News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ


×
Home About Us Advertise With s Contact Us

ಬಿಬಿಎಂಪಿ ಚುನಾವಣೆಗೆ ಮೊದಲೇ ಕಾಂಗ್ರೆಸ್ ಸೋಲೊಪ್ಪಿಕೊಂಡಿದೆ: ಸಚಿವ ಅಶ್ವತ್ಥನಾರಾಯಣ್

ಬೆಂಗಳೂರು: ಬಿಬಿಎಂಪಿ ಚುನಾವಣೆ ಸಂಬಂಧ ವಾರ್ಡ್ ವಿಂಗಡಣೆ, ಮೀಸಲಾತಿ ವಿಚಾರದಲ್ಲಿ ಆಕ್ಷೇಪಣೆ ಸಲ್ಲಿಸದೆ ಕಾಂಗ್ರೆಸ್ ಪಕ್ಷದವರು ಗೂಂಡಾಗಿರಿ ಸಂಸ್ಕೃತಿ, ತೋಳ್ಬಲ ಪ್ರದರ್ಶಿಸುತ್ತಿದ್ದಾರೆ ಎಂದು ರಾಜ್ಯದ ಉನ್ನತ ಶಿಕ್ಷಣ, ಐಟಿ ಮತ್ತು ಬಿಟಿ ಸಚಿವ ಡಾ|| ಸಿ.ಎನ್. ಅಶ್ವತ್ಥನಾರಾಯಣ್ ಅವರು ತಿಳಿಸಿದರು.

ಮಲ್ಲೇಶ್ವರದ ಬಿಜೆಪಿ ರಾಜ್ಯ ಕಾರ್ಯಾಲಯ “ಜಗನ್ನಾಥ ಭವನ”ದಲ್ಲಿ ಇಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಬಿಬಿಎಂಪಿ ವಿಚಾರದಲ್ಲಿ ನಮ್ಮ ಸರಕಾರ ಕಾನೂನಿನ ಪ್ರಕಾರ ಕ್ರಮ ವಹಿಸಿದೆ. ಕಾನೂನು ಉಲ್ಲಂಘನೆ ಆಗಿದ್ದರೆ, ತಕರಾರಿದ್ದರೆ ತೋರಿಸಲಿ. ಚುನಾವಣೆ ನಡೆಯದಂತೆ ನೋಡಿಕೊಳ್ಳುವುದು ಕಾಂಗ್ರೆಸ್ ಕೆಲಸ. ಕಾಂಗ್ರೆಸ್ ಬಿಬಿಎಂಪಿ ಚುನಾವಣೆಯಲ್ಲಿ ಸೋಲು ಒಪ್ಪಿಕೊಂಡಿದೆ. ನಾವು ಬಿಬಿಎಂಪಿ ಚುನಾವಣೆ ನಡೆಸಿಯೇ ಸಿದ್ಧ. ಇದರಲ್ಲಿ ಯಾವುದೇ ಗೊಂದಲವಿಲ್ಲ ಎಂದರು.

ಮಾಜಿ ಸಚಿವರು, ಕಾಂಗ್ರೆಸ್ ಮುಖಂಡರಿಗೆ ಕಾನೂನಿನ ಅರಿವಿಲ್ಲ. ವಿಧಾನಸೌಧದಲ್ಲಿ ಅವರ ರೀತಿ ನೀತಿಯನ್ನು ಕಾಂಗ್ರೆಸ್ಸಿಗರು ಪ್ರದರ್ಶನ ಮಾಡಿದ್ದಾರೆ. ಕಾಂಗ್ರೆಸ್ಸಿಗರಿಗೆ ಸಂವಿಧಾನ, ಕಾನೂನಿನ ವ್ಯವಸ್ಥೆಯ ಅರಿವಿಲ್ಲ. ಇದು ಅತ್ಯಂತ ಖಂಡನೀಯ ಎಂದರು.

ಸಿದ್ದರಾಮಯ್ಯ ಅವರು ಪದೇಪದೇ ನಿವೃತ್ತಿಯ ಹೇಳಿಕೆ ಕೊಡುತ್ತಾರೆ. ಕಾಂಗ್ರೆಸ್ ಎಲ್ಲ ಕಡೆ ನೆಲೆ ಕಳೆದುಕೊಳ್ಳುತ್ತಿದೆ. 75 ವರ್ಷಕ್ಕಾದರೂ ಅವರು ಮಾರ್ಗದರ್ಶಿ ಆಗಬೇಕಿತ್ತು. ಅವರ ಹೇಳಿಕೆಯನ್ನು ಅವರು ಪಾಲಿಸಬೇಕು ಎಂದು ಕೋರಿದರು. ಬಿಜೆಪಿ ಪಕ್ಷದ ಉತ್ಸವ ಮಾಡುತ್ತದೆ. ನಾವು ವ್ಯಕ್ತಿಪೂಜೆ ಮಾಡುವುದಿಲ್ಲ ಎಂದು ಮಾಧ್ಯಮ ಪ್ರತಿನಿಧಿಗಳ ಪ್ರಶ್ನೆಗೆ ಉತ್ತರಿಸಿದರು. ಪಕ್ಷ ಎಂದರೆ ಮನೆಯಂತೆ. ಮನೆ ಎಂದ ಮೇಲೆ ಸಣ್ಣಪುಟ್ಟ ಗೊಂದಲ ಸಹಜ. ಅದನ್ನು ಬಗೆಹರಿಸಿಕೊಳ್ಳುತ್ತೇವೆ ಎಂದು ನುಡಿದರು.

