ಇಲ್ಲಿ ಕರ್ನಾಟಕದಲ್ಲಿ ಕೆ.ಎಸ್. ಭಗವಾನ್ ಎಂಬ ವಿವಾದಿತ ಲೇಖಕ ಮಧ್ವಾಚಾರ್ಯರ ಫಿಲಾಸಫಿ ಸರಿಯಲ್ಲ. ಅವರು ಶೂದರನ್ನು ಪಾಪಿಷ್ಠರೆಂದು ಹೇಳಿದ್ದಾರೆ. ತಮೋಯೋಗ್ಯರು ಅಂದರೆ ಶೂದ್ರರು. ಇವರಿಗೆ ವಿದ್ಯೆ ನಿಷಿದ್ಧ . ದಲಿತರು ಸದಾ ನರಕದಲ್ಲೇ ಇರಬೇಕು. ಶಂಕರಾಚಾರ್ಯರು ಶೂದ್ರರು ಓದಿದರೆ ಅವರ ನಾಲಿಗೆ ಕತ್ತರಿಸಿ ಹಾಕಬೇಕು ಎಂದಿದ್ದಾರೆ… ಎಂದೆಲ್ಲ ಬಾಯಿಗೆ ಬಂದಂತೆ ಪತ್ರಿಕೆಯೊಂದಕ್ಕೆ ಸಂದರ್ಶನ ನೀಡುತ್ತಿರುವ ಹೊತ್ತಿನಲ್ಲೇ ಅಲ್ಲಿ, ಅಂದರೆ ಕೇರಳದಲ್ಲಿ ಶ್ರೀಕೃಷ್ಣಾಷ್ಟಮಿಯಂದು ಕಮ್ಯುನಿಸ್ಟರು ಕೃಷ್ಣ ವೇಷಧಾರಿಗಳ ಮೆರವಣಿಗೆ ಏರ್ಪಡಿಸಿ ಶ್ರೀಕೃಷ್ಣನನ್ನು ಗೌರವಿಸಿದ್ದು ಎಂತಹ ವಿಪರ್ಯಾಸ!
ಭಗವದ್ಗೀತೆಯನ್ನು ಸುಡಬೇಕು. ಏಕೆಂದರೆ ಅದು ಧರ್ಮಗ್ರಂಥವೇ ಅಲ್ಲ. ಅದರಲ್ಲಿ ಎಲ್ಲ ಹೆಂಗಸರು, ಶೂದ್ರರು, ವೈಶ್ಯರು ಪಾಪಿಗಳು ಎನ್ನಲಾಗಿದೆ. ಅದು ಬರೀ ಬೈಗುಳದಂತಿದೆ ಎಂದೆಲ್ಲ ಕೆ.ಎಸ್. ಭಗವಾನ್ ಬಡಬಡಿಸಿದ್ದಾರೆ. ಭಗವಾನ್ ಅವರ ಈ ಬಡಬಡಿಕೆಗೆ ಪೇಜಾವರ ಶ್ರೀಗಳು, ವಿದ್ವಾನ್ ಡಿ. ಪ್ರಹ್ಲಾದಾಚಾರ್ಯ ಅವರು ಸೂಕ್ತ ಪ್ರತಿಕ್ರಿಯೆಯನ್ನು ನೀಡಿದ್ದೂ ಆಗಿದೆ. ಅಸಲಿಗೆ ಮಧ್ವಾಚಾರ್ಯ, ಶಂಕರಾಚಾರ್ಯ ಹಾಗೂ ಭಗವದ್ಗೀತೆಗಳ ಮೂಲ ಗ್ರಂಥಗಳನ್ನು ಭಗವಾನ್ ಅಧ್ಯಯನ ಮಾಡಿಯೇ ಇಲ್ಲ. ಏಕೆಂದರೆ ಅವೆಲ್ಲ ಇರುವುದು ಸಂಸ್ಕೃತ ಭಾಷೆಯಲ್ಲಿ. ಭಗವಾನ್ ಅವರಿಗೆ ಸಂಸ್ಕೃತದ ಗಂಧಗಾಳಿ ಇಲ್ಲ. ಸಂಸ್ಕೃತವೇ ಗೊತ್ತಿಲ್ಲದೆ ಮಧ್ವಾಚಾರ್ಯ ಹಾಗೆ ಹೇಳಿದ್ದಾರೆ, ಶಂಕರಾಚಾರ್ಯ ಹೀಗೆ ಹೇಳಿದ್ದಾರೆ, ಭಗವದ್ಗೀತೆಯಲ್ಲಿರುವುದೆಲ್ಲ ಬೈಗುಳ ಎಂದರೆ ಅದಕ್ಕೆ ಕೇವಲ ಮರುಕಪಡಬೇಕಷ್ಟೇ. ವಾಸ್ತವವಾಗಿ ಶೂದ್ರರು ಪಾಪಿಷ್ಠರೆಂದು ಮಧ್ವರು ಎಲ್ಲೂ ಹೇಳಿಲ್ಲ. ಶಂಕರಾಚಾರ್ಯರ ಅಭಿಪ್ರಾಯವನ್ನು ಸರಿಯಾಗಿ ಅರ್ಥ ಮಾಡಿಕೊಳ್ಳದೇ ಭಗವಾನ್ ಅವರನ್ನು ದೂಷಿಸಿದ್ದಾರೆ. ಚಂಡಾಲನಲ್ಲೂ ಪರಬ್ರಹ್ಮನನ್ನು ಕಂಡವರು ಶಂಕರಾಚಾರ್ಯರು. ಅಂತಹವರ ಬಗ್ಗೆ ಕ್ಷುಲ್ಲಕ ಟೀಕೆ ಮಾಡಿದರೆ ಶಂಕರಾಚಾರ್ಯರ ಘನತೆ ಗೌರವಗಳೇನೂ ಕುಗ್ಗುವುದಿಲ್ಲ. ಆದರೆ ಭಗವಾನ್ ಅವರ ಬೌದ್ಧಿಕ ದಿವಾಳಿತನ ಮಾತ್ರ ಬಯಲಾಗಿದೆ, ಅಷ್ಟೆ.
ಈಗ ವಿಷಯ ಅದಲ್ಲ. ಭಗವಾನ್ ಅವರಂತೆಯೇ ದೇವರು, ಧರ್ಮ, ಹಿಂದುತ್ವ ಇತ್ಯಾದಿಗಳನ್ನು ಖಂಡತುಂಡವಾಗಿ ವಿರೋಧಿಸುವ, ಧರ್ಮವೆಂದರೆ ಅಪೀಮಿಗೆ ಸಮಾನ ಎನ್ನುವ ಕಮ್ಯುನಿಸ್ಟರು ಈಗ ಕೃಷ್ಣಾಷ್ಟಮಿಯಂದು ಶ್ರೀಕೃಷ್ಣನ ಮೆರವಣಿಗೆ ಮಾಡಲು ಹೊರಟಿದ್ದಾರೆಂದರೆ ನಿಮಗೆ ಆಶ್ಚರ್ಯದ ಮೇಲೆ ಆಶ್ಚರ್ಯವಾಗಬಹುದು. ಆದರೆ ಇದು ಮಾತ್ರ ನಿಜ. ಮೊನ್ನೆ ನಡೆದ ಕೃಷ್ಣಾಷ್ಟಮಿಯಂದು ಕೇರಳದ ಕಣ್ಣೂರು ಮತ್ತಿತರ ಕಡೆಗಳಲ್ಲಿ ಕಾಮ್ರೇಡ್ಗಳು ಕೃಷ್ಣ ಜನ್ಮಾಷ್ಟಮಿ ಆಚರಿಸಿದರು. ಅದಕ್ಕೊಂದು ಹಿನ್ನೆಲೆಯೂ ಇದೆ.
