ಸರ್ವೇಸಾಮಾನ್ಯವಾಗಿ ಹಬ್ಬ, ಆಚರಣೆಗಳನ್ನು ವೈಯಕ್ತಿಕವಾಗಿ ಆಚರಿಸುವಾಗ ಅದು ವ್ರತವಾಗುತ್ತದೆ. ಒಟ್ಟಿಗೆ ಒಂದು ಕಡೆ ಸೇರಿ ಆಚರಿಸುವಾಗ ಅದು ಉತ್ಸವವಾಗುತ್ತದೆ.
ನಮ್ಮ ಅನೇಕ ವ್ರತಗಳು ಚಾತುರ್ಮಾಸದ ನಾಲ್ಕು ತಿಂಗಳಿನಲ್ಲಿ ಬರುತ್ತವೆ. ಅದರಲ್ಲಿಯೂ ಶ್ರಾವಣ ಮಾಸವು ಮಹತ್ತ್ವದ್ದಾಗಿದೆ. ಶ್ರಾವಣದಲ್ಲಿ ಬರುವಂತಹ ಶ್ರೀ ವರಮಹಾಲಕ್ಷ್ಮೀ ವ್ರತವು ಸುಮಂಗಲೆಯರಿಗೆ ಒಂದು ಮಹತ್ತ್ವದ ವ್ರತವಾಗಿದೆ. ಅಸುರರಿಂದ ರಕ್ಷಣೆಯಾಗಲು, ಸಕಲ ಸಂಪತ್ತು ಪ್ರಾಪ್ತವಾಗಲು ಪ್ರತಿಯೊಬ್ಬರೂ ಒಂದಲ್ಲ ಒಂದು ರೀತಿಯಲ್ಲಿ ಶಕ್ತಿಯ ಉಪಾಸನೆಯನ್ನು ಮಾಡುವುದು ಆವಶ್ಯಕವಾಗಿದೆ ಎಂದು ಶಾಸ್ತ್ರಗಳಲ್ಲಿ ಹೇಳಲಾಗಿದೆ. ಅದರಲ್ಲಿ ಶ್ರೀ ವರಮಹಾಲಕ್ಷ್ಮೀ ವ್ರತವೂ ಒಂದು.
ವರಮಹಾಲಕ್ಷ್ಮೀ ವ್ರತದ ಹಿನ್ನೆಲೆ
ಕೈಲಾಸದಲ್ಲಿ ಶಿವ ಪಾರ್ವತಿಯ ನಡುವಿನ ಸಂವಾದ; ಪಾರ್ವತಿದೇವಿಯು ಶಿವನಲ್ಲಿ ಈ ರೀತಿ ಕೇಳುತ್ತಾಳೆ. ‘ಲೋಕದಲ್ಲಿ ಯಾವ ವ್ರತದಿಂದ ಎಲ್ಲ ಕಷ್ಟಗಳು ಪರಿಹಾರವಾಗಲು ಸಾಧ್ಯವಿದೆಯೋ, ಯಾವ ವ್ರತದಿಂದ ಸರ್ವ ಸಂಪತ್ತುಗಳು ಪ್ರಾಪ್ತವಾಗಲು ಸಾಧ್ಯವಿದೆಯೋ, ಅಂತಹ ವ್ರತವೇನಾದರೂ ಇದ್ದರೆ, ಆ ವ್ರತದ ಬಗ್ಗೆ ತಿಳಿಸುವ ದಯೆ ಮಾಡಿ’ ಎಂದು. ಈ ಕೋರಿಕೆಯನ್ನು ಆಲಿಸಿದ ಶಂಕರನು ಪಾರ್ವತಿದೇವಿಗೆ ಮುಂದಿನ ಕಥೆಯನ್ನು ಹೇಳುತ್ತಾನೆ.
ಹಿಂದೊಮ್ಮೆ ಪುರಾಣಕಾಲದಲ್ಲಿ ಕುಂಡಿನಾಪುರ ಎಂಬ ಸಂಪದ್ಭರಿತವಾದ ಊರಿನಲ್ಲಿ ಚಾರುಮತಿ ಎಂಬ ಓರ್ವ ಬ್ರಾಹ್ಮಣ ಸ್ತ್ರೀಯು ಅವಳ ಪತಿಯೊಂದಿಗೆ ವಾಸಿಸುತ್ತಿದ್ದಳು. ಮನೆಯಲ್ಲಿ ಕಡು ಬಡತನವಿದ್ದರೂ ಚಾರುಮತಿಯು ಭಕ್ತಿಯಲ್ಲಿ ಶ್ರೀಮಂತಳಾಗಿದ್ದಳು. ಅವಳ ಅನನ್ಯ ಭಕ್ತಿಗೆ ಪ್ರಸನ್ನಳಾದ ಶ್ರೀ ವರಮಹಾಲಕ್ಷ್ಮೀ ದೇವಿಯು ಅವಳ ಕನಸಿನಲ್ಲಿ ದರ್ಶನವನ್ನು ನೀಡಿ ಮುಂದಿನ ವರವನ್ನಿತ್ತಳು. ‘ಶ್ರಾವಣ ಮಾಸದ ಹುಣ್ಣಿಮೆಯ ಹತ್ತಿರದ ಶುಕ್ರವಾರದಂದು (ಅಂದರೆ ೨ ನೇ ಶುಕ್ರವಾರದಂದು) ಯಾರು ಈ ವ್ರತವನ್ನು ಭಕ್ತಿ ಭಾವದಿಂದ ಆಚರಿಸಿ ಏನನ್ನೂ ಬೇಡಿದರೆ, ಅವರಿಗೆ ಅದು ಪ್ರಾಪ್ತವಾಗುತ್ತದೆ. ಆ ದಿನ ಸಂಜೆ ನಾನು ಭೂಲೋಕಕ್ಕೆ ಇಳಿದು ಬರುವೆನು. ಆ ಸಮಯದಲ್ಲಿ ಯಾರ ಮನೆಯ ಬಾಗಿಲಿನಲ್ಲಿ ದೀಪ ಬೆಳಗಿಸಿ ನನ್ನನ್ನು ಯಾರು ಭಕ್ತಿಯಿಂದ ಬರಮಾಡಿಕೊಳ್ಳುತ್ತಾರೆಯೋ ಅವರ ಮನೆಯಲ್ಲಿ ನಾನು ನೆಲೆಸಿ ಸಕಲ ಸಂಪತ್ತುಗಳನ್ನು ನೀಡುವೆನು’ ಎಂದು ಹೇಳಿ ದೇವಿ ವರಮಹಾಲಕ್ಷ್ಮೀಯು ಅದೃಶ್ಯಳಾದಳು.
