ನವದೆಹಲಿ: ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಇಂದು ಮೈಸೂರು ಅರಮನೆ ಮೈದಾನದಲ್ಲಿ ಅಂತರರಾಷ್ಟ್ರೀಯ ಯೋಗ ದಿನಾಚರಣೆ 2022 ರ ಮುಖ್ಯ ಕಾರ್ಯಕ್ರಮಕ್ಕೆ ನೇತೃತ್ವ ವಹಿಸಿದ್ದರು. ಮೋದಿಯೊಂದಿಗೆ ಸುಮಾರು 15,000 ಮಂದಿ ಯೋಗ ಪ್ರದರ್ಶನ ನೀಡಿದರು.
ಈ ಸಂದರ್ಭದಲ್ಲಿ ಮಾತನಾಡಿದ ಮೋದಿ, “ಯೋಗವು ಜೀವನದ ಒಂದು ಭಾಗ ಮಾತ್ರವಲ್ಲ, ಅದು ಜೀವನದ ಮಾರ್ಗವಾಗುತ್ತಿದೆ. ಯೋಗವು ನಮ್ಮ ವಿಶ್ವಕ್ಕೆ ಶಾಂತಿಯನ್ನು ತರುತ್ತದೆ. ಜಗತ್ತಿನ ಜನರಿಗೆ ಯೋಗ ಇಂದು ಜೀವನದ ಭಾಗವಾಗಿರದೆ ಜೀವನ ವಿಧಾನವಾಗುತ್ತಿದೆ” ಎಂದರು.
“ಈ ಇಡೀ ವಿಶ್ವವು ನಮ್ಮದೇ ದೇಹ ಮತ್ತು ಆತ್ಮದಿಂದ ಪ್ರಾರಂಭವಾಗುತ್ತದೆ. ವಿಶ್ವವು ನಮ್ಮಿಂದಲೇ ಪ್ರಾರಂಭವಾಗುತ್ತದೆ. ಯೋಗವು ನಮ್ಮೊಳಗಿನ ಎಲ್ಲವನ್ನೂ ಜಾಗೃತಗೊಳಿಸುತ್ತದೆ ಮತ್ತು ಅರಿವಿನ ಪ್ರಜ್ಞೆಯನ್ನು ನಿರ್ಮಿಸುತ್ತದೆ” ಎಂದು ಅವರು ಹೇಳಿದರು.
“ಯೋಗವು ನಮಗೆ ಶಾಂತಿಯನ್ನು ತರುತ್ತದೆ. ಯೋಗದಿಂದ ಶಾಂತಿಯು ಕೇವಲ ವ್ಯಕ್ತಿಗಳಿಗೆ ಅಲ್ಲ. ಯೋಗವು ನಮ್ಮ ಸಮಾಜಕ್ಕೆ ಶಾಂತಿಯನ್ನು ತರುತ್ತದೆ. ಯೋಗವು ನಮ್ಮ ರಾಷ್ಟ್ರಗಳಿಗೆ ಮತ್ತು ಜಗತ್ತಿಗೆ ಶಾಂತಿಯನ್ನು ತರುತ್ತದೆ. ಮತ್ತು ಯೋಗವು ನಮ್ಮ ವಿಶ್ವಕ್ಕೆ ಶಾಂತಿಯನ್ನು ತರುತ್ತದೆ” ಎಂದು ಪ್ರಧಾನಮಂತ್ರಿ ಹೇಳಿದರು.
ಎಷ್ಟೇ ಒತ್ತಡದಲ್ಲಿದ್ದರೂ ಕೆಲವು ನಿಮಿಷಗಳ ಧ್ಯಾನದಿಂದ ನಮಗೆ ನಿರಾಳತೆ ಸಿಗುತ್ತದೆ ಹಾಗೂ ಉತ್ಪಾದಕತೆ ಹೆಚ್ಚುತ್ತದೆ .ಹಾಗಾಗಿ ಯೋಗವನ್ನು ಹೆಚ್ಚುವರಿ ಕೆಲಸವಾಗಿ ತೆಗೆದುಕೊಳ್ಳಬೇಕಿಲ್ಲ, ಯೋಗವನ್ನು ಅರಿಯಬೇಕು, ಯೋಗವನ್ನು ಬದುಕಬೇಕು ಎಂದರು.
ಕರ್ನಾಟಕ ರಾಜ್ಯಪಾಲ ತಾವರಚಂದ್ ಗೆಹ್ಲೋಟ್, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಕೇಂದ್ರ ಆಯುಷ್ ಸಚಿವ ಸರ್ಬಾನಂದ ಸೋನೋವಾಲ್, ಮೈಸೂರು ರಾಜವಂಶಸ್ಥ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಮತ್ತು ಪ್ರಮೋದಾ ದೇವಿ ಸೇರಿದಂತೆ ಹಲವರು ಉಪಸ್ಥಿತರಿದ್ದರು.
2015 ರಿಂದ, ಪ್ರತಿ ವರ್ಷ ಜೂನ್ 21 ರಂದು ವಿಶ್ವಾದ್ಯಂತ ಯೋಗದ ಅಂತರರಾಷ್ಟ್ರೀಯ ದಿನವನ್ನು ಆಚರಿಸಲಾಗುತ್ತದೆ. ಈ ವರ್ಷದ ಯೋಗ ದಿನದ ಥೀಮ್ “ಮಾನವೀಯತೆಗಾಗಿ ಯೋಗ”.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.