ಬೆಂಗಳೂರು: ಭಾರತೀಯ ಜನತಾ ಪಕ್ಷವನ್ನು ಕಟ್ಟಿ ಬೆಳೆಸಲು ಭದ್ರ ನೆಲೆಯನ್ನು ಒದಗಿಸಿಕೊಟ್ಟ ಮತ್ತು ಸಿದ್ಧಾಂತದ ಆಧಾರ ಒದಗಿಸಿದ ಹಾಗೂ ಕಾಶ್ಮೀರ ಮತ್ತು ಜಮ್ಮು ಪ್ರದೇಶಗಳು ಭಾರತದಲ್ಲೇ ಉಳಿಯಲು ಕಾರಣಕರ್ತರಾದ ಮಹಾನ್ ಚಿಂತಕರಾದ ಡಾ. ಶ್ಯಾಮಪ್ರಸಾದ ಮುಖರ್ಜಿ ಅವರ ಬಲಿದಾನ ದಿನವನ್ನು ಜೂನ್ 23ರಂದು ಆಚರಿಸಲಾಗುವುದು. ಆ ದಿನದಂದು 300 ವೆಬೆಕ್ಸ್ ವಿಚಾರಸಂಕಿರಣಗಳನ್ನು ಹಮ್ಮಿಕೊಂಡು ಅವರ ವಿಚಾರಧಾರೆ, ಜೀವನ ಮತ್ತು ಸಾಧನೆ ಕುರಿತು ತಿಳಿಸಿಕೊಡಲಾಗುವುದು ಎಂದು ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ, ವಿಧಾನ ಪರಿಷತ್ ಸದಸ್ಯ ಎನ್. ರವಿಕುಮಾರ್ ತಿಳಿಸಿದರು.
ನಗರದ ಮಲ್ಲೇಶ್ವರದ ಬಿಜೆಪಿ ರಾಜ್ಯ ಕಾರ್ಯಾಲಯ “ಜಗನ್ನಾಥ ಭವನ”ದಲ್ಲಿ ಇಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, 23 ರಿಂದ ಡಾಕ್ಟರ್ ಮುಖರ್ಜಿ ಅವರ ಜನ್ಮದಿನವಾದ ಜುಲೈ 6ರವರೆಗೆ 11 ಲಕ್ಷ ಗಿಡ ನೆಡಲು ಯೋಜಿಸಲಾಗಿದೆ ಎಂದರು. ಜೂನ್ 27ರಂದು ಪ್ರಧಾನಿಯವರ ಸಾಮಾಜಿಕ ಚಿಂತನೆಯ “ಮನ್ ಕಿ ಬಾತ್” ಮಾತುಗಳನ್ನು ರಾಜ್ಯದ 58 ಸಾವಿರಕ್ಕೂ ಹೆಚ್ಚು ಬೂತ್ಗಳಲ್ಲಿ ಮತ್ತು ಮನೆ ಮನೆಗಳಲ್ಲಿ ಕೇಳಿಸಲು ಕಾರ್ಯಕ್ರಮಗಳನ್ನು ಆಯೋಜಿಸಲಾಗುವುದು ಎಂದರು.
