ಬೆಂಗಳೂರು: ಮುಖ್ಯಮಂತ್ರಿ ಬಸವರಾಜ ಎಸ್. ಬೊಮ್ಮಾಯಿ ಅವರು ಇಂದು ರಾಜ್ಯದಲ್ಲಿ ಕೋವಿಡ್ ನಿರ್ವಹಣೆ ಹಾಗೂ ಕೈಗೊಳ್ಳಲಾಗಿರುವ ಪೂರ್ವ ಸಿದ್ಧತೆಗಳ ಕುರಿತಂತೆ ತಜ್ಞರು, ಆರೋಗ್ಯ ಇಲಾಖೆ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳೊಂದಿಗೆ ಇಂದು ವರ್ಚುವಲ್ ಸಭೆ ನಡೆಸಿದರು.
ಕಠಿಣ ನಿಯಮ ಜಾರಿ ನಡುವೆಯೂ ರಾಜ್ಯದಲ್ಲಿ ಕೊರೊನಾ ಸೋಂಕು ಹೆಚ್ಚಾಗುತ್ತಿದ್ದು, ವೈರಸ್ ನಿಯಂತ್ರಣಕ್ಕೆ ಲಾಕ್ಡೌನ್ ಹೊರತುಪಡಿಸಿ ಇತರ ಯಾವೆಲ್ಲ ಕ್ರಮ ಕೈಗೊಳ್ಳಬೇಕು ಎನ್ನುವ ಕುರಿತು ಸಭೆಯಲ್ಲಿ ಚರ್ಚೆ ನಡೆದಿದೆ.
ಆರ್.ಟಿ.ನಗರದಲ್ಲಿರುವ ಖಾಸಗಿ ನಿವಾಸದಿಂದ ಸಿಎಂ ವರ್ಚುವಲ್ ಸಭೆ ನಡೆಸಿದ್ದು, ಮುಖ್ಯಮಂತ್ರಿಯವರ ಕ್ವಾರಂಟೈನ್ ಅವಧಿ ಮುಗಿದ ಹಿನ್ನೆಲೆಯಲ್ಲಿ ಅವರ ನಿವಾಸದಿಂದಲೇ ಆರೋಗ್ಯ ಸಚಿವ ಸುಧಾಕರ್ ಸಭೆಯಲ್ಲಿ ಭಾಗವಹಿಸಿದ್ದಾರೆ.
ಕೋವಿಡ್ 19 ಕುರಿತ ಪರಿಶೀಲನಾ ಸಭೆಯ ಮುಖ್ಯಾಂಶಗಳು:
1. ಬೆಂಗಳೂರಿನಲ್ಲಿ ಒಪಿಡಿಗಳಿಗೆ ಹೆಚ್ಚಿನ ಗಮನ ಕೊಡಲು, ಹೆಚ್ಚು ಸಿಬ್ಬಂದಿ ನಿಯೋಜಿಸಲು ಸೂಚಿಸಲಾಯಿತು.
2. ಜನ ಟ್ರಯಾಜಿಂಗ್ಗೆ ದಾಖಲಾಗುವುದನ್ನು ನಿಯಂತ್ರಿಸಲು ಸಲಹೆ ನೀಡಿದರು.
3. ಹೋಮ್ ಐಸೊಲೇಷನ್ ಕಾಲ್ಸ್ ಹೆಚ್ಚಿಸಲು ಸೂಚಿಸಲಾಯಿತು. ಕೊ-ಮಾರ್ಬಿಡಿಟಿ ಇರುವವರಿಗೆ ದಿನಕ್ಕೆ ಒಂದು ಬಾರಿ ಕರೆ ಮಾಡಿ ಅವರ ಆರೋಗ್ಯ ಸ್ಥಿತಿ ಅವಲೋಕಿಸಬೇಕು ಹಾಗೂ ವಿಶ್ವಾಸ ಮೂಡಿಸಬೇಕು.
4. ಅಂತೆಯೆ ಮನೆಯವರಿಗೆ ಹರಡದಂತೆ ಕೈಗೊಳ್ಳಬೇಕಾದ ಮುನ್ನೆಚ್ಚರಿಕೆ ಕೈಗೊಳ್ಳಲು ಸೂಚಿಸಿದರು.
5. ಔಷಧಿ ಕಿಟ್ಗಳನ್ನು ಮನೆಗಳಿಗೆ ಪರಿಣಾಮಕಾರಿಯಾಗಿ ತಲುಪಿಸಲು ಸೂಚಿಸಿದರು.
6. ಸ್ವಯಂ ಸೇವಾ ಸಂಸ್ಥೆಗಳನ್ನು ತೊಡಗಿಸಿಕೊಂಡು ಕಾರ್ಯನಿರ್ವಹಿಸುವ ಮೂಲಕ ಜನರಲ್ಲಿರುವ ನಕಾರಾತ್ಮಕ ಮನೋಭಾವವನ್ನು ತೊಡೆಯಲು ಸಲಹೆ ನೀಡಿದರು.
