ಕುಬೇರ ಹಣದ ಒಡೆಯ ಎಂದು ನಂಬಿಕೆ. ಕಾರ್ನಾಡ್ ಸದಾಶಿವ ರಾವ್ ಅವರ ಹಿರಿಯರು ಮುಲ್ಕಿಯ ಸಾವಂತರಸರ ಶಾನುಭಾಗರಾಗಿದ್ದು, ಅವರ ತಂದೆ ರಾಮಚಂದ್ರ ರಾಯರು ಹೆಸರಾಂತ ವಕೀಲರಾಗಿ ಆಗರ್ಭ ಶ್ರೀಮಂತರಾಗಿದ್ದರು. ಸ್ವಾತಂತ್ರ್ಯ ಹೋರಾಟಕ್ಕಾಗಿ ಕರ್ನಾಟಕದ ಭಾಗಕ್ಕೆ ಕಾಂಗ್ರೆಸ್ ಚಳವಳಿಯನ್ನು ತಂದ ಕಾರ್ನಾಡ್ ಸದಾಶಿವ ರಾಯರು ಸ್ವಾತಂತ್ರ್ಯ ಹೋರಾ, ದಲಿತೋದ್ಧಾರ, ನೆರೆ ಪರಿಹಾರ, ವಿಧವಾ ಪುನರ್ವಿವಾಹ, ರಾಷ್ಟ್ರೀಯ ಶಾಲೆಗಳು ಮುಂತಾಗಿ ಜನಸೇವೆಯಲ್ಲೆ ತೊಡಗಿ ತಮ್ಮ ಶ್ರೀಮಂತಿಕೆ ಎಲ್ಲವನ್ನೂ ಕಳೆದುಕೊಂಡು ಕೊನೆಗೆ ಫೈಝ್ಪುರ್ ಕಾಂಗ್ರೆಸ್ ಅಧಿವೇಷನದಿಂದ ಹಿಂದಿರುಗುವಾಗ ಮುಂಬೈಯಲ್ಲಿ ಬೀದಿ ಬದಿಯಲ್ಲಿ ಕುಸಿದು ಬಿದ್ದರು. ಅವರನ್ನು ಹರ್ಕಿಶನ್ ಆಸ್ಪತ್ರೆಗೆ ಸೇರಿಸಲಾಯಿತು. ತನ್ನ ಅನಾರೋಗ್ಯವನ್ನು ಲೆಕ್ಕಿಸದೆ ಜ್ವರ ಪೀಡಿತರಾಗಿದ್ದ ಸ್ವಾತಂತ್ರ್ಯ ಹೋರಾಟಗಾರರೊಬ್ಬರಿಗೆ ಮದ್ದು ತೆಗೆದುಕೊಳ್ಳಲು ತಮ್ಮ ಬಳಿ ಕೊನೆಗೆ ಉಳಿದಿದ್ದ ಐದು ರೂಪಾಯಿಯನ್ನೂ ಕೊಟ್ಟಿದ್ದರು. ಒಬ್ಬ ನಿರ್ಗತಿಕ ಅನಾಥನಂತೆ ಆಸ್ಪತ್ರೆಗೆ ಸೇರಿದ್ದ ಸದಾಶುವ ರಾಯರ ಪಾರ್ಥೀವ ದೇಹ ಮರುದಿನ ಆಸ್ಪತ್ರೆಯಿಂದ ಹೊರ ಬರುವಾಗ ಕಾಲು ಹಾಕಲು ಜಾಗವಿಲ್ಲದಷ್ಟು ಜನ ಮುಂಬೈಯಲ್ಲಿ ಸೇರಿ ಅಂತಿಮ ಗೌರವವನ್ನು ಸಲ್ಲಿಸಿದ್ದರು. ಬಾಲಗಂಗಾಧರ ತಿಲಕರ ಮರಣದ ನಂತರ ಮುಂಬೈಯಲ್ಲಿ ಸಾವಿನ ಸಂದರ್ಭದಲ್ಲಿ ಆ ರೀತಿಯಲ್ಲಿ ಜನ ಸೇರಿದ್ದು ಕಾರ್ನಾಡ್ ಸದಾಶಿವ ರಾಯರಿಗೆ. ಒಬ್ಬ ನಿರ್ಗತಿಕನಿಗೆ ಈ ರೀತಿಯ ಗೌರವ ಸಲ್ಲುವುದಿಲ್ಲ. ಸಂತನಿಗೆ ಸಲ್ಲುವ ಗೌರವವರು. ಆದ್ದರಿಂದಲೇ ಕಾರ್ನಾಡ್ ಸದಾಶಿವ ರಾಯರು ‘ಕಬೀರನಾದ ಕುಬೇರ’.
