ಬೆಳ್ತಂಗಡಿ: ಶ್ರೀ ಕ್ಷೇತ್ರ ಧರ್ಮಸ್ಥಳ ಯಕ್ಷಗಾನ ಮಂಡಳಿಯು ಈ ವರ್ಷದಿಂದ ಕಾಲಮಿತಿಯ ಪ್ರದರ್ಶನಗಳಿಗೆ ಸಜ್ಜಾಗಿದೆ ಎಂದು ಧರ್ಮಾಧಿಕಾರಿ ಡಾ|ವೀರೇಂದ್ರ ಹೆಗ್ಗಡೆಯವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಯಕ್ಷಗಾನವು ಈ ತುಳುನಾಡಿನ ಮಣ್ಣಿನ ಪುಣ್ಯದಿಂದ ಹುಟ್ಟಿ ಬೆಳೆದು ಬಂದ ವಿಶಿಷ್ಟ ಸಾಂಪ್ರದಾಯಿಕ ಕಲೆ. ತುಳುನಾಡಿನ ಭಾಷೆ, ಸಂಸ್ಕೃತಿಯನ್ನು ಬೆಳೆಸಿ ಜನ-ಜೀವನದ, ಸಮಾಜದ ಮತ್ತು ಸಾಂಸಾರಿಕ ರೀತಿ-ನೀತಿಗಳನ್ನು ಗೋಚರ ಮತ್ತು ಅಗೋಚರವಾಗಿ ಪ್ರೇರೇಪಿಸಿದ ಗಂಡು ಕಲೆಯಾಗಿದೆ. ವಾಡಿಕೆಯಿಂದ ರಾತ್ರಿಯ ಜಾಮಗಳಲ್ಲಿ ಪ್ರದರ್ಶಿಸಲ್ಪಟ್ಟು ರಂಜಿಸಿದೆ. ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ನದಿಗಳ ಹರಿಯುವಿಕೆಯಿಂದ ಪ್ರತ್ಯೇಕಿಸಲ್ಪಟ್ಟಿದ್ದ ಪ್ರದೇಶಗಳಲ್ಲಿ ಮನೋರಂಜನೆಯ ಜೊತೆಗೆ ಧಾರ್ಮಿಕ, ಆಧ್ಯಾತ್ಮಿಕ ಸಂದೇಶಗಳನ್ನು ನೀಡಿ ಸಾರ್ಥಕ ಬದುಕನ್ನು ರೂಪಿಸಿದೆ.
ದೇಶದಲ್ಲಿ ಪ್ರಗತಿಯ ವೇಗ ಹೆಚ್ಚಾದಂತೆ ಜಾನಪದ ಮತ್ತು ಸಾಂಪ್ರಾದಾಯಿಕ ಕಲೆಗಳು ನೆಲಕಚ್ಚಿದವು, ಮರೆಯಾದವು. ಆಧುನಿಕತೆಯ ವೈಭವೀಕರಣ ಮಣ್ಣಿನ ಸತ್ವದ ಕಲೆಗಳನ್ನು ಅಸಹನೀಯಗೊಳಿಸಿದವು. ಈ ಕಾರಣಗಳಿಂದ ಕಳೆದ ೫೦ ವರ್ಷಗಳಲ್ಲಿ ಯಕ್ಷಗಾನದ ಉಳಿವು -ಅಳಿವುಗಳ ಎಚ್ಚರಿಕೆಯ ಗಂಟೆ ಮೊಳಗಿತು. ೧೯೬೦ರಿಂದ 1980ರ ದಶಕಗಳಲ್ಲಿ ಯಕ್ಷಗಾನದ ಪ್ರಸಂಗದ ಕಥೆಗಳಲ್ಲಿ, ರಂಗಸ್ಥಳ ವಿನ್ಯಾಸದಲ್ಲಿ, ವಿದ್ಯುಚ್ಛಕ್ತಿಯ ಬಳಕೆಯಲ್ಲಿ, ಧ್ವನಿಗೆ ಮೈಕುಗಳ ಬಳಕೆಯಲ್ಲಿ, ವೇಷಭೂಷಣಗಳಿಗೆ ಕೃತಕ ವಸ್ತು ಮತ್ತು ಬಟ್ಟೆಗಳ ಬಳಕೆಯಲ್ಲಿ ಬದಲಾವಣೆ ಮಾಡಿ ಪ್ರೇಕ್ಷಕರನ್ನು ಆಕರ್ಷಿಸುವ ಪ್ರಯತ್ನಗಳನ್ನು ಮೇಳದ ಯಜಮಾನರುಗಳು ಹಾಗೂ ರಂಗದ ಹಿನ್ನೆಲೆಯ ಮತ್ತು ರಂಗಸ್ಥಳದ ಕಲಾವಿದರು ಮಾಡಿದ್ದರು.
