ಹೀರೋ ಎಂದ ತಕ್ಷಣ ನಮಗೆ ನೆನಪಿಗೆ ಬರುವುದು ಸಿನಿಮಾದಲ್ಲಿ ಅಭಿನಯಿಸಿದ ನಟರು. ಆದರೆ ನಿಜ ಜೀವನದಲ್ಲಿ ನಾನು ಕಂಡ ರಿಯಲ್ ಹೀರೋ ನಮ್ಮ ವೀರಯೋಧರು. ಯಾವುದೇ ಅಪೇಕ್ಷೆ ಇಲ್ಲದೆ ತಮ್ಮ ದೇಶಕ್ಕಾಗಿ ಎಲ್ಲವನ್ನು ಮುಡಿಪಾಗಿಟ್ಟ ನಮ್ಮ ನಿಜವಾದ ನಾಯಕರಿಗೆ ಒಂದು ಸೆಲ್ಯೂಟ್.
ಸ್ನೇಹಹಸ್ತವನ್ನು ಚಾಚಿದ ಭಾರತವನ್ನು, ಪಾಕ್ ಎಂಬ ವಿಷಸರ್ಪ ಮೋಸದಲ್ಲಿ ಕಚ್ಚಿದ ಘಟನೆ, ಅದಕ್ಕೆ ಭಾರತದ ಪ್ರತ್ಯುತ್ತರ ಎಲ್ಲಾ ಭಾರತೀಯರಿಗೆ ಮೈ ರೋಮಾಂಚನಗೊಳ್ಳುತ್ತದೆ. ಏಕೆಂದರೆ ಶತ್ರು ರಾಷ್ಟ್ರದ ಸೈನಿಕರನ್ನು ವೀರಾವೇಶದಿಂದ ಹಿಮ್ಮೆಟ್ಟಿಸಿದ ಕಾರ್ಗಿಲ್ ಯುದ್ಧದಲ್ಲಿ 527 ಭಾರತೀಯ ವೀರ ಯೋಧರು ಹುತಾತ್ಮತರಾಗಿದ್ದರೆ, ಪಾಕಿಸ್ಥಾನದ 1000 ಕ್ಕೂ ಹೆಚ್ಚು ಯೋಧರನ್ನು ಸದೆಬಡಿಯುವಲ್ಲಿ ಭಾರತ ಯಶಸ್ವಿಯಾಗಿತ್ತು.
ಬೇಸಿಗೆಯಲ್ಲೂ ತಂಪು ಹವೆ ಮತ್ತು ರಾತ್ರಿ ಕಡುಶೀತ ವಾತಾವರಣ, ಚಳಿಗಾಲಗಳು ಸುದೀರ್ಘ, ಮೈಕೊರೆಯುವ ವಾತಾವರಣವಿದ್ದು, ಉಷ್ಣಾಂಶ ಆಗಾಗ್ಗೆ -48 ಡಿಗ್ರಿ ಸೆಲ್ಸಿಯಸ್ಗೆ ಕುಸಿಯುತ್ತದೆ. ಯುದ್ಧ ನಡೆದ ಪ್ರದೇಶ ಸುಮಾರು 160 ಕಿ. ಮೀ ವಿಸ್ತರಿಸಿರುವ ಹಿಮಚ್ಛಾದಿತ ಪರ್ವತ ಶ್ರೇಣಿಯಾಗಿದು.
1999ರಲ್ಲಿ ನಡೆದ ಯುದ್ಧದಲ್ಲಿ ಗೆಲುವು ಸಾಧಿಸಿದ ದಿನವನ್ನು ‘ಕಾರ್ಗಿಲ್ ವಿಜಯ ದಿವಸ್’ ಎಂದು ಪ್ರತಿ ವರ್ಷ ಸ್ಮರಣೆ ಮಾಡಿಕೊಳ್ಳುತ್ತಾ ಬರುತ್ತಿದ್ದೇವೆ. ಕಾರ್ಗಿಲ್ ಯುದ್ಧದ ದೃಶ್ಯಗಳು ಟಿವಿಯಲ್ಲಿ ಪ್ರಸಾರಗೊಂಡವು. ಎಲ್ಲಾ ಭಾರತೀಯರಿಗೆ ಆ ದಿನವನ್ನು ಮರೆಯಲು ಸಾಧ್ಯವೇ ಇಲ್ಲ.
