರೆ ಪೂರ್ಣಾವಧಿ ಕಾರ್ಯಕರ್ತರಾಗಿ ಹೊರಟರು. ಹಾಗೆ ವೇಣೂರಿನಲ್ಲಿ ಒಂದು ವರ್ಷ ಇದ್ದು ಬಳಿಕ ಮನೆಗೆ ಬಂದರೂ ಮರುವರ್ಷವೇ ದೂರದ ಮಣಿಪುರಕ್ಕೆ ಪ್ರಚಾರಕರಾಗಿ ಹೊರಟರು. ಮನೆಯಲ್ಲಿ ತಂದೆಯವರ ಆರೋಗ್ಯ ಬಿಗಡಾಯಿಸಿದ ಹಿನ್ನೆಲೆಯಲ್ಲಿ ಅವರು ಮಣಿಪುರದಿಂದ ಎರಡೇ ವರ್ಷಗಳಲ್ಲಿ ವಾಪಸಾಗಬೇಕಾಯಿತು.
ಧ್ಯೇಯಜೀವನ
ಚಪ್ಪಲಿ ಹಾಕದ, ಬಿಳಿ ಪಂಚೆ ಬಿಳಿ ಅಂಗಿ ತೊಟ್ಟ, ನಡಕೊಂಡೇ ಪ್ರವಾಸಮಾಡುವ ಅಶೋಕರದು ವ್ರತಸ್ಥವೆನಿಸಬಲ್ಲ ಒಂದು ಮಾದರಿ ಬದುಕು. ಕಸುಬು ಬಿಟ್ಟರೆ ಸಂಘ ಎಂಬುದೇ ಅವರ ದಿನಚರಿ. ಸಂಘದ ಒಂದು ಗಂಟೆಯ ನಿತ್ಯಶಾಖೆ ಮತ್ತು ಬೈಠಕ್ಕುಗಳಿಗೆ ಅವರು ಐದು ಹತ್ತು ನಿಮಿಷ ಮುಂಚಿತವಾಗಿಯೇ ಹಾಜರಿರುತ್ತಿದ್ದರು. ಶಾಖೆ ಬೈಠಕ್ಕುಗಳಿಗೆ ತಡವಾಗಿ ಹೋದ ಮತ್ತು ಅರ್ಧದಲ್ಲೇ ವಾಪಸಾದ ಸಂದರ್ಭಕ್ಕೆ ಅವರ ಬದುಕಿನಲ್ಲಿ ಅವಕಾಶವೇ ಇಲ್ಲವಾಗಿತ್ತು.
ಉದ್ಯೋಗದ ಕಾರಣಕ್ಕಾಗಿ ಸಂಘಕ್ಕೆ ಬರಲಾಗದ, ಅನುಕೂಲಸ್ಥರಾಗಿದ್ದೂ ಕನಿಷ್ಠ ಸಕ್ರಿಯರಿರುವ ಕಾರ್ಯಕರ್ತರ ನಡುವೆ ಇವರು ಭಿನ್ನವಾಗಿದ್ದರು. ಶಾಖಾವಿಸ್ತಾರ, ಕಾರ್ಯಕ್ರಮಕ್ಕೆ ಮಾಡಬೇಕಾದ ಸಂಖ್ಯೆಯ ಗುರಿ ಇತ್ಯಾದಿಗಳ ಬಗ್ಗೆ ಅವರು ಆಗ್ರಹದಿಂದ ತೊಡಗುತ್ತಿದ್ದರು. ಕಾರ್ಯ ಮತ್ತು ಧ್ಯೇಯದ ಬಗ್ಗೆ ಇದ್ದ ಅವರ ಶ್ರದ್ಧೆ ಊಹೆಗೆ ನಿಲುಕದ್ದು.
ಸಂಘಕಾರ್ಯದ ಕುರಿತು ಹಿರಿಯರು ಹೇಳಿದ ಮಾಹಿತಿಗಳನ್ನು ಸಂಗ್ರಹಿಸಿಟ್ಟುಕೊಳ್ಳುತ್ತಿದ್ದರು. ಮನೆಸಂಪರ್ಕದಲ್ಲಿ ಅವರು ಮಾತನಾಡುತ್ತಿದ್ದುದು ಇಂಥ ಮಾಹಿತಿಗಳ ಆಧಾರದಲ್ಲೇ. ಹಿರಿಯ ಕಾರ್ಯಕರ್ತರನ್ನು ಸಂಪರ್ಕಿಸುತ್ತಿದ್ದುದು ಇಂಥ ಮಾಹಿತಿಗಳನ್ನಿಟ್ಟುಕೊಂಡೇ.