ಜಮೀರ್, ದಿನೇಶ್ ಗುಂಡೂರಾವ್, ರಾಮಲಿಂಗಾರೆಡ್ಡಿ ಅವರ ಪ್ರಕಾರ ಮುಸಲ್ಮಾನ ಮಹಿಳೆಯರು ಜನಪ್ರತಿನಿಧಿ ಆಗಬಾರದೇ? ಅವರೆಲ್ಲರದು ರಾಜಕೀಯ ಸ್ಟಂಟ್. ವೇದಿಕೆಗಳನ್ನು ಬಳಸದೆ ಕಾನೂನು ಕೈಗೆ ತೆಗೆದುಕೊಳ್ಳುವ ಮತ್ತು ಬಾಯಿಗೆ ಬಂದಂತೆ ಮಾತನಾಡಿ ವಿಧಾನಸೌಧದ ಘನತೆಯನ್ನು ಹಾಳು ಮಾಡಿದ್ದು ಖಂಡನೀಯ. ಮುಖ್ಯ ಕಾರ್ಯದರ್ಶಿ ಹಾಗೂ ಉನ್ನತಾಧಿಕಾರಿಗಳ ಮುಂದೆ ನೀಡಿದ ಹೇಳಿಕೆ ಖಂಡನೀಯ ಎಂದು ತಿಳಿಸಿದರು.

ಬೆಂಗಳೂರಿಗೆ ಪ್ರತ್ಯೇಕ ಕಾಯಿದೆ ತರುವ ಬೇಡಿಕೆ ಇತ್ತು. ನೂತನ ಕಾಯಿದೆಯನ್ನು ನಮ್ಮ ಸರಕಾರ ಜಾರಿಗೊಳಿಸಿದೆ. ಕೋರ್ಟ್ ತೀರ್ಪಿನ ಆಧಾರದಡಿ ನಮ್ಮ ಸರಕಾರವು ಡಿಲಿಮಿಟೇಶನ್ ಮಾಡಿದೆ. ಎಲ್ಲ ಸವಾಲಿಗೆ ಪರಿಹಾರ ಕಂಡುಕೊಳ್ಳಲು ಪ್ರಯತ್ನ ನಡೆದಿದೆ. ನಮ್ಮ ಸರಕಾರದಲ್ಲಿ ಈ ನಿಟ್ಟಿನಲ್ಲಿ ಉತ್ತಮ ಕೆಲಸ ಆಗಿದೆ ಎಂದರು.

ಮೀಸಲಾತಿ ವಿಚಾರದಲ್ಲೂ ಪುನರ್ ಪರಿಶೀಲನೆ ಅನಿವಾರ್ಯವಾಗಿತ್ತು. 243 ಸದಸ್ಯ ಸಂಖ್ಯೆ ಅನುಗುಣವಾಗಿ ಸಮಿತಿ ರಚಿಸಿ ಮೀಸಲಾತಿ ನಿಗದಿ ಮಾಡಲಾಗಿದೆ. 50 ಶೇಕಡಾ ಒಬಿಸಿ, ಪರಿಶಿಷ್ಟ ಪಂಗಡಕ್ಕೆ ಮೀಸಲಾತಿ ಕೊಟ್ಟಿದೆ. ಸಾಮಾನ್ಯ ವರ್ಗಕ್ಕೆ ಶೇ 50, ಮಹಿಳೆಯರಿಗೆ ಶೇ 50 ಮೀಸಲಾತಿ ಕೊಟ್ಟಿದೆ. ಇದಕ್ಕೆ ವಿರೋಧ, ಆಕ್ಷೇಪಣೆ ಇದ್ದರೆ ಅದಕ್ಕೆ ಅವಕಾಶವಿದೆ ಎಂದು ನುಡಿದರು.

