ನವದೆಹಲಿ : ಶ್ರೀನಗರ ಸಹಿತ ಕಾಶ್ಮೀರ ಕಣಿವೆಯ ಎಲ್ಲಾ 15 ರೈಲು ನಿಲ್ದಾಣಗಳನ್ನು ಈಗ ಭಾರತೀಯ ರೈಲ್ವೇಯ ವೈ-ಫೈ ಜಾಲದ ಮೂಲಕ 6021 ನಿಲ್ದಾಣಗಳ ಜೊತೆ ಬೆಸೆಯಲಾಗಿದೆ.
ರೈಲ್ ವೈರ್ ಬ್ರಾಂಡ್ ಹೆಸರಿನಲ್ಲಿ ಒದಗಿಸಲಾಗಿರುವ ಸಾರ್ವಜನಿಕ ವೈ-ಫೈ ಈಗ ಕೇಂದ್ರಾಡಳಿತ ಪ್ರದೇಶವಾದ ಕಾಶ್ಮೀರದ ನಾಲ್ಕು ಜಿಲ್ಲಾ ಕೇಂದ್ರಗಳಾದ ಶ್ರೀನಗರ, ಬುಡ್ಗಾಂ, ಬನಿಹಾಲ್ ಮತ್ತು ಕ್ವಾಝಿಗುಂಡ್ ಗಳಲ್ಲಿ ಹರಡಿರುವ 15 ನಿಲ್ದಾಣಗಳಲ್ಲಿ ( ಬಾರಾಮುಲ್ಲಾ, ಹಮ್ರೇ, ಪಠಾಣ್, ಮಾಝೋಮ್, ಬುಡ್ಗಾಂ, ಶ್ರೀನಗರ, ಪ್ಯಾಂಪೋರ್, ಕಾಕಪೋರಾ,ಅವಂತಿಪುರ, ಪಂಝಗಾಂ, ಬಿಜ್ ಬೆಹ್ರಾ, ಅನಂತನಾಗ್, ಸಾದುರಾ, ಕ್ವಾಝಿಗುಂಡ್, ಬನಿಹಾಲ್ ) ಲಭ್ಯವಿದೆ.
ಜಮ್ಮು ಕೇಂದ್ರಾಡಳಿತ ಪ್ರದೇಶದ 15 ನಿಲ್ದಾಣಗಳಲ್ಲಿ ವೈ-ಫೈ ಈಗಾಗಲೇ ಲಭ್ಯವಿದೆ. ಅವುಗಳೆಂದರೆ –ಕಥುವಾ, ಬುಧಿ, ಚಾನ್ ಅರೋರಿನ್, ಹಿರಾ ನಗರ್, ಘಾಗ್ವಾಲ್, ಸಂಬಾ, ವಿಜಯಪುರ, ಬಾರಿ ಬ್ರಹ್ಮನ್, ಜಮ್ಮು ತಾವಿ, ಬಜಾಲ್ತ, ಸಂಗಾರ್, ಮನ್ವಾಲ್, ರಾಂ ನಗರ್.
ಸಾರ್ವಜನಿಕ ವೈ-ಫೈ ಯನ್ನು ಎಲ್ಲಾ ರೈಲು ನಿಲ್ದಾಣಗಳಲ್ಲಿ ಒದಗಿಸುವ ಜವಾಬ್ದಾರಿಯನ್ನು ರೈಲ್ವೇ ಸಚಿವಾಲಯವು ರೈಲ್ ಟೆಲ್ ಗೆ ನೀಡಿತ್ತು. ರೈಲ್ವೇ ಪ್ಲಾಟ್ ಫಾರಂಗಳನ್ನು ಡಿಜಿಟಲ್ ಸೇರ್ಪಡೆಯ ಪ್ಲಾಟ್ ಫಾರಂಗಳಾಗಿ ರೂಪಿಸುವುದು ಇದರ ಹಿಂದಿನ ಉದ್ದೇಶ. ಇಂದು ವೈ-ಫೈ ಜಾಲವು ದೇಶಾದ್ಯಂತ 6000 ಕ್ಕೂ ಅಧಿಕ ರೈಲು ನಿಲ್ದಾಣಗಳಲ್ಲಿ ಹರಡಿಕೊಂಡಿದೆ ಮತ್ತು ಇದು ಜಗತ್ತಿನಲ್ಲಿಯೇ ಅತ್ಯಂತ ದೊಡ್ಡ ಸಮಗ್ರೀಕೃತ ವೈ-ಫೈ ಜಾಲವಾಗಿದೆ.
