ಪ್ರಧಾನಿ ಮೋದಿ ಅವರು ಕೇಂದ್ರ ಸರ್ಕಾರದ ಆಡಳಿತ ವಹಿಸಿಕೊಂಡ ಕಳೆದ ಏಳು ವರ್ಷಗಳಿಂದೀಚೆಗೆ ಭಾರತ ಹಲವು ಸಕಾರಾತ್ಮಕ ಬದಲಾವಣೆಗಳಿಗೆ ತೆರೆದುಕೊಳ್ಳುತ್ತಿದೆ. ಯಾವುದನ್ನು ಸಾಧಿಸಲು ಸಾಧ್ಯವೇ ಇಲ್ಲ ಎಂಬ ಕಲ್ಪನೆಯಲ್ಲಿ ಭಾರತೀಯರಿದ್ದರೋ, ಅಂತಹ ಒಂದೊಂದೇ ಕನಸುಗಳನ್ನು ಸಾಕಾರಗೊಳಿಸುತ್ತಾ, ದೇಶದ ಮತ್ತು ದೇಶವಾಸಿಗಳ ಆಶಯಗಳಿಗೆ ತಕ್ಕಂತೆ ಭಾರತವನ್ನು ಬದಲಾಯಿಸುತ್ತಾ, ಅಭಿವೃದ್ಧಿಯತ್ತ ಹೆಚ್ಚು ವೇಗವಾಗಿ ಸಾಗುವಂತೆ ಮಾಡಿದ ಮೋದಿ ಸಾಧನೆಯನ್ನು ನಾವು ಮರೆಯುವಂತಿಲ್ಲ.
ಅಂತಹದ್ದೇ ಒಂದು ಮಹತ್ವದ ಕಾರ್ಯ ನಿನ್ನೆ ಮೋದಿ ಸರ್ಕಾರ ಮಾಡುವ ಮೂಲಕ ಮತ್ತೊಂದು ಇತಿಹಾಸ ನಿರ್ಮಿಸಿದೆ. ಈ ವರೆಗೆ ರಾಜೀವ್ ಗಾಂಧಿ ಹೆಸರಿನಲ್ಲಿ ದೇಶದ ಸಾಧಕ ಕ್ರೀಡಾಪಟುಗಳಿಗೆ ನೀಡಲಾಗುತ್ತಿದ್ದ ಖೇಲ್ ರತ್ನ ಪ್ರಶಸ್ತಿಗೆ, ಕ್ರೀಡಾ ಕ್ಷೇತ್ರದ ಸಾಧಕ, ಹಾಕಿ ದಂತಕಥೆ ಎಂದೇ ಖ್ಯಾತರಾದ ಮೇಜರ್ ಧ್ಯಾನ್ ಚಂದ್ ಹೆಸರಿಡುವ ಮೂಲಕ ಆ ಪ್ರಶಸ್ತಿಯ ಗೌರವವನ್ನು ಹೆಚ್ಚಿಸುವ ಕೆಲಸವನ್ನು ಮಾಡಿದೆ. ಆ ಮೂಲಕ ಕೋಟಿ ಕೋಟಿ ಭಾರತೀಯರ ಆಶಯಕ್ಕೆ ಜೀವ ನೀಡುವ ಕೆಲಸವನ್ನು ಮೋದಿ ಸರ್ಕಾರ ಮಾಡಿದೆ ಎಂದರೆ ಅದನ್ನು ಅಲ್ಲಗಳೆಯುವಂತಿಲ್ಲ.
