ಬೆಳ್ತಂಗಡಿ : ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆಯನ್ನು ಇದೇ ವರ್ಷ ಬೀದರ್, ಗುಲ್ಬರ್ಗ, ಯಾದಗಿರಿ ಹಾಗೂ ವಿಜಯಪುರ ಜಿಲ್ಲೆಗಳಿಗೂ ವಿಸ್ತರಿಸಲಾಗುವುದು. ಇದರೊಂದಿಗೆ ಯೋಜನೆ ರಾಜ್ಯದ ಎಲ್ಲಾ ಜಿಲ್ಲೆಗಳಿಗೂ ವ್ಯಾಪಿಸಿದಂತಾಗಲಿದೆ ಎಂದು ಧರ್ಮಸ್ಥಳದ ಧರ್ಮಾಧಿಕಾರಿ ಡಾ| ಡಿ ವೀರೇಂದ್ರ ಹೆಗ್ಗಡೆಯವರು ಹೇಳಿದರು.ಅವರು ಶನಿವಾರ ಧರ್ಮಸ್ಥಳದಲ್ಲಿ ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆ ಬೆಳ್ತಂಗಡಿ ತಾಲೂಕು ಇದರ ಪ್ರಗತಿ ಬಂಧು ಸ್ವಸಹಾಯ ಒಕ್ಕೂಟಗಳ ಕೇಂದ್ರ ಸಮಿತಿ ಪದಗ್ರಹಣ ಹಾಗು ಗ್ರಾಮ ಪಂಚಾಯತು ಚುನಾಯಿತ ಪ್ರತಿನಿಧಿಗಳ ಅಭಿನಂದನಾ ಸಮಾರಂಭದಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಯೋಜನೆ ಈಗಾಗಲೆ ರಾಜ್ಯದ 26 ಜಿಲ್ಲೆಗಳಲ್ಲಿ ಕಾರ್ಯನಿರ್ವಹಿಸುತ್ತದ್ದು 34 ಲಕ್ಷ ಮಂದಿ ಸದಸ್ಯರುಗಳನ್ನು ಹೊಂದಿದೆ. ಇದೀಗ ಯೋಜನೆ ರಾಜ್ಯದಾದ್ಯಂತ ಕಾರ್ಯನಿರ್ವಹಿಸಲಿದೆ. ಗ್ರಾಮಾಭಿವೃದ್ದಿ ಯೋಜನೆ ವ್ಯಕ್ತಿಯ ವೈಯುಕ್ತಿಕ ಬೆಳವಣಿಗೆಯೊಂದಿಗೆ ಸಮುದಾಯದ ಬೆಳವಣಿಗೆಯನ್ನೂ ಗುರಿಯಾಗಿಸಿ ಕಾರ್ಯನಿರ್ವಹಿಸುತ್ತಿದೆ. ಸಮುದಾಯ ಅಭಿವೃದ್ಧಿಯಲ್ಲಿ ಶಾಲೆ, ದೇವಸ್ಥಾನ, ರುದ್ರಭೂಮಿ, ಕೃಷಿ, ಶಿಕ್ಷಣ, ಮದ್ಯವರ್ಜನ ಶಿಬಿರ ಮೊದಲಾದ ಸಾಮಾಜಿಕ ಸೇವೆಗಳಿಗೆ ಸಹಾಯ ನೀಡಲಾಗಿದೆ. 400 ಕ್ಕೂ ಹೆಚ್ಚು ರುದ್ರಭೂಮಿಗಳನ್ನು ಅಭಿವೃದ್ಧಿಪಡಿಸಲಾಗಿದೆ. ಕಳೆದ 10 ವರ್ಷಗಳಲ್ಲಿ 64,000 ಜನರಿಗೆ 27 ಕೋಟಿ ರೂ. ಸುರಕ್ಷಾ ವಿಮೆ ನೀಡಲಾಗಿದೆ. ತಾಲೂಕಿನಲ್ಲಿ ಯೋಜನೆಯ ಸದಸ್ಯರು ಸಾಕಷ್ಟು ಪ್ರಗತಿಯನ್ನು ಕಂಡಿದ್ದಾರೆ ಈ ಬೆಳವಣಿಗೆಯನ್ನು ಸ್ಥಿರವಾಗಿ ಉಳಿಸಿಕೊಂಡು ಇನ್ನಷ್ಟು ಬೆಳೆಯುವ ಗುರಿಯನ್ನು ಇಟ್ಟುಕೊಳ್ಳಬೇಕಾಗಿದೆ ಎಂದರು.
