ಮೊನ್ನೆ ಮನೆಯಲ್ಲಿ ಅರಳಿದ ಬ್ರಹ್ಮ ಕಮಲಗಳನ್ನು ನೋಡಿ ಖುಷಿಯೊಂದಿಗೆ ಕುತೂಹಲ ಹೆಚ್ಚಿತು. ಮನುಷ್ಯ ಈ ಹೂಗಳನ್ನು ನೋಡಿ ಕಲಿಯಬೇಕಾದ ವಿಷಯ ಅಪಾರ. ಅರಳಿ ಬಾಳುವುದು ಕೆಲವೇ ಸಮಯವಾದರೂ, ಅದರ ವ್ಯಾಪ್ತಿ, ಸಾರ್ಥಕತೆ, ಉಪಯುಕ್ತತೆ ಹೆಚ್ಚು.
ನಾವು ಸಾಮಾನ್ಯವಾಗಿ ನೋಡುವ ತಾವರೆಗಳಿಗಿಂತ ಕೊಂಚ ಭಿನ್ನವಾಗಿ, ಮೃದುವಾಗಿ, ಸೂಕ್ಷ್ಮವಾಗಿ ಶುದ್ಧ ಸ್ಪಟಿಕದಂತೆ ಹೊಳೆಯುವ ಈ ಹೂವು, ಜೂನ್ – ಸೆಪ್ಟೆಂಬರ್ ತಿಂಗಳಿನ ಯಾವುದಾದರೂ ಒಂದು ರಾತ್ರಿಯಲ್ಲಿ ಮಾತ್ರ ಅರಳಿ ಬಾಡಿ ಹೋಗುತ್ತದೆ. ಇವುಗಳ ಜೀವಿತಾವಧಿ 8-12 ಗಂಟೆಗಳಾದರೂ, ಈ ಹೂಗಳಿಗಿರುವ ಪೌರಾಣಿಕ, ಧಾರ್ಮಿಕ, ವೈಜ್ಞಾನಿಕ ಹಾಗೂ ವೈದ್ಯಕೀಯ ಮಹತ್ವ ಬಹಳ ಮುಖ್ಯ.
ಪುರಾಣಗಳಲ್ಲಿನ ಉಲ್ಲೇಖದಂತೆ, ಸೃಷ್ಟಿಕರ್ತ ಬ್ರಹ್ಮ ವಿಷ್ಣುವಿನ ನಾಭಿಯಿಂದ ಉದಯಿಸಿದ ಈ ಹೂವಿನ ಮೇಲೆ ಆಸೀನರಾಗಿರುವುದು ಎಂಬ ಕಾರಣದಿಂದ ಈ ಹೂವನ್ನು ಬ್ರಹ್ಮ ಕಮಲ ಎಂದು ಕರೆಯಲಾಗುತ್ತದೆ. ಶಿವ ಪುರಾಣದ ಗಣೇಶನ ಜನನದ ಕಥೆಯಲ್ಲಿ, ಶಿವ ಈ ಹೂಗಳ ನೀರಿನಿಂದ ಗಣಪತಿಗೆ ಅಭಿಷೇಕ ಮಾಡಿದರಿಂದಾಗಿ ಗಣಪತಿಯ ದೇಹ ಚೈತನ್ಯ ಪಡೆಯಿತು ಎನ್ನಲಾಗಿದೆ. ಇನ್ನು ಮಹಾಭಾರತದ ಅರಣ್ಯ ಪರ್ವದಲ್ಲಿ, ದ್ರೌಪದಿ ತನಗಾದ ಅವಮಾನಗಳನ್ನು ನೆನೆದು ಕೊರಗುತ್ತಿರುವಾಗ, ಭೀಮ ಆಕೆಯನ್ನು ಸಂತೈಸಲು ಈ ಹೂವನ್ನು ತಂದುಕೊಡುತ್ತಿದ್ದ. ಈ ಹೂವಿನ ಸೌಂದರ್ಯಕ್ಕೆ ದ್ರೌಪದಿಯ ಮನ ಪರಿವರ್ತನೆಗೊಂಡು ಆಕೆ ನಿದ್ರೆಗೆ ಜಾರುತ್ತಿದ್ದಳು ಎಂದು ಹೇಳಲಾಗಿದೆ.
