ಆತನ ಹೆಸರು ತನ್ಮಯ್. ಎಂಟನೇ ತರಗತಿ ಓದುತ್ತಿರುವ ಬಾಲ ಸ್ವಯಂಸೇವಕ. ಆತನ ಮನೆ ಅಪ್ಪಟ ಸಂಘದ ಮನೆ. ತಂದೆ, ಚಿಕ್ಕಪ್ಪ, ಸೋದರ ಮಾವ ಎಲ್ಲರೂ ಬಂಟ್ವಾಳ ತಾಲೂಕಿನ ಸಂಘದ ಜವಾಬ್ದಾರಿಯುತ ಕಾರ್ಯಕರ್ತರು. ಹಾಗಾಗಿ ಸಂಘದ ಪುತ್ತೂರು ಜಿಲ್ಲಾ ಕಾರ್ಯಾಲಯ “ಪಂಚವಟಿ” ಯ ಪುನರ್ ನಿರ್ಮಾಣ ಕಾರ್ಯದ ನಿಧಿ ಸಂಗ್ರಹದ ಬಗ್ಗೆ ತನ್ಮಯನಿಗೂ ಸಹಜವಾಗಿಯೇ ತಿಳಿದಿತ್ತು. ತಂದೆಯ ಬಳಿಯಲ್ಲಿ ತಾನು ಕೂಡ ಕಾರ್ಯಾಲಯ ನಿರ್ಮಾಣಕ್ಕೆ ನಿಧಿ ಸಮರ್ಪಿಸುವ ಕುರಿತು ಕೇಳಿದ್ದ. ಆದರೆ ಅವರು ಅವನಿಗೆ ಹೇಳಿದ್ದರು. ನೀನು ಕೂಡ ನಿಧಿ ಸಮರ್ಪಿಸಬಹುದು, ಆದರೆ ನಾನು ನಿನಗೆ ಹಣ ನೀಡುವುದಿಲ್ಲ, ನಿನ್ನ ಬಳಿ ನಿನ್ನ ಸ್ವಂತದ ಹಣ ಇದ್ದರೆ ಖಂಡಿತ ಕೊಡಬಹುದು ಎಂಬ ಹಾಗೆ. ತಕ್ಷಣ ತನ್ಮಯ್ ಹೇಳಿದ್ದ, ನೀವು ನನಗೆ ಹಣ ನೀಡಬೇಕಾಗಿಲ್ಲ. ನನ್ನ ಹತ್ತಿರ ದುಡ್ಡು ಇದೆ, ಅದನ್ನೇ ನೀಡುತ್ತೇನೆ. ಈಗ ಅಪ್ಪನಿಗೆ ಕುತೂಹಲ, ಆಶ್ಚರ್ಯ.
ಹಣ ತಂದುಕೊಟ್ಟ ಮಗನಿಗೆ ಈ ಹಣ ಎಲ್ಲಿಂದ ಎಂದು ಕೇಳಿದಾಗ, ಅದು ಮೊನ್ನೆ ಮನೆಗೆ ಬಂದ ಚಿಕ್ಕಮ್ಮ ನೀಡಿದ್ದು, ಮತ್ತು ಹಾಗೆ ಹೀಗೆ ಉಳಿಸಿದ್ದು ಸೇರಿ ಒಟ್ಟುಗೂಡಿಸಿದ್ದು ಎಂದ. ಅಪ್ಪ ಖುಷಿಗೊಂಡರು. ಮುಂದುವರಿದ ತನ್ಮಯ್ ನನಗೆ ನನ್ನದೇ ಹೆಸರಲ್ಲಿ ರಶೀದಿ ನೀಡಿ ಎಂದು ಕೇಳಿದಾಗ ಅಪ್ಪನಿಗೆ ಮತ್ತೊಮ್ಮೆ ಆಶ್ಚರ್ಯ. ಅದು ಯಾಕೆ ನಿನ್ನ ಹೆಸರಲ್ಲೇ ಬೇಕು ಎಂದು ಕೇಳಿದರೆ, ಅದು ನನಗೆ ಬೇಕು, ಮುಂದೆ ಕಾರ್ಯಾಲಯ ನಿರ್ಮಾಣವಾದ ಮೇಲೆ ಅಲ್ಲಿಗೆ ಹೋದಾಗ ನನಗೆ ಹೆಮ್ಮೆ ಆಗಬೇಕು. ಈ ಭವ್ಯ ಸಂಘ ಮಂದಿರದಲ್ಲಿ ನನ್ನದು ಒಂದು ಸಣ್ಣ ಪಾಲು ಇದೆ ಎಂಬ ಹಾಗೆ. ನಾನು ದೊಡ್ಡವಾನದ ಬಳಿಕ ಅದರ ನೆನಪಿಗೆ ನನಗೆ ನನ್ನದೇ ಹೆಸರಲ್ಲಿ ರಶೀದಿ ಬೇಕು ಎಂದು. ಅಪ್ಪ ಅವನು ಹೇಳಿದಂತೆ ಹಣ ತೆಗೆದುಕೊಂಡು ರಶೀದಿ ಬರೆದುಕೊಟ್ಟರು. ಈ ಮಹತ್ವದ ನಿಧಿ ಅಭಿಯಾನಕ್ಕೆ ಬಾಲ ಸ್ವಯಂಸೇವಕ ತನ್ಮಯ್ ಹೊಸ ದೃಷ್ಟಿ ನೀಡಿ ಪ್ರೇರಣೆ ನೀಡಿದ.
