ಭಾರತಕ್ಕೆ ಕಾಂಗ್ರೆಸ್ ಪಕ್ಷ ನೀಡಬಹುದಾಗಿದ್ದ ಒಂದೇ ಉತ್ತಮ ಕೊಡುಗೆಯ ನಿರೀಕ್ಷೆ ಪ್ರಣಬ್ ಮುಖರ್ಜಿಯನುನು ರಾಷ್ಟ್ರಪತಿಯನ್ನಾಗಿ ಆರಿಸುವುದರೊಂದಿಗೆ ಕೊನೆಯಾಯಿತು.
ಮೂರು ಬಾರಿ ಪ್ರಪಂಚದ ಅತೀ ದೊಡ್ಡ ಪ್ರಜಾಪ್ರಭುತ್ವ ರಾಷ್ಟ್ರದ ಪ್ರಧಾನಮಂತ್ರಿ ಸ್ಥಾನದ ಅತೀ ಹತ್ತಿರದಲ್ಲಿದ್ದು, ಪ್ರಧಾನಮಾತ್ರಿಯಾಗುವ ಎಲ್ಲಾ ಅರ್ಹತೆಗಳನ್ನು ಹೊಂದಿದ್ದೂ ಪ್ರಧಾನಮಂತ್ರಿಯಾಗದ ದುರದೃಷ್ಟ ವ್ಯಕ್ತಿ ಭಾರತ ರತ್ನ ಪ್ರಣಬ್ ಮುಖರ್ಜಿ ಅವರು. 1969 ರಲ್ಲಿ ರಾಜ್ಯಸಭೆಗೆ ಆಯ್ಕೆಯಾದಾಗ ಪ್ರಣಬ್ ದಾ ಅವರ ವಯಸ್ಸು ಕೇವಲ 34.
ಅತ್ಯುತ್ತಮ ವಾಕ್ಚಾತುರ್ಯ ಹೊಂದಿದ್ದ ಪ್ರಣಬ್ ಮುಖರ್ಜಿ ನಿರಂತರವಾಗಿ ರಾಜ್ಯಸಭೆಗೆ ಆಯ್ಕೆಯಾಗುವಂತೆ ಇಂದಿರಾ ಜಿ ಜಾಗ್ರತೆ ವಹಿಸಿದ್ದರು. 1973ರಲ್ಲಿ ಕೈಗಾರಿಕಾ ಅಭಿವೃದ್ಧಿ ಖಾತೆಯ ರಾಜ್ಯ ಸಚಿವ ಸ್ಥಾನ. ನಂತರ ನೌಕಾಯಾನ ಮತ್ತು ಸಾರಿಗೆ, ಹಣಕಾಸು ಖಾತೆ ರಾಜ್ಯ ಸಚಿವ, ಕಂದಾಯ ಮತ್ತು ಬ್ಯಾಂಕಿಂಗ್ ಖಾತೆ ಹೀಗೆ ಪ್ರಣಬ್ ಮುಖರ್ಜಿ ರಾಜಕೀಯದಲ್ಲಿ ಒಂದೊಂದು ಮೆಟ್ಟಿಲೇರುತ್ತಾ ಬಂದರು. ಬ್ಯಾಂಕಿಂಗ್ ಕ್ಷೇತ್ರವನ್ನು ರಾಷ್ಟ್ರೀಕರಣಗೊಳಿಸುವ ಇಂದಿರಾ ಗಾಂಧಿಯ ಮಹತ್ವದ ನಿರ್ಧಾರಕ್ಕೆ ಪೂರಕವಾಗಿ ಆ ಕ್ಷೇತ್ರದಲ್ಲಿ ಮುಖರ್ಜಿಯವರು ಮಹತ್ವದ ಬದಲಾವಣೆಗಳನ್ನು ತಂದಿದ್ದರು. ತಮ್ಮ ಕಾರ್ಯನಿರ್ವಹಣಾ ಶೈಲಿಯಿಂದ ಇಂದಿರಾ ಗಾಂಧಿಯ ಆಪ್ತವಲಯದಲ್ಲಿ ಸ್ಥಾನ ಪಡೆದಿದ್ದ ಮುಖರ್ಜಿ 1984 ರ ಹೊತ್ತಿಗೆ ಇಂದಿರಾ ಸಂಪುಟದಲ್ಲಿ ಇಂದಿರಾ ನಂತರದ ಸ್ಥಾನದಲ್ಲಿದ್ದರು.
