ಯದುಕುಲ ದೀಪಕನಾದ ಶ್ರೀಕೃಷ್ಣನ ಜನ್ಮಸ್ಥಾನವಾದ ಮಥುರಾ ಹಿಂದೂ ಧರ್ಮದ ಪವಿತ್ರ ನಗರ ಎಂದು ಕರೆಯಲ್ಪಡುತ್ತದೆ. ಮಥುರಾದ ಅವಳಿ ನಗರವೆಂದೇ ಪ್ರಖ್ಯಾತವಾದ ವೃಂದಾವನವು ಶ್ರೀಕೃಷ್ಣ ಲೀಲೆಗಳಿಗೆ ಸಾಕ್ಷಿಯಾದ ನಗರವೂ ಹೌದು. ರಾಧೆಯ ನಿಸ್ವಾರ್ಥ ಪ್ರೀತಿ, ಮೇವಾರದ ರಾಣಿಯಾಗಿಯೂ ಕೃಷ್ಣನ ಮೇಲಿನ ಪ್ರೀತಿಗೆ ಅರಮನೆಯ ಸುಖವನ್ನೇ ತೊರೆದು ಬಂದ ಮೀರಾಬಾಯಿಯ ಅಪರಿಮಿತ ಭಕ್ತಿಗೆ ಸಾಕ್ಷಿಯಾದ ಈ ಪುಣ್ಯಭೂಮಿಯು 1018 ರಿಂದ ಹಲವಾರು ವರ್ಷಗಳ ಕಾಲ ಮುಸ್ಲಿಂ ದೊರೆಗಳ ದ್ವೇಷ ಮತ್ತು ಕ್ರೂರತೆಗೂ ಸಾಕ್ಷಿಯಾಗಬೇಕಾಗಿ ಬಂದದ್ದು ವಿಪರ್ಯಾಸ.
ಇಂತಹಾ ಐತಿಹಾಸಿಕ ವೃಂದಾವನದ ಪ್ರಮುಖ ನಾಲ್ಕು ದೇವಾಲಯಗಳಲ್ಲಿ ಗೋವಿಂದ ದೇವ ದೇವಾಲಯವೂ ಒಂದು. ಉತ್ತರ ಭಾರತದ ಅಭೂತಪೂರ್ವ ಹಿಂದೂ ವಾಸ್ತುಶಿಲ್ಪದ ಪ್ರತೀಕವಾಗಿರುವ ಈ ದೇವಾಲಯವು ಅತ್ಯಂತ ಶ್ರೇಷ್ಠ ಧಾರ್ಮಿಕ ಕಟ್ಟಡವೆಂದು ಪರಿಗಣಿಸಲ್ಪಡುತ್ತದೆ. ಏಳು ಅಂತಸ್ತಿನ ಈ ದೇವಾಲಯವು ಕೆಂಪು ಕಲ್ಲುಗಳನ್ನು ಬಳಸಿ ನಿರ್ಮಿಸಲ್ಪಟ್ಟಿದೆ.
ಹಲವಾರು ವರ್ಷಗಳ ಮೊದಲು ‘ಶ್ರೀ ರೂಪಾ ಗೋಸ್ವಾಮಿಗಳು’ ಯೋಗ ಪೀಠವನ್ನು ಹುಡುಕುತ್ತಾ ತಿರುಗುತ್ತಿರುವ ಸಂದರ್ಭ, ಆಯಾಸಗೊಂಡು ಯಮುನಾ ನದಿಯ ತಟದಲ್ಲಿ ವೃಕ್ಷವೊಂದರ ಕೆಳಗೆ ಶ್ರೀಕೃಷ್ಣನನ್ನು ಜಪಿಸುತ್ತಾ ಕುಳಿತಿರುವಾಗ ಗೋಪಾಲರ ಓರ್ವ ಬಾಲಕನು ಬಂದು,ಒಂದು ಹಸುವು ಪ್ರತಿನಿತ್ಯ ಬೆಟ್ಟದತ್ತ ಹೋಗುವುದಾಗಿಯೂ,ಅಲ್ಲಿಯ ಒಂದು ರಂಧ್ರದಲ್ಲಿ ಹಾಲನ್ನು ಸುರಿಸುವುದನ್ನು ತಾನು ನೋಡಿರುವುದಾಗಿಯೂ ಹೇಳುತ್ತಾನೆ. ಅವನ ಮಾತಿನಿಂದ ಆಶ್ಚರ್ಯಗೊಂಡ ಸ್ವಾಮಿಗಳು ಬೆಟ್ಟವನೇರಿ ಆ ರಂಧ್ರವನ್ನು ಅಗೆದು ನೋಡುವಾಗ ಅಲ್ಲಿ ಮಡಚಿಟ್ಟ ಒಂದು ಕೃಷ್ಣನ ವಿಗ್ರಹವನ್ನು ಕಾಣುತ್ತಾರೆ. ಸ್ವಾಮಿಗಳು ವಿಗ್ರಹ ಪ್ರತಿಷ್ಠಾಪನೆಗೋಸ್ಕರ ದೇವಾಲಯವನ್ನು ಸ್ಥಾಪಿಸುವಷ್ಟು ಆರ್ಥಿಕವಾಗಿ ಸಿರಿವಂತರಾಗಿಲ್ಲದ ಕಾರಣದಿಂದ, ಜೈಪುರದ ಅರಸನಾದ ರಾಜ ‘ಮಾನ್ ಸಿಂಗ್’ ರಲ್ಲಿ ದೇವಾಲಯವನ್ನು ನಿರ್ಮಿಸುವಂತೆ ವಿನಂತಿಸಿದರು. ಹೀಗೆ ಸ್ವಾಮಿಗಳಿಂದ ಪ್ರಭಾವಿತರಾಗಿ 1590 ನೇ ಇಸವಿಯಲ್ಲಿ ರಾಜಾ ಮಾನ್ ಸಿಂಗರು ಭವ್ಯವಾದ ಶ್ರೀ ಗೋವಿಂದ ದೇವ ದೇವಾಲಯವನ್ನು ನಿರ್ಮಿಸಿದರು. ದೇವಾಲಯದ ಪೀಠವನ್ನು ಬೆಳ್ಳಿ ಮತ್ತು ಬಂಗಾರಗಳಿಂದ ಅಲಂಕರಿಸಿದ ಅಮೃತಶಿಲೆಯಿಂದ ನಿರ್ಮಿಸಲಾಗಿತ್ತು.ಮುಖ್ಯ ದೇವಾಲಯದ ಪಶ್ಚಿಮ ತುದಿಯಲ್ಲಿರುವ ವಿರೂಪಗೊಂಡ ಶಾಸನವೊಂದು 1590 ರಲ್ಲಿ ಈ ದೇವಾಲಯವನ್ನು ನಿರ್ಮಿಸಲಾಗಿತ್ತು ಎಂಬ ಅಂಶವನ್ನು ಬಹಿರಂಗ ಪಡಿಸುತ್ತದೆ.
ಆದರೆ ನಂತರ ಬಂದ ಮೊಘಲ ಸಾಮ್ರಾಜ್ಯದ ಕ್ರೂರಿ ಮತ್ತು ಮತಾಂಧ ದೊರೆಯಾದ ಔರಂಗಜೇಬನು ಬೃಂದಾವನದ ಮೇಲೆ ಆಕ್ರಮಣ ನಡೆಸುವಾಗ ಈ ದೇವಾಲಯವನ್ನೂ ನಾಶಗೊಳಿಸುವಂತೆ ಆದೇಶಿಸಿದ್ದನು. ಅವನ ಆದೇಶದಂತೆ ಮತಾಂಧ ಸೈನಿಕರು ದೇವಾಲಯದ ನಾಲ್ಕು ಮಹಡಿಗಳನ್ನು ನಾಶಗೊಳಿಸಿದ್ದರು. ಆದರೆ ಕ್ರೂರಿ ಔರಂಗಜೇಬನ ಆಕ್ರಮಣವನ್ನು ನಿರೀಕ್ಷಿಸಿದ್ದ ಅಲ್ಲಿಯ ಭಕ್ತರು ದೇವರ ವಿಗ್ರಹವನ್ನು ರಹಸ್ಯವಾಗಿ ರಾಜಧಾನಿಗೆ ವರ್ಗಾಯಿಸಿದರು. ಅಂದಿನಿಂದ ಗೋವಿಂದ ದೇವರ ಮೂಲ ಪ್ರತೀಮೆಯನ್ನು ಜೈಪುರದಲ್ಲೇ ಪೂಜಿಸಲಾಗುತ್ತದೆ.
