ಸರಿಯಾಗಿ 103 ವರ್ಷಗಳ ಹಿಂದೆ ಅಂದರೆ 1916 ನೇ ಸೆಪ್ಟೆಂಬರ್ 25 ರಂದು ಉತ್ತರ ಪ್ರದೇಶದ ನಾಗ್ಲಾ ಚಂದ್ರಬನ್ ಎಂಬ ಸಣ್ಣ ಹಲ್ಲಿಒಂದರಲ್ಲಿ ಪಂಡಿತ್ ದೀನದಯಾಳ್ ಉಪಾಧ್ಯಾಯರ ಜನನವಾಯಿತು. ಜಲೇಶ್ವರ್ನ ರೈಲ್ವೆ ನಿಲ್ದಾಣದಲ್ಲಿ ಸಹಾಯಕ ಸ್ಟೇಷನ್ ಮಾಸ್ಟರರರಾಗಿ ಕಾರ್ಯ ನಿರ್ವಹಿಸುತ್ತಿದ್ದ ಅವರ ತಂದೆ, ದೀನದಯಾಳರು 3 ವರ್ಷದವರಿದ್ದಾಗಲೇ ಕಾಲವಾದರು. ಮುಂದೆ ಅವರು 8 ನೇ ವಯಸ್ಸಿಗೆ ಬರುವಷ್ಟರಲ್ಲಿ ಅವರ ತಾಯಿಯನ್ನೂ ಕಳೆದುಕೊಂಡಿದ್ದರು. ಮುಂದೆ ದೀನದಯಾಳ್ ಮತ್ತು ಅವರ ಕಿರಿಯ ಸಹೋದರನನ್ನು ಅವರ ಮಾವ ಮತ್ತು ಚಿಕ್ಕಮ್ಮ ಬೆಳೆಸಿದರು. ಆದರೆ ಕೆಲವು ವರುಷಗಳಲ್ಲಿ ಅವರ ತಮ್ಮನೂ ಅನಾರೋಗ್ಯ ಪೀಡಿತರಾಗಿ ಕೊನೆಯುಸಿರೆದರು. ಹೀಗೆ ತನ್ನವರೆಂದು ಹೇಳಿಕೊಳ್ಳಲು ಕುಟುಂಬದ ಸದಸ್ಯರಾರೂ ಇಲ್ಲದಿದ್ದರೂ ಹೆಸರಿನಂತೆಯೇ ದೀನ ಬಂಧುವಾಗಿದ್ದ ದೀನದಯಾಳರು ಭಾರತ ದೇಶದ ಧ್ರುವತಾರೆಗಳಲ್ಲಿ ಒಬ್ಬರಾದರು.
ಪಂಡಿತ ದೀನದಳಾಯ್ ಉಪಾಧ್ಯಾಯರ ಬಗ್ಗೆ ತಿಳಿದಿರಲೇ ಬೇಕಾದ ವಿಷಯಗಳು:
🔷 ದೀನದಯಾಳರ ತಂದೆಯ ಹೆಸರು ಭಗವತಿ ಪ್ರಸಾದ್ ಮತ್ತು ತಾಯಿ ರಾಂಪ್ಯಾರಿ ಎಂಬ ಧಾರ್ಮಿಕ ಮಹಿಳೆ.
🔷 ಸಿಕಾರ್ನ ಶಾಲೆಯೊಂದರಲ್ಲಿ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣವನ್ನು ಪಡೆದ ದೀನದಯಾಳ್ ಉಪಾಧ್ಯಾಯರ ಮೆಟ್ರಿಕ್ ಪರಿಕ್ಷೆಯ ಸಾಧನೆಯನ್ನು ಗುರುತಿಸಿ ಸಿಕಾರ್ ಮಹಾರಾಜರು ಅವರಿಗೆ ವಿದ್ಯಾರ್ಥಿ ವೇತನವನ್ನೂ ನೀಡಿದ್ದರು. ವಿದ್ಯಾರ್ಥಿ ವೇತನವು ತಿಂಗಳಿಗೆ 10 ರೂಪಾಯಿ ಹಣ, ಚಿನ್ನದ ಪದಕ ಮತ್ತು ಪುಸ್ತಕ ಖರೀದಿಸಲು 250 ರೂಪಾಯಿಗಳನ್ನು ಒಳಗೊಂಡಿತ್ತು.
