ಖಾಸಗಿ ಶಿಕ್ಷಣ ಸಂಸ್ಥೆಗಳೆಂದರೆ ಬರೀ ಅಂಕಗಳಿಗೆ ಅನುಗುಣವಾಗಿ ದಾಖಲಾತಿ ಮಾಡಿ, ಶಿಕ್ಷಣವನ್ನು ಹಣದ ತಟ್ಟೆಯಲ್ಲಿ ತೂಗಿಬಿಡುವಂತವುಗಳು ಅನ್ನುವ ಮಾತಿಗೆ ವ್ಯತಿರಿಕ್ತವಾಗಿ ಪುತ್ತೂರಿನ ಹೃದಯ ಭಾಗದ ಪಕ್ಕದಲ್ಲೇ ಇರುವ ನೆಹರೂನಗರದಲ್ಲಿ ನೆಲೆನಿಂತಿರುವ ವಿವೇಕಾನಂದ ಪದವಿ ಪೂರ್ವ ಕಾಲೇಜು ಕಳೆದ ಹಲವು ವರುಷಗಳಿಂದ ಗ್ರಾಮೀಣ ಹಾಗೂ ನಗರ ಪ್ರದೇಶದ ವಿದ್ಯಾರ್ಥಿಗಳ ಶೈಕ್ಷಣಿಕ ಆಶೋತ್ತರಗಳನ್ನು ಈಡೇರಿಸುತ್ತಾ ಬಂದಿದೆ.
ಜ್ಞಾನಾರ್ಜನೆಗೆಂದು ಬರುವ ವಿದ್ಯಾರ್ಥಿಗಳಿಗೆ ಕೇವಲ ಪುಸ್ತಕದ ಅದ್ಭುತಗಳನ್ನು ಕಲಿಸುವುದು ಅಷ್ಟೇ ಅಲ್ಲದೆ ಆಕಾಶದ ಹಕ್ಕಿಗಳನ್ನು, ಹಾರಾಡುವ ದುಂಬಿಗಳನ್ನು, ಕಾನನದ ಹೂವುಗಳನ್ನು ಧ್ಯಾನಿಸಲು, ಸ್ವಾಭಿಮಾನದ ಬಾಳ್ವೆ ಮುಖ್ಯ. ಹಾಗೆಯೇ ಕಣ್ಣೀರಿನಲ್ಲಿ ಅವಮಾನ ಇಲ್ಲ ಎನ್ನುತ್ತಾ ಆತ್ಮವಿಶ್ವಾಸ ಹೊಂದುವುದನ್ನು ಕಲಿಸುವುದು, ಗೆದ್ದಾಗ ಪ್ರಶಂಸೆ, ಸೋತಾಗ ಸೋಲೇ ಗೆಲುವಿನ ಸೋಪಾನ ಎಂಬುವುದನ್ನು ತೋರಿಸಿಕೊಟ್ಟು, ಶಿಕ್ಷಣ ಎಂದರೆ ಅದು ವಿದ್ಯಾರ್ಥಿಯ ಸರ್ವಾಂಗೀಣ ಬೆಳವಣಿಗೆ ಎಂಬ ನಿಲುವಿನೊಂದಿಗೆ ಮುಂದಡಿ ಹೆಜ್ಜೆಯಿಡುತ್ತಿರುವ ಸಂಸ್ಥೆಯೆಂಬ ಹೆಗ್ಗಳಿಕೆಗೆ ಪಾತ್ರವಾಗಿದೆ.