ವಾಸ್ತವಿಕವಾಗಿ ಇಂದಿರಾ ಗಾಂಧೀ ಹತ್ಯೆಯ ಬಳಿಕ ಪ್ರಧಾನಿಯಾಗಬೇಕಿದ್ದುದು ಬಹುಶ ಪ್ರಣಬ್ ಮುಖರ್ಜಿ ಆಗಿದ್ದರು ಆದರೆ ಶೀಲಾ ದೀಕ್ಷಿತ್,ಬಲರಾಮ್ ಘನಿ,ಉಮಾ ಶಂಕರ್ ದೀಕ್ಷಿತ್ ಮತ್ತು ಶ್ಯಾಮಲಾಲ್ ಯಾದವ್ ಮುಂತಾದವರು ಚರ್ಚಿಸಿ ರಾಜೀವ ಗಾಂಧಿಯವರೇ ಪ್ರಧಾನಿಯಾಗಬೇಕು ಎಂದು ತೀರ್ಮಾನಿಸಿದರು ಮತ್ತು ಅದನ್ನು ರಾಜೀವ್ ಗಾಂಧಿಯವರಿಗೆ ಅದನ್ನು ಮನದಟ್ಟು ಮಾಡಿಸುವ ಕೆಲಸವನ್ನು ಪ್ರಣಬ್ ಮುಖರ್ಜಿಯವರಿಗೆ ವಹಿಸಲಾಯಿತು! ಕಾಂಗ್ರೆಸ್ ನ ಹಿರಿಯ ನಾಯಕರು ರಾಷ್ಟ್ರಪತಿಯ ಅನುಪಸ್ಥಿತಿಯಲ್ಲಿ ಉಪರಾಷ್ಟ್ರಪತಿಗಳಿಂದ ಪ್ರತಿಜ್ಞಾ ವಿಧಿ ಸ್ವೀಕರಿಸುವಂತೆ ರಾಜೀವ್ ಗಾಂಧಿಗೆ ವಿನಂತಿಸಿದಾಗ, ಅಸಾಂವಿಧಾನಕ ಕಾರ್ಯವನ್ನು ನಡೆಸದಂತೆಯೂ ಮತ್ತು ರಾಷ್ಟ್ರಪತಿ ಆಗಮಿಸುವವರೆಗೆ ಕಾಯುವಂತೆಯೂ ಪ್ರಣಬ್ ಮುಖರ್ಜಿ ರಾಜೀವ್ ಗಾಂಧಿಯನ್ನು ವಿನಂತಿಸಿದ್ದರು. ಭಾರತದ ಸಂವಿಧಾನದತ್ತ ಮುಖರ್ಜಿಯು ತೋರಿದ ಗೌರವವನ್ನು ಕಾಂಗ್ರೆಸ್ನ ಕೆಲವು ಹಿರಿಯರು ಉತ್ಪ್ರೇಕ್ಷಿಸಿ ಪ್ರಣಬ್ ಮುಖರ್ಜಿಗೆ ಮಂಧ್ಯಂತರ ಪ್ರಧಾನಿಯಾಗುವ ಆಸೆ ಇದೆ ಎಂಬುದಾಗಿ ಗಾಳಿ ಸುದ್ದಿಯನ್ನು ಹರಡಿದ್ದರು. ಅನನುಭವಿಯಾದ ರಾಜೀವ್ ಗಾಂಧಿಗೆ ಆಡಳಿತ ನಡೆಸಲು ಅನುಭವಿಯಾದ ಪ್ರಣಬ್ ಮುಖರ್ಜಿಯ ಅತೀವ ಅವಶ್ಯಕತೆ ಇತ್ತು. ಅದರ ಪರಿಣಾಮವಾಗಿ 1984 ರ ಅಕ್ಟೋಬರ್ ನಲ್ಲಿ ಪ್ರಣಬ್ ಮುಖರ್ಜಿ ರಾಜೀವ್ ಗಾಂಧಿಯ ಸಂಪುಟದಲ್ಲಿ ಸ್ಥಾನವನ್ನೂ ಪಡೆದಿದ್ದರು.
