ಯಾವುದೇ ಒಂದು ಒಳ್ಳೆಯ ಕಾರ್ಯವನ್ನು ಆರಂಭಿಸುವ ಮೊದಲು ಗುರಸ್ಮರಣೆ ಮಾಡುವುದು ವಾಡಿಕೆ. ದೈವಾನುಗ್ರಹದೊಂದಿಗೆ ಗುರುವಿನ ಅನುಗ್ರಹವೂ ದೊರೆತಾಗಲೇ ಆ ಕಾರ್ಯಕ್ಕೆ ಯಶಸ್ಸು ಲಭಿಸುವುದೆಂಬ ನಂಬಿಕೆಯಿದೆ. ಅಂದರೆ, ದೈವಾನುಗ್ರಹದಷ್ಟೇ ಮಹತ್ತ್ವ ಈ ಗುರುವಿನ ಕೃಪೆಗೂ ಇದೆಯೆಂದಾಯಿತು.
ಗುರುಪೂರ್ಣಿಮೆಯ ಪವಿತ್ರ ದಿನವನ್ನು ಸ್ಮರಿಸುತ್ತ ಇಡೀ ಗುರುವೃಂದಕ್ಕೆ ನಮನ ಸಲ್ಲಿಸುತ್ತ ಒಂದು ಲೇಖನ. ಲೋಕಗುರು ವೇದವ್ಯಾಸರಿಗೆ ಮೊದಲ ಪ್ರಣಾಮಗಳು.
ಗುರುರ್ಬ್ರಹ್ಮ ಗುರುರ್ವಿಷ್ಣುಃ ಗುರುರ್ದೇವೋ ಮಹೇಶ್ವರಃ|
ಗುರುಸಾಕ್ಷಾತ್ ಪರಬ್ರಹ್ಮ ತಸ್ಮೈಶ್ರೀ ಗುರುವೇ ನಮಃ||
ಯಾರು ಈ ಗುರು? ಗುರುವಿನ ಅರ್ಹತೆಗಳೇನು? ಗುರುವಿನ ಲಕ್ಷಣಗಳೇನು? ಗುರು ತನ್ನ ಶಿಷ್ಯರಿಗೆ ಯಾವ ಯಾವ ರೀತಿಗಳಿಂದ ಮಾರ್ಗದರ್ಶನ ನೀಡಬಲ್ಲರು? ಎಂಬೆಲ್ಲ ವಿಚಾರಗಳ ಬಗ್ಗೆ ತಿಳಿಯುವುದು ಅಗತ್ಯವಾಗಿದೆ.
ತಾಯಿ, ತಂದೆಗೆ ನಮಿಸಿದ ನಂತರ ಆಚಾರ್ಯದೇವೋಭವ ಎಂದು ನಮಿಸುವ ಸಂಪ್ರದಾಯ ನಮ್ಮ ಭಾರತೀಯ ಸಂಸ್ಕೃತಿಯಲ್ಲಿದೆ. ಆದರೆ, ಸಂತ ಕಬೀರದಾಸರು ಭಗವಂತ ಮತ್ತು ಗುರು ಇಬ್ಬರೂ ನನ್ನೆದುರಾಗಿ ಬಂದಾಗ ನಾನು ಮೊದಲು ಗುರುವಿಗೇ ನಮಿಸುತ್ತೇನೆ ಎನ್ನುತ್ತಾರೆ. ಏಕೆಂದರೆ ಆ ಭಗವಂತನೆಡೆಗೆ ಸಾಗುವಂತೆ ನನ್ನಲ್ಲಿ ಸಚ್ಚಾರಿತ್ರ್ಯವನ್ನು ಬೆಳೆಸಿದ್ದು ಗುರು ತಾನೇ? ಅದಕ್ಕೆ ಅವರಿಗೇ ನನ್ನ ಮೊದಲ ನಮನ ಎಂಬುದು ಅವರ ನಂಬಿಕೆ.
ನ ಗುರೋರಧಿಕಂ ತತ್ತ್ವಂ ನಗುರೋರಧಿಕಂ ತಪಃ|
ತತ್ತ್ವ ಜ್ಞಾನಾತ್ ಪರಂ ನಾಸ್ತಿ ತಸ್ಮೈ ಶ್ರೀ ಗುರುವೇ ನಮಃ||
ಗುರುವಿಗಿಂತಲೂ ಅಧಿಕವಾದ ತತ್ತ್ವವಿಲ್ಲ; ಗುರುವಿಗಿಂತಲೂ ಅಧಿಕವಾದ ತಪಸ್ಸಿಲ್ಲ; ತತ್ತ್ವಜ್ಞಾನಕಿಂತಲೂ ಶ್ರೇಷ್ಠವಾದದ್ದು ಯಾವುದೂ ಇಲ್ಲ. ಆದ್ದರಿಂದ ಶ್ರೀ ಗುರುವನ್ನು ನಮಿಸುತ್ತೇನೆ.
