ಆದಿಯೋಗಿ, ನಟರಾಜ, ಸೋಮನಾಥ, ಅರ್ಧ ನಾರೀಶ್ವರ ಹೀಗೆ ಹಲವಾರು ಹೆಸರುಗಳಿಂದ ಪೂಜಿಸಲ್ಪಡುವ ಶಿವ ಸನಾತನ ಧರ್ಮೀಯರ ಜೀವನದ ಪ್ರಮುಖ ಭಾಗ. ಪತ್ನಿಯ ಮೇಲಿನ ಪ್ರೀತಿ, ಎದುರಿಸಿ ನಿಲ್ಲಲಾರದ ಕೋಪ ಮತ್ತು ಧ್ಯಾನಸ್ಥ ಶಾಂತ ಶಿವ. ಹೀಗೆ ಶಿವನನ್ನು ನಾನಾ ರೂಪದಲ್ಲಿ ಪೂಜಿಸಲಾಗುತ್ತದೆ. ಶಿವನ ಅನಂತ ಸ್ವರೂಪವನ್ನು ಸಂಕೇತಿಸುವ, ಆದಿ ಮತ್ತು ಅಂತ್ಯಗಳಿಲ್ಲದ ಅಭಿವ್ಯಕ್ತಿಯನ್ನು ನಾವು ಶಿವಲಿಂಗ ಎಂದು ಕರೆಯುತ್ತೇವೆ. ಶಿವನಿಗೆ 64 ರೂಪಗಳಿವೆ ಮತ್ತು ಪ್ರತಿಯೊಂದು ರೂಪವು ಭಿನ್ನವಾಗಿದೆ. ಶಿವನ ರೂಪಗಳಲ್ಲಿ ಮಹತ್ವವಾದದ್ದು 12 ಜ್ಯೋತಿರ್ಲಿಂಗಗಳು. ಗುಜರಾತ್ನ ಸೋಮನಾಥ್, ಆಂಧ್ರಪ್ರದೇಶದ ಶ್ರೀ ಶೈಲಂ ನಲ್ಲಿರುವ ಮಲ್ಲಿಕಾರ್ಜುನ, ಮಧ್ಯಪ್ರದೇಶದ ಉಜ್ಜಯಿನಿ ಯಾ ಮಹಾಕಾಳೇಶ್ವರ. ಮಧ್ಯಪ್ರದೇಶದ ಓಂಕಾರೇಶ್ವರ, ಹಿಮಾಲಯದ ಕೇದಾರನಾಥ,ಮಹಾರಾಷ್ಟ್ರದ ತ್ರಯಂಬಕೇಶ್ವರ, ಜಾರ್ಖಂಡ್ನ ವೈದ್ಯನಾಥ, ಹಿಮಾಚಲ ಪ್ರದೇಶದ ಬೈದ್ಯನಾಥ್, ಗುಜರಾತ್ನ ನಾಗೇಶ್ವರ, ರಾಮೇಶ್ವರದ ರಾಮೇಶ್ವರ ಮತ್ತು ಮಹಾರಾಷ್ಟ್ರದ ಗುಣೇಶ್ವರ.
ಉಜ್ಜಯನಿಯಲ್ಲಿರುವ ಮಹಾಕಾಳೇಶ್ವರ ದೇವಾಲಯವನ್ನು 18 ಮಹಾ ಶಕ್ತಿ ಪೀಠಗಳಲ್ಲಿ ಒಂದು ಎಂದು ಹೇಳಲಾಗುತ್ತದೆ. ಶಿವನು ಸತಿ ದೇವಿಯ ಮೃತಶರೀರದ ಭಾಗಗಳನ್ನು ಹೊತ್ತೊಯ್ಯುವಾಗ, ಶರೀರದ ಭಾಗಗಳು ಉದುರಿ ಬಿದ್ದ ಸ್ಥಳಗಳನ್ನು ಶಕ್ತಿ ಪೀಠಗಳು ಎನ್ನಲಾಗುತ್ತದೆ. ಪುರಾಣಗಳ ಪ್ರಕಾರ ಒಟ್ಟು 51 ಶಕ್ತಿಪೀಠಗಳಿವೆ, ಪ್ರತಿಯೊಂದು ಶಕ್ತಿ ಪೀಠಗಳಲ್ಲಿಯೂ ಶಕ್ತಿ ಮತ್ತು ಕಲಾಭೈರವನ ದೇವಾಲಯಗಳಿವೆ. ಸತಿ ದೇವಿಯ ಮೇಲಿನ ತುಟಿ ಬಿದ್ದ ಸ್ಥಳವಾದ ಈ ದೇವಾಲಯದಲ್ಲಿ ಮಹಾಕಾಳಿಯ ರೂಪದಲ್ಲಿ ಶಕ್ತಿಯು ಆರಾಧಿಸಲ್ಪಡುತ್ತಾಳೆ.