ಕೋವಿಡ್ ಲಸಿಕೆ ನೀಡುವ ವಿಷಯದಲ್ಲಿ ಕರ್ನಾಟಕವು ಐತಿಹಾಸಿಕ ಸಾಧನೆ ಮಾಡಿದೆ. ಅತಿ ಹೆಚ್ಚು ಲಸಿಕೆ ನೀಡಿದ ದೇಶದ ಎರಡನೇ ರಾಜ್ಯವಾಗಿ ಕರ್ನಾಟಕ ಹೊರಹೊಮ್ಮಿದೆ. ಭಾರತವು ನಿನ್ನೆ 83 ಲಕ್ಷ ಜನರಿಗೆ ಲಸಿಕೆ ನೀಡಿದೆ ಎಂದ ಅವರು, ಕಾಂಗ್ರೆಸ್ನ ಸಿದ್ದರಾಮಯ್ಯ ಅವರು ಲಸಿಕೆ ಹಾಕಿಸಿಕೊಳ್ಳಲು ಮನವಿ ಮಾಡಿದ್ದಕ್ಕೆ ಅವರಿಗೆ ಧನ್ಯವಾದ ಸಮರ್ಪಿಸಿದರು. ಕಾಂಗ್ರೆಸ್ ಪಕ್ಷದ ಮುಖಂಡರು ಈ ಹಿಂದೆ ಲಸಿಕೆಯನ್ನು ಟೀಕಿಸಿದ್ದರು ಎಂದು ನೆನಪಿಸಿದರು. ಕೊರೋನಾ ಮುಕ್ತ ಮತ್ತು ಲಸಿಕೆಯುಕ್ತ ಬೂತ್ ನಿರ್ಮಿಸಲು ಪಕ್ಷದ ಕಾರ್ಯಕರ್ತರು ಶ್ರಮಿಸಲಿದ್ದಾರೆ ಎಂದರು.
ಬಡವರ ಮನೆಗಳನ್ನು ಗುರುತಿಸಿ ಆಹಾರ ಪೊಟ್ಟಣ ನೀಡುವುದು, ಅಪಘಾತ ವಿಮೆ, ಜೀವವಿಮೆ ಮಾಡಿಸಿಕೊಡುವುದು, ಪಡಿತರ ಚೀಟಿ ಮಾಡಿಸಿ ಕೊಡುವ ಆಂದೋಲನವೂ ನಡೆಯುತ್ತಿದೆ. ವಯಸ್ಸಾದವರು, ಕೊರೊನಾ ಸೋಂಕಿಗೆ ಒಳಗಾದವರು ಮತ್ತು ಅಸಹಾಯಕರಿಗೆ ನೆರವಾಗಲು ಹೆಲ್ತ್ ವಾಲೆಂಟಿಯರ್ಸ್ ಮುಂದಾಗಲಿದ್ದಾರೆ. ಆಕ್ಸಿಮೀಟರ್, ಥರ್ಮಲ್ ಸ್ಕ್ಯಾನರ್ ಕಿಟ್ ಇಟ್ಟುಕೊಂಡು ತಪಾಸಣೆ ಮಾಡುವ ಕೆಲಸವನ್ನು ಈ ವಾಲೆಂಟಿಯರ್ಸ್ ಮಾಡಲಿದ್ದಾರೆ. ರಾಜ್ಯದ ಎಲ್ಲಾ ಒಂದೂಕಾಲು ಕೋಟಿ ಕುಟುಂಬಗಳನ್ನೂ ತಲುಪುವ ಗುರಿ ಇದೆ. ಇದೊಂದು ದೊಡ್ಡ ಅಭಿಯಾನ ಎಂದು ವಿವರಿಸಿದರು.
ಪಕ್ಷದ ರಾಜ್ಯ ಕಾರ್ಯಕಾರಿಣಿ ಸಭೆಯು ಜೂನ್ 26 ರಂದು ಬೆಳಿಗ್ಗೆ 10.30ಕ್ಕೆ ಆರಂಭವಾಗಲಿದೆ. ಪದಾಧಿಕಾರಿಗಳು ರಾಜ್ಯದ ಸಭೆಯಲ್ಲಿ ಭಾಗವಹಿಸುವರು. ಉಳಿದವರು ಜಿಲ್ಲಾ ಕೇಂದ್ರಗಳಿಂದ ಜೋಡಣೆ ಆಗಲಿದ್ದು, ಇದೊಂದು ಹೈಬ್ರಿಡ್ ಸಭೆ ಆಗಲಿದೆ. ರಾಜ್ಯದ ಉಸ್ತುವಾರಿ ಅರುಣ್ ಸಿಂಗ್ ಅವರು ವೆಬೆಕ್ಸ್ ಮೂಲಕ ಸಭೆಯಲ್ಲಿ ಭಾಗವಹಿಸುವರು. ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ, ಪಕ್ಷದ ರಾಜ್ಯಾಧ್ಯಕ್ಷ ನಳಿನ್ಕುಮಾರ್ ಕಟೀಲ್, ಕೇಂದ್ರದ ಸಚಿವರು ಭಾಗವಹಿಸಲಿದ್ದಾರೆ. ಇದೇ 25ರಂದು ರಾಜ್ಯ ಪದಾಧಿಕಾರಿಗಳ ಸಭೆ ನಡೆಯಲಿದೆ ಎಂದು ತಿಳಿಸಿದರು.
