ಬೆಂಗಳೂರು: ಪದ್ಮಶ್ರೀ ಪ್ರಶಸ್ತಿ ಪುರಸ್ಕೃತರು, ವೈದಿಕ, ವಚನ ಹಾಗೂ ಸೂಫಿ ಪರಂಪರೆ ಆಶಯಗಳ ಹದ ಪಾಕವನ್ನು ಭಜನೆ, ಪ್ರವಚನ, ಸಂವಾದಗಳ ಮೂಲಕ ಉಣಬಡಿಸಿ ಹಿಂದೂ–ಮುಸ್ಲಿಮರ ನಡುವೆ ಭಾವೈಕ್ಯತೆಯ ಕಂಪು ಪಸರಿಸಿದ್ದ ಕಬೀರ, ಬಾಗಲಕೋಟೆ ಜಿಲ್ಲೆಯ ಮಹಾಲಿಂಗಪುರದ ಇಬ್ರಾಹಿಂ ಸುತಾರ ಅವರ ನಿಧನಕ್ಕೆ ಬಿಜೆಪಿ ರಾಜ್ಯಾಧ್ಯಕ್ಷರು ಮತ್ತು ಸಂಸದರೂ ಆದ ನಳಿನ್ಕುಮಾರ್ ಕಟೀಲ್ ಅವರು ತೀವ್ರ ಸಂತಾಪ ಸೂಚಿಸಿದ್ದಾರೆ.
ಇಬ್ರಾಹಿಂ ಸುತಾರ ಅವರಿಗೆ ಮನೆಯಲ್ಲಿನ ಬಡತನದ ಪರಿಸ್ಥಿತಿ ಓದಲು ಉತ್ತೇಜಕವಾಗಿರಲಿಲ್ಲ. ಮೂರನೇ ತರಗತಿಗೆ ಶಿಕ್ಷಣ ಅಪೂರ್ಣಗೊಂಡಿತು. ಊರಿನ ಬಹುಸಂಖ್ಯಾತರ ಉದ್ಯೋಗ ನೇಕಾರಿಕೆಯನ್ನೇ ಸುತಾರ ಕಲಿತರು. ಬದುಕಿಗೆ ಅದೇ ದಾರಿಯಾಯಿತು.
‘1970ರಲ್ಲಿ ಸಾಧುನ ಗುಡಿಯಲ್ಲಿಯೇ ಸಮಾನ ಮನಸ್ಕ ಗೆಳೆಯರು ಸೇರಿ ‘ಭಾವೈಕ್ಯದ ಜನಪದ ಸಂಗೀತ ಮೇಳ’ ಆರಂಭಿಸಿದ್ದರು. ಅದರ ಮೂಲಕ ಭಜನೆ, ತತ್ವಪದಗಳ ಹಾಡುತ್ತಾ ಜನಸಾಮಾನ್ಯರಿಗೆ ಧರ್ಮದ ಸಾರ ಮನವರಿಕೆ ಮಾಡತೊಡಗಿದರು. 1980ರಲ್ಲಿ ತರೂರಿನ ಶಂಭುಲಿಂಗ ಶಾಸ್ತ್ರಿಗಳು ಮೊದಲ ಬಾರಿಗೆ ಮಹಾರಾಷ್ಟ್ರದ ಜತ್ ತಾಲ್ಲೂಕಿನ ಸಿಂಧೂರಿನಲ್ಲಿ (ವೀರ ಸಿಂಧೂರ ಲಕ್ಷ್ಮಣನ ಹುಟ್ಟೂರು) ಶ್ರಾವಣ ಮಾಸದಲ್ಲಿ ತಿಂಗಳ ಕಾಲ ಪ್ರವಚನ ಮಾಡುವ ಕಾರ್ಯಕ್ಕೆ ಸುತಾರ ಅವರನ್ನು ಕಳುಹಿಸಿದ್ದರು. ಮಹಾರಾಷ್ಟ್ರದಲ್ಲಿನ ಕನ್ನಡ ನೆಲದಲ್ಲಿ ಭಾವೈಕ್ಯತೆ ಹರಡುವ ಚೈತ್ರ ಯಾತ್ರೆ ಸುತಾರ ಆರಂಭಿಸಿದ್ದರು. ಅಲ್ಲಿಂದ ಪ್ರತಿ ವರ್ಷ ನಾಡಿನ ಉದ್ದಗಲಕ್ಕೂ ಪ್ರವಚನ, ಸಂವಾದ ಕಾರ್ಯಕ್ರಮ ನಡೆಸಿಕೊಂಡು ಬಂದಿದ್ದರು.
ಧರ್ಮದ ಕಠಿಣ ಅಂಶಗಳನ್ನು ಸರಳವಾಗಿ ಜನಸಾಮಾನ್ಯರಿಗೆ ತಿಳಿಯುವಂತೆ ಮಾಡಲು ಪ್ರಶ್ನೋತ್ತರದ ಜೊತೆಗೆ ತತ್ವಪದ ಹಾಡುವುದನ್ನು ರೂಢಿಸಿಕೊಂಡಿದ್ದರು.
ಅವರ ಕುಟುಂಬ, ಅಭಿಮಾನಿಗಳು ಮತ್ತು ಬಂಧುಗಳಿಗೆ ಅವರ ಅಗಲುವಿಕೆಯ ದುಃಖವನ್ನು ಸಹಿಸುವ ಶಕ್ತಿಯನ್ನು ಭಗವಂತನು ನೀಡಲಿ ಎಂದು ನಳಿನ್ ಕುಮಾರ್ ಪ್ರಾರ್ಥಿಸಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.