ಈ ಸಂಬಂಧ ಪ್ರಧಾನಿ ಮೋದಿ ಅವರು ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಬರೆದುಕೊಂಡಿದ್ದು, ಖೇಲ್ ರತ್ನದ ಹೆಸರನ್ನು ಮೇಜರ್ ಧ್ಯಾನ್ ಚಂದ್ ಖೇಲ್ ರತ್ನ ಎಂದು ಮರುನಾಮಕರಣ ಮಾಡುವಂತೆ ದೇಶದ ಹಲವು ಜನರು ನಮಗೆ ಮನವಿ ಮಾಡಿದ್ದಾರೆ. ಈ ಅಭಿಪ್ರಾಯವನ್ನು ನಮಗೆ ತಲುಪಿಸಿದ ಎಲ್ಲರಿಗೂ ಧನ್ಯವಾದಗಳು. ಅವರ ಮನವಿಯನ್ನು ಪುರಸ್ಕರಿಸಿ ರಾಜೀವ್ ಗಾಂಧಿ ಖೇಲ್ ರತ್ನ ಪ್ರಶಸ್ತಿಯನ್ನು ‘ ಮೇಜರ್ ಧ್ಯಾನ್ ಚಂದ್ ಖೇಲ್ ರತ್ನ’ ಪ್ರಶಸ್ತಿ ಎಂದು ಮರುನಾಮಕರಣ ಮಾಡಿದ್ದೇವೆ. ಧ್ಯಾನ್ ಚಂದ್ ಅವರು ದೇಶದ ಹಿರಿಮೆಯನ್ನು ವಿಶ್ವಕ್ಕೆ ಸಾರಿದ ಪ್ರಸಿದ್ಧ ಹಾಕಿ ಪಟು. ಅವರ ಜೀವಮಾನದ ಸಾಧನೆಗೆ ಈ ಗೌರವವನ್ನು ಅರ್ಪಿಸಲಾಗುತ್ತಿದೆ. ಧ್ಯಾನ್ ಚಂದ್ ಅವರು ಸುಮಾರು 20 ವರ್ಷಗಳ ಕ್ರೀಡಾ ವೃತ್ತಿ ಜೀವನ ನಡೆಸಿದ್ದ, ಸುಮಾರು 1000 ಗೋಲ್ಗಳನ್ನು ಗಳಿಸಿದ ಭಾರತೀಯ ಹಾಕಿ ಆಟಗಾರ. 1928, 1932, 1936 ರಲ್ಲಿ ಒಲಿಂಪಿಕ್ಸ್ನಲ್ಲಿ ಹಾಕಿ ಕ್ರೀಡೆಯಲ್ಲಿ ಚಿನ್ನದ ಪದಕ ಗಳಿಸಿದ್ದು, ಇದರಲ್ಲಿ ಧ್ಯಾನ್ ಚಂದ್ ಅವರ ಪಾತ್ರ ಮಹತ್ವದ್ದು ಎಂದು ಮೋದಿ ತಿಳಿಸಿದ್ದಾರೆ.
ಈ ಪ್ರಶಸ್ತಿಯನ್ನು ವರ್ಷಕ್ಕೆ ಒಂದು ಬಾರಿ ನೀಡಲಾಗುತ್ತದೆ. ಕೇಂದ್ರ ಯುವ ವ್ಯವಹಾರ ಮತ್ತು ಕ್ರೀಡಾ ಸಚಿವಾಲಯ ಈ ಪ್ರಶಸ್ತಿ ನೀಡುತ್ತದೆ. 9 ಜನ ಸದಸ್ಯರು ಈ ಪ್ರಶಸ್ತಿಗೆ ಕ್ರೀಡಾಪಟುಗಳ ಆಯ್ಕೆ ನಡೆಸುತ್ತಾರೆ. ಈ ಪ್ರಶಸ್ತಿ 25 ಲಕ್ಷ ರೂ. ನಗದು ಬಹುಮಾನ ಹೊಂದಿದ್ದು, ರಾಷ್ಟ್ರೀಯ, ಅಂತರಾಷ್ಟ್ರೀಯ ಮಟ್ಟದಲ್ಲಿ ಹೆಸರು ಗಳಿಸಿದ, ದೇಶದ ಕೀರ್ತಿ ಪತಾಕೆಯನ್ನು ಹಾರಿಸಿದ ಸಾಧಕ ಕ್ರೀಡಿಪಟುಗಳಿಗೆ ಈ ಪ್ರಶಸ್ತಿ ನೀಡಲಾಗುತ್ತದೆ.
ಇದೀಗ ಖೇಲ್ ರತ್ನ ಪ್ರಶಸ್ತಿಯ ತೂಕವನ್ನು ಮೇಜರ್ ಧ್ಯಾನ್ ಚಂದ್ ಅವರ ಹೆಸರಿಡುವ ಮೂಲಕ ಮತ್ತಷ್ಟು ಹೆಚ್ಚಿಸುವ ಕೆಲಸವನ್ನು ಮೋದಿ ಸರ್ಕಾರ ಮಾಡಿದೆ. ಆ ಮೂಲಕ ಕ್ರೀಡಾಪಟುಗಳ ಮತ್ತು ಭಾರತದ ಕೋಟಿ ಕೋಟಿ ಜನರ ಮನೋಭಿಲಾಷೆಯನ್ನು ಅವರು ಈಡೇರಿಸಿದ್ದಾರೆ. ಮೋದಿ ಸರ್ಕಾರದ ಈ ಸಾಧನೆಗೆ ನಾವೆಲ್ಲರೂ ಮೆಚ್ಚುಗೆ ಸೂಚಿಸಲೇ ಬೇಕು. ಶ್ರೇಷ್ಠ ಪ್ರಶಸ್ತಿಯ ಶ್ರೇಷ್ಠತೆಯನ್ನು ಮತ್ತಷ್ಟು ಹೆಚ್ಚಿಸಿದ ಶ್ರೇಷ್ಠ ನಾಯಕನ ಈ ಕಾರ್ಯವೈಖರಿ ಸ್ತುತ್ಯರ್ಹ.
