ಬೆಳ್ತಂಗಡಿ : ದ.ಕ.ಜಿಲ್ಲೆಯಲ್ಲಿ ರೈತರು ಆರ್ಥಿಕವಾಗಿ ಸದೃಢವಾಗಿದ್ದಾರೆ. ಇದಕ್ಕೆ ಸಹಕಾರಿ ರಂಗವೇ ಕಾರಣ ಎಂದು ದ.ಕ.ಜಿ.ಕೇಂದ್ರ ಸಹಕಾರಿ ಬ್ಯಾಂಕಿನ ಅಧ್ಯಕ್ಷ ಎಂ.ಎನ್. ರಾಜೇಂದ್ರ ಕುಮಾರ್ ಹೇಳಿದರು.ಸೋಮವಾರ ಅವರು ಗೇರುಕಟ್ಟೆಯಲ್ಲಿನ ಕಳಿಯ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ನೂತನ ಸಹಕಾರಿ ಸಭಾಭವನದ ಉದ್ಘಾಟನೆ ಹಾಗೂ ಶತಮಾನೋತ್ಸವ ವರ್ಷಾಚರಣೆಯ ಸಮಾರೋಪ ಸಮಾರಂಭದಲ್ಲಿ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದರು.
ಸರಕಾರದ ಯಾವುದೇ ಯೋಜನೆಗಳು, ಸವಲತ್ತುಗಳು ನೇರವಾಗಿ ತಲುಪುತ್ತವೆಂದಾದರೆ ಅದಕ್ಕೆ ಸಹಕಾರಿ ಸಂಘಗಳೂ ಕಾರಣ. ಹೀಗಾಗಿ ಇಂದು ಸಹಕಾರಿ ರಂಗ ಪವಿತ್ರವಾದ ಕ್ಷೇತ್ರವಾಗಿದೆ. ಪ್ರತಿಯೊಂದು ಸಹಕಾರಿ ಸಂಘದ ವ್ಯಾಪ್ತಿಯಲ್ಲಿ ಬರುವ ಗ್ರಾಮಗಳ ಗ್ರಾಮಸ್ಥರ ಎಲ್ಲಾ ಆರ್ಥಿಕ ವ್ಯವಹಾರಗಳು ಸಂಘದ ಮೂಲಕವೇ ನಡೆಯುವಂತಾಗಬೇಕು. ಸ್ಪರ್ಧಾತ್ಮಕವಾದ ಇಂದಿನ ದಿನಗಳಲ್ಲಿ ಇಂತಹ ಗ್ರಾಮೀಣ ಪ್ರದೇಶದಲ್ಲಿ ಈ ರೀತಿಯ ಕಾರ್ಯಕ್ರಮ ಮಾಡಬೇಕಾದರೆ ಅಪೂರ್ವ ಶಕ್ತಿ ಬೇಕು. ಇಲ್ಲಿನ ಸಂಘದ ಅಧ್ಯಕ್ಷ ವಸಂತ ಮಜಲು ಅವರು ಆ ಶಕ್ತಿಯನ್ನು ತೋರಿಸಿಕೊಟ್ಟಿದ್ದಾರೆ ಎಂದ ಅವರು ಪುರುಷರ ಸಮಾಜಸೇವೆಯ ಹಿಂದೆ ಮಹಿಳೆಯ ಶಕ್ತಿಯೂ ನೆರವಾಗುತ್ತದೆ. ಒಗ್ಗಟ್ಟಿನಲ್ಲಿ ಬಲವಿದೆ ಎಂಬುದನ್ನು ಇಂದಿನ ಕಾರ್ಯಕ್ರಮ ತೋರಿಸಿಕೊಟ್ಟಿದೆ ಎಂದು ಶ್ಲಾಘಿಸಿದರು.
