News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ


×
Home About Us Advertise With s Contact Us

ದಾವೋಸ್: ಹೂಡಿಕೆ ಆಕರ್ಷಿಸುವಲ್ಲಿ ಯಶಸ್ವಿಯಾಗಿದ್ದಾರೆ ಸಿಎಂ ಬೊಮ್ಮಾಯಿ 

ದಾವೋಸ್: ದಾವೋಸ್ ನಲ್ಲಿ ನಡೆಯುತ್ತಿರುವ ವಿಶ್ವ ಆರ್ಥಿಕ ಶೃಂಗ ಸಭೆ ಫಲಪ್ರದವಾಗಿದ್ದು, ಕರ್ನಾಟಕ ಬಂಡವಾಳ ಹೂಡಿಕೆ ಆಕರ್ಷಿಸುವಲ್ಲಿ ಯಶಸ್ವಿಯಾಗಿದೆ. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ನೇತೃತ್ವದಲ್ಲಿ ಪ್ರಥಮ ಬಾರಿಗೆ 2 ಮಹತ್ವದ ಕಂಪನಿಗಳ ಜತೆ ಒಟ್ಟು 52 ಸಾವಿರ ಕೋಟಿ ರೂಪಾಯಿ ಮೊತ್ತದ ಒಪ್ಪಂದಗಳಿಗೆ ಸಹಿ ಮಾಡಲಾಗಿದೆ.

ಇದು ಕರ್ನಾಟಕ ರಾಜ್ಯದ ಮೇಲೆ ದೊಡ್ಡ ದೊಡ್ಡ ಕಂಪನಿಗಳು ಇಟ್ಟಿರುವ ನಂಬಿಕೆ ಮತ್ತು ವಿಶ್ವಾಸಕ್ಕೆ ಸಾಕ್ಷಿ. ಇತ್ತೀಚಿನ ದಿನಗಳ ರಾಜ್ಯಕ್ಕೆ ಹರಿದು ಬರುತ್ತಿರುವ ಬಹುದೊಡ್ಡ ಮೊತ್ತದ ಬಂಡವಾಳ ಇದಾಗಿದೆ. ಇನ್ನೂ ಹಲವಾರು ಕಂಪನಿಗಳು ಬಂಡವಾಳ ಹೂಡಿಕೆಗೆ ಆಸಕ್ತಿ ತೋರಿವೆ. ಮುಂದಿನ‌ ದಿನಗಳಲ್ಲಿ ಇನ್ನೂ ಹಲವಾರು ಕಂಪನಿಗಳು ಹೂಡಿಕೆ ಮಾಡಲಿರುವ ಬಂಡವಾಳದಿಂದ ಸಾವಿರಾರು ನೇರ ಮತ್ತು ಪರೋಕ್ಷ ಉದ್ಯೋಗಗಳು ಸೃಷ್ಠಿ ಆಗಲಿವೆ. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ನೇತೃತ್ವದಲ್ಲಿ ಕೈಗಾರಿಕೆ ಸಚಿವ ಮುರುಗೇಶ ನಿರಾಣಿ ಅವರ ಆಸಕ್ತಿಯಿಂದ ಸರ್ಕಾರ ಬೃಹತ್ ಪ್ರಮಾಣದಲ್ಲಿ ಬಂಡವಾಳ ಆಕರ್ಷಿಸುವಲ್ಲಿ ಯಶಸ್ವಿಯಾಗುತ್ತಿದೆ.

