೧೯೫೨ರ ಒಂದು ದಿನ. ಮದುವೆಗೆಂದು ರಜೆ ಪಡೆದು ಊರಿಗೆ ಹೋಗಿದ್ದ ಯುವ ಕ್ಯಾಪ್ಟನ್ ಒಬ್ಬ ತನ್ನ ಡ್ಯೂಟಿಯ ಮುನ್ನಾ ದಿನ ಕಂಟೋನ್ಮೆಂಟಿಗೆ ಮರಳಿದ್ದ. ಅದೇ ದಿನ ಆತ ಪತ್ನಿಯೊಡನೆ ಸಿನೆಮಾ ನೋಡಲು ಚಂಡೀಗಢ ಪೇಟೆಗೆ ಹೋಗಿದ್ದ. ಆದರೆ ಸಿನೆಮಾ ಪ್ರಾರಂಭವಾಗುವ ಹೊತ್ತಿಗೆ ನವ ವಿವಾಹಿತರ ಸಂತೋಷ ಉಳಿದಿರಲಿಲ್ಲ. ಏಕೆಂದರೆ ಸಿನೆಮಾ ಮಂದಿರದಲ್ಲಿ ಪುಂಡರ ತಂಡ ಆ ಜೋಡಿಯನ್ನು ರೇಗಿಸಲಾರಂಭಿಸಿತು. ಕ್ಯಾಪ್ಟನ್ ಪುಂಡರ ಮೇಲೇರಿಹೋದ. ಆದರೆ ಗುಂಪುಗೂಡಿದ್ದ ಪುಂಡರು ಕ್ಯಾಪ್ಟನ್ ಮತ್ತು ಪತ್ನಿಯ ಮೇಲೆ ಭೀಕರ ಹಲ್ಲೆಯನ್ನು ನಡೆಸಲಾರಂಭಿಸಿದರು. ಸ್ಥಳೀಯ ಕಾಂಗ್ರೆಸ್ ಮುಖಂಡನೊಬ್ಬನ ಮಗನಾಗಿದ್ದ ಪುಂಡರ ತಂಡದ ನಾಯಕ ಅಷ್ಟಕ್ಕೇ ಬಿಡದೆ ’ತಾನಾರ ಮಗ ಗೊತ್ತೇನು?’ ಎಂದು ಎಚ್ಚರಿಕೆಯನ್ನೂ ನೀಡಿದ್ದ. ಪೆಟ್ಟು ತಿಂದ ಯುವ ಕ್ಯಾಪ್ಟನ್ ನೇರ ಕಂಟೋನ್ಮೆಂಟಿಗೆ ತೆರಳಿ ತನ್ನ ಅಧಿಕಾರಿಯ ಮುಂದೆ ನಿಂತ. ಎದುರಿಗಿದ್ದ ಅಧಿಕಾರಿಗೆ ವಿವರಣೆಗಳು ಬೇಕಿರಲಿಲ್ಲ. ಆತನ ಸ್ಥಿತಿ ಎಂಥವರಿಗೂ ಅರ್ಥವಾಗುವಂತಿತ್ತು. ತಕ್ಷಣ ಕಂಟೋನ್ಮೆಂಟಿನ ಸೈರನ್ ಮೊಳಗಿತು. ಉಗ್ರಾಣದಿಂದ ಶಸ್ತ್ರಾಸ್ತ್ರಗಳು ಹೊರಬಂದವು. ಮಿಲಿಟರಿ ಟ್ರಕ್ಕುಗಳು ಪೇಟೆಗೆ ನುಗ್ಗಿದವು.ಸಿನೆಮಾ ಮಂದಿರವನ್ನು ಸುತ್ತುವರಿಯಿತು. ಪುಂಡರ ತಂಡವನ್ನು ಧರಧರನೆ ಎಳೆದುತಂದ ಆ ಅಧಿಕಾರಿ ಜನರೆದುರಲ್ಲೇ ಪುಂಡರನ್ನು ಥಳಿಸಿ ಕ್ಯಾಪ್ಟನ್ ಪತ್ನಿಯ ಕಾಲಿಗೆ ಬೀಳಿಸಿದರು.