1881 ರ ಯುಗಾದಿಯ ದಿನ ಜನಿಸಿದ್ದ ಸದಾಶಿವ ರಾಯರು 9 ಜನವರಿ 1937 ರಂದು ಮೃತರಾದರು. ಅವರ ಜೀವನವೂ ಸಂತನ ಶೈಲಿಯದೇ ಆಗಿತ್ತು. ಶಾಲೆಯ ಬಾಲಕ ಸದಾಶಿವ ರಾಯರು ಚಳಿಯಲ್ಲಿ ನಡುಗುತ್ತಿದ್ದ ಹುಡುಗನನ್ನು ಕಂಡು ತನ್ನ ಕೋಟನ್ನು ಬಿಚ್ಚಿ ಅವನಿಗೆ ಕೊಟ್ಟವರು. ಸದಾಶಿವ ರಾಯರ ಪತ್ನಿ ಶಾಂತಾ ಬಾಯಿ ಮಂಗಳೂರಿನಲ್ಲಿ ಮಹಿಳಾ ಸಭಾವನ್ನು ಪ್ರಾರಂಬಿಸಿದ್ದರು. ಈಗಲೂ ಅದೇ ಮಹಿಳಾ ಸಭಾ ಇದೆ. ಹಲವು ಬಾರಿ ಸತ್ಯಾಗ್ರಹಕ್ಕೆ ಹೋಗಿ ಸೆರೆವಾಸ ಅನುಭವಿಸಿದ್ದ ಸದಾಶಿವ ರಾಯರು ತಮ್ಮ ಎಳೆಯ ಮಗನ ಚಿಕಿತ್ಸೆ ಫಲಕಾರಿಯಾಗದೆ ಮಗನ ಪಾರ್ಥೀವ ದೇಹ ಬರುವಾಗಲೂ ಅವರು ಸ್ವಾತಂತ್ರ್ಯಕ್ಕಾಗಿ ಸತ್ಯಾಗ್ರಹದಲ್ಲಿ ನಿರತರಾಗಿದ್ದರು. ದಕ್ಷಿಣ ಕನ್ನಡ ಜಿಲ್ಲೆ ಮತ್ತು ಕಾಸರಗೋಡು ಭಾಗಗಳಲ್ಲಿ ಖಾದಿ ಘಟಕಗಳನ್ನು ಸ್ಥಾಪಿಸಿ ಕರಕುಶಲ ಕರ್ಮದ ಶಿಕ್ಷಣ ಕೊಡಿಸಿದ್ದರು. ಕುದ್ಮಲ್ ರಂಗರಾಯರ ಡಿಪ್ರೆಸ್ಡ್ ಕ್ಲಾಸಸ್ ಮಿಷನ್ ನಲ್ಲೂ ಕೆಲಸ ಮಾಡಿದ್ದರು. 21 ರಾಷ್ಟ್ರೀಯ ಶಾಲೆಗಳನ್ನು ತೆರೆದಿದ್ದರು. ಶ್ರೀಹರಿಯ ಭಕ್ತರಾಗುದ್ದ ಸದಾಶಿವ ರಾಯರು ಧಾರ್ಮಿಕ ಸಮನ್ವಯದ ಪ್ರತೀಕರಾಗಿದ್ದು ಅವರ ಅಂತಿಮ ಯಾತ್ರೆಗೆ ಹಿಂದೂಗಳು ಹೂವುಗಳಿಂದ, ಕ್ರೈಸ್ತರು ಮೇಣದ ಬತ್ತಿಗಳಿಂದ, ಮುಸ್ಲಿಮರು ಧೂಪ ಲೋಬಾನಗಳಿಂದ, ಪಾರ್ಸಿಗಳು ಚಂದನದ ತುಂಡುಗಳಿಂದ ಗೌರವಾರ್ಪಣೆ ಮಾಡಿದ್ದರು. ಸ್ತ್ರೀ ಸ್ವಾತಂತ್ರ್ಯದ ಪ್ರತಿಪಾದಕರಾಗಿದ್ದ ಅವರು ತಿಲಕ್ ವಿದ್ಯಾಲಯದ ಮೂಲಕ ಹಿಂದಿಯ ಪ್ರಚಾರ ಕಾರ್ಯವನ್ನೂ ಮಾಡಿದ್ದರು. ಈಗ ಮಂಗಳೂರಿನಲ್ಲಿರುವ ದಕ್ಷಿಣ ಕನ್ನಡ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕಿನ ಜಾಗದಲ್ಲಿ ಕಾರ್ನಾಡ್ ಸದಾಶಿವ ರಾಯರ ಮನೆ ಇತ್ತು. ಅವರು ಸಾಲಪಡೆದುಕೊಂಡಿದ್ದವರು ಆಸ್ತಿಯ ಬೆಲೆ ಕಡಿಮೆ ಇದ್ದಾಗ ಮತ್ತು ಸದಾಶಿವ ರಾಯರು ಜೈಲಿನಲ್ಲಿದ್ದಾಗ ಅವರ ಈ ಮನೆಯನ್ನು ಹರಾಜು ಹಾಕಿಸಿದ್ದರು. ಹರಾಜನ್ನು ತಡೆಯಲು ತಡೆಯಾಜ್ಞೆ ತರಬಹುದೆಂದು ವಕೀಲರಾಗಿದ್ದ ಕೆ. ಆರ್. ಆಚಾರ್ ತಿಳಿಸಿದರೂ ಸದಾಶಿವ ರಾಯರ ತಾಯಿ ರಾಧಾ ಬಾಯಿ,” ಮಗ ಯಾವ ಕೆಟ್ಟದನ್ನೂ ಮಾಡಲಿಲ್ಲ. ಸಾಲವನ್ನು ತೀರಿಸಬೇಕಾದ್ದು ನಮ್ಮ ಜವಾಬ್ದಾರಿ” ಎಂದು ಮನೆಯನ್ನು ಬಿಟ್ಟು ಕದ್ರಿಯ ಬಳಿ ಬಾಡಿಗೆ ಮನೆಗೆ ಹೋಗಿದ್ದರು. ಮಹಾತ್ಮಾ ಗಾಂಧಿ, ಜವಾಹರ ಲಾಲ್ ನೆಹರೂ, ಸರೋಜಿನಿ ನಾಯ್ಡು ದಕ್ಷಿಣ ಕನ್ನಡ ಭಾಗಕ್ಕೆ ಬಂದಾಗ ಸದಾಶಿವ ರಾಯರಲ್ಲೆ ತಂಗುತ್ತಿದ್ದರು.
