ಬೆಂಗಳೂರು: 24 ನೇ ಬೆಂಗಳೂರು ಟೆಕ್ ಸಮಿಟ್ಗೆ ಇಂದು ಚಾಲನೆ ದೊರೆತಿದ್ದು, ಮೂರು ದಿನಗಳ ಕಾಲ ಕಾರ್ಯಕ್ರಮ ನಡೆಯಲಿದೆ. ಉಪರಾಷ್ಟ್ರಪತಿ ವೆಂಕಯ್ಯ ನಾಯ್ಡು ಸಮಿಟ್ಗೆ ಚಾಲನೆ ನೀಡಿದ್ದಾರೆ.
ಒಟ್ಟು 30 ದೇಶಗಳು ಇದರಲ್ಲಿ ಭಾಗಿಯಾಗುತ್ತಿವೆ. 300ಕ್ಕೂ ಅಧಿಕ ಕಂಪೆನಿಗಳು, ಐದು ಸಾವಿರಕ್ಕೂ ಹೆಚ್ಚಿನ ನವೋದ್ಯಮಗಳು, ವಾಣಿಜ್ಯ ವಲಯದ 20 ಸಾವಿರಕ್ಕೂ ಹೆಚ್ಚು ಪ್ರತಿನಿಧಿಗಳು ಹಾಗೂ ವರ್ಚ್ಯುವಲ್ ಮಾದರಿಯಲ್ಲಿ ಐದು ಲಕ್ಷಕ್ಕೂ ಅಧಿಕ ಮಂದಿ ಆಸಕ್ತ ಉದ್ಯಮಿಗಳು ಈ ಸಮಿಟ್ನಲ್ಲಿ ಭಾಗವಹಿಸುವ ನಿರೀಕ್ಷೆಯಿದೆ.
ಮೊದಲ ಬಾರಿಗೆ ನಡೆಯುತ್ತಿರುವ ಇಂಡೋ-ಯುಎಸ್ ಕಾನ್ಕ್ಲೇವ್ ಸೇರಿದಂತೆ ಟೆಕ್ ಸಮಿಟ್ನಲ್ಲಿ 75 ಪ್ಯಾನಲ್ ಡಿಸ್ಕಷನ್ ಮತ್ತು ಏಳು ಸಂವಾದಗಳು ನಡೆಯಲಿವೆ. ನ.18ರಂದು ಗ್ಲ್ಯಾನ್ಸ್ ಇನ್ಮೊಬಿ ಸಂಸ್ಥಾಪಕ ನವೀನ್ ತಿವಾರಿ, ಡೈಲಿಹಂಟ್ ಸಹ ಸಂಸ್ಥಾಪಕ ಉಮಾಂಗ್ ಬೇಡಿ, ಫೋನ್-ಪೇ ಸ್ಥಾಪಕ ಸಿಟಿಒ ರಾಹುಲ್ ಚಾರಿ, ರೇಜರ್-ಪೇ ಸ್ಥಾಪಕ ಶಶಾಂಕ್ ಕುಮಾರ್, ಅನ್ಅಕಾಡೆಮಿ ಸಹಸಂಸ್ಥಾಪಕ ಗೌರವ್ ಮುಂಜಾಲ್ ಸೇರಿದಂತೆ ಜಾಗತಿಕ ಮಟ್ಟದ 20ಕ್ಕೂ ಹೆಚ್ಚು ಉದ್ಯಮಿಗಳು ತಮ್ಮ ಅನುಭವಗಳನ್ನು ಹಂಚಿಕೊಳ್ಳಲಿದ್ದಾರೆ.
ಇದರಲ್ಲಿ ಮೊದಲ ಬಾರಿಗೆ ಯುಎಇ, ವಿಯಟ್ನಾಂ, ಆಫ್ರಿಕಾ, ಯೂರೋಪಿಯನ್ ಒಕ್ಕೂಟ ಭಾಗಿಯಾಗುತ್ತಿದೆ.
ಈ ಸಂದರ್ಭದಲ್ಲಿ ಮಾತನಾಡಿದ ಸಿಎಂ ಬಸವರಾಜ ಬೊಮ್ಮಾಯಿ, ಉದ್ಯಮ ಕ್ಷೇತ್ರಕ್ಕೆ ರಾಜ್ಯ ಸರ್ಕಾರ ಹೆಚ್ಚಿನ ಪ್ರೋತ್ಸಾಹ ನೀಡಲಿದೆ ಎಂದು ಭರವಸೆ ನೀಡಿದರು.
ಬೆಂಗಳೂರು ಟೆಕ್ ಸಮಿಟ್ 2021ರ ಕಾರ್ಯಕ್ರಮದಲ್ಲಿ ಭವಿಷ್ಯದ ಸ್ಟೇಸ್ ಕ್ರಾಫ್ಟ್ನಲ್ಲಿ ಕುಳಿತು ಪ್ರಯಾಣ ಮಾಡಿದ ಅನುಭವಾಗುತ್ತಿದೆ ಎಂದ ಸಿಎಂ ಬಸವರಾಜ ಬೊಮ್ಮಾಯಿ, ಉದ್ಯಮ ಕ್ಷೇತ್ರದಲ್ಲಿ ಹೊಸತನದ ಪ್ರಯೋಗ ಮಾಡುವ ನಿಟ್ಟಿನಲ್ಲಿ ನವೋದ್ಯಮಿಗೆ ರಾಜ್ಯಕ್ಕೆ ಆಹ್ವಾನ ನೀಡಿದರು.