ಕೋವಿಡ್ ಸಮರ್ಥ ನಿರ್ವಹಣೆ, ವೈದ್ಯಕೀಯ ಕ್ಷೇತ್ರದಲ್ಲಿನ ದೇಶದ ಸಾಧನೆ ಕುರಿತು ಕಾರ್ಯಕರ್ತರಿಗೆ ತಿಳಿಸಲಾಗುವುದು. ಜೂನ್- ಜುಲೈಯಲ್ಲಿ 6 ವಿಷಯಗಳ ಕುರಿತು ಕಾರ್ಯಕರ್ತರಿಗೆ ಪ್ರಶಿಕ್ಷಣ ವರ್ಗ ಏರ್ಪಡಿಸಲಾಗುವುದು. ಪ್ರಧಾನಿ ಮೋದಿ ಸರಕಾರದ ಏಳು ವರ್ಷಗಳ ಸಾಧನೆ, ರಾಷ್ಟ್ರೀಯ ಭದ್ರತೆ, ವಿದೇಶಾಂಗ ನೀತಿಯಲ್ಲಿ ಭಾರತದ ಸಾಧನೆ, ಆತ್ಮನಿರ್ಭರ ಭಾರತ, ಕೃಷಿ ಸುಧಾರಣೆ ಕಾಯ್ದೆ ಮತ್ತು ಸಾಧನೆಗಳು, ಡಾ. ಶ್ಯಾಮಪ್ರಸಾದ ಮುಖರ್ಜಿ ಅವರ ಚಿಂತನೆಗಳು ಮತ್ತು ಜೀವನ ಸಾಧನೆ ಹಾಗೂ ಬಡವರಿಗಾಗಿ ಆರಂಭಿಸಿದ ಯೋಜನೆಗಳ ಕುರಿತು ಪ್ರಶಿಕ್ಷಣ ನಡೆಯಲಿದೆ ಎಂದರು.
ರಾಜ್ಯ ಬಿಜೆಪಿ ಮುಖ್ಯ ವಕ್ತಾರರು ಮತ್ತು ವಿಧಾನ ಪರಿಷತ್ ಮಾಜಿ ಸದಸ್ಯರೂ ಆದ ಕ್ಯಾಪ್ಟನ್ ಗಣೇಶ್ ಕಾರ್ಣಿಕ್ ಅವರು ಮಾತನಾಡಿ, 1975 ರಂದು ಜೂನ್ 25ರಂದು ಪ್ರಜಾಪ್ರಭುತ್ವದ ಕಗ್ಗೊಲೆ ಆದ ದಿನ. ಕಾಂಗ್ರೆಸ್ ನೇತೃತ್ವದ ಸರಕಾರದಿಂದ ಅಭಿವ್ಯಕ್ತಿ ಸ್ವಾತಂತ್ರ್ಯ, ಪತ್ರಿಕಾ ಸ್ವಾತಂತ್ರ್ಯವನ್ನು ಹತ್ತಿಕ್ಕುವ ಕಾರ್ಯ ಅಂದು ನಡೆಯಿತು. ವಿರೋಧ ಪಕ್ಷಗಳನ್ನು ದಮನಿಸಲಾಯಿತು. ನ್ಯಾಯಾಂಗದ ಆದೇಶವನ್ನು ಧಿಕ್ಕರಿಸಲಾಯಿತು. ಅಧಿಕಾರದ ಹಪಾಹಪಿತನಕ್ಕಾಗಿ ಇವೆಲ್ಲವೂ ನಡೆಯಿತು. ಅನೇಕ ನಾಯಕರು ಮಾತ್ರವಲ್ಲದೆ, ಪತ್ರಿಕಾ ಮಾಧ್ಯಮದವರನ್ನು ಬಂಧಿಸಿ ಚಿತ್ರಹಿಂಸೆ ನೀಡಲಾಯಿತು. ಆ ದಿನವನ್ನು ಕರಾಳ ದಿನವಾಗಿ ಆಚರಿಸಲಾಗುವುದು. ಮಿಸಾ ಕಾಯ್ದೆಯಡಿ ಬಂಧಿತರನ್ನು ಗುರುತಿಸಲಾಗುವುದು. ಮಿಸಾದಡಿ ಬಂಧಿತರಾಗಿದ್ದ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರನ್ನು 25ರಂದು ಬೆಳಿಗ್ಗೆ 11 ಗಂಟೆಗೆ ಅವರ ಮನೆಯಲ್ಲಿ ಪಕ್ಷದ ವತಿಯಿಂದ ಗೌರವಿಸಲಾಗುವುದು ಎಂದು ತಿಳಿಸಿದರು. ಜೈಲುವಾಸ ಅನುಭವಿಸಿದ್ದ ಇತರ ಮುಖಂಡರನ್ನೂ ಗೌರವಿಸಲು ನಿರ್ಧರಿಸಲಾಗಿದೆ ಎಂದರು.
ಪ್ರಜಾಪ್ರಭುತ್ವವನ್ನು ಹತ್ತಿಕ್ಕುವ ಕಾಂಗ್ರೆಸ್ನ ಷಡ್ಯಂತ್ರದ ಕುರಿತು ಯುವಜನರಿಗೆ ತಿಳಿಸಲಾಗುವುದು. ಕಾಂಗ್ರೆಸ್ ಬಹಳ ಹಿಂದಿನಿಂದಲೇ ಪ್ರಜಾಪ್ರಭುತ್ವ ವಿರೋಧಿ ನೀತಿ ತನ್ನದಾಗಿಸಿಕೊಂಡಿತ್ತು ಎಂದು ಅವರು ವಿವರಿಸಿದರು. ಪ್ರತಿ ಜಿಲ್ಲೆಯಲ್ಲಿ ವಿಡಿಯೋ ಕಾನ್ಫರೆನ್ಸಿಂಗ್ ಮೂಲಕ ಕಾರ್ಯಕ್ರಮಗಳನ್ನು ಆಯೋಜಿಸಲಾಗುವುದು. ಪ್ರಜಾಪ್ರಭುತ್ವವನ್ನು ಹತ್ತಿಕ್ಕಲು ಕಾಂಗ್ರೆಸ್ ಪಕ್ಷ ಕೈಗೊಂಡ ದಮನಕಾರಿ ನೀತಿಯ ಕುರಿತು ಪತ್ರಿಕಾಗೋಷ್ಠಿ, ವೆಬೆಕ್ಸ್ ವಿಚಾರಗೋಷ್ಠಿಗಳ ಮೂಲಕ ಜಾಗೃತಿ ಮೂಡಿಸಲಾಗುವುದು ಎಂದು ವಿವರ ನೀಡಿದರು.
