1918 ರ ಸೆಪ್ಟೆಂಬರ್ನಲ್ಲಿ ನಡೆದಿದ್ದ ಹೈಫಾ ಯುದ್ಧದ 100 ನೇ ವರ್ಷದ ಸ್ಮರಣೆಯ ಸಲುವಾಗಿ ಕಳೆದ 2018 ರ ಸೆಪ್ಟೆಂಬರ್ 23 ರಂದು ಮೈಸೂರಿನಲ್ಲಿ ಕಾರ್ಯಕ್ರಮವೊಂದನ್ನು ಆಯೋಜಿಸಲಾಗಿತ್ತು. ಆ ಕಾರ್ಯಕ್ರಮ ಮುಗಿದು ಮೂರು ವರ್ಷಗಳು ಕಳೆದಿವೆ. ಅಂದರೆ ಹೈಫಾ ಯುದ್ಧ ಸಂಭವಿಸಿ ಇದೀಗ 103 ವರ್ಷಗಳು ಕಳೆದಿವೆ.
ಆದರೆ ಇಂದಿಗೂ ಹೈಫಾ ಯುದ್ಧದ ಬಗ್ಗೆಯಾಗಲೀ, ಆ ಯುದ್ಧಕ್ಕೂ ಮತ್ತು ನಮ್ಮ ಮೈಸೂರಿಗೂ ಇರುವ ಸಂಬಂಧದ ಬಗ್ಗೆಯಾಗಲೀ ಹೆಚ್ಚಿನ ಚರ್ಚೆಗಳು ನಡೆದಿಲ್ಲ. ವಿಚಾರ ವಿನಿಮಯಗಳೂ ಆಗುತ್ತಿಲ್ಲ. ಹೈಫಾ ನಗರದ ವಿಮೋಚನೆಗಾಗಿ ನಡೆದ ಆ ಯುದ್ಧದ ಕುರಿತು ಮೈಸೂರಿನ ಬಹುತೇಕ ನಾಗರಿಕರಿಗೆ ಹೆಚ್ಚಿನ ಯಾವ ಮಾಹಿತಿಗಳೂ ಇಲ್ಲ.
ಭಾರತೀಯ ಸೈನಿಕರೆಂದರೆ ಧೈರ್ಯ, ಶೌರ್ಯ, ಚಾಣಾಕ್ಷತೆ, ಮತ್ತು ನಿಷ್ಠೆಗೆ ಮೊದಲಿನಿಂದಲೂ ಹೆಸರುವಾಸಿ. ಆಡಳಿತಗಾರರು ಯಾರೇ ಆಗಿದ್ದರೂ, ನಮ್ಮ ಸೈನಿಕರು ತಮ್ಮಲ್ಲಿರುವ ಕೆಚ್ಚು, ಧೈರ್ಯ,ಶೌರ್ಯಗಳನ್ನು ಎಂದಿಗೂ ಕಳೆದುಕೊಂಡಿಲ್ಲ. ತಮ್ಮ ಕೆಲಸದಲ್ಲಿನ ಪ್ರಾಮಾಣಿಕತೆಗೆ ಎಂದಿಗೂ ಕುಂದುಂಟುಮಾಡಿಕೊಂಡಿಲ್ಲ.
ಪೂರ್ಣ ನಾಶವನ್ನೇ ಗುರಿಯಾಗಿಸಿಕೊಂಡಿದ್ದ ಒಟ್ಟೋಮನ್ ಫೋರ್ಸ್ ತುರ್ಕರ ಸೈನ್ಯದಿಂದ ಇಸ್ರೇಲಿ ಪಟ್ಟಣವನ್ನು ಸ್ವತಂತ್ರಗೊಳಿಸುವುದು ಹೈಫಾ ಯುದ್ಧದ ಗುರಿಯಾಗಿತ್ತು. ಆ ಯುದ್ಧದಲ್ಲಿ ಮೈಸೂರು ಲ್ಯಾನ್ಸರ್ಸ್ ಸೈನಿಕ ದಳವು ಫೀಲ್ಡ್ ಮಾರ್ಷಲ್ ಆರ್ಕಿಬಾಲ್ಡ್ ವಾವೆಲ್ ಅವರ ಮಾರ್ಗದರ್ಶನದೊಂದಿಗೆ ಹೈಫಾ ವಿಮೋಚನೆಗೆ ಸಿದ್ಧವಾಗಿ ಅಲ್ಲಿಗೆ ತೆರಳಿತ್ತು. ಹೈದರಾಬಾದ್ ಮತ್ತು ಜೋಧಪುರದ ಅಶ್ವಪಡೆಗಳೂ ಮೈಸೂರು ಲ್ಯಾನ್ಸರ್ಸ್ ಜೊತೆಗಿದ್ದವು.
