ದೇಶಪ್ರೇಮಿಗಳ ಉಸಿರಾಗಿದ್ದ ಗಾನವೊಂದುನಮ್ಮ ನೆನಪಿನ ಅಂಗಳದಿಂದ ಮರೆಯಾಗುತ್ತಿದೆ. ವಂದೇ ಮಾತರಂ ಹಾಡಲು ಹೇಳಿದರೆ ಹಲವಷ್ಟು ಮಕ್ಕಳಿಗೆ ಗೊತ್ತೇ ಇಲ್ಲದಿದ್ದರೆ ಇನ್ನು ಕೆಲವು ಮಕ್ಕಳು ಕೇವಲ ಮೊದಲಿನ ಎರಡು ಪ್ಯಾರಾಗ್ರಾಫ್ಗಳನ್ನೂ ಹಾಡಿ ಸುಮ್ಮನಾಗುತ್ತಾರೆ. ವಂದೇ ಮಾತರನ್ನು ಬರೆದವರ್ಯಾರೆಂದು ಬಹಳ ಜನರಿಗೆ ತಿಳಿದಿಲ್ಲ. ಒಂದು ಕಾಲದಲ್ಲಿ ಸ್ವಾತಂತ್ರ ಹೋರಾಟಗಾರರ ಉಸಿರಾಗಿದ್ದ ವಂದೇ ಮಾತರಂ ಇಂದು ಮೆಲ್ಲಗೆ ತೆರೆಮರೆಗೆ ಸರಿಯುತ್ತಿದೆ. ಯಾವ ಸಾಲುಗಳನ್ನು ಕೇಳುತ್ತಿದ್ದರೆ ಮಕ್ಕಳಿಂದ ಮುದುಕ ಭಾರತೀಯರ ನರನಾಡಿಗಳು ಎದ್ದು ನಿಲ್ಲುತ್ತಿದ್ದವೋ, ಯಾವ ಹಾಡು ಹಾಡುವಾಗ ರೋಮಾಂಚನದಿಂದ ಕಣ್ಣಂಚು ತೇವಗೊಳ್ಳುತ್ತಿದ್ದವೋ ಇಂದು ಆ ಹಾಡು ಹಲವರ ನೆನಪಿನಿಂದ ಮರೆಯಾಗುತ್ತಿದೆ. ಭಾರತದ ಸ್ವಾತಂತ್ರಕ್ಕಾಗಿ ತಮ್ಮ ಪ್ರಾಣವನ್ನೇ ಬಲಿದಾನವಾಗಿ ಅರ್ಪಿಸಿದ ಅನೇಕ ಪುರುಷ ಸಿಂಹರ ಕೊನೆಯ ಮಾತು ಅಥವಾ ಕೊನೆಯ ಘೋಷಣೆಯು ವಂದೇ ಮಾತರಂ ಎಂಬುದೇ ಆಗಿತ್ತು. 1982 ರಲ್ಲಿ ಬಂಕಿಮಚಂದ್ರ ಚಟ್ಟೋಪಾಧ್ಯಾಯರು “ಆನಂದಮಠ” ಎಂಬ ತಮ್ಮ ಬಂಗಾಲೀ ಭಾಷೆಯ ಕಾದಂಬರಿಯಲ್ಲಿ ಸಂಸ್ಕೃತ ಮತ್ತು ಬಂಗಾಳಿ ಭಾಷೆಯಲ್ಲಿ ವಂದೇ ಮಾತರಂ ಗೀತೆಯನ್ನು ರಚಿಸಿದರು. 1906 ರಲ್ಲಿ ನರೇಶ್ ಚಂದ್ರ ಸೆನ್ ಗುಪ್ತ ಅವರು ಇದನ್ನು ಆಂಗ್ಲಭಾಷೆಗೆ ಅನುವಾದಿಸಿದರು. 1909 ರಲ್ಲಿ ಅರಬಿಂದೋ ಘೋಷ್ ಅವರು ಗೀತೆಯನ್ನು ಗದ್ಯಕ್ಕೆ ಅನುವಾದಿಸಿದರು. 1907 ರಲ್ಲಿ ಮೇಡಂ ಭಿಕಾಜಿ ಕಾಮ ಅವರು ರಚಿಸಿದ ಭಾರತೀಯ ಧ್ವಜದ ಮೊದಲ ಆವೃತ್ತಿಯಲ್ಲಿ ವಂದೇ ಮಾತರಂ ಎಂದು ಬರೆಯಲಾಗಿತ್ತು. ಜಂದಾನಾಥ್ ಭಟ್ಟಾಚಾರ್ಯ ಅವರು ಮೊದಲ ಬಾರಿಗೆ ವಂದೇ ಮಾತರಂಗೆ ರಾಗ ಸಂಯೋಜನೆ ಮಾಡಿದರು. ಲಾಲಾ ಲಜಪತ್ ರಾಯ್ ಲಾಹೋರ್ನಲ್ಲಿ ಪ್ರಾರಂಭಿಸಿದ ಪತ್ರಿಕೆಗೆ ವಂದೇ ಮಾತರಂ ಎಂಬ ಹೆಸರನ್ನೇ ಇರಿಸಿದ್ದರು.
