News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ


×
Home About Us Advertise With s Contact Us

ಅಮಿತ್ ಶಾ ಅವರ ರಾಜ್ಯ ಭೇಟಿಯಿಂದ ಬಿಜೆಪಿ ಬಲ ಹೆಚ್ಚಲಿದೆ : ಎಸ್.ಟಿ. ಸೋಮಶೇಖರ್

ಬೆಂಗಳೂರು: ಮಂಡ್ಯದಲ್ಲಿ ಡಿಸೆಂಬರ್ 30ರಂದು 1 ಲಕ್ಷ ಜನರ ಬೃಹತ್ ಸಮಾವೇಶವನ್ನು ಪಕ್ಷ ಆಯೋಜಿಸಿದ್ದು, ಕೇಂದ್ರ ಗೃಹ ಮತ್ತು ಸಹಕಾರ ಸಚಿವ ಅಮಿತ್ ಶಾ ಅವರು ಸಮಾವೇಶವನ್ನುದ್ದೇಶಿಸಿ ಮಾತನಾಡಲಿದ್ದಾರೆ ಎಂದು ರಾಜ್ಯದ ಸಹಕಾರ ಸಚಿವ ಎಸ್.ಟಿ. ಸೋಮಶೇಖರ್ ಅವರು ತಿಳಿಸಿದರು.

ಮಲ್ಲೇಶ್ವರದ ಬಿಜೆಪಿ ರಾಜ್ಯ ಕಾರ್ಯಾಲಯ “ಜಗನ್ನಾಥ ಭವನ”ದಲ್ಲಿ ಇಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಮಂಡ್ಯ, ಮೈಸೂರು, ಚಾಮರಾಜನಗರ ಮತ್ತು ಹಾಸನಗಳ ಜನರು ಮಂಡ್ಯದ ಸಮಾವೇಶದಲ್ಲಿ ಭಾಗವಹಿಸುವರು. ಅಮಿತ್ ಶಾ ಅವರ ಭೇಟಿಯಿಂದ ಬಿಜೆಪಿ ಬಲ ಹೆಚ್ಚಲಿದೆ. ಈ ಸಮಾವೇಶ 30ರ ಮಧ್ಯಾಹ್ನ ಒಂದು ಗಂಟೆಗೆ ನಡೆಯಲಿದೆ. ಮಂಡ್ಯ ಮುಂದಿನ ದಿನಗಳಲ್ಲಿ ಕಾಂಗ್ರೆಸ್ ಮತ್ತು ಜೆಡಿಎಸ್ ಭದ್ರಕೋಟೆಯಾಗಿ ಉಳಿಯುವುದಿಲ್ಲ. ಅಲ್ಲಿ ಸಂಸದರ ಸ್ಥಾನವನ್ನು ಸೋತಿದ್ದಾರೆ. ಸಮಾವೇಶದ ಯಶಸ್ಸಿಗಾಗಿ ಸಚಿವರಾದ ಗೋಪಾಲಯ್ಯ ಮತ್ತು ನಾರಾಯಣಗೌಡರು ಶ್ರಮಿಸುತ್ತಿದ್ದಾರೆ ಎಂದು ತಿಳಿಸಿದರು.

2023ರ ಅಸೆಂಬ್ಲಿ ಚುನಾವಣೆಯಲ್ಲಿ ಮಂಡ್ಯ, ಮೈಸೂರು, ಚಾಮರಾಜನಗರ, ರಾಮನಗರ ಮತ್ತು ಹಾಸನ ಭಾಗದಲ್ಲಿ ಅತಿ ಹೆಚ್ಚು ಬಿಜೆಪಿ ಶಾಸಕರು ಗೆಲ್ಲಬೇಕೆಂಬ ಗುರಿ ನಮ್ಮದು. ಪಕ್ಷ ಬಲಪಡಿಸಲು ವಿಶೇಷ ಗಮನ ಕೊಡುತ್ತಿದ್ದೇವೆ ಎಂದು ತಿಳಿಸಿದರು.

ನಂತರ ಸಂಜೆ 5.30ಕ್ಕೆ ಬೆಂಗಳೂರಿನ ಪ್ಯಾಲೇಸ್‍ನಲ್ಲಿ ಸಹಕಾರ ಕ್ಷೇತ್ರದಿಂದ 33 ಲಕ್ಷ ರೈತರಿಗೆ ಶೂನ್ಯ ಬಡ್ಡಿದರದಲ್ಲಿ 24 ಸಾವಿರ ಕೋಟಿ ಸಾಲ ನೀಡುವ ಕಾರ್ಯಕ್ರಮ ನಡೆಯಲಿದೆ. ಯಶಸ್ವಿನಿ ಯೋಜನೆಗೆ 20 ಲಕ್ಷ ಜನರು ನೋಂದಾವಣೆ ಆಗಿದ್ದಾರೆ. ಯೋಜನೆಗೆ ಜನವರಿ ಒಂದರಿಂದ ಮರು ಚಾಲನೆ ನೀಡುವ ಕಾರ್ಯವನ್ನು ಅಮಿತ್ ಶಾ ಅವರು ಉದ್ಘಾಟಿಸುತ್ತಾರೆ. ಅಲ್ಲದೆ ಸ್ತ್ರೀಶಕ್ತಿ ಗುಂಪುಗಳಿಗೆ ಸಾಲ ನೀಡುತ್ತಾರೆ ಎಂದರು.

