News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ
Thursday, 2nd February 2023


×
Home About Us Advertise With s Contact Us

ಕಾಂಗ್ರೆಸ್ ಕರ್ಮಕಾಂಡ ಶೀಘ್ರವೇ ಬಯಲಿಗೆ: ಬಸವರಾಜ ಬೊಮ್ಮಾಯಿ

ಬೆಂಗಳೂರು: ಅಧಿಕಾರ ಇದ್ದಾಗ ಮಜಾವಾದ. ಇಲ್ಲದಿದ್ದರೆ ಬಾಯಿ ಬಡಕೊಳ್ಳುವುದು ಕಾಂಗ್ರೆಸ್ ನೀತಿ ಎಂದು ರಾಜ್ಯದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಟೀಕಿಸಿದರು.

ಮಂಡ್ಯ ಜಿಲ್ಲೆಯ ಮದ್ದೂರಿನಲ್ಲಿ ಇಂದು ಜನಸಂಕಲ್ಪ ಯಾತ್ರೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಈ ಜಿಲ್ಲೆಯಲ್ಲಿ ಕನಿಷ್ಠ 5 ಹಾಗೂ ಗರಿಷ್ಠ 7 ಶಾಸಕರ ಸ್ಥಾನ ಪಡೆಯಲು ನಾನು ನಮ್ಮ ಪಕ್ಷದ ಹಿರಿಯರಾದ ಯಡಿಯೂರಪ್ಪ ಅವರ ಜೊತೆಸೇರಿ ಶ್ರಮಿಸುವುದಾಗಿ ತಿಳಿಸಿದರು. ದೇಶದ ಅಖಂಡತೆ, ಏಕತೆ ಪರವಾಗಿ ನರೇಂದ್ರ ಮೋದಿಜಿ ಅವರು ದೃಢವಾಗಿ ನಿಂತವರು ಎಂದು ವಿವರಿಸಿದರು.

ಕುಕ್ಕರ್ ಬಾಂಬ್ ಆಕಸ್ಮಿಕ ಎಂಬ ಡಿ.ಕೆ.ಶಿವಕುಮಾರ್ ಅವರ ಹೇಳಿಕೆ ಬಗ್ಗೆ ಮಾತನಾಡಿದ ಅವರು, ಕುಕ್ಕರ್‍ನಲ್ಲಿ ಬಾಂಬಿಟ್ಟು ಸಿಕ್ಕು ಹಾಕಿಕೊಂಡು ಅಂತರರಾಷ್ಟ್ರೀಯ ಮಟ್ಟದ ಸಂಪರ್ಕ ಇದ್ದ ವ್ಯಕ್ತಿಯನ್ನು ಹಿಡಿದರೆ ಅದು ಆಕಸ್ಮಿಕ ಎನ್ನುತ್ತಾರೆ. ಕಾಂಗ್ರೆಸ್ ಇನ್ನಷ್ಟು ಕರ್ಮಕಾಂಡ ಬಯಲಿಗೆ ಬರಲಿದೆ. ಅದು ದೇಶದಲ್ಲಿ ಈಗಾಗಲೇ ದೂಳೀಪಟ ಆಗಿದೆ. ಕರ್ನಾಟಕದಲ್ಲೂ ಅದು ದೂಳೀಪಟ ಆಗಲಿದೆ ಎಂದು ವಿಶ್ವಾಸದಿಂದ ನುಡಿದರು.

ಮಂಡ್ಯದ ಸಕ್ಕರೆ ಕಾರ್ಖಾನೆಯನ್ನು ಮುಚ್ಚಿದ್ದರು. ಅದರ ಪುನಶ್ಚೇತನಕ್ಕೆ ಯಡಿಯೂರಪ್ಪ ಅವರು ಪ್ರಯತ್ನಿಸಿದ್ದರು. ಬಿಜೆಪಿ ನನ್ನ ನೇತೃತ್ವದಲ್ಲಿ ಮೈಶುಗರ್ ಫ್ಯಾಕ್ಟರಿ ಪುನರಾರಂಭ ಮಾಡಿ ಕಬ್ಬು ಅರೆಯುವಂತೆ ಮಾಡಿದ್ದೇನೆ. ಮಂಡ್ಯದ ಕುರಿತು ಬಿಜೆಪಿ ನೈಜ ಕಳಕಳಿ, ಪ್ರೀತಿ, ವಿಶ್ವಾಸ ಹೊಂದಿದೆ ಎಂದು ತಿಳಿಸಿದರು.