ಕೇರಳದಲ್ಲಿ ಆರೆಸ್ಸೆಸ್ ಪ್ರೇರಿತ ‘ಬಾಲಗೋಕುಲಂ’ ಎಂಬ ಸಂಘಟನೆ ಕಳೆದ ಮೂರ್ನಾಲ್ಕು ದಶಕಗಳಿಂದ ರಾಜ್ಯಾದ್ಯಂತ ಕೃಷ್ಣಾಷ್ಟಮಿಯಂದು ಕೃಷ್ಣ ವೇಷಧಾರಿ ಮಕ್ಕಳ ಬೃಹತ್ ಶೋಭಾಯಾತ್ರೆಯನ್ನು ಯಶಸ್ವಿಯಾಗಿ ನಡೆಸಿಕೊಂಡು ಬರುತ್ತಿದೆ. ಮೊದಲು ಚಿಕ್ಕದಾಗಿ ಆರಂಭಗೊಂಡ ಈ ಉತ್ಸವಕ್ಕೆ ಕ್ರಮೇಣ ಭಾರೀ ಸಂಖ್ಯೆಯಲ್ಲಿ ಮಕ್ಕಳು, ತಂದೆ ತಾಯಂದಿರು, ಅಭಿಮಾನಿಗಳು ಪಾಲ್ಗೊಳ್ಳತೊಡಗಿದರು. ಹಿಂದುಗಳಷ್ಟೇ ಅಲ್ಲದೇ ಮುಸ್ಲಿಮರು, ಕ್ರೈಸ್ತರು ಕೂಡ ತಮ್ಮ ಮಕ್ಕಳಿಗೆ ಕೃಷ್ಣ ವೇಷ ತೊಡಿಸಿ ಈ ಮೆರವಣಿಗೆಗೆ ಕಳುಹಿಸಿದರು. ಕಟ್ಟರ್ ಕಮ್ಯುನಿಸ್ಟ್ ಮನೆಗಳಿಂದಲೂ ಮಕ್ಕಳು ಈ ಕಾರ್ಯಕ್ರಮದಲ್ಲಿ ಪಾಲ್ಗೊಂಡರು! ಇಡೀ ಕೇರಳದಲ್ಲಿ ಕೃಷ್ಣಾಷ್ಟಮಿಯಂದು 3 ಸಾವಿರಕ್ಕೂ ಹೆಚ್ಚು ಇಂತಹ ಶೋಭಾಯಾತ್ರೆಗಳು ಬಾಲಗೋಕುಲಂ ಅಡಿಯಲ್ಲಿ ನಡೆಯುತ್ತಿವೆ. ಒಂದೊಂದು ಶೋಭಾಯಾತ್ರೆಯಲ್ಲೂ ಸಾವಿರಾರು ಮಕ್ಕಳು, ಪೋಷಕರು ಪಾಲ್ಗೊಳ್ಳುತ್ತಾರೆ. ಕಾಸರಗೋಡು ಸಮೀಪವಿರುವ ಬೋವಿಕಾನ ಎಂಬ ಚಿಕ್ಕ ಊರಿನಲ್ಲೇ ಮೊನ್ನೆ 15 ಸಹಸ್ರಕ್ಕೂ ಹೆಚ್ಚು ಜನರು ಈ ಶೋಭಾಯಾತ್ರೆಯಲ್ಲಿ ಪಾಲ್ಗೊಂಡು ಅಚ್ಚರಿ ಮೂಡಿಸಿದ್ದರು.
