ಇತ್ತೀಚೆಗಷ್ಟೇ ಯುನೆಸ್ಕೊ ವಿಶ್ವ ಪಾರಂಪರಿಕ ತಾಣಗಳ ಪಟ್ಟಿಯಲ್ಲಿ ಸ್ಥಾನವನ್ನು ಪಡೆದ ಭಾರತದ ದೇವಾಲಯವೇ ರುದ್ರೇಶ್ವರ ರಾಮಪ್ಪ ದೇವಾಲಯ. ದಕ್ಷಿಣ ಭಾರತದ ತೆಲಂಗಾಣದ ಪಾಲಂಪೇಟೆ ಗ್ರಾಮದ ರಾಮಪ್ಪ ದೇವಾಲಯವು ಇತ್ತೀಚೆಗಷ್ಟೇ ಜುಲೈ 25ರಂದು ಯುನೆಸ್ಕೊ ವಿಶ್ವ ಪಾರಂಪರಿಕ ತಾಣಗಳ ಪಟ್ಟಿಯಲ್ಲಿ ಸ್ಥಾನವನ್ನು ಪಡೆದುದಾಗಿ ಘೋಷಿಸಲ್ಪಟ್ಟಿತು. ದಕ್ಷಿಣ ಭಾರತವನ್ನಾಳಿದ್ದ ಪ್ರಬಲ ರಾಜವಂಶಗಳಲ್ಲಿ ಒಂದಾದ ಕಾಕತೀಯ ಅರಸರ ಕೊಡುಗೆಯಾಗಿದೆ ಈ ರಾಮಪ್ಪ ದೇವಾಲಯ.
ರುದ್ರೇಶ್ವರ ರಾಮಪ್ಪ ದೇವಾಲಯದ ವಿಶೇಷತೆಗಳು
ಈ ದೇವಾಲಯವು ಇದನ್ನು ನಿರ್ಮಿಸಿದ ಶಿಲ್ಪಿಯ ಹೆಸರಿನಿಂದ ಪ್ರಸಿದ್ಧವಾಗಿದೆ
ದೇವಾಲಯವನ್ನು ಕಾಕತೀಯ ಅರಸ ಗಣಪತಿ ದೇವಾ ಅವರ ಆಡಳಿತದ ಸಂದರ್ಭದಲ್ಲಿ ನಿರ್ಮಿಸಲಾಯಿತು. ದೇವಾಲಯವನ್ನು ರಾಮಪ್ಪ ಶತಪಥಿ ಎಂಬ ವಾಸ್ತು ಶಿಲ್ಪಿಯು ನಿರ್ಮಿಸಿದ್ದರು. ಆದ್ದರಿಂದಲೇ ಇಲ್ಲಿನ ದೇವಾಲಯಗಳ ಸಮೂಹವನ್ನು ರಾಮಪ್ಪ ದೇವಾಲಯವೆಂದು ಕರೆಯಲಾಗುತ್ತದೆ. ಇವುಗಳಲ್ಲಿ ರುದ್ರೇಶ್ವರ ಮಂದಿರವು ಪ್ರಸಿದ್ಧವಾಗಿದೆ,ಯಾಕೆಂದರೆ ಈ ದೇವಾಲವು ಸೇನಾಪತಿ ರಿಚೇಲಾರ ರುದ್ರರ ಉಸ್ತುವಾರಿಯಲ್ಲಿ ನಿರ್ಮಿಸಲ್ಪಟ್ಟಿತು. ಇಲ್ಲಿ ದೇವಾಲಯವು ಆಳುವ ಅರಸನ ಬದಲಾಗಿ ನಿರ್ಮಿಸಿದ ಶಿಲ್ಪಿ ಮತ್ತು ಉಸ್ತುವಾರಿಯನ್ನು ಹೊತ್ತ ಸೇನಾಧಿಪತಿಯ ಹೆಸರಿನೊಂದಿಗೆ ಪ್ರಸಿದ್ಧವಾಗಿದೆ. ಇಲ್ಲಿನ ಪ್ರಧಾನ ದೇವರು ರಾಮಲಿಂಗೇಶ್ವರ ಸ್ವಾಮಿಗಳಾಗಿದ್ದರೂ, ಕಾರ್ಯವನ್ನು ಪೂರ್ಣಗೊಳಿಸಿದ ಶಿಲ್ಪಿ ರಾಮಪ್ಪ ಅವರ ಹೆಸರನ್ನು ದೇವಸ್ಥಾನಕ್ಕೆ ಇಡಲಾಗಿದೆ.
ದೇವಾಲಯವು ತೇಲುವ ಇಟ್ಟಿಗೆಗಳಿಂದ ನಿರ್ಮಿಸಲ್ಪಟ್ಟಿದೆ
ಮಂದಿರದ ನಿರ್ಮಾಣದಲ್ಲಿ ಬಳಸಲ್ಪಟ್ಟ ಇಟ್ಟಿಗೆಯು ಅತ್ಯಂತ ಹಗುರವಾಗಿದ್ದು “ಇದು ತೆಲಂಗಾಣದಲ್ಲಿ ಶಾತವಾಹನರ ಕಾಲದಿಂದ ಆರಂಭಗೊಂಡು ವಿವಿಧ ರೀತಿಯ ಇಟ್ಟಿಗೆಗಳ ಪ್ರಯೋಗಗಳ ಪರಾಕಾಷ್ಠೆಯಾಗಿದೆ. ಈ ತೇಲುವ ಇಟ್ಟಿಗೆಗಳನ್ನು ಅಕೇಶಿಯ ಮರ, ಚಾಫ್, ಮೈರೊಬಾಲನ್ ಮತ್ತು ಉಶೀರಾ ಮಿಶ್ರಿತ ಮಣ್ಣಿನಿಂದ ತಯಾರಿಸಲಾಗುತ್ತದೆ, ಇದನ್ನು ವಟ್ಟಿ ವೆರ್ಲು ಎಂದೂ ಕರೆಯುತ್ತಾರೆ, ಇದು ಇಟ್ಟಿಗೆಯನ್ನು ತುಂಬಾ ಹಗುರವಾಗಿಸುತ್ತದೆ ಮತ್ತು ಅದನ್ನು ನೀರಿನ ಮೇಲೆ ತೇಲುವಂತೆ ಮಾಡುತ್ತದೆ” ಎಂದು ಪುರಾತತ್ವಶಾಸ್ತ್ರಜ್ಞ ಇಎಸ್ ನಾಗಿ ರೆಡ್ಡಿ ಹೇಳುತ್ತಾರೆ.