ಬಿಜೆಪಿಯಲ್ಲಿ ವಲಸಿಗರು, ಮೂಲ ಪಕ್ಷದವರು ಎಂಬ ವ್ಯತ್ಯಾಸ ಇಲ್ಲ ಎಂದು ಪ್ರಶ್ನೆಗೆ ಉತ್ತರ ಕೊಟ್ಟ ಅವರು, ಕಾನೂನಿನ ಪ್ರಕಾರ ಹಾಗೂ ಕಾಲಬದ್ಧವಾದ ರೀತಿಯಲ್ಲಿ ಚುನಾವಣೆಗೆ ಸಿದ್ಧರಾಗಿದ್ದೇವೆ. ಕಾನೂನು ಪ್ರಕಾರ ಶೇ 50 ಮಹಿಳಾ ಮೀಸಲಾತಿಯನ್ನು ನೀಡಿದ್ದೇವೆ ಎಂದು ಅವರು ಮಾಧ್ಯಮ ಪ್ರತಿನಿಧಿಗಳ ಪ್ರಶ್ನೆಗೆ ಉತ್ತರ ನೀಡಿದರು. ಇಡೀ ಬೆಂಗಳೂರನ್ನು ಒಂದು ಘಟಕವಾಗಿ ಪರಿಗಣಿಸಿ 243ಕ್ಕೆ ಯಾವ ಪ್ರಕಾರ ಎಷ್ಟು ಮೀಸಲಾತಿ ಕೊಡಬೇಕೆಂದು ಪರಿಗಣಿಸಲಾಗಿದೆ. ವಿಧಾನಸಭಾ ಕ್ಷೇತ್ರವಾರು ಘಟಕ ಪರಿಗಣಿಸಲು ಅವಕಾಶವಿಲ್ಲ ಎಂದು ಅವರು ಇನ್ನೊಂದು ಪ್ರಶ್ನೆಗೆ ಉತ್ತರ ಕೊಟ್ಟರು.

ಬಿಜೆಪಿ ರಾಜ್ಯ ಕಾರ್ಯದರ್ಶಿ ಹಾಗೂ ವಿಧಾನಸಭೆಯ ಮುಖ್ಯ ಸಚೇತಕ ಎಂ. ಸತೀಶ್ ರೆಡ್ಡಿ ಅವರು ಮಾತನಾಡಿ, ಗಾಂಧಿನಗರದ ಶಾಸಕರು ತಮ್ಮ ಪ್ರತಿಭಟನೆ ಮಾಡಿದ್ದರು. ಆದರೆ ಅವರು ಯಾವುದೇ ಆಕ್ಷೇಪಣೆ ಸಲ್ಲಿಸಿರಲಿಲ್ಲ. 2015ರಲ್ಲಿ ಜೆಡಿಎಸ್‍ನಲ್ಲಿದ್ದ ಜಮೀರ್ ಅವರು ಹೆಚ್ಚು ಮಹಿಳಾ ಪ್ರತಿನಿಧಿಗಳ ಬಗ್ಗೆ ಆಗ ಪ್ರಶ್ನೆ ಎತ್ತಿರಲಿಲ್ಲ. ಈಗ ಯಾಕೆ ಮಾತನಾಡುತ್ತಾರೆ ಎಂದು ಪ್ರಶ್ನಿಸಿದರು.
ಮಾಜಿ ಸಚಿವ ರಾಮಲಿಂಗಾರೆಡ್ಡಿ ಅವರು, ಹಿಂದಿನ ಚುನಾವಣೆಯಲ್ಲಿ ಹೆಚ್ಚು ಮಹಿಳೆಯರಿಗೆ ಅವಕಾಶ ಕೊಟ್ಟಿದ್ದರು. ಆದರೂ ನಾವು ಗೆದ್ದು ಬಂದಿದ್ದೇವೆ. ಕಾಂಗ್ರೆಸ್ಸಿಗರು ಮಹಿಳಾ ವಿರೋಧಿಗಳು. ಮಹಿಳೆಯರಿಗೆ ಹೆಚ್ಚು ಅವಕಾಶ ಕೊಟ್ಟದ್ದನ್ನು ಸ್ವಾಗತಿಸಬೇಕಿತ್ತು. ಕಾಂಗ್ರೆಸ್ ದ್ವಂದ್ವ ನೀತಿ ಅನುಸರಿಸುತ್ತಿದೆ ಎಂದು ಆಕ್ಷೇಪಿಸಿದರು.
ನಾವು ಚುನಾವಣೆಗೆ ಸಿದ್ಧರಿದ್ದೇವೆ. ಶಾಸಕರ, ಸಂಸದರ, ಬಿಬಿಎಂಪಿ ಚುನಾವಣೆಯಲ್ಲಿ ಬೆಂಗಳೂರಿನ ಜನರು ಬಿಜೆಪಿ ಪರ ಇದ್ದಾರೆ. 243ರಲ್ಲಿ 150ಕ್ಕಿಂತ ಹೆಚ್ಚು ಸೀಟು ಬಿಜೆಪಿ ಗೆಲ್ಲುವುದಾಗಿ ಸಮೀಕ್ಷೆ ತಿಳಿಸಿದೆ. ಚುನಾವಣೆ ಮುಂದೂಡುವ ಏಕೈಕ ಅಜೆಂಡ ಕಾಂಗ್ರೆಸ್‍ನದು ಎಂದು ಟೀಕಿಸಿದರು.

ಕಾಂಗ್ರೆಸ್ ಜನಪ್ರತಿನಿಧಿಗಳು ಬೆಂಗಳೂರಿನ ಜನರ ಕ್ಷಮೆ ಕೇಳಬೇಕು. ಅವರ ಗೂಂಡಾಗಿರಿಯನ್ನು ಜನರು ಗಮನಿಸಿದ್ದಾರೆ ಎಂದು ಆಗ್ರಹಿಸಿದರು.

ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.

News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.

Recent News

Back To Top