ಶ್ರಾವಣ ಮಾಸದಲ್ಲಿ ಸ್ತ್ರೀಯರು ಮಂಗಳಗೌರಿ ವ್ರತವನ್ನು ಆಚರಿಸುತ್ತಾರೆ. ನವವಧುಗಳು ಈ ವ್ರತವನ್ನು ಸೌಭಾಗ್ಯ ಮತ್ತು ಪತಿಗೆ ಒಳ್ಳೆಯ ಆಯಸ್ಸು ಲಭಿಸಲು ಆಚರಿಸುತ್ತಾರೆ. ಶ್ರಾವಣ ಮಾಸದಲ್ಲಿ ಬರುವ ಮಂಗಳವಾರದಂದು ಈ ವ್ರತವನ್ನು ಆಚರಿಸಲಾಗುತ್ತದೆ. ಕೆಲವು ಸ್ಥಳಗಳಲ್ಲಿ ಸಭಾಗೃಹದಲ್ಲಿ ಸಾಮೂಹಿಕವಾಗಿ ಮಂಗಳಗೌರಿ ವ್ರತ ಆಚರಿಸುವ ಪದ್ಧತಿಯೂ ಇದೆ. 5 ಅಥವಾ 8 ವರ್ಷಗಳ ಕಾಲ ಈ ವ್ರತವನ್ನಾಚರಿಸುತ್ತಾರೆ. ಈಗ ಹೆಚ್ಚಿನ ಮಹಿಳೆಯರು ಈ ವ್ರತವನ್ನು 5 ವರ್ಷಗಳ ಕಾಲ ಆಚರಿಸುತ್ತಾರೆ.
ಕೊರೋನಾದಿಂದ ಉದ್ಭವಿಸಿರುವ ಆಪತ್ಕಾಲದಲ್ಲಿ ಮಂಗಳಗೌರಿ ವ್ರತವನ್ನು ಹೇಗೆ ಆಚರಿಸಬೇಕು ?
ಎಲ್ಲರೊಂದಿಗೆ ಸೇರಿ ವ್ರತವನ್ನು ಆಚರಿಸಲು ಈಗ ಸಾಧ್ಯವಿಲ್ಲ, ಆದುದರಿಂದ ಮನೆಯಲ್ಲಿಯೇ ಮುಂದಿನ ರೀತಿಯಲ್ಲಿ ದೇವಿಯ ಭಾವಪೂರ್ಣ ಪೂಜೆಯನ್ನು ಮಾಡಬಹುದು.
ದೇವಿಯ ಪೂಜೆ
1. ಷೋಡಶೋಪಚಾರ ಪೂಜೆ : ಯಾರಿಗೆ ದೇವಿಯ ‘ಷೋಡಶೋಪಚಾರ ಪೂಜೆ‘ಯನ್ನು ಮಾಡಲು ಸಾಧ್ಯವಿದೆಯೋ, ಅವರು ಷೋಡಶೋಪಚಾರ ಪೂಜೆಯನ್ನು ಮಾಡಬೇಕು. ‘ಶ್ರೀ ಶಿವಮಂಗಲಾಗೌರ್ಯೈ ನಮಃ |’ ಎಂಬ ಮಂತ್ರವನ್ನು ಉಚ್ಚಾರ ಮಾಡುತ್ತ ದೇವಿಗೆ ಉಪಚಾರಗಳನ್ನು ಅರ್ಪಿಸಬೇಕು.
2. ಪಂಚೋಪಚಾರ ಪೂಜೆ : ಯಾರಿಗೆ ದೇವಿಯ ‘ಷೋಡಶೋಪಚಾರ ಪೂಜೆ’ಯನ್ನು ಮಾಡಲು ಸಾಧ್ಯವಿಲ್ಲ, ಅಂತಹವರು ‘ಪಂಚೋಪಚಾರ ಪೂಜೆ‘ಯನ್ನು ಮಾಡಬೇಕು. ಇದರಲ್ಲಿ ಗಂಧ, ಅರಿಶಿಣ-ಕುಂಕುಮ, ಹೂವು, ಧೂಪ, ದೀಪ ಮತ್ತು ನೈವೇದ್ಯಗಳನ್ನು ಈ ಕ್ರಮದಿಂದ ದೇವಿಗೆ ಅರ್ಪಿಸುವಾಗ ‘ಶ್ರೀ ಶಿವಮಂಗಲಾಗೌರ್ಯೈ ನಮಃ |’ ಎಂಬ ಮಂತ್ರವನ್ನು ಉಚ್ಚರಿಸಬೇಕು. ಪೂಜೆ ಆದ ನಂತರ ಶ್ರೀ ಶಿವಮಂಗಲಾಗೌರಿ ದೇವಿಯ ಆರತಿಯನ್ನು ಬೆಳಗಬೇಕು. ಆರತಿ ಬೆಳಗುವಾಗ ದೇವಿಯ ಆರತಿಯ ಹಾಡು ಹಾಡಬೇಕು.