ನವೀಕರಿಸಬಹುದಾದ ಇಂಧನ ವಲಯದಲ್ಲಿ ರೆನ್ಯೂ ಪವರ್ ಕಂಪನಿ 50,000 ಕೋಟಿ ರೂ.ಗಳ ಬಂಡವಾಳ ಹೂಡಲು ಕರ್ನಾಟಕ ಸರ್ಕಾರದದ ಜೊತೆ ಒಪ್ಪಂದ ಮಾಡಿಕೊಂಡಿದ್ದು, ಕರ್ನಾಟಕದ ಇಂಧನ ಕ್ಷೇತ್ರದಲ್ಲಿ ಈ ಒಪ್ಪಂದ ಪ್ರಮುಖ ಮೈಲಿಗಲ್ಲಾಗಿದೆ. ಮೆ. ಲುಲು ಗ್ರೂಪ್ ಇಂಟರ್ನ್ಯಾಷನಲ್ ಸಂಸ್ಥೆಯು ರಾಜ್ಯದಲ್ಲಿ ಸುಮಾರು 2000 ಕೋಟಿ ರೂ. ಹೂಡಿಕೆ ಮಾಡುವ ಕುರಿತು ಒಪ್ಪಂದ ಮಾಡಿಕೊಳ್ಳಲಾಯಿತು. ಇವೆರಡೂ ಒಪ್ಪಂದಗಳು ರಾಜ್ಯದಲ್ಲಿ ಕೈಗಾರಿಕೆಗಳ ಅಭಿವೃದ್ಧಿ ಹಾಗೂ ಉದ್ಯೋಗ ಸೃಷ್ಟಿಗೆ ಸಹಕಾರಿಯಾಗಲಿದೆ.

ಕರ್ನಾಟಕದಲ್ಲಿ ಕೈಗಾರಿಕೆ ಹಾಗೂ ಉದ್ಯಮಗಳ ಸ್ಥಾಪನೆಗೆ ಪೂರಕವಾಗಿ ಎರಡು ನೀತಿಗಳನ್ನು ಜಾರಿಗೆ ತರಲಾಗುತ್ತಿದೆ. ಸಂಶೋಧನೆಗೆ ಹೆಚ್ಚು ಪ್ರೋತ್ಸಾಹವನ್ನು ನೀಡುವ ಆರ್ ಎಂಡ್ ಡಿ ಪಾಲಿಸಿ, ಹೆಚ್ಚು ಉದ್ಯೋಗವನ್ನು ಒದಗಿಸುವ ಉದ್ಯಮಗಳಿಗೆ ಹೆಚ್ಚು ಪ್ರೋತ್ಸಾಹಕಗಳನ್ನು ನೀತಿಗಳನ್ನು ಜಾರಿಗೆ ತರಲಾಗಿದೆ. ಈ ಎರಡೂ ನೀತಿಗಳ ಲಾಭಗಳನ್ನು ಕರ್ನಾಟಕದಲ್ಲಿ ಬಂಡವಾಳ ಹೂಡಿಕೆ ಮಾಡುವ ಸಂಸ್ಥೆಗಳು ಪಡೆದುಕೊಳ್ಳಬಹುದಾಗಿದೆ ಎಂದು ಮುಖ್ಯಮಂತ್ರಿಗಳು ತಿಳಿಸಿದರು.

ಇದೇ ಸಂದರ್ಭದಲ್ಲಿ ನವೆಂಬರ್ ತಿಂಗಳಲ್ಲಿ ಬೆಂಗಳೂರಿನಲ್ಲಿ ನಡೆಯುವ ಜಾಗತಿಕ ಬಂಡವಾಳ ಹೂಡಿಕೆದಾರರ ಸಮಾವೇಶ ಹಾಗೂ ಬೆಂಗಳೂರು ಟೆಕ್ ಸಮ್ಮಿಟ್ ನಲ್ಲಿ ಪಾಲ್ಗೊಳ್ಳುವಂತೆ ಹೂಡಿಕೆದಾರರಿಗೆ ಆಹ್ವಾನ ನೀಡಲಾಯಿತು.

