ಹಬ್ಬಗಳ ಸಂಭ್ರಮವೀಗ, ಭಾದ್ರಪದ ಶುದ್ಧ ಚೌತಿಯಂದು ಶ್ರೀಗಣೇಶ ಹಬ್ಬವನ್ನು ಆಚರಿಸಲಾಗುತ್ತದೆ. ಸ್ವಾತಿ ನಕ್ಷತ್ರದ ಸಿಂಹರಾಶಿಯಲ್ಲಿ ಪ್ರತಿಷ್ಟಾಪನೆಗೊಳ್ಳುವ ಶ್ರೀಗಣೇಶ ಸರ್ವರಿಗೂ ಪ್ರೀತಿ ಪಾತ್ರನು. ಚಿಕ್ಕ ಮಕ್ಕಳಿಂದ ಹಿಡಿದು ದೊಡ್ಡವರ ತನಕ ಗಣಪತಿ ಎಲ್ಲರಿಗೂ ಅಚುಮೆಚ್ಚಿನ ದೇವರು. ಗಣಪತಿಗೆ ದೂರ್ವ ಅತಿ ಶ್ರೇಷ್ಠ. ಎಲ್ಲಾ ಗಣಗಳ ಮೂಲ ಅಧಿಪತಿ ಗಣಪತಿಯೇ. ವಿದ್ಯಾ ಬುದ್ಧಿಗಳಿಗಧಿಪತಿ ಈತ.
ಗಣಪತಿಯ ಪೂಜೆ ಆರಾಧನೆಯೇ ಒಂದು ದೊಡ್ಡ ಸಂಭ್ರಮ. ಆತನ ಆ ವಿಭಿನ್ನ ರೂಪ ಹಲವು ಬಗೆಗಳನ್ನು ವರ್ಣಿಸುತ್ತದೆ. ತೀಕ್ಷ್ಣದೃಷ್ಟಿಯನ್ನು ಹೊಂದಿದ, ಗೆರಸೆಯಂತ ಕಿವಿ ಅಥವಾ ಮೊರದಗಲದ ಕಿವಿ. ಎಲ್ಲವನ್ನು ಕೇಳಬಲ್ಲ ಕಿವಿ, ಚುರುಕು ಬುದ್ದಿ, ವೇಗದ ಬರವಣಿಗೆ ಈ ಎಲ್ಲಾ ಗುಣಗಳ ಪ್ರಾಪ್ತಿಗೆ ಗಣಪತಿಯನ್ನು ಆರಾಧಿಸಲಾಗುತ್ತದೆ.
ಮನೆ ಮನೆಗಳಲ್ಲಿ ಮಾತ್ರವಲ್ಲದೇ ಎಲ್ಲೆಲ್ಲೂ ಸಾರ್ವಜನಿಕ ಶ್ರೀ ಗಣೇಶೋತ್ಸವವನ್ನು ಆಚರಿಸಲಾಗುತ್ತದೆ.
ಈ ಆಚರಣೆಯನ್ನು ಪ್ರಾರಂಭಿಸಿದವರು ಬಾಲಗಂಗಾಧರ ತಿಲಕರು. ಸ್ವಾತಂತ್ರ್ಯದ ಸಂದರ್ಭ ತಮ್ಮ ದೇಶವಾಸಿಗಳನ್ನು ಸಂಘಟಿಸಿ ಒಗ್ಗೂಡಿಸಲು ಈ ಉತ್ಸವವನ್ನು ವೇದಿಕೆಯಾಗಿ ಕಲ್ಪಿಸಿದರು. ಆ ಸಂದರ್ಭ ದೇಶಕ್ಕಾಗಿ ಕಾರ್ಯಚರಿಸಲು ಮತ್ತು ಜನರನ್ನು ಹುರಿದುಂಬಿಸಲು ಕಾರ್ಯಕ್ರಮಗಳನ್ನು ಹಮ್ಮಿ ಕೊಳ್ಳಲಾಗಿತ್ತು. ಈ ಮೂಲಕ ಗಣೇಶಹಬ್ಬ ಮೇಲು- ಕೀಳನ್ನು ತೊಳೆದು ಹಾಕುವಲ್ಲಿ ಸಹಾಯಕವಾಯಿತು. ಈಗ ಸಾರ್ವಜನಿಕ ಗಣೆಶೋತ್ಸವ ರಾಷ್ಟ್ರದೆಲ್ಲೆಡೆ ಪ್ರಸಿದ್ಧಿಯನ್ನು ಪಡೆದಿದೆ.