ಇನ್ನು ಬಹಳಷ್ಟು ಜನರಿಗೆ ಬಂಕಿಮ ಚಂದ್ರ ಚಟರ್ಜಿ ಯಾರೆಂದೇ ತಿಳಿದಿಲ್ಲ. ಬಂಕಿಮ್ ಚಂದ್ರ ಚಟ್ಟೋಪಾಧ್ಯಾಯ ಎಂದೂ ಕರೆಯಲ್ಪಡುವ ಬಂಕಿಮ್ ಚಂದ್ರ ಚಟರ್ಜಿ ಭಾರತದ ಶ್ರೇಷ್ಠ ಕಾದಂಬರಿಕಾರರು ಮತ್ತು ಕವಿಗಳಲ್ಲಿ ಒಬ್ಬರು. ಭಾರತದ ರಾಷ್ಟ್ರೀಯ ಗೀತೆ ವಂದೇ ಮಾತರಂ ಅವರ ಲೇಖಕರಾಗಿ ಅವರು ಪ್ರಸಿದ್ಧರಾಗಿದ್ದಾರೇ. ಬಂಕಿಮ್ ಚಂದ್ರ ಚಟರ್ಜಿ 1838 ರ ಜೂನ್ 27 ರಂದು ಬಂಗಾಳದ 24 ಪರಗನಾಸ್ ಜಿಲ್ಲೆಯ ಕಾಂತಲ್ಪರಾ ಗ್ರಾಮದಲ್ಲಿ ಜನಿಸಿದರು. ಬಂಕಿಮ್ ಚಂದ್ರ ಚಟರ್ಜಿ ಮೂಲತಃ ಕವಿಯಾಗದ್ದರು. ನಂತರ ಅವರು ಕಾದಂಬರಿಗಳನ್ನೂ ರಚಿಸಲು ಪ್ರಾರಂಭಿಸಿದರು. ಅವರ ಮೊದಲ ಬಂಗಾಳಿ ಪುಸ್ತಕ ದುರ್ಗೇಶ್ನಂದಿನಿ 1865 ರಲ್ಲಿ ಪ್ರಕಟವಾಯಿತು. ಅವರ ಪ್ರಸಿದ್ಧ ಕಾದಂಬರಿಗಳಲ್ಲಿ ಕಪಲಕುಂಡಲ (1866), ಮೃಣಾಲಿನಿ (1869), ವಿಶ್ಬ್ರಕ್ಷ (1873), ಚಂದ್ರಶೇಖರ್ (1877), ರಜನಿ (1877), ರಾಜ್ಸಿಂಹ (1881), ಮತ್ತು ದೇವಿ ಚೌಧುರಾಣಿ ( 1884). ಬಂಕಿಮ್ ಚಂದ್ರ ಚಟರ್ಜಿ ಅವರ ಅತ್ಯಂತ ಪ್ರಸಿದ್ಧ ಕಾದಂಬರಿ ಆನಂದ ಮಠ (1882). ಬಂಕಿಮ್ ಚಂದ್ರ ಚಟರ್ಜಿ ಅವರು ಸಾಹಿತ್ಯ ಅಭಿಯಾನದ ಮೂಲಕ ಬಂಗಾಳಿ ಮಾತನಾಡುವ ಜನರ ಬೌದ್ಧಿಕತೆಯನ್ನು ಉತ್ತೇಜಿಸುವ ಮೂಲಕ ಬಂಗಾಳದ ಸಾಂಸ್ಕೃತಿಕ ಪುನರುಜ್ಜೀವಿಸಲು ಬಯಸಿದ್ದರು. ಈ ಉದ್ದೇಶಕ್ಕಾಗಿಯೇ ಅವರು 1872 ರಲ್ಲಿ ಬಂಗದರ್ಶನ್ ಎಂಬ ಮಾಸಿಕ ಪತ್ರಿಕೆಯನ್ನು ಹೊರತಂದರು.ಅವರ ಕಾದಂಬರಿಗಳನ್ನು ಭಾರತದ ಬಹುತೇಕ ಎಲ್ಲಾ ಪ್ರಮುಖ ಭಾಷೆಗಳಲ್ಲಿ ಅನುವಾದಿಸಲಾಗಿದೆ. ಶ್ರೀ ಬಂಕಿಮ ಚಂದ್ರರು ಏಪ್ರಿಲ್ 8, 1894 ರಂದು ನಿಧನರಾದರು.
ಇಷ್ಟೆಲ್ಲಾ ಇತಿಹಾಸವಿರುವ ವಂದೇ ಮಾತರಂ ಗೀತೆಯನ್ನು ಪೂರ್ತಿಯಾಗಿ ಅರಿತಿರುವುದು ನಮ್ಮೆಲ್ಲರ ಕರ್ತವ್ಯ. ಬಂಕಿಮಚಂದ್ರರು ಬರೆದಿರುವ ಸಂಪೂರ್ಣವಾದ ವಂದೇ ಮಾತರಂ ಗೀತೆಯು ಹೀಗಿದೆ.
ವಂದೇಮಾತರಂ ಸುಜಲಾಂ
ಸುಫಲಾಂ ಮಲಯಜ ಶೀತಲಾಂ
ಸಸ್ಯ ಶ್ಯಾಮಲಾಂ ಮಾತರಂ !!ವಂದೇ ಮಾತರಂ!!
ಶುಭ್ರಜ್ಯೋತ್ಸ್ನಾ ಪುಳಕಿತ ಯಾಮಿನೀಂ
ಪುಲ್ಲಕುಸುಮಿತ ಧೃಮದಲ ಶೋಭಿನೀಂ
ಸುಹಾಸಿನೀಂ ಸುಮಧುರ ಭಾಷಿಣೀಮ್
ಸುಖದಾಂ ವರದಾಂ ಮಾತರಂ!! ವಂದೇ ಮಾತರಂ!!
ಕೋಟಿ ಕೋಟಿ ಕಂಠ ಕಾಲಕಾಲನಿನಾದ ಕರಾಲೇ
ಕೋಟಿ ಕೋಟಿ ಭುಜೈಧೃತ ಖರ ಕರವಾಲೇ
ಅಬಲಾ ಕೆನೋ ಮಾ ಏತೋ ಬಲೇ
ಬಹುಬಲಧಾರಿಣೀಮ್ ನಮಾಮಿ ತಾರಿಣೀಮ್
ರಿಪುದಲ ವಾರಿಣೀಮ್ ಮಾತರಂ!! ವಂದೇ ಮಾತರಂ!!
ತುಮಿ ವಿದ್ಯಾ ತುಮಿ ಧರ್ಮ
ತುಮಿ ಹೃದಿ ತುಮಿ ಮರ್ಮ
ತ್ವಂಹಿ ಪ್ರಾಣಃ ಶರೀರೇ
ಬಾಹುತೇ ತುಮಿ ಮಾ ಶಕ್ತಿ
ಹೃದಯೇ ತುಮಿ ಮಾ ಭಕ್ತಿ
ತೋಮಾರಾಯಿ ಪ್ರತಿಮಾ ಗಡಿ
ಮಂದಿರೇ ಮಂದಿರೇ!! ವಂದೇ ಮಾತರಂ!!