ಕರ್ನಾಟಕದಲ್ಲಿ ಬಂಡವಾಳ ಹೂಡಿಕೆ ಮಾಡುತ್ತಿರುವ ಸಂಸ್ಥೆಯ ವಿವರಗಳು :

ಮೆ. ಲುಲು ಗ್ರೂಪ್ ಇಂಟರ್ನ್ಯಾಷನಲ್ :
ಲುಲು ಗ್ರೂಪ್ ರಾಜ್ಯದಲ್ಲಿ ಸುಮಾರು ಎರಡು ಸಾವಿರ ಕೋಟಿ ರೂ. ಹೂಡಿಕೆ ಮಾಡಲು ಒಪ್ಪಂದಕ್ಕೆ ಸಹಿ ಹಾಕಿದೆ. 4 ಶಾಪಿಂಗ್ ಮಾಲ್ ಮತ್ತು ಹೈಪರ್ ಮಾರ್ಕೆಟ್ ಹಾಗೂ ರಫ್ತು ಆಧಾರಿತ ಆಹಾರ ಮಳಿಗೆಗಳನ್ನು ಸ್ಥಾಪಿಸಲು ಉದ್ದೇಶಿಸಲಾಗಿದೆ. ಈ ಮೂಲಕ 10 ಸಾವಿರಕ್ಕೂ ಹೆಚ್ಚು ಉದ್ಯೋಗ ಸೃಷ್ಟಿಯಾಗುವ ನಿರೀಕ್ಷೆ ಇದೆ.

ರೆನ್ಯೂ ಪವರ್ ಪ್ರೈ.ಲಿ. :
ರೆನ್ಯೂ ಪವರ್ ಪ್ರೈ.ಲಿ. ಕಂಪೆನಿಯು ರಾಜ್ಯ ಸರ್ಕಾರದೊಂದಿಗೆ 50,000 ಕೋಟಿ ರೂ. ಹೂಡಿಕೆಯ ಒಪ್ಪಂದಕ್ಕೆ ಸಹಿ ಮಾಡಿತು. ಈ ಕಂಪೆನಿಯು ಮುಂದಿನ 7 ವರ್ಷಗಳಲ್ಲಿ ನವೀಕರಿಸಬಹುದಾದ ಇಂಧನ, ಬ್ಯಾಟರಿ ಸ್ಟೋರೇಜ್, ಗ್ರೀನ್ ಹೈಡ್ರೋಜನ್ ಘಟಕಗಳನ್ನು 2 ಹಂತಗಳಲ್ಲಿ ಸ್ಥಾಪಿಸಲು ಉದ್ದೇಶಿಸಿದ್ದು, ಸುಮಾರು 30 ಸಾವಿರ ಉದ್ಯೋಗ ಸೃಷ್ಟಿಯ ನಿರೀಕ್ಷೆ ಇದೆ.

ಮೊದಲ ಹಂತದಲ್ಲಿ ಈಗಾಗಲೇ ಜಾರಿಯಲ್ಲಿರುವ ಯೋಜನೆಗಳಿಗೆ 11,900 ಕೋಟಿ ರೂ.ಗಳ ಬಂಡವಾಳ ಹೂಡಿ, ಮುಂದಿನ 2 ವರ್ಷಗಳಲ್ಲಿ ಯೋಜನೆಗಳು ಕಾರ್ಯಾರಂಭ ಮಾಡಲಾಗುತ್ತದೆ.
ಎರಡನೇ ಹಂತದಲ್ಲಿ ನವೀಕರಿಸಬಹುದಾದ ಇಂಧನ ಹಾಗೂ ಗ್ರೀನ್ ಹೈಡ್ರೋಜನ್ ಘಟಕಗಳನ್ನು ಮುಂದಿನ 5 ವರ್ಷಗಳಲ್ಲಿ ಸ್ಥಾಪಿಸಲು 37,500 ಕೋಟಿ ರೂ.ಗಳ ಬಂಡವಾಳವನ್ನು ಹೂಡಿಕೆ ಮಾಡಲಾಗುತ್ತದೆ. ಈ ಎರಡು ಹಂತದ ಯೋಜನೆಗಳಿಂದ ಸುಮಾರು 30 ಸಾವಿರ ಉದ್ಯೋಗ ಸೃಷ್ಟಿಯ ನಿರೀಕ್ಷೆ ಇದೆ.