3. ಬಾಗಿನ ನೀಡುವುದು : ಪೂಜೆಯಾದ ನಂತರ ತಮ್ಮ ತಮ್ಮ ಕ್ಷಮತೆಗನುಸಾರ ಸೌಭಾಗ್ಯವತಿ ಸ್ತ್ರೀಯರು ಒಬ್ಬರಿಗೊಬ್ಬರು ಬಾಗಿನವನ್ನು ನೀಡಿ ಉಡಿ ತುಂಬುತ್ತಾರೆ. ಬಾಗಿನ ನೀಡುವಾಗ ಸಾತ್ತ್ವಿಕ ವಸ್ತುಗಳನ್ನು ನೀಡಬೇಕು.
4. ದೇವಿಯ ಕಥೆಯನ್ನು ಓದುವುದು : ಪೂಜೆಯಾದ ನಂತರ ದೇವಿಯ ಕಥೆಯನ್ನು ಓದಬೇಕು. ಯಾರಿಗೆ ಇದು ಸಾಧ್ಯವಿಲ್ಲವೋ ಅವರು ಅಖಂಡ ಸೌಭಾಗ್ಯ ಲಭಿಸಲು ದೇವಿಯಲ್ಲಿ ಭಾವಪೂರ್ಣವಾಗಿ ಪ್ರಾರ್ಥನೆಯನ್ನು ಮಾಡಬೇಕು.
5. ಜಾಗರಣೆ : ದೇವಿಯ ಉಪಾಸನೆಯ ಒಂದು ಅಂಶವೆಂದು ಮಹಿಳೆಯರು ಸಾಮೂಹಿಕವಾಗಿ ಜಾಗರಣೆಯನ್ನು ಮಾಡುತ್ತಾರೆ. ಕೊರೋನಾ ಸಂಕಟದ ಪರಿಸ್ಥಿತಿಯಲ್ಲಿ ಈ ರೀತಿ ಒಂದೆಡೆ ಸೇರಲು ಸಾಧ್ಯವಿಲ್ಲ. ಆದುದರಿಂದ ರಾತ್ರಿ ಜಾಗರಣೆ ಮಾಡುವಾಗ ಯಾವುದಾದರೊಂದು ಗ್ರಂಥವನ್ನು ಓದಬೇಕು, ಉದಾ: ದೇವಿಭಾಗವತ, ದೇವಿಪುರಾಣ. ಇದು ಜಾಗರಣೆ ಮಾಡಿದಂತೆಯೇ. ಯಾವುದಾದರೊಂದು ಕಾರಣದಿಂದ ಗ್ರಂಥ ಸಿಗದಿದ್ದರೆ ಅಥವಾ ಓದಲು ಆಗದಿದ್ದವರು ‘ಶ್ರೀ ಶಿವಮಂಗಲಾಗೌರ್ಯೈ ನಮಃ |’ ಎಂಬ ಜಪವನ್ನು ಜಪಿಸಬೇಕು. ಅದೂ ಆಗದಿದ್ದರೆ ತಮ್ಮ ಕುಲದೇವರ ನಾಮವನ್ನು ಜಪಿಸಬೇಕು. ಇದರಿಂದ ಕೂಡ ದೇವಿಯ ಉಪಾಸನೆಯ ‘ಜಾಗರಣೆಯ’ ಭಾಗ ಪೂರ್ಣವಾಗಿ ದೇವಿಯ ಆಶೀರ್ವಾದ ಲಭಿಸುತ್ತದೆ.
(ಆಧಾರ : http://www.sanatan.org )
ಸಂಕಲನ – ಶ್ರೀ. ವಿನೋದ ಕಾಮತ, ವಕ್ತಾರರು, ಸನಾತನ ಸಂಸ್ಥೆ, ಕರ್ನಾಟಕ.
ಸಂಪರ್ಕ – 9342599299
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.