ಶಾಖಾ ದಿನಚರಿ
ಅವರು ಬಾಲ್ಯದಿಂದಲೇ ಸಂಘದ ಸ್ವಯಂಸೇವಕರು. ಅವರು ಊರಲ್ಲಿದ್ದಾರೆಂದರೆ ಪೂರ್ತಿ ಶಾಖೆಯಲ್ಲಿದ್ದಾರೆಂದೇ ಲೆಕ್ಕ. ಈ ಲೆಕ್ಕ ಒಮ್ಮೆಯೂ ತಪ್ಪಿರಲಿಲ್ಲ. ಆದರೆ ಒಮ್ಮೆ ಶಾಖೆಯಲ್ಲಿ ಕಿಡಿಗೇಡಿಗಳು ಮಾಡಿದ್ದ ದಾಂದಲೆಯ ಕಾರಣಕ್ಕಾಗಿ ಅವರೂ ಅಧೀರರಾಗಿದ್ದರು. ಆಗಿನ್ನೂ ಅವರು ತಾರುಣ್ಯಕ್ಕೆ ಕಾಲಿಟ್ಟಿರಲಿಲ್ಲ. ನಂತರದ ದಿನಗಳಲ್ಲಿ ಉಡುಪಿಗೆ ಜಿಲ್ಲಾ ಪ್ರಚಾರಕರಾಗಿ ಬಂದ ಸುಧಾಕರರು ಅಶೋಕರನ್ನು ಈ ನಿಟ್ಟಿನಲ್ಲಿ ಮಾತಾಡಿಸಿದ ಬಳಿಕ ಅವರ ವ್ಯಕ್ತಿತ್ವದ ನಿಜಸ್ವರೂಪ ಮತ್ತೆ ಪ್ರಕಟವಾಗತೊಡಗಿತು. ಮುಂದೆ ಅದಕ್ಕೆ ಎಂದೂ ಭಂಗಬಂದುದೇ ಇಲ್ಲ.
ಸಂಘಟನೆ ಕುರಿತು ಅವರಿಗಿದ್ದ ವಿಶ್ವಾಸ ವರ್ಣನೆಗೆ ನಿಲುಕದ್ದು. ಒಂದೂರಲ್ಲಿ ಆಟವಾಡಲು ಇಲ್ಲವೇ ಹರಟೆಹೊಡೆಯಲು ತರುಣರು ಸೇರಿದ್ದಾರೆಂದರೆ ಸಾಕು, ಅಲ್ಲಿ ಸಂಘ ಇದೆ ಎಂದೇ ಅವರಿಗೆ ಅನಿಸುತ್ತಿತ್ತು. ಅದು ಬೇಕಿದ್ದರೆ ಕ್ರಿಕೆಟ್ ಆಡುವ ತರುಣರೇ ಇರಲಿ! ಹಾಗಿರುವ ಊರನ್ನು ಕುರಿತು ‘ಅಲ್ಲಿ ತಂಡ ಇದೆ’ ಎನ್ನುತ್ತಿದ್ದರು. ತಮ್ಮ ಭಾವನೆಯನ್ನು ಅಷ್ಟಕ್ಕೇ ಮುಗಿಸದೆ ಆ ತರುಣರ ಜತೆಗೆ ತಾವೂ ಆಟವಾಡಿ ಕೊನೆಯಲ್ಲಿ ಅವರೆಲ್ಲರನ್ನು ಸೇರಿಸಿ ಸಂಘದ ಪ್ರಾರ್ಥನೆ ಮಾಡಿಯೇ ಬರುತ್ತಿದ್ದರು. ಕೆಲವು ಶಾಖೆಗಳನ್ನು ಅವರು ಈ ಬಗೆಯಲ್ಲಿಯೂ ಪ್ರಾರಂಭಿಸಿ ಸ್ಥಾಯಿಯಾಗಿಸಿದ್ದಿದೆ.
ನಡಿಗೆ ತಪ್ಪಿದರೆ ಒಂದು ಹಳೇ ಸೈಕಲ್ ಅವರ ಪ್ರವಾಸದ ಸಾಧನ. ಶಾಖೆಗೆ ಹೋಗುವಾಗ ಅವರ ಜತೆಗೆ ನಾಲ್ಕಾರು ಹುಡುಗರು ಹೆಜ್ಜೆಹಾಕುವುದೇ ಸೈ ಅಥವಾ ಅವರ ಸೈಕಲಲ್ಲಿ ಮೂರ್ನಾಲ್ಕು ಹುಡುಗರು ಜೋತಾಡಿಕೊಂಡು ಕುಳ್ಳಿರುವುದೇ ಸೈ.
ಸೇವಾಮುಖಿ
ಸೇವೆಗೂ ಅಶೋಕರಿಗೂ ಹಾಲುಜೇನಿನ ಸಂಬಂಧ. ಬಡವಿದ್ಯಾರ್ಥಿಗಳಿಗೆ ಸಂಘದ ವಿದ್ಯಾನಿಧಿಯಿಂದ ಸಹಾಯ ಮಾಡಲು ಮುಂದಾಗುತ್ತಿದ್ದ ಅವರು, ಬಡವರಿಗೆ ಸರಕಾರೀ ವ್ಯವಸ್ಥೆಯ ಮಾಹಿತಿಯನ್ನು ಅರುಹಿ ಅದನ್ನು ಒದಗುವಂತೆ ಮಾಡುತ್ತಿದ್ದರು.
ಯೋಗ ಪ್ರಾಣಾಯಾಮಗಳ ನಿತ್ಯ ಅಭ್ಯಾಸಿಯಾಗಿದ್ದ ಅವರು, ಅದನ್ನು ಶಾಖೆಗಳಲ್ಲಷ್ಟೆ ಅಲ್ಲದೆ ರೋಗಿಗಳು ಮತ್ತಿತರ ಆವಶ್ಯಕತೆ ಇರುವ ಮಂದಿಗೆ ಉಪಯೋಗ ಆಗುವ ರೀತಿಯಲ್ಲಿ ಕಲಿಸಿಕೊಡುತ್ತಿದ್ದರು. ಉಡುಪಿ ಸುತ್ತಮುತ್ತಲಿನ ಕಂಚಿನಬೈಲು, ಇಂದ್ರಾಳಿ, ನೇತಾಜಿನಗರ, ಪ್ರಗತಿನಗರ, ಶಾಂತಿನಗರ ಮುಂತಾದೆಡೆಗಳಲ್ಲಿ ಅಂಥ ಆಸಕ್ತರನ್ನು ಸೇರಿಸಿ ವಾರಕ್ಕೊಮ್ಮೆ ಯೋಗ ಕಲಿಸುತ್ತಿದರು. ಯೋಗ ಕಲಿಸುತ್ತಲೇ ಹಿಂದೂ ಸಂಸ್ಕಾರಗಳ ಕುರಿತು ತಿಳಿಹೇಳುವುದೂ ಅವರ ಮುಖ್ಯ ಲಕ್ಷ್ಯಗಳಲ್ಲಿ ಒಂದಾಗಿತ್ತು.
ಗಾಂಜಾ ಅಭ್ಯಾಸ ಇದ್ದ ಒಬ್ಬಾತನನ್ನು ನಿರಂತರ ಸಂಪರ್ಕ ಮತ್ತು ಆತ್ಮೀಯ ಸಂಬಂಧದಿಂದಲೇ ಪರಿವರ್ತಿಸಲು ಪ್ರಯತ್ನಿಸಿ ಅದರಿಂದ ಆತನನ್ನು ಮುಕ್ತನನ್ನಾಗಿಸಿದ್ದರು. ದುಶ್ಚಟಗಳಿದ್ದ ಅನೇಕರನ್ನು ಅವರು ಹೀಗೆ ಬದಲಾಯಿಸುತ್ತಿದ್ದರು. ಅನೇಕರ ಬದುಕಿನಲ್ಲಿ ಬದಲಾವಣೆ ತರಲು ಅವರ ಪ್ರಯತ್ನನಿರಂತರತೆ ಹೀಗೆ ಸಾಗಿತ್ತು.
ಕೋವಿಡ್ ಮಹಾಮಾರಿ ಆವರಿಸಿದ್ದ ಸಂದರ್ಭದಲ್ಲಿ ಅವರು ಔಷಧ ಮತ್ತು ಆಹಾರಕಿಟ್ ವಿತರಣೆಯಲ್ಲಿ ಬಿಡುವಿಲ್ಲದವರಾಗಿದ್ದರು.