ತಮ್ಮ ಮನೆಯ ಮಕ್ಕಳೂ ಕೂಡ ಆರೆಸ್ಸೆಸ್ ಪ್ರೇರಿತ ಬಾಲಗೋಕುಲಂ ಏರ್ಪಡಿಸುವ ಶೋಭಾಯಾತ್ರೆಯಲ್ಲಿ ಉತ್ಸಾಹದಿಂದ ಪಾಲ್ಗೊಳ್ಳುತ್ತಿರುವ ದೃಶ್ಯ ನೋಡಿ ಕಾಮ್ರೇಡ್ಗಳ ಹೊಟ್ಟೆ ಉರಿಯದೆ ಇದ್ದೀತೆ? ಕೈ ಕೈ ಹಿಸುಕಿಕೊಳ್ಳುವುದಷ್ಟೇ ಅವರ ಪಾಲಿಗುಳಿದದ್ದು. ಆಗ ಕೆಲವು ಕಾಮ್ರೇಡ್ಗಳು ತಾವೇ ಇಂತಹ ಶೋಭಾಯಾತ್ರೆ ಏರ್ಪಡಿಸಬಾರದೇಕೆ? ಎಂದು ಚಿಂತಿಸಿ ಕಾರ್ಯಕ್ರಮ ನಡೆಸಿಯೇ ಬಿಟ್ಟರು. ಆದರೆ ಅದಕ್ಕೆ ಶ್ರೀಕೃಷ್ಣ ಜಯಂತಿ ಎಂದು ಹೆಸರಿಡದೆ ’ಓಣಂ ಹಬ್ಬದ ಸಮಾರೋಪ’ ಎಂದು ಕರೆದರು. ಕಾಮ್ರೇಡ್ಗಳ ಕೃಷ್ಣಾಷ್ಟಮಿ ಕಾರ್ಯಕ್ರಮಕ್ಕೆ ಸೇರಿದವರು ಮಾತ್ರ ಬೆರಳೆಣಿಕೆಯಷ್ಟು. ಏಕೆಂದರೆ ಕಾಮ್ರೇಡ್ಗಳ ಉzಶವೇನು, ಅವರ ನಿಜ ಬಣ್ಣವೇನು ಎಂಬುದನ್ನು ಅರಿಯದಷ್ಟು ಕೇರಳಿಗರು ಮೂರ್ಖರಲ್ಲ.
ದೇವರ ನಾಡೆನಿಸಿಕೊಂಡ ಕೇರಳದಲ್ಲಿ ದೇವರು, ಧರ್ಮ, ದೇವಸ್ಥಾನ, ಪೂಜೆ ಮುಂತಾದ ಧಾರ್ಮಿಕ ವಿದ್ಯಮಾನಗಳನ್ನು ವಿರೋಧಿಸಿಕೊಂಡೇ ಬಂದ ಕಮ್ಯುನಿಸ್ಟರಿಗೆ ಈಗ ಅಸ್ತಿತ್ವವೇ ಇಲ್ಲದಂತಾಗಿದೆ. ಬಹಳ ಹಿಂದೆ ಕಮ್ಯುನಿಸ್ಟ್ ನಾಯಕ ಎ.ಕೆ. ಗೋಪಾಲನ್ ಶಬರಿಮಲೆಗೆ ವ್ರತಧಾರಿಯಾಗಿ ಹೋಗುವುದು, ಅಯ್ಯಪ್ಪ ವ್ರತ ಮಾಡುವುದನ್ನು ಪ್ರಬಲವಾಗಿ ವಿರೋಧಿಸಿದ್ದರು. ಇನ್ನೊಬ್ಬ ಕಮ್ಯುನಿಸ್ಟ್ ಹಿರಿಯ ನಾಯಕ ನಂಬೂದರಿಪಾಡ್ ತಾನು ಸ್ವತಃ ಬ್ರಾಹ್ಮಣನಾಗಿದ್ದರೂ ದೇವರು, ಧರ್ಮವನ್ನು ಹಳಿಯುತ್ತಿದ್ದರು. ಆದರೆ ಜನರಿಗೆ ಗೊತ್ತಾಗದಂತೆ ಕದ್ದು ಹೆಂಡತಿಯೊಂದಿಗೆ ಗುರುವಾಯೂರು ಶ್ರೀಕೃಷ್ಣ ದೇಗುಲಕ್ಕೆ ಭೇಟಿ ನೀಡುತ್ತಿದ್ದರು. ಯಾರಾದರೂ ಈ ಬಗ್ಗೆ ಪ್ರಶ್ನಿಸಿದರೆ, ನನಗೆ ದೇವರಲ್ಲಿ ನಂಬಿಕೆಯಿಲ್ಲ, ಆದರೆ ನನ್ನ ಹೆಂಡತಿಗಾಗಿ ಜೊತೆಯಲ್ಲಿ ಹೋಗಿರುವೆ, ಅಷ್ಟೆ ಎಂದು ಹಾರಿಕೆಯ ಉತ್ತರ ನೀಡಿದ್ದರು. ಕೆಲವು ಕಮ್ಯುನಿಸ್ಟರು ತಮ್ಮ ಮಕ್ಕಳಿಗೆ ಹಿಂದು ಹೆಸರನ್ನಿಡದೆ ಲೆನಿನ್, ಸ್ಟಾಲಿನ್ ಎಂದು ಹೆಸರಿಟ್ಟಿದ್ದೂ ಉಂಟು.