🔷 ಪಿಲಾನಿಯ ಬಿರ್ಲಾ ಕಾಲೇಜಿನಲ್ಲಿ ಮಧ್ಯಂತರ ವಿಧ್ಯಾಭ್ಯಾಸವನ್ನು ಪೂರೈಸಿದ ಬಳಿಕ ಕಾನ್ಪುರ್ ಮತ್ತು ಆಗ್ರಾದ ಕಾಲೇಜುಗಳಲ್ಲಿ ಉನ್ನತ ಶಿಕ್ಷಣವನ್ನು ಪಡೆದರು.
🔷 ಕಾನ್ಪುರದ ಸನಾತನ ಕಾಲೇಜಿನ ಸಹಪಾಠಿ ಬಾಲುಜಿ ಮಹಾಶಾಬ್ದೆ ಅವರು 1937 ರಲ್ಲಿ ದೀನದಯಾಳ್ ಉಪಾಧ್ಯಾಯರಿಗೆ ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಸ್ಥಾಪಕರಾದ ಕೇಶವ ಬಲಿರಾಮ್ ಹೆಗಡೇವಾರ್ ಅವರನ್ನು ಪರಿಚಯಿಸಿದರು.
🔷 1942 ರಲ್ಲಿ ದೀನದಯಾಳರು ಪ್ರಚಾರಕ್ ಆಗಿ, ಪೂರ್ಣಾವಧಿಯ ಕಾರ್ಯಕರ್ತರಾಗಿ ರಾಷ್ಟ್ರೀಯ ಸ್ವಯಂಸೇವಕ ಸಂಘವನ್ನು ಸೇರಿಕೊಂಡರು. ಅಲ್ಲಿ ಅವರು 40 ದಿನಗಳ ಸಂಘ ಶಿಕ್ಷಣ ಶಿಬಿರದಲ್ಲಿ ಭಾಗವಹಿಸಿ ಮತ್ತೆ ಮರುವರ್ಷ ಶಿಕ್ಷಕ ವಿಭಾಗದಲ್ಲೂ ಪರಿಣತಿಯನ್ನು ಪಡೆದುಕೊಂಡರು. ಬಳಿಕ ಅಜೀವ ಪ್ರಚಾರಕರಾಗಿ ಸೇರಿಕೊಂಡ ದೀನದಯಾಳರು ಮೊದಲು ಲಕ್ಹ್ಮೀಪುರ ಜಿಲ್ಲೆ ಮತ್ತು ನಂತರ ಪೂರ್ಣ ಉತ್ತರ ಪ್ರದೇಶದ ಪ್ರಾದೇಶಿಕ ಸಂಘಟಕರಾಗಿ ನಿಯುಕ್ತರಾದರು. ಮುಂದೆ ಅವರು ಸ್ವಯಂ ಸೇವಕ ಸಂಘದ ಆದರ್ಶ ಸ್ವಯಂಸೇವಕ ಎಂದೇ ಖ್ಯಾತರಾದರು.
🔷 ಹಿಂದುತ್ವದ ರಾಷ್ಟ್ರೀಯತೆಯ ಸಿದ್ದಂತವನ್ನು ಹರಡುವ ಉದ್ದೇಶವನ್ನು ಹೊಂದಿದ್ದ ಅವರು ಪಾಂಚಜನ್ಯ ಎಂಬ ವಾರಪತ್ರಿಕೆ ಮತ್ತು ಸ್ವದೇಶವೆಂಬ ದಿನಪತ್ರಿಕೆಯನ್ನು ಕೂಡ ಸ್ಥಾಪಿಸಿದ್ದರು. ಶಂಕರಾಚಾರ್ಯರ ಜೀವನ ಚರಿತ್ರೆ, ಚಂದ್ರಗುಪ್ತ ಮೌರ್ಯರ ಕುರಿತಾದ ಹಿಂದಿ ನಾಟಕ ವನ್ನು ಬರೆದಿದ್ದ ದೀನದಯಾಳರು ಹೆಗಡೆವಾರರ ಮರಾಠಿ ಜೀವನಚರಿತ್ರೆಯನ್ನು ಹಿಂದಿಗೆ ಅನುವಾದಿಸಿದ್ದರು.