ಉಡುಪಿಯ ಬಡಗುಬೆಟ್ಟಿನಲ್ಲಿದ್ದು ಈಗ ಕಾರ್ಕಳದ ಬೈಲೂರಿಗೆ ಸ್ಥಳಾಂತರ ಆಗಿರುವ ‘ಹೊಸಬೆಳಕು’ ಅನಾಥಾಶ್ರಮಕ್ಕೆ ಅವರು ವಾರಕ್ಕೊಮ್ಮೆ ಭೇಟಿನೀಡಿ ಅಲ್ಲಿಯ ಎಲ್ಲರ ಆರೋಗ್ಯ ವಿಚಾರಿಸುತ್ತಿದ್ದರು. ತಮ್ಮಲ್ಲಿ ಕಷ್ಟಸುಖಗಳನ್ನು ತೋಡಿಕೊಳ್ಳುತ್ತಿದ್ದ ಅಲ್ಲಿಯವರನ್ನು ಸಾಂತ್ವನದ ಮಾತುಗಳಿಂದ ಸಂತೈಸುತ್ತಿದ್ದರು. ಅಲ್ಲಿ ಶ್ಲೋಕ, ಭಜನೆ ಮತ್ತಿತರ ಸಂಸ್ಕಾರಸಂಬಂಧಿತ ಸಂಗತಿಗಳನ್ನು ಹೇಳಿಕೊಡುತ್ತ ಅವರೆಲ್ಲರ ಬದುಕಿನಲ್ಲಿ ಒಂದು ದಿವ್ಯತೆಯನ್ನು ತುಂಬುವ ಕಾರ್ಯವನ್ನು ಮಾಡುತ್ತಿದ್ದರು. ಆ ಆಶ್ರಮದ ಮಾಲಿಕರು ಅಶೋಕರನ್ನು ಎಷ್ಟು ಹಚ್ಚಿಕೊಂಡಿದ್ದರೆಂದರೆ; ತೀವ್ರ ಬೆನ್ನುಮೂಳೆಘಾತದಿಂದ ಮಲಗಿದಲ್ಲೇ ಎಂಬಂತಾಗಿ ಸಂಘದ ಸ್ವಯಂಸೇವಕರ ಶುಶ್ರೂಷೆಯಲ್ಲಿದ್ದ ಅವರನ್ನು ತಾವೇ ನೋಡಿಕೊಳ್ಳುತ್ತೇವೆ ಎಂದು ಆ ಆಶ್ರಮಮಾಲಿಕರು ಸಂಘದ ಪ್ರಮುಖರಲ್ಲಿ ಪ್ರಾರ್ಥಿಸುವಷ್ಟು. ಆದರೆ ಹಾಗೆ ಅವರನ್ನು ಅಲ್ಲಿಗೆ ಕಳಿಸಿಕೊಡುವ ಪ್ರಮೇಯವೇ ಇರಲಿಲ್ಲ ಎನ್ನುವುದು ಬೇರೆ ವಿಚಾರ.
ನಿರ್ಭೀತ, ನಿಃಸ್ಪೃಹ
ಧೈರ್ಯಸ್ಥೈರ್ಯಗಳಲ್ಲಿ ಅಶೋಕರನ್ನು ಬಿಟ್ಟರೆ ಬೇರೆ ಇಲ್ಲ ಎಂಬಂಥ ವ್ಯಕ್ತಿತ್ವ. ಒಮ್ಮೆ ಶಾಖೆ ಮುಗಿಸಿಕೊಂಡು ಜಿಲ್ಲಾ ಪ್ರಚಾರಕ್ ಸುಧಾಕರರ ಜತೆಗೆ ಅವರು ಒಂದು ಮನೆಗೆ ಸಂಪರ್ಕಕ್ಕೆ ಹೋಗಿದ್ದ ಸಂದರ್ಭ. ಅಲ್ಲಿಯ ನಾಯಿಯೊಂದು ನೇರವಾಗಿ ಬಂದು ಅಶೋಕರನ್ನು ಕಚ್ಚಿಯೇ ಬಿಟ್ಟಿತು. ಏನೂ ಆಗಿಲ್ಲ ಎಂಬಂತೆ ಆ ಮನೆಯಲ್ಲಿ ಮಾತುಕತೆ ನಡೆಸಿ, ಪಾನೀಯ ಇತ್ಯಾದಿಗಳನ್ನು ಸ್ವೀಕರಿಸಿ ಹೊರಟರು. ಆದರೆ ಉಳಿದವರಿಗೆ ಆತಂಕ! ಎಂದೂ ಕಚ್ಚದ ನಾಯಿ ಇಂದು ಕಚ್ಚಿದೆ ಎಂದರೆ ಅದಕ್ಕೆ ಹುಚ್ಚು ಹಿಡಿದಿರಲಿಕ್ಕೇ ಬೇಕು ಎಂಬ ಅನುಮಾನದಿಂದ ವೈದ್ಯರನ್ನು ಕರೆಸಿದರು. ಅದಕ್ಕೆ ಹುಚ್ಚುಹಿಡಿದಿದೆ ಎಂದು ವೈದ್ಯರು ದೃಢಪಡಿಸಿದರು. ಆಗಲೂ ಅಶೋಕರ ಮುಖಭಾವದಲ್ಲಿ ಯಾವುದೇ ವ್ಯತ್ಯಾಸವಿಲ್ಲ! ಮತ್ತೆ ಔಷಧ ತಗೊಂಡು ಗುಣಪಡಿಸಿಕೊಂಡರೆನ್ನಿ. ಅವರು ಸೇವಾ ಪ್ರಮುಖರಾಗಿದ್ದ ಒಂದು ಸಂದರ್ಭ. ಉಡುಪಿ ಬಳಿ ಆತ್ರಾಡಿಯ ಸೇವಾಬಸ್ತಿ(ಉಪೇಕ್ಷಿತ ಬಂಧುಗಳ ವಸತಿಪ್ರದೇಶ)ಯೊಂದರಲ್ಲಿ ರಾಮತಾರಕಮಂತ್ರ ಕಾರ್ಯಕ್ರಮ. ಇದರ ಆಯೋಜನೆ ಅಶೋಕರದೇ. ಅಲ್ಲಿಗೆ ದುಬಾರಿ ಕಾರುಗಳಲ್ಲಿ ಬಂದಿದ್ದ ಕೆಲವು ಅಪರಿಚಿತ ವ್ಯಕ್ತಿಗಳನ್ನು ನೋಡಿ ‘ಇವರನ್ನೆಲ್ಲ ಆಮಂತ್ರಿಸಿದ್ದು ಯಾರು’ ಎಂದು ಮಾಹಿತಿಯನ್ನು ತಿಳಿಯುವ ನೆಲೆಯಲ್ಲಿ ಅಶೋಕರು ಒಬ್ಬರ ಬಳಿ ಕೇಳಿದರು. ಅದನ್ನು ಕೇಳಿಸಿಕೊಂಡು ತಪ್ಪಾಗಿ ಗ್ರಹಿಸಿದ ಒಬ್ಬರು ಅಶೋಕರನ್ನು ಯದ್ವಾತದ್ವಾ ಬೈದರು. ಅದಕ್ಕೆ ಸ್ವಲ್ಪವೂ ಪ್ರತಿಕ್ರಿಯಿಸದ ಅಶೋಕರು, ಯಾವುದೇ ಸ್ಪಷ್ಟನೆಯನ್ನೂ ನೀಡಹೋಗದೆ ಎಲ್ಲವನ್ನೂ ಶಾಂತವಾಗಿ ಕೇಳಿಸಿಕೊಂಡು ಸುಮ್ಮನಿದ್ದರು. ಸಂಘದ ನೀತಿನಿಯಮಗಳ ಕುರಿತು ಯಾವತ್ತೂ ಯಾರ ಬಗೆಗೇ ಆದರೂ ಖಡಕ್ ಇದ್ದ ಅವರು, ತಮ್ಮ ಕುರಿತ ತಪ್ಪಭಿಪ್ರಾಯದ ಬೈಗುಳಕ್ಕೆ ಅಸದೃಶ ಬಗೆಯಲ್ಲಿ ಮೌನವಹಿಸಿದರು. ಅವರ ಸಾಧಿಸಿದ್ದ ನಿಃಸ್ಪೃಹತೆಯು ಸಂಢಟಕನೊಬ್ಬನಿಗೆ ನಿಜಕ್ಕೂ ಮಾದರಿ.
ಧನನಿರ್ಮೋಹಿ
ಹಣಕ್ಕೂ ಅಶೋಕರಿಗೂ ಎಣ್ಣೆಸೀಗೆಸಂಬಂಧ.
ಅವರು ಮಾಡುತ್ತಿದ್ದ ಅಡುಗೆ ಕಸುಬಿಗೆ ಅಧಿಕ ಬೇಡಿಕೆ ಇದ್ದುದು ಬೇಸಿಗೆಯಲ್ಲಿ. ಆ ಪ್ರಮುಖ ದಿನಗಳಲ್ಲಿ ಅವರು ಕೈಯಿಂದ ಖರ್ಚುಮಾಡಿಕೊಂಡು ಸಂಘದ ಇಪ್ಪತ್ತು ದಿನಗಳ ‘ಸಂಘ ಶಿಕ್ಷಾ ವರ್ಗ’ ಶಿಬಿರಕ್ಕೆ ಹೋಗಿರುತ್ತಿದ್ದರು; ಅಧಿಕ ಸಂಪಾದನೆಯನ್ನು ಪೂರ್ಣ ನಷ್ಟಮಾಡಿಕೊಂಡು. ಅವರು ಎರಡು ಬಾರಿ ಪ್ರಚಾರಕರಾಗಿ ಹೊರಟಾಗಲೂ ಮನೆಯ ಆರ್ಥಿಕಸ್ಥಿತಿ ದೇವರಿಗೇ ಪ್ರೀತಿ!