ಕಾಲುಕೆರೆದು ಯುದ್ಧಕ್ಕಿಳಿದ ಪಾಕ್ ವಿರುದ್ಧ ನಮ್ಮ ವೀರ ಸೇನಾನಿಗಳು ಜಯಭೇರಿ ಬಾರಿಸಿದ ದಿನ. ಕಾರ್ಗಿಲ್ ಯುದ್ಧದಲ್ಲಿ ಹೋರಾರಿದ ವೀರಯೋಧ ರಂಗಪ್ಪ ಹುಲಿಯನ್ನ ಆಲೂರ ವೀರಾವೇಶದಿಂದ ಪಾಕ್ ಸದೆಬಡಿದರು. ಯುದ್ಧದ ಸಂದರ್ಭದಲ್ಲಿ ರಂಗಪ್ಪ ತಮ್ಮ ಎರಡೂ ಕೈಗಳನ್ನು ಕಳೆದುಕೊಳ್ಳುತ್ತಾರೆ ಹಾಗೂ ಕಾಲುಗಳಿಗೆ ಪೆಟ್ಟಾಗಿತ್ತು ಆದರೂ ಕೂಡ ಛಲಬಿಡದೆ ವೀರಾವೇಶದಿಂದ ಯುದ್ಧದಲ್ಲಿ ಪಾಲ್ಗೊಂಡಿದ್ದರು. ಇಂದಿಗೂ ತಮ್ಮ ಕೈಗಳನ್ನು ಕಳೆದುಕೊಂಡಿದ್ದೇನೆ ಎಂಬ ಬೇಸರ ಇಲ್ಲ, ಏಕೆಂದರೆ ನನ್ನ ದೇಶಕ್ಕೆ ನಾನೇನು ಮಾಡಿದ್ದೇನೆ ಎಂಬ ಹೆಮ್ಮೆಯಿದೆ ಎಂಬ ರಂಗಪ್ಪ ಅವರ ಮಾತು ಎಲ್ಲರಿಗೂ ಸ್ಫೂರ್ತಿ. ರಂಗಪ್ಪ ಅವರೊಂದಿಗಿದ್ದ ಏಳು ಜನ ಸ್ನೇಹಿತರು ಮೃತಪಟ್ಟರು, ಏಕಾಂಗಿಯಾಗಿ ಹೋರಾಡಿದ ರಂಗಪ್ಪ ತನ್ನ ದೇಶಕ್ಕಾಗಿ ಮಾಡಿದ ಸೇವೆಯ ಬಗ್ಗೆ ಅಪಾರವಾದ ಹೆಮ್ಮೆಯನ್ನು ಹೊಂದಿದ್ದಾರೆ.
ವಿಕ್ರಮ್ ಬಾತ್ರಾ ತನ್ನ 24ನೇ ವಯಸ್ಸಿನಲ್ಲಿಯೇ ಯುದ್ದದಲ್ಲಿ ಪಾಲ್ಗೊಂಡಿದ್ದರು. ಇತ್ತೀಚಿನ ಜಾಹಿರಾತಿನ ಟ್ಯಾಗ್ ಲೈನ್ ಆಗಿದ್ದ ‘ದಿಲ್ ಮಾಂಗೆ ಮೋರ್’ ಅನ್ನು ಯುದ್ಧ ಘೋಷಣೆಯನ್ನಾಗಿ ಇವರು ಹೇಳಿದ್ದರು. ಅಪ್ರತಿಮ ಧೈರ್ಯವಂತ ಬಾತ್ರಾ ಸುಡುತ್ತಿರುವ ಜ್ವರದ ಮಧ್ಯೆಯೂ ಅತೀ ಎತ್ತರದ ಶಿಖರ ಪಾಯಿಂಟ್ 4875 ಗೆ ನುಗ್ಗಿ ಅದನ್ನು ಶತ್ರುಗಳ ಕೈಯಿಂದ ವಶಪಡಿಸಿಕೊಂಡರು. ಯುದ್ದಕ್ಕೆ ಹೋಗುವ ಮೊದಲು ಬಾತ್ರ, “ನಾನು ಭಾರತದ ಧ್ವಜವನ್ನು ಹೆಮ್ಮೆಯಿಂದ ಹಾರಿಸಿಕೊಂಡು ಬರುತ್ತೇನೆ. ಇಲ್ಲವಾದರೆ ಸುತ್ತಿದ ಧ್ವಜದೊಂದಿಗೆ ನನ್ನ ದೇಹ ಬರುತ್ತದೆ” ಎಂದಿದ್ದರು. ಮರಣೋತ್ತರವಾಗಿ ವಿಕ್ರಮ್ ಬಾತ್ರಾ ಅವರಿಗೆ ಅತ್ಯುನ್ನತ ಪರಮ ವೀರ ಚಕ್ರ ಗೌರವ ನೀಡಲಾಯಿತು. ವೀರಾವೇಶದ ಯೋಧ ಬಾತ್ರಾಗೆ ‘ಕಾರ್ಗಿಲ್ ಹೀರೋ, ಕಾರ್ಗಿಲ್ನ ಸಿಂಹ ಎಂದೆಲ್ಲಾ ಬಿರುದುಗಳಿಂದ ಕರೆಯಲಾಗುತ್ತದೆ.