ರೈತ ಮೋರ್ಚಾ ರಾಜ್ಯಾಧ್ಯಕ್ಷರು ಮತ್ತು ರಾಜ್ಯಸಭಾ ಸದಸ್ಯ ಈರಣ್ಣ ಕಡಾಡಿ ಅವರು ಮಾತನಾಡಿ, ಸಾಮಾಜಿಕ, ವೈದ್ಯಕೀಯ ಮತ್ತು ಆರ್ಥಿಕ ಸುರಕ್ಷೆಗೆ ನಮ್ಮ ಪಕ್ಷ ಗಣನೀಯ ಕ್ರಮಗಳನ್ನು ಕೈಗೊಂಡಿದೆ ಎಂದು ತಿಳಿಸಿದರು. ಮಾಸ್ಕ್, ಸ್ಯಾನಿಟೈಸರ್ ವಿತರಣೆ, ಸಾಮಾಜಿಕ ಜಾಗೃತಿ ಮೂಡಿಸುವುದು, ಲಸಿಕೆ ಸಂಬಂಧ, ಮನೆಮದ್ದು, ವ್ಯಾಯಾಮ ಜಾಗೃತಿ ಮೂಡಿಸಲಾಗುತ್ತಿದೆ. ಆರ್ಥಿಕ ಸುರಕ್ಷೆಗಾಗಿಯೂ ಕೆಲಸ ನಡೆದಿದೆ. ಕೊರೊನಾ ಸಂದರ್ಭದಲ್ಲಿ ಅನೇಕ ಜನರನ್ನು ನಾವು ಕಳೆದುಕೊಂಡಿದ್ದೇವೆ. ಜನರಿಗೆ ನೆರವಾಗಲು ಪ್ರಧಾನಮಂತ್ರಿ ಜೀವನ್ ಜ್ಯೋತಿ ವಿಮಾ ಯೋಜನೆ ಕುರಿತು (ಎರಡು ಲಕ್ಷ ವಿಮೆ), ಪ್ರಧಾನಮಂತ್ರಿ ಸುರಕ್ಷಾ ವಿಮೆ ಯೋಜನೆ ಕುರಿತು ಜಾಗೃತಿ ಮೂಡಿಸುತ್ತಿದ್ದೇವೆ ಎಂದರು.
ರೈತ ಮೋರ್ಚಾವು ರಾಜ್ಯದಲ್ಲಿ ವಿವಿಧ ಮೋರ್ಚಾಗಳ ಸಹಯೋಗದಲ್ಲಿ 11 ಲಕ್ಷ ಸಸಿ ನೆಡುವ ಕಾರ್ಯಕ್ರಮವನ್ನು ಅರಣ್ಯ ಇಲಾಖೆ ಸಹಯೋಗದಲ್ಲಿ ಹಮ್ಮಿಕೊಳ್ಳಲಿದೆ. ಡಾ. ಶ್ಯಾಮಪ್ರಸಾದ ಮುಖರ್ಜಿ ಅವರ ಬಲಿದಾನ- ಜನ್ಮದಿನದ ನಡುವಿನ ಅವಧಿಯಲ್ಲಿ ಈ ಕಾರ್ಯ ನೆರವೇರಲಿದೆ ಎಂದರು.
ಕೇಂದ್ರ ಸರಕಾರವು ಡಿಎಪಿ ಗೊಬ್ಬರದ ದರ ಏರದಂತೆ ತಡೆಯಲು ಹೆಚ್ಚುವರಿ ಸಬ್ಸಿಡಿ ನೀಡಿದ್ದು, ಈ ಮೂಲಕ 1200 ರೂಪಾಯಿ ದರದಲ್ಲಿ ಒಂದು ಬ್ಯಾಗ್ ಡಿಎಪಿ ಲಭಿಸುವಂತೆ ಮಾಡಿದೆ. ನ್ಯಾನೋ ಯೂರಿಯಾ ಬಿಡುಗಡೆ ಮಾಡಿದೆ. ಕಡಿಮೆ ಖರ್ಚಿನಲ್ಲಿ ಇದು ಲಭಿಸಲಿದೆ. ಇದಕ್ಕಾಗಿ ಕೇಂದ್ರ ಸರಕಾರಕ್ಕೆ ಕೃತಜ್ಞತೆ ಸಲ್ಲಿಸುವುದಾಗಿ ತಿಳಿಸಿದರು.