ಪ್ರಕರಣ ಅಷ್ಟಕ್ಕೇ ಮುಗಿಯಲಿಲ್ಲ. ನಾಗರಿಕರನ್ನು ಥಳಿಸಿದ ಕಾರಣಕ್ಕೆ ಆ ಅಧಿಕಾರಿಗೆ ಮಿಲಿಟರಿ ವಿಚಾರಣೆಯಾಯಿತು. ಆದರೆ ಆ ಅಧಿಕಾರಿ, “ಆತ ನನ್ನ ಸೈನಿಕ, ಆತ ಮತ್ತು ಆತನ ಕುಟುಂಬದ ರಕ್ಷಣೆ ನನ್ನ ಹೊಣೆ” ಎಂದೇ ವಾದಿಸಿದರು. ಮೇಲಧಿಕಾರಿಗಳು, “ಆತ ಪ್ರಭಾವಿಯೊಬ್ಬನ ಮಗ ಎಂಬುದು ನಿನಗೆ ಗೊತ್ತೇ?’ ಎಂದು ಪ್ರಶ್ನಿಸಿದರು. ಅಧಿಕಾರಿ, “ಆತ ಯಾರೇ ಆಗಿರಲಿ, ನಮ್ಮ ಸೈನಿಕರ ಮೇಲೆ ಕೈ ಮಾಡಿದವನು ನಿಸ್ಸಂಶಯವಾಗಿ ನಮ್ಮ ಶತ್ರು’ ಎಂದು ಗುಡುಗಿದರು. ಕೊನೆಗೆ ಮೇಲಧಿಕಾರಿ “ಆತ ರಜೆಯಲ್ಲಿದ್ದವನು. ನಿನಗೇಕೆ ಅದರ ಉಸಾಬರಿ?’ ಎಂದು ಪ್ರಶ್ನಿಸಿದರು. ಆದರೆ ಈ ಅಧಿಕಾರಿ ಮಾತ್ರ, “ಸರ್, ಸೈನಿಕನಿಗೆ ರಜೆ ಎಂಬುದೇ ಇಲ್ಲ, ಆತ ನಿವೃತ್ತಿಯೂ ಆಗುವುದಿಲ್ಲ’ ಎಂದು ಪಟ್ಟುಹಿಡಿದರು. ಮೇಲಧಿಕಾರಿಗಳ ಬಾಯಿಕಟ್ಟಿತು.
ಹೀಗೆ ತನ್ನ ಕೈಕೆಳಗಿನ ಕ್ಯಾಪ್ಟನ್ ಹುಡುಗ ಮತ್ತು ಆತನ ಪತ್ನಿಯ ಬೆಂಬಲಕ್ಕೆ ನಿಂತ ಆ ಅಧಿಕಾರಿ ಕರ್ನಾಟಕದ ಕೆ.ಎಸ್. ತಿಮ್ಮಯ್ಯ! ರಾಯಲ್ ಬ್ರಿಟಿಷ್ ಮಿಲಿಟರಿಯಿಂದ ಆಗಷ್ಟೇ ಭಾರತೀಯ ಸೈನ್ಯವಾಗಿದ್ದ ತುಕಡಿಗಳಿಗೆ ಇಂಥಾ ನಿರ್ಧಾರಗಳ ಮೂಲಕ ಮೌಲ್ಯವನ್ನು ಹೆಚ್ಚಿಸಿದವರು ತಿಮ್ಮಯ್ಯನವರು. ಈ ಪ್ರಕರಣ ಮುಂದೆ ದೇಶದ ನಾನಾ ಕಡೆಗಳಲ್ಲಿ ನಡೆದ ಹಲವು ಘಟನೆಗಳಿಗೆ ಉಲ್ಲೇಖಾರ್ಹವಾಯಿತು. ರಜೆಯಲ್ಲಿದ್ದ ಸೈನಿಕನ ರಕ್ಷಣೆಯೂ ಸೈನ್ಯದ ಹೊಣೆ ಎಂಬ ಧೋರಣೆ ಸೈನ್ಯದಲ್ಲಿ ಬಲಿಯಿತು. ಅಂದು ತಿಮ್ಮಯ್ಯ ಕೈಗೊಂಡ ತತ್ಕ್ಷಣದ ನಿರ್ಧಾರವೊಂದು ಹೀಗೆ ಚರಿತ್ರಾರ್ಹ ಎನಿಸಿಕೊಂಡಿತು.