ಕರ್ನಾಟಕ ಮತ್ತು ಮಂಡ್ಯದ ಜನರನ್ನು ಕಾಂಗ್ರೆಸ್ ಮತ್ತು ಜೆಡಿಎಸ್ ಪಕ್ಷದವರು ಬಹಳಷ್ಟು ದಿನ ಮೋಸ ಮಾಡಲು ಸಾಧ್ಯವಿಲ್ಲ. ಭಾವನಾತ್ಮಕವಾಗಿ ಮತ ಪಡೆದು ಗೆಲ್ಲುವ ರಾಜಕಾರಣ ಇನ್ನು ಇಲ್ಲಿ ನಡೆಯುವುದಿಲ್ಲ. ಮಂಡ್ಯದ ಸ್ವಾಭಿಮಾನ ಉಳಿಯಲು ಬಿಜೆಪಿಗೆ ಮತ ಕೊಡಿ ಎಂದು ಮನವಿ ಮಾಡಿದರು.
ಶಿಥಿಲಗೊಂಡ ಕೆಆರ್‍ಎಸ್ ಗೇಟಿನ ದುರಸ್ತಿ ಕಾರ್ಯವನ್ನು ನಾನು ಮಾಡಿದೆ. ಇನ್ನೂ 80 ಕೋಟಿ ಯೋಜನೆಗೆ ಮಂಜೂರಾತಿ ಕೊಟ್ಟು ಉಳಿದ ಗೇಟುಗಳ ದುರಸ್ತಿ ಕಾರ್ಯ ಮಾಡಲಿದ್ದೇವೆ ಎಂದರು. ಮಂಡ್ಯದ ವಿಸಿ ನಾಲೆ ನೆನೆಗುದಿಗೆ ಬಿದ್ದಿತ್ತು. ಕಾಲುವೆ ಆಧುನೀಕರಣಕ್ಕೆ ಹಣ ಕೊಟ್ಟಿದ್ದೇನೆ ಎಂದು ವಿವರಿಸಿದರು.

ಈ ಭಾಗದ ಔದ್ಯೋಗೀಕರಣಕ್ಕಾಗಿ ಮೈಸೂರು -ಬೆಂಗಳೂರು ಮೂಲಸೌಕರ್ಯ ಕಾರಿಡಾರ್‌ಗೆ ಮೋದಿಜಿ ಅವರು ಆಶೀರ್ವಾದ ಮಾಡಿದ್ದಾರೆ. ಮೈಸೂರು- ಬೆಂಗಳೂರು ನಡುವೆ ಹೈಸ್ಪೀಡ್ ರೈಲು ಓಡಲಿದೆ ಎಂದ ಅವರು, ಸಿದ್ದರಾಮಯ್ಯ- ಮನಮೋಹನ್ ಸಿಂಗ್ ಸರಕಾರಗಳು ಯಾಕೆ ಈ ಕುರಿತು ಚಿಂತಿಸಲಿಲ್ಲ ಎಂದು ಪ್ರಶ್ನಿಸಿದರು.

ಕಾವೇರಿ ವಿಚಾರದಲ್ಲಿ ರೈತರು ಹೋರಾಟ ಮಾಡುವ ವೇಳೆ ಅಂದಿನ ಸಿಎಂ ಈ ಕಡೆ ತಿರುಗಿ ನೋಡಲಿಲ್ಲ ಎಂದು ಆಕ್ಷೇಪಿಸಿದರು. ಕಾಂಗ್ರೆಸ್ ಆಡಳಿತದ ಅವಧಿಯಲ್ಲಿ ಮಂಡ್ಯ ಜಿಲ್ಲೆಯಲ್ಲಿ ಅತಿ ಹೆಚ್ಚು ರೈತರು ಆತ್ಮಹತ್ಯೆ ಮಾಡಿಕೊಂಡಿದ್ದರು. ಒಂದು ಬಾರಿಯೂ ಇತ್ತ ಬರಲಿಲ್ಲ. ಪರಿಹಾರ ಕೊಟ್ಟು ರೈತರ ಪರವಾಗಿ ನಿಲ್ಲಲಿಲ್ಲ ಎಂದು ಟೀಕಿಸಿದರು.