ಹೂವಿನ ವೈಜ್ಞಾನಿಕ ಹಿನ್ನೆಲೆಯನ್ನು ನೋಡುವುದಾದರೆ, ಮಳೆಗಾಲದಲ್ಲಿ ಸೊಳ್ಳೆಯಂತಹ ಕೀಟಗಳ ಸಮಸ್ಯೆ ಹೆಚ್ಚು. ಬ್ರಹ್ಮ ಕಮಲ ಅರಳುವ ಸುತ್ತಮುತ್ತಲಿನ ಪ್ರದೇಶ ಈ ಸಮಸ್ಯೆಯಿಂದ ಹೊರತಾಗಿವೆ. ಏಕೆಂದರೆ ಕಮಲಗಳಿಂದ ಹರಡುವ ಪರಿಮಳ ಸಹಿಸಲಾಗದ ಕೀಟಗಳು ಸಾವನ್ನಪ್ಪುತ್ತವೆ. ಈ ಕಾರಣದಿಂದ ಮಳೆಗಾಲದಲ್ಲಿ ಇವುಗಳು ಹೆಚ್ಚು. ಇವುಗಳನ್ನು ದೇಹದ ಶುದ್ಧೀಕರಣಕ್ಕೆ, ಯಕೃತ್ ಸಮಸ್ಯೆ ನಿವಾರಣೆಗೆ, ರಕ್ತ ಕಣಗಳನ್ನು ಹೆಚ್ಚಿಸಲು ಆಯುರ್ವೇದದಲ್ಲಿ ಬಳಸಲಾಗುತ್ತದೆ. ಎಲ್ಲಾ ವಾತಾವರಣದಲ್ಲಿಯೂ, ಕುಂಡಂತಹ ಚಿಕ್ಕ ಸ್ಥಳಗಳಲ್ಲಿಯೂ ಬೆಳೆಯುವ ಈ ಗಿಡಕ್ಕೆ ಸಾಕಷ್ಟು ನೀರು ಸಹ ಬೇಡ. ಮನೆಯ ಸಣ್ಣ ಕೈತೋಟದಲ್ಲಿ ಬ್ರಹ್ಮ ಕಮಲ ಅರಳಿದ ರಾತ್ರಿಯ ಸಂಭ್ರಮ ವಿಷೇಶವಾದದ್ದು.
ಗಿಡ ನೆಟ್ಟಂದಿನಿಂದ ಆ ರಾತ್ರಿಗೇ ಎದುರುನೋಡುತ್ತಾ ಕಾಯುವುದು, ಅದು ಅರಳಿದಂದು ಫೋಟೋ ತೆಗೆದು ಆತ್ಮೀಯರಿಗೆ ಕಳುಹಿಸಿ ಖುಷಿಪಡುವುದೇ ದೊಡ್ಡ ವಿಷಯ. ಹಾಗೆ ಕೊನೆಗೆ ಮನಸಿಲ್ಲದ ಮನಸಿನಿಂದ ಅದನ್ನು ಗಿಡದಿಂದ ಬಿಡಿಸಿ, ಜೀವನದ ನಶ್ವರತೆಯ ಮೆಲುಕು ಹಾಕುತ್ತಾ, ದೇವರಿಗೇ ಸಮರ್ಪಿಸಿ ಬಿಡುತ್ತೇವೆ. ಭಾರತೀಯ ಸಂಸ್ಕೃತಿಯ ಜೀವನ ಪ್ರಜ್ಞೆಯ ಸಂಕೇತ ಬ್ರಹ್ಮ ಕಮಲ!
ಶ್ರೀರಕ್ಷಾ ಶಂಕರ್
ಎಸ್.ಡಿ. ಎಂ ಕಾಲೇಜು, ಉಜಿರೆ
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.