೨೦ ವರ್ಷದ ಹಿಂದೆ ರಜೆ ಮೇಲೆ ಊರಿಗೆ ಹೋಗಿದ್ದ ಯೋಧನೊಬ್ಬನ ಪ್ರಕರಣ ದೇಶಾದ್ಯಂತ ಸುದ್ದಿಯಾಗಿತ್ತು. ಆಗ ಕೂಡಾ ತಿಮ್ಮಯ್ಯ ಪ್ರಕರಣವನ್ನು ಕೆಲವರು ಜ್ಞಾಪಿಸಿಕೊಂಡಿದ್ದರು.
ಬಿಹಾರದ ಸಿಪಾಯಿಯೊಬ್ಬ ಕಾಶ್ಮೀರದಿಂದ ಸುದೀರ್ಘ ಕಾಲದ ನಂತರ ತನ್ನೂರಿಗೆ ಮರಳಿದ್ದ. ರಜೆಯಲ್ಲಿದ್ದ ಆತ ಒಂದು ದಿನ ತನ್ನೂರಿನ ಪೇಟೆಯಲ್ಲಿ ಪಾನಮತ್ತನಾಗಿ ಗಲಾಟೆ ಮಾಡಿಕೊಂಡಿದ್ದ. ಪೇಟೆಯ ಜನ ಆತ ಹುಡುಗಿಯರನ್ನು ಚುಡಾಯಿಸಿದನೆಂದು ಹಲ್ಲೆ ನಡೆಸಿ, ಹೆಡೆಮುರಿ ಕಟ್ಟಿ ಪೊಲೀಸ್ ಠಾಣೆಗೆ ಒಯ್ದಿದ್ದರು. ಈ ಸುದ್ದಿ ರಾಷ್ಟ್ರೀಯ ಪತ್ರಿಕೆಗಳಲ್ಲೂ ಸದ್ದಾಗಿಬಿಟ್ಟಿತು. ಆಗ ಮಿಲಿಟರಿ ಮುಖ್ಯಸ್ಥರಾಗಿದ್ದವರು ಸುಂದರ್ರಾಜನ್ ಪದ್ಮನಾಭನ್. ಅದಾದ ಕೆಲವೇ ದಿನದಲ್ಲಿ ಜನರಲರು ತಾವು ಭಾಗವಹಿಸಿದ್ದ ಕಾರ್ಯಕ್ರಮವೊಂದರಲ್ಲಿ ಈ ಘಟನೆಯನ್ನು ಉಲ್ಲೇಖಿಸುತ್ತಾ, “ಬಿಹಾರದ ಘಟನೆಯ ಬಗ್ಗೆ ಸೇನೆಗೆ ವಿಷಾದವಿದೆ. ಅದನ್ನು ಸೇನೆ ಕೂಡಾ ಗಂಭೀರವಾಗಿ ಪರಿಗಣಿಸುತ್ತದೆ. ಆದರೆ ನಮ್ಮ ಸೈನಿಕ ಮಾಡಿದ ತಪ್ಪನ್ನು ಸಮಾಜ ಹೊಟ್ಟೆಗೆ ಹಾಕಿಕೊಳ್ಳಬೇಕು. ಏಕೆಂದರೆ ನಮ್ಮ ಸೈನಿಕನನ್ನು ವರ್ಷಕ್ಕೆ ಒಂದೆರಡು ತಿಂಗಳು ಮಾತ್ರ ರಜೆಯ ಮೇಲೆ ಕಳುಹಿಸಲಾಗುತ್ತದೆ. ಉಳಿದಂತೆ ಆತ ತನ್ನ ಎಲ್ಲಾ ಆಸೆ-ಆಕಾಂಕ್ಷೆಗಳನ್ನು ಬಲಿಗೊಟ್ಟು ಬದುಕುತ್ತಿರುತ್ತಾನೆ. ವಿಪರೀತ ಶಿಸ್ತಿನಲ್ಲಿ ಬೆಳೆಯುತ್ತಿರುತ್ತಾನೆ. ಸಂಸಾರದಿಂದ ದೂರವಿರುತ್ತಾನೆ. ಆತನ ಮನರಂಜನೆಯನ್ನು ನಾವು ಕಿತ್ತುಕೊಂಡಿರುತ್ತೇವೆ. ಕಠಿಣವಾದ ತರಬೇತಿ ಆತನನ್ನು ರೂಪಿಸಿರುತ್ತದೆ. ಸಾಮಾನ್ಯ ಜನರೇನಾದರೂ ಸೈನಿಕನ ಪರಿಸ್ಥಿತಿಯಲ್ಲಿ ಆರು ತಿಂಗಳು ಬದುಕಿದರೆ ಆತ ಖಿನ್ನತೆಯಿಂದ ಆತ್ಮಹತ್ಯೆಯನ್ನೇ ಮಾಡಿಕೊಳ್ಳುತ್ತಾನೆ. ರಜೆಯಲ್ಲಿ ಕಾಲಕಳೆಯುವ ಆ ಸೈನಿಕನ ವರ್ತನೆ ಕೆಲವೊಮ್ಮೆ ನಾಗರಿಕರಿಗೆ ವಿಚಿತ್ರ ಎನಿಸಬಹುದು. ಅವನ ಅಂಥಾ ವರ್ತನೆ ಆತ ದೇಶಕ್ಕಾಗಿ ತನ್ನತನವನ್ನು ಕೊಟ್ಟಿದ್ದರ ಫಲ. ಆದ್ದರಿಂದ ಆತ ಮಾಡುವ ಸಣ್ಣಪುಟ್ಟ ತಪ್ಪುಗಳನ್ನು ದೇಶ ಕ್ಷಮಿಸಬೇಕು. ಮುಂದೆ ಇಂಥ ಪ್ರಕರಣಗಳಾಗದಂತೆ ನಾವು ಎಚ್ಚರ ವಹಿಸುತ್ತೇವೆ” ಎಂದು ಹೇಳಿದ್ದರು.
ಈ ಎರಡು ಘಟನೆಗಳು ನೀಡುವ ಸಂದೇಶಗಳು ಭಾರತೀಯ ಸೈನ್ಯ-ಸೈನಿಕ ಮತ್ತು ಆತನ ಕರ್ತವ್ಯದ ಬಗೆಗೆ ಬೇರೆಯೇ ಚಿತ್ರಣವನ್ನು ನೀಡುತ್ತದೆ. ಅದಕ್ಕೋ ಏನೋ ಇಂದಿಗೂ ಸೈನಿಕರು ರಜೆ ಮೇಲೆ ಊರಿಗೆ ತೆರಳುವ ಪ್ರಕ್ರಿಯೆ ವಿಶಿಷ್ಟವಾಗಿರುತ್ತವೆ. ರಜೆ ಮಂಜೂರಾದ ಪ್ರತೀ ಸೈನಿಕನನ್ನು ಅಧಿಕಾರಿಗಳು ಕೂಲಂಕಷವಾಗಿ ಪರಿಶೀಲಿಸುತ್ತಾರೆ. ನೈಜ ಕಾರಣಗಳನ್ನು ತಿಳಿಯುವುದು ಮಾತ್ರವಲ್ಲದೆ ರಜೆಯಲ್ಲಿರುವಾಗಲೂ ಆತನ ಹೊಣೆಗಾರಿಕೆಯನ್ನು ಸೇನೆ ಆತನಿಗೆ ನೆನಪು ಮಾಡಿಕೊಡುತ್ತದೆ. ಅಷ್ಟೇ ಅಲ್ಲದೆ ಈ ಎರಡು ಘಟನೆಗಳು ನೀಡುವ ಮತ್ತೂ ಒಂದು ಸಂದೇಶವಿದೆ. ರಜೆಯ ಮೇಲೆ ಅಥವಾ ನಿವೃತ್ತನಾದ ಯೋಧನನ್ನು ಸಮಾಜ ಹೇಗೆ ಸ್ವೀಕರಿಸಬೇಕು ಎಂಬುದರ ಒಳಾರ್ಥವೂ, ರಜೆಯಲ್ಲಿರುವ ಸೈನಿಕನನ್ನು ಸಮಾಜ ಹೇಗೆ ನೋಡುತ್ತದೆ ಎಂಬುದರ ನಿರೀಕ್ಷೆಯನ್ನೂ ಸೇನೆ ಇಟ್ಟುಕೊಳ್ಳುತ್ತದೆ. ಅದನ್ನು ಪೂರೈಸುವುದು ನಾಗರಿಕ ಸಮಾಜದ ಕರ್ತವ್ಯ. ಹಾಗಾಗಿ ಸಂಸ್ಕಾರವಂತ ಸಮಾಜ ಮಾಜಿ ಯೋಧನನ್ನು ಮತ್ತು ರಜೆಯ ಮೇಲೆ ಬಂದ ಯೋಧನನ್ನು ಗೌರವಪೂರ್ವಕವಾಗಿ ಕಾಣುತ್ತದೆ. ರಸ್ತೆಯಲ್ಲಿ ಸಾಗುವ ಮಿಲಿಟರಿ ಟ್ರಕ್ಕಿಗೆ ಮಕ್ಕಳು ಹೊಡೆಯುವ ಸೆಲ್ಯೂಟ್ ಅಂಥಾ ಸಂಸ್ಕಾರಕ್ಕೆ ಒಂದು ಉದಾಹರಣೆ.
ಆದರೆ ಇಂಥಾ ಸಂಸ್ಕಾರಕ್ಕೆ ಊನ ತರುವಂಥಾ ಘಟನೆಯೊಂದು ವೀರರ ನಾಡು, ಯೋಧರ ಭೂಮಿ, ಯೋಧ ಸಂಸ್ಕೃತಿಯನ್ನು ಇನ್ನೂ ಕಾಪಿಟ್ಟುಕೊಂಡ ಕೊಡಗಿನಲ್ಲೇ ನಡೆಯಿತು! ರಜೆಯಲ್ಲಿ ಬಂದಿದ್ದ ಯೋಧನೊಬ್ಬನ ಮೇಲೆ ಕ್ಷುಲ್ಲಕ ಕಾರಣಕ್ಕೆ ಹಲ್ಲೆ ನಡೆಯಿತು. ಸೈನಿಕತ್ವ ರಜೆಯಲ್ಲಿರುವುದಿಲ್ಲ ಎಂಬ ತಿಮ್ಮಯ್ಯನವರ ಮಾತುಗಳು ತಿಮ್ಮಯ್ಯನವರ ಊರಲ್ಲೇ ಸತ್ತುಹೋಗಿತ್ತು. ಕೊಡಗಿನಂತಹ ಊರಲ್ಲೇ ಹಾಗೆ ನಡೆಯಿತೇಕೆ? ಹಲ್ಲೆ ಮಾಡಿದವರಾರು? ಯಾಕಾಗಿ ಹಲ್ಲೆಯಾಯಿತು? ಈ ಮೂರು ಪ್ರಶ್ನೆಗಳಿಗೂ ಒಂದೇ ಉತ್ತರ, ಹಲ್ಲೆಕೋರರು ಮುಸಲ್ಮಾನರಾಗಿದ್ದರು ಎಂಬುದು! ಈ ಉತ್ತರವನ್ನು ಬಿಡಿಸುತ್ತಾ ಸಾಗಿದರೆ ನಮಗೆ ಶತಮಾನಗಳಿಂದ ಅವ್ಯಾಹತವಾಗಿ ನಡೆದುಬಂದಿರುವ ಭೀಭತ್ಸ ಚರಿತ್ರೆಯೊಂದು ತೆರೆದುಕೊಳ್ಳುತ್ತದೆ.
ಕೊಡಗಿನ ಮಡಿಕೇರಿ ತಾಲೂಕು ಮೊಣ್ಣಂಗೇರಿ ಗ್ರಾಮದ ಅಶೋಕ್ ಕಳೆದ ೧೮ ವರ್ಷಗಳಿಂದ ಭಾರತೀಯ ಸೇನೆಯ ೧೦ನೇ ಮದ್ರಾಸ್ ರೆಜಿಮೆಂಟಿನಲ್ಲಿ ಸೇವೆಯಲ್ಲಿದ್ದಾರೆ. ದೇಶದ ನಾನಾ ಕಡೆಗಳಲ್ಲಿ ಕೆಲಸ ಮಾಡಿದ್ದ ಇವರು ಬಹುಕಾಲ ಜಮ್ಮು-ಕಾಶ್ಮೀರದಲ್ಲಿದ್ದ ಅನುಭವವಿದ್ದವರು. ನಂತರ ಗಲ್ವಾನ್ ಬಿಕ್ಕಟ್ಟಿನ ಸಂದರ್ಭ ಚೀನಾ ಗಡಿಯಲ್ಲಿ ನಿಯೋಜನೆಗೊಂಡ ತುಕಡಿಯಲ್ಲೂ ಇದ್ದರು. ಗಲ್ವಾನ್ ಬಿಕ್ಕಟ್ಟು ಶಮನವಾದ ನಂತರ ಅವರನ್ನು ಅಸ್ಸಾಮಿಗೆ ವರ್ಗಾಯಿಸಲಾಗಿತ್ತು. ಅಂದರೆ ಅಶೋಕ್ ಅವರಿಗೆ ದೇಶದ ಶತ್ರು ಮಾನಸಿಕತೆಯ ಪರಿಚಯ ನೇರಾನೇರಾ ಸಾಕಷ್ಟು ಬಾರಿ ಆಗಿತ್ತು. ಶತ್ರುಗಳೊಡನೆ ಹೋರಾಟ ಮಾಡಿದ ಅನುಭವ ಕೂಡಾ ಇತ್ತು. ಅಂಥಾ ಅಶೋಕ್ ಎರಡು ತಿಂಗಳ ರಜೆಯನ್ನು ಪಡೆದು ಶತ್ರುಗಳನ್ನು ಮರೆತು ಮನೆಯಲ್ಲಿರೋಣ ಎಂದು ಬಂದಿದ್ದರು. ಒಂದು ದಿನ ಕುಟುಂಬ ಸಮೇತರಾಗಿ ಅಶೋಕ್ ತನ್ನೂರಿನಿಂದ ಮಡಿಕೇರಿಗೆ ಪ್ರಯಾಣಿಸುತ್ತಿದ್ದರು. ಮಡಿಕೇರಿ ಸಮೀಪಿಸುತ್ತಿದ್ದಾಗ ಸಾಗುತ್ತಿದ್ದ ಕಾರೊಂದು ಇವರ ಕಾರಿಗೆ ಗುದ್ದಿತು. ಎಲ್ಲಾ ಕ್ಷುಲ್ಲಕ ಅಪಘಾತಗಳಲ್ಲಿ ನಡೆಯುವಂತೆ ಇಲ್ಲೂ ಮಾತಿನ ಚಕಮಕಿಯಾಯಿತು. ಕೊನೆಗೆ ಅಶೋಕ್ ತಾನೊಬ್ಬ ಯೋಧ ಇದನ್ನು ಕಾನೂನು ಪ್ರಕಾರ ಇತ್ಯರ್ಥ ಮಾಡಿಕೊಳ್ಳೋಣ ಎಂದರು. ಅವರು ಇಷ್ಟೆಂದ್ದಿದ್ದೇ ವಾತಾವರಣವೇ ಬದಲಾಗಿಹೋಯಿತು. ತಾವು ಡಿಕ್ಕಿ ಹೊಡೆದಿದ್ದು ಭಾರತೀಯ ಸೇನೆಯ ಸೈನಿಕನೊಬ್ಬನ ಕಾರಿಗೆ ಎಂದರಿವಾಗುತ್ತಿದ್ದಂತೆ ಡಿಕ್ಕಿಹೊಡೆದ ಕಾರಿನಲ್ಲಿದ್ದವರ ಮುಖಭಾವ ಬದಲಾಯಿತು. ಇದ್ದಕ್ಕಿದ್ದಂತೆ ಅವರೆಲ್ಲರೂ ವ್ಯಗ್ರರಾದರು. ಜನ್ಮಜನ್ಮಾಂತರದ ಶತ್ರುವೋ ಎಂಬಂತೆ ಅವಾಚ್ಯ ಶಬ್ದಗಳಿಂದ ಬಯ್ಯಲಾರಂಭಿಸಿದ ಮುಸಲ್ಮಾನರ ಗುಂಪು ಅಶೋಕ್ ಮತ್ತು ಕುಟುಂಬದ ಮೇಲೆ ಏಕಾಏಕಿ ಹಲ್ಲೆ ನಡೆಸಿತು. ಮತಾಂಧತೆಗೆ ಅದೆಂಥಾ ನೆಟ್ವರ್ಕ್ ಇರುತ್ತದೋ, ಕ್ಷಣ ಮಾತ್ರದಲ್ಲಿ ಘಟನಾಸ್ಥಳಕ್ಕೆ ಗುಂಪುಗುಂಪಾಗಿ ಮುಸಲ್ಮಾನರು ಧಾವಿಸಿ ಬರತೊಡಗಿದರು, ಬಂದವರೆಲ್ಲರೂ ಹಲ್ಲೆ ಮಾಡಿದರು! ವಿಶೇಷವೆಂದರೆ ಅದು ಕಾರ್ಗಿಲ್ ವಿಜಯ ದಿನದ ಮುನ್ನಾ ದಿನವಾಗಿತ್ತು ಮತ್ತು ಬಕ್ರೀದ್ ಆಚರಣೆಯಾಗಿ ಅಂದಿಗೆ ಮೂರು ದಿನವಾಗಿತ್ತು! ಅಶೋಕ್ ಮಡಿಕೇರಿಯಲ್ಲಿ ನಡೆಯುವ ಕಾರ್ಗಿಲ್ ವಿಜಯೋತ್ಸವದ ಗುಂಗಲ್ಲಿದ್ದರೆ, ಹಲ್ಲೆ ಮಾಡಿದವರಿನ್ನೂ ಬಕ್ರೀದ್ ಗುಂಗಿನಿಂದ ಹೊರಬಂದಿರಲಿಲ್ಲ. ಅದರ ಪರಿಣಾಮವಾಗಿ ಹಲ್ಲೆ ಯಾವ ರೀತಿಯಲ್ಲಿ ನಡೆಯಿತೆಂದರೆ ಮನೆಯ ಸರ್ವರೂ ಗಂಭೀರವಾಗಿ ಗಾಯಗೊಂಡರು. ದೂರು ದಾಖಲಾಯಿತು, ಪೊಲೀಸರು ಯಾವುದೋ ಸೆಕ್ಷನ್ ಹಾಕಿದರು. ಹಲ್ಲೆಕೋರರು ಕೆಲವೇ ನಿಮಿಷಗಳಲ್ಲಿ ಜಾಮೀನು ಪಡೆದು ಎದೆ ಎತ್ತಿ ತಿರುಗಾಡತೊಡಗಿದರು!