ಆದರೆ ರಾಜೀವ್ ಗಾಂಧಿ ಮತ್ತು ಪ್ರಣಬ್ ಮುಖರ್ಜಿಯ ಸಂಬಂಧದಲ್ಲಿ ಹುಳಿಹಿಂಡಿದ ಹಲವು ಮುಖಂಡರು ಮುಖರ್ಜಿ ಪ್ರಧಾನಿ ಸ್ಥಾನದ ಆಕಾಂಕ್ಷಿ ಎಂದು ರಾಜೀವ್ರ ಕಿವಿಯನ್ನೂ ತುಂಬಿದ್ದರು. ಪರಿಣಾಮವಾಗಿ ರಾಜೀವ್ ಗಾಂಧಿ ಪ್ರಣಬ್ ಮುಖರ್ಜಿಯನ್ನು ಪ್ರತಿಸ್ಪರ್ಧಿಯಂತೆ ಕಂಡು, ಮುಂದಿನ ಚುನಾವಣೆಯಲ್ಲಿ ವಿಜೇತರಾದಾಗ ಅವರನ್ನು ಸಂಪುಟದಿಂದ ಹೊರಗೆ ತಳ್ಳಿದ್ದರು. ಒಂದು ಹಂತದಲ್ಲಿ ಕೇಂದ್ರ ಸಂಪುಟದಲ್ಲಿ ಎರಡನೆಯ ಸ್ಥಾನದಲ್ಲಿದ್ದ ಪ್ರಣಬ್ ಮುಖರ್ಜಿಯನ್ನು,.ಪಶ್ಚಿಮ ಬಂಗಾಳದ ರಾಜ್ಯ ಕಾಂಗ್ರೆಸ್ನ ಉಸ್ತುವಾರಿಯನ್ನಾಗಿ ನೇಮಿಸಲಾಗಿತ್ತು. ಬಳಿಕ ಅವರನ್ನು ಕಾಂಗ್ರೆಸ್ ಪಕ್ಷದಿಂದಲೇ ಉಚ್ಚಾಟಿಸಲಾಯಿತು. ಇಷ್ಟೆಲ್ಲಾ ಅನ್ಯಾಯವನ್ನು ಸಹಿಸಿಕೊಂಡ ಪ್ರಣಬ್ ಮುಖರ್ಜಿ ಯಾವುದೇ ಸಂದರ್ಭದಲ್ಲಿಯೂ ಪಕ್ಷವನ್ನು ವಿರೋಧಿಸಿ ಹೇಳಿಕೆಗಳನ್ನು ನೀಡಲಿಲ್ಲ ಎಂಬುದು ಗಮನಿಸಬೇಕಾದ ಅಂಶ.
ಆದರೆ ಮುಂದೆ ನಡೆದ ಕೆಲವು ರಾಜಕೀಯ ಬೆಳವಣಿಗೆಗಳಿಂದಾಗಿ ರಾಜೀವ್ ಗಾಂಧಿ ಸ್ವತಃ ಪ್ರಣಬ್ ಮುಖರ್ಜಿಯನ್ನು ಪಕ್ಷಕ್ಕೆ ಆಹ್ವಾನಿಸಿದರು. ರಾಜೀವ್ ಗಾಂಧಿಯ ಅನಿರೀಕ್ಷಿತ ಸಾವಿನ ಬಳಿಕ ಪ್ರಧಾನಿ ಸ್ಥಾನ ತುಂಬಿದ ನರಸಿಂಹ ರಾವ್ ಅವರಿಗೆ ಪ್ರಣಬ್ ಮುಖರ್ಜಿಯ ಪೂರ್ಣ ಸಾಮರ್ಥ್ಯದ ಅರಿವಿತ್ತು. ಅವರು 1993 ರಲ್ಲಿ ಪ್ರಣಬ್ ಮುಖರ್ಜಿ ರಾಜ್ಯ ಸಭೆಗೆ ಆಯ್ಕೆಯಾವುವಂತೆ ನೋಡಿಕೊಂಡರು ಮತ್ತು ಅವರಿಗೆ ವಿದೇಶಾಂಗ ಖಾತೆಯ ಜವಾಬ್ದಾರಿಯನ್ನೂ ನೀಡಿದ್ದರು. 1998 ರಲ್ಲಿ ಕಾಂಗ್ರೆಸ್ ಅಧ್ಯಕ್ಷರಾಗುವಂತೆ ಸೋನಿಯಾ ಗಾಂಧಿಯ ಮನವೊಲಿಸಿದವರಲ್ಲಿ ಪ್ರಣಬ್ ಮುಖರ್ಜಿ ಪ್ರಮುಖರಾಗಿದ್ದರು.