ಇಲ್ಲಿನ ಸಾಧನೆಗಳನ್ನು ಮನಗಂಡು ದೂರ -ದೂರದ ಜಿಲ್ಲೆಗಳಿಂದ ವಿದ್ಯಾಭ್ಯಾಸಕ್ಕಾಗಿ ಸಂಸ್ಥೆಯನ್ನು ಆಯ್ದುಕೊಳ್ಳುವ ಪರಿಪಾಠ ಇಂದು ಮೊನ್ನೆಯದಲ್ಲ. ಇದೇ ಭರವಸೆಯಲ್ಲಿ ಕಳೆದ ಒಂದು ವರ್ಷದ ಹಿಂದೆ ದೂರದ ಊರಾದ ಹಾಸನ ಜಿಲ್ಲೆಯ ಹೊಳೆನರಸೀಪುರದಿಂದ ಆಗಮಿಸಿ ಇಲ್ಲಿ ದಾಖಲಾತಿ ಪಡೆದಿದ್ದ ವಿದ್ಯಾರ್ಥಿ ಮನೋಜ್ ಎಂಬ ಪ್ರತಿಭಾನ್ವಿತ ಹುಡುಗನ ಬಗ್ಗೆ ಮಾತನಾಡಲೇಬೇಕು. ಈ ಬಾರಿಯ ದ್ವಿತೀಯ ಪಿಯುಸಿ ವಿಜ್ಞಾನ ವಿಭಾಗದಲ್ಲಿ 600 ಕ್ಕೆ 600 ಅಂಕಗಳನ್ನು ಪಡೆದುಕೊಂಡ ಆ ವಿದ್ಯಾರ್ಥಿಯ ಮೊಗದಲ್ಲಿ ಪರಿಶ್ರಮದ ಸಾರ್ಥಕತೆಯಿದೆ. ಆ ಸಾರ್ಥಕತೆಯ ಬೆನ್ನಿಗೆ ದಾನಿಯೊಬ್ಬರ ಮಾನವೀಯತೆಯ ನೆರಳಿದೆ.
ಹೌದು, ನಾನು ಮಾತಾನಾಡುತ್ತಿರುವುದು ವಿವೇಕಾನಂದ ಪದವಿ ಕಾಲೇಜಿನಲ್ಲಿ ಭೌತಶಾಸ್ತ್ರ ಉಪನ್ಯಾಸಕರಾಗಿರುವ ಶಿವಪ್ರಸಾದ್ ಇವರ ಬಗ್ಗೆ. ಇವರು ಮೂಲತ ಪುತ್ತೂರಿನ ಕೊಡಿಪ್ಪಾಡಿಯವರಾಗಿದ್ದು, ತನ್ನ ಮಗಳ ವಿದ್ಯಾಭ್ಯಾಸವು ಅವಳ ಪ್ರತಿಭೆಯ ಆಧಾರದಲ್ಲಿ ಪದವಿ ಪೂರ್ವ ಕಾಲೇಜಿನಲ್ಲಿ ಲಭ್ಯವಿರುವ ಉಚಿತ ಶಿಕ್ಷಣದಲ್ಲಿ ಸಾಗುತ್ತಿರುವುದರಿಂದ, ಅದೇ ಶುಲ್ಕದ ಮೊತ್ತವನ್ನು ಇನ್ನೋರ್ವ ಬಡ ಹಾಗೂ ಪ್ರತಿಭಾನ್ವಿತ ವಿದ್ಯಾರ್ಥಿಯ ಸಂಪೂರ್ಣ ಶುಲ್ಕಕ್ಕೆ ಒದಗಿಸಿ, ಆ ಹುಡುಗನ ಭವಿಷ್ಯಕ್ಕೆ ನೆರವಾದ ಅಪೂರ್ವ ವ್ಯಕ್ತಿತ್ವದವರು. ಶ್ರೀಯುತರ ಮಾನವೀಯತೆಗೊಂದು ಮೌಲ್ಯ ಸಿಕ್ಕಿದ್ದು ಅದೇ ಹುಡುಗ 600 ರಲ್ಲಿ 600 ಅಂಕ ತೆಗೆದ ವಿದ್ಯಾರ್ಥಿಗಳಲ್ಲಿ ಒಬ್ಬನಾದಾಗ…..!