ಆದರೆ ಕ್ರಮೇಣ ಕಾಮ್ರೇಡ್ಗಳ ಮನೆಗಳಲ್ಲೇ ಅವರ ವೈಚಾರಿಕತೆಗೆ ವಿರೋಧ ಶುರುವಾಯಿತು. ಕಾಮ್ರೇಡ್ಗಳ ಮಕ್ಕಳೇ ಬಾಲಗೋಕುಲಂ ಏರ್ಪಡಿಸುವ ಕೃಷ್ಣ ವೇಷಧಾರಿ ಮೆರವಣಿಗೆಯಲ್ಲಿ ವೇಷ ತೊಟ್ಟು ಪಾಲ್ಗೊಳ್ಳತೊಡಗಿದರು. ಇನ್ನು ಕೆಲವು ಕಾಮ್ರೇಡ್ಗಳು, ತಾವಂತೂ ಬೌದ್ಧಿಕವಾಗಿ ಕುಲಗೆಟ್ಟು ಹೋಗಿzವೆ, ತಮ್ಮ ಮಕ್ಕಳಾದರೂ ಸಂಸ್ಕಾರವಂತರಾಗಲಿ ಎಂಬ ಆಶಯದಿಂದ ತಮ್ಮ ಮಕ್ಕಳನ್ನು ಅವರಾಗಿಯೇ ಬಾಲಗೋಕುಲಂ ಮೆರವಣಿಗೆಗೆ ಕಳುಹಿಸಿದರು! ಎಡಪಂಥೀಯರ ನಾಸಿಕ್ತಕತೆ, ಹಿಂದು ಸಂಪ್ರದಾಯಗಳ ವಿರೋಧ ಅವರಿಗೆ ಸಾಕಷ್ಟು ನಷ್ಟವನ್ನೇ ಉಂಟು ಮಾಡಿದೆ. ಕೇರಳದಲ್ಲಿ ಯುವಪೀಳಿಗೆಯಂತೂ ಈಗ ಆರೆಸ್ಸೆಸ್ ವಿಚಾರದತ್ತ ಆಕರ್ಷಿತವಾಗಿ, ಸಂಘದ ಶಾಖೆಗಳಿಗೆ ಹೆಚ್ಚಿನ ಸಂಖ್ಯೆಯಲ್ಲಿ ಬರತೊಡಗಿದ್ದಾರೆ. ಮೊದಲು ಕಮ್ಯುನಿಸ್ಟರಾಗಿ, ಅನಂತರ ಸಂಘದತ್ತ ಒಲವು ತೋರಿ, ಸಂಘದ ಕಾರ್ಯಕರ್ತರಾದವರನ್ನು ಕಮ್ಯುನಿಸ್ಟರು ಬರ್ಬರವಾಗಿ ಕೊಲ್ಲತೊಡಗಿದರು. ಕಾಮ್ರೇಡ್ಗಳ ಇಂತಹ ಕ್ರೌರ್ಯಕ್ಕೆ ಬಲಿಯಾದ ಆರೆಸ್ಸೆಸ್ ಕಾರ್ಯಕರ್ತರು ನೂರಾರು. ಕಣ್ಣಾನೂರು ಜಿಲ್ಲೆಯೊಂದರಲ್ಲೇ 300 ಕ್ಕೂ ಹೆಚ್ಚು ಸಂಘದ ಕಾರ್ಯಕರ್ತರು ಬಲಿಯಾಗಿದ್ದಾರೆ.