1873 ರಿಂದ 1877 ರ ವರೆಗೆ ಬ್ರಿಟಿಷ್ ಆಳ್ವಿಕೆಯಲ್ಲಿ ದೇವಾಲಯವನ್ನು ಪುನಃ ದುರಸ್ಥಿಗೊಳಿಸಲಾಯಿತು ಮತ್ತು ಪುರಾತನ ದೇವಾಲಯದ ಹಿಂದೆ ಹೊಸ ದೇವಾಲಯವನ್ನು ನಿರ್ಮಿಸಲಾಯಿತು ಮತ್ತು ಹೊಸ ದೇವಾಲಯದಲ್ಲಿ ಗೋವಿಂದ ದೇವರ ವಿಗ್ರಹದ ಪ್ರತಿಕೃತಿಯನ್ನು ಶ್ರೀ ರಾಧಾರಾಣಿಯ ವಿಗ್ರಹದೊಂದಿಗೆ ಪೂಜಿಸಲಾಗುತ್ತಿದೆ. ಈ ರಾಧಾರಾಣಿಯ ವಿಗ್ರಹವನ್ನು ಶ್ರೀಕೃಷ್ಣನ ವಿಗ್ರಹದೊಂದಿಗೆ ಪ್ರತಿಷ್ಠಾಪಿಸಲ್ಪಟ್ಟ ಮೊದಲ ರಾಧಾವಿಗ್ರಹ ಎಂದು ಗುರುತಿಸಲಾಗುತ್ತದೆ. ಈ ವಿಗ್ರಹವನ್ನು ಪುರಿಯ ರಾಜನಾದ ಪುರುಷೋತ್ತಮನು ಜಯಸಿಂಹನ ಮೇಲಿನ ಗೌರವದ್ಯೋತಕವಾಗಿ ಕಳುಹಿಸಿದ್ದನು.ದೇವಾಲಯದ ದಕ್ಷಿಣ ಭಾಗದಲ್ಲಿರುವ ಗುಹೆಯೊಂದರಲ್ಲಿ ‘ಶ್ರೀ ರೂಪ ಗೋಸ್ವಾಮಿಗಳು’ ತಪಸ್ಸು ಮಾಡುತ್ತಿದ್ದಾರೆಂದು ಹೇಳಲಾಗುತ್ತಿದೆ. ಅದರ ಸಮೀಪದಲ್ಲಿ ಸಿಂಹಾರೂಢಳಾದ ಅಷ್ಟಭುಜೆ ಯಾದ ‘ಯೋಗಮಾತಾ’ ದೇವಿಯ ಪ್ರತಿಮೆಯನ್ನು ಪ್ರತಿಷ್ಠಾಪಿಸಲಾಗಿದೆ. ಇತಿಹಾಸಗಳ ಪ್ರಕಾರ ಅಲ್ಲಿ ಆರಾಧಿಸಲ್ಪಡುತ್ತಿದ್ದ ‘ವೃಂದಾದೇವಿಯ’ ಪ್ರತಿಮೆಯನ್ನು ಮೊಘಲರ ಆಕ್ರಮಣದ ಸಂದರ್ಭದಲ್ಲಿ ರಕ್ಷಣೆಗೋಸ್ಕರ ರಾಜಧಾನಿಗೆ ವರ್ಗಾಯಿಸಲಾಯಿತು.
ಕಮಲದ ಕೆತ್ತನೆಯಿಂದ ರಚಿಸಲ್ಪಟ್ಟ ಛಾವಣಿಯನ್ನು ಹೊಂದಿರುವ ಈ ದೇವಾಲಯದ ನಿರ್ಮಾಣಕ್ಕೆ 7 ವರ್ಷಗಳನ್ನು ಮತ್ತು ಹತ್ತು ದಶಲಕ್ಷ ರೂಪಾಯಿಗಳನ್ನು ವ್ಯಯಿಸಲಾಗಿತ್ತು. ಅಭೂತಪೂರ್ವವಾದ ಈ ದೇವಾಲಯವು ಪ್ರಾಚೀನ ಭಾರತದ ಆರ್ಥಿಕ ಮತ್ತು ಸಾಂಸ್ಕೃತಿಕ ಶ್ರೀಮಂತಿಕೆಯ ಪ್ರತೀಕವಾಗಿ ತಲೆಯೆತ್ತಿ ನಿಂತಿರುವಂತೆಯೇ, ಮೊಘಲರ ಮತಾಂಧತೆ ಮತ್ತು ಕ್ರೌರ್ಯವನ್ನೂ ಸಾರುತ್ತದೆ. ಕೆಲವು ಇತಿಹಾಸಜ್ಞರ ಪ್ರಕಾರ ಮೊಘಲರು ಸಾಂಸ್ಕೃತಿಕವಾಗಿ ಶ್ರೀಮಂತರೂ , ವಿಶಾಲ ಹೃದಯದವರೂ ಆಗಿದ್ದರು.ಆದರೆ ಎದ್ದು ಕಣ್ಣಿಗೆ ಕಾಣಿಸುವಂತಹ ಮತಾಂಧತೆಯ ಕುರಿತಾಗಿ ಅವರದ್ದು ಜಾಣ ಕುರುಡುತನ. ನಮ್ಮ ಭಾರತದ ಸಂಸ್ಕೃತಿ, ಕಲೆ, ವಾಸ್ತುಶಿಲ್ಪಗಳು ನಮ್ಮ ಹೆಮ್ಮೆ.
✍️ದೀಪಾಶ್ರಿ ಭಟ್
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.