ಈ ಸಂದರ್ಭದಲ್ಲಿ ಸಂದೇಶ ನೀಡಿದ ರೈಲ್ವೇ, ವಾಣಿಜ್ಯ ಮತ್ತು ಕೈಗಾರಿಕೆಗಳು ಮತ್ತು ಗ್ರಾಹಕ ವ್ಯವಹಾರಗಳು, ಆಹಾರ ಮತ್ತು ನಾಗರಿಕ ವಿತರಣೆ ಸಚಿವರಾದ ಪೀಯುಷ್ ಗೋಯಲ್ ಮಾತನಾಡಿ “ ಜನರನ್ನು ಬೆಸೆಯುವಲ್ಲಿ ಮತ್ತು ಗ್ರಾಮೀಣ ಭಾರತ ಹಾಗು ನಗರ ಭಾರತದ ನಡುವಣ ಡಿಜಿಟಲ್ ಕಂದಕವನ್ನು ತ್ವರಿತಗತಿಯಿಂದ ನಿವಾರಿಸುವಲ್ಲಿ ವೈ-ಫೈಯು ಪ್ರಮುಖ ಪಾತ್ರವನ್ನು ವಹಿಸುತ್ತದೆ. ಭಾರತೀಯ ರೈಲ್ವೇಯು ಅದರ ರೈಲ್ ಟೆಲ್ ಕಾರ್ಪೋರೇಶನ್ ಆಫ್ ಇಂಡಿಯಾ ಲಿಮಿಟೆಡ್ ಜೊತೆಗೂಡಿ ದೇಶದ ಪ್ರತೀ ಮೂಲೆಗೂ ಹೆಚ್ಚು ವೇಗದ ವೈ-ಫೈ ತರುವಲ್ಲಿ ಮುಖ್ಯ ಪಾತ್ರವನ್ನು ವಹಿಸುತ್ತಿದೆ. ಜಾಗತಿಕ ವೈ-ಫೈ ದಿನವಾದ ಇಂದು ಶ್ರೀನಗರ ಮತ್ತು ಕಾಶ್ಮೀರ ಕಣಿವೆಯ 14 ನಿಲ್ದಾಣಗಳು ವಿಶ್ವದ ಬೃಹತ್ ಸಮಗ್ರ ಸಾರ್ವಜನಿಕ ವೈ-ಫೈ ಜಾಲದ ಭಾಗವಾಗಿವೆ ಎಂದು ಘೋಷಿಸಲು ನಾನು ಹರ್ಷಿಸುತ್ತೇನೆ. ಈ ಜಾಲವು ದೇಶದ 6000 ಕ್ಕೂ ಅಧಿಕ ರೈಲು ನಿಲ್ದಾಣಗಳನ್ನು ಜೋಡಿಸುತ್ತದೆ. ಇದರೊಂದಿಗೆ ಕಣಿವೆಯ ಎಲ್ಲಾ ರೈಲು ನಿಲ್ದಾಣಗಳು ಈಗ ಸಾರ್ವಜನಿಕ ವೈ-ಫೈ ಯನ್ನು ಹೊಂದಿವೆ. ಇದು ಡಿಜಿಟಲ್ ಇಂಡಿಯಾ ಆಂದೋಲನದ ನಿರ್ಣಾಯಕ ಹೆಜ್ಜೆ, ಮತ್ತು ಇದು ಸಂಪರ್ಕರಹಿತರನ್ನು ಸಂಪರ್ಕಿಸುವಲ್ಲಿ ಬಹಳ ದೂರ ಸಾಗಲಿದೆ. ನಾನು ಭಾರತೀಯ ರೈಲ್ವೇ ಮತ್ತು ರೈಲ್ ಟೆಲ್ ತಂಡಗಳಿಗೆ, ಈ ಗಮನಾರ್ಹವಾದ ಕೆಲಸವನ್ನು ಸಾಧಿಸಲು ಅಹೋರಾತ್ರಿ ಕಾರ್ಯನಿರತವಾದುದಕ್ಕಾಗಿ ಅಭಿನಂದಿಸುತ್ತೇನೆ” ಎಂದರು.