ದೀಪಬೆಳಗಿಸಿ. ಕಣಜ ಎಂಬ ಸ್ಮರಣ ಸಂಚಿಕೆ ಬಿಡುಗಡೆಗೊಳಿಸಿ ಆಶೀರ್ವದಿಸಿದ ಒಡಿಯೂರು ಶ್ರೀ ಗುರದೇವಾನಂದ ಸ್ವಾಮೀಜಿ ಅವರು, ಕೃಷಿ ಮತ್ತು ಋಷಿ ಸಂಸ್ಕೃತಿಯಿಂದಲೇ ದೇಶ ಜಗದ್ಗುರವಾಗಬಲ್ಲುದು. ನಮ್ಮ ಪಂಚಕೋಶಗಳು ಜಾಗೃತಿಯಲ್ಲಿರಬೇಕಾದರೆ ಮೊದಲು ಕೃಷಿಯ ಉಳಿವು ಅಗತ್ಯ. ಮಾನವ ಹುಟ್ಟು ಸಾವಿನ ತನಕ ಎಲ್ಲರೂ ಸಹಕಾರಿಗಳೇ. ಜೀವನದ ತತ್ವ ಸಹಕಾರೀ ತತ್ವದೊಳಗೆ ತುಂಬಿದೆ. ನಿರ್ಮಲ ಮನಸ್ಸಿನವರ ಗೆಳೆತನಕ್ಕೆ ಉತ್ತಮ ಭವಿಷ್ಯವಿದೆ ಇದರಿಂದ ಗ್ರಾಮದ ಅಭಿವೃದ್ಧಿ ಅದಂತೆ. ಅಂತರಂಗ-ಬಹಿರಂಗದ ಸಮಾನ ಬೆಳವಣಿಗೆಯಿಂದ ವ್ಯಕ್ತಿತ್ವದ ನಿರ್ಮಾಣವಾಗುತ್ತದೆ ಎಂದರು.
ಸಾಂಸದ ನಳೀನ್ಕುಮಾರ್ ಕಟೀಲು ಅವರು, ಸರಕಾರ ಸಾಲಮನ್ನಾದಂತಹ ಯೋಜನೆ ತಂದಲ್ಲಿ ಅದರ ನೇರ ಹೊಡೆತ ಬೀಳುವುದು ಸಹಕಾರಿ ಸಂಘಕ್ಕೇ. ಆದ್ದರಿಂದ ಸರಕಾರ ಇಂಥಹ ಸಂದರ್ಭದಲ್ಲಿ ಸಾಲಮನ್ನಾದ ಹಣವನ್ನು ಶೀಘ್ರವಾಗಿ ಸಂಸ್ಥೆಗಳಿಗೆ ಪಾವತಿಸಿ ನೆರವಾಗಬೇಕು. ಪಾರದರ್ಶಕತೆಯ ವ್ಯವಹಾರ ಸಂಘದ ಏಳಿಗೆಗೆ ಕಾರಣವಾಗುತ್ತದೆ ಎಂದರು. ಸುಮಾರು ರೂ.80 ಲಕ್ಷ ವೆಚ್ಚದಲ್ಲಿ ನಿರ್ಮಿಸಲಾದ ಸಭಾಭವನದ ಉದ್ಘಾಟನೆಯನ್ನು ನೆರವೇರಿಸಿದ ಶಾಸಕ ಕೆ.ವಸಂತ ಬಂಗೇರ ಅವರು ಗೇರುಕಟ್ಟೆಯ ಆಸುಪಾಸಿನ ಜನರ ಆರ್ಥಿಕತೆಗೆ ಬಲ ತುಂಬಿರುವ ಇಲ್ಲಿನ ಸಹಕಾರಿ ಸಂಸ್ಥೆ ನಿರ್ಮಿಸಿರುವ ಭವನವು ಎಲ್ಲರಿಗೂ ಪ್ರಯೋಜನಕಾರಿಯಾಗಲಿ ಎಂದರು.