ಕೃಷಿ ಡಿಪ್ಲೊಮಾ, ಕೃಷಿ ಬಿಎಸ್ಸಿ, ಸಮಾನ ಪದವಿ ಕೋರ್ಸ್ಗಳ ಪ್ರವೇಶದಲ್ಲಿ ಕೃಷಿಕರು ಮತ್ತು ಕೃಷಿ ಕಾರ್ಮಿಕರ ಮಕ್ಕಳಿಗೆ ಮೀಸಲು ಪ್ರಮಾಣವನ್ನು ಶೇ 40ರಿಂದ ಶೇ 50ಕ್ಕೆ ಹೆಚ್ಚಿಸಲು ಮುಖ್ಯಮಂತ್ರಿ ಯಡಿಯೂರಪ್ಪ ಅವರ ನೇತೃತ್ವದ ಬಿಜೆಪಿ ರಾಜ್ಯ ಸರಕಾರ ನಿನ್ನೆ ನಿರ್ಧರಿಸಿದೆ. ಇದೊಂದು ಮಹತ್ವದ ಕ್ರಮವಾಗಿದ್ದು, ಈ ಸಂಬಂಧ ಮುಖ್ಯಮಂತ್ರಿಗಳಿಗೆ ಕೃಷಿಕರ ಪರವಾಗಿ ಧನ್ಯವಾದಗಳನ್ನು ಸಮರ್ಪಿಸುವುದಾಗಿ ಹೇಳಿದರು. ಹನಿ ನೀರಾವರಿ ಸಬ್ಸಿಡಿ ಮುಂದುವರಿಸಲು ಮುಖ್ಯಮಂತ್ರಿಗಳನ್ನು ಕೋರಿದ್ದು, ಇದಕ್ಕೆ ಸಕಾರಾತ್ಮಕ ಸ್ಪಂದನೆ ಲಭಿಸಿದೆ. ಈ ಹಿಂದಿನಂತೆ ಶೇ 90ರಷ್ಟು ಸಬ್ಸಿಡಿ ಮುಂದುವರಿ ಸುವುದಾಗಿ ಮುಖ್ಯಮಂತ್ರಿಗಳು ಭರವಸೆ ನೀಡಿದ್ದಾರೆ. ರೈತರಿಗೆ ನೀಡುವ ಶೂನ್ಯ ಬಡ್ಡಿದರದ ಸಾಲವನ್ನು ಪ್ರತಿಯೊಬ್ಬ ಅರ್ಹ ರೈತರಿಗೂ ನೀಡಲು ಮನವಿ ಮಾಡಿದ್ದಾಗಿ ಕೋರಲಾಗಿದೆ. ಸಕ್ಕರೆ ಕಾರ್ಖಾನೆಗಳ ಬಾಕಿ ಬಿಲ್ಗಳನ್ನು ಬೇಗನೆ ಪಾವತಿಸಲು ಸೂಚಿಸುವಂತೆ ಕೋರಿದ್ದೇವೆ ಎಂದರು. ರೈತರ ಉತ್ಪನ್ನಗಳ ಬೆಂಬಲ ಬೆಲೆ ಖರೀದಿ ಕೇಂದ್ರಗಳನ್ನು ಸಕಾಲದಲ್ಲಿ ತೆರೆಯುವಂತೆ ವಿನಂತಿಸಲಾಗಿದೆ ಎಂದು ವಿವರಿಸಿದರು.
ಪಕ್ಷದ ರಾಜ್ಯ ಕಾರ್ಯದರ್ಶಿ ಜಗದೀಶ ಹಿರೇಮನೆ, ರಾಜ್ಯ ಮಾಧ್ಯಮ ಸಂಚಾಲಕ ಕರುಣಾಕರ ಖಾಸಲೆ ಅವರು ಪತ್ರಿಕಾಗೋಷ್ಠಿಯಲ್ಲಿ ಭಾಗವಹಿಸಿದ್ದರು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.