ಸದಾಶಿವ ರಾಯರು ಮೃತರಾಗಿ ಒಂದು ವರ್ಷದ ನಂತರ ಸದಾಶಿವ ರಾಯರ ಜನ್ಮದಿನವಾದ ಯುಗಾದಿಯಂದೇ ಅವರ ತಾಯಿ ಮೃತರಾದರು. ಸದಾಶಿವ ರಾಯರ ಹಿರಿಯ ಮಗಳು ಸುಗುಣಾ ವಿವಾಹಿತೆಯಾದರೂ ಮಕ್ಕಳಿರಲಿಲ್ಲ. ಸುಗುಣಾ ಅವರು 8 ಮಾರ್ಚ್ 1976 ರಂದು ನಿಧನರಾದರು. ಎರಡನೆಯ ಮಗಳು ಡಾ. ರಾಧಾ ಅವಿವಾಹಿತೆ. 6 ಮಾರ್ಚ್ 1977 ರಂದು ನಿಧನರಾದರು. ಸದಾಶಿವ ರಾಯರ ಸ್ಮರಣಾರ್ಥ ಬೆಂಗಳೂರಿನಲ್ಲಿ 65 ನೆಯ ಕಾಂಗ್ರೆಸ್ ಅಧಿವೇಷನ ನಡೆದ ಜಾಗವನ್ನು
‘ ಸದಾಶಿವ ನಗರ’ ಎಂಬ ಹೆಸರಿನಿಂದ ಕರೆಯಲಾಗಿದೆ.
ಹೀಗಿದ್ದ ಕಾರ್ನಾಡ್ ಸದಾಶಿವ ರಾಯರ ಕುರಿತ ಅಧ್ಯಯನ ಕೃತಿಯನ್ನು ಅರವಿಂದ ಚೊಕ್ಕಾಡಿಯವರು ಬರೆದಿದ್ದು ನವಕರ್ನಾಟಕ ಪ್ರಕಾಶನದವರು ಪ್ರಕಟಿಸಿದ್ದಾರೆ. ಈ ಕೃತಿಯನ್ನು ಮೂಡುಬಿದಿರೆಯ ಸಮಾಜ ಮಂದಿರ ಸಭಾದವರು 1 ಎಪ್ರಿಲ್ 2023 ರಂದು ಅಪರಾಹ್ನ 4.30 ಕ್ಕೆ ಮೂಡುಬಿದಿರೆಯ ಸಮಾಜ ಮಂದಿರದಲ್ಲಿ ಲೋಕಾರ್ಪಣೆಗೊಳಿಸಲಿದ್ದಾರೆ. ಹಿರಿಯ ಸಾಹಿತಿ ಡಾ. ನಾ. ಮೊಗಸಾಲೆಯವರು ಕೃತಿಯ ಲೋಕಾರ್ಪಣೆ ನಡೆಸಲಿರುವರು. ಹಿರಿಯ ಇತಿಹಾಸ ಸಂಶೋಧಕ ಡಾ.ಪುಂಡಿಕಾಯ್ ಗಣಪಯ್ಯ ಭಟ್ ಅವರು ಕೃತಿ ಪರಿಚಯವನ್ನು ಮಾಡಲಿರುವರು. ಉಡುಪಿಯ ಶ್ರೀ ಪೂರ್ಣಪ್ರಜ್ಞ ಕಾಲೇಜಿನ ಪ್ರಾಂಶುಪಾಲರಾದ ಡಾ. ಸುಕನ್ಯಾ ಮೇರಿ ಅವರು ಆಶಯ ನುಡಿಯನ್ನು ಆಡಲಿರುವರು. ಸಮಾಜ ಮಂದಿರ ಸಭಾದ ಅಧ್ಯಕ್ಷರಾದ ಶ್ರೀ ಕೆ. ಅಭಯಚಂದ್ರ ಜೈನ್ ಅವರು ಸಭೆಯ ಅಧ್ಯಕ್ಷತೆ ವಹಿಸಲಿರುವರು.
✍️ ಅರವಿಂದ ಚೊಕ್ಕಾಡಿ
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.