ಡಿಸಿಸಿ ಬ್ಯಾಂಕಿನ ಅಧ್ಯಕ್ಷ ಎಂ.ಎನ್.ರಾಜೇಂದ್ರ ಕುಮಾರ್ ಅವರನ್ನು, ಕಳಿಯ ಪ್ರಾ.ಕೃ.ಪ.ಸ.ಸಂಘದ ಅಧ್ಯಕ್ಷ ವಸಂತ ಮಜಲು ಅವರನ್ನು, ಸಂಘದ ಮಾಜಿ ಅಧ್ಯಕ್ಷರುಗಳನ್ನು, ಗ್ರಾಮದ ನಿವೃತ್ತ, ಹಾಲಿ ಯೋಧರನ್ನು, ಸಾರ್ವಜನಿಕ ಕ್ಷೇತ್ರದ ಸಾಧಕರನ್ನು, ಬ್ಯಾಂಕಿನ ನಿವೃತ್ತ ಸಿಬ್ಬಂದಿಗಳನ್ನು, ಕಟ್ಟಡದ ಗುತ್ತಿಗೆದಾರರನ್ನು, ಪ್ರತಿಭಾನ್ವಿತ ವಿದ್ಯಾರ್ಥಿಗಳನ್ನು ಕಾರ್ಯನಿರ್ವಹಣಾಧಿಕಾರಿಯವರನ್ನು ಸಮ್ಮಾನಿಸಲಾಯಿತು. ಶತಮಾನೋತ್ಸವ ಸಂದರ್ಭ ಆಯೋಜಿಸಲಾಗಿದ್ದ ವಿವಿಧ ಸ್ಪರ್ಧೆಗಳಲ್ಲಿ ವಿಜೇತರಾದವರಿಗೆ ಬಹುಮಾನ ನೀಡಲಾಯಿತು.
ಜಿ.ಪಂ.ಅಧ್ಯಕ್ಷೆ ಆಶಾ ತಿಮ್ಮಪ್ಪ ಗೌಡ ಸಭಾವೇದಿಕೆ ಉದ್ಘಾಟಿಸಿದರು. ಕ್ಯಾಂಪ್ಕೋ ಅಧ್ಯಕ್ಷ ಸತೀಶ್ಚಂದ್ರ ಪಾಕಶಾಲೆಯನ್ನು ಉದ್ಘಾಟಿಸಿದರು. ಮಾವಿನಕಟ್ಟೆ ಸಂತ ಅನ್ನಾ ಚರ್ಚ್ ಧರ್ಮಗುರು ತೋಮಸ್ ಸಿಕ್ವೇರಾ, ತಾ.ಪಂ.ಅಧ್ಯಕ್ಷೆ ಜಯಂತಿ ಪಾಲೇದು, ಬಿಜೆಪಿ ಜಿಲ್ಲಾಧ್ಯಕ್ಷ ಪ್ರತಾಪಸಿಂಹ ನಾಯಕ್, ಜಿಲ್ಲಾ ಹಾಲು ಉತ್ಪಾದಕರ ಒಕ್ಕೂಟ ಅಧ್ಯಕ್ಷ ರವಿರಾಜ ಹೆಗ್ಡೆ, ಸ್ಕ್ಯಾಡ್ಸ್ ಅಧ್ಯಕ್ಷ ರವೀಂದ್ರ ಕಂಬಳಿ, ತುಳು ಚಿತ್ರ ನಟಿ ದಿವ್ಯಶ್ರೀ, ಕಳಿಯ ಗ್ರಾ.ಪಂ.ಅಧ್ಯಕ್ಷ ಶರತ್ ಕುಮಾರ್, ಕುವೆಟ್ಟು ಗ್ರಾ.ಪಂ.ಅಧ್ಯಕ್ಷ ಅಶೋಕ್ ಕೋಟ್ಯಾನ್, ಸಂಘದ ಉಪಾಧ್ಯಕ್ಷ ರಾಜೀವ ಗೌಡ, ನಿರ್ದೇಶಕರುಗಳು ಉಪಸ್ಥಿತರಿದ್ದರು.