‘ಲ್ಯಾನ್ಸರ್ಸ್’ ಪಡೆಯು ಹೆಸರೇ ಹೇಳುವಂತೆ ಉದ್ದನೆಯ ಈಟಿ ಅಥವಾ ಭರ್ಜಿಗಳನ್ನು ಹಿಡಿದು, ಕುದುರೆಗಳ ಮೇಲೆ ಸವಾರಿ ಮಾಡುತ್ತಾ ಯುದ್ಧ ಮಾಡುವ ಸಮರಕಲಿಗಳ ಪಡೆಯಾಗಿತ್ತು. ಆದರೆ ಅಲ್ಲಿನ ದುರ್ಗಮ ಕಣಿವೆಗಳು, ಪರ್ವತಗಳು, ಕಂಡು ಕೇಳಿರದ ಅಪಾಯಕಾರಿ ಸ್ಥಳಗಳಲ್ಲಿ ಕೆಲವೇ ಸೈನಿಕರು ಯಾವುದೇ ಆಧುನಿಕ ಯುದ್ಧ ಸಾಮಗ್ರಿಗಳಿಲ್ಲದೆ ಕಾದಾಡಿ ಗೆಲ್ಲುವುದು ಅಸಾಧ್ಯದ ಮಾತೆಂದು ಅರಿತ ವಾವೆಲ್, ಆ ಯುದ್ಧದಿಂದ ಹಿಂದೆ ಸರಿಯಲು ನಿರ್ಧರಿಸಿದಾಗ, ನಮ್ಮ ಸೈನಿಕರು “ನಾವು ಸಾಯಲು ಸಿದ್ಧರಿದ್ದೇವೆಯೇ ಹೊರತೂ ಯುದ್ಧಕ್ಕೆಂದು ಬಂದ ಮೇಲೆ ಯುದ್ಧ ಮಾಡದೆ ಇಲ್ಲಿಂದ ಹಿಂದೆ ಹೋಗುವ ಪ್ರಶ್ನೆಯೇ ಇಲ್ಲ” ಎಂದು ಯುದ್ಧಕ್ಕೆ ಅನುಮತಿ ಪಡೆದು ಎದುರಾಳಿ ಸೈನ್ಯದ ಫಿರಂಗಿ, ಮಷಿನ್ ಗನ್ಗಳಿಗೆ ಎದೆಯೊಡ್ಡಿ, ತಮ್ಮ ಬಳಿಯಿದ್ದ ಈಟಿ,ಭರ್ಜಿಗಳ ಮೂಲಕವೇ ಅವರನ್ನೆದುರಿಸಿ ನಾನ್ನೂರಕ್ಕೂ ಹೆಚ್ಚು ವರ್ಷಗಳ ಆಳ್ವಿಕೆಯನ್ನು ಕೇವಲ ಹದಿನೈದು ಗಂಟೆಗಳೊಳಗಾಗಿ ಅಂತ್ಯಗೊಳಿಸಿ ಹೈಫಾ ಯುದ್ಧದಲ್ಲಿ ವಿಜಯಿಗಳಾದರು. ಆ ಮೂಲಕ ಇಸ್ರೇಲ್ ದೇಶದ ಸ್ವಾತಂತ್ರ್ಯಕ್ಕೆ ಕಾರಣರಾದರು. ಮೈಸೂರು ಮತ್ತು ಜೋಧಪುರದ ಸೈನಿಕರು ನೇರ ಯುದ್ಧದಲ್ಲಿ ಭಾಗವಹಿಸಿದ್ದರೆ, ಹೈದರಾಬಾದ್ ಪಡೆಯು ಸಂಪರ್ಕ ವ್ಯವಸ್ಥೆ ಹಾಗೂ ಗಯಾಳುಗಳ ಸೇವೆಯ ಹೊಣೆಯನ್ನು ಹೊತ್ತುಕೊಂಡಿತ್ತು.