7. ಸ್ಥಳೀಯ ವೈದ್ಯರು ಕನ್ಸಲ್ಟೇಷನ್ ಮಾಡುವಂತಾಗಬೆಕು.
8. ಸೋಂಕಿತ ಮಕ್ಕಳ ಕುರಿತು, ವಿಶೇಷವಾಗಿ ಗ್ರಾಮೀಣ ಪ್ರದೇಶದಲ್ಲಿ ಹೆಚ್ಚಿನ ಆದ್ಯತೆ ನೀಡಬೇಕು. ಪೋಷಕರಿಗೆ ಧೈರ್ಯ ಹೇಳಬೇಕು. ಔಷಧಿ ಕಿಟ್ ಗಳನ್ನು ನೀಡಬೇಕು. ಮಕ್ಕಳಿಗೆ ಪ್ರತ್ಯೇಕ ಔಷಧಿ ಕಿಟ್ ಸಿದ್ಧಪಡಿಸಬೇಕು.
9. ಗ್ರಾಮೀಣ ಪ್ರದೇಶದಲ್ಲಿ ಜನರಲ್ಲಿ ವಿಶ್ವಾಸ ಮೂಡಿಸಬೇಕು.
10. ಆಕ್ಸಿಜನ್ ಪ್ಲಾಂಟ್ಗಳನ್ನು ಸಜ್ಜುಗೊಳಿಸಿ, ಸಿಬ್ಬಂದಿ, ಇಂಧನ ಮೊದಲಾದವುಗಳನ್ನು ಸಿದ್ಧವಿಟ್ಟುಕೊಳ್ಳಲು ಸೂಚಿಸಲಾಗಿದೆ.
11. ಆಸ್ಪತ್ರೆಗಳಲ್ಲಿ ಜನರೇಟರುಗಳ ವ್ಯವಸ್ಥೆ ಮಾಡಿಕೊಳ್ಳಲು ಸೂಚಿಸಿದರು.
12. ಮಕ್ಕಳು ಮತ್ತು 60 ವರ್ಷ ಮೇಲ್ಪಟ್ಟವರ ಕುರಿತು ಹೆಚ್ಚಿನ ನಿಗಾ ವಹಿಸಬೇಕು.
13. ಲಸಿಕೆ ಅಭಿಯಾನ ತ್ವರಿತವಾಗಿ ಪೂರ್ಣಗೊಳಿಸಲು ಸೂಚಿಸಿದರು.
14. ಔಷಧಿಗಳನ್ನು ಕೂಡಲೇ ಒದಗಿಸಬೇಕು. ಅವುಗಳನ್ನು ಸಕಾಲದಲ್ಲಿ ಆಸ್ಪತ್ರೆಗಳಿಗೆ ತಲುಪಿಸಲು ಕ್ರಮ ವಹಿಸಲು ಸೂಚಿಸಿದರು.
15. ಜನರು ಕೋವಿಡ್-ಸೂಕ್ತ ನಡವಳಿಕೆಯನ್ನು ಅನುಸರಿಸುವ ಬಗ್ಗೆ ಮಾಧ್ಯಮಗಳಲ್ಲಿ ಜಾಗೃತಿ ಮೂಡಿಸಲು ತೀರ್ಮಾನಿಸಲಾಯಿತು.
16. ಭಾರತ ಸರ್ಕಾರದ ನಿಯಮಾವಳಿಗಳಂತೆ ಐ.ಸಿ.ಎಂ.ಆರ್ ಸೂಚಿಸಿರುವ ಶ್ರೇಣೀಕೃತ ಮಾದರಿಯಲ್ಲಿ ಪರೀಕ್ಷೆ ನಡೆಸಲು ಅನುಸರಿಸಲು ಸೂಚಿಸಿದರು.
17. ಎರಡನೇ ಡೋಸ್ ಲಸಿಕೆ ಪಡೆದವರ ಸಂಖ್ಯೆ ಕಡಿಮೆ ಇರುವ ಜಿಲ್ಲೆಗಳ ಜಿಲ್ಲಾಧಿಕಾರಿ ಹಾಗೂ ಸಿಇಒ ಗಳೊಂದಿಗೆ ವಿಡಿಯೋ ಸಂವಾದ ನಡೆಸಲು ನಿರ್ಧರಿಸಲಾಯಿತು.
18. 15 ರಿಂದ 18 ವರ್ಷ ವಯೋಮಾನದವರಿಗೆ ಲಸಿಕಾ ಅಭಿಯಾನವನ್ನು ಚುರುಕುಗೊಳಿಸಲು ಸೂಚಿಸಲಾಯಿತು.
ಶುಕ್ರವಾರದವರೆಗೆ ಯಥಾಸ್ಥಿತಿಯನ್ನು ಮುಂದುವರೆಸಿ ಬಳಿಕ ಕೊರೋನಾ ಸ್ಥಿತಿಗತಿ ಅವಲೋಕಿಸಿ ನಿರ್ಧಾರ ತೆಗೆದುಕೊಳ್ಳಲು ಸಭೆಯಲ್ಲಿ ನಿರ್ಣಯಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.