2004 ರಲ್ಲಿ ಯುಪಿಎ ಸರಕಾರ ರಚಿಸುವಾಗ ಪ್ರಧಾನಮಂತ್ರಿ ಸ್ಥಾನಕ್ಕೆ ಹಲವಾರು ಪ್ರಣಬ್ ಮುಖರ್ಜಿಯ ಹೆಸರನ್ನೂ ಸೂಚಿಸಿದ್ದರು. ಕೊನೆಗೆ ಅಧಿಕಾರತ್ಯಾಗದ ನಾಟಕವಾಡಿದ ಸೋನಿಯಾ ಗಾಂಧಿ ಮನಮೋಹನ್ ಸಿಂಗ್ ರನ್ನು ಪ್ರಧಾನಮಂತ್ರಿಯಾಗಿ ಆಯ್ಕೆ ಮಾಡಿದ್ದರು. ತಾವೇ ರಿಸರ್ವ್ ಬ್ಯಾಂಕ್ ಗೆ ಅಧ್ಯಕ್ಷರಾಗಿ ಆಯ್ಕೆ ಮಾಡಿದ್ದ ವ್ಯಕ್ತಿಯ ಸಂಪುಟದಲ್ಲಿ ಪ್ರಣಬ್ ಮುಖರ್ಜಿ ಸಚಿವರಾದರು. ಸಚಿವರಾಗಿ ಅತೀ ಅನುಭವವನ್ನು ಹೊಂದಿದ್ದ ವ್ಯಕ್ತಿಯೊಬ್ಬರು ತಮಗೆ ಅನುಭವವಿರುವ ವಿದೇಶಾಂಗ, ಅಥವಾ ವಿತ್ತ ಖಾತೆಯನ್ನು ವಹಿಸಿಕೊಳ್ಳುತ್ತೇನೆ ಅನುಭವವಿಲ್ಲದ ರಕ್ಷಣಾ ಖಾತೆ ಬೇಡ ಎಂದು ವಿನಂತಿಸಿದರೂ, ಕೊನೆಗೆ ಅವರು ಬೇಡ ಎಂದು ಹೇಳಿದ್ದ ರಕ್ಷಣಾ ಖಾತೆಗೆ ಸಚಿವರಾದರು. ಅವರು ರಕ್ಷಣಾ ಖಾತೆಯ ಸಚಿವಾದ ವಿಷಯ ಅವರಿಗೆ ಸ್ವತಃ ಪ್ರಮಾಣವಚನ ಸ್ವೀಕಾರ ಸಮಾರಂಭದಲ್ಲಿ ತಿಳಿದಿತ್ತು!!