ಗೋಡೆಗಳಲ್ಲಿ ಕೆತ್ತಲ್ಪಟ್ಟಿರುವ ರಾಮಾಯಣ ಮತ್ತು ಶಿವ ಪುರಾಣದ ಕಥನಗಳು
ದೇವಾಲಯದ ಗರ್ಭಗುಡಿ ಮತ್ತು ಇತರ ಭಿತ್ತಿಗಳಲ್ಲಿ ರಾಮಾಯಣ ಮತ್ತು ಶಿವ ಪುರಾಣಗಳ ಕಥೆಗಳು ಮಾತ್ರವಲ್ಲದೆ ಇತರ ಕಥನಗಳ ಶಿಲ್ಪಗಳನ್ನೂ ಕೆತ್ತಲಾಗಿದೆ. ಕಥೆಗಳು ಮಾತ್ರವಲ್ಲದೆ,ಅಪ್ಸರೆಯರು ಮತ್ತು ಪ್ರಾಣಿಗಳ ಮೂರ್ತಿಗಳನ್ನೂ ಕೆತ್ತನೆ ಮಾಡಲಾಗಿದೆ.
ಕೆತ್ತನೆಗಳು
ಭಿತ್ತಿಗಳು ಮತ್ತು ಮೇಲ್ಛಾಣಿಯಲ್ಲಿನ ಕೆತ್ತನೆಗಳು ಮಾತ್ರವಲ್ಲದೆ ದೇವಾಲಯದಲ್ಲಿನ ಕಂಬಗಳು ಕೂಡಾ ಸುಂದರ ಕೆತ್ತನೆಗಳಿಂದ ಕೂಡಿವೆ. ಈ ಕಂಬಗಳು ಸಂಗೀತದ ಸ್ವರಗಳನ್ನು ಹೊರಡಿಸುತ್ತವೆ ಎಂದರೆ ಅಚ್ಚರಿಯಾಗಬಹುದು. ಆದರೆ ಈ ಕಂಬಗಳು ಅಪ್ಸರೆಯರ ಕೆತ್ತನೆಯನ್ನು ಎಷ್ಟು ಸುಂದರವಾಗಿ ಹೊಂದಿದೆಯೋ, ಕಂಬಗಳ ಮೇಲೆ ಸ್ಪರ್ಶಿಸುವುದರಿಂದ ಮಧುರವಾದ ಧ್ವನಿಯೂ ಹೊರಡುತ್ತದೆ.
ಭೂಕಂಪಕ್ಕೂ ಜಗ್ಗದ ದೇವಾಲಯ
ವರ್ಷಗಳಿಗೂ ಮುನ್ನ ಅಲ್ಲಿನ ಪ್ರದೇಶದಲ್ಲಿ ಭೂಕಂಪ ಸಂಭವಿಸಿದಾಗಲೂ ಈ ದೇವಾಲಯವು ದೃಢವಾಗಿ ನಿಂತಿದೆ. ಯಾಕೆಂದರೆ ದೇವಾಲಯವನ್ನು ಮರಳುಗಲ್ಲು ಮತ್ತು ಸ್ಯಾಂಡ್ ಬಾಕ್ಸ್ ಅಡಿಪಾಯದ ತಂತ್ರಜ್ಞಾನದಿಂದ ನಿರ್ಮಿಸಲಾಗಿದೆ.
ಭಾರತೀಯ ವಾಸ್ತುಶಿಲ್ಪ ಕಲೆಯು ಅಂತ್ಯಂತ ಸುಂದರವೂ ತಾಂತ್ರಿಕವಾಗಿ ಬಲಿಷ್ಠವೂ ಆಗಿತ್ತು. ಭಾರತೀಯ ವಾಸ್ತುಶಿಲ್ಪಕ್ಕೆ ಕಾಕತೀಯ ಅರಸರ ಕೊಡುಗೆಯೂ ಅಪಾರವಾಗಿದೆ. ನಮ್ಮ ಹಿರಿಯರು ನಮಗಾಗಿ ನಿರ್ಮಿಸಿ ಉಳಿಸಿ ಹೋಗಿರುವ ಅಪೂರ್ವ ಸಂಪತ್ತುಗಳನ್ನು ರಕ್ಷಿಸುವುದು ಮಾತ್ರವಲ್ಲ ಗೌರವಿಸುವುದೂ ನಮ್ಮ ಕರ್ತವ್ಯವೆಂಬುದನ್ನು ನಾವೆಲ್ಲರೂ ನೆನಪಿಡಬೇಕು ಅಲ್ಲವೇ?
✍️ ಅನುವಾದ : ದೀಪಾ ಜಿ. ಭಟ್
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.