ಇನ್ನು ಈ ಯುದ್ಧದಲ್ಲಿ ಸಾಕಷ್ಟು ಯೋಧರು ತಮ್ಮ ಅಂಗಾಂಗಗಳನ್ನು ಕಳೆದುಕೊಂಡಿದ್ದರು ಕೂಡ ಇಂದಿಗೂ ಆರುಷ ಆರಿಲ್ಲ. ಭಾರತೀಯ ಪ್ರತಿಯೊಬ್ಬ ಯೋಧನ ಕಥೆ ಕೂಡ ಒಂದು ರೋಮಾಂಚನವಾಗಿದೆ. ಕಾರ್ಗಿಲ್ ಯುದ್ಧದಲ್ಲಿ ಮಡಿದ ಯೋಧನೊಬ್ಬನ ಸಮಾಧಿಯ ಮೇಲೆ ಬರೆದಿದ್ದ ಸಾಲುಗಳಿವು, ‘ಕಾರ್ಗಿಲ್ ವಿಜಯ ದಿವಸ ಎಂಬುದು ಭಾರತೀಯ ಸೇನಾ ಇತಿಹಾಸದ ಪರ್ವಕಾಲ. ನಮಗಾಗಿ, ನಮ್ಮ ಪರಿಚಯವೇ ಇಲ್ಲದ ವ್ಯಕ್ತಿಯೊಬ್ಬ ರಾತ್ರಿ ಹಗಲೆನ್ನದೆ ಶತ್ರು ರಾಷ್ಟ್ರದ ವೈರಿಗಳೊಂದಿಗೆ ಸೆಣೆಸಾಡುತ್ತಾನೆ, ಮಳೆ ಚಳಿ ಎನ್ನದೆ ಗಡಿ ಕಾಯುತ್ತಾನೆ, ಹೊಟ್ಟೆಗೆ ಸರಿಯಾಗಿ ಆಹಾರವೇ ಸಿಕ್ಕದಿದ್ದರೂ ದೇಶಕ್ಕಾಗಿ ಹಪಹಪಿಸುತ್ತಾನೆ, ಕೊನೆಗೊಂದು ದಿನ ಮಡಿಯುತ್ತಾನೆ, ಎಂಥ ವಿಚಿತ್ರ, ಇಂಥವರ ಋಣ ತೀರಿಸುವುದಕ್ಕೆ ಯಾರಿಂದ ಸಾಧ್ಯ? ಎಂಥ ಸಂಕಷ್ಟದ ಪರಿಸ್ಥಿತಿಯಲ್ಲೂ ಯುದ್ಧ ಗೆದ್ದ ನಮ್ಮವರ ಶೌರ್ಯಕ್ಕೆ ಒಂದು ಸೆಲ್ಯೂಟ್.’
ಆಕರ್ಷ ಆರಿಗ
ಎಸ್. ಡಿ. ಎಂ. ಸ್ನಾತಕೋತ್ತರ ಕಾಲೇಜು, ಉಜಿರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.