ಭಾರತದ ಭಾಗವಾಗಿದ್ದರೂ, ಭಾರತದೊಳಗಿನ ಮತ್ತೊಂದು ರಾಷ್ಟ್ರದಂತೆ ಗುರುತಿಸಿದ್ದ ಜಮ್ಮು ಕಾಶ್ಮೀರದ 370 ನೇ ವಿಧಿ ರದ್ದುಗೊಳಿಸಿ, ಅದಕ್ಕೆ ನಿಜವಾದ ಸ್ವಾತಂತ್ರ್ಯ ಒದಗಿಸಿದ, ಸಿಎಎ ಜಾರಿ ಮೂಲಕ ದೇಶವಾಸಿಗಳಿಗೆ ಮತ್ತಷ್ಟು ಭದ್ರತೆ ಒದಗಿಸುತ್ತಾ, ಬಹುಕೋಟಿ ಭಾರತೀಯರ ಕನಸಾಗಿದ್ದ ಅಯೋಧ್ಯೆಯ ಶ್ರೀರಾಮ ಮಂದಿರ ಎಂಬ ರಾಷ್ಟ್ರ ಮಂದಿರ ನಿರ್ಮಾಣ, ಜೊತೆಗೆ ಇದೀಗ (6 ಆಗಸ್ಟ್ 2021) ಭಾರತದ ಅತ್ಯುತ್ಕೃಷ್ಟ ಕ್ರೀಡಾ ಪ್ರಶಸ್ತಿ ಖೇಲ್ ರತ್ನಾಗೆ ಭಾರತದ ಕ್ರೀಡಾ ಜಗತ್ತಿನ ದಂತಕತೆ, ಹಾಕಿ ಪಟು ‘ಮೇಜರ್ ಧ್ಯಾನ್ ಚಂದ್ ಖೇಲ್ ರತ್ನ’ ಎಂದು ಮರುನಾಮಕರಣ ಮಾಡುವವವರೆಗೆ ಪ್ರಧಾನಿ ಮೋದಿ ಅರ್ಹರಿಗೆ ಸಲ್ಲಬೇಕಾದ ಗೌರವವನ್ನು ಸದ್ದಿಲ್ಲದೆ ಸಲ್ಲಿಸುವ ಕೆಲಸ ಮಾಡುತ್ತಿದ್ದಾರೆ. ಇವಿಷ್ಟೇ ಅಲ್ಲದೆ ದೇಶದ ಭದ್ರತೆ, ಜನಸಾಮಾನ್ಯರ ಸಮಸ್ಯೆಗಳಿಗೆ ಸೂಕ್ತ ಯೋಜನೆಗಳ ಮೂಲಕ ಪರಿಹಾರ ಒದಗಿಸುವುದು ಸೇರಿದಂತೆ ಹಲವಾರು ಯೋಜನೆಗಳ ಮೂಲಕ ದೇಶವನ್ನು ಕಟ್ಟಿ ಬೆಳೆಸುವ ಮಹತ್ಕಾರ್ಯ ಮಾಡುತ್ತಿದ್ದಾರೆ.
ಪ್ರಧಾನಿ ಮೋದಿ ಅವರ ಈ ಜನಸ್ನೇಹಿ ಕ್ರಮಗಳಿಗೆ, ಆಡಳಿತ ವೈಖರಿಗೆ ಇಡೀ ವಿಶ್ವವೇ ನಮಿಸುತ್ತಿದೆ. ಯಾರಿಗೆ ಯಾವ ಗೌರವ ಸಲ್ಲಬೇಕೋ ಆ ಗೌರವವನ್ನು. ಸಲ್ಲಿಸುವ ಕೆಲಸವನ್ನು ನಿಷ್ಕಲ್ಮಶ ಹೃದಯದಿಂದ ಮಾಡುತ್ತಿರುವ ನಮ್ಮ ದೇಶದ ಪ್ರಧಾನಿ ನರೇಂದ್ರ ಮೋದಿ ಅವರಿಗೆ ನಮೋ ನಮಃ.
✍️ ಭುವನ ಬಾಬು
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.