ಬದುಕಿನ ಕೊನೆಯ ಎರಡು ವರ್ಷಗಳಲ್ಲಿ ‘ಧರ್ಮಜಾಗರಣ’ದ ಪೂರ್ಣಾವಧಿ ಕಾರ್ಯಕರ್ತರಾಗಿ ಇಡಿಯ ಜಿಲ್ಲೆಯಲ್ಲಿ ಇನ್ನಿಲ್ಲದಂತೆ ಓಡಾಡುತ್ತಿದ್ದರು. ಅದಕ್ಕಾಗಿ ನೀಡಲಾಗುವ ಸಂಭಾವನೆಯನ್ನು ಬೇಡವೆಂದು ನಿರಾಕರಿಸಿದ್ದರು. ಅವರ ಆರ್ಥಿಕ ಆವಶ್ಯಕತೆಯನ್ನು ಗಮನಿಸಿ ‘ಧರ್ಮಜಾಗರಣ’ದ ಪ್ರಾಂತಪ್ರಮುಖರಾದ ಮೋನಪ್ಪನವರು ಸಂಭಾವನೆಯ ಮೊತ್ತವನ್ನು ನೇರವಾಗಿ ಅವರ ಖಾತೆಗೆ ಜಮಾಮಾಡುತ್ತಿದ್ದರು. ಮತ್ತೆ ನೋಡಿದರೆ ಅವರು ಆ ಎರಡು ವರ್ಷಗಳಲ್ಲಿ ತಮ್ಮ ಖಾತೆಯಲ್ಲಿ ಎಷ್ಟು ಇದೆ ಅನ್ನುವುದನ್ನೂ ನೋಡಿರಲಿಲ್ಲ, ಒಂದು ಪೈಸೆಯನ್ನೂ ತೆಗೆದುಕೊಂಡಿರಲಿಲ್ಲ! ಕೊನೆಯಲ್ಲಿ ಆ ಮೊತ್ತ ಅನಿವಾರ್ಯವಾಗಿದ್ದ ಅವರ ಚಿಕಿತ್ಸೆಗೆ ಬಳಕೆಗೆ ಬಂತು.
ಅಡುಗೆ ಕೆಲಸದಲ್ಲಿ ಹಿಂದೆಂದೋ ಕೆಲವು ಕಾಲ ತಮ್ಮೊಂದಿಗೆ ಸಹೋದ್ಯೋಗಿ ಆಗಿದ್ದವರೊಬ್ಬರು ಅಪಘಾತಕ್ಕೀಡಾದಾಗ ಆರ್ಥಿಕವಾಗಿ ದುರ್ಬಲರಿದ್ದ ಅವರ ಆಸ್ಪತ್ರೆಖರ್ಚನ್ನು ಅಶೋಕರೇ ನೋಡಿಕೊಂಡರು. ರೋಗಿ ಗುಣಮುಖರಾಗಿ ದುಡಿಯಲು ಶಕ್ತರಾದ ಎಷ್ಟೋ ಸಮಯದ ಬಳಿಕವೂ ಅವರು ದುಡ್ಡು ಕೇಳಿದವರಲ್ಲ! ಕೇಳಲಾರರು ಕೂಡಾ.
ಮನೆಯಲ್ಲಿದ್ದ ಆರ್ಥಿಕ ಮುಗ್ಗಟ್ಟನ್ನು ಅವರು ಎಂದೂ ಯಾರ ಮುಂದೂ ತೋರಿಸಿಕೊಳ್ಳುತ್ತಿರಲಿಲ್ಲ. ಹೇಳಿಕೊಳ್ಳುತ್ತಿರಲಿಲ್ಲ. ಅವರು ಪ್ರಚಾರಕರಾಗಿದ್ದಾಗ ಆ ಮುಗ್ಗಟ್ಟನ್ನು ಅರ್ಥೈಸಿಕೊಂಡಿದ್ದ ಸುಧಾಕರರು ಒಂದಷ್ಟು ವ್ಯವಸ್ಥೆ ಮಾಡುತ್ತಿದ್ದರು. ‘ಸ್ವಂತಕ್ಕೆ ಸ್ವಲ್ಪ ಸಮಾಜಕ್ಕೆ ಸರ್ವಸ್ವ’ ಎಂಬ ಗುರೂಜಿ ಮಾತಿಗೆ ಕೃತಿಯಾದವರವರು ಎಂದು ಧಾರಾಳವಾಗಿ ಹೇಳಬಹುದು.