ಯಡಿಯೂರಪ್ಪ ಅವರು ಸರ್ವರಿಗೂ ಸಮಪಾಲು, ಸಮಬಾಳು ಎಂಬಂತೆ ಕೆಲಸ ಮಾಡಿದ್ದಾರೆ. ಮೋದಿಜಿ ಅವರೂ ಸಬ್ ಕಾ ಸಾಥ್ ಸಬ್ ಕಾ ವಿಶ್ವಾಸ್ ಚಿಂತನೆಯೊಂದಿಗೆ ಅಭಿವೃದ್ಧಿಗೆ ಕೆಲಸ ಮಾಡಿದ್ದಾರೆ. ಅಲ್ಪಸಂಖ್ಯಾತರ ಮತ ಪಡೆಯಲು ಕಾಂಗ್ರೆಸ್‍ನವರು ಸೋಗಿನ ರಾಜಕಾರಣ ತನ್ನದಾಗಿಸಿಕೊಳ್ಳುತ್ತದೆ ಎಂದು ಆರೋಪಿಸಿದರು.

ರಾಜ್ಯವನ್ನು ಅಭಿವೃದ್ಧಿ ಪಥದಲ್ಲಿ ಒಯ್ಯಲು ಬಿಜೆಪಿಗೆ ಮತ ಕೊಡಿ. ಭಯೋತ್ಪಾದಕರಿಗೆ ಸಹಾನುಭೂತಿ ತೋರುವ, ದೀನದಲಿತರ ವಿರೋಧಿಗಳಾದ, ಹಿಂದುತ್ವದ ವಿರೋಧಿಗಳಾಗಿರುವ, ದುಡಿಯುವವರ, ರೈತರ ಹಿತಚಿಂತನೆ ಮಾಡದ ಕಾಂಗ್ರೆಸ್ ಎಂದಿಗೂ ರಾಜ್ಯದಲ್ಲಿ ಅಧಿಕಾರಕ್ಕೆ ಬರಬಾರದು. ಸ್ವಾತಂತ್ರ್ಯದ ನಂತರದ ಅಮೃತ ಕಾಲ ರಾಜ್ಯಕ್ಕೆ ಬರಲು ಬಿಜೆಪಿ ಆಡಳಿತಕ್ಕೆ ಬರಬೇಕು. ಮುಂದಿನ 25 ವರ್ಷಗಳಲ್ಲಿ ಬಿಜೆಪಿ ರಾಜ್ಯದ ಆಡಳಿತದ ಚುಕ್ಕಾಣಿ ಹಿಡಿಯಲಿದೆ ಎಂದು ವಿಶ್ವಾಸದಿಂದ ತಿಳಿಸಿದರು.

ಮಂಡ್ಯ ಈಸ್ ಇಂಡಿಯಾ ಎಂಬಂತೆ ಇಲ್ಲಿ ಜನ ಸೇರಿದ್ದಾರೆ. ಬದಲಾವಣೆಯ, ಪರಿವರ್ತನೆಯ ಶಕ್ತಿ ಇಲ್ಲಿನ ಜನರಲ್ಲಿದೆ. ನವ ಕರ್ನಾಟಕದಿಂದ ನವ ಭಾರತ ನಿರ್ಮಿಸಲು ಸಹಕರಿಸಿ ಎಂದು ಮನವಿ ಮಾಡಿದರು.