🔷 1951 ರಲ್ಲಿ ಶ್ಯಾಮಪ್ರಸಾದ್ ಮುಖರ್ಜಿಯವರು ಭಾರತೀಯ ಜನಸಂಘವನ್ನು ಸ್ಥಾಪಿಸಿದರು. ಆ ಸಮಯದಲ್ಲಿ ದೀನದಯಾಳರು ಸಂಘದಲ್ಲಿ ಗರಿಷ್ಠ ಜವಾಬ್ದಾರಿಯನ್ನು ಹೊಂದಿದ್ದರು,ಇಂತಹಾ ಸಮಯದಲ್ಲಿ ಸಂಘವು ಅವರನ್ನು ಪಕ್ಷದೊಂದಿಗೆ ಬೆರೆಯುವಂತೆ ಸೂಚಿಸಿತು. ನಂತರ ಅವರು ಪಕ್ಷದ ಉತ್ತರ ಪ್ರದೇಶದ ಪ್ರಧಾನ ಕಾರ್ಯದರ್ಶಿಗಳಾಗಿದ್ದರು ಮತ್ತು ಭಾರತೀಯ ಜನಸಂಘದ 10 ನೇ ಅಧ್ಯಕ್ಷರೂ ಆಗಿದ್ದರು.
🔷 ಸ್ವಾತಂತ್ರೋತ್ತರ ಭಾರತದ ಪಾಶ್ಚಿಮಾತ್ಯೇಏಕರಣವನ್ನು ತೊಡೆದು ಹಾಕಲು ಭಾರತಕ್ಕೆ ತಂಗಾಳಿಯ ಅವಶ್ಯಕತೆಯಿದೆ ಎಂದು ಅವರು ಅಭಿಪ್ರಾಯ ವ್ಯಕ್ತಪಡಿಸಿದ್ದರು. ಆಧುನಿಕ ತಂತ್ರಜಾನಗಳನ್ನು ಭಾರತೀಯ ಚಿಂತನೆಯೊಂದಿಗೆ ಅಳವಡಿಸಿಕೊಳ್ಳಬೇಕೆಂದು ಹೇಳುತ್ತಿದ್ದ ದೀನದಯಾಳರು ಅತಿಯಾದ ಅವಲಂಬನೆಯಿಂದ ದೇಶದ ಜನರ ಬುದ್ಧಿಶಕ್ತಿಯು ಜಡವಾಗುತ್ತದೆ ಎಂದು ಹೇಳುತ್ತಿದ್ದರು.
🔷 ಭಾರತ ಕಂಡ ನಿರ್ಭೀತ ಮತ್ತು ಅತ್ಯುತ್ತಮ ರಾಜಕೀಯ ನಾಯಕನ ಸಾವು ಹಲವಾರು ಸಂದೇಹಗಳಿಗೆ ಕಾರಣವಾಯಿತು. 1967 ರಲ್ಲಿ ಜನಸಂಘದ ಅಧ್ಯಕ್ಷರಾದ ಮರುವರ್ಷ ಪಟನಾ ಜಿಲ್ಲೆಗೆ ರೈಲಿನಲ್ಲಿ ಪ್ರಯಾಣಿಸುತ್ತಿದ್ದ ಅವರನ್ನು ಕೊಲೆ ಮಾಡಲಾಯಿತು. ಜಾನೌ ಪುರದ ರೈಲ್ವೆ ನಿಲ್ದಾಣದಲ್ಲಿ ಜೀವಂತವಾಗಿ ಕಾಣಿಸಿಕೊಂಡಿದ್ದ ದೀನದಯಾಳರು ಮುಘಲ್ ಸರಾಯ್ ನಿಲ್ದಾಣಕ್ಕೆ ತಲುಪುವಷ್ಟರಲ್ಲಿ ಮರಣವನ್ನಪ್ಪಿದ್ದರು. ಅವರ ಮೃತದೇಹದ ಬಳಿಯಲ್ಲಿ 5 ರೂಪಾಯಿಯ ನೋಟು ಕೂಡ ದೊರಕಿತ್ತು. ಇದೊಂದು ಕಳ್ಳತನಕ್ಕಾಗಿ ನಡೆಸಿದ ಕೊಲೆ ಎಂದು ಹೇಳಿ ಪ್ರಕರಣವನ್ನು ಮುಚ್ಚಿ ಹಾಕಲಾಯಿತು.
🔷 ಅವರ ನಾಯಕತ್ವವನ್ನು ಗುರುತಿಸಿ ಅವರ ಪರಂಪರೆಯನ್ನು ಮುಂದುವರೆಸುವ ಉದ್ದೇಶದಿಂದ ಭಾರತೀಯ ಜನತಾ ಪಕ್ಷ ಅವರ ಹೆಸರಿನಲ್ಲಿ ಉತ್ತಮ ಜನಪರ ಯೋಜನೆಗಳನ್ನು ಹಮ್ಮಿಕೊಂಡಿದೆ. ಉತ್ತರ ಪ್ರದೇಶ ಸರಕಾರವು ಮೊಘಲ್ ಸರಾಯ್ ರೈಲ್ವೆ ನಿಲ್ದಾಣವನ್ನು ಪಂಡಿತ್ ದೀನದಯಾಳ ಉಪಾದ್ಯಾಯ ರೈಲ್ವೆ ನಿಲ್ದಾಣವೆಂದು ಮರುನಾಮಕರಣ ನಡೆಸಿತು.
ದೀನದಯಾಳರು 1968 ರ ಫೆಬ್ರವರಿ 11 ರಂದು ನಮ್ಮನ್ನಗಲಿದರು. ತಮ್ಮ ಪೂರ್ಣ ಜೀವನವನ್ನು ಸಾಮಾಜಿಕ ಕಾರ್ಯಗಳಿಗೋಸ್ಕರ, ಭಾರತೀಯ ಜನಸಂಘ ಮತ್ತು ರಾಷ್ಟ್ರೀಯ ಸ್ವಯಂ ಸೇವಕ ಸಂಘಗಳಿಗೆ ಅರ್ಪಿಸಿದ್ದ ದೀನದಯಾಳರು ಮದುವೆಯಾಗಿರಲಿಲ್ಲ.
ಸಾಮಾಜಿಕ ಸೇವೆಯ ಪ್ರವರ್ತಕ ಪರಂಪರೆಗೆ ತಮ್ಮ ಅತ್ಯಮೂಲ್ಯ ಕೊಡುಗೆಯನ್ನು ನೀಡಿದ್ದ ದೀನದಯಾಳರು ಭಾರತದ ಅನೇಕರಿಗೆ ಇಂದಿಗೂ ಸ್ಫೂರ್ತಿಯಾಗಿದ್ದಾರೆ. ಇಂದು ನಮ್ಮನ್ನಾಳುತ್ತಿರುವ ಭಾರತೀಯ ಜನತಾ ಪಕ್ಷದ ಗಟ್ಟಿಯಾದ ತಾಯಿಬೇರಾಗಿದ್ದ ದೀನದಯಾಳರು ಇಂದಿಗೂ ಪಕ್ಷದ ಕಾರ್ಯಾಲಯಗಳಲ್ಲಿ, ಸಂಘದ ಸಾವಿರಾರು ಕಾರ್ಯಕರ್ತರ ಹೃದಯಗಳಲ್ಲಿ ಶಾಶ್ವತವಾಗಿ ನೆಲೆಸಿದ್ದಾರೆ.
✍️ ದೀಪಾ ಜಿ. ಭಟ್
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.