ಈ ಶ್ಲಾಘನೀಯ ಕೆಲಸವನ್ನು ಮಾಡಿರುವುದಕ್ಕಾಗಿ ಭಾರತೀಯ ರೈಲ್ವೇಯನ್ನು ಅಭಿನಂದಿಸಿದ ಎಂ.ಒ.ಎಸ್. (ಐ.ಸಿ.), ಡಿ.ಒ.ಎನ್.ಇ.ಆರ್, ಎಂ.ಒ.ಎಸ್., ಪಿ.ಎಂ.ಒ., ಡಿ.ಒ.ಎ.ಇ, ಡಿ.ಒ.ಎಸ್., ಸಿಬ್ಬಂದಿ, ಸಾರ್ವಜನಿಕ ಕುಂದುಕೊರತೆ ಮತ್ತು ನಿವೃತ್ತಿ ವೇತನ ಸಚಿವರಾದ ಡಾ. ಜಿತೇಂದ್ರ ಸಿಂಗ್ “ಇಂದು ವೈ.ಫೈ. ಸಮುದಾಯಗಳನ್ನು ಜೋಡಿಸುವಲ್ಲಿ ಪ್ರಮುಖ ಪಾತ್ರವನ್ನು ವಹಿಸುತ್ತಿರುವುದು ಮಾತ್ರವಲ್ಲ ಡಿಜಿಟಲ್ ಕಂದಕವನ್ನು ನಿವಾರಿಸಲು ಅನ್ವೇಷಣೆಗಳಿಗೂ ಅವಕಾಶ ನೀಡುತ್ತಿದೆ. ಜಾಗತಿಕ ಸಾಂಕ್ರಾಮಿಕದಿಂದಾಗಿ, ವರ್ಚುವಲ್ ಮೂಲಕ ಸಂಪರ್ಕಿತರಾಗಿರುವುದು ಹಿಂದೆಂದಿಗಿಂತಲೂ ಹೆಚ್ಚು ಅವಶ್ಯವಾಗಿದೆ. ಭಾರತೀಯ ರೈಲ್ವೇಯು ನಿಲ್ದಾಣಗಳಲ್ಲಿ ವೈ-ಫೈ ಜಾಲವನ್ನು ಅದರ ಸಿ.ಪಿ.ಎಸ್.ಯು. ರೈಲ್ ಟೆಲ್ ಮೂಲಕ ರೂಪಿಸಿ ಗ್ರಾಮೀಣ ಡಿಜಿಟಲ್ ಕಂದಕವನ್ನು ಬೆಸೆಯುವಲ್ಲಿ ಬಹಳ ಪ್ರಮುಖ ಪಾತ್ರವಹಿಸುತ್ತಿದೆ. ಜಮ್ಮು ಮತ್ತು ಕಾಶ್ಮೀರದ ಕಾಶ್ಮೀರ ಕಣಿವೆಯ 15 ನಿಲ್ದಾಣಗಳು ರೈಲ್ ವೈರ್ ವೈ-ಫೈ ಮೂಲಕ ಸಂಪರ್ಕಿಸಲ್ಪಟ್ಟಿರುವುದು ನನಗೆ ಸಂತೋಷ ತಂದಿದೆ. ಇದು ಈ ವಲಯದ ಜನರಿಗೆ ಮತ್ತು ದೇಶಕ್ಕೆ ಒಂದು ಹೆಚ್ಚುವರಿ ಪೂರಕ ಸೌಲಭ್ಯ. ಪ್ರತಿಯೊಬ್ಬರಿಗೂ ವಿಶ್ವ ವೈ-ಫೈ ದಿನದ ಶುಭಾಶಯಗಳನ್ನು ಕೋರುತ್ತೇನೆ” ಎಂದು ಹೇಳಿದರು.
ಬಳಕೆದಾರರಿಗೆ ಉತ್ತಮ ಅಂತರ್ಜಾಲ ಅನುಭವ ನೀಡುವಂತೆ ವಿನ್ಯಾಸಗೊಳಿಸಲಾಗಿರುವ ಈ ವೈ-ಫೈ ಸ್ಮಾರ್ಟ್ ಫೋನ್ ಹೊಂದಿರುವ ಮತ್ತು ಕೆ.ವೈ.ಸಿ. ಶರತ್ತುಗಳನ್ನು ಪೂರೈಸಿರುವ ಕಾರ್ಯನಿರತವಾಗಿರುವಂತಹ ಮೊಬೈಲ್ ಸಂಪರ್ಕವನ್ನು ಹೊಂದಿರುವ ಯಾವುದೇ ಬಳಕೆದಾರರಿಗೆ ರೈಲ್ವೇ ನಿಲ್ದಾಣಗಳಲ್ಲಿ ಲಭ್ಯವಾಗುತ್ತದೆ.
ವೈ-ಫೈ ಲಭ್ಯತೆ ಸಮುದಾಯಗಳನ್ನು ಬೆಸೆಯುವುದು ಮಾತ್ರವಲ್ಲ ಅದು ಅನ್ವೇಷಣೆ ಮತ್ತು ಬೆಳವಣಿಗೆಗೆ ಅವಕಾಶಗಳ ಜಗತ್ತನ್ನು ತೆರೆಯುತ್ತದೆ. ಈ ವರ್ಷದ ವೈ-ಫೈ ದಿನ ಆಚರಣೆಯು ಡಿಜಿಟಲ್ ಕಂದಕವನ್ನು ಬೆಸೆಯಲು ಕೈಗೆಟಕುವ ದರದಲ್ಲಿ ವೈ-ಫೈ ಲಭ್ಯತೆಯನ್ನು ತ್ವರಿತಗೊಳಿಸುವ ಅಗತ್ಯವನ್ನು ಒತ್ತಿ ಹೇಳುತ್ತದೆ. ಭಾರತವು ನಗರ ಮತ್ತು ಗ್ರಾಮೀಣ ಪ್ರದೇಶಗಳ ನಡುವೆ ಗಮನಾರ್ಹ ಡಿಜಿಟಲ್ ಕಂದಕವನ್ನು ಹೊಂದಿದೆ. ನಿಲ್ದಾಣಗಳಲ್ಲಿ ರೈಲ್ ವೈರ್ ವೈ-ಫೈ ಸೌಲಭ್ಯವು ಗ್ರಾಮಭಾರತದಲ್ಲಿರುವ ದುರ್ಬಲ ಸಂಪರ್ಕ ಜಾಲ ಹೊಂದಿರುವ ಸಂಪರ್ಕರಹಿತ ಸಾರ್ವಜನಿಕರಿಗೆ 5000 ಕ್ಕೂ ಅಧಿಕ ನಿಲ್ದಾಣಗಳ ಮೂಲಕ ಸಂಪರ್ಕ ಒದಗಿಸಲು ಸಹಾಯ ಮಾಡುತ್ತದೆ.
ಭಾರತೀಯ ರೈಲ್ವೇಯು ದೇಶಾದ್ಯಂತ ರೈಲು ನಿಲ್ದಾಣಗಳಲ್ಲಿ ಸಾರ್ವಜನಿಕ ವೈ-ಫೈ ಒದಗಿಸುವ ಮೂಲಕ ರೈಲ್ವೆ ನಿಲ್ದಾಣಗಳನ್ನು ಡಿಜಿಟಲ್ ತಾಣವಾಗಿ ಪರಿವರ್ತಿಸುವ ನಿಟ್ಟಿನಲ್ಲಿ ಕಾರ್ಯೋನ್ಮುಖವಾಗಿದೆ. ಮತ್ತು 6021 ನಿಲ್ದಾಣಗಳು ರೈಲ್ ಟೆಲ್ ವೈ ಫೈ ಜಾಲದಲ್ಲಿವೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.