ಗುರುವಿನ ಶ್ರೇಷ್ಠತೆಯನ್ನು ತಿಳಿಸುವ ಈ ಸ್ತುತಿಯಲ್ಲದೆ ಇನ್ನೂ ಕೆಲವು ಉದಾಹರಣೆಗಳನ್ನು ಗಮನಿಸಬಹುದು.
ಶಿವಪಥವನರಿವಡೆ ಗುರುಪಥ ಮೊದಲು ಎಂದಿದ್ದಾರೆ ಶರಣರು. ಹರಿ ಮುನಿದರೆ ಗುರುಕಾಯ್ವನು, ಗುರು ಮುನಿದರೆ ಕಾವರಾರು? ಎಂದಿದ್ದಾರೆ, ಸಾಧಕರು.
ಪ್ರತಿಯೊಬ್ಬರ ಬದುಕಿನಲ್ಲಿಯೂ ಇಂತಹ ಗುರುವಿನ ಅಗತ್ಯವಿದ್ದೇ ಇರುತ್ತದೆ. ಇಲ್ಲಿ ಲೌಕಿಕ ಶಿಕ್ಷಣದ ಮಾರ್ಗದರ್ಶನ ನೀಡುವವರದು ಒಂದು ವರ್ಗವಾದರೆ, ಆಧ್ಯಾತ್ಮಿಕ ಚಿಂತನೆಯೊಂದಿಗೆ ಶಿಷ್ಯನ ಸರ್ವತೋಮುಖ ಬೆಳವಣಿಗೆಯತ್ತ ಕಾಳಜಿವಹಿಸಿ, ಮಾನವೀಯ ಮೌಲ್ಯಗಳನ್ನು ತುಂಬುತ್ತ, ನೈತಿಕತೆಯ ಮಹತ್ತ್ವವನ್ನೂ ತಿಳಿಸುತ್ತಾ, ಒಬ್ಬ ಸುಸಂಸ್ಕೃತ ವ್ಯಕ್ತಿಯನ್ನಾಗಿ ರೂಪಿಸುವವರು ಮತ್ತೊಂದು ವರ್ಗದವರಾಗುತ್ತಾರೆ. ಹೀಗೆ ಕೈಹಿಡಿದು ನಡೆಸುವ ವ್ಯಕ್ತಿಯೇ ಗುರು ಎಂಬ ಸ್ಥಾನವನ್ನು ಪಡೆದುಕೊಂಡವರು. ಕಲಿಕೆ ಎಂಬುದು ಮಗುವಿಗೆ ಮನೆಯಿಂದಲೇ ತಾಯಿಯಿಂದಲೇ ಆರಂಭವಾದರೂ ಅದು ಬೆಳೆದಂತೆಲ್ಲ ಹೆಜ್ಜೆಹಜ್ಜೆಗೂ ತಿದ್ದುತ್ತ, ಮುನ್ನಡೆಸುವವರು ಶಿಕ್ಷಕರಾಗಿರುತ್ತಾರೆ. ಈ ಶಿಕ್ಷಕ ಸಮುದಾಯದಲ್ಲಿ ಎಲ್ಲರೂ ಗುರು ಗಳಾಗಿರಲು ಸಾಧ್ಯವಿಲ್ಲ. ಹಾಗಾಗಿ ಕೆಲವರ ಬದುಕಿನಲ್ಲಿ ಇಂತಹ ಅನೇಕ ಮಹಾನ್ ವ್ಯಕ್ತಿಗಳ ಸಾನ್ನಿಧ್ಯದ ಅದೃಷ್ಟವು ಒದಗಿದರೆ ಮತ್ತೆ ಕೆಲವರ ಜೀವನದಲ್ಲಿ ಒಬ್ಬರೋ ಇಬ್ಬರೋ ಮಾತ್ರವೇ ಪ್ರವೇಶಿಸಬಹುದು. ಅಂತಹವರ ನಡೆನುಡಿ ಸದಾಕಾಲಕ್ಕೂ ಶಿಷ್ಯರಿಗೆ ದಾರಿದೀಪವಾಗಿರುತ್ತದೆ. ಅದಕ್ಕೆ ಅವರು ಶಿಷ್ಯರಿಗೆ ಪ್ರಾತಃಸ್ಮರಣೀಯರಾಗಿರುತ್ತಾರೆ.