ಕಾಮ್ರೇಡ್ಗಳ ಈ ಬರ್ಬರ ಕೃತ್ಯದಿಂದ ಕೇರಳದಲ್ಲಿ ಸಂಘಕಾರ್ಯವೇನೂ ಕುಂಠಿತವಾಗಿಲ್ಲ. ಬೇರೆ ಎಲ್ಲ ಕಡೆಗಳಿಗಿಂತಲೂ ಅಲ್ಲಿ ಆರೆಸ್ಸೆಸ್ ಪ್ರಬಲವಾಗಿ ಬೆಳೆಯುತ್ತಿದೆ. ಕಮ್ಯುನಿಸ್ಟರ ಅಸ್ತಿತ್ವವೇ ಈಗ ಅಲುಗಾಡತೊಡಗಿದೆ. ಜನರ ಒಲವನ್ನು ಕ್ರಮೇಣ ಎಡಪಂಥೀಯರು ಕಳೆದುಕೊಳ್ಳತೊಡಗಿದ್ದಾರೆ. ಇದು ಕಮ್ಯುನಿಸ್ಟ್ ನಾಯಕರನ್ನು ತೀವ್ರ ಚಿಂತೆಗೆ ನೂಕಿದೆ. ಕೃಷ್ಣಾಷ್ಟಮಿಯಂದು ಬಾಲಗೋಕುಲಂಗೆ ಪರ್ಯಾಯವಾಗಿ ಕೃಷ್ಣಾಷ್ಟಮಿ ಆಚರಣೆಗೆ ಕಾಮ್ರೇಡ್ಗಳು ಮುಂದಾಗಿರುವುದು ಇದೇ ಕಾರಣಕ್ಕೆ.
ಮೊನ್ನೆ ಕೃಷ್ಣಾಷ್ಟಮಿಯಂದು ಕಾಮ್ರೇಡ್ಗಳು ಏನೋ ಮಾಡಲು ಹೋಗಿ ಇನ್ನಷ್ಟು ಎಡವಟ್ಟು ಮಾಡಿಕೊಂಡಿದ್ದಾರೆ. ಅಂದು ಕಾಮ್ರೇಡ್ಗಳು ಏರ್ಪಡಿಸಿದ ಕೃಷ್ಣ ವೇಷಧಾರಿ ಶೋಭಾಯಾತ್ರೆಯಲ್ಲಿ ಕೆಲವರು ಕೇರಳದ ಮಹಾನ್ ಸಂತ ನಾರಾಯಣಗುರು ಅವರ ಭಾವಚಿತ್ರವನ್ನು ಶಿಲುಬೆಗೇರಿಸಿ ಅದನ್ನು ಕೈಯಲ್ಲಿ ಹಿಡಿದಿದ್ದರು. ಇದು ನಾರಾಯಣಗುರು ಅವರನ್ನು ಆರಾಧ್ಯದೈವವಾಗಿ ಪೂಜಿಸುವ ಇಳವ ಸಮುದಾಯದ ಜನರನ್ನು ತೀವ್ರವಾಗಿ ಕೆರಳಿಸಿದೆ. ತಮ್ಮ ಗುರುಗಳಿಗೆ ಕಾಮ್ರೇಡ್ಗಳು ಅವಮಾನವೆಸಗಿದ್ದಾರೆಂದು ಇಳವ ಸಮುದಾಯದ ಜನರು ಆಕ್ರೋಶಗೊಂಡಿದ್ದಾರೆ. ಕೇರಳದಲ್ಲಿ ಇಳವ ಸಮುದಾಯ ಒಂದು ಪ್ರಬಲ ಕೋಮು ಆಗಿದೆ. ಇಳವ ಜಾತಿಯ ವಿರೋಧ ಕಟ್ಟಿಕೊಡಿರುವ ಕಮ್ಯುನಿಸ್ಟ್ ಪಕ್ಷಕ್ಕೆ ಮುಂದಿನ ಚುನಾವಣೆ ಅಗ್ನಿಪರೀಕ್ಷೆಯೇ ಸರಿ. ಇಳವ ಸಮುದಾಯದ ನಾಯಕ, ವಕ್ತಾರ ಎಳ್ಳಪಳ್ಳಿ ನಟೇಶನ್ ಅವರು, ನಾರಾಯಣಗುರುವಿಗೆಸಗಿದ ಈ ಅವಮಾನದ ವಿರುದ್ಧ ಪ್ರತಿಭಟಿಸಿ ಖಂಡನಾ ಹೇಳಿಕೆ ನೀಡಿದ್ದಾರೆ. ಇದುವರೆಗೆ ಕಮ್ಯುನಿಸ್ಟರು ದೇವರು, ಧರ್ಮವನ್ನು ಎದುರು ಹಾಕಿಕೊಂಡಿದ್ದರು. ಇದೀಗ ಕೇರಳದ ನಾರಾಯಣಗುರು ಅನುಯಾಯಿಗಳನ್ನೂ ಎದುರು ಹಾಕಿಕೊಂಡು ಸಂದಿಗ್ಧಕ್ಕೆ ಸಿಲುಕಿದ್ದಾರೆ. ಕೇರಳದಲ್ಲಿ ಕಮ್ಯುನಿಸ್ಟರನ್ನು ನಂಬುವವರ, ಅವರ ಬಗ್ಗೆ ಒಲವಿರುವವರ ಸಂಖ್ಯೆ ತೀವ್ರವಾಗಿ ಕುಸಿದಿದೆ.