ತ್ವಂ ಹಿ ದುರ್ಗಾ ದಶಪ್ರಹರಣ ಧಾರಿಣೀ
ಕಮಲಾ ಕಮಲದಲವಿಹಾರಿಣೀ
ವಾಣೀ ವಿದ್ಯಾದಾಯಿನೀ
ನಾಮಾಮಿತ್ವಾಮ್ ನಮಾಮಿ ಕಾಮಲಾಂ
ಅಮಾಲಾಂ ಅತುಲಾಂ
ಸುಜಲಾಂ ಸುಫಲಾಂ ಮಾತರಂ !! ವಂದೇ ಮಾತರಂ!!
ಶ್ಯಾಮಲಾಂ ಸರಲಾಂ ಸುಸ್ಮಿತಾಂ ಭೂಷಿತಾಂ
ಧರಣೀಮ್ ಭರಣೀಮ್ ಮಾತರಂ!!ವಂದೇ ಮಾತರಂ!!
ತಾಯಿ ಭಾರತ ಮಾತೆಯನ್ನು ವಿವಿಧ ರೀತಿಯಲ್ಲಿ ವರ್ಣಿಸಲಾಗುವ ಸಾಲುಗಳಿವು. ಭಾರತದ ಸ್ವಾತಂತ್ರ್ಯ ಸಂಗ್ರಾಮದಲ್ಲಿ ಕ್ರಾಂತಿಯನ್ನೆಬ್ಬಿಸಿದ್ದ ಈ ಗೀತೆಯ ಸೃಷ್ಟಿಯು ಒಂದು ಅದ್ಭುತ. ಬಂಕಿಮಚಂದ್ರ ಚಟರ್ಜಿಯವರು ಒಮ್ಮೆ ರೈಲಿನಲ್ಲಿ ಪಯಣಿಸುತ್ತಿದ್ದಾಗ ನೋಡಿದ ಪ್ರಕೃತಿ ಸೌಂದರ್ಯವು ಅವರನ್ನು ಮೈಮರೆಯುವಂತೆ ಮಾಡಿತು. ಭಾರತ ಮಾತೆ ತನ್ನೆಲ್ಲ ಸೌಂದರ್ಯದೊಂದಿಗೆ ಮೆರೆಯುತ್ತಿದ್ದಾಳೆಂಬ ಕಲ್ಪನೆಯೇ ಅವರ ಕವನಕ್ಕೆ ಕಾರಣವಾಯಿತು. 1875 ರಲ್ಲೇ ರಚಿತವಾದರೂ ಆನಂದಮಠ ಕಾದಂಬರಿಯಲ್ಲಿ ಕಾಣಿಸಿಕೊಳ್ಳುವವರೆಗೂ ಈ ಗೀತೆಯು ಜನಪ್ರಿಯತೆಯನ್ನು ಪಡೆದಿರಲಿಲ್ಲ. ಸನ್ಯಾಸಿಗಳು ಬ್ರಿಟೀಷರ ವಿರುದ್ದ ಬಂಡಾಯವೇಳುವ ಕಥಾವಸ್ತುವನ್ನು ಹೊಂದಿದ್ದ ಈ ಕಾದಂಬರಿಯನ್ನು ಬ್ರಿಟೀಷ್ ಸರಕಾರವು ಬ್ಯಾನ್ ಮಾಡಿತ್ತು. “ತಾಯೆ, ನಿನಗೆ ನಮಿಸುವೆ. ಸಮೃದ್ಧವಾದ ನದಿಗಳಿಂದ, ಫಲ ಪುಷ್ಪಗಳಿಂದ, ಮಲಯಾ ಪರ್ವತದಿಂದ ಬೀಸಿ ಬರುವ ಶೀತಲ ಮಾರುತಗಳಿಂದ ಸಸ್ಯಶಾಮಲೆಯಾಗಿ ಶೋಭಿಸುತ್ತಿರುವ ನಿನಗೆ ವಂದಿಸುವೆ. ಶುಭ್ರವಾದ ಬೆಳದಿಂಗಳಿಂದ ಸಂಪನ್ನವಾದ ಇರುಳುಗಳು, ಮರಗಳಲ್ಲಿ ಬಿಟ್ಟ ಚಿಗುರು ಹೂವುಗಳಿಂದ ಶೋಭಿಸುವ, ಮುಗುಳು ನಗೆಯುಳ್ಳ, ಸುಮಧುರವಾದ ರೀತಿಯಲ್ಲಿ ಸಂಭಾಷಿಸುವ, ಸುಖಪ್ರದಾಯಿನಿಯಾದ, ವರವನ್ನು ನೀಡಲು ಶಕ್ತಿಯುಳ್ಳ ನಿನ್ನ ಅಡಿಗಳಿಗೆ ನಮಿಸುತ್ತೇನೆ” ಎಂಬುದು ಅತ್ಯಂತ ಪ್ರಸಿದ್ಧ ಮೊದಲೆರಡು ಚರಣಗಳ ಅರ್ಥವಾಗಿದೆ.