ಇದೀಗ ಇನ್ನಷ್ಟು, ಮತ್ತಷ್ಟು ಬದಲಾವಣೆಗಳು ಅನಿವಾರ್ಯವಾಗತೊಡಗಿದೆ. ನಗರಗಳು ಮತ್ತು ಪೇಟೆಗಳೊಂದಿಗೆ ಗ್ರಾಮೀಣ ಜನ ಜೀವನದಲ್ಲಿ ಬದಲಾವಣೆಯ ಗಾಳಿ ಬೀಸುತ್ತಿದೆ. ಸಿನೆಮಾ, ಟಿ.ವಿ. ಸೀರಿಯಲ್ಗಳನ್ನು ನೋಡುವ ಇಂದಿನ ಜನಾಂಗಕ್ಕೆ ರಾತ್ರಿ ಇಡೀ ಪ್ರಸಂಗದ ಕಲ್ಪನೆ ಮಾಡಿಕೊಂಡು ಪ್ರಸಂಗದ ಅದ್ಭುತ ದೃಶ್ಯಗಳನ್ನು ಮನತುಂಬಿಕೊಳ್ಳುವ ಮುಗ್ಧತೆ ಕಡಿಮೆಯಾಗಿದೆ. ರಾತ್ರಿ ಕೃಷಿಯ ರಕ್ಷಣೆ, ಮನೆಯ ರಕ್ಷಣೆ, ಮಕ್ಕಳ ವಿದ್ಯಾಭ್ಯಾಸದ ಬಗ್ಗೆ ಚಿಂತೆಯಿರುತ್ತದೆ.
ಯಕ್ಷಗಾನ ಪ್ರದರ್ಶನಕ್ಕೆ ಜಾಗದ ಕೊರತೆಯಾಗಿದೆ. ಇದರೊಂದಿಗೆ ರಾತ್ರಿ ಇಡೀ ಮೈಕಾಸುರನ ಹಿಂಸೆ ಅನ್ನಿಸಿದರೂ, ಕಲೆಯ ಮೇಲಿನ ಗೌರವ ಮತ್ತು ಯಕ್ಷಗಾನ ಮೇಳಗಳ ಹಿಂದೆ ಇರುವ ಕ್ಷೇತ್ರಗಳ ಮತ್ತು ದೇವತಾ ಸಾನ್ನಿಧ್ಯದ ಮೇಲಿನ ಗೌರವದಿಂದ ಕಲಾಭಿಮಾನಿಗಳು ಸಹಿಸಿಕೊಳ್ಳುತ್ತಿದ್ದಾರೆ. ಮಧ್ಯರಾತ್ರಿಯ ವರೆಗೆ ಪ್ರಸಂಗಗಳನ್ನು ನೋಡಿ ಹೋಗುವವರು ಹೆಚ್ಚಾಗುತ್ತಿದ್ದಾರೆ. ಕೆಲವು ಮೇಳಗಳ ಪ್ರಸಂಗದ ನೀರವತೆಯೂ, ಕಲಾವಿದರ ಪರಿಶ್ರಮದ ಕೊರತೆಯ ಕಾರಣದಿಂದಲೂ ರಾತ್ರಿ ಇಡೀ ಪ್ರಸಂಗ ನೋಡುವ ಪ್ರೇಕ್ಷಕರ ಕೊರತೆಯಾಗುತ್ತಿದೆ.