2007 ರಲ್ಲಿ ಪ್ರಣಬ್ ಮುಖರ್ಜಿಯ ಹೆಸರು ರಾಷ್ಟ್ರಪತಿ ಸ್ಥಾನಕ್ಕೆ ಕೇಳಿ ಬಂದಿತ್ತಾದರೂ ಅದು ಕೈಗೂಡಲಿಲ್ಲ. ಆ ಸಂದರ್ಭದಲ್ಲಿ ಸ್ವತಃ ಪ್ರಣಬ್ ಮುಖರ್ಜಿ ಯವರು ಅಧ್ಯಕ್ಷ ಸ್ಥಾನಕ್ಕೆ ಮನಮೋಹನ್ ಸಿಂಗ್ ಆಯ್ಕೆಯಾದರೆ ತಾನು ಪ್ರಧಾನಿಯಾಗಬಹುದೆಂದು ಆಲೋಚಿಸಿದ್ದರು ಎಂಬುದಾಗಿ ತಮ್ಮ ಆತ್ಮ ಕಹಿಯಲ್ಲಿ ಬರೆದುಕೊಂಡಿದ್ದಾರೆ. ಹಲವಾರು ಬಾರಿ ಕಾಂಗ್ರೆಸ್ನ ದ್ವೇಷ ರಾಜಕೀಯವನ್ನು ವಿರೋಧಿಸಿದ್ದು ಕೂಡ ಪ್ರಣಬ್ರ ಪ್ರಧಾನ ಮಂತ್ರಿ ಪದವಿಯ ದಾರಿಗೆ ಅಡ್ಡವಾಗಿನಿಂತಿರಲೂ ಬಹುದು. 2004 ರಲ್ಲಿ ದೀಪಾವಳಿಯ ದಿನ ಕಂಚಿ ಸ್ವಾಮಿಗಳನ್ನು ಬಂಧಿಸಿದ ಕ್ರಮಕ್ಕೆ ವಿರೋಧವನ್ನು ವ್ಯಕ್ತಪಡಿಸಿದ್ದ ಮುಖರ್ಜಿ ಯವರು ಸ್ವಾಮೀಜಿಯನ್ನು ಕೂಡಲೇ ಜಾಮೀನಿನ ಮೂಲಕ ಬಿಡುಗಡೆಗೊಳಿಸಲು ಸೂಚಿಸಿದ್ದರು.
ಕೊನೆಗೆ 2012 ರಲ್ಲಿ ಪ್ರಣಬ್ ಮುಖರ್ಜಿ ಭಾರತದ ರಾಷ್ಟ್ರಪತಿಯಾಗುವುದರೊಂದಿಗೆ ಅವರ ರಾಜಕೀಯ ಭವಿಷ್ಯವನ್ನು ಕುಟುಂಬ ರಾಜಕಾರಣ ದ ರಾಷ್ಟ್ರೀಯ ಪಕ್ಷವು ಮುಗಿಸಿ ಹಾಕಿತ್ತು. 2014 ರ ಚುನಾವಣೆಯಲ್ಲಿ ರಾಹುಲ್ ಗಾಂಧಿಯ ಪ್ರಧಾನ ಮಂತ್ರಿಯ ಪದವಿಯ ಮಧ್ಯೆ ಇದ್ದ ಏಕೈಕ ಅಡ್ಡಿ ಯನ್ನು ಸೋನಿಯಾ ಗಾಂಧಿ ಪ್ರಣಬ್ ಮುಖರ್ಜಿಯನ್ನು ರಾಷ್ಟ್ರಪತಿಯನ್ನಾಗಿಸುವುದರೊಂದಿಗೆ ನಿವಾರಿಸಿದರು. ಖಂಡತುಂಡವಾಗಿ ನಮ್ಮ ಅಭಿಪ್ರಾಯವನ್ನು ಸಮರ್ಥಿಸುವ ಮತ್ತು ತಪ್ಪು ನಿರ್ದಾರಗಳನ್ನು ಖಂಡಿಸುವ ಪ್ರಣಬ್ ಮುಖರ್ಜಿಯ ಬದಲಿಗೆ ಮಾತನ್ನೇ ಆಡದ ಮನಮೋಹನ್ ಸಿಂಗ್ ಸೋನಿಯಾ ಗಾಂಧಿಗೆ ಆಪ್ತರಾಗಿ ಕಂಡದ್ದು ಸುಳ್ಳಲ್ಲ. ರಾಷ್ಟಪತಿ ಹುದ್ದೆಗೆ ಘನತೆಯನ್ನು ನೀಡಿದವರಲ್ಲಿ ಪ್ರಣಬ್ ಮುಖರ್ಜಿ ಎರಡನೇಯವರಾದರು, ಮಾತ್ರವಲ್ಲದೆ ವರ್ಷಗಳಿಂದ ಕೊಳೆಯುತ್ತಿದ್ದ ಉಗ್ರರ ಕ್ಷಮಾದಾನದ ಅರ್ಜಿಗಳನ್ನು ಕೆಲವೇ ದಿನಗಳಲ್ಲಿ ವಜಾಗೊಳಿಸಿ ರಾಷ್ಟ್ರಪತಿ ಸ್ಥಾನದ ಶಕ್ತಿಯನ್ನೂ ತೋರಿಸಿಕೊಟ್ಟರು.