ಸರಕಾರಗಳು ಜನರಿಗಾಗಿ ಹಲವಾರು ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದ್ದು ಅದರ ಸದುಪಯೋಗವನ್ನು ಪಡೆದು ಅದರೊಂದಿಗೆ ನಮ್ಮ ಪ್ರಯತ್ನವೂ ಸೇರಿದಾಗ ಅಭಿವೃದ್ದಿ ಸಾಧವಾಗಲಿದೆ. ಯೋಜನೆ ಅವಕಾಶಗಳನ್ನು ಒದಗಿಸುತ್ತದೆ ಅದರ ಸದುಪಯೋಗವನ್ನು ಪಡೆದುಕೊಳ್ಳುವಂತೆ ಅವರು ಸಲಹೆ ನೀಡಿದರು. ಯೋಜನೆಯ ಯಶಸ್ಸು ಹಾಗೂ ಕಾರ್ಯನಿರ್ವಹಣೆಯನ್ನು ನೋಡಿ ಕೆಲವರು ಸ್ಥಾಪಿತ ಶಕ್ತಿಗಳು ಇದರ ವಿರುದ್ದ ಮಾತನಾಡುತ್ತಿದ್ದಾರೆ ಇಂತವರ ಮಾತಿಗೆ ಕಿವಿಕೊಡದಿರಿ ಎಂದರು.
ಮಖ್ಯ ಅತಿಥಿಗಳಾಗಿ ಆಗಮಿಸಿದ್ದ ಸಿಂಡಿಕೇಟ್ ಬ್ಯಾಂಕಿನ ಜನರಲ್ ಮ್ಯಾನೇಜರ್ ಕೆ.ಟಿ.ರೈ ಮಾತನಾಡಿ ಗ್ರಾಮಾಭಿವೃದ್ದಿ ಯೋಜನೆಯ ಕಾರ್ಯನಿರ್ವಹಣೆಯು ಎಲ್ಲರೂ ಮೆಚ್ಚಿಕೊಳ್ಳುವಂತಹ ಕಾರ್ಯನಿರ್ವಹಣೆಯಾಗಿದೆ. ಯೋಜನೆಯ ಮೂಲಕವಾಗಿ ಗ್ರಾಮೀಣ ಜನರು ಉತ್ತಮ ಬದುಕನ್ನು ನಡೆಸುವಂತಾಗಿದೆ ಎಂದರು.
ಧರ್ಮಸ್ಥಳದ ಹೇಮಾವತಿ ಹೆಗ್ಗಡೆ ಮಾತನಾಡಿ ಗ್ರಾಮಾಭಿವೃದ್ಧಿ ಯೋಜನೆ ಗ್ರಾಮೀಣ ಜನರ ಶಕ್ತಿ ಸದುಪಯೋಗವಾಗುವಂತೆ ನೋಡಿಕೊಂಡಿದೆ. ಇದರಿಂದಾಗಿ ಇಂದು ಗ್ರಾಮೀಣ ಜನರು ಸ್ವಾವಲಂಬಿಗಳಾಗಿ ಬದುಕನ್ನು ನಡೆಸಲು ಸಾಧ್ಯವಾಗುತ್ತಿದೆ. ಯೋಜನೆಯು ನೀಡುವ ಸಹಕಾರದ ಸದುಪಯೋಗವನ್ನು ಸರಿಯಾಗಿ ಉಪಯೋಗಿಸಿಕೊಂಡು ಮುಂದುವರಿಯಿರಿ. ಜನರಲ್ಲಿ ನಾಯಕತ್ವವನ್ನು ಯೋಜನೆ ರೂಪಿಸಿದೆ. ತಾಲೂಕಿನ 33,000 ಸದಸ್ಯರಲ್ಲಿ ಸಂಯಮ ಶಿಸ್ತನ್ನು ತಂದಿದೆಯಲ್ಲದೆ ಜಾತಿ ಧರ್ಮವನ್ನು ಮೀರಿ ಉನ್ನತಿಯ ಭಾಗವಾಗಿ ಬೆಳೆದಿದೆ. ಕೃಷಿ, ಧಾರ್ಮಿಕ, ಜನಜಾಗೃತಿಗೆ ಈ ಶಕ್ತಿ ವಿನಿಯೋಗವಾಗಿದೆ ಎಂದರು.