ವ್ಯಕ್ತಿತ್ವಸೂಚಿ
– ತಮ್ಮ ವಿಚಾರವನ್ನು ಮಂಡಿಸುವಲ್ಲಿ ಯಾವುದೇ ರಾಜಿ ಇಲ್ಲ. ಅನವಶ್ಯ ವಾದವಿಲ್ಲ. ಎಷ್ಟೇ ದೊಡ್ಡವರಾದರೂ ನೀತಿನಿಯಮಗಳನ್ನು ಸಡಿಲಿಸಿದವರಲ್ಲ, ಯಾರೊಂದಿಗೂ ಕೋಪಿಸಿಕೊಂಡವರಲ್ಲ. ಒಮ್ಮೆ ಗಳಿಸಿದ ಸ್ನೇಹ ಅವರಲ್ಲಿ ಶಾಶ್ವತ.
– ತೆಂಗಿನಕಾಯಿ ಒಡೆಯಲು ಅವರಿಗೆ ಕತ್ತಿ ಬೇಕಾಗುತ್ತಿರಲಿಲ್ಲ. ಒಂದು ಕೈಯಲ್ಲಿ ಹಿಡಿದು ಮತ್ತೊಂದರಲ್ಲಿ ಅದನ್ನು ಒಡೆಯುವಷ್ಟು ಶಕ್ತಿ ಇತ್ತು!
– ಆಡುವಾಗ ತಮ್ಮನ್ನು ಮರೆತೇಬಿಡುತ್ತಿದ್ದರು. 54ರ ಹರೆಯದಲ್ಲಿಯೂ ಅವರದು ಕಸುವಿನಿಂದ ಕೂಡಿದ ಕಬಡ್ಡಿ ಆಟ. ಅದನ್ನು ನೋಡಿ ಹುಬ್ಬೇರಿಸದವರಿಲ್ಲ!
– ಅಡುಗೆ ಕಸುಬು ಇದ್ದ ದಿನ ಉಳಿದಿರುವ ಸಿಹಿ ಇತ್ಯಾದಿ ವಿಶೇಷ ತಿಂಡಿತಿನಿಸುಗಳನ್ನು ಸಂಘಕಾರ್ಯಾಲಯದಲ್ಲಿ ಇಲ್ಲವೇ ಕಾರ್ಯಕರ್ತರು ಸೇರುವಲ್ಲಿ ತಂದು ಹಂಚಿ ಹರಟೆಹೊಡೆದು ಹೋಗುವುದು ಅವರ ದಿನಚರಿಯ ಒಂದು ಅಂಗವೇ ಆಗಿತ್ತು.
– ಸಂಘ ಮತ್ತು ಸಂಘೇತರ ವಲಯಗಳೆರಡರಲ್ಲಿಯೂ ಅವರಿಗೆ ದೊಡ್ಡ ಪ್ರಮಾಣದ ಸ್ನೇಹಿತರಿದ್ದರು. ಜತೆಗೆ ಕಾಡುತ್ತಿದ್ದ ಆರ್ಥಿಕ ಮುಗ್ಗಟ್ಟು. ಆದರೆ ಯಾರಲ್ಲಿಯೂ ಸಾಲ ಕೇಳಿದವರಲ್ಲ. ಸಾಲ ಮಾಡಿದವರಲ್ಲ. ಸ್ನೇಹವಷ್ಟನ್ನೂ ಸಮಾಜಕಾರ್ಯಕ್ಕಾಗಿ ವಿನಿಯೋಗಿಸಿದರು.
– ಅವರಲ್ಲಿದ್ದ ಶಾರೀರಿಕ ಬಲ ಗಮನಾರ್ಹವಾದುದೇ. ಅದೆಂದೂ ಅಹಂಕಾರವಾಗಿ ತೋರಿಕೊಳ್ಳಲಿಲ್ಲ.
– ಸಂಘದ ಪ್ರಮುಖ ಕಾರ್ಯಕ್ರಮವೊಂದು ನಿಶ್ಚಯವಾಗಿತ್ತು. ಅದೇ ಸಮಯಕ್ಕೆ ಸರಿಯಾಗಿ ಟ್ರಸ್ಟೊಂದು ಪ್ರತ್ಯೇಕ ಕಾರ್ಯಕ್ರಮವನ್ನು ಆಯೋಜನೆಮಾಡಿತ್ತು. ತಾವೂ ಸದಸ್ಯರಾಗಿದ್ದ ಆ ಟ್ರಸ್ಟಿನ ಈ ನಿರ್ಣಯವನ್ನು ಅವರು ಕಟುವಾಗಿ ವಿರೋಧಿಸಿದ್ದರು.