ಸಕ್ಕರೆ ಕ್ಷೇತ್ರ ಬಲಿಷ್ಠಗೊಳಿಸಲು ಅಮಿತ್ ಶಾ ಅವರು ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದ್ದಾರೆ. ಸುಮಾರು 5,700 ವಿಎಸ್‍ಎಸ್‍ಗಳಿಗೆ, ಕೃಷಿ ಪತ್ತಿನ ಸಹಕಾರ ಸಂಘಗಳಿಗೆ ಲಭಿಸಿದ ಪ್ರಯೋಜನವನ್ನು ಪರಿಶೀಲಿಸುವರು. 31ರಂದು ಮಲ್ಲೇಶ್ವರದ ಸೌಹಾರ್ದ ಫೇಡರೇಶನ್‍ಗೆ ಭೇಟಿ ಕೊಡುತ್ತಾರೆ. ಸೌಹಾರ್ದ ಸಹಕಾರಿಗಳ ಸಭೆ ನಡೆಸುತ್ತಾರೆ ಎಂದು ವಿವರಿಸಿದರು. ರಾಜ್ಯದ ಸಹಕಾರ ಇಲಾಖೆ ದೇಶದಲ್ಲಿ 2ನೇ ಸ್ಥಾನದಲ್ಲಿದೆ ಎಂದು ತಿಳಿಸಿದರು.

ನಾವೂ ಸಹಕಾರ ಇಲಾಖೆಯಿಂದ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರಿಗೆ ಮನವಿ ಮಾಡಿದ್ದು, 30ರಂದು ಬೆಳಿಗ್ಗೆ 11 ಗಂಟೆಗೆ ಮದ್ದೂರಿನ ಮೆಗಾ ಡೇರಿಯನ್ನು ಉದ್ಘಾಟಿಸಲು ಒಪ್ಪಿಕೊಂಡಿದ್ದಾರೆ. ಬಳಿಕ ಸಹಕಾರಿಗಳನ್ನು ಉದ್ದೇಶಿಸಿ ಮಾತನಾಡಲಿದ್ದಾರೆ. ನಬಾರ್ಡ್‍ನಿಂದ ಕೊಡುವ 24 ಸಾವಿರ ಕೋಟಿ ಸಾಲವನ್ನು ದ್ವಿಗುಣಗೊಳಿಸಲು ಮುಖ್ಯಮಂತ್ರಿಯವರು ಯೋಜಿಸಿದ್ದಾರೆ. ಆ ಬಗ್ಗೆ ಕೇಂದ್ರ ಸಚಿವರಿಗೆ ಮನವಿ ಸಲ್ಲಿಸಲಾಗುವುದು ಎಂದರು.

ಹಾಲಿನ ಯೂನಿಯನ್‍ಗಳ ಸಮಸ್ಯೆ ಬಗ್ಗೆ ಸಮಾಲೋಚನೆ ಮಾಡಲಿದ್ದಾರೆ. ಕೃಷಿ ಪತ್ತಿನ ಸಹಕಾರ ಸಂಘಗಳನ್ನು ಹಣಕಾಸು ವ್ಯವಹಾರದಲ್ಲಿ ಬಲಪಡಿಸಲು ಚಿಂತಿಸುತ್ತಿದ್ದು, ರೈತರಿಗೆ ಹೆಚ್ಚಿನ ಸಾಲ ನೀಡುವ ಕುರಿತು ತಿಳಿಸಲಿದ್ದಾರೆ ಎಂದು ವಿವರ ನೀಡಿದರು. ಕೃಷಿ ಪತ್ತಿನ ಸಹಕಾರ ಸಂಘಗಳ ಒಂದು ಸಾವಿರ ನಿರ್ದೇಶಕರು, ಮಿಲ್ಕ್ ಸೊಸೈಟಿಗೆ ಹಾಲು ಹಾಕುವ 1 ಸಾವಿರ ಜನರು, ಸ್ತ್ರೀಶಕ್ತಿ ಸ್ವಸಹಾಯ ಗುಂಪಿನ ಒಂದು ಸಾವಿರ ಜನರು ಈ ಸಭೆಯಲ್ಲಿ ಪಾಲ್ಗೊಳ್ಳುತ್ತಾರೆ ಎಂದು ತಿಳಿಸಿದರು. ಬೆಂಗಳೂರಿನ ವಿವಿಧ ಸಹಕಾರ ಸಂಸ್ಥೆಗಳ ನಿರ್ದೇಶಕರೂ ಭಾಗವಹಿಸಲಿದ್ದಾರೆ ಎಂದರು.

ಪ್ರಧಾನಿಗಳಾದ ನರೇಂದ್ರ ಮೋದಿಯವರು ಮೈಸೂರಿಗೆ ಯೋಗ ದಿನಾಚರಣೆಗೆ ಬಂದ ಬಳಿಕ ಪ್ರವಾಸೋದ್ಯಮಕ್ಕೆ ಹೆಚ್ಚಿನ ಆದ್ಯತೆ ಲಭಿಸಿದೆ. ಹೆಚ್ಚು ಜನರು ಬರುತ್ತಿದ್ದಾರೆ. ಮೈಸೂರು ಮತ್ತು ಚಾಮರಾಜನಗರಕ್ಕೆ ಹೆಚ್ಚು ವಿದೇಶೀಯರು ಮತ್ತು ಸಾರ್ವಜನಿಕರು ಬರುತ್ತಿದ್ದಾರೆ ಎಂದರು.

ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.

News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.

Recent News

Back To Top