ಯೋಜನೆಯ ಕಾರ್ಯನಿರ್ವಾಹಕ ನಿರ್ದೇಶಕ ಎಲ್. ಎಚ್. ಮಂಜುನಾಧ್ ಮಾತನಾಡಿ ಯೋಜನೆಯಿಂದ ಈ ವರೆಗೆ ಶೇ 18 ಬಡ್ಡಿದರದಲ್ಲಿ ಸದಸ್ಯರುಗಳಿಗೆ ಸಾಲ ನೀಡಲಾಗುತ್ತಿತ್ತು. ಇದನ್ನು ಶೇ 16 ಕ್ಕೆ ಇಳಿಸುವ ಚಿಂತನೆ ನಡೆಯುತ್ತಿದೆ. ಬಡ್ಡಿದರವನ್ನು ನಿರ್ಧರಿಸುವ ಅಧಿಕಾರವು ತಾಲೂಕು ಒಕ್ಕೂಟಕ್ಕಿದೆ. ಇದೀಗ ಬ್ಯಾಂಕ್ಗಳಿಂದ ಶೇ 16.5 ರ ಬಡ್ಡಿದರದಲ್ಲಿ ಯೋಜನೆಗೆ ಸಾಲ ದೊರಕುತ್ತಿದೆ ಈ ರೀತಿ ವಿತರಣೆ ಮಾಡುವಾಗ ಆಗುವ ಶೇ 0.5 ನಷ್ಟವನ್ನು ಯೋಜನೆ ಭರಿಸುತ್ತದೆ. ಇದಕ್ಕೆ ಧರ್ಮಾಧಿಕಾರಿಗಳು ಒಪ್ಪಿಗೆ ನೀಡಿದ್ದಾರೆ. ಈ ವರ್ಷದಿಂದ ಸಾಲಗಳಿಗೆ ವಿಧಿಸಲಾಗುತ್ತಿದ್ದ ಶೇ 1 ಸೇವಾ ಶುಲ್ಕವನ್ನು ರದ್ದು ಮಾಡಲಾಗುವುದಾಗಿ ಅವರು ತಿಳಿಸಿದರು.
ವೇದಿಕೆಯಲ್ಲಿ ಶ್ರದ್ಧಾ ಅಮಿತ್, ಜಿ.ಪಂ. ಸದಸ್ಯರುಗಳಾದ ಕೊರಗಪ್ಪ ನಾಯ್ಕ್, ಧನಲಕ್ಷ್ಮೀ ಜನಾರ್ಧನ್, ಧರ್ಮಸ್ಥಳ ಗ್ರಾ. ಪಂ. ಅಧ್ಯಕ್ಷ ಅಚ್ಚುತ ಪೂಜಾರಿ ಉಪಸ್ಥಿತರಿದ್ದರು. ಪ್ರಗತಿ ಬಂಧು ಒಕ್ಕೂಟದ ಕೇಂದ್ರ ಸಮಿತಿಯ ನಿರ್ಗಮನ ಅಧ್ಯಕ್ಷ ಸತೀಶ್ ಪಿ, ನೂತನ ಅಧ್ಯಕ್ಷ ಮೋನಪ್ಪ ಗೌಡ ಮಾತನಾಡಿದರು. ಯೋಜನೆಯ ಫಲಾನುಭವಿ ಅಶೋಕ್ ಕಜಿಪಟ ಯೋಜನೆ ತನ್ನನ್ನು ಹೇಗೆ ಬೆಳೆಸಿದೆ ಎಂದು ವಿವರಿಸಿದರು.
ಯೋಜನೆಯ ಫಲಾನುಭವಿಗಳಾಗಿರುವ ಇತ್ತೀಚೆಗೆ ಗ್ರಾಪಂ ಚುನಾವಣೆಯಲ್ಲಿ ಚುನಾಯಿತರಾದ ತಾಲೂಕಿನ ೨೯ ಮಂದಿ ಗ್ರಾ.ಪಂ. ಅಧ್ಯಕ್ಷರುಗಳನ್ನು ಹಾಗೂ ೨೨೧ ಮಂದಿ ಗ್ರಾ.ಪಂ. ಸದಸ್ಯರುಗಳನ್ನು ಅಭಿನಂದಿಸಲಾಯಿತು. ನಿರ್ದೇಶಕ ಚಂದ್ರಶೇಖರ ಕೆ. ಸ್ವಾಗತಿಸಿದರು, ಯೋಜನಾಧಿಕಾರಿ ರೂಪಾ ಜೈನ್ ವರದಿ ವಾಚಿಸಿದರು. ರಾಮಕುಮಾರ್ ಹಾಗೂ ಸುರೇಶ್ ಕಾರ್ಯಕ್ರಮ ನಿರ್ವಹಿಸಿ, ಒಕ್ಕೂಟದ ಕರುಣಾಕರ ವಂದಿಸಿದರು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.