– ಉಡುಪಿಯಲ್ಲಿ ಜಿಲ್ಲಾ ಪ್ರಚಾರಕರಾಗಿದ್ದವರೊಬ್ಬರು ಅವರನ್ನು ‘ಪರ್ಕಳೇಶ್ವರ’ ಎಂದು ಸಾರ್ಥಕವಾಗಿ ಕರೆಯುತ್ತಿದ್ದರು.
– ಅವರ ಸಂಪರ್ಕ – ಆತ್ಮೀಯತೆಗಳಲ್ಲಿ ಸೇವಾಬಸ್ತಿ ಅಂದರೆ ತಥಾಕಥಿತ ಅಸ್ಪೃಶ್ಯರ ಮನೆಗಳು ಅಧಿಕ. ಸಾಮಾಜಿಕವಷ್ಟೇ ಅಲ್ಲದೆ ಅಲ್ಲಿರುವ ಆರ್ಥಿಕ, ಶೈಕ್ಷಣಿಕ ಇತ್ಯಾದಿ ಎಲ್ಲ ರೀತಿಯ ಕೊರತೆಗಳಿಗೆ ಅವರು ಸ್ಪಂದಿಸುತ್ತಿದ್ದರು.
– ಹಣದ ಕೊರತೆ ತಮ್ಮನ್ನೇ ಬಾಧಿಸುತ್ತಿದ್ದರೂ ಅದರೆಡೆಗೆ ಲಕ್ಷ್ಯಹಾಕದೆ ಬಡವರಿಗೆ ಧನಿಕರಿಂದ ಧನಸಹಾಯ ಒದಗಿಸುತ್ತಿದ್ದರು . ಬಡರೋಗಿಗಳಿಗೆ ಅದೇರೀತಿ ಅವರ ಔಷಧಸೇವೆಯೂ ನಡೆಯುತ್ತಿತ್ತು.
ತಮಗಾಗಿ ಬಿಪಿಎಲ್ ಕಾರ್ಡನ್ನು ಮಾಡಿಸಿಕೊಳ್ಳಲಿಲ್ಲ. ಅದರ ಅವಶ್ಯಕತೆ ಇರುವವರಿಗಾಗಿ ಓಡಾಡಿದರು. ಅಡುಗೆಅನಿಲ ಸಂಪರ್ಕವನ್ನೂ ಹೊಂದಿರಲಿಲ್ಲ. ಸ್ವಂತಕ್ಕೆ ಅಗತ್ಯವಿದ್ದುದನ್ನೂ ನಿರ್ಲಕ್ಷಿಸಿದರು. ಉಳಿದವರ ಅಗತ್ಯಗಳನ್ನು ಪೂರೈಸುವಲ್ಲಿ ಮೊದಲಿಗರಾದರು.
– ಬೀಡಾಡಿ ದನಗಳನ್ನು ಗೋಶಾಲೆಗೆ ಒಯ್ಯುವುದು, ಕಾಲಿಗೆ ಗಾಯಮಾಡಿಕೊಂಡ ಇಲ್ಲವೇ ಅನಾರೋಗ್ಯಪೀಡಿತ ದನಗಳಿಗೆ ವೈದ್ಯರಿಂದ ಶುಶ್ರೂಷೆಮಾಡಿಸುವುದು ಇತ್ಯಾದಿಗಳು ಅವರ ದಿನಚರಿಯಲ್ಲಿ ಜಾಗಪಡೆದಿದ್ದವು.
– ಬರಿಗಾಲ ನಡಿಗೆ, ಬಿಳಿಬಣ್ಣದ ಉಡುಗೆ, ಹಲ್ಲುಜ್ಜಲು ಸ್ನಾನಮಾಡಲು ಗೋವಿನುತ್ಪನ್ನ, ದೂರದೂರಿಗೆ ಸೈಕಲ್ಪಯಣ, ಸ್ವದೇಶೀ ವಸ್ತುಗಳ ಬಳಕೆ, ಬೆರಣಿಯಿಂದ ಅಗ್ನಿಹೋತ್ರ.. ಇವು ಅಶೋಕರ ವ್ಯಕ್ತಿತ್ವದ ಅವಿಭಾಜ್ಯ ಅಂಗಗಳಾಗಿದ್ದುವು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.