ಪಕ್ಷ ಬೇಧವಿದ್ದಾಗಲೂ ನರೇಂದ್ರ ಮೋದಿ ಸರ್ಕಾರದೊಂದಿಗೆ ಅವರ ಸಂಬಂಧ ತುಂಬಾ ಚೆನ್ನಾಗಿತ್ತು. ರಾಷ್ಟ್ರದ ಹಿತದ ಮುಂದೆ ಅವರು ಪಕ್ಷ ಬೇಧವನ್ನು ಇಂದಿಗೂ ಬರಗೊಡಲಿಲ್ಲ. ಸರಳ ಸಜ್ಜನ ನೇರ ಮತ್ತು ಮೇರು ವ್ಯಕ್ತಿತ್ವದ ರಾಜಕಾರಣಿಯಾದ ಪ್ರಣಬ್ ಮುಖರ್ಜಿಗೆ 1991, 2004 ಮತ್ತು 2009 ಹೀಗೆ ಮೂರು ಬಾರಿ ಪ್ರಧಾನ ಮಂತ್ರಿಯ ಸ್ಥಾನವನ್ನು ರಾಷ್ಟ್ರೀಯ ಪಕ್ಷ ನಿರಾಕರಣವಾಗಿ ನಿರಾಕರಿಸಿದರೂ, ಕೊನೆಯವರೆಗೂ ಪಕ್ಷ ನೀಡಿದ ಜವಾಬ್ದಾರಿಗಳನ್ನು ನಿಷ್ಠೆಯಿಂದ ನಿಭಾಯಿಸಿದ್ದು ಮಾತ್ರವಲ್ಲದೆ ಪ್ರತೀ ಹುದ್ದೆಗೂ ಘನತೆಯನ್ನು ತಂದುಕೊಟ್ಟಿದ್ದರು.
ಕುಟುಂಬ ಮತ್ತು ಹೊಗಳು ಭಟರಲ್ಲದವರನ್ನು ಯಾವತ್ತಿಗೂ ಕಾಲಕಸದಂತೆ ಕಾಣುವ ಕಾಂಗ್ರೆಸ್ ಪಕ್ಷ ಕೊನೆಗೂ ಪ್ರಣಬ್ ಮುಖರ್ಜಿ ಅವರನ್ನು ಗೌರವದಿಂದ ನೋಡಲಿಲ್ಲ. ಭಾರತ ದೇಶಕ್ಕೆ ಪ್ರಣಬ್ ಮುಖರ್ಜಿ ಸಲ್ಲಿಸಿದ ಸೇವೆಯನ್ನು ಗುರುತಿಸಿದ ನರೇಂದ್ರ ಮೋದಿ ಸರ್ಕಾರ 2019 ರ “ಭಾರತ ರತ್ನ” ಪ್ರಶಸ್ತಿಯನ್ನು ನೀಡಿ ಗೌರವಿಸಿತು. ಗಮನಿಸಬೇಕಾದ ಮುಖ್ಯ ಅಂಶವೆಂದರೆ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಕಾಂಗ್ರೆಸ್ ಪಕ್ಷದ ಹಂಗಾಮೀ ಅಧ್ಯಕ್ಷರಾದ ಸೋನಿಯಾ ಗಾಂಧಿ ಮತ್ತು ಮಾಜಿ ಅಧ್ಯಕ್ಷರಾದ ರಾಹುಲ್ ಗಾಂಧಿ ಇಬ್ಬರೂ ಹಾಜರಿರಲಿಲ್ಲ. ಭಾರತಕ್ಕೆ ಒಬ್ಬ ಉತ್ತಮ ಪ್ರಧಾನಿಯನ್ನು ನೀಡಬಹುದಾಗಿದ್ದ ಅತ್ಯಪೂರ್ವ ಉಪಕಾರವನ್ನು ಮಾಡುವ ಆ ಅವಕಾಶವನ್ನೂ ಕಾಂಗ್ರೆಸ್ ಕಳೆದುಕೊಂಡಿತ್ತು .
✍️ ದೀಪಾ ಜಿ. ಭಟ್
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.