ಕೇಂದ್ರ ಸಂಸದೀಯ ಮಂಡಳಿ ಸದಸ್ಯ ಹಾಗೂ ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಮಾತನಾಡಿ, ಕಾಂಗ್ರೆಸ್ ಪಕ್ಷವು ನಾಯಕರಿಲ್ಲದೆ ತಬ್ಬಲಿಯಾಗಿದೆ. ಬಿಜೆಪಿಗೆ ವಿಶ್ವವೇ ಮೆಚ್ಚಿದ ಪ್ರಧಾನಿ ನರೇಂದ್ರ ಮೋದಿಜಿ ಅವರ ನೇತೃತ್ವವನ್ನು ಹೊಂದಿದೆ. ಮೋದಿಜಿ, ಅಮಿತ್ ಶಾ, ನಡ್ಡಾ ಅವರು ಕರ್ನಾಟಕಕ್ಕೆ ಹೆಚ್ಚು ಬಾರಿ ಬರಲಿದ್ದಾರೆ. ಆ ಮೂಲಕ ಬಿಜೆಪಿ 140ಕ್ಕೂ ಹೆಚ್ಚು ಸ್ಥಾನ ಗಳಿಸಿ ಅಧಿಕಾರಕ್ಕೆ ಬರುವುದು ಸೂರ್ಯ ಚಂದ್ರರು ಇರುವಷ್ಟೇ ಸತ್ಯ ಎಂದರು.

ಅನೇಕ ರೀತಿಯ ಸೌಲಭ್ಯ ಮತ್ತು ಯೋಜನೆಗಳ ಅನುಷ್ಠಾನದ ಮೂಲಕ ನೆಮ್ಮದಿ ಮತ್ತು ಸ್ವಾಭಿಮಾನದಿಂದ ಬದುಕುವಂತೆ ಮಾಡಿದ್ದೇವೆ. ಕಾಂಗ್ರೆಸ್ ನಾಯಕರು ಹಣ, ಹೆಂಡ, ತೋಳ್ಬಲ ಮತ್ತು ಅಧಿಕಾರದ ಬಲದಿಂದ ಜಾತಿಯ ವಿಷಬೀಜ ಬಿತ್ತಿ ಅಧಿಕಾರದ ಭ್ರಮೆಯಲ್ಲಿದ್ದಾರೆ. ಅವರು ಭ್ರಮೆಯಲ್ಲೇ ಇರಬೇಕಾಗುತ್ತದೆ ಎಂದರು.

ಕಾಂಗ್ರೆಸ್ ಪಕ್ಷದ ರಾಹುಲ್ ಗಾಂಧಿಯನ್ನು ನಮ್ಮ ಪ್ರಧಾನಿ ಮೋದಿಜಿ ಅವರಿಗೆ ಹೋಲಿಸಲು ಸಾಧ್ಯವೇ? ಅಲ್ಲಿ ಸಮರ್ಥ ನಾಯಕರು ಎಲ್ಲಿದ್ದಾರೆ? ಕರ್ನಾಟಕದಲ್ಲಿ ಎಂಕ, ನಾಣಿ, ಸೀನ ನಾನೇ ಮುಖ್ಯಮಂತ್ರಿ ಎಂದು ಓಡಾಡುತ್ತಿದ್ದಾರೆ. ಅದು ಆಗುವುದಿಲ್ಲ. ಬಿಜೆಪಿ 140ಕ್ಕೂ ಹೆಚ್ಚು ಸ್ಥಾನ ಗಳಿಸಿ ಸ್ಪಷ್ಟ ಬಹುಮತ ಪಡೆದು ಮತ್ತೆ ಸರಕಾರ ರಚಿಸಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು. ಎಸ್.ಪಿ.ಸ್ವಾಮಿ ಅವರ ಪರವಾಗಿ ಕೆಲಸ ಮಾಡುವಂತೆ ಕಾರ್ಯಕರ್ತರಲ್ಲಿ ಮನವಿ ಮಾಡಿದರು.

ಮಹಿಳೆಯರು, ಯುವಕರು ದುಡಿದು ಬಿಜೆಪಿಯನ್ನು ಅಧಿಕಾರಕ್ಕೆ ಬರುವಂತೆ ನೋಡಿಕೊಳ್ಳಬೇಕಿದೆ. ಕೇಂದ್ರ- ರಾಜ್ಯ ಸರಕಾರಗಳ ಜನಪರ ಕೆಲಸಗಳ ಕುರಿತು ಜನರಿಗೆ ತಿಳಸಬೇಕು ಎಂದು ತಿಳಿಸಿದರು. ರಾಜ್ಯದ ಸರ್ವಾಂಗೀಣ ಅಭಿವೃದ್ಧಿಗಾಗಿ ಬಿಜೆಪಿಯನ್ನು ಅಧಿಕಾರಕ್ಕೆ ತನ್ನಿ ಎಂದರು.

ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.

News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.

Recent News

Back To Top