ಪುರಾಣಗಳ ಪ್ರಕಾರ, ಉಜ್ಜಯನಿ ನಗರವನ್ನು ಅವಂತಿಕಾ ಎಂದು ಕರೆಯಲಾಗುತ್ತಿತ್ತು. ಪುರಾಣಗಳಲ್ಲಿ ಅವಂತಿಕಾ ನಗರವು ಭಕ್ತಿ ಮತ್ತು ಸೌಂದರ್ಯಕ್ಕೆ ಹೆಸರುವಾಸಿಯಾಗಿತ್ತು. ಹಲವಾರು ವಿದ್ಯಾರ್ಥಿಗಳು ಪವಿತ್ರ ಗ್ರಂಥಗಳ ಅಧ್ಯಯನ ಮಾಡಲು ಈ ನಗರಕ್ಕೆ ಬರುತ್ತಿದ್ದರು. ಪೌರಾಣಿಕ ಕಥೆಗಳ ಪ್ರಕಾರ ಚಂದ್ರಸೇನ ಎಂಬ ಶಿವನ ಧರ್ಮನಿಷ್ಠ ಉಜ್ಜಯನಿ ನಗರವನ್ನು ಆಳುತ್ತಿದ್ದನು. ಹೀಗಿರುವಾಗ ಒಂದು ದಿನ ಶ್ರೀಕರ ಎಂಬ ರೈತ ಬಾಲಕನು ಅರಮನೆಯ ಮೈದಾನದಲ್ಲಿ ನಡೆದುಕೊಂಡು ಹೋಗುತ್ತಿರುವಾಗ ರಾಜ ಶಿವನಾಮವನ್ನು ಜಪಿಸುತ್ತಿರುವುದು ಕೇಳಿದನು ಮತ್ತು ಅವನೊಂದಿಗೆ ಪ್ರಾರ್ಥನೆಯನ್ನು ಸಲ್ಲಿಸಲು ದೇವಾಲಯಕ್ಕೆ ಧಾವಿಸಿದನು. ಆದರೆ ಅವಲುಗಾರರು ಅವನನ್ನು ಬಲವಂತದಿಂದ ದೂಡಿ ನಗರದ ಹೊರವಲಯದಲ್ಲಿರುವ ಕ್ಷಿಪ್ರಾ ನದಿಯ ಬಳಿ ಕಳುಹಿಸಿದರು. ಉಜ್ಜಯನಿಯ ಪ್ರತಿಸ್ಪರ್ಧಿಗಳಾದ ರಿಪುದ ಮಾನ ಮತ್ತು ರಾಜಸಿಂಘಾದಿತ್ಯರು ಉಜ್ಜಯನಿಯ ಮೇಲೆ ದಾಳಿ ನಡೆಸಿ ಸಂಪತ್ತನ್ನು ಸ್ಸೋರೆಗಯ್ಯುವ ಯೋಜನೆಯೊಂದಿಗೆ ನದಿಯ ಇನ್ನೊಂದು ದಡದಲ್ಲಿ ನೆರೆದಿದ್ದರು, ಈ ವಿಷಯವನ್ನು ಗ್ರಹಿಸಿದ ಶ್ರೀಕಾರನು ರಾಜ್ಯದ ರಕ್ಷಣೆಗಾಗಿ ಶಿವನನ್ನು ಪ್ರಾರ್ಥಿಸಲು ಪ್ರಾರಂಭಿಸಿದನು. ಈ ಸುದ್ದಿಯನ್ನು