ಅನೇಕ ಕಾರಣಗಳಿಂದ ಈ ಪ್ರಕರಣ ಯಾಕೋ ರಜೆಯ ಮೇಲಿರುವ ಸೈನಿಕನ ಮೇಲಾದ ಸಾಮಾನ್ಯ ಹಲ್ಲೆ ಎಂದು ಅನಿಸುವುದೇ ಇಲ್ಲ. ಏಕೆಂದರೆ ಮತಾಂಧರಿಗೆ ಆತ ಯೋಧನೆಂದು ಅರಿವಾಗುತ್ತಲೇ ಆತನನ್ನು ಸುಟ್ಟು ತಿನ್ನಬೇಕೆನ್ನುವಷ್ಟು ಕೋಪ ಬಂದಿತ್ತು. ಹಾಗಾದರೆ ಅವರೆಲ್ಲರಿಗೂ ಕಾಶ್ಮೀರ ನೆನಪಿಗೆ ಬಂದಿತ್ತೇ? ಸೈನಿಕರೆಂದರೆ ಭಯೋತ್ಪಾದಕರನ್ನು ಕೊಲ್ಲುವವರೆಂಬ ಆಕ್ರೋಶವಿತ್ತೇ? ಇವರು ಗಡಿಯಲ್ಲಿ ಪಾಕಿಸ್ಥಾನದ ವಿರುದ್ಧ ಎದೆತಟ್ಟಿ ನಿಲ್ಲುವವವರೆಂಬ ಸಿಟ್ಟು ಕೊಡಗಿನ ಸುಂಟಿಕೊಪ್ಪದವರಿಗೂ ಇತ್ತೇ? ಅಶೋಕರಂಥಾ ಸೈನಿಕರೇ ಸೋಫಿಯಾನಿನ ಮಾನವ ಬಾಂಬರ್ಗಳ ಶತ್ರುಗಳು ಎಂಬ ಜಿದ್ದು ಇತ್ತೇ? ಇವೆಲ್ಲವೂ ಇತ್ತು ಎನ್ನಲು ಸುಂಟಿಕೊಪ್ಪ ಮತ್ತು ಸುತ್ತಮುತ್ತಲ ಕೆಲವು ಮುಸಲ್ಮಾನರ ಮಾನಸಿಕತೆಗಳು ಹೇಳುತ್ತವೆ. ಏಕೆಂದರೆ ಹಲ್ಲೆ ನಡೆಸಿದವರೆಲ್ಲರೂ ಎಸ್ಡಿಪಿಐ ಎಂಬ ರಾಜಕಾರಣದ ಮುಖವಾಡ ಹೊತ್ತ ಭಯೋತ್ಪಾದಕರಿರುವ ಊರುಗಳಿಂದ ಬಂದಿದ್ದವರಾಗಿದ್ದರು. ಅವರೆಲ್ಲರಿಗೂ ಅವ್ಯಾಹತವಾಗಿ ಗೋಹತ್ಯೆ ನಡೆಸಿದ ಅನುಭವವಿತ್ತು. ಅವರೆಲ್ಲರಿಗೂ ವಿನಾಕಾರಣ ಹಿಂದೂ ದ್ವೇಷವನ್ನು ಕಾರಿಕೊಳ್ಳುವ ತರಬೇತಿಯಿತ್ತು. ಕಾಲಕಾಲಕ್ಕೆ ಎ.ಕೆ ಸುಬ್ಬಯ್ಯನವರಂಥ ರಕ್ಷಕರು ಕೊಡಗಿನಲ್ಲೇ ತಮ್ಮ ಬೆಂಬಲಕ್ಕಿರುವರು ಎಂಬ ಧೈರ್ಯವೂ ಇತ್ತು. ಈ ಎಲ್ಲಾ ಕಾರಣಗಳಿಂದ ಸುಂಟಿಕೊಪ್ಪ ಮತ್ತು ಸುತ್ತಮುತ್ತಲಿನ ಪ್ರದೇಶಗಳ ಮುಸಲ್ಮಾನರ ಆರ್ಭಟ ಆದ್ಯಾವ ಪರಿಯಲ್ಲಿದೆಯೆಂದರೆ ಸುಂಟಿಕೊಪ್ಪವೆಂಬುದು ಕೊಡಗಿನ ಡಿಜೆ ಹಳ್ಳಿಯೋ ಎಂಬಂತೆ ಭಾಸವಾಗುತ್ತದೆ. ಇಂಥ ಅಂಗೈ ಸತ್ಯವನ್ನು ಅರಿಯದ ವ್ಯವಸ್ಥೆಗೆ ಏನನ್ನಬೇಕು? ಡಿಜೆ ಹಳ್ಳಿಯಲ್ಲಿ ಬೆಂಕಿ ಇಟ್ಟಿದ್ದು ಎಲ್ಲಿಗೆಂಬುದು ಮರೆತುಹೋಯಿತೇ? ಯೋಧನಿಗೆ ಬಡಿದವರಿಗೆ ಅದೇನು ಲೆಕ್ಕವೇ?
✍️ಸಂತೋಷ್ ತಮ್ಮಯ್ಯ
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.