ಕರ್ನಾಟಕದಲ್ಲಿ ಬಂಡವಾಳ ಹೂಡಿಕೆಗೆ ಆಸಕ್ತಿ ತೋರಿದ ಸಂಸ್ಥೆಗಳ ವಿವರ :

ಸೀಮೆನ್ಸ್ ಸಂಸ್ಥೆ :
ಬೆಂಗಳೂರಿನಲ್ಲಿ 2 ಯೋಜನೆಗಳನ್ನು ಸೀಮೆನ್ಸ್ ಸಂಸ್ಥೆ ಕೈಗೆತ್ತಿಕೊಳ್ಳಲಿದೆ. ಆಧುನಿಕ ವೈದ್ಯಕೀಯ ಉಪಕರಣಗಳ ಉತ್ಪಾದನೆಗೆ ಸಂಬಂಧಿಸಿದಂತೆ ವಿಶೇಷ ಪ್ರೋತ್ಸಾಹಕಗಳನ್ನು ಕರ್ನಾಟಕ ಸರ್ಕಾರ ಒದಗಿಸುವ ಭರವಸೆ ನೀಡಿದೆ. ಬಿಯಾಂಡ್ ಬೆಂಗಳೂರು ಯೋಜನೆಯಡಿ ತುಮಕೂರು, ಹುಬ್ಬಳ್ಳಿ-ಧಾರವಾಡ ಮತ್ತು ಮೈಸೂರು ನಗರಗಳಲ್ಲಿಯೂ ಹೂಡಿಕೆ ಮಾಡುವ ಕುರಿತು ರಾಜ್ಯ ಸರ್ಕಾರ ಮತ್ತು ಸೀಮನ್ಸ್ ಸಂಸ್ಥೆ ಮಾತುಕತೆ ನಡೆಸಿತು.

ದಸ್ಸಾಲ್ಸ್ ಸಿಸ್ಟಮ್ಸ್:
ರಾಜ್ಯದಲ್ಲಿ ವಿದ್ಯುತ್ ವಾಹನಗಳು ಮತ್ತು ಕೇಂದ್ರ ಉತ್ಪಾದನಾ ತಾಂತ್ರಿಕ ಸಂಸ್ಥೆಯ ಸಹಯೋಗದಲ್ಲಿ ಆಧುನಿಕ ಉತ್ಪಾದನೆ ಕ್ಷೇತ್ರ , ವಿದ್ಯಾರ್ಥಿಗಳಿಗೆ ಕೈಗಾರಿಕೆ 4.0, ಡಿಜಿಟಲ್ ತಂತ್ರಜ್ಞಾನದ ಬಗ್ಗೆ ತರಬೇತಿ ,ರಾಜ್ಯದ ಸ್ಮಾರ್ಟ್ ಸಿಟಿ ಯೋಜನೆಗಳಲ್ಲಿ ಹೂಡಿಕೆ ಮಾಡಲು ದಸ್ಸಾಲ್ಸ್ ಸಿಸ್ಟಮ್ಸ್ ಉತ್ಸುಕತೆ ತೋರಿದರು.

ನೆಸ್ಟ್ಲೆ ಸಂಸ್ಥೆ:
ನಂಜನಗೂಡಿನಲ್ಲಿ ನೆಸ್ಟ್ಲೆ ಇನ್ಸೆಂಟ್ ಕಾಫಿ ಕಾರ್ಖಾನೆಯನ್ನು ನವೀಕರಣ ಹಾಗೂ ವಿಸ್ತರಣಾ ಕಾರ್ಯಕ್ಕೆ ನೆಸ್ಟ್ಲೆ ಸಂಸ್ಥೆ ಮುಂದಾಗಿದ್ದಾರೆ.