ಹಿಂದುತ್ವವಾದಿಗಳಿಗೆ ಮಾತ್ರ ಕಾಮ್ರೇಡ್ಗಳ ವೈಚಾರಿಕ ನಿಲುವು ಬದಲಾಗಿರುವುದಕ್ಕೆ ಸಂತಸವೇ ಆಗಿದೆ. ಆದರೆ ಕಮ್ಯುನಿಸ್ಟರು ನಂಬಿದ ತತ್ವ , ಸಿದ್ಧಾಂತ, ವೈಚಾರಿಕತೆ ಸಂಪೂರ್ಣ ನಾಶವಾದಂತಾಗಿದೆ. ಧರ್ಮವನ್ನು ಅಪೀಮೆಂದ ಕಾಮ್ರೇಡ್ಗಳು ಈಗ ಅದೇ ಧರ್ಮಕ್ಕೆ ಜೋತುಬೀಳಬೇಕಾದ ಅನಿವಾರ್ಯತೆ ಉಂಟಾಗಿರುವುದು ಕಾಲದ ಮಹಿಮೆಯೋ ಅಥವಾ ಕಮ್ಯುನಿಸ್ಟ್ ವೈಚಾರಿಕತೆ ದಿವಾಳಿಯಾಗುತ್ತಿರುವ ಸಂಕೇತವೋ ಗೊತ್ತಿಲ್ಲ. ಚೀನಾ, ರಷ್ಯಾದಲ್ಲಿ ಮಳೆ ಬಂದರೆ ಭಾರತದಲ್ಲಿ ಕೊಡೆ ಬಿಚ್ಚುತ್ತಿದ್ದ ಕಾಮ್ರೇಡ್ಗಳು ಈಗ ಅಥೋ ಭ್ರಷ್ಟ, ತಥೋ ಭ್ರಷ್ಟ ಎನಿಸಿಕೊಂಡಿರುವುದಂತೂ ನಿಜ. ಅರೆಬೆಂದ, ಗಟ್ಟಿ ಸಿದ್ಧಾಂತವಿರದ ಟೊಳ್ಳು ವೈಚಾರಿಕತೆ ಕಾಲಪ್ರವಾಹದೆದುರು ಹೆಚ್ಚು ದಿನ ಉಳಿಯಲಾರದು ಎಂಬುದಕ್ಕೆ ಕೇರಳದ ಪ್ರಸ್ತುತ ವಿದ್ಯಮಾನಗಳು ದಿವ್ಯನಿದರ್ಶನ. ಭಗವಾನ್, ಬಂಜಗೆರೆ, ಚಂಪಾ, ಕಾರ್ನಾಡ್ ಮೊದಲಾದ ಎಡಪಂಥೀಯ ವಿಚಾರವಾದಿಗಳು ಇದನ್ನೆಲ್ಲ ಹೇಗೆ ಅರಗಿಸಿಕೊಳ್ಳುತ್ತಾರೋ…!
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.