ಇಷ್ಟು ಅಮೋಘವಾಗಿ ತಾಯಿ ಭಾರತಿಯನ್ನು ವರ್ಣಿಸಿರುವ ಗೀತೆಯೊಂದು ಮರೆಯಾಗುತ್ತಾ ಸಾಗುತ್ತಿದೆ. ಕಳೆದ ಕೆಲವು ವರ್ಷಗಳಿಂದ ಕತ್ತರಿ ಪ್ರಯೋಗಗೊಂಡು ಕೇವಲ ಎರಡು ಚರಣಗಳಿಗೆ ಇಳಿಸಲ್ಪಟ್ಟಿರುವ ಗೀತೆಯು ಮುಂದೊಂದು ದಿನ ನಮ್ಮ ನಡುವಿಂದ ಮಾಯವಾದರೂ ಅಚ್ಚರಿ ಇಲ್ಲ. ಆದ್ದರಿಂದ ಇಂದಿನಿಂದಲೇ ನಾವು ಮನೆಯಲ್ಲಿ ಮಕ್ಕಳಿಗೆ ಪೂರ್ಣ ವಂದೇ ಮಾತರಂ ಗೀತೆಯನ್ನು ಕಂಠಪಾಠ ಮಾಡಿಸೋಣ. ಸ್ವಾತಂತ್ರ ಹೋರಾಟಗಾರರ ಉಸಿರಾಗಿದ್ದ ಗೀತೆಯೊಂದು ಮರೆತುಹೋಗಬಾರದೆಂಬ ಉದ್ದೇಶವು ಸದಾ ನಮ್ಮ ಮನದಲ್ಲಿರಲಿ. ವಂದೇ ಮಾತರಂ ಅನ್ನು ಹಾಡುವುದಿಲ್ಲ ಎಂದು ಅದೆಷ್ಟೇ ಜನರು ವಿರೋಧಿಸಿದರೂ ವಿರೋಧಿಸಿದರೂ ಭಾರತದ ಧ್ವಜ ಬಾನೆತ್ತರದಲ್ಲಿ ಹಾರಾಡುವಂತೆ ವಂದೇ ಮಾತರಂ ಗೀತೆಯೂ ಹಾಡಲ್ಪಡುತ್ತದೆ. ಏಕೆಂದರೆ ವಂದೇ ಮಾತರಂ ಕೇವಲ ಹಾಡಲ್ಲ, ಅದೊಂದು ಭಾವನೆ, ಅದೊಂದು ಭಕ್ತಿ, ಅದೊಂದು ಗೌರವ ಮತ್ತು ಅದೊಂದು ಪ್ರೀತಿ ಎಲ್ಲಕ್ಕೂ ಮಿಗಿಲಾಗಿ ದೇಶಪ್ರೇಮವೆಂಬ ಶಕ್ತಿ.
ವಂದೇ ಮಾತರಂ ಕೇವಲ ಹಾಡಲ್ಲ, ಅದೊಂದು ಭಾವನೆ, ಅದೊಂದು ಭಕ್ತಿ, ಅದೊಂದು ಗೌರವ ಮತ್ತು ಅದೊಂದು ಪ್ರೀತಿ ಎಲ್ಲಕ್ಕೂ ಮಿಗಿಲಾಗಿ ದೇಶಪ್ರೇಮವೆಂಬ ಶಕ್ತಿ.
✍️ ದೀಪಾ ಜಿ. ಭಟ್
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.