ಮೆಗಾ ಡಾಟಾ ಸೆಂಟರ್:
ಭಾರ್ತಿ ಎಂಟರ್ ಪ್ರೈಸಸ್ ನ ಅಧ್ಯಕ್ಷ ಹಾಗೂ ಸಿಇಓ ಸುನಿಲ್ ಭಾರ್ತಿ ಮಿತ್ತಲ್ ಅವರು ರಾಜ್ಯದಲ್ಲಿ ಇನ್ನೊಂದು ಮೆಗಾ ಡಾಟಾ ಸೆಂಟರ್ ಸ್ಥಾಪಿಸುವ ಇಂಗಿತ ವ್ಯಕ್ತಪಡಿಸಿದರು. ರಾಜ್ಯ ಸರ್ಕಾರವು ಎಲ್ಲ ಅಗತ್ಯ ಬೆಂಬಲ ನೀಡುವುದಾಗಿ ಮುಖ್ಯಮಂತ್ರಿಗಳು ತಿಳಿಸಿದರು.

ಬೆಂಗಳೂರಿನಲ್ಲಿ ಐಕಿಯ ಸ್ಟೋರ್
ಇಂಗ್ಕಾ ಗ್ರೂಪ್ (ಐಕಿಯ) ಸಿ.ಇ.ಓ. ಜೆಸ್ಪರ್ ಬ್ರಾಡಿನ್ ಅವರು ರಾಜ್ಯದಲ್ಲಿ ಐಕಿಯ ಸ್ಟೋರ್ ತೆರೆಯುತ್ತಿರುವ ಹಿನ್ನೆಲೆಯಲ್ಲಿ ವಿವಿಧ ವಿಷಯಗಳ ಕುರಿತು ಚರ್ಚಿಸಿ, ಜೂನ್‍ನಲ್ಲಿ ನಾಗಸಂದ್ರದಲ್ಲಿ ಐಕಿಯ ಸ್ಟೋರ್ ತೆರೆಯಲಿದ್ದು, ಜೆಸ್ಪರ್ ಬ್ರಾಡಿನ್ ಅವರು ಉದ್ಘಾಟನೆಗೆ ಮುಖ್ಯಮಂತ್ರಿಗಳನ್ನು ಆಹ್ವಾನಿಸಿದರು. ಇದೇ ಸಂದರ್ಭದಲ್ಲಿ ಐಕಿಯದ ಭಾರತೀಯ ಕೇಂದ್ರ ಕಚೇರಿಯೂ ಬೆಂಗಳೂರಿನಲ್ಲಿದ್ದು ಪೀಠೋಪಕರಣಗಳ ತಯಾರಿಕೆಯ ಸಂದರ್ಭದಲ್ಲಿ ಬಿದಿರು ಮತ್ತಿತರ ಸ್ಥಳೀಯ ವಸ್ತುಗಳ ವ್ಯಾಪಕ ಬಳಕೆಯ ಕುರಿತೂ ಸಹ ಚರ್ಚಿಸಲಾಯಿತು.

ಆಕ್ಸಿಸ್ ಬ್ಯಾಂಕ್ :
ಆಕ್ಸಿಸ್ ಬ್ಯಾಂಕ್ ಸಂಸ್ಥೆಯು ಸಾಂಸ್ಥಿಕ ಸಾಮಾಜಿಕ ಹೊಣೆಗಾರಿಕೆ (ಸಿಎಸ್ಆರ್) ಕಾರ್ಯಕ್ರಮಗಳಡಿ ರಾಜ್ಯದ ಕೆಲವು ಇಂಜಿನಿಯರಿಂಗ್ ಹಾಗೂ ವಿಶ್ವವಿದ್ಯಾಲಯಗಳ ಉನ್ನತೀಕರಣ ಯೋಜನೆಯನ್ನು ಹಮ್ಮಿಕೊಳ್ಳಲು ಸಲಹೆ ನೀಡಲಾಯಿತು.

ನೋಕಿಯಾ ಸಂಸ್ಥೆ:
ಕರ್ನಾಟಕದಲ್ಲಿ ಟೆಲಿಕಾಂ ಉತ್ಪನ್ನಗಳ ಉತ್ಪಾದನೆಯ ಅವಕಾಶಗಳನ್ನು ಬಳಸಿಕೊಳ್ಳಲು ನೋಕಿಯಾ ಸಂಸ್ಥೆಯ ಮುಖ್ಯಸ್ಥರಿಗೆ ಸಲಹೆ ನೀಡಲಾಯಿತು.

ದಾವೋಸ್ ನಲ್ಲಿ ನಡೆದ ವಿಶ್ವ ಆರ್ಥಿಕ ಶೃಂಗ ಸಭೆಯಲ್ಲಿ ಕರ್ನಾಟಕ ಪೆವಿಲಿಯನ್ ನಲ್ಲಿ ಹೀರೋ ಮೋಟೋಕಾರ್ಪ್ , ಎ ಬಿ ಇನ್ ಬೇವ್ ಸಂಸ್ಥೆ, ಅರ್ಸೆಲರ್ ಮಿತ್ತಲ್, ಅದಾನಿ ಗ್ರೂಪ್ ,ಜಾನ್ಸನ್ ಕಂಟ್ರೋಲ್ಸ್ ನ ಸಿ ಇ ಓ ಜಾರ್ಜ್ ಒಲಿವರ್, ಹನಿವೆಲ್ ಕಂಪೆನಿ, ಐಬಿಎಂ, ಬೈಜೂಸ್ , ಮೀಶೋ ಸಂಸ್ಥೆಯ ಮುಖ್ಯಸ್ಥರೊಂದಿಗೆ ಕರ್ನಾಟಕದಲ್ಲಿ ಹೂಡಿಕೆಗಳ ಅವಕಾಶಗಳ ಬಗ್ಗೆ ಮಾತುಕತೆ ನಡೆಸಿದರು.

ಈ ಸಂದರ್ಭದಲ್ಲಿ ಹವಾಮಾನ ಬದಲಾವಣೆ ಮತ್ತು ಪರಿಸರ ಮಾಲಿನ್ಯ ಕುರಿತ ಗೋಷ್ಠಿಯಲ್ಲಿ ಭಾಗವಹಿಸಿ ಈಶ ಫೌಂಡೇಶನ್ ಮುಖ್ಯಸ್ಥ ಸದ್ಗುರು ಜಗ್ಗಿ ವಾಸುದೇವ್ ಅವರೊಂದಿಗೆ ಚರ್ಚಿಸಿ, ರಾಜ್ಯದಲ್ಲಿ ಪರಿಸರ ಹಾಗೂ ಮಣ್ಣಿನ ಸಂರಕ್ಷಣೆ ಕುರಿತು ಸರ್ಕಾರ ತೆಗೆದುಕೊಂಡಿರುವ ಕ್ರಮಗಳ ಬಗ್ಗೆ ವಿವರಿಸಿದರು.

ಕೈಗಾರಿಕಾ ಸಚಿವ ಮುರುಗೇಶ್ ನಿರಾಣಿ, ಐಟಿ, ಬಿಟಿ, ಉನ್ನತ ಶಿಕ್ಷಣ ಮತ್ತು ಕೌಶಲ್ಯ ಅಭಿವೃದ್ಧಿ ಸಚಿವ ಡಾ.ಸಿ.ಎನ್. ಅಶ್ವತ್ಥನಾರಾಯಣ, ಕೈಗಾರಿಕಾ ಇಲಾಖೆ ಅಪರ ಮುಖ್ಯ ಕಾರ್ಯದರ್ಶಿ ಡಾ. ಇ.ವಿ. ರಮಣ ರೆಡ್ಡಿ, ಮುಖ್ಯಮಂತ್ರಿಯವರ ಪ್ರಧಾನ ಕಾರ್ಯದರ್ಶಿ ಎನ್. ಮಂಜುನಾಥ್ ಪ್ರಸಾದ್, ಕೈಗಾರಿಕಾ ಇಲಾಖೆ ಆಯುಕ್ತರಾದ ಗುಂಜನ್ ಕೃಷ್ಣ ಮೊದಲಾದ ಹಿರಿಯ ಅಧಿಕಾರಿಗಳು ರಾಜ್ಯದ ತಂಡದಲ್ಲಿದ್ದರು.

ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.

News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.

Recent News

Back To Top