“ರಾಜ್ಯದ ನೀತಿಗಳು ದೂರದೃಷ್ಟಿ ಉಳ್ಳವುಗಳಾಗಿವೆ. ಕರ್ನಾಟಕವನ್ನು ತಂತ್ರಜ್ಞಾನದಲ್ಲಿ ನಾಯಕ ರಾಜ್ಯ ಅನ್ನಬಹುದು. ಯಾಕಂದ್ರೆ ನಾಯಕತ್ವ ವಹಿಸುವ ಉದ್ಯಮಿಗಳನ್ನು ನಾವು ಹೊಂದಿದ್ದೇವೆ. ಇವತ್ತು ಜಗತ್ತು ತಂತ್ರಜ್ಞಾನದಲ್ಲಿ ಬಹಳ ಮುಂದುವರೆದಿದೆ. ಈ ವಲಯದಲ್ಲಿ ಮಹತ್ತರ ಬದಲಾವಣೆಗಳು ಇನ್ನೂ ಮುಂದಿವೆ. ಯಾವುದೇ ಆವಿಷ್ಕಾರಗಳು ಒಬ್ಬ ಮನುಷ್ಯನಿಂದಲೇ ಆರಂಭವಾಗುವುದು. ನಂತರ ಆ ಆವಿಷ್ಕಾರ ಜಗತ್ತಿಗೆ ನೆರವಾಗುತ್ತದೆ, ಜಗತ್ತು ಬಳಸುತ್ತದೆ. ನಮ್ಮ ರಾಜ್ಯದಲ್ಲಿ ಬೆಂಗಳೂರು ತಂತ್ರಜ್ಞಾನದ ಹಬ್ ಆಗಿದೆ. ಇಲ್ಲಿ ಅಂಥ ಆವಿಷ್ಕಾರ ಮಾಡುವ ಮಾನವ ಸಂಪನ್ಮೂಲ ಇದೆ. ಬೆಂಗಳೂರು ಟೆಕ್ ಸಮಿಟ್ ಯಶಸ್ವಿ ಸಮಿಟ್. ಇದನ್ನು ಇನ್ನಷ್ಟು ಯಶಸ್ಸಾಗುವಂತೆ ಮಾಡುವ ಗುರಿ ಹೊಂದಿದ್ದೇವೆ” ಎಂದರು.
ಉದ್ಘಾಟನಾ ಕಾರ್ಯಕ್ರಮದಲ್ಲಿ ರಾಜ್ಯಪಾಲ ತಾವರ್ ಚಂದ್ ಗೆಹ್ಲೋಟ್, ಐಟಿ ಬಿಟಿ ಸಚಿವ ಅಶ್ವತ್ಥ ನಾರಾಯಣ, ಕೈಗಾರಿಕಾ ಸಚಿವ ಮುರುಗೇಶ್ ನಿರಾಣಿ, ರಾಜ್ಯ ಸರಕಾರದ ಐಟಿ ವಿಷನ್ ಗ್ರೂಪ್ ಮುಖ್ಯಸ್ಥ ಕ್ರಿಶ್ ಗೋಪಾಲಕೃಷ್ಣನ್, ಬಿಟಿ ವಿಷನ್ ಗ್ರೂಪ್ ಮುಖ್ಯಸ್ಥೆ ಕಿರಣ್ ಮಜುಂದಾರ್ ಷಾ, ಸ್ಟಾರ್ಟಪ್ ವಿಷನ್ ಗ್ರೂಪ್ ಮುಖ್ಯಸ್ಥ ಪ್ರಶಾಂತ್ ಪ್ರಕಾಶ್ ಉಪಸ್ಥಿತರಿದ್ದರು.
ಘನತೆವೆತ್ತ ಉಪರಾಷ್ಟ್ರಪತಿ @MVenkaiahNaidu ಅವರು ಇಂದು 'ಬೆಂಗಳೂರು ಟೆಕ್ ಸಮ್ಮಿಟ್' ಕಾರ್ಯಕ್ರಮವನ್ನು ಉದ್ಘಾಟಿಸಿದರು.
ರಾಜ್ಯಪಾಲ @TCGEHLOT, ಮುಖ್ಯಮಂತ್ರಿ @BSBommai, ಕೈಗಾರಿಕಾ ಸಚಿವ @NiraniMurugesh, ಐ.ಟಿ.ಬಿ.ಟಿ ಸಚಿವ @drashwathcn ಮತ್ತಿತರರು ಸಮಾರಂಭದಲ್ಲಿ ಭಾಗವಹಿಸಿದರು.#BengaluruTechSummit #BTS2021 pic.twitter.com/KdG6FZhhYl
— CM of Karnataka (@CMofKarnataka) November 17, 2021
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.