ಸಂಸ್ಥೆಯ ಮಾನವೀಯತೆಯ ನಿಲುವಿಗೆ ಇನ್ನೊಂದು ಉದಾಹರಣೆ ಇತ್ತೀಚೆಗಷ್ಟೇ ಚಿಕ್ಕಮುಡ್ನೂರು ಗ್ರಾಮದ ಕುಂಬುರ್ಗ ನಿವಾಸಿ ಗೋಪಾಲ ಶೆಟ್ಟಿಯವರ ಮನೆ ಭಾಗಶಃ ಕುಸಿದು ಬಿದ್ದು ವಾಸ್ತವ್ಯಕ್ಕೆ ಕಷ್ಟ ಪಟ್ಟ ಸಂದರ್ಭದಲ್ಲಿ, ಆ ಕುಟುಂಬದ ಎಸೆಸಲ್ಸಿ ವಿದ್ಯಾರ್ಥಿನಿಯಾದ ದೀಕ್ಷಾಳಿಗೆ ಸಾಂತ್ವನದ ಮಾತುಗಳನ್ನಾಡಿ, ಮುಂದಿನ ವಿದ್ಯಾಭ್ಯಾಸಕ್ಕೆ, ಪಿಯುಸಿ ಶಿಕ್ಷಣದ ಸಂಪೂರ್ಣ ವೆಚ್ಚವನ್ನು ಭರಿಸುವುದಾಗಿ ಮಾತು ಕೊಟ್ಟ ಕಾಲೇಜಿನ ಪ್ರಾಂಶುಪಾಲರ ನುಡಿಯಂತೆ ಇದೀಗ ಕುಮಾರಿ ದೀಕ್ಷಾ ಪ್ರಥಮ ಪಿಯುಸಿಗೆ ಪ್ರವೇಶಾತಿಯನ್ನು ಪಡೆದಿದ್ದಾಳೆ. ಆಕೆಯ ಕಂಗಳಲ್ಲಿದ್ದ ಸಾವಿರ ಸಾವಿರ ಕನಸುಗಳ ಸಾಕಾರಕ್ಕೆ ಪಣತೊಟ್ಟ ವಿವೇಕಾನಂದ ವಿದ್ಯಾಸಂಸ್ಥೆಗೆ ನಾವು ಚಿರಋಣಿಗಳು ಎನ್ನುತ್ತಾರೆ ದೀಕ್ಷಾಳ ಕುಟುಂಬಸ್ಥರು. ಶಿಕ್ಷಣಕ್ಕೆ ಬಡತನ ಅಡ್ಡಿಯಾಗದಿರಲಿ ಅನ್ನುವ ಕೈಕಂರ್ಯದಲ್ಲಿ ನಿರತರಾಗಿರುವ ವಿವೇಕಾನಂದ ವಿದ್ಯಾಸಂಸ್ಥೆಯು ಕಳೆದ ಎರಡು ವರುಷಗಳ ಹಿಂದೆ ಕೊಡಗು ಪ್ರದೇಶದಲ್ಲಿ ಭೀಕರ ನೆರೆ ಪ್ರವಾಹದ ಸಂದರ್ಭದಲ್ಲಿ ತಮ್ಮ ಸೂರುಗಳನ್ನು ಕಳೆದುಕೊಂಡ ಕುಟುಂಬದ ಮಕ್ಕಳಿಗೆ ಐದನೇ ತರಗತಿಯಿಂದ ತಾಂತ್ರಿಕ ಶಿಕ್ಷಣದವರೆಗೆ ಸಂಪೂರ್ಣ ಉಚಿತ ಶಿಕ್ಷಣವನ್ನು ಘೋಷಿಸಿತ್ತು.
ಮಾನವೀಯತೆ ಮೀರಿ ಬೇರೊಂದಿಲ್ಲ ಎನ್ನುವ ನಿಲುವನ್ನು ಹೊಂದಿರುವ ಸಂಸ್ಥೆಯು ಮುಂಬರುವ ದಿನಗಳಲ್ಲಿ ಉತ್ತರೋತ್ತರ ಶ್ರೇಯಸ್ಸನ್ನು ಪಡೆಯಲಿ, ಇನ್ನಷ್ಟು ಸಮಾಜಮುಖಿ ಕೆಲಸಗಳನ್ನು ಮಾಡಲಿ ಅನ್ನುವುದು ಈ ಎಲ್ಲಾ ವಿದ್ಯಾರ್ಥಿಗಳ ಕುಟುಂಬದವರು ಹಾಗೂ ಸಂಸ್ಥೆಯ ಉದಾತ್ತ ಗುಣಗಳ ಬಗ್ಗೆ ಅರಿತಿರುವ ಹಲವರ ಮನದುಂಬಿದ ಹಾರೈಕೆ.
ಹರ್ಷಿತಾ ಪಿ.
ಉಪನ್ಯಾಸಕಿ, ವಿವೇಕಾನಂದ ಪದವಿಪೂರ್ವ ಕಾಲೇಜು, ಪುತ್ತೂರು
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.