“ಪಂಚವಟಿ” ಕಾರ್ಯಾಲಯ ಸಂಘಟನಾತ್ಮಕ ಪುತ್ತೂರು ಜಿಲ್ಲೆಯ ಕೇಂದ್ರ ಸ್ಥಾನ. “ಪಂಚವಟಿ” ಎಂಬ ಹೆಸರೇ ತುಂಬಾ ಮಹತ್ವದ್ದು. ನಮ್ಮೆಲ್ಲರ ಆರಾಧ್ಯ ದೈವ ಪ್ರಭು ಶ್ರೀರಾಮಚಂದ್ರನ ಬದುಕಿಗೆ ಬಹು ದೊಡ್ಡ ತಿರುವು ನೀಡಿದ್ದೇ ಪಂಚವಟಿ ಪ್ರದೇಶ. ಅದೇ ಹೆಸರನ್ನು ಹೊಂದಿದ ಪುತ್ತೂರು ಜಿಲ್ಲಾ ಕಾರ್ಯಾಲಯ ಕಳೆದ ಆರವತ್ತು ವರ್ಷಗಳಿಂದ ಪುತ್ತೂರು ಸಂಘ ಕಾರ್ಯದ ಯೋಜನೆ,ಯೋಚನೆಯ ಮೂರ್ತ ಸ್ವರೂಪ. ಪುತ್ತೂರು ಜಿಲ್ಲೆಯ ಸಂಘ ಮತ್ತು ಪರಿವಾರದ ಎಲ್ಲ ಚಟುವಟಿಕೆಗಳಿಗೆ ಪಂಚವಟಿಯೇ ಆಧಾರಶಿಲೆ.
ಸಂಘಕಾರ್ಯಕ್ಕೆ ಬೀಜ ಮಾಪನವಾದುದು ದೂರದ ಮಹಾರಾಷ್ಟ್ರದ ನಾಗಪುರದ ರೇಶಮ್ ಬಾಗ್ನ ಅಂಗಳದಲ್ಲಾದರೂ, ಆ ಸಸಿ ವಿಶಾಲವಾಗಿ ಹಬ್ಬಿ ಸಿಹಿಯಾದ ಫಲ ನೀಡಿದ್ದು ಪುತ್ತೂರು ಜಿಲ್ಲೆಯಲ್ಲಿ. ಸ್ವಾತಂತ್ರ್ಯ ಪೂರ್ವದಲ್ಲಿ ಬಂಗಾಳದ ಕುರಿತು ಹೇಳುವಾಗ ಬಂಗಾಳ ಇಂದು ಯೋಚಿಸುವುದನ್ನು ಭಾರತ ನಾಳೆ ಯೋಚಿಸುತ್ತದೆ ಎಂಬ ಮಾತು ಇತ್ತು. ಇಂದು ಸಂಘದ ದೃಷ್ಟಿಯಲ್ಲಿ ಇಂದು ಈ ಮಾತು ಪುತ್ತೂರು ಜಿಲ್ಲೆಗೆ ಅನ್ವಯಿಸಿದರೆ ಖಂಡಿತ ಆತಿಶಯವಲ್ಲ. ಇವತ್ತು ಸಂಘ ಕಾರ್ಯದಲ್ಲಿ ಪುತ್ತೂರು ಜಿಲ್ಲೆ ಇಡೀ ರಾಷ್ಟ್ರಕ್ಕೆ ಮಾದರಿಯಾಗಿದೆ, ಪ್ರೇರಣೆಯಾಗಿದೆ.