ತನಗೆ ದೇವಿ ನೀಡಿದ ದರ್ಶನದ ಬಗ್ಗೆಯೂ, ವರದ ಬಗ್ಗೆಯೂ ಚಾರುಮತಿ ಬೆಳಗಾಗುತ್ತಲೇ ಊರಿನವರೆಲ್ಲರಿಗೂ ಹೇಳುತ್ತಾಳೆ. ಇವಳ ಮಾತನ್ನು ಕೇಳಿದ ಊರಿನವರು ‘ಚಾರುಮತಿಗೆ ಭ್ರಮೆಯಾಗಿದೆ, ಬುದ್ಧಿ ಭ್ರಷ್ಟವಾಗಿದೆ’ ಎಂದು ಹೇಳಿ ಹೀಯಾಳಿಸುತ್ತಾರೆ. ಆದರೆ ಅಂದು ಶ್ರಾವಣ ಮಾಸದ ಎರಡನೇ ಶುಕ್ರವಾರವಾಗಿತ್ತು. ಚಾರುಮತಿಯು ದೇವಿಯ ಆಜ್ಞೆಯಂತೆ ಮನೆಯನ್ನು ಶುಚಿಗೊಳಿಸಿ, ದೀಪ ಬೆಳಗಿಸಿ, ಮನೆಯನ್ನು ಯಥಾ ಶಕ್ತಿ ದೀಪಗಳಿಂದ ಅಲಂಕರಿಸಿ ಶ್ರೀ ದೇವಿಯ ಆಗಮನಕ್ಕೆ ಭಕ್ತಿ ಭಾವದಿಂದ ಕಾದು ಕುಳಿತಳು. ಶ್ರೀ ದೇವಿಯು ಭೂಲೋಕಕ್ಕೆ ಇಳಿದಾಗ, ಇತರರ ಮನೆಯಲ್ಲಿ ಅವಳನ್ನು ಬರಮಾಡಿಕೊಳ್ಳಲು ದೀಪಗಳು ಇರಲಿಲ್ಲ. ಆದುದರಿಂದ ದೀಪಗಳಿಂದ ಝಗಝಗಿಸುವ ಭಕ್ತೆ ಚಾರುಮತಿಯ ಮನೆಗೆ ಬಂದು ದೇವಿಯು ಶಾಶ್ವತವಾಗಿ ಅಲ್ಲೇ ನೆಲೆಸುತ್ತಾಳೆ. ಶ್ರೀ ದೇವಿಯ ಆಗಮನದಿಂದ ಚಾರುಮತಿಯ ಮನೆಯ ಬಡತನವೆಲ್ಲ ದೂರವಾಗಿ ಅಲ್ಲಿ ಸುಖ-ಶಾಂತಿ-ನೆಮ್ಮದಿ ನೆಲೆಸುತ್ತವೆ, ಮನೆತನವು ಸಂಪದ್ಭರಿತವಾಗುತ್ತದೆ.
ಚಾರುಮತಿಯ ಮೇಲಾದ ಶ್ರೀ ದೇವಿಯ ಕೃಪೆಯನ್ನು ಕಂಡ ಊರಿನ ಇತರ ಸುಮಂಗಲೆಯರೂ ಕೂಡ ವರಮಹಾಲಕ್ಷ್ಮೀ ವ್ರತವನ್ನು ಆಚರಿಸಿ ಇಷ್ಟಾರ್ಥ ಸಿದ್ಧಿಗಳನ್ನು ಮಾಡಿಕೊಳ್ಳುತ್ತಾರೆ.
ಇಂದಿಗೂ ಕೂಡ ಯಾರು ಶ್ರದ್ಧೆ-ಭಕ್ತಿಯಿಂದ ಶ್ರೀ ವರಮಹಾಲಕ್ಷ್ಮೀ ವ್ರತವನ್ನು ಆಚರಿಸುತ್ತಾರೆಯೋ ಅವರ ಮೇಲೆ ಶ್ರೀ ದೇವಿಯ ಕೃಪೆಯು ಖಂಡಿತವಾಗಿಯೂ ಇರುತ್ತದೆ.
(ಆಧಾರ : sanatan.org)
ಸಂಕಲನ: ಶ್ರೀ ವಿನೋದ ಕಾಮತ
ವಕ್ತಾರರು, ಸನಾತನ ಸಂಸ್ಥೆ
ಸಂಪರ್ಕ : 9342599299
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.