ಕಾರ್ಯಕ್ರಮದ ಮೊದಲು ಗೇರುಕಟ್ಟೆ ಪೇಟೆಯಲ್ಲಿ ಶತಮಾನೋತ್ಸವ ಸವಿ ನೆನಪಿಗಾಗಿ ಆಕರ್ಷಕ ಸಹಕಾರಿ ಮೆರವಣಿಗೆ ನಡೆಯಿತು. ಕಾರ್ಯಕ್ರಮ ಬಳಿಕ ಸತ್ವಪರೀಕ್ಷೆ ಎಂಬ ತಾಳಮದ್ದಳೆ, ರಾತ್ರಿ ರಡ್ಡೆಟ್ ಏರೆಡ್ಡೆ ಎಂಬ ತುಳು ಹಾಸ್ಯ ನಾಟಕ ನಡೆಯಿತು. ಸಂಘದ ಅಧ್ಯಕ್ಷ ವಸಂತ ಮಜಲು ಸ್ವಾಗತಿಸಿ ಪ್ರಸ್ತಾವಿಸಿದರು. ಮುಖ್ಯ ಕಾರ್ಯನಿರ್ವಹಣಾಧಿಕಾರಿ ಕೆ.ಎಸ್.ಹರಿಪ್ರಸಾದ್ ವಂದಿಸಿದರು. ಅಜಿತ್ಕುಮಾರ್ ಕೊಕ್ರಾಡಿ ಕಾರ್ಯಕ್ರಮ ನಿರ್ವಹಿಸಿದರು.
ಎತ್ತಿನ ಹೊಳೆಯ ಯೋಜನೆಯ ಬಗ್ಗೆ ವೈಜ್ಞಾನಿಕ ಚಿಂತನೆ ಅಗತ್ಯ. ಯೋಜನೆಗಳಿಗೆ ಜನರ ವಿರೋಧವಿದ್ದರೆ ಅದು ಯಾವತ್ತೂ ಯಶಸ್ವಿಯಾಗಲಾರದು. ಈ ಬಗ್ಗೆ ಜನತೆ ಸೂಕ್ಷ್ಮವಾಗಿ ಅವಲೋಕಿಸಬೇಕು. ಕರಾವಳಿಯನ್ನು ಕರಟಿಸಲು ಬಿಡಬಾರದು –ಒಡಿಯೂರು ಶ್ರೀ
ಜಿಲ್ಲೆಯ ಅಡಿಕೆ ಬೆಳೆಗಾರರನ್ನು, ಹೈನುಗಾರರನ್ನು ಸಹಕಾರಿ ಕ್ಷೇತ್ರ ಕೈ ಹಿಡಿದು ಮೇಲೆತ್ತಿದೆ – ಆಶಾ ತಿಮ್ಮಪ್ಪ ಗೌಡ
ದೇಶದ ಪ್ರತಿಯೊಂದು ಕೃಷಿ ಉತ್ಪಾದನೆಯಲ್ಲಿ ಸಹಕಾರಿ ಕ್ಷೇತ್ರದ ಪಾಲಿದೆ. ಸಮಾಜದ ಎಲ್ಲಾ ಸಮಸ್ಯೆಗಳಿಗೆ ಪರಿಹಾರ ಸಹಕಾರಿ ರಂಗದಲ್ಲಿದೆ – ಸತೀಶ್ಚಂದ್ರ
ಸರಳತೆಯ ಬದುಕನ್ನು ಕಡೆಗಣಿಸಿ ನಮ್ಮ ಜೀನವನ್ನು ನಾವೇ ಕಷ್ಟಕ್ಕೊಳಪಡಿಸುತ್ತಾ ಇದ್ದೇವೆ. ಹಾಸಿಗೆ ಇದ್ದಷ್ಟೇ ಕಾಲು ಚಾಚುವ ಮಾತು ದೂರವೇ ಉಳಿದಿದೆ – ಪ್ರತಾಪಸಿಂಹ ನಾಯಕ್
ರೈತರು ಆತ್ಯಹತ್ಯೆ ಮಾಡಿಕೊಳ್ಳುವಂತಹ ವಾತಾವರಣದಲ್ಲಿ ಸಹಕಾರಿ ಸಂಘಗಳ ಜವಾಬ್ದಾರಿ ಹೆಚ್ಚಿದೆ. ಅದರೆ ಜಿಲ್ಲೆಯಲ್ಲಿನ ಸಹಕಾರಿ ಸಂಘದ ಮನೋಭಾವದಿಂದಾಗಿ ಕೃಷಿಕ ಆ ಮಟ್ಟಕ್ಕೆ ಆಲೋಚನೆ ಮಾಡದೆ ಸ್ವಾಭಿಮಾನಿಯಾಗಿ ಬದುಕುತ್ತಿದ್ದಾನೆ– ನಳೀನ್
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.