ವೈಯುಕ್ತಿಕ ಹೆಸರು, ಗುರುತು ಎಲ್ಲೂ ದಾಖಲಿಸಿಕೊಳ್ಳದೆ, ತನ್ನದೆಲ್ಲವೂ ರಾಷ್ಟ್ರ ಸಮರ್ಪಿತ ಎಂಬ ಭಾವದಿಂದ ಸದಾ ಪ್ರವಾಸಿಯಾಗಿರುವ ಶ್ವೇತ ವಸ್ತ್ರದ ಸಂತ ಸದೃಶ ಪ್ರಚಾರಕರಿಂದ ತೊಡಗಿ, ಸಾವಿರಾರು ಗೃಹಸ್ಥ ಕಾರ್ಯಕರ್ತರ ಸಮರ್ಪಣಾ, ವೀಜಿಗಿಸು ಪ್ರವೃತ್ತಿಯ ಕಾರಣದಿಂದ ಇಂದು ಈ ಮಟ್ಟದ ಸಾಧನೆ ಇಲ್ಲಿ ಸಾಧ್ಯವಾಗಿದೆ. ಈ ಎಲ್ಲದಕ್ಕೂ ಪ್ರೇರಣೆಯಾಗಿ, ಸಾವಿರಾರು ಬೈಠಕ್ ಗಳಿಗೆ ಸಾಕ್ಷಿಯಾಗಿ ನಿಂತಿದ್ದು ಇದೇ “ಪಂಚವಟಿ”.
ಆದರೆ ಇವತ್ತಿನ ಕಾರ್ಯದ ಬೆಳವಣಿಗೆ, ಇಂದಿನ ಅವಶ್ಯಕತೆ, ಎಲ್ಲಕ್ಕಿಂತ ಮುಖ್ಯವಾಗಿ ಐದು ದಶಕಗಳ ಹಿಂದೆ ನಿರ್ಮಾಣವಾದ ಕಟ್ಟಡ ಜೀರ್ಣಗೊಂಡ ಪರಿಣಾಮ ಹೊಸ ಭವನದ ನಿರ್ಮಾಣ ಇವತ್ತಿನ ತುರ್ತು ಆವಶ್ಯಕತೆಯಾಗಿದೆ.
ನಾಗಪುರದಲ್ಲಿ ಸಂಘದ ಕಾರ್ಯಕ್ಕೆ ಮೊದಲ ಬೀಜ ಅಂಕುರವಾದುದು ವಿಜಯದಶಮಿಗೆ. ನಮ್ಮ ಪಂಚವಟಿಯ ನೂತನ ಕಟ್ಟಡ ನಿರ್ಮಾಣದ ಮುಹೂರ್ತ ಕೂಡ ಈ ಪ್ಲವ ನಾಮ ಸಂವತ್ಸರದ ವಿಜಯದಶಮಿಗೆ ಆಗುವುತ್ತಿರುವುದು ಒಂದು ಯೋಗಾಯೋಗ. ಸಂಘದ ಪುತ್ತೂರು ಜಿಲ್ಲೆಯ ಪ್ರತಿಯೊಬ್ಬ ಸ್ವಯಂಸೇವಕರ ಕೊಡುಗೆ, ನಿಧಿ ಸಮರ್ಪಣೆಯ ಮೂಲಕ ಮಾತ್ರ ಈ ಪವಿತ್ರ ಕಾರ್ಯ ನಡೆಯಬೇಕೆಂಬುದು ಹಿರಿಯರ ಅಪೇಕ್ಷೆ.
ಈಗಾಗಲೇ ಈ ಕುರಿತ ಅವಶ್ಯ ನಿಧಿ ಸಂಗ್ರಹಕ್ಕೆ ಯೋಜನೆ ರೂಪಿತಗೊಂಡು ನಿಧಿ ಸಮರ್ಪಣಾ ಅಭಿಯಾನ ಆರಂಭಗೊಂಡಿದೆ. ಈ ಜಿಲ್ಲೆಯಲ್ಲಿ ಸಂಘಕಾರ್ಯಕ್ಕೆ ಬಹು ದೊಡ್ಡ ಶಕ್ತಿ ತುಂಬಿರುವ ಡಾ.ಕಲ್ಲಡ್ಕ ಪ್ರಭಾಕರ ಭಟ್, ಕಜಂಪಾಡಿ ಸುಬ್ರಮಣ್ಯ ಭಟ್, ಎಸ್. ಆರ್. ರಂಗಮೂರ್ತಿಯವರಂಥ ಹಿರಿಯರಿಂದ ತೊಡಗಿ ಮೇಲೆ ಉಲ್ಲೇಖಸಿದ ತನ್ಮಯ್ ನಂತಹ ಬಾಲ ಸ್ವಯಂಸೇವಕರವರೆಗೆ ಈ ಅಭಿಯಾನದಲ್ಲಿ ಶ್ರದ್ದಾ ಪೂರ್ವಕ ತೊಡಗಿಸಿಕೊಂಡಿದ್ದಾರೆ.
✍ ಚಂದ್ರಶೇಖರ್
ಬಂಟ್ವಾಳ ತಾಲೂಕ್ ಸಹ ಬೌದ್ಧಿಕ್ ಪ್ರಮುಖ್
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.