ಹೀಗೆ ಪ್ರಾತಃಸ್ಮರಣೀಯರೆನಿಸಿಕೊಂಡವರಿಗೆ ಗುರುಪದವಿ ಎಂಬುದು ಕೇವಲ ಒಂದು ವೃತ್ತಿಯಲ್ಲ. ಜೀವನೋಪಾಯದ ಸಾಧನವಲ್ಲ. ಅದೊಂದು ಪವಿತ್ರವೂ, ಮಹತ್ತ್ವಪೂರ್ಣವೂ ಆದ ಜವಾಬ್ದಾರಿಯ ಸ್ಥಾನ. ಸುಸಂಸ್ಕೃತ ಸಮಾಜವೊಂದನ್ನು ಕಟ್ಟುವ ಹೊಣೆಹೊತ್ತ ಸ್ಥಾನ. ಗುರುವಾದವನು ತನ್ನ ಆ ಘನತೆ, ಗೌರವ, ಪಾವಿತ್ರ್ಯ ಮೊದಲಾದ ಆದರ್ಶಗಳಿಗೆ ಚ್ಯುತಿ ಬರದಂತೆ ಎಚ್ಚೆತ್ತ ಜೀವನ ನಡೆಸಬೇಕಾಗುತ್ತದೆ. ಕಾಯಕ ನಿಷ್ಠೆ, ವೃತ್ತಿ ನಿಷ್ಠೆಯೊಂದಿಗೆ ಗುರು- ಶಿಷ್ಯ ಸಂಬಂಧದಲ್ಲಿರಬೇಕಾದ ವಾತ್ಸಲ್ಯದ ಅನುಬಂಧವನ್ನೂ ಮರೆಯಬಾರದು. ಜ್ಞಾನಪ್ರಸಾರ ಮಾಡುವುದರೊಂದಿಗೆ ಪರಸ್ಪರರಲ್ಲಿ ಪ್ರೀತಿಯ ಬೆಸುಗೆ ಹಾಕುವ ಕಾರ್ಯವೂ ಗುರುವಿನದ್ದಾಗಿರುತ್ತದೆ.
ಇಂತಹ ಗುರುಗಳ ದೊಡ್ಡ ಪರಂಪರೆಯನ್ನು ನಮ್ಮ ಪುರಾಣೇತಿಹಾಸಗಳಲ್ಲಿ ಕಾಣುತ್ತೇವೆ. ಅವರೆಲ್ಲರ ಉದಾತ್ತ, ಆದರ್ಶ ಜೀವನ ನಮ್ಮ ಮುಂದಿದೆ. ಜೀವನದ ಎಲ್ಲ ಕ್ಷೇತ್ರಗಳಲ್ಲಿ ಹೀಗೆ ಶಿಷ್ಯರಿಗೆ ಮಾರ್ಗದರ್ಶನ ನೀಡಿದ ಮಹಾನ್ ಚೇತನಗಳದೆಷ್ಟೋ ಉದಾಹರಣೆಯನ್ನು ಕಾಣುತ್ತೇವೆ. ನಮ್ಮ ಆಚಾರ್ಯಪರಂಪರೆಯಲ್ಲಿ ಅಗ್ರಸ್ಥಾನದಲ್ಲಿರುವ ಲೋಕಗುರು ಮಹರ್ಷಿ ವೇದವ್ಯಾಸರಿಂದ ಬೇರೆ ಬೇರೆ ಕಾಲಘಟ್ಟಗಳಲ್ಲಿ ಆದಿಶಂಕರಾಚಾರ್ಯರು, ರಾಮಾನುಜಾಚಾರ್ಯರು, ಮಧ್ವಾಚಾರ್ಯರು, ವಿದ್ಯಾರಣ್ಯರು, ಸಮರ್ಥರಾಮದಾಸರು, ರಾಮಕೃಷ್ಣರು, ವಿವೇಕಾನಂದರು- ಹೀಗೆ ಹಿಮಾಲಯದಿಂದ ಕನ್ಯಾಕುಮಾರಿಯವರೆಗೆ ಸರ್ವರಿಗೂ ಪ್ರಾತಃಸ್ಮರಣೀಯರಾದ ಮಹಾಪುರುಷರಿದ್ದಾರೆ. ಹಾಗೆಯೇ ಗಾರ್ಗಿ, ಮೈತ್ರೇಯಿಯರೇ ಮೊದಲಾದ ಬ್ರಹ್ಮಜ್ಞಾನಿ ಮಹಿಳೆಯರೂ ಗುರು ಪರಂಪರೆಯಲ್ಲಿ ಸೇರಿದ್ದಾರೆ. ಇವರೆಲ್ಲರ ಆದರ್ಶ ನಮ್ಮ ಮುಂದಿದೆ.
✍️ ನಂ. ನಾಗಲಕ್ಷ್ಮಿ
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.