ತಿಳಿದ ವೃದ್ಧಿ ಎಂಬ ಪುರೋಹಿತರೂ ತಮ್ಮ ಪುತ್ರರೊಂದಿಗೆ ಕ್ಷಿಪ್ರ ನದಿಯಲ್ಲಿ ಶಿವನನ್ನು ಪ್ರಾರ್ಥಿಸಲು ಪ್ರಾರಂಭಿಸಿದರು. ವಿಷಯವನ್ನರಿತ ರಾಜನು ವೀರಾವೇಶದಿಂದ ಹೋರಾಡಿ ಶತ್ರು ಸೈನ್ಯವನ್ನು ಹಿಮ್ಮೆಟ್ಟಿಸಿದನು. ಆದರೆ ಆಗೋಚರವಾಗಿರುವ ವರವನ್ನು ಬ್ರಹ್ಮನಿಂದ ಪಡೆದಿದ್ದ ದೂಷಾನ್ ಎಂಬ ರಾಕ್ಷಸನ ಸಹಾಯದಿಂದ ಶತ್ರು ರಾಜರು ನಗರದ ಸಂಪತ್ತನ್ನು ಲೂಟಿಗೈದು, ಶಿವಭಕ್ತರಾದ ಪ್ರಜೆಗಳನ್ನು ಹಿಂಸಿಸತೊಡಗಿದರು. ಆಗ ಅಸಹಾಯಕ ಭಕ್ತರ ಮನವಿಯನ್ನ ಕೇಳಿಸಿಕೊಂಡ ಶಿವನು ತನ್ನ ಮಹಾಕಾಲ ರೂಪದಲ್ಲಿ ಕಾಣಿಸಿಕೊಂಡು ಚಂದ್ರಸೇನನ ಶತ್ರುಗಳನ್ನು ನಾಶ ಪಡಿಸಿದನು. ತನ್ನ ಭಕ್ತರಾದ ಶ್ರೀಕರ ಮತ್ತು ವೃದ್ದಿಯರ ಕೋರಿಕೆಯ ಮೇರೆಗೆ, ಶಿವನು ನಗರದಲ್ಲಿ ನೆಲೆಸಿ ಸಾಮ್ರಾಜ್ಯದ ರಕ್ಷಣೆಯನ್ನು ಮಾಡಲು ಒಪ್ಪಿಕೊಂಡನು. ಆ ದಿನದಿಂದ ಶಿವನು ಒಂದು ಬೆಳಕಿನ ರೂಪದಲ್ಲಿ ಮಹಾಕಾಳೇಶ್ವರನಾಗಿ ಲಿಂಗದಲ್ಲಿ ವಾಸಿಸಲು ಪ್ರಾರಂಭಿಸಿದನು. ಈ ರೂಪದಲ್ಲಿ ಆತನನ್ನು ಆರಾಧಿಸುವ ಭಕ್ತರು ಮೃತ್ಯುವಿನ ಭಯದಿಂದ ಮತ್ತು ರೋಗಗಳಿಂದ ಮುಕ್ತರಾಗುತ್ತಾರೆ ಎಂಬ ನಂಬಿಕೆಗಳಿವೇ, ಮಾತ್ರವಲ್ಲದೆ ಭಕ್ತರ ಲೌಕಿಕ ಸಂಪತ್ತನ್ನೂ ಕೂಡ ಭಗವಂತನು ರಕ್ಷಿಸುತ್ತಾನೆ ಎಂಬುದು ಭಕ್ತರ ನಂಬಿಕೆ.
ರಾಜ ಭರ್ತಹರಿ ಗಂಧರ್ವ ಸೇನೆಯ ಪುತ್ರನಾಗಿದ್ದನು, ಅವನು ಉಜ್ಜಯನ ರಾಜ್ಯವನ್ನು ಇಂದ್ರನಿಂದ ವರವಾಗಿ ಪಡೆದಿದ್ದನು ಎಂಬುದು ಮತ್ತೊಂದು ಪೌರಾಣಿಕ ಕಥೆ. ಭರ್ತಹರಿಯು ತನ್ನ ರಾಜ್ಯದಲ್ಲಿ ರಾಜ್ಯವನ್ನಾಳುತ್ತಿದ್ದಾಗ ಅವನಿಗೆ ಓರ್ವ ಬ್ರಾಹ್ಮಣ ಪ್ರಜೆಯಿದ್ದನು.ಹಲವಾರು ವರ್ಷಗಳ ತಪಸ್ಸಿನ ಫಲವಾಗಿ ಆತನು ಕಲ್ಪವೃಕ್ಷದಿಂದ ಅಮರತ್ವದ ಫಲವನ್ನು ವರವಾಗಿ ಪಡೆದನು. ಬ್ರಾಹ್ಮಣನು ಆ ಫಲವನ್ನು ಪ್ರಜಾನುರಾಗಿಯಾದ ರಾಜ ಭರ್ತೃಹರಿಗೆ ಕೊಡುಗೆಯಾಗಿ ನೀಡಿದನು. ಭರ್ತೃಹರಿಯು ಅದನ್ನು ತನ್ನ ಪ್ರೀತಿಯ ಕೊನೆಯ ರಾಣಿಯಾದ ಅನಂಗ ಸೇನಾಳಿಗೆ ನೀಡಿದನು. ಆದರೆ ರಾಣಿಯು ರಾಜ್ಯದ ಸೇನಾಅಧಿಕಾರಿ ಮಹಿಪಾಲನನ್ನು ಪ್ರೀತಿಸುತ್ತಿದ್ದಳು ಮತ್ತು ಫಲವನ್ನು ಅವನಿಗೆ ಅರ್ಪಿಸಿದಳು, ಮಹಿಪಾಲನು ತನ್ನ ಗೌರವದ ದಾಸಿಯಾದ ಲೇಖಾಳನ್ನು ಪ್ರೀತಿಸುತ್ತಿದ್ದು ಅವಳಿಗೆ ನೀಡಿದನು, ಆದರೆ ಲೇಖಾಳು ರಾಜನನ್ನು ಪ್ರೀತಿಸುತ್ತಿದ್ದು ಫಲವನ್ನು ರಾಜನಿಗೆ ಅರ್ಪಿಸಿದಳು. ಹೀಗೆ ವೃತ್ತವು ಪೂರ್ಣಗೊಂಡ ಬಳಿಕ ರಾಜನಿಗೆ ತನ್ನ ದಾಂಪತ್ಯದಲ್ಲಾದ ಮೋಸವು ತಿಳಿದು ಬಂತು. ಮೋಸದಿಂದ ಕೋಪಕ್ಕೊಳಗಾದ ರಾಜನು, ರಾಣಿಯನ್ನು ಕರೆಸಿ ಅವಳ ಶಿರಚ್ಛೇದಕ್ಕೆ ಆಜ್ಞಾಪಿಸಿದನು. ನಂತರ ಫಲವನ್ನು ಸ್ವೀಕರಿಸಿ ಸಿಂಹಾಸನವನ್ನು ತ್ಯಜಿಸಿ ಧಾರ್ಮಿಕನಾದನು. ಧಾರ್ಮಿಕರಾದ ಭರ್ತಹರಿ ಸ್ವಾಮಿ ಪತ್ತಿನಾಥಮ್ರ ಶಿಷ್ಯರಾದರು. ಸಂಸಾರ ಮತ್ತು ವೈರಾಗ್ಯದ ಕುರಿತಾದ ಸಂಭಾಷಣೆಯಲ್ಲಿ ಸ್ವಾಮಿಯು ‘ಎಲ್ಲಾ ಮಹಿಳೆಯರು ದ್ವಂದ್ವ ಮನಸ್ಸನ್ನು ಹೊಂದಿರುತ್ತಾರೆ ರಾಣಿಯ ವಿಷಯದಲ್ಲೂ ಹೀಗೆಯೇ ಆಗಿರಬಹುದು’ ಎಂಬುದಾಗಿ ಅಭಿಪ್ರಾಯವನ್ನು ವ್ಯಕ್ತಪಡಿಸುತ್ತಾರೆ. ವಿಷಯವನ್ನು ತಿಳಿದ ರಾಣಿಯು ಪತ್ತಿನಾಥರ್ಗೆ ಶಿಕ್ಷೆಯಾಗಿ ಕಾಲು ಮಾರಾಂ ನಲ್ಲಿ ಕುಳಿತುಕೊಳ್ಳಲು ಆದೇಶಿಸಿದಳು [ಕಾಲು ಮಾರಾಂ ಎಂದರೆ ತುದಿ ಭಾಗವನ್ನು ಪೆನ್ಸಿಲ್ ನಂತೆ ಚೂಪುಗೊಳಿಸಲ್ಪಟ್ಟ ಮರ. ಮತ್ತು ಪೂರ್ತಿ ಮರವನ್ನು ಎಣ್ಣೆಯಿಂದ ಲೇಪಿಸಲಾಗುತ್ತದೆ.] ಅದರಿಂದ ಪತ್ತಿನಾಥಮ್ರಿಗೆ ಯಾವ ತೊಂದರೆಯೂ ಆಗದಿರುವುದನ್ನು ಆಗಮನಿಸಿದ ರಾಜ ಪಿಂಗಳನು ಕಲು ಮರಂ ಅನ್ನು ಸುಡಲು ಆಜ್ಞಾಪಿಸುತ್ತಾನೆ. ಆದರೆ ಸ್ವಾಮಿಗೆ ಅದರಿಂದಲೂ ಯಾವುದೇ ತೊಂದರೆಯುಂಟಾಗುವುದಿಲ್ಲ. ಈ ಸುದ್ದಿಯನ್ನು ತಿಳಿದ ರಾಜನು ಸ್ವಾಮಿಯಲ್ಲಿ ಮರುದಿನ ಸಾಯಲು ಸಿದ್ಧನಾಗಿರುವಂತೆ ಆಜ್ಞಾಪಿಸುತ್ತಾನೆ. ಮಾರನೇ ದಿನ ಸ್ವಾಮಿಯು ಮರಣಹೊಂದಲು ಸಿದ್ಧನಾಗಿರುವಾಗ ರಾಜ ಪಿಂಗಳನು ಅಳುತ್ತಾ ಬಂದು, ರಾಣಿಯು ರಾಜ್ಯದ ಅಶ್ವದಲಾಧಿಪತಿಯನ್ನು ಪ್ರೀತಿಸುತ್ತಿರವುದನ್ನು ತಾನು ಅರಿತದ್ದಾಗಿ ಹೇಳುತ್ತಾನೆ. ನಂತರ ಆತನೂ ಸನ್ಯಾಸ ಸ್ವೀಕರಿಸಿ ಮಹಾಕಾಳೇಶ್ವರ ದೇವಾಲಯದಲ್ಲಿ ಮುಕ್ತಿ ಪಡೆಯುತ್ತಾನೆ.
1234 ರಲ್ಲಿ ಉಜ್ಜಯಿನಿಯ ಮೇಲೆ ದಾಳಿ ನಡೆಸಿದ ಸುಲ್ತಾನ್ ಶಂಸುದ್ದೀನ್ ಮಂದಿರವನ್ನು ಸಂಪೂರ್ಣವಾಗಿ ನಾಶಪಡಿಸಿದ್ದನು. ನಂತರ 1734 ರಲ್ಲಿ ಮರಾಠ ಅರಸನಾದ ರಾಣೋಜಿ ಸಿಂಧಿಯಾ ಈ ದೇವಾಲಯವನ್ನು ಪುನಃ ನಿರ್ಮಿಸಿದನು. ಹದಿನೆಂಟನೇ ಶತಮಾನದಲ್ಲಿ ಪೇಶ್ವಾ ಬಾಜಿರಾವನು ಉಜ್ಜಯನಿಯ ಆಡಳಿತವನ್ನು ತನ್ನ ನಿಷ್ಠಾವಂತ ರಾಣೋಜಿ ಸಿಂಧೇಗೆ ಹಸ್ತಾಂತರಿಸುತ್ತಾನೆ. ರಾಣೋಜಿ ಶಿಂಧೆಯ ಮಂತ್ರಿಗಳಾದ ರಾಮಚಂದ್ರ ಬಾಬಾ ಶೇಣವಿ ಅವರು ಬಹಳ ಶ್ರೀಮಂತರಾಗಿದ್ದರು. ಅವರು ತಮ್ಮ ಸಂಪತ್ತನ್ನು ಧಾರ್ಮಿಕ ಉದ್ದೇಶಗಳಲ್ಲಿ ಬಳಸಲು ಇಚ್ಛಿಸಿದ್ದರು. ಇದರಿಂದಾಗಿ ಅವರು 1850 ರ ಸಮಯದಲ್ಲಿ ಉಜ್ಜಯನಿಯ ಮಹಾಕಾಲ ದೇವಾಲಯವನ್ನು ಪುನಃ ನಿರ್ಮಿಸಿದರು.