ಈಗ ಇನ್ನೊಂದು ಐತಿಹಾಸಿಕ ತೀರ್ಮಾನ ಕೈಗೊಳ್ಳಬೇಕಾಗಿದೆ. ಈಗಾಗಲೇ ಕೆಲವು ಮೇಳಗಳು ಪ್ರಯೋಗ ನಡೆಸಿದ ಕಾಲಮಿತಿಯ ಪ್ರಸಂಗಗಳನ್ನು ಶ್ರದ್ಧೆ ಹಾಗೂ ಪರಿಣಾಮಕಾರಿಯಾಗಿ ಪ್ರದರ್ಶಿಸುವ ಬದಲಾವಣೆ ಬೇಕಾಗಿದೆ. 200 ವರ್ಷದ ಇತಿಹಾಸವಿರುವ ಶ್ರೀ ಕ್ಷೇತ್ರ ಧರ್ಮಸ್ಥಳ ಯಕ್ಷಗಾನ ಮಂಡಳಿ ಅನಿವಾರ್ಯವಾಗಿ ಈ ವರ್ಷದಿಂದ ಕಾಲಮಿತಿಯ ಯಕ್ಷಗಾನ ಪ್ರದರ್ಶನಕ್ಕೆ ಸಜ್ಜಾಗಿದೆ. ಈ ಬಗ್ಗೆ ಮೂರು ವರ್ಷಗಳ ಕಾಲ ನಡೆಸಿದ ಚಿಂತನ-ಮಂಥನಗಳಿಂದ ಸರ್ವರ ಅಭಿಪ್ರಾಯ ಸಂಗ್ರಹಿಸಿ ಸಂಜೆ 7.00 ರಿಂದ ಮಧ್ಯರಾತ್ರಿ 12.00ರ ವರೆಗೆ ಪ್ರದರ್ಶನಕ್ಕೆ ವ್ಯವಸ್ಥೆ ಮಾಡುವುದೆಂದು ತೀರ್ಮಾನಿಸಲಾಗಿದೆ. ದೇವ ಪ್ರಶ್ನೆ ಮೂಲಕ ಅನುಗ್ರಹ ಪಡೆಯಲಾಗಿದೆ. ಯಕ್ಷಗಾನ ಬಯಲಾಟ ಸೇವಾಕರ್ತರಲ್ಲಿ ಒಪ್ಪಿಗೆ ಪಡೆದುಕೊಳ್ಳಲಾಗಿದೆ. ಬಹುತೇಕ ಮಂದಿ ಒಪ್ಪಿದ್ದಾರೆ. ಸಹಜವಾಗಿಯೇ ಉತ್ತರಿಸಲಾಗದ ಕೆಲವು ಪ್ರಶ್ನೆಗಳಿಗೆ ಕಾಲ ಮತ್ತು ಪ್ರಯೋಗಶೀಲತೆಯು ಉತ್ತರ ಕೊಡಬೇಕಾಗಿದೆ.
ಕಾಲಮಿತಿ ಪ್ರದರ್ಶನ ಸಮಾಜದ ಎಲ್ಲಾ ವರ್ಗದವರನ್ನು, ಎಲ್ಲಾ ವಯಸ್ಸಿನವರನ್ನು ಮತ್ತು ಭಿನ್ನ ಮನಸ್ಕರನ್ನು ಆಕರ್ಷಿಸಲೆಂದು ಹಾರೈಸುತ್ತೇವೆ. ಬದಲಾವಣೆಗೆ ಮುಂದೆ ಸೂಕ್ತ ಸೂಚನೆ ಹಾಗೂ ಅಭಿಪ್ರಾಯಗಳನ್ನು ಸ್ವಾಗತಿಸುತ್ತೇವೆ.
ನಮ್ಮ ಈ ಪ್ರಯತ್ನಕ್ಕೆ ಶ್ರೀ ಮಂಜುನಾಥ ಸ್ವಾಮಿ ಹಾಗೂ ಮೇಳದ ಶ್ರೀ ಗಣಪತಿ ದೇವರ ಅನುಗ್ರಹ ಇರಲೆಂದು ಹಾರೈಸುತ್ತೇವೆ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
———–
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.