ಮನಸ್ಸಿಗೆ ಬಲು ಹತ್ತಿರನಾಗಿ, ವಿಘ್ನಗಳನ್ನು ದೂರ ಮಾಡುವ ವಿಘ್ನವಿನಾಶಕ ಪ್ರಥಮ ವಂದಿತನೂ ಹೌದು. ಜಾತಿ ಧರ್ಮಗಳ ಹಂಗಿಲ್ಲದೆ ಜನ ಗಣಪತಿಯನ್ನು ಆರಾಧಿಸುತ್ತಾರೆ. ಹತ್ತು ಹಲವು ಬಗೆಯ ತಿಂಡಿಗಳನ್ನು, ನೈವೇದ್ಯ, ಕಬ್ಬು ಮುಂತಾದುವುಗಳನ್ನು ಹಬ್ಬದ ದಿನ ಗಜಾನನನಿಗೆ ಅರ್ಪಣೆ ಮಾಡುತ್ತಾರೆ.
ಅತೀ ಪ್ರೀತಿ ಪಾತ್ರ ಗಣಪನನ್ನು ಜನ ತಮ್ಮ ಪ್ರೀತಿಗೆ ಅನುಗುಣವಾಗಿ ಚಿತ್ರಿಸುತ್ತಾರೆ. ಕೆಲವು ಕಡೆ ಟ್ರಾಫಿಕ್ ಜಾಮ್ ಗಣಪ ಕಣ್ಮನ ಸೆಳೆದರೆ, ಕೆಲವೆಡೆ ಬಾಹುಬಲಿ ಗಣಪ ಜನರನ್ನು ಆಕರ್ಷಿಸುತ್ತಾನೆ. ಹೀಗಿ ಪ್ರಚಲಿತಗಳನ್ನು ಬಿಂಬಿಸುವ ರೂಪದಲ್ಲಿ ಚೌತಿಯ ಸಂದರ್ಭದಲ್ಲಿ ಗಣಪ ಪ್ರತ್ಯಕ್ಷನಾಗುತ್ತಾನೆ. ಅವರವರ ಭಾವಕ್ಕೆ ತಕ್ಕಂತೆ ಗಣಪನ ಮೇಲಿನ ಭಕ್ತಿಯನ್ನು ಅಭಿವ್ಯಕ್ತಿಗೊಳಿಸುವ ಕ್ರಮವಿದು. ಇಷ್ಟು ಆತ್ಮೀಯವಾಗಿ ತನ್ನ ದೇವರನ್ನು ಚಿತ್ರಿಸುವ ಅವಕಾಶ ಬಹುಶಃ ಗಣಪನ ಭಕ್ತರಿಗೆ ಮಾತ್ರ ಇರುತ್ತದೆ.
ಚೌತಿಯ ದಿನದಿಂದ ಹಿಡಿದು ೧೦ ದಿನ, ಒಂದು ತಿಂಗಳವರೆಗೂ ಗಣಪತಿಯ ಮೂರ್ತಿಯನ್ನು ಪ್ರತಿಷ್ಠಾಪನೆಗೊಳಿಸಿ ಆರಾಧಿಸಲಾಗುತ್ತದೆ. ಕೊನೆಗೆ ಭಾವುಕವಾಗಿ ಆತನಿಗೆ ವಿದಾಯವನ್ನು ಹೇಳಲಾಗುತ್ತದೆ. ಆ ಭಾವುಕತೆಯ ನಡುವೆಯೂ ಮುಂದಿನ ವರ್ಷ ಮತ್ತೆ ಬಾ ಎಂಬ ಉದ್ಘೋಷವನ್ನು, ಆ ಮಂಗಳಮೂರ್ತಿಗೆ, ಮೋದಕ ಪ್ರಿಯನಿಗೆ ಜೈಜೈಕಾರವನ್ನೂ ಹಾಕಲಾಗುತ್ತದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.