ಉಜ್ಜಯನಿಯ ಮಾಹಾಕಾಳೇಶ್ವರ ಜ್ಯೋತಿರ್ಲಿಂಗವು ಶಿವನ ಅತ್ಯಂತ ಪವಿತ್ರ ವಾಸಸ್ಥಾನವೆಂದು ಪರಿಗಣಿಸಲಾಗಿದೆ. ಈ ದೇವಾಲಯವು ಮಧ್ಯಪ್ರದೇಶದ ಪ್ರಾಚೀನ ನಗರವಾದ ಉಜ್ಜಯಿನಿಯಲ್ಲಿದೆ. ರುದ್ರಸಗರ ಸರೋವರದ ದಡದಲ್ಲಿರುವ ಈ ದೇವಾಲಯದಲ್ಲಿರುವ ಲಿಂಗವನ್ನು ಸ್ವಯಂಭೂ ಲಿಂಗ ಎಂದು ನಂಬಲಾಗುತ್ತದೆ. ದಕ್ಷಿಣಾ ಮೂರ್ತಿ ಎಂದು ಕರೆಯಲ್ಪಡುವ ಈ ದೇವಾಲಯದ ವಿಗ್ರಹವು ದಕ್ಷಿಣಕ್ಕೆ ಮುಖಮಾಡಿರುವುದು ವಿಶೇಷವಾಗಿದೆ. ತಾಂತ್ರಿಕ ಶಿವನೇತ್ರ ಸಂಪ್ರದಾಯವು 12 ಜ್ಯೋತಿರ್ಲಿಂಗಗಳಲ್ಲಿ ಮಹಾಕಲೇಶ್ವರದಲ್ಲಿ ಮಾತ್ರ ಕಂಡುಬರುತ್ತದೆ. ಓಂಕಾರೇಶ್ವರ ಮಹಾದೇವನ ವಿಗ್ರಹವನ್ನು ದೇವಾಲಯದ ಗರ್ಭಗುಡಿಯಲ್ಲಿ ಪೂಜಿಸಲಾಗುತ್ತಿದ್ದು, ಗಣೇಶ, ಪಾರ್ವತಿ ಮತ್ತು ಕಾರ್ತಿಕೇಯರ ಗುಡಿಗಳನ್ನು ಪಶ್ಚಿಮ, ಉತ್ತರ ಮತ್ತು ಪೂರ್ವದಲ್ಲಿ ನಿರ್ಮಿಸಲಾಗಿದೆ. ದಕ್ಷಿಣದಲ್ಲಿ ಶಿವನ ವಾಹನವಾದ ನಂದಿಯ ವಿಗ್ರಹವಿದೆ. ಮೂರನೇ ಮಹಡಿಯಲ್ಲಿರುವ ನಾಗಚಂದ್ರೇಶ್ವರ ವಿಗ್ರಹವು ನಾಗರ ಪಂಚಮಿಯಂದು ಮಾತ್ತ್ರ ದರ್ಶನಕ್ಕಾಗಿ ತೆರೆದಿರುತ್ತದೆ. 5 ಮಹಡಿಗಳನ್ನು ಹೊಂದಿರುವ ದೇವಾಲಯದ 1 ಮಹಡಿಯು ಭೂಗತವಾಗಿದ್ದು, ಹಿತ್ತಾಳೆಯ ದೀಪಗಳು ಈ ಮಹಡಿಗೆ ದಾರಿಯನ್ನು ತೋರುತ್ತವೆ. ಕಾಲ ದೇವತೆಯಾದ ಶಿವನು ಉಜ್ಜಯನಿ ನಗರದಲ್ಲಿ ವೈಭಯುತವಾಗಿ ಆಳ್ವಿಕೆಯನ್ನು ನಡೆಸುತ್ತಾನೆ ಎಂಬುದು ಹಿಂದೂ ಧಾರ್ಮಿಕ ನಂಬಿಕೆಯಾಗಿದೆ. ಮಹಾ ಶಿವರಾತ್ರಿಯಂದು ದೇವಾಲಯದಲ್ಲಿ ಬೃಹತ್ ಜಾತ್ರೆಯು ನಡೆಯುತ್ತದೆ.
ಗುಪ್ತಕಾಲದ ಮಹಾಕವಿ ಕಾಳಿದಾಸರ ಮೇಘದತ್ತ ಕೃತಿಯಲ್ಲೂ ಪ್ರಾಮುಖ್ಯತೆಯನ್ನು ಹೊಂದಿರುವ ಮಹಾಕಲೇಶ್ವರನ ಉಜ್ಜಯನಿಯು ಹಿಂದೂಗಳು ಖಂಡಿತವಾಗಿಯೂ ನೋಡಲೇ ಬೇಕಾದ ದೇವಾಲಯಗಳಲ್ಲಿ ಒಂದಾಗಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.