ಆ ಗೆಲುವಿನ ಸ್ಮರಣಾರ್ಥ, ಮೂರೂ ಪಡೆಗಳ ಸಂಕೇತವಾಗಿ ಆಳೆತ್ತರದ ಮೂರು ಯೋಧರ ಪುತ್ಥಳಿಗಳನ್ನು ದೆಹಲಿಯಲ್ಲಿ ಸ್ಥಾಪಿಸಲಾಗಿದ್ದು, ಅಲ್ಲಿ ನಿರ್ಮಿಸಲಾದ ಭವನವನ್ನು ತೀನ್ ಮೂರ್ತಿ ಭವನ್ (ಮೂರು ಮೂರ್ತಿಗಳ ಭವನ) ಎಂದೇ ಕರೆಯಲಾಗುತ್ತದೆ. ಸ್ವಾತಂತ್ರ್ಯ ದೊರೆಯುವ ವರೆಗೂ ತೀನ್ ಮೂರ್ತಿ ಭವನವು ಭಾರತದ ಕಮಾಂಡರ್ ಇನ್ ಚೀಫ್ ನಿವಾಸವಾಗಿ ಬಳಕೆಯಾಗಿದ್ದು, ನಂತರದಲ್ಲಿ ಅದು ದೇಶದ ಮೊದಲ ಪ್ರಧಾನಿ ನೆಹರೂ ರವರ ನಿವಾಸವಾಗಿ ಬದಲಾಯಿತು. ಅವರ ನಂತರ ಅದು ನೆಹರೂರವರ ಸ್ಮಾರಕವಾಗಿ ಬದಲಾಯಿತು. ಮೂರು ಪುತ್ಥಳಿಗಳಿರುವ ಆ ವೃತ್ತವನ್ನು ತೀನ್ ಮೂರ್ತಿ ಚೌಕ್ ಎಂದೂ, ಮತ್ತು ಅಲ್ಲಿಗೆ ಸಂಪರ್ಕ ಕಲ್ಪಿಸುವ ರಸ್ತೆಯನ್ನು ತೀನ್ ಮೂರ್ತಿ ರಸ್ತೆ ಎಂದೂ ಕರೆಯಲಾಗುತ್ತಿತ್ತು. ನಮ್ಮ ಇತಿಹಾಸದ ಸ್ಪಷ್ಟ ಅರಿವು ಮೂಡಿಸುವ ಉದ್ದೇಶದಿಂದ ಕಳೆದ 2018 ರಲ್ಲಿ ಆ ವೃತ್ತವನ್ನು ತೀನ್ ಮೂರ್ತಿ ಹೈಫಾ ಚೌಕ್ ಎಂದೂ, ಮತ್ತು ಆ ರಸ್ತೆಯ ಹೆಸರನ್ನು ತೀನ್ ಮೂರ್ತಿ ಹೈಫಾ ರಸ್ತೆ ಎಂದೂ ಮರುನಾಮಗೊಳಿಸಲಾಗಿದೆ.
ಹೈಫಾ ಯುದ್ಧದಲ್ಲಿ ಇಸ್ರೇಲ್ ಸ್ವಾತಂತ್ರ್ಯಕ್ಕೆ ಮುನ್ನುಡಿ ಬರೆದ ಕನ್ನಡಿಗ ಯೋಧರ ಆ ಸಾಹಸ ನಿಜಕ್ಕೂ ಇಂದಿನ ಪೀಳಿಗೆಗೆ ಸ್ಪೂರ್ತಿಯಾಗುವಂತಹದ್ದೇ ಹೌದು. ಈಗಿನ ಇಸ್ರೇಲ್ ನಲ್ಲಿ ನಡೆದಿದ್ದ ಆ ಯುದ್ಧದಲ್ಲಿ ಮೈಸೂರು ಲ್ಯಾನ್ಸರ್ಸ್ ಪಾತ್ರ ಅತ್ಯಂತ ಪ್ರಧಾನವಾಗಿತ್ತು. ಭಾರತವೂ ಸೇರಿದಂತೆ ಪ್ರಪಂಚದಾದ್ಯಂತ ಚದುರಿ ಹೋಗಿದ್ದ ಯಹೂದಿಗಳು ತಮ್ಮದೇ ಆದ ನೆಲಕ್ಕೆ ಮರಳಿ ಸದೃಢವಾದ ದೇಶವೊಂದು ನಿರ್ಮಾಣವಾಗಲು ಮೈಸೂರಿನ ಸೈನಿಕರೂ ಕಾರಣರಾದರು. ಅದಕ್ಕಾಗಿಯೇ ಸ್ವತಃ ಇಸ್ರೇಲ್ ದೇಶದ ಅಧ್ಯಕ್ಷರೂ ಸೇರಿದಂತೆ ಎಲ್ಲ ಇಸ್ರೇಲಿಗರೂ ಇಂದಿಗೂ ಮೈಸೂರು ಯೋಧರ ಸೇವೆಯನ್ನು ಕೃತಜ್ಞತೆಯಿಂದ ಸ್ಮರಿಸುತ್ತಾರೆ. ಆದರೆ ಬಹುತೇಕ ಮೈಸೂರಿಗರಿಗೆ ತಮ್ಮದೇ ನಾಡಿನ ಹೆಮ್ಮೆಯ ಸೈನಿಕರ ಸಾಹಸಗಳ ಅರಿವು ಇಲ್ಲದಿರುವುದು ದುರದೃಷ್ಟಕರ ಸಂಗತಿ. ಯಾವುದೇ ಇತಿಹಾಸವೇ ಆದರೂ ಅದು ನೆನಪಿನಲ್ಲಿ ಉಳಿಯಬೇಕಾದರೆ ಅದಕ್ಕೊಂದು ಶಾಶ್ವತ ಸ್ಮಾರಕ ನಿರ್ಮಾಣವಾಗಬೇಕಾಗಿರುವುದು ಅನಿವಾರ್ಯ. ಆದ್ದರಿಂದಲೇ ಹೈಫಾ ಯುದ್ಧದ ಗೆಲುವಿನ ಸ್ಮರಣಾರ್ಥ ಮೈಸೂರು ಲ್ಯಾನ್ಸರ್ಸ್ ಯೋಧರ ಸ್ಮಾರಕವೂ ಮೈಸೂರು ನಗರದಲ್ಲಿ ನಿರ್ಮಾಣವಾಗಬೇಕು ಮತ್ತು ಆ ಮೂಲಕ ಮೈಸೂರು ಸೈನ್ಯದ ಶಕ್ತಿ ಸಾಮರ್ಥ್ಯಗಳ ಅರಿವು ಇಂದಿನ ಹಾಗೂ ಮುಂದಿನ ಹಲವಾರು ಪೀಳಿಗೆಗಳಿಗೆ ತಲುಪುವಂತಾಗಬೇಕು ಎನ್ನುವುದು ನಮ್ಮ ಆಶಯ.
ಈ ಆಶಯವನ್ನು ಅತಿ ಶೀಘ್ರದಲ್ಲಿಯೇ ಮೈಸೂರಿನ ಜನಪ್ರತಿನಿಧಿಗಳು ಸಾಕಾರಗೊಳಿಸುವರೆನ್ನುವ ನಂಬಿಕೆಯೂ ನಮಗಿದೆ.
✍ ಡಾ. ಸುಧಾಕರ ಹೊಸಳ್ಳಿ
✍ ಪ್ರವೀಣ್ ಕುಮಾರ್ ಮಾವಿನಕಾಡು
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.