ಯಂ ಶೈವಾ ಸಮುಪಾಸತೇ ಶಿವಮಿತಿ ಬ್ರಹ್ಮೈತಿ ವೇದಾಂತಿನೋ
ಬೌದ್ಧಾ ಬುದ್ಧ ಇತಿ ಪ್ರಮಾಣ ಪಟವಃ ಕರ್ತೇತಿ ನೈಯಾಯಿಕಾಃI
ಅರ್ಹಂತಮ್ ಶ್ಚೇತಿ ಜೈನಶಾಸನಮತೈಃ ಕರ್ಮೇತಿ ಮೀಮಾಂಸಕಃ
ಸೋಯಂ ವೋ ವಿದಧಾತು ವಾಂಛಿತಫಲಂ ಶ್ರೀ ಕೇಶವಃ ಸರ್ವದಾII
-ಈತ ಶೈವರಿಗೆ ಶಿವ, ವೇದಾಂತಿಗಳಿಗೆ ಬ್ರಹ್ಮ, ಬೌದ್ಧರಿಗೆ ಬುದ್ಧ, ಜೈನರಿಗೆ ಅರಿಹಂತ, ನೈಯಾಯಿಕರ ಕರ್ತಾ, ಮೀಮಾಂಸಕರ ಪಾಲಿಗೆ ಅವನೇ ಕರ್ಮ, ಹೀಗಿರುವ ಕೇಶವ ಯಾರು ಏನು ಬೇಡುತ್ತಾರೋ ಅದನ್ನು ದಯಪಾಲಿಸುತ್ತಾನೆ ಎಂಬುದು ಇದರ ಅರ್ಥ. ಇದು ಬೇಲೂರು ಚೆನ್ನಕೇಶವ ದೇಗುಲದಲ್ಲಿರುವ ಶಾಸನದ ಉಕ್ತಿ. ಧಾರ್ಮಿಕ ಸಮನ್ವಯತೆ ಮತ್ತದರ ಉದಾತ್ತತೆ ಇದರ ಅಂತರಾಳ.
ಯಂ ವಿಶ್ವಂ ವೇದವೇದ್ಯಂ ಜನನಜಲನಿಧೇರ್ ಭಂಗಿಣಪಾರದಶ್ವಾ
ಪೌರ್ವಾಪರ್ಯಾವಿರುದ್ಧಾಂ ವಚನಂ ಅನುಪಮಂ ನಿಶ್ಕಲಂಕಂ ಯದೀಯಂ
ತಂ ವಂದೇ ಸಾಧುವಂದ್ಯಂ ಸಕಲ ಗುಣನಿಧಿಂ ಧ್ವಸ್ತದೋಷದ್ವಿಷಂತಂ
ಬುದ್ಧಂ ವಾ ವರ್ಧಮಾನಂ ಶತದಲನಿಲಯಂ ಕೇಶವಂ ವಾ ಶಿವಂ ವಾ
-(ಬುದ್ಧ, ವರ್ಧಮಾನ, ಕೇಶವ, ಶಿವನನ್ನು ಸಮಾನವಾಗಿ ವಂದಿಸುವ ಜೈನ ಪದ್ಯವಿದು) (ಜಿ.ಬಿ ಹರೀಶರ ಬರಹದಿಂದ)
ಮುನೀಂದ್ರಃ ಶ್ರೀಧನಃ ಶಾಸ್ತಾ ಮುನಿಃ ಶಾಕ್ಯಮುನಿಸ್ತು ಯಹಃ
ಸ ಶಾಕ್ಯಸಿಂಹಃ ಸರ್ವರ್ಥ ಸಿದ್ಧಃ ಶುದ್ದೋಧನಶ್ಚ ಸಹಃ
ಗೋತಾಮಾಶ್ಚರ್ಕ ಬಂಧುಶ್ಚ ಮಾಯಾದೇವಿ ಸುತಶ್ಚಹI
-(ಜೈನ ಅಮರಸಿಂಹನ ಅಮರಕೋಶದಲ್ಲಿರುವ ಬುದ್ಧನ ಪರಿಚಯವಿದು -ಬುದ್ಧನ ವಿವಿಧ ಹೆಸರುಗಳ ಪರಿಚಯವಿದು, ಈತನನ್ನು ಮುನೀಂದ್ರ, ಶಾಸ್ತಾ, ಶಾಕ್ಯಮುನಿ, ಶಾಕ್ಯಸಿಂಹ, ಸಿದ್ಧ, ಮಾಯಾಸುತ ಎಂದೂ ಕರೆಯಲಾಗುತ್ತದೆ)
ಲಂಕಾವತಾರ ಸೂತ್ರದಲ್ಲಿ ಬುದ್ಧನನ್ನು ತಥಾಗತ, ಕಪಿಲ, ಭೂತಾಂಶ, ಭಾಸ್ಕರ, ಅರಿಷ್ಟನೇಮಿ, ರಾಮ, ವ್ಯಾಸ, ಶುಕ್ರ, ಇಂದ್ರ, ಬಲಿ, ವರುಣ ಮುಂತಾದ ಹೆಸರುಗಳಿಂದ ಕರೆಯಲಾಗಿದೆ. ಈತನನ್ನು ನಿರ್ವಾಣ, ಧರ್ಮಧಾತು, ಶೂನ್ಯತಾ, ಸತ್ಯ ಎಂದು ಸಂಬೋಧಿಸಲಾಗಿದೆ. ಸಾರಂಗನಾಥ, ಸ್ವಯಂಭೂ, ವಿನಯಕ್ಕೆ ಭೂಷಣನಾದವ ವಿನಾಯಕ, ಶಾಕ್ಯ ಗಣಪತಿ, ಮಹಾಬೋಧಿ ಎಂದೂ ಸಂಭೋಧಿಸಲಾಗುತ್ತದೆ. ಪ್ರಜಾಪತಿ ಗೋತಮಿಯಿಂದ ಪಾಲಿಸಲ್ಪಟ್ಟವ ಗೋತಮ, ಮಾರನನ್ನು ಮಣಿಸಿದವ ಕುಮಾರ, ಬೋಧಿಸತ್ವ ನಂದೀಯನಾಗಿ ಜಿಂಕೆಗಳಿಗೆ ಒಡೆಯನಾದವ ನಂದೀಶ ಹೀಗೆ ಜಾತಕ ಕಥೆಗಳಲ್ಲಿ ಹಲವು ಜನ್ಮಗಳನ್ನು ಬೋಧಿಸತ್ವನಾಗಿ ಕಳೆದಿದ್ದ ಈತನು ಮಹಾಕಪಿ, ರಾಮಪಂಡಿತ ಹೀಗೆ ವಿವಿಧ ಹೆಸರುಗಳನ್ನು ಹೊಂದಿದ್ದಾನೆ. ಎಲ್ಲ ಜಾತಕ ಕಥೆಗಳೂ ಕರುಣೆ ಮತ್ತು ಸಹೃದಯತೆಯ ಪಾಠಗಳನ್ನೇ ಬೋಧಿಸುತ್ತವೆ.
ಭಾರತದ ಧಾರ್ಮಿಕ ಇತಿಹಾಸದಲ್ಲಿ ಬೌದ್ಧರ ಕೊಡುಗೆ ಅಪಾರವಾದುದು.
ವೇದೋಕ್ತ ಧಾರ್ಮಿಕತೆಯಂತೆ, ಶ್ರಮಣೋಕ್ತ ಪರಂಪರೆಯ ಧಾರೆ ಅಂತರ್ಯಾನವಾಗಿ ಹರಿದು ದೇಶದ ಆಸ್ಮಿತೆಯನ್ನು ಗಟ್ಟಿಗೊಳಿಸಿದೆ. ಭಕ್ತಿಮಾರ್ಗದ ಆರಂಭಕ್ಕೂ ಮುನ್ನ ಜ್ಞಾನೋಕ್ತ ಧ್ಯಾನಮಾರ್ಗ ಶತಮಾನಗಳ ಕಾಲ ದೇಶದ ಆಧ್ಯಾತ್ಮಿಕ ಪ್ರಪಂಚಕ್ಕೆ ಕಾಣಿಕೆ ನೀಡಿತ್ತು. 2300 ವರ್ಷಗಳ ಹಿಂದಿನಿಂದ ಹರಿದು ಬಂದ ಈ ಧ್ಯಾನ, ಜ್ಞಾನದ ಪರಂಪರೆ ಇಂದು ಏಷ್ಯಾ ಖಂಡದ ಉದ್ದಗಲಕ್ಕೂ ಹಬ್ಬಿದೆ. ದೂರದ ಮಂಗೋಲಿಯಾದಲ್ಲಿ ತಾರಾಳನ್ನು ಆರಾಧಿಸಲಾಗುತ್ತದೆ. ಜಪಾನಿನಲ್ಲಿ ಝೆನ್ ಭೌದ್ಧ ತಂತುವಿನ ಹರಿವಿದೆ. ಕಾಂಬೋಡಿಯಾ, ಇಂಡೋನೇಷ್ಯಾಗಳಲ್ಲೂ ವಿವಿಧ ಬೌದ್ಧ ಆರಾಧನಾ ಕ್ರಮಗಳು ರೂಢಿಯಲ್ಲಿವೆ. ಮಾಲ್ಡೀವ್ಸ್ ದ್ವೀಪ ರಾಷ್ಟ್ರದಲ್ಲೂ ಬೌದ್ಧ ಉಳಿಕೆಗಳ ಆಗರವಿದೆ.
ಭೂತಾನ್ ಎಂಬ ಪುಟ್ಟ ರಾಷ್ಟ್ರದಲ್ಲಿಯೂ ರಿಪೋಂಚೆ ಎಂಬ ಹೆಸರಿಸಲ್ಪಡುವ ಗುರು ಪದ್ಮಸಂಭವನನ್ನು ಬಹಳ ಗೌರವ ಆದರದಿಂದ ಕಾಣಲಾಗುತ್ತದೆ. ಇವೆಲ್ಲವೂ ಅಲ್ಲಿನ ಜನಮಾನಸಕ್ಕೆ ಸತ್ಪ್ರೇರಣೆಯಾಗಿದೆ. ಶ್ರೀಲಂಕಾ, ಮಯನ್ಮಾರಿನಲ್ಲಿ ಥೇರವಾಡ ಹೀನಯಾನ ಪರಂಪರೆ ಇಂದಿಗೂ ಚಾಲ್ತಿಯಲ್ಲಿದ್ದರೆ, ಟಿಬೆಟ್ಟಿನಲ್ಲಿ ಮಹಾಯಾನ ಪರಂಪರೆಯಲ್ಲಿ ಬೆಳೆದ ತಾಂತ್ರಿಕ ವಿಧಿವಿಧಾನಗಳೂ ಚಾಲ್ತಿಯಲ್ಲಿವೆ. ಮುದ್ರೆ, ಮಂಡಲಗಳನ್ನು ರಚಿಸಿ ಪೂಜಿಸುವ ಪದ್ಧತಿ ರೂಢಿಯಲ್ಲಿರುವುದು ಅಲ್ಲಿನ ವಿಶೇಷತೆ. ಧ್ಯಾನ ಮಾರ್ಗಕ್ಕೆ ಆ ಮೂಲಕ ಸತ್ ಚಿಂತನೆಗೆ ದಾರಿ ತೋರಿಸಿರುವ ಧಮ್ಮ ಪರಂಪರೆಯಲ್ಲಿ ಬೆಳೆದ ವಿಪಾಸನ ಯೋಗ ಮಾರ್ಗವನ್ನು ವಿಶ್ವದೆಲ್ಲೆಡೆ ಬಹಳ ಗೌರವದಿಂದ ಕಾಣಲಾಗುತ್ತದೆ. ಭಾರತದ ಅಖಂಡತೆಯನ್ನು ತಿಳಿಯಲು ರಾಜಕೀಯ ಇತಿಹಾಸದಂತೆ ಇಲ್ಲಿನ ವಿವಿಧ ಆಯಾಮಗಳಲ್ಲಿ ಹಬ್ಬಿರುವ ಧಾರ್ಮಿಕ ಇತಿಹಾಸವನ್ನು ಕೂಡಾ ಸ್ಪರ್ಶಿಸಬೇಕಿದೆ.
ದೇಶದ ಸಾಂಸ್ಕೃತಿಕ ಇತಿಹಾಸ ಗಮನಿಸಿದರೆ ಅಶೋಕನು ಧಮ್ಮ ಮಾರ್ಗವನ್ನು ಅಪ್ಪಿ ಜಂಬೂದ್ವೀಪದ ಎಲ್ಲೆಡೆಯೂ ಬೃಹತ್ ಪ್ರಮಾಣದಲ್ಲಿ ಧರ್ಮ ಪ್ರಸರಣಕ್ಕೆ ನಾಂದಿ ಹಾಡಿದ ಮಾತ್ರವಲ್ಲ ವಿವಿಧ ದಿಕ್ಕುಗಳಿಗೆ ಧರ್ಮಮಾತ್ರರನ್ನು ಕಳುಹಿಸಿದ್ದ ಎಂಬ ಅಂಶ ಉಲ್ಲೇಖನೀಯ. ಆ ಕಾಲದಲ್ಲಿ ದೂರದ ಗ್ರೀಸ್, ಪರ್ಶಿಯಾಗಳಿಗೂ ಬೌದ್ಧ ಗುರುಗಳನ್ನು ಕಳುಹಿಸಲಾಗಿತ್ತು. ಶತವಧಾನಿ ಆರ್. ಗಣೇಶರು ಹೇಳುವಂತೆ ಬುದ್ಧನನ್ನು ಭಾರತೀಯ ಪ್ರಾಪಂಚಿಕೆ ದೇವನೆಂದು ಒಪ್ಪಿಯಾಗಿದೆ. ಆತ ನೈರಾತ್ಮ್ಯವಾದಿಯಲ್ಲ, ಆತ ಆತ್ಮವಾದಿ. ಉಪನಿಷತ್ತಿನ ಅಂತದೃಷ್ಟಿ ಆತನಲ್ಲಿತ್ತು. ಉಪನಿಷತ್ತಿನ ಆತ್ಮವಾದ ಶ್ರಮಣಧಾರೆಯ ತತ್ವಗಳಾದ ಜೈನ ಮತ್ತು ಬೌದ್ಧರಲ್ಲೂ ಇತ್ತು. ಅವಧಾರಣೆಯ ವ್ಯತ್ಯಾಸ ಮತ್ತು ಬೌದ್ಧ ಸಂಸ್ಕೃತ ವಾಙ್ಮಯ ಗ್ರಂಥಗಳ ಅನುಪಲಬ್ಧಿಯಿಂದ, ರೂಢಿಯಿಂದ ಬೌದ್ಧರು ನಿರೀಶ್ವರವಾದಿಗಳೆಂದು ಕರೆಸಿಕೊಂಡರು. ಆತ್ಮವಾದಿಯಾಗಿರದಿದ್ದರೆ ಆತ್ಮಶೋಧೆ ಆಗುತ್ತಿರಲಿಲ್ಲ. ಹೀಗೆ ಆತ್ಮಕ್ಕೂ ಹಲವು ಅರ್ಥಗಳಿವೆ ಎಂದೂ ಹೇಳುತ್ತಾರೆ. ಹೀಗೆ ಬೌದ್ಧ ತಾತ್ವಿಕತೆ ಒಂದೆಡೆಯಾದರೆ, ಬೌದ್ಧ ಭೌತಿಕತೆ ಮತ್ತೊಂದೆಡೆ ಸಾವಿರಾರು ವಿಹಾರಗಳನ್ನು ನಿರ್ಮಿಸಿ ಬೌದ್ಧ ಧಾರ್ಮಿಕ ಹರಿವಿಗೆ ಕಾರಣನಾದ ಅಶೋಕ ಚಕ್ರವರ್ತಿ ಕರ್ನಾಟಕದ ಬನವಾಸಿ ಮತ್ತು ಮಹಿಷ ಮಂಡಲಗಳಿಗೂ ಬಿಕ್ಕುಗಳನ್ನು ಕಳುಹಿಸಿ ಧರ್ಮದ ಪ್ರಸಾರಕ್ಕೆ ಕಾರಣೀಭೂತನಾಗಿದ್ದ. ಸಾಂಚಿಯಿಂದ ತನ್ನ ಪುತ್ರ ಮಹೇಂದ್ರ ಮತ್ತು ಸಂಗಮಿತ್ರಳನ್ನು ಲಂಕೆಗೂ ಕಳುಹಿಸಿದ್ದ. ಪಾಟಲೀಪುತ್ರದ ಕುಕ್ಕುಟುರಾಮ ವಿಹಾರವನ್ನು ನವೀಕರಿಸಿದ ಕೀರ್ತಿಯೂ ಈತನದ್ದು. ತದನಂತರ ಬಂದ ಗುಪ್ತರು, ರಾಷ್ಟ್ರಕೂಟರು, ಬಂಗಾಳದ ಪಾಲರು, ಶಾತವಾಹನರು, ಕಾರ್ಕೋಟರು, ಪಲ್ಲವರು ಸೇರಿದಂತೆ ಹಲವು ರಾಜವಂಶಜರು ಬೌದ್ಧರು ಸೇರಿದಂತೆ ವಿವಿಧ ಧಾರ್ಮಿಕ ಪಂಥಗಳ ಉಪಾಸಕರಿಗೆ ಸಮಾನವಾಗಿ ಕಂಡು ರಾಜಾಶ್ರಯ ನೀಡಿದ್ದರು ಎಂಬ ಅಂಶ ಉಲ್ಲೇಖನೀಯ. ಹೀನಯಾನ ಪರಂಪರೆ ಪಾಲಿ ಭಾಷೆಯನ್ನೇ ಹೆಚ್ಚಾಗಿ ಆಶ್ರಯಿಸಿದ್ದರೆ, ನಂತರ ಬೌದ್ಧ ಮಹಾಯಾನ ಪಂಥ ಸಂಸ್ಕೃತ ಭಾಷೆಗೆ ಹೆಚ್ಚಿನ ಪ್ರಾಶಸ್ತ್ಯ ನೀಡಿತ್ತು. ನಾಗಾರ್ಜುನ, ವಸುಬಂಧು, ಧರ್ಮಕೀರ್ತಿ, ಅಸಂಗ, ಸರಹಪಾದ ಎಲ್ಲರೂ ಮಹಾಯಾನಿ ವಿದ್ವಾಂಸರು ಮಾತ್ರವಲ್ಲದೆ ತತ್ವಶಾಸ್ತ್ರಜ್ಞರು. ಅಂದಿದ್ದ ನಳಂದಾ, ತಕ್ಷಶಿಲಾ, ಒದಂತಪುರಿ ವಿಶ್ವವಿದ್ಯಾನಿಲಯಗಳಲ್ಲಿ ಬೋಧಕ, ಪ್ರಾಚಾರ್ಯರಾಗಿ ಕರ್ತವ್ಯ ನಿರ್ವಹಿಸಿದವರು. ಧರ್ಮ ಚಕ್ರ ಪ್ರವರ್ತನ ಸೂತ್ರದಲ್ಲಿ ಬಿಕ್ಕುವಾದಾತ ಸತ್ಯದ ಶೋಧನೆಯನ್ನು ಮಾಡಬೇಕು, ಧ್ಯಾನ, ತಾದಾತ್ಮ್ಯದ ಪಾಠವನ್ನು ಮನಸ್ಸಲ್ಲಿರಿಸಬೇಕು ಎಂದು ಬುದ್ಧ ಹೇಳಿದ್ದರೆ, ತದನಂತರದ ಮಹಾಯಾನ ಕಾಲಘಟ್ಟ ಬುದ್ಧನನ್ನೆ ದೈವಾಂಶುವಾಗಿಸಿತ್ತು. ಆತನಿಗೆ ಈಶ್ವರನ ಸ್ಥಾನ ನೀಡಿತು. ಪದ್ಮಪಾಣಿ, ವಜ್ರಪಾಣಿ, ಅವಲೋಕಿತೇಶ್ವರ, ಮಂಜುಶ್ರೀ ಮೊದಲಾದ ದೈವಿಕ ಕಲ್ಪನೆ ಜನ್ಮ ತಳೆದದ್ದು ಇದೇ ಪರಂಪರೆಯಲ್ಲಿ. ಮಂಜುಶ್ರೀ ಮೂಲಕಲ್ಪದಂತಹ ಕೃತಿ ಮುದ್ರೆಯ ಮೂಲಕ ಪೂಜಾವಿಧಿವಿಧಾನಗಳ ಬಗ್ಗೆ ತಿಳಿಸುತ್ತದೆ. ಆಂಧ್ರದ ಅಮರಾವತಿ, ನಾಗಾರ್ಜುನಕೊಂಡವನ್ನು ಕೇಂದ್ರವಾಗಿಸಿ ಬೆಳೆದ ನಾಗಾರ್ಜುನನ ಮಾಧ್ಯಮಿಕಾ ಶಾಖೆಗೂ ದೇಶ ವಿದೇಶಗಳಿಂದ ಶಿಕ್ಷಣಾರ್ಥಿಗಳಾಗಿ ವಿದ್ಯಾರ್ಥಿಗಳು ಬರುತ್ತಿದ್ದರಂತೆ. ಈತ ಮಂಜುಶ್ರೀ ಮೂಲಕಲ್ಪದ ಭಾಷ್ಯ ಬರೆಯುತ್ತಾನೆ.
ಇಂದು ಭಾರತದಲ್ಲಿರುವ ಅಸಂಖ್ಯಾತ ಹಿಂದೂಗಳಿಗೆ ಬುದ್ಧನೆನೂ ವರ್ಜ್ಯನಲ್ಲ, ಮಾರುಕಟ್ಟೆಯಲ್ಲಿ ಸುಂದರ ಬುದ್ಧನ ಮೂರ್ತಿ ಕಂಡರೆ ಎಲ್ಲರೂ ಕೊಂಡುಕೊಳ್ಳುವವರೆ, ಆತನ ಚಿತ್ರ, ಚಿತ್ರಣಗಳನ್ನು ಎಲ್ಲರೂ ಅಸ್ವಾದಿಸುವವರೆ, ಆತನ ಕಥೆಗಳನ್ನು ಹೇಳುವವರಿದ್ದರೆ ಕೇಳುವವರೂ ಕೂಡಾ ಅಷ್ಟೇ ಸಂಖ್ಯೆಯಲ್ಲಿದ್ದಾರೆ. ಆದರೆ ಅಪಾರ ಸಂಖ್ಯೆಯಲ್ಲಿದ್ದ ಬೌದ್ಧ ವಿಹಾರಗಳು, ಚೈತ್ಯಗಳು, ಗೊಂಪಾಗಳು, ದಗೋಬಾಗಳು ಇತರ ಆರಾಧನಾ ಕೇಂದ್ರಗಳು ಎಲ್ಲಿ ಹೋದವೆಂಬ ಪ್ರಶ್ನೆ ಬರುವುದು ಕೂಡಾ ಅಷ್ಟೇ ಸ್ವಾಭಾವಿಕ. 12 ಶತಮಾನದಲ್ಲಿ ಭಕ್ತಿಯಾರ್ ಖಿಲ್ಜಿಯ ಆಕ್ರಮಣದ ಬಗ್ಗೆ ಎಲ್ಲರಿಗೂ ತಿಳಿದಿದೆ. ಜ್ಞಾನದ ಕೇಂದ್ರವೆನಿಸಿದ್ದ ನಲಂದಾ ವಿಶ್ವವಿದ್ಯಾಲಯವನ್ನು ಧ್ವಂಸಗೈದು, ಅಲ್ಲಿನ ಗ್ರಂಥಾಲಯಗಳನ್ನು ಕೊಳ್ಳಿ ಇಟ್ಟು ಭಸ್ಮಮಾಡಿದ್ದು ಇದೇ ಖಿಲ್ಜಿ. ಇದೇ ಸಂದರ್ಭ ಅಸಂಖ್ಯ ಬಿಕ್ಕುಗಳ ಮಾರಣ ಹೋಮ ಮಾಡಿದ್ದಷ್ಟೇ ಅಲ್ಲದೆ, ಬಂಗಾಳದಿಂದ ಉತ್ತರಕ್ಕೆ ಮುಖಮಾಡಿ ಬೌದ್ಧರ ಮಗದೊಂದು ಗ್ರಂಥ ಭಂಢಾರವಾಗಿದ್ದ ಟಿಬೆಟ್ಟಿಗೂ ಹೋಗುವ ದುಸ್ಸಾಹಸ ಮಾಡಿದ್ದನಂತೆ. ಅದೃಷ್ಟವಶಾತ್ ಅದು ಸಾಧ್ಯವಾಗದೆ ಕೊನೆಯುಸಿರೆಳೆದ. ಅದಾಗಲೇ ಭಾರತದಲ್ಲಿ ಬೌದ್ಧರ ಭೌತಿಕ ಅಧಪತನ ಆರಂಭವಾಗಿತ್ತು. ಗಾಂಧಾರ,ಬಾಮಿಯಾನ, ತಕ್ಷಶಿಲಾ, ಸರಸ್ವತಿ -ಸ್ವಾತ್ ಕಣಿವೆ ಪ್ರದೇಶದಲ್ಲಿ ಆದಂತೆ ಇಸ್ಲಾಂನ ಆಕ್ರಮಣ ಬೌದ್ಧರ ಮೂಲಕ್ಕೆ ಬಂದಿತ್ತು. ಅಲ್ಲಿಂದ ಇಲ್ಲಿಯ ತನಕ ಅಳಿದೇ ಹೋದಂತಿದ್ದ, ಯಾರ ಕಣ್ಣಿಗೂ ಬೀಳದೆ ಶತಮಾನಗಳ ಕಾಲ ಕಾಡುಗಳಿಂದ ಆವೃತವಾಗಿ, ಭುವಿಯ ಅಡಿ ಹುದುಗಿದ್ದ ಅವೆಷ್ಟೋ ಕೇಂದ್ರಗಳು ಇಂದು ಭಾರತೀಯ ಪ್ರಾಚ್ಯ ಪುರಾವಸ್ತು ಸಂಸ್ಥೆಯ ಮೂಲಕ, ಉತ್ಖನನದ ಮೂಲಕ ಹೊರಬರುತ್ತಿವೆ. ಕೇಸರಿಯಾ, ಸಾಂಚಿ, ಬೋಧಗಯಾ, ಕಪಿಲವಸ್ತು ಹೀಗೆ ಆಧುನಿಕ ಭಾರತದಲ್ಲಿ ಬೌದ್ಧರ ಧಾರ್ಮಿಕ ಕೇಂದ್ರಗಳನ್ನು ಹುಡುಕುವ, ಕಳೆದೇ ಹೋದಂತಿದ್ದ ಆದರೆ ಆಂತರ್ಯದಲ್ಲಿ ಗಟ್ಟಿಯಾಗಿದ್ದ ಧರ್ಮದ ಭೌತಿಕತೆಯನ್ನು ಅರಿಯುವಲ್ಲಿ ಶ್ರಮವಹಿಸಿದ್ದು ಬ್ರಿಟಿಷ್ ಭಾರತೀಯ ಇತಿಹಾಸಕಾರರು, ಅಜಂತಾ, ತಕ್ಷಶಿಲಾ, ನಲಂದಾ, ಸಾಂಚಿ ಮೊದಲಾದೆಡೆಗಳಲ್ಲಿ ಸಾವಿರಾರು ವರ್ಷಗಳ ಕಾಲ ಆಕ್ರಮಣಗಳಿಂದ ಧರಾಶಾಯಿಯಾಗಿದ್ದ ವಿಹಾರ, ಸ್ಥೂಪಗಳನ್ನು ಮರಳಿ ಸಹಜಸ್ಥಿತಿಗೆ ತಲುಪಿಸಿದ ಕೀರ್ತಿ 19 ನೇ ಶತಮಾನದ ಇತಿಹಾಸಕಾರರು, ಶೋಧಕರು, ಉತ್ಖನನಕಾರರಿಗೆ ಸಲ್ಲುತ್ತದೆ. ಅಲೆಕ್ಸಾಂಡರ್ ಕನ್ನಿಂಗಹ್ಯಾಂನಂತಹ ಮಹನೀಯರು ತಳಸ್ಪರ್ಶಿ ಅಧ್ಯಯನ ನಡೆಸಿ, ಹಲವೆಡೆ ಉತ್ಖನನ ಮಾಹಿತಿ ಸಂಗ್ರಹಿಸಿದ್ದರು. ಇಷ್ಟು ಮಾತ್ರವಲ್ಲದೆ ಅಮೂಲ್ಯವಾದ ವಸ್ತುಗಳನ್ನು ಬ್ರಿಟಿಷ್ ಮ್ಯೂಸಿಯಂಗಳಿಗೂ ಸಾಗಿಸಿದ್ದರು. ಭಾರತದ ನೆಲದಿಂದ ಕದ್ದೊಯ್ದ ಪ್ರತಿಯೊಂದು ವಸ್ತುಗಳು ಅವರಿಗೆ ವಸಾಹತುಶಾಹಿಯ ಗೌರವದ ಪ್ರತೀಕವಂತೆ!
ಪ್ರಧಾನಮಂತ್ರಿ ನರೇಂದ್ರ ಮೋದಿ, ವಿದೇಶಾಂಗ ಇಲಾಖೆಯ ಮುತುವರ್ಜಿಯಿಂದ ಹಲವು ಬೌದ್ಧ ಸಹಿತ ಶೈವ ಮೂರ್ತಿಗಳು ಭಾರತಕ್ಕೆ ಮರಳಿವೆ. ಕಾಶಿಯಲ್ಲಿ ಪುನರ್ ಸ್ಥಾಪಿಸಲ್ಪಟ್ಟ ಅನ್ನಪೂರ್ಣೇಶ್ವರಿ ದೇವಿ ವಿಗ್ರಹವೂ ಇವುಗಳಲ್ಲೊಂದು. ವರ್ತಮಾನದಲ್ಲಿ ನುರಿತ ಭಾರತೀಯ ಇತಿಹಾಸಕಾರರಿಂದ ಉತ್ಖನನ ಮಾಹಿತಿ ಸಂಗ್ರಹದಂತಹ ಕಾರ್ಯಗಳು ನಿರಂತರವಾಗಿ ನಡೆಯುತ್ತಿವೆ. ಕಳೆದ ವರ್ಷ ಬಿಹಾರದ ಲಕಿಸರಾಯಿ ಜಿಲ್ಲೆಯ ಲಾಲ್ ಪಹರಿ ಬೆಟ್ಟ ಪ್ರದೇಶದಲ್ಲಿ ವಿಜಯಶ್ರೀ ಭದ್ರಾ ಎಂಬ ರಾಜಕುಮಾರಿ(ಪಾಲ ವಂಶಜೆಯೆಂಬ ಊಹೆ) 11 ನೇ ಶತಮಾನದಲ್ಲಿ ಕಟ್ಟಿಸಿದ್ದ ಶ್ರೀಧರ್ಮ ವಿಹಾರ ಪತ್ತೆಯಾಗಿದೆ. ಈ ಮಧ್ಯೆ ತಥಾಕಥಿತ ಬುದ್ಧಿಜೀವಿಗಳು, ವಿಚಾರವಾದಿಗಳು ಬೌದ್ಧರ ಅಧಃಪತನಕ್ಕೆ ಬ್ರಾಹ್ಮಣರೇ ಕಾರಣ ಎಂದು ಆರೋಪಿಸುತ್ತಾರೆ. ಈ ಆರೋಪಕ್ಕೆ ಯಾವುದೇ ಹುರುಳಿಲ್ಲ ಯಾಕೆಂದರೆ ಬುದ್ಧನ ಮೊದಲ ಶಿಷ್ಯೋತ್ತಮರಲ್ಲಿ ಹೆಚ್ಚಿನವರೆಲ್ಲ ಬ್ರಾಹ್ಮಣರೇ ಇದ್ದರು. ಮಹಾಯಾನ ಎಂಬ ಬೃಹತ್ ಬೌದ್ಧ ವಾಹಕದಲ್ಲಿ ಬ್ರಾಹ್ಮಣ ಬೌದ್ಧ ವಿದ್ವಾಂಸರೇ ಇದ್ದದ್ದು ವಿಶೇಷ. ಇವರೇ ಸಂಸ್ಕೃತ ಮಹಾಯಾನ ಗ್ರಂಥಗಳನ್ನು ರಚಿಸಿದ್ದರು. ಮಹಾಯಾನ ಧಾರ್ಮಿಕ, ಸಾಹಿತಿಕವಾಗಿ ಬೆಳೆದದ್ದು ಮಾತ್ರವಲ್ಲದೆ ರಾಜಾಶ್ರಯದ ಮೂಲಕ ಶ್ರೀಮಂತವಾಗಿ ಬೆಳೆದು ಬರಲು ಕಾರಣ ಮೇರು ವಿದ್ವಾಂಸರು. ಹಾಗೆಂದು ಬುದ್ಧನಿಗೆ ವರ್ಣಗಳಲ್ಲಿ ಆಸಕ್ತಿಯಿತ್ತೆಂದಲ್ಲ! ಶ್ರೀಮಂತ ವರ್ತಕರು ಅಜಂತಾ, ಎಲಿಫೆಂಟಾದಂತಹ ಗುಹಾಲಯಗಳನ್ನು ಕಟ್ಟಿಸಿದ ಉದಾಹರಣೆಗಳಿವೆ. ಆರಂಭದಲ್ಲಿ ಬುದ್ಧನ ನೇರ ಶಿಷ್ಯರಾದ ಮೊಗ್ಗಲಾಯನ, ಸಾರಿಪುತ್ರ, ಮಹಾಯಾನದಲ್ಲಿ ವಸುಬಂಧು, ಧರ್ಮಕೀರ್ತಿ, ನಾಗಾರ್ಜುನ ಹೀಗೆ ಹಲವರು ಧಮ್ಮದ ಏಳ್ಗೆಗೆ ಕಾರಣೀಭೂತರಾಗಿದ್ದರು. ಜಾರ್ಖಂಡಿನ ಹಾಜರಿಭಾಗ್ ಎಂಬಲ್ಲಿಯೂ ಬೃಹತ್ ವಿಹಾರವಿದ್ದ ಕುರುಹು ಪತ್ತೆಯಾಗಿದೆ, ಭೂಮಿಸ್ಪರ್ಷ ಮುದ್ರೆಯಲ್ಲಿರುವ ಬುದ್ಧನ ಮೂರ್ತಿ, ಶೈವ ಪಂಥದ ಮಹೇಶ್ವರಿ ದೇವಿ ವಿಗ್ರಹ, ಕೀರೀಟ ಮತ್ತು ಚಕ್ರ, ವರದ ಮುದ್ರೆಯಲ್ಲಿರುವ ಬುದ್ಧ, ವಜ್ರಪಾಣಿಯ ಮೂರ್ತಿಯೂ ದೊರಕಿದೆ. ಈ ಪ್ರದೇಶವು ಪ್ರಾಚೀನ ಉತ್ತರಪಥದ ಭಾಗವಾಗಿದ್ದ ಬಗ್ಗೆ ಮಾಹಿತಿ ಲಭ್ಯವಾಗಿದೆ ಮಾತ್ರವಲ್ಲ ವಾರಾಣಾಸಿಯಿಂದ ಬಂಗಾಳದ ತಾಮ್ರಲಿಪ್ತಿಯ ಮಧ್ಯಭಾಗದಲ್ಲಿದ್ದು ಪ್ರಾಚೀನ ವ್ಯಾಪಾರಿ ಮಾರ್ಗವಾಗಿತ್ತು ಎಂದೂ ನಂಬಲಾಗಿದೆ. ಗುಜರಾತಿನ ವಾಡ್ನಗರ, ಕಾಶ್ಮೀರದಲ್ಲಿ ಲಲಿತಾದಿತ್ಯ ಕಟ್ಟಿಸಿದ್ದ ಅವಂತಿಪುರ, ದಕ್ಷಿಣದ ಅಮರಾವತಿ, ಕಾಂಚಿ, ಬನವಾಸಿ, ಕರ್ನಾಟಕದ ಸನ್ನತ್ತಿಯಲ್ಲೂ ಪ್ರಾಚೀನ ಬೌದ್ಧ ಶಿಲಾಲೇಖಗಳು ಪತ್ತೆಯಾಗಿವೆ. ಆಂಧ್ರದ ವಿಶಾಖಪಟ್ಟಣಂ, ವಾಂಚಿ, ಧರಣಿಕೋಟ, ತಮಿಳುನಾಡಿನ ಕಾಂಚಿ, ಕೇರಳದ ಕರುಮಾಡಿಕುಟ್ಟನ್, ಇಂದಿಲ್ಲವಾಗಿರುವ ಆಲಪ್ಪುಳ ಸಮೀಪದ ಶ್ರೀಮೂಲವಾಸಂ ಬೌದ್ಧ ವಿಹಾರದ ಬಗ್ಗೆ ಮತ್ತಷ್ಟೂ ಬೆಳಕು ಚೆಲ್ಲಬೇಕಾದ ಅವಶ್ಯಕತೆ ಇದೆ. ಬನವಾಸಿಯಿಂದ 15000 ಮಂದಿ ಬೌದ್ಧ ಬಿಕ್ಕುಗಳು ಹಡಗಿನ ಮೂಲಕ ಶತಮಾನಗಳ ಹಿಂದೆ ಶ್ರೀಲಂಕಾದ ರಾಜಕುಮಾರನ ಪಟ್ಟಾಭಿಷೇಕಕ್ಕೆ ಹೋದ ಉಲ್ಲೇಖ, ಉದಾಹರಣೆಗಳು ಮಹಾಯಾನ ಪರಂಪರೆಯ ಪ್ರಭಾವ, ಅಂದಿನ ಕಾಲಘಟ್ಟದ ಜೌನತ್ಯಕ್ಕೆ ಸಾಕ್ಷಿ ಹೇಳುತ್ತವೆ. ಭ್ರಕೃತಿ, ಮಮಾಕಿ, ಲೋಚನ, ಪಂಡರವಾಸಿನಿ, ವನಮಾಲಿ, ಶ್ವೇತಾ ಎಂಬ ಹೆಸರುಗಳಿಂದ ಉಲ್ಲೇಖಿತಳಾದ ಪದ್ಮಪಾಣಿಯ ಅರ್ಧಾಂಗಿ ತಾರಾ ಬೌದ್ಧ ಪ್ರಾಪಂಚಿಕೆಯಲ್ಲಿ ಶೋಭಿತಳಾಗಿದ್ದಾಳೆ, ಆಕೆ ಢಾಕಿಣಿಯೂ ಆಗಿದ್ದಾಳೆ. ಲಂಕಾವತಾರ ಸೂತ್ರ, ಲಲಿತಾವಿಸ್ತರ, ಮಂಜುಶ್ರೀ ಮೂಲಕಲ್ಪ, ಸದ್ಧರ್ಮ ಪುಂಡರೀಕ ಮೊದಲಾದ ಕೃತಿಗಳು ಮಹಾಯಾನ ಪರಂಪರೆಯ ಸಾಹಿತಿಕ ಶ್ರೀಮಂತಿಕೆಯನ್ನು ಸೂಚಿಸುತ್ತವೆ. ತಮಿಳು ಸಂಗಮ ಕೃತಿಗಳಾದ ಮಣಿಮೇಕಲೈ, ಸಿಲಾಪದ್ದಿಕರಂ ಧಮ್ಮದ ಆಳದ ಪರಿಚಯವನ್ನು ಮಾಡಿಸುತ್ತವೆ.
ಆಧುನಿಕ ಭಾರತದಲ್ಲಿ ಬೌದ್ಧ ಧರ್ಮಕ್ಕೆ ಚೌಕಟ್ಟು ರೂಪಿಸಿದವರಲ್ಲಿ ಸಾಹಿತಿಗಳು, ಬೌದ್ಧಿಕ ವರ್ಗ, ಸಂತ ಮಹನೀಯರು ಮತ್ತು ನೇತಾರರ ಪಾಲು ದೊಡ್ಡದು. ಶ್ಯಾಮ ಪ್ರಸಾದ್ ಮುಖರ್ಜಿಯವರು ಹಲವು ವರ್ಷಗಳ ಕಾಲ ಮಹಾಬೋಧಿ ಸೊಸೈಟಿಯ ಅಧ್ಯಕ್ಷರಾಗಿದ್ದರು. ಬ್ರಿಟಿಷ್ ವಸ್ತು ಸಂಗ್ರಹಾಲಯದಲ್ಲಿದ್ದ ಬುದ್ಧನ ಶಿಷ್ಯೋತ್ತಮರಾದ ಮೊಗ್ಗಲಾಯನ ಮತ್ತು ಸಾರಿಪುತ್ರನ ಉಳಿಕೆಯನ್ನು ತರುವಲ್ಲಿ ಶ್ರಮವಹಿಸಿದವರು ಮುಖರ್ಜಿ. ಧರ್ಮಾನಂದ ಕೊಸಾಂಬಿ ಧರ್ಮದ ಸೈದ್ಧಾಂತಿಕತೆ, ಆಚರಣೆ, ಪ್ರಸಕ್ತತೆಯನ್ನು ಸಮಕಾಲೀನ ಸಾಮಾಜಿಕ ಮತ್ತು ರಾಜಕೀಯ ಸಿದ್ಧಾಂತಗಳೊಂದಿಗೆ ಪರಿಚಯಿಸಿದವರು. ಡಾ. ಬಿ.ಆರ್. ಅಂಬೇಡ್ಕರ್ ನವಯಾನ ತತ್ವಪಥದ ಮೂಲಕ ಬುದ್ಧನ ದಾರಿಯ ಶೋಧೆಯನ್ನು ಆರಂಭಿಸಿದವರು. ಶ್ರೀಲಂಕಾದ ಅನಗಾರಿಕ ಧರ್ಮಪಾಲ ಶಿಥಿಲಗೊಂಡ ಭಾರತೀಯ ವಿಹಾರಗಳ ಪುನಶ್ಚೇತನಕ್ಕೆ ಕೈ ಜೋಡಿಸಿದರು. ಸ್ವಾಮಿ ವಿವೇಕಾನಂದರು ರಾಷ್ಟ್ರದ ಅಭ್ಯುದಯದಲ್ಲಿ ಜ್ಞಾನ, ಬುದ್ದಿವಂತಿಕೆಯ ಜೊತೆಜೊತೆಯಲ್ಲಿ ಬೌದ್ಧರ ಹೃದಯ ವೈಶಾಲ್ಯದ ಅಗತ್ಯತೆಯನ್ನು ತಿಳಿಹೇಳಿದರು. ಓಂ ಮಣಿಪದ್ಮೇ ಹುಂ ಮಂತ್ರಗುನುಗುನಿಸುವ ಟಿಬೆಟಿಯನ್ನರು ಇಂದು ಭಾರತದ ಭಾಗವಾಗಿದ್ದಾರೆ. ಕರುಣೆ, ಸಹೃದಯತೆಯ ಪಾಠ ಹೇಳಿಕೊಡುವ ದಲೈಲಾಮಾ ಬೌದ್ಧಿಕ ನಗುಮೊಗದ ಪ್ರವಚನಗಳಿಗೆ ಹೆಸರುವಾಸಿ. ಬುದ್ಧ ಪರಿನಿರ್ವಾಣ ಹೊಂದಿದ ಕುಶೀನರದಲ್ಲಿ ಇಂದು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣವಿದೆ. ಅಂತಾರಾಷ್ಟ್ರೀಯ ಬೌದ್ಧ ಯಾತ್ರಿಗಳನ್ನು ಭಾರತ ಕೈ ಬೀಸಿ ಕರೆಯುತ್ತಿದೆ. ಬೋಧಗಯಾ, ಕಪಿಲವಸ್ತು, ಕುಶೀನರ, ಶ್ರಾವಸ್ತಿ ಬುದ್ಧ ಸರ್ಕ್ಯೂಟಿನ ಭಾಗವಾಗಿದೆ. ಪ್ರಧಾನಮಂತ್ರಿ ನರೇಂದ್ರ ಮೋದಿ ಲುಂಬಿನಿಗೂ ತೆರಳಿದ್ದಾರೆ. ಹೊಸ ದಿಕ್ಕಿನಲ್ಲಿ ದ್ವಿರಾಷ್ಟ್ರಗಳು ಪ್ರಾಚೀನ ಕೋಲಿಯಾ-ಶಾಕ್ಯ ಗಣತಂತ್ರಗಳಂತೆ ಪರಸ್ಪರ ಅರಿತು ಬೆರೆತು ಅಭ್ಯುದಯದ ಪಥದಲ್ಲಿ ಸಾಗಲಿ ಎಂದು ಹಾರೈಸೋಣ. ಸಾರನಾಥದ ಅಶೋಕಚಕ್ರ, ಅಶೋಕಸ್ತಂಭ, ಚತುರ್ಮುಖ ಲಾಂಛನಗಳು ದೇಶದ ಹೆಮ್ಮೆ ಗೌರವದ ಸಂಕೇತಗಳು. ಬುದ್ಧ ಸಂಘದ ತಂತು ಬಲಿಷ್ಠ ರಾಷ್ಟ್ರದ ಏಳಿಗೆಗೆ ನಾಂದಿ ಹಾಡಲಿ.
ಸಂಘ ಶರಣಂ